ಪ್ಯಾರಿಸ್ ಏರ್ಪೋರ್ಟ್ನಲ್ಲಿ ಏಕಾಂಗಿಯಾಗಿ ಏಳುಗಂಟೆ!
ರೋಡ್ ಟ್ರಿಪ್ ಮಾಡುವುದೇ ನನಗೆ ಖುಷಿ. ಕಾರು ಓಡಿಸುವಾಗ ಡೆಸ್ಟಿನೇಶನ್ ಯಾವುದು ಎಂದು ನೋಡುವುದಕ್ಕಿಂತ 'ನಾನಾಯಿತು, ಸಾಂಗ್ ಆಯಿತು! ಜರ್ನಿಯನ್ನೇ ಸಂಭ್ರಮಿಸುತ್ತಾ ಡ್ರೈವ್ ಮಾಡುವುದು ನನಗೆ ತುಂಬಾ ಇಷ್ಟ. ತಿಂಡಿ ತಿನ್ನಲೆಂದೇ ಬಿಡದಿಗೆ ಹೋಗೋದು. ತುಮಕೂರು ಹತ್ತಿರ ಪಲ್ಲವಿ ಹೊಟೇಲ್ ಗೆ ಹೋಗುವುದು.. ಎಲ್ಲ ಮಾಡ್ತಾ ಇರುತ್ತೇನೆ.
-ಶಶಿಕರ ಪಾತೂರು
ನಟಿ ಮಯೂರಿ ಕ್ಯಾತರಿ 'ರಾಕ್ಷಸ' ವೆಬ್ ಸೀರೀಸ್ ನಲ್ಲಿ ವಿಜಯರಾಘವೇಂದ್ರ ಜೋಡಿಯಾಗಿ ಸದ್ದು ಮಾಡುತ್ತಿದ್ದಾರೆ. ಒಂದೆಡೆ ಸಿನಿಮಾ, ಕಿರುತೆರೆ ಎನ್ನುವ ಬಣ್ಣದ ಲೋಕದ ಜತೆಗೆ ಜಗತ್ತೇ ಬಣ್ಣಗಳ ಪ್ರಯಾಣ ಎನ್ನುತ್ತಾರೆ ಮಯೂರಿ.
ಇದನ್ನೂ ಓದಿ: ಅಖಿಲಾ ಪಜಿಮಣ್ಣು: ಗೋಲ್ ಗುಂಬಜ್‌ನಲ್ಲಿ ವಂದೇ ಮಾತರಂ ಪ್ರತಿಧ್ವನಿ
ಮರೆಯಲಾರದ ಪ್ರವಾಸ ಯಾವುದು?
ಸದ್ಯಕ್ಕೆ ಮರೆಯಲಾರದಷ್ಟು ಖುಷಿ ನೀಡಿರುವ ಪ್ರವಾಸ ಅಂದರೆ ನನ್ನ ಮಗನ ಜೊತೆ ಸಿಂಗಾಪುರಕ್ಕೆ ಹೋಗಿದ್ದು. ಅದೊಂದು ಅದ್ಭುತ ಅನುಭವ. ಕಳೆದ ವರ್ಷ ಆತನ ನಾಲ್ಕನೇ ವರ್ಷದ ಜನ್ಮದಿನಾಚರಣೆಗೆಂದೇ ನಾನು ಆ ಪ್ರವಾಸ ಕೈಗೊಂಡಿದ್ದೆ. ಒಟ್ಟು ಎಂಟು ದಿನಗಳನ್ನು ಸಿಂಗಾಪುರದಲ್ಲಿ ಸಂಭ್ರಮದಿಂದ ಕಳೆದೆವು. ಆ ತಾಯಿ ಮಗನ ಮನೋಲ್ಲಾಸವನ್ನು ಹಂಚಿಕೊಳ್ಳಲು ಪದಗಳಿಲ್ಲ. ನಾಲ್ಕು ವರ್ಷದ ಮಗುವಿನ ಹಠವನ್ನು ಅರ್ಥಮಾಡಿಕೊಂಡು ಒಬ್ಬಳೇ ಎಂಟು ದಿನ ನಿಭಾಯಿಸಿದ್ದು ನಮ್ಮೊಳಗೆ ಒಂದು ವಿಶೇಷ ಅನುಭವಕ್ಕೆ ಕಾರಣವಾಯಿತು.
ನಿಮ್ಮ ಈ ಅಮೂಲ್ಯ ನೆನಪು ಮಗನೊಳಗೆ ಎಷ್ಟು ಕಾಲ ಇರಬಹುದು ಅಂದುಕೊಳ್ಳುತ್ತೀರಿ?
ಗೊತ್ತಿಲ್ಲ. ಆದರೆ ಅಂದಿನ ವಿಡಿಯೋಗಳು ಇರುವ ಕಾರಣ ಅವುಗಳನ್ನು ನೋಡಿದಾಗೆಲ್ಲ ಹೊಸದಾಗಿ ಸಿಂಗಾಪುರಕ್ಕೆ ಹೋಗಿರುವಂತೆ ಸಂಭ್ರಮಿಸುತ್ತಾನೆ. ನಾಳೆ ಅವನು ಅದನ್ನು ಮರೀತಾನೋ ಬಿಡ್ತಾನೋ ಅದು ದೈವೇಚ್ಛೆ.

ಬಾಲ್ಯದ ಮೊದಲ ಪ್ರವಾಸದ ಬಗ್ಗೆ?
ನಾನು ಓದಿದ್ದು ಹುಬ್ಬಳ್ಳಿಯಲ್ಲಿ. ಆಗ ಏಳನೇ ಕ್ಲಾಸಿನಲ್ಲಿದ್ದೆ. ಅಲ್ಲಿಂದ ಸಹಸ್ರಲಿಂಗ ಕ್ಷೇತ್ರಕ್ಕೆ ಪ್ರವಾಸ ಹೋಗಿದ್ದೆವು. ಅಮ್ಮನಿಗೆ ಕಳಿಸಲು ಮನಸೇ ಇರಲಿಲ್ಲ. ಅಪ್ಪ ಮಾತ್ರ ಎಕ್ಸ್‌ಪೀರಿಯೆನ್ಸ್ ಮಾಡ್ಲಿ ಅಂತ ಹೇಳಿ ಕಳಿಸಿದ್ದರು. ಒಂದು ರೀತಿ ಮನೇಲಿ ಜಗಳ ಮಾಡ್ಕೊಂಡು ಹೋಗಿದ್ದೆ. ಬಸ್ಸಲ್ಲಿ ಡ್ಯಾನ್ಸ್ ಮಾಡಿಕೊಂಡು ಹೋಗಿದ್ದು, ಅದೇನೋ ಸ್ವಾತಂತ್ರ್ಯ ಸಿಕ್ಕ ಖುಷಿ. ಅಲ್ಲಿ ನೋಡಿದರೆ ನದಿ ಪೂರ್ತಿ ಶಿವಲಿಂಗಗಳಿತ್ತು. ಟೀಚರ್ಸ್ ಅಲ್ಲಿನ ಇತಿಹಾಸ ಹೇಳಿದ್ದರು. ಆ ಪ್ರವಾಸ ಕೂಡ ಯಾವತ್ತೂ ಮರೆಯಲಾರೆ.
ರೋಡ್ ಟ್ರಿಪ್ ಎಂಜಾಯ್ ಮಾಡ್ತೀರಾ?
ರೋಡ್ ಟ್ರಿಪ್ ಮಾಡುವುದೇ ನನಗೆ ಖುಷಿ. ಕಾರು ಓಡಿಸುವಾಗ ಡೆಸ್ಟಿನೇಶನ್ ಯಾವುದು ಎಂದು ನೋಡುವುದಕ್ಕಿಂತ 'ನಾನಾಯಿತು, ಸಾಂಗ್ ಆಯಿತು! ಜರ್ನಿಯನ್ನೇ ಸಂಭ್ರಮಿಸುತ್ತಾ ಡ್ರೈವ್ ಮಾಡುವುದು ನನಗೆ ತುಂಬಾ ಇಷ್ಟ. ತಿಂಡಿ ತಿನ್ನಲೆಂದೇ ಬಿಡದಿಗೆ ಹೋಗೋದು. ತುಮಕೂರು ಹತ್ತಿರ ಪಲ್ಲವಿ ಹೊಟೇಲ್ ಗೆ ಹೋಗುವುದು.. ಎಲ್ಲ ಮಾಡ್ತಾ ಇರುತ್ತೇನೆ.
ಲಾಂಗ್ ಡ್ರೈವ್ ಪ್ಲಾನ್ಸ್ ಹೇಗೆ?
ನಾನು ಪ್ಲ್ಯಾನೇ ಇಲ್ಲದೆ ಡ್ರೈವ್ ಮಾಡಿಕೊಂಡು ಹೋಗುತ್ತೇನೆ. ಉದಾಹರಣೆಗೆ ರಾತ್ರೋರಾತ್ರಿ ಒಬ್ಬಳೇ ಹುಬ್ಬಳ್ಳಿಗೆ ಕಾರಲ್ಲಿ ಹೋಗಿದ್ದೆ. ಅದು ನನ್ನ ಹಳೆಯ ಫ್ರೆಂಡ್ ಮದುವೆ ಸಂದರ್ಭ. ಕಳೆದ ವರ್ಷ ನಡೆದಂಥ ಘಟನೆ. ನಾನು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ಕಾರಣ ಮದುವೆ ಬರಲಾಗದು ಅಂದಿದ್ದೆ. ಅದಕ್ಕೆ ಬೇಜಾರು ಮಾಡ್ಕೊಂಡಿದ್ದಳು. ಅವಳಿಗೆ ಅಪ್ಪ ಅಮ್ಮ ಇಲ್ಲ. ನನ್ನಂಥ ಫ್ರೆಂಡ್ಸ್ ಬರ್ತಾರೆ ಅಂತ ಆಸೆಯಲ್ಲಿದ್ದಳು. ಕೋಪ ಮಾಡಿಕೊಂಡಿದ್ದಾಳೆ ಅಂತ ರಾತ್ರೋ ರಾತ್ರಿ ಮನಸು ಬದಲಾಯಿಸಿದ ನಾನು ಮಗನನ್ನು ಅಮ್ಮನ ಮನೆಯಲ್ಲಿ ಬಿಟ್ಟು, ಐದೇ ಗಂಟೆಯೊಳಗೆ ಹುಬ್ಬಳ್ಳಿ ಸೇರಿದ್ದೆ. ಮದುವೆ ಲೊಕೇಶನ್‌ಗೆ ಹೋಗಿ ಫೋನ್ ಮಾಡಿದ್ರೆ ಅವಳು ಎತ್ತಿರಲಿಲ್ಲ. ಹಾಗೆ ಪಾರ್ಕ್ ಮಾಡಿದ ಕಾರಲ್ಲೇ ನಿದ್ದೆ ಮಾಡಿ, ಬೆಳಗ್ಗೆ ಅವಳ ಮದುವೆ ಅಟೆಂಡ್ ಮಾಡಿ ಅವಳಿಗೆ ಸರ್ಪ್ರೈಸ್ ಕೊಟ್ಟಿದ್ದೆ.
ಪ್ರವಾಸದಲ್ಲಿ ಏನಾದರೂ ಅಚ್ಚರಿಗಳು?
ಹಾ.. ಕೆಲವು ವರ್ಷ ಹಿಂದೆ ನಡೆದ ಘಟನೆ. ನನ್ನ ಅಕ್ಕ ಜರ್ಮನಿಯಲ್ಲೇ ಸೆಟ್ಲಾಗಿರೋದು. ಅವಳ ಡೆಲಿವರಿ ಟೈಮಲ್ಲಿ ನೋಡ್ಕೊಳ್ಳೋಕೆ ಅಂತ ನಾನು ಮತ್ತು ಅಮ್ಮ ಹೋಗಿದ್ದೆವು. ನಾನು ಕರಾರು ಮಾಡಿರುವ ಸಿನಿಮಾದ ಪೂರ್ತಿ ಕೆಲಸ ಮುಗಿಸಿ 6 ತಿಂಗಳು ಸ್ಟೇ ಆಗಲು ಜರ್ಮನಿ ಸೇರಿದ್ದೆ. ಆದರೆ ಯಾವುದೋ ಪ್ಯಾಚ್ ವರ್ಕ್ ಇದೆ ಅಂತ ಸಿನಿಮಾದವರು ವಾಪಸ್ ಇಂಡಿಯಾಗೆ ಕರೆಸಿಕೊಂಡಿದ್ರು. ಒಂದು ಸೀನ್ ಶೂಟ್ ಮಾಡ್ಲೇ ಬೇಕು ಅಂತ ಅವರೇ ಟಿಕೆಟ್ ಮಾಡಿ ಕರೆಸಿ ಶೂಟ್ ಮಾಡಿ ವಾಪಸ್ ಕಳಿಸಿದ್ದರು. ಆ ವಿಮಾನ ಪ್ಯಾರಿಸ್ ನಿಂದ ಇಂಡಿಯಾಗೆ ಕನೆಕ್ಟ್ ಆಗಿತ್ತು. ಹಾಗೆ ಪ್ಯಾರಿಸ್ ಏರ್ ಪೋರ್ಟ್ ನಲ್ಲಿ 7 ಗಂಟೆ ಒಬ್ಬಳೇ ಕಳೆಯಬೇಕಾಗಿತ್ತು. ಆದರೂ ಭಾಷೆ ಗೊತ್ತಿಲ್ಲದ, ಗುರುತು ಪರಿಚಯ ಇರದ ದೇಶದಲ್ಲಿ ಅಷ್ಟು ಕಾಲ ಹಾಯಾಗಿಯೇ ಕಳೆದಿದ್ದೆ!
ಪ್ರಯಾಣದ ರಿಸ್ಕಿ ಅನುಭವಗಳು?
ಇತ್ತೀಚೆಗೆ ನಡೆದ ವಿಮಾನ ದುರಂತದಲ್ಲಿ ಸೀಟ್ ನಂಬರ್ 11ರ ವ್ಯಕ್ತಿ ಬದುಕಿದ ಘಟನೆ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಆ ನ್ಯೂಸ್ ನೋಡಿದಾಗ, ಫ್ಲೈಟ್ ಪಯಣ ಹೆದರಿಕೆ ಮೂಡಿಸಿತ್ತು. ಆ ಭಯ ಒಂದು ಹೋಗಬೇಕು ಅಂತ, ನನ್ನ ಜನ್ಮದಿನವಾದ ಜುಲೈ 11ರಂದೇ ಫ್ಲೈಟ್ ಟಿಕೆಟ್ ಬುಕ್ ಮಾಡಿ, ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿದ್ದೆ. ಮನೆಗೆ ಹಾಗೆ ಮಠಕ್ಕೂ ಹೋಗಿ ಅಜ್ಜನನ್ನು ನೋಡ್ಕೊಂಡು ವಾಪಸು ಫ್ಲೈಟಲ್ಲೇ ಮರಳಿದ್ದೆ. ಅದೇ ರೀತಿ ನಮ್ಮ ತಂದೆಯ ನಿಧನವಾದಾಗ ಹುಬ್ಬಳ್ಳಿಗೆ ಹೋಗಿದ್ದು ಕೂಡ ಆಘಾತಕಾರಿ ಪ್ರಯಾಣವೇ ಆಗಿತ್ತು. ಅಂದು ನಮ್ಮ ಡ್ರೈವರಾಗಿದ್ದ ಮೂರ್ತಿಯವರು ಅತಿ ವೇಗದಿಂದ ಕರೆದೊಯ್ದು ಬಿಟ್ಟಿದ್ದರು.
ಹಳೆಯ ಪ್ರವಾಸದ ಅನುಭವಗಳೇನು?
ಬಾಲ್ಯದಲ್ಲಿ ಹುಬ್ಬಳ್ಳಿಯಿಂದ ಕದರಮಂಡಲಗಿಯ ನಮ್ಮ ಮನೆದೇವರು ಆಂಜನೇಯನ ದರ್ಶನ ಮಾಡುವುದೇ ದೊಡ್ಡ ಖುಷಿ. ಅಲ್ಲಿಗೆ ರೈಲು ಪ್ರಯಾಣ. ಬೆಳಗ್ಗೆಯೇ ನಮ್ಮಮ್ಮ ರೊಟ್ಟಿ ಮಂಡಕ್ಕಿ ಕಟ್ಟಿಕೊಡುವುದು, ದೇವರ ದರ್ಶನದ ಬಳಿಕ ವೀಳ್ಯದೆಲೆ ತೋಟದಲ್ಲಿ ಊಟ! ವೀಳ್ಯ ಹರಿಯೋದು, ಸಣ್ಣದಾಗಿ ಜೋಳ ಕದ್ದು ತಿನ್ನುವುದು.. ಅಲ್ಲಿಂದ ಟಾಂಗಾ ಹತ್ತಿ ರೈಲ್ವೇ ಸ್ಟೇಷನ್ ಗೆ ಹೋಗುವುದು.

ಎಷ್ಟು ದೇಶ ಸುತ್ತಿದ್ದೀರಿ?
ತುಂಬಾ ದೇಶ ಸುತ್ತಿದ್ದೀನಿ. ಕಳೆದ ಒಂದು ವರ್ಷದಲ್ಲೇ ಸಿಂಗಪೂರ್, ದುಬೈ, ಮಲೇಷ್ಯಾ, ಫ್ರಾಂಕ್ ಫರ್ಟ್ ಸುತ್ತಾಡಿದ್ದೇನೆ. ಇದುವರೆಗೆ ಯುರೋಪ್ ನಲ್ಲಿ ನೆದರ್ಲ್ಯಾಂಡ್ಸ್, ಸ್ವಿಟ್ಜರ್‌ಲ್ಯಾಂಡ್, ಬೆಲ್ಜಿಯಂ, ಫ್ರಾಂಕ್ ಫರ್ಟ್, ಪ್ಯಾರಿಸ್, ಆಸ್ಟ್ರೇಲಿಯಾದ ಬ್ರಿಸ್‌ಬೇನ್, ಕ್ವೀನ್ಸ್ ಲ್ಯಾಂಡ್, ಸಿಡ್ನಿ ಹಾಗೇ ಶ್ರೀಲಂಕಾ, ಬಾಲಿ, ಮಲೇಷ್ಯಾ, ದುಬೈ, ಬ್ಲಾಕ್ ಫಾರೆಸ್ಟ್ ಅನ್ನೋ ಜಾಗಕ್ಕೂ ಹೋಗಿದ್ದೇನೆ. ಅರ್ಧ ಯುರೋಪ್ ನೋಡಿದ್ದೇನೆ ಎಂದು ಹೇಳಬಹುದು. ರೀಸೆಂಟ್ ಆಗಿ ವಿಯೆಟ್ನಾಂಗೂ ಹೋಗಿದ್ದೆ.
ಮುಂದಿನ ಪ್ರವಾಸದ ಪ್ಲಾನ್?
ಈ ವರ್ಷ ಪೂರ್ತಿ ಇಂಡಿಯಾ ಮತ್ತು ಕರ್ನಾಟಕ ಚೆನ್ನಾಗಿ ಎಕ್ಸ್‌ಪ್ಲೋರ್ ಮಾಡಬೇಕು ಅನ್ನೋ ಆಸೆ ಇದೆ. ಅದೇ ರೀತಿ ಶಕ್ತಿ ಪೀಠಗಳನ್ನು ಸಂದರ್ಶಿಸಬೇಕೆನ್ನುವ ಆಕಾಂಕ್ಷೆ ಇದೆ. ನನ್ನ ಮಗನಿಗೆ 15 ವರ್ಷ ವಯಸ್ಸಾದ ಮೇಲೆ ನಾನು ಅವನನ್ನು ಕೀನ್ಯಾದ ಮಸಾಯ್ ಮಾರಾಗೆ ಕರೆದುಕೊಂಡು ಹೋಗಬೇಕು.