ಕರ್ನಾಟಕವನ್ನು ದೇಶದ ಟಾಪ್-3 ದೇಶೀಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡುವ ಕನಸು..ಜಾಗತಿಕ ಪ್ರವಾಸೋದ್ಯಮದ ನಕ್ಷೆಯಲ್ಲೂ ಕರ್ನಾಟಕಕ್ಕೆ ಇನ್ನಷ್ಟು ಬಲವಾದ ಸ್ಥಾನ ಕಲ್ಪಿಸಿ, ದೇಶದ ಟಾಪ್-5 ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ರೂಪಿಸುವುದು ಧ್ಯೇಯ.. ಇದು ಕೇವಲ ಒಂದು ರ‍್ಯಾಂಕಿನ ಗುರಿಯಲ್ಲ.ಇದರ ಹಿಂದೆ ಹೆಚ್ಚು ಪ್ರವಾಸಿಗರು, ಹೆಚ್ಚು ಉದ್ಯೋಗ, ಹೆಚ್ಚು ಹೂಡಿಕೆ, ಸ್ಥಳೀಯ ಉದ್ಯಮಗಳಿಗೆ ಹೆಚ್ಚಿನ ಅವಕಾಶ ಮತ್ತು ರಾಜ್ಯದ ವಿವಿಧ ಭಾಗಗಳ ಆರ್ಥಿಕ ಬೆಳವಣಿಗೆಯ ಯೋಜನೆಯೊಂದಿಗೆ ಪ್ರವಾಸೋದ್ಯಮ ಇಲಾಖೆಯ ಹೊಣೆ ಹೊತ್ತ ಸಚಿವ ಕೆ.ಜೆ.ಜಾರ್ಜ್ ಅವರ ದಿಟ್ಟ ನಿರ್ಧಾರ..ಇಲಾಖೆಯ ಧ್ಯೇಯೋದ್ದೇಶಗಳ ಬಗೆಗೆ ಸಚಿವರ ಮುಕ್ತ ಮಾತು ಓದುಗರಿಗಾಗಿ..

ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ಖಾತೆಯನ್ನು ನಿಭಾಯಿಸುತ್ತಿದ್ದೀರಿ? ಏನೇನು ಸವಾಲುಗಳಿವೆ?

ಇದು ನನಗೆ ತುಂಬಾ ಇಷ್ಟವಾದ ಜವಾಬ್ದಾರಿ. ನಮ್ಮ ರಾಜ್ಯದ ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ರೀತಿಯಲ್ಲಿ ತಲುಪುವ ಖಾತೆ ಇದು, ಮತ್ತು ಎಲ್ಲರಿಗೂ ಇಷ್ಟವಾಗುವ ವಿಷಯ ಕೂಡ.
ಪ್ರವಾಸೋದ್ಯಮ ಕ್ಷೇತ್ರವು ಕೇವಲ ವೀಕ್ಷಣೆಗಷ್ಟೇ ಸೀಮಿತವಾಗಿಲ್ಲ- ಇದು ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಎಂಜಿನ್. ಹೊಟೇಲ್, ಸಾರಿಗೆ, ಸ್ಥಳೀಯ ಕರಕುಶಲ ಕಲೆ ಹೀಗೆ ಹಲವು ಕ್ಷೇತ್ರಗಳಿಗೆ ಇದು ಜೀವಾಳ.
ನಾನು ಕಳೆದ 2-3 ತಿಂಗಳಿನಲ್ಲಿ ನೋಡಿದಂತೆ ಮೂಲಸೌಕರ್ಯ ಕೊರತೆ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸುತ್ತಲೇ ಪ್ರವಾಸೋದ್ಯಮವನ್ನು ಬೆಳೆಸುವುದು, ಖಾಸಗಿ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಕರಾವಳಿ-ಮಲೆನಾಡು-ಉತ್ತರ ಕರ್ನಾಟಕದಂಥ ವೈವಿಧ್ಯಮಯ ಪ್ರದೇಶಗಳಿಗೆ ಪ್ರವಾಸಿಗರನ್ನು ಸೆಳೆಯುವುದು ಸದ್ಯದ ಸವಾಲುಗಳು. ಇಂಧನ ಮತ್ತು ಪ್ರವಾಸೋದ್ಯಮ ಖಾತೆ, ಪ್ರತ್ಯೇಕ ವಲಯವಾಗಿದ್ದರೂ ನನ್ನೊಂದಿಗೆ ಅನುಭವಿ ಅಧಿಕಾರಿಗಳ ತಂಡವಿದ್ದು, ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ.

ಇದನ್ನೂ ಓದಿ: ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು - ಸಚಿವರ ದೂರದೃಷ್ಟಿಯ ನಾಯಕತ್ವ

ಕರ್ನಾಟಕವನ್ನು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಸರಕಾರದ ಮುಂದಿನ ಯೋಜನೆಗಳು?

'ಕರ್ನಾಟಕ ಪ್ರವಾಸೋದ್ಯಮ ನೀತಿ 2024-2029' ಮತ್ತು 'ಕರಾವಳಿ ಮಲೆನಾಡು ಪ್ರವಾಸೋದ್ಯಮ ನೀತಿ 2026' ಮೂಲಕ ನಾವು 25,000 ಕೋಟಿ ರು. ಹೂಡಿಕೆ ಆಕರ್ಷಿಸುವ ಮತ್ತು 5 ಲಕ್ಷ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದೇವೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಸರ್ಕ್ಯೂಟ್‌ಗಳಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವ (PPP) ಮಾದರಿಯಲ್ಲಿ ರೋಪ್‌ವೇ, ಪಾರಂಪರಿಕ ರೆಸಾರ್ಟ್, ವೇಸೈಡ್ ಅಮೆನಿಟಿ ಮತ್ತು ವಾಟರ್ ಸ್ಪೋರ್ಟ್ಸ್ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಪ್ರವಾಸೋದ್ಯಮದ ಪ್ರಯೋಜನಗಳು ಬೆಂಗಳೂರು ಮತ್ತು ಕೆಲವೇ ಭಾಗಗಳಿಗೆ ಸೀಮಿತವಾಗದೆ, ರಾಜ್ಯದ ಎಲ್ಲಾ ಭಾಗಗಳಿಗೆ ಹಂಚಿಕೆಯಾಗಬೇಕೆಂಬುದು ನಮ್ಮ ಉದ್ದೇಶ.

Untitled design - 2026-10-08T173123.334

ದುಬೈ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ (ATM)ಗೆ ನಿಮ್ಮ ಭೇಟಿಯ ಅನುಭವದಿಂದ ಕರ್ನಾಟಕಕ್ಕೆ ಏನು ಲಾಭ?

ಪ್ರವಾಸೋದ್ಯಮ ಸಚಿವನಾದ ಮೇಲೆ ಮೊದಲ ವಿದೇಶ ಪ್ರವಾಸವಿದು. ʻಒಂದು ರಾಜ್ಯ, ಹಲವು ಜಗತ್ತುಗಳು' ಎಂಬ ಟ್ಯಾಗ್‌ ಲೈನ್‌ ಮೂಲಕ ನಾವು ಜಾಗತಿಕವಾಗಿ ನಮ್ಮ ರಾಜ್ಯವನ್ನು ಪರಿಚಯಿಸಿದ್ದೇವೆ. ಇದು ಕೇವಲ ಒಂದು ಪ್ರಚಾರ ಅಭಿಯಾನವಲ್ಲ, ಬದಲಿಗೆ ಮಧ್ಯಪ್ರಾಚ್ಯ ಹಾಗೂ ಜಾಗತಿಕ ಮಾರುಕಟ್ಟೆಯಿಂದ ಕರ್ನಾಟಕಕ್ಕೆ ನೇರ ಹೂಡಿಕೆ ಮತ್ತು ವಿದೇಶಿ ಪ್ರವಾಸಿಗರ ಹರಿವು ಹೆಚ್ಚಿಸುವ ಕಾರ್ಯತಂತ್ರದ ಹೆಜ್ಜೆ. ಐಷಾರಾಮಿ, ವೆಲ್‌ನೆಸ್, ಕ್ರೂಸ್ ಮತ್ತು ಸಾಹಸ ಪ್ರವಾಸೋದ್ಯಮ ಮೂಲಕ ಉನ್ನತ ದರ್ಜೆಯ ಪ್ರವಾಸಿಗರನ್ನೂ ಸೆಳೆಯಬಹುದು. ಹಾಗೆಯೇ, ಯೋಗ, ಆಯುರ್ವೇದ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ನಾವು ವಿಶೇಷ ಉತ್ತೇಜನ ನೀಡುತ್ತಿದ್ದು ಬೆಂಗಳೂರು, ಮಂಗಳೂರು ನಗರಗಳಲ್ಲಿ ಈಗಾಗಲೇ ವಿಶ್ವದರ್ಜೆಯ ಆಸ್ಪತ್ರೆಗಳಿದ್ದು,ಅವುಗಳ ಮೂಲಕ ನಮ್ಮ ರಾಜ್ಯವನ್ನು ಮೆಡಿಕಲ್ ಟೂರಿಸಂ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ದುಬೈನ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ ನಮಗೆ ಬಹಳ ಸಹಕಾರಿಯಾಗಿದೆ. ಮಧ್ಯಪ್ರಾಚ್ಯದಿಂದ ಭಾರತಕ್ಕೆ ಈಗಾಗಲೇ ಗಣನೀಯ ಪ್ರವಾಸಿಗರ ಹರಿವಿದ್ದು, ದುಬೈನ ಅರೇಬಿಯನ್ ಟ್ರಾವೆಲ್ ಮಾರ್ಕೆಟ್‌ನಂಥ ವೇದಿಕೆಗಳು ಈ ಸಂಪರ್ಕವನ್ನು ಬಲಪಡಿಸಲು ಸಹಾಯ ಮಾಡುತ್ತವೆ.

ಕರ್ನಾಟಕಕ್ಕೆ ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಹೊಸ ಪ್ರವಾಸೋದ್ಯಮ ನೀತಿಗಳೇನು?

ನಮ್ಮ ಸರಕಾರ ಪ್ರವಾಸೋದ್ಯಮ ವಲಯಕ್ಕೆ 'ಉದ್ಯಮ ಸ್ಥಾನಮಾನ' ನೀಡಿದೆ. ಈ ಸ್ಥಾನಮಾನ ನೀಡುವುದರಿಂದ ಈ ಕ್ಷೇತ್ರಕ್ಕೆ ಸಾಲ, ವಿದ್ಯುತ್ ದರ, ಇತರ ಸೌಲಭ್ಯಗಳಲ್ಲಿ ಕೈಗಾರಿಕಾ ವಲಯದಂತೆಯೇ ಪ್ರಯೋಜನಗಳು ಲಭ್ಯವಾಗುತ್ತವೆ, ಇದು ಹೂಡಿಕೆದಾರರಿಗೆ ದೊಡ್ಡ ಪ್ರೋತ್ಸಾಹಕವಾಗಿದ್ದು, ಈ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಿ ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯಗಳು ಹಾಗೂ ಉದ್ಯಮಿದಾರರಿಗೆ ಹೆಚ್ಚಿನ ವ್ಯವಹಾರವಾಗುತ್ತದೆ. ಟೂರಿಸಂ ಫ್ರೆಂಡ್ಲೀ ಹಾಗೂ ಇನ್‌ವೆಸ್ಟರ್‌ ಫ್ರೆಂಡ್ಲೀ ವಾತಾವರಣ ಕಲ್ಪಿಸಲಾಗುತ್ತಿದೆ. ಬ್ಲೂ-ಗ್ರೀನ್ ಕೋಸ್ಟ್, ಕ್ರೂಸ್ ಪ್ರವಾಸೋದ್ಯಮ, ಸರ್ಫಿಂಗ್, ಕ್ಯಾರವಾನ್ ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ದತ್ತು ಯೋಜನೆಗಳು - ಇವು ಹೊಸ ತಲೆಮಾರಿನ ಪ್ರವಾಸಿಗರನ್ನು ಆಕರ್ಷಿಸುವ ಪರಿಕಲ್ಪನೆಗಳು. ಈ ಯೋಜನೆಗಳಿಗೆ ಶೇ.25 ರಿಂದ ಶೇ.30 ರವರೆಗೆ ಬಂಡವಾಳ ಸಬ್ಸಿಡಿ ಮತ್ತು ಏಕಗವಾಕ್ಷಿ ಅನುಮತಿ ವ್ಯವಸ್ಥೆ ಒದಗಿಸಲಾಗುತ್ತಿದೆ.
ದೇಶದ ವಿವಿಧ ಭಾಗಗಳಲ್ಲಿ ನಡೆಯುವ 10 ಟ್ರಾವೆಲ್ ಇವೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದೇವೆ ಮತ್ತು 20ಕ್ಕೂ ಹೆಚ್ಚು ನಗರಗಳಲ್ಲಿ ಪ್ರವಾಸೋದ್ಯಮ ರೋಡ್ ಶೋ ಆಯೋಜಿಸುತ್ತಿದ್ದೇವೆ. ಇದರಿಂದ ಇತರ ರಾಜ್ಯಗಳ ಏಜೆಂಟ್‌ಗಳಿಗೆ ಮತ್ತು ಪ್ರವಾಸಿಗರಿಗೆ ಕರ್ನಾಟಕದ ವೈವಿಧ್ಯತೆಯ ನೇರ ಪರಿಚಯ ಸಿಗುತ್ತದೆ.
6ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟ್ರಾವೆಲ್ ಇವೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದೇವೆ ಮತ್ತು 10ಕ್ಕೂ ಹೆಚ್ಚು ವಿದೇಶಿ ನಗರಗಳಲ್ಲಿ ರೋಡ್ ಶೋ ಆಯೋಜಿಸುತ್ತಿದ್ದೇವೆ. ಇದಲ್ಲದೆ, KCCD (Karnataka Centre of Cultural Diplomacy) ಮೂಲಕ ವಿವಿಧ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದೇವೆ.

ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದೀರಾ?

ಮೊದಲಿಗೆ, ರಾಜ್ಯದ ಪ್ರವಾಸೋದ್ಯಮ ಬೆಂಗಳೂರು ಕೇಂದ್ರಿತವಾಗಿ ಉಳಿಯಬಾರದೆಂಬುದೇ ನಮ್ಮ ಆದ್ಯತೆ. ಹಾಗಾಗಿ ಉತ್ತರ ಕರ್ನಾಟಕ ಸರ್ಕ್ಯೂಟ್ (ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ), ದಕ್ಷಿಣ ಕರ್ನಾಟಕ ಸರ್ಕ್ಯೂಟ್ (ಮೈಸೂರು-ಹಾಸನ-ಚಿಕ್ಕಮಗಳೂರು) ಮತ್ತು ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಬಂಡವಾಳ ಹೂಡಿಕೆ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ.ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ವಿಜಯಪುರ - ಇವೆಲ್ಲವೂ ವಿಶ್ವ ಪಾರಂಪರಿಕ ಮಹತ್ವದ ತಾಣಗಳು. ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಶ್ರೀಮಂತಿಕೆಯನ್ನು ಒಂದೇ ಸರ್ಕ್ಯೂಟ್‌ನಲ್ಲಿ ಜೋಡಿಸಿ, ಪಾರಂಪರಿಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವುದು ನಮ್ಮ ಗುರಿ. ಪ್ರತಿ ಸರ್ಕ್ಯೂಟ್ ಮತ್ತು ಜಿಲ್ಲೆ ತನ್ನದೇ ಆದ ವಿಶಿಷ್ಟತೆಯ ಆಧಾರದ ಮೇಲೆ ಪ್ರವಾಸಿಗರನ್ನು ಆಕರ್ಷಿಸಿದಾಗ, ಆ ಪ್ರದೇಶದ ಹೊಟೇಲ್, ಸಾರಿಗೆ, ಗೈಡ್ ಸೇವೆ, ಸ್ಥಳೀಯ ಕರಕುಶಲ ಮಾರುಕಟ್ಟೆಗೂ ನೇರ ಲಾಭ ಸಿಗುತ್ತದೆ. ಇದು ಬೆಂಗಳೂರು-ಕೇಂದ್ರಿತ ಬೆಳವಣಿಗೆಯ ಬದಲು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಮತ್ತು ಕಲ್ಯಾಣ-ಕರ್ನಾಟಕ ಭಾಗಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಾಗಿದೆಯೇ?

ಮೊದಲಿಗೆ, ಕರಾವಳಿ ಮತ್ತು ಮಲೆನಾಡಿನ 7 ಜಿಲ್ಲೆಗಳಿಗಾಗಿ ವಿಶೇಷ 'ಕರಾವಳಿ ಮಲೆನಾಡು ಪ್ರವಾಸೋದ್ಯಮ ನೀತಿ 2026' ರೂಪಿಸಲಾಗಿದೆ. ಹಾಗೆಯೇ, ಉತ್ತರ ಕರ್ನಾಟಕ ಮತ್ತು ಕಲ್ಯಾಣ-ಕರ್ನಾಟಕ ಭಾಗಗಳಲ್ಲಿ ಪಾರಂಪರಿಕ ಸರ್ಕ್ಯೂಟ್‌ಗಳು, ಕಲ್ಚರಲ್ ಹಾಥ್‌ಗಳು, ಮತ್ತು ಕಲ್ಯಾಣ/ಕಿತ್ತೂರು ಕರ್ನಾಟಕದ ಉದ್ಯಮಿಗಳಿಗೆ ಬಂಡವಾಳ ಸಹಾಯಧನ ಯೋಜನೆಗಳಲ್ಲಿ ಹೆಚ್ಚುವರಿ ಶೇ.5 ಸಬ್ಸಿಡಿ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ-ಕರ್ನಾಟಕ ಭಾಗಗಳಲ್ಲಿ ಪಾರಂಪರಿಕ ಸರ್ಕ್ಯೂಟ್‌ಗಳು ಮತ್ತು ಕಲ್ಚರಲ್ ಹಬ್‌ಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಅಲ್ಲದೆ, ಕಲ್ಯಾಣ/ಕಿತ್ತೂರು ಕರ್ನಾಟಕದ ಉದ್ಯಮಿಗಳಿಗೆ ಬಂಡವಾಳ ಸಹಾಯಧನ ಯೋಜನೆಗಳಲ್ಲಿ ಹೆಚ್ಚುವರಿ ಶೇ.5 ಸಬ್ಸಿಡಿ ಪ್ರೋತ್ಸಾಹಕ ನೀಡಲಾಗುತ್ತಿದೆ. ಕಲ್ಯಾಣ-ಕರ್ನಾಟಕ ಭಾಗ ಐತಿಹಾಸಿಕವಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಉದ್ಯಮಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ನೀಡುವ ಮೂಲಕ ಪ್ರಾದೇಶಿಕ ಅಸಮಾನತೆ ನಿವಾರಿಸುವ ಪ್ರಯತ್ನ ಇದಾಗಿದೆ. ಇದು ಸಂವಿಧಾನದ 371ನೇ ವಿಧಿಯಡಿ ಈ ಪ್ರದೇಶಕ್ಕೆ ಸಿಗುವ ವಿಶೇಷ ಸ್ಥಾನಮಾನಕ್ಕೂ ಪೂರಕವಾಗಿದೆ.ಇದರಿಂದ ಗಳಿಕೆ ಸ್ಥಳೀಯವಾಗಿಯೇ ಉಳಿಯುತ್ತದೆ ಮತ್ತು ಸಮುದಾಯ ಆಧಾರಿತ ಪ್ರವಾಸೋದ್ಯಮ ಬಲಗೊಳ್ಳುತ್ತದೆ.

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ಪರಿಹರಿಸಲು ಸರಕಾರದ ಕ್ರಮವೇನು?

ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 50-60 ಕಿಮೀ.ಗೆ ಒಂದರಂತೆ ಆಧುನಿಕ ವೇಸೈಡ್ ಅಮೆನಿಟೀಸ್ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ದೀರ್ಘ ಪ್ರಯಾಣ ಮಾಡುವ ಪ್ರವಾಸಿಗರಿಗೆ ಸುರಕ್ಷಿತ, ಸ್ವಚ್ಛ ವಿಶ್ರಾಂತಿ ತಾಣಗಳ ಕೊರತೆಯಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ಶುದ್ಧ ಶೌಚಾಲಯ, ವಿಶ್ರಾಂತಿ ಸ್ಥಳ, ಆಹಾರ ಮಳಿಗೆಗಳಂಥ ಮೂಲಭೂತ ಸೌಕರ್ಯಗಳ ಜತೆಗೆ, ಪ್ರಯಾಣಿಕರಿಗೆ ಒಂದು ಶಿಸ್ತುಬದ್ಧ ಮತ್ತು ಆಹ್ಲಾದಕರ ವಿರಾಮ ಅನುಭವ ನೀಡುವುದು ಗುರಿ.ಬೀಚ್‌ಗಳಲ್ಲಿ ಅಂತಾರಾಷ್ಟ್ರೀಯ 'ಬ್ಲೂ ಫ್ಲ್ಯಾಗ್' ಮಾನದಂಡ ಅಳವಡಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ. ಇದು ಕೇವಲ ಒಂದು ಪ್ರಮಾಣಪತ್ರವಲ್ಲ, ಬದಲಿಗೆ ಪರಿಸರ ನಿರ್ವಹಣೆ, ಸುರಕ್ಷತೆ ಮತ್ತು ಸ್ವಚ್ಛತೆಯ ಜಾಗತಿಕ ಗುಣಮಟ್ಟದ ಸಂಕೇತ. ದ್ವೀಪ ಹಾಗೂ ನದಿ ತೀರಗಳಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಬೋಟಿಂಗ್, ವಾಟರ್ ಸ್ಪೋರ್ಟ್ಸ್‌ಗೆ ಸುರಕ್ಷಿತ ಮತ್ತು ಸುಲಭ ಪ್ರವೇಶ ಸಾಧ್ಯವಾಗುತ್ತದೆ. ನಮ್ಮ ಸ್ಥಳೀಯ ಸರಕಾರಗಳ ಸಹಕಾರವಿಲ್ಲದಿದ್ದಲ್ಲಿ ಸ್ವಚ್ಚತೆ ನಿರ್ವಹಣೆ ಅಸಾಧ್ಯ. ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಕಟ್ಟುನಿಟ್ಟಿನ ನೈರ್ಮಲ್ಯ ನಿರ್ವಹಣೆ ಜಾರಿಗೆ ತರಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಯಿಂದ ನಿರ್ವಹಣೆ ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರವಾಗಿರುತ್ತದೆ, ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಗುತ್ತದೆ.

Untitled design - 2026-10-08T173117.637

ಕೆಎಸ್‌ಟಿಡಿಸಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ತಯಾರಿಗಳು ಹೇಗಿವೆ?

ಕೆಎಸ್‌ಟಿಡಿಸಿಯ 'ಮಯೂರ' ಹೊಟೇಲ್‌ಗಳ ನವೀಕರಣ ಮಾಡುವ ಮೂಲಕ ಪ್ರವಾಸಿಗರಿಗೆ ಗರಿಷ್ಠ ಮಟ್ಟದ ಉತ್ತಮ ಸೇವೆ ನೀಡುವುದು, ಪ್ರೀಮಿಯಂ ಪ್ರವಾಸೋದ್ಯಮ ಪ್ಯಾಕೇಜ್‌ಗಳ ಸೇರ್ಪಡೆ, ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಖಾಸಗಿ-ಸರಕಾರಿ ಸಹಭಾಗಿತ್ವದ ಮೂಲಕ ಸೇವೆಯ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಏರಿಸಲಾಗುತ್ತಿದೆ.. ದಶಕಗಳಷ್ಟು ಹಳೆಯದಾದ ಈ ಆಸ್ತಿಗಳನ್ನು ಇಂದಿನ ಪ್ರವಾಸಿಗರ ನಿರೀಕ್ಷೆಗೆ ತಕ್ಕಂತೆ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಮೊದಲನೆಯದಾಗಿ, ನಂದಿ ಬೆಟ್ಟದಲ್ಲಿ ಸನ್‌ ರೈಸ್‌ ರೆಸ್ಟೋರೆಂಟ್‌ ತೆರೆದಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ನೀವು ಕೆ ಎಸ್‌ ಟಿ ಡಿಸಿ ಯಲ್ಲಿ ಕಾಣಲಿದ್ದೀರಿ. ಹಾಗೆಯೇ, ಪ್ರೀಮಿಯಂ ಪ್ರವಾಸೋದ್ಯಮ ಪ್ಯಾಕೇಜ್‌ಗಳ ಸೇರ್ಪಡೆಯಿಂದ ನಾವು ವಿಭಿನ್ನ ವರ್ಗದ ಪ್ರವಾಸಿಗರನ್ನು - ಬಜೆಟ್‌ನಿಂದ ಐಷಾರಾಮಿವರೆಗೆ - ತಲುಪಬಹುದು. ಸುಸ್ಥಿರ ಪ್ರವಾಸೋದ್ಯಮವು ನಮ್ಮ ಆದ್ಯತೆಯ ಭಾಗವಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಪ್ರವಾಸಿ ತಾಣಗಳಲ್ಲಿ, ವಿಶೇಷವಾಗಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ, ಮಾಲಿನ್ಯ ಕಡಿಮೆ ಮಾಡಬಹುದು ಮತ್ತು ಹಸಿರು ಪ್ರವಾಸೋದ್ಯಮದ ಮಾದರಿಯನ್ನು ಬಲಪಡಿಸಬಹುದು. ಖಾಸಗಿ-ಸರಕಾರಿ ಸಹಭಾಗಿತ್ವದ ಮೂಲಕ ಸೇವೆಯ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಏರಿಸುವುದು ನಮ್ಮ ಗುರಿ.

ಹಂಪಿ, ಮೈಸೂರು, ಕೊಡಗು, ಚಿಕ್ಕಮಗಳೂರು, ಕರಾವಳಿ ಮತ್ತು ದಾಂಡೇಲಿಯಂಥ ಪ್ರದೇಶಗಳಲ್ಲಿ ಜನದಟ್ಟಣೆಯನ್ನು ನಿರ್ವಹಣೆ ಹೇಗೆ ಸಾಧ್ಯ?

'ಹಬ್ ಅಂಡ್ ಸ್ಪೋಕ್' ಮಾದರಿಯನ್ನು ಅಳವಡಿಸಿಕೊಂಡು, ಜನಪ್ರಿಯ ಪ್ರವಾಸಿ ತಾಣಗಳ (ಹಬ್) ಸುತ್ತಮುತ್ತಲಿನ ಕಡಿಮೆ-ಪರಿಚಿತ ಉಪ-ತಾಣಗಳಿಗೆ (ಸ್ಪೋಕ್) ಪ್ರವಾಸಿಗರನ್ನು ಪುನರ್‌ ವಿತರಿಸುವ ಮಾದರಿ. ಪ್ರಮುಖ ತಾಣಗಳ ಸುತ್ತಮುತ್ತಲಿನ ಪರ್ಯಾಯ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ.
ಮಡಿಕೇರಿ ನಗರಕ್ಕೆ ಪ್ರವಾಸಿಗರ ದಟ್ಟಣೆಯನ್ನು ಕಡಿಮೆ ಮಾಡಲು ವಿರಾಜಪೇಟೆ ಭಾಗಕ್ಕೆ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಇದರಿಂದ ಎರಡೂ ಪ್ರದೇಶಗಳಿಗೆ ಪ್ರವಾಸೋದ್ಯಮದ ಲಾಭ ಹಂಚಿಕೆಯಾಗುತ್ತದೆ, ಮಡಿಕೇರಿಯ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.
ಜನಪ್ರಿಯ ತಾಣಗಳಲ್ಲಿ ಅತಿಯಾದ ಪ್ರವಾಸಿ ದಟ್ಟಣೆ ಆ ಪ್ರದೇಶದ ಪರಿಸರ ಮತ್ತು ಮೂಲಸೌಕರ್ಯದ ಮೇಲೆ ಒತ್ತಡ ಹೇರುತ್ತದೆ. ಇದನ್ನು ತಪ್ಪಿಸಲು ಮತ್ತು ಪ್ರವಾಸೋದ್ಯಮದ ಲಾಭವನ್ನು ವಿಶಾಲ ಪ್ರದೇಶಕ್ಕೆ ಹಂಚಲು ಈ ಮಾದರಿ ಸಹಕಾರಿ.
ಆನ್‌ಲೈನ್ ಟಿಕೆಟಿಂಗ್ ಮತ್ತು ಪ್ರವೇಶ ಮಿತಿ ಮೂಲಕ ದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ. ಇದರಿಂದ ಪ್ರತಿ ತಾಣಕ್ಕೂ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ.
ಆನ್‌ಲೈನ್ ಟಿಕೆಟಿಂಗ್‌ನಿಂದ ಪ್ರವಾಸಿಗರಿಗೆ ಸಾಲುಗಟ್ಟಿ ನಿಲ್ಲುವ ತೊಂದರೆ ತಪ್ಪುತ್ತದೆ ಮತ್ತು ಉತ್ತಮ ಅನುಭವ ಸಿಗುತ್ತದೆ. ಪ್ರವೇಶ ಮಿತಿಯಿಂದ ಸ್ಥಳೀಯ ಪರಿಸರ ಮತ್ತು ಸ್ಮಾರಕಗಳ ಸುಸ್ಥಿರತೆ ಕಾಪಾಡಲ್ಪಡುತ್ತದೆ, ಸ್ಥಳೀಯರ ಜೀವನಶೈಲಿಗೂ ಅಡ್ಡಿಯಾಗುವುದಿಲ್ಲ.

ಕರ್ನಾಟಕದ ಎಲೆಮರೆಯ ಕಾಯಿಯಂತಿರುವ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಯೋಜನೆ ಇದೆಯೇ?

ಪ್ರವಾಸೋದ್ಯಮದಲ್ಲಿ ಈಗ ಕಾಲ ಬದಲಾಗಿದೆ. ‘ಕರ್ನಾಟಕಕ್ಕೆ ಬನ್ನಿ’ ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ‘ಕರ್ನಾಟಕಕ್ಕೆ ಏಕೆ ಬರಬೇಕು?’ ಎಂಬ ಪ್ರಶ್ನೆಗೆ ವಿಭಿನ್ನ ಉತ್ತರಗಳನ್ನು ಕೊಡಬೇಕು.

ಅದಕ್ಕಾಗಿಯೇ ವಿಷಯಾಧಾರಿತ ಬ್ರ್ಯಾಂಡಿಂಗ್‌ಗೆ ಒತ್ತು ನೀಡುತ್ತಿದ್ದೇವೆ. ‘ಕಾಫಿ ನಾಡು’ ಮೂಲಕ ಕಾಫಿಯ ಪರಿಮಳದೊಂದಿಗೆ ಮಲೆನಾಡನ್ನು ಪರಿಚಯಿಸುತ್ತಿದ್ದೇವೆ. ‘ಸರ್ಫ್ ಕರ್ನಾಟಕ’ದ ಮೂಲಕ ಕರಾವಳಿಯ ಅಲೆಗಳನ್ನು ಜಗತ್ತಿಗೆ ತೋರಿಸುತ್ತಿದ್ದೇವೆ. ‘ಮಾನ್ಸೂನ್ ಥೀಂ’ ಮೂಲಕ ಮಳೆಯನ್ನೇ ಪ್ರವಾಸಿ ಅನುಭವವನ್ನಾಗಿ ಮಾಡುತ್ತಿದ್ದೇವೆ. ‘ಪಾಕಶಾಲೆ ಪ್ರವಾಸೋದ್ಯಮ’ದ ಮೂಲಕ ಒಂದು ಊರಿನ ರುಚಿಯನ್ನೇ ಅದರ ಪ್ರವಾಸಿ ಗುರುತನ್ನಾಗಿ ರೂಪಿಸುತ್ತಿದ್ದೇವೆ. ‘Active Karnataka’ ಅಡಿಯಲ್ಲಿ Sports Tourismಗೂ ಉತ್ತೇಜನ ನೀಡಲಾಗುತ್ತಿದೆ. ಕ್ರೀಡೆ ನೋಡಲು ಬರುವವರು ಪ್ರವಾಸಿಗರಾಗಬಹುದು; ಪ್ರವಾಸಕ್ಕೆ ಬರುವವರು ಕ್ರೀಡಾ ಅನುಭವದ ಭಾಗವಾಗಬಹುದು. ‘ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋ’ (KITE), ಬ್ಲಾಗರ್‌ಗಳ FAM Trips—ಇವೆಲ್ಲವೂ ಕರ್ನಾಟಕದ ಪ್ರವಾಸಿ ಅನುಭವವನ್ನು ರಾಜ್ಯದ ಗಡಿಯಾಚೆಗೆ ಕೊಂಡೊಯ್ಯುವ ವೇದಿಕೆಗಳು. ಪ್ರವಾಸೋದ್ಯಮದಲ್ಲಿ ಸ್ಪರ್ಧೆ ಈಗ ಕೇವಲ ತಾಣಗಳ ನಡುವೆ ಇಲ್ಲ. ಕಥೆಗಳ ನಡುವೆ ಇದೆ. ಅನುಭವಗಳ ನಡುವೆ ಇದೆ. ಬ್ರ್ಯಾಂಡ್‌ಗಳ ನಡುವೆ ಇದೆ.

ಕರ್ನಾಟಕಕ್ಕೆ ಕಥೆಗಳ ಕೊರತೆಯಿಲ್ಲ.ಈಗ ಆ ಕಥೆಗಳನ್ನು ಜಗತ್ತು ಕೇಳುವಂತೆ ಹೇಳುವ ಕೆಲಸವನ್ನು ನಾವೆಲ್ಲರೂ ಸೇರಿಕೊಂಡು ಮಾಡೋಣ.

ಪ್ರವಾಸಿಗರಿಗೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವ ಬಗ್ಗೆ ಚಿಂತಿಸಿದ್ದೀರಾ?

ಕರಾವಳಿ ಮತ್ತು ಸಾಹಸ ತಾಣಗಳಲ್ಲಿ ಪ್ರಮಾಣೀಕೃತ ಲೈಫ್‌ಗಾರ್ಡ್‌ಗಳು, ವಾಚ್‌ಟವರ್‌ಗಳು, ರಕ್ಷಣಾ ದೋಣಿಗಳು ತುರ್ತು ವೈದ್ಯಕೀಯ ಕೇಂದ್ರಗಳು ಹಾಗೂ 'ಸರ್ಚ್ ಅಂಡ್ ರೆಸ್ಕ್ಯೂ' ಜಾಲವನ್ನು ತುರ್ತು ಸ್ಪಂದನಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗುತ್ತಿದೆ. ಪ್ರವಾಸಿಗರ ಸುರಕ್ಷತೆಯಲ್ಲಿ ನಾವು ರಾಜಿಯಾಗಲು ಸಿದ್ದವಿಲ್ಲ. ಪ್ರಮಾಣೀಕೃತ ಲೈಫ್‌ಗಾರ್ಡ್‌ಗಳು, ವಾಚ್‌ಟವರ್‌ಗಳು, ರಕ್ಷಣಾ ದೋಣಿಗಳು, ತುರ್ತು ವೈದ್ಯಕೀಯ ಕೇಂದ್ರಗಳು—ಇವೆಲ್ಲವನ್ನೂ ಕೇವಲ ಪ್ರತ್ಯೇಕ ವ್ಯವಸ್ಥೆಗಳಾಗಿ ನೋಡುವುದಿಲ್ಲ. ಅವುಗಳನ್ನು ‘ಸರ್ಚ್ ಅಂಡ್ ರೆಸ್ಕ್ಯೂ’ ಜಾಲ ಮತ್ತು ತುರ್ತು ಸ್ಪಂದನಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗುತ್ತಿದೆ.

ದಾಂಡೇಲಿ ಸೇರಿದಂತೆ ವಿವಿಧ ಕಡೆ ಸಾಹಸ ಪ್ರವಾಸೋದ್ಯಮದಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ಯಾವಾಗ ಜಾರಿಗೆ ತರಲಾಗುತ್ತದೆ?

ಪ್ಯಾರಾಗ್ಲೈಡಿಂಗ್ ಆಗಿರಲಿ, ರಿವರ್ ರಾಫ್ಟಿಂಗ್ ಆಗಿರಲಿ, ಟ್ರೆಕ್ಕಿಂಗ್ ಆಗಿರಲಿ ಅಥವಾ ಇನ್ನಾವುದೇ ಸಾಹಸ ಚಟುವಟಿಕೆಯಾಗಿರಲಿ—ಪ್ರವಾಸಿಗರ ಸುರಕ್ಷತೆಯನ್ನು ನಿರ್ಲಕ್ಷಿಸುವ ಅವಕಾಶವೇ ಇಲ್ಲ.ಈ ಹಿನ್ನೆಲೆಯಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಈಗಾಗಲೇ ಹೊರಡಿಸಿದೆ. ಈ ಮಾರ್ಗಸೂಚಿಗಳು ಕೇವಲ ಕಾಗದದ ಮೇಲಿನ ನಿಯಮಗಳಾಗಬಾರದು. ಪ್ರತಿಯೊಬ್ಬ ಆಪರೇಟರ್‌ ಕೂಡ ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಾಹಸ ಪ್ರವಾಸೋದ್ಯಮ ಸಂಸ್ಥೆಗಳ ನಿಯಮಿತ ತಪಾಸಣೆ ಮತ್ತು ಪ್ರಮಾಣೀಕರಣಕ್ಕೆ ಯಾವುದೇ ವ್ಯವಸ್ಥೆ ಇದೆಯೇ?

ಹೌದು, ಕರಾವಳಿಯಲ್ಲಿ 'ಅಡ್ವೇಂವರ್‌ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಲೈಫ್ ಸೇವಿಂಗ್ ಸ್ಕೂಲ್' ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. ಮಹಾಗೆಯೇ, aಜಿಲ್ಲಾ ಪ್ರವಾಸೋದ್ಯಮ ಸಮಿತಿಗಳು (DTC) ನಿಯಮಿತವಾಗಿ ಕಡ್ಡಾಯ ಸುರಕ್ಷತಾ ಆಡಿಟ್ ಹಾಗೂ ಉಪಕರಣಗಳ ಪರಿಶೀಲನೆ ನಡೆಸಲಿವೆ.

ನೋಂದಾಯಿತ ಹೋಮ್‌ಸ್ಟೇಗಳಿಗೆ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ ಅಥವಾ ಸಬ್ಸಿಡಿ ನೀಡುವ ಯೋಜನೆ ಇದೆಯೇ?

ನೋಂದಾಯಿತ ಹೋಮ್‌ಸ್ಟೇಗಳಿಗೆ ಅನುಕೂಲವಾಗುವಂತೆ ವಿದ್ಯುತ್, ನೀರು ಮತ್ತು ಆಸ್ತಿ ತೆರಿಗೆಯನ್ನು ಗೃಹ ಬಳಕೆಯ ಪಾವತಿಸುವ ಸೌಲಭ್ಯ ನೀಡಲಾಗಿದೆ. ಪ್ರವಾಸಿಗರು ಹೊಟೇಲ್‌ನಲ್ಲಿ ಉಳಿದರೆ ಹಣದ ಒಂದು ಭಾಗ ಮಾತ್ರ ಸ್ಥಳೀಯವಾಗಿ ಹರಿಯಬಹುದು. ಆದರೆ ಹೋಮ್‌ಸ್ಟೇ ಮೂಲಕ ಸ್ಥಳೀಯ ಕುಟುಂಬವೇ ಪ್ರವಾಸೋದ್ಯಮದ ಭಾಗವಾಗುತ್ತದೆ.

ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಕೃತಿ, ಆಹಾರ ಮತ್ತು ಜೀವನಶೈಲಿಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಲು ಕ್ರಮಗಳೇನು?

ಪ್ರವಾಸಿಗರು ಈಗ ಕೇವಲ ಒಂದು ಸ್ಥಳವನ್ನು ನೋಡಲು ಬರುವುದಿಲ್ಲ. ಆ ಸ್ಥಳವನ್ನು ಅನುಭವಿಸಲು ಬರುತ್ತಾರೆ. ರೈತನೊಂದಿಗೆ ಒಂದು ದಿನ ಕಳೆಯುವುದು, ಮನೆಯ ಅಡುಗೆಯ ರುಚಿ ನೋಡುವುದು, ಯಕ್ಷಗಾನವನ್ನು ಕಣ್ಣಾರೆ ನೋಡುವುದು, ಕಂಬಳದ ಸಂಭ್ರಮವನ್ನು ಅನುಭವಿಸುವುದು—ಇವೆಲ್ಲವೂ ಪ್ರವಾಸೋದ್ಯಮದ ಭಾಗವಾಗಿದೆ. ಅದಕ್ಕಾಗಿಯೇ ಅಗ್ರಿ-ಟೂರಿಸಂ, ಕೃಷಿ ಮತ್ತು ತೋಟದ ಮನೆ ವಾಸ್ತವ್ಯ, ಯಕ್ಷಗಾನ, ಕಂಬಳ, ಸ್ಥಳೀಯ ಕರಕುಶಲ ಗ್ರಾಮಗಳು ಸೇರಿದಂತೆ ಸ್ಥಳೀಯ ಬದುಕಿನ ವೈವಿಧ್ಯವನ್ನು ಪ್ರವಾಸಿ ಅನುಭವದೊಂದಿಗೆ ಜೋಡಿಸುವ ಪ್ಯಾಕೇಜ್‌ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದರ ಮತ್ತೊಂದು ವಿಶೇಷತೆ ಆಹಾರ. ಕರಾವಳಿಯ ಸಾಂಪ್ರದಾಯಿಕ ಅಡುಗೆ ಒಂದು ಅನುಭವ. ಮಲೆನಾಡಿನ ಅಡುಗೆ ಮತ್ತೊಂದು ಅನುಭವ. ಪ್ರತಿ ಪ್ರದೇಶದ ಆಹಾರದಲ್ಲಿ ಅಲ್ಲಿನ ಮಣ್ಣು, ಹವಾಮಾನ, ಕೃಷಿ ಮತ್ತು ಸಂಸ್ಕೃತಿಯ ಕಥೆಯೇ ಅಡಗಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಕೇವಲ ‘ಏನು ನೋಡಬೇಕು?’ ಎಂಬ ಪ್ರಶ್ನೆಯಿಂದ ಹೊರತಂದು ‘ಏನು ಅನುಭವಿಸಬೇಕು?’ ಎಂಬ ಪ್ರಶ್ನೆಯತ್ತ ಕೊಂಡೊಯ್ಯಲಾಗುತ್ತಿದೆ.

ವೆಲ್‌ನೆಸ್, ಮೆಡಿಕಲ್, ಆಧ್ಯಾತ್ಮಿಕ, ಸಾಹಸ, ಸಿನಿಮಾ ಮತ್ತು ಆಹಾರ ಪ್ರವಾಸೋದ್ಯಮಕ್ಕೆ ವಿಶೇಷ ಯೋಜನೆಗಳಿವೆಯೇ?

ಹೌದು! ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಹಲವು ಹೊಸ ಕ್ಷೇತ್ರಗಳೊಂದಿಗೆ ಜೋಡಿಸುವ ಪ್ರಯತ್ನ ನಡೆಯುತ್ತಿದೆ. AYUSH Wellness Centres‌ಗಳಿಗೆ ಗರಿಷ್ಠ 2 ಕೋಟಿ ರು.ವರೆಗೆ ಸಬ್ಸಿಡಿ ನೀಡುವ ಮೂಲಕ Wellness Tourismಗೆ ಉತ್ತೇಜನ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಮತ್ತು MICE (Meetings, Incentives, Conferences & Exhibitions) ಕೇಂದ್ರವನ್ನು ಅಭಿವೃದ್ಧಿಪಡಿಸುವ ಮೂಲಕ ಕರಾವಳಿಯ ಆರ್ಥಿಕ ಸಾಮರ್ಥ್ಯಕ್ಕೆ ಮತ್ತೊಂದು ಆಯಾಮ ನೀಡುವ ಅವಕಾಶವಿದೆ. ಇದರ ಜತೆಗೆ ಸಿನಿಮಾ ಶೂಟಿಂಗ್ ಹಬ್‌ಗಳು ಮತ್ತು Food Trails ಅಭಿವೃದ್ಧಿ—ಇದು ಕರ್ನಾಟಕದ ಸ್ಥಳೀಯ ಸಂಸ್ಕೃತಿ, ಆಹಾರ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಸ ರೀತಿಯಲ್ಲಿ ಪರಿಚಯಿಸುವ ಅವಕಾಶ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು AI ಬಳಕೆ ಸಾಧ್ಯವಾಗಿದೆಯೇ?

ಇಲಾಖೆಯಲ್ಲಿ ‘Tourism Analytics Division’ ಮೂಲಕ ಪ್ರವಾಸಿಗರ ಹರಿವು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಿಶ್ಲೇಷಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಜತೆಗೆ ನೈಜ ಸಮಯದ ಭೂ ನಕ್ಷೆಗಳ ಆನ್‌ಲೈನ್ ಪೋರ್ಟಲ್ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಭೌಗೋಳಿಕ ಮಾಹಿತಿಯನ್ನು ಸುಲಭವಾಗಿ ಬಳಸುವ ಅವಕಾಶ ಕಲ್ಪಿಸಲಾಗುತ್ತಿದೆ. ಕ್ಯೂಆರ್ ಆಧಾರಿತ ಗೈಡ್‌ಗಳು, ಮತ್ತು ಪಾರಂಪರಿಕ ತಾಣಗಳಲ್ಲಿ ಎಆರ್/ವಿಆರ್ (AR/VR) ತಂತ್ರಜ್ಞಾನ ಬಳಸಲಾಗುತ್ತಿದೆ.

Untitled design - 2026-10-08T173112.607

ಪ್ರವಾಸೋದ್ಯಮ ಕ್ಷೇತ್ರದಿಂದ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯವಾಗಿದೆಯೇ?

ಅದಕ್ಕಾಗಿಯೇ,ನಮ್ಮ ದೇಶದಲ್ಲಿಯೇ ಉತ್ತಮವಾದ ಪ್ರವಾಸೋದ್ಯಮ ನೀತಿಯನ್ನು ನಮ್ಮ ಸರಕಾರ ಜಾರಿಗೆ ತಂದಿದೆ. ಈ ನೀತಿಯ ಅನುಷ್ಠಾನದ ಮೂಲಕ ಪ್ರವಾಸೋದ್ಯಮ ವಲಯವನ್ನು ಅಭಿವೃದ್ದಿ ಪಡಿಸಲಾಗುವುದು. ಪ್ರವಾಸೋದ್ಯಮದ ಯಶಸ್ಸನ್ನು ಕೇವಲ ಪ್ರವಾಸಿಗರ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ.ಎಷ್ಟು ಉದ್ಯೋಗ ಸೃಷ್ಟಿಯಾಯಿತು? ಎಷ್ಟು ಕುಟುಂಬಗಳ ಆದಾಯ ಹೆಚ್ಚಾಯಿತು? ಎಷ್ಟು ಗ್ರಾಮಗಳು ಹೊಸ ಆರ್ಥಿಕ ಚಟುವಟಿಕೆಯ ಭಾಗವಾದವು? ಈ ಪ್ರಶ್ನೆಗಳೂ ಮುಖ್ಯ.ಆದ್ದರಿಂದ 2029ರ ವೇಳೆಗೆ ಪ್ರವಾಸೋದ್ಯಮ ನೀತಿಯಡಿ ಕನಿಷ್ಠ 5 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ನಮ್ಮ ಗುರಿ.

ಖಾಸಗಿ ವಲಯ ಮತ್ತು ಸರಕಾರದ ನಡುವೆ ಸಹಭಾಗಿತ್ವವನ್ನು (PPP) ಹೆಚ್ಚಿಸಲು ಹೊಸ ನೀತಿಗಳನ್ನು ತರಲಾಗುತ್ತದೆಯೇ?

ಪ್ರವಾಸೋದ್ಯಮದ ದೊಡ್ಡ ಯೋಜನೆಗಳಿಗೆ ಕೇವಲ ದೃಷ್ಟಿಕೋನ ಇದ್ದರೆ ಸಾಲದು. ಬಂಡವಾಳ ಬೇಕು. ಹೂಡಿಕೆದಾರರಿಗೆ ವಿಶ್ವಾಸ ಬೇಕು. ಯೋಜನೆ ಕಾರ್ಯರೂಪಕ್ಕೆ ಬರಲು ಸರ್ಕಾರದ ಬೆಂಬಲವೂ ಬೇಕು.ಈ ಹಿನ್ನೆಲೆಯಲ್ಲಿ ₹25 ಕೋಟಿ ಮೌಲ್ಯದ ‘Viability Gap Funding’ (VGF) ನಿಧಿಯನ್ನು ಸ್ಥಾಪಿಸಲಾಗಿದೆ. ಕೆಲವು ಉತ್ತಮ ಯೋಜನೆಗಳಿಗೆ ಆರಂಭಿಕ ಹಂತದಲ್ಲಿ ಹಣಕಾಸಿನ ಅಂತರ ಎದುರಾಗಬಹುದು. ಅಂತಹ ಯೋಜನೆಗಳಿಗೆ ಅಗತ್ಯ ಬೆಂಬಲ ನೀಡುವ ಮೂಲಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು VGFನ ಉದ್ದೇಶ. ಇದರ ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಹಭಾಗಿತ್ವವನ್ನು ಇನ್ನಷ್ಟು ಸುಲಭಗೊಳಿಸಲು ‘Investment Facilitation Cell’ ಅನ್ನು ಕಾರ್ಯಾಚರಣೆಗೊಳಿಸಲಾಗಿದೆ.

ಕೊನೆಯದಾಗಿ, ಕರ್ನಾಟಕಕ್ಕೆ ಭೇಟಿ ನೀಡಲು ಬಯಸುವ ದೇಶ-ವಿದೇಶದ ಪ್ರವಾಸಿಗರಿಗೆ ನೀವು ನೀಡುವ ಸಂದೇಶವೇನು?

ಕರ್ನಾಟಕಕ್ಕೆ ಸುಸ್ವಾಗತ! ಪ್ರಕೃತಿಯ ಸೌಂದರ್ಯ, ಶ್ರೀಮಂತ ಸಂಸ್ಕೃತಿ, ಸಾವಿರಾರು ವರ್ಷಗಳ ಇತಿಹಾಸ, ಜೀವಂತ ಪರಂಪರೆ ಮತ್ತು ಅದ್ಭುತ ಕರಾವಳಿ—ಇವೆಲ್ಲವನ್ನೂ ಒಂದೇ ರಾಜ್ಯದಲ್ಲಿ ಅನುಭವಿಸುವ ಅವಕಾಶ ಕರ್ನಾಟಕದಲ್ಲಿದೆ. ಪಶ್ಚಿಮ ಘಟ್ಟಗಳ ಹಸಿರಿನಿಂದ ಕರಾವಳಿಯ ನೀಲಿ ಅಲೆಗಳವರೆಗೆ, ಕಾಫಿ ತೋಟಗಳ ಪರಿಮಳದಿಂದ ನಮ್ಮ ಸಾಂಪ್ರದಾಯಿಕ ಆಹಾರದ ರುಚಿಯವರೆಗೆ, ಐತಿಹಾಸಿಕ ತಾಣಗಳಿಂದ ಆಧುನಿಕ ಬೆಂಗಳೂರಿನ ಚೈತನ್ಯದವರೆಗೆ—ಪ್ರತಿ ಹೆಜ್ಜೆಯಲ್ಲೂ ಒಂದು ಹೊಸ ಅನುಭವ. ಕರ್ನಾಟಕಕ್ಕೆ ಬನ್ನಿ. ಕರ್ನಾಟಕವನ್ನು ಅನುಭವಿಸಿ.