• ದೇವೇಂದ್ರ ಹೊಸನಗರ

ಯಾರಾದರೂ ಸೆಲೆಬ್ರಿಟಿಗಳು ಪ್ಲೇಸ್​ನ ಸಜೆಸ್ಟ್ ಮಾಡುತ್ತಾರೆ ಎಂದರೆ ಎಲ್ಲರ ಕಣ್ಣು ಒಮ್ಮೆ ಅರಳುತ್ತದೆ. ಆ ಜಾಗ ಎಲ್ಲಿದೆ, ಅದಕ್ಕೆ ನಾವೂ ಹೋಗಬಹುದಾ, ಹೋದರೆ ಬಜೆಟ್ ಎಷ್ಟಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಆನ್​ಲೈನ್​ನಲ್ಲಿ ಹುಡುಕಲಾಗುತ್ತದೆ. ಈಗ ಉದ್ಯಮಿ ಆನಂದ್ ಮಹಿಂದ್ರಾ ಅವರು ಒಂದೊಳ್ಳೆಯ ಜಾಗ ಹೇಳಿದ್ದಾರೆ. ಹಾಗಂತ ಈ ಸ್ಥಳಕ್ಕೆ ತೆರಳೋಕೆ ನೀವು ಲಕ್ಷಾಂತರ ರೂಪಾಯಿ ಸುರಿಯಬೇಕು ಎಂದೇನೂ ಇಲ್ಲ. ನಿಮ್ಮದೇ ಕಾರ್​ನಲ್ಲಿ ಈ ಭಾಗಕ್ಕೆ ತೆರಳಬಹುದು. ಹಾಗಾದರೆ ಯಾವುದು ಆ ಜಾಗ? ಕಡಮಕ್ಕುಡಿ ಐಲ್ಯಾಂಡ್.

ಈ ದ್ವೀಪ ಇರೋದು ಎಲ್ಲಿ?

ದೇವರ ನಾಡು ಎಂದು ಕರೆಸಿಕೊಂಡಿರುವ ಕೇರಳದಲ್ಲಿ ಪ್ರಕೃತಿ ಪ್ರಿಯರು ಭೇಟಿ ನೀಡಲು ಅದೆಷ್ಟು ಜಾಗಗಳು ಇವೆಯೋ ಲೆಕ್ಕವೇ ಇಲ್ಲ. ಇಲ್ಲಿ ಪ್ರತಿಯೊಂದು ಊರು ಒಂದೊಂದು ವಿಶೇಷತೆಗಳನ್ನು ಹೊಂದಿದೆ. ಸದಾ ಹಸಿರನ್ನು ಹೊದ್ದು ಮಲಗಿರೋ ಈ ರಾಜ್ಯದಲ್ಲಿ ಕಡಮಕ್ಕುಡಿ ಐಲ್ಯಾಂಡ್ ವಿಶೇಷ ಜಾಗ ಎನಿಸಿಕೊಂಡಿದೆ. ಪ್ರಕೃತಿ ಪ್ರಿಯರಿಗೆ ಇದು ಸ್ವರ್ಗವೇ ಸರಿ.

kadamakkudi 1

ಪ್ರಕೃತಿಯ ಕಲಾತ್ಮಕತೆ

ಯಾವಾಗಲೂ ಸದಾ ವಾಹನಗಳಿಂದಲೇ ತುಂಬಿರುವ ಕೊಚ್ಚಿ ನಗರದಿಂದ ಕೇವಲ 19 ಕಿ.ಮೀ ಡ್ರೈವ್ ಮಾಡಿಕೊಂಡು ಹೋದರೆ ಕಡಮಕ್ಕುಡಿ ಅನ್ನೋ ಜಾಗ ಸಿಗುತ್ತದೆ. ಇದು ದ್ವೀಪಗಳ ಸಮೂಹ. ಇಲ್ಲಿ ಸುಮಾರು 14 ದ್ವೀಪಗಳು ಇವೆ. ಕಡಮಕ್ಕುಡಿ ಪ್ರಕೃತಿಯ ಕಲಾತ್ಮಕತೆಗೆ ನಿಜವಾದ ಸಾಕ್ಷಿಯಾಗಿದೆ. ಇಲ್ಲಿನ ಜಾಗ ಹಸಿರಿನಿಂದ ತುಂಬಿದೆ. ಸುತ್ತಲೂ ನೀರು ತುಂಬಿದ್ದರೆ ಮಧ್ಯದಲ್ಲಿ ರಸ್ತೆ ಇದೆ. ಇಲ್ಲಿ ಡ್ರೈವ್ ಮಾಡಿ ಸಾಗಿದರೆ ನಿಮಗೆ ಹಿತ ಅನುಭವ ಸಿಗುತ್ತದೆ. ಅಲ್ಲಲ್ಲಿ ಭತ್ತದ ಗದ್ದೆ, ಪಕ್ಷಿಗಳ ಕಲರವ, ಪ್ರಕೃತಿ ಪ್ರಿಯರ ಮನಸ್ಸಿಗೆ ಮುದ ಸಿಗುತ್ತದೆ. ಏರಿಯಲ್ ವ್ಯೂ​ನಲ್ಲಿ ಈ ಜಾಗ ನೋಡಿದರೆ ಯಾರೋ ಚಿತ್ರ ಬಿಡಿಸಿಟ್ಟಂತೆ ಕಾಣುತ್ತದೆ.

ಕಡಮಕ್ಕುಡಿಯ ಮತ್ತೊಂದು ಆಕರ್ಷಣೀಯ ವಿಚಾರ ಎಂದರೆ ಗ್ರಾಮೀಣ ಜೀವನವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಮೀನುಗಾರಿಕೆ, ಸಿಗಡಿ ಸಾಕಾಣಿಕೆ ಮುಂತಾದ ಚಟುವಟಿಕೆಗಳನ್ನು ನೋಡಿ ಆ ಬಗ್ಗೆ ತಿಳಿದುಕೊಳ್ಳಬಹುದು.

ಸೇಂಟ್ ಜಾರ್ಜ್ ಫೊರೇನ್ ಚರ್ಚ್

ಈ ಭಾಗದಲ್ಲಿ ಒಟ್ಟು 11 ಚರ್ಚ್​ಗಳು ಇವೆ. ಇದರಲ್ಲಿ ಸೇಂಟ್ ಜಾರ್ಜ್ ಫೊರೇನ್ ಚರ್ಚ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದು ಕ್ರಿ.ಶ. 594ರ ಸಮಯದಲ್ಲಿ ನಿರ್ಮಾಣ ಆಗಿದೆ ಎನ್ನಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಈ ಭಾಗದಲ್ಲಿ ಹಬ್ಬ ನಡೆಯುತ್ತದೆ.

ವಲ್ಲಾರ್ಪಡಂ ಬೆಸಿಲಿಕಾ:

ವಲ್ಲಾರ್ಪಡಂ ಬೆಸಿಲಿಕಾ ಕೂಡ ಒಂದು ಚರ್ಚ್. ಈ ಭಾಗದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 16ರಿಂದ 24ರವರೆಗೆ ಹಬ್ಬ ಆಚರಿಸುತ್ತಾರೆ. ಈ ವೇಳೆ ಎಲ್ಲಾ ವರ್ಗದ ಜನರು ಆಗಮಿಸಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

kadamakkudi 2

ಮಂಗಳವನಂ ಪಕ್ಷಿಧಾಮ:

ಕೊಚ್ಚಿಯ ಹೃದಯಭಾಗದಲ್ಲಿರುವ ಈ ಅಭಯಾರಣ್ಯವು ಜೀವವೈವಿಧ್ಯಕ್ಕೆ ಸಾಕ್ಷಿ ಆಗಿದೆ. ಇದು ವಿವಿಧ ವಲಸೆ ಹಕ್ಕಿಗಳಿಗೆ ಗೂಡುಕಟ್ಟುವ ಸ್ಥಳವಾಗಿದ್ದು, ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇದೆ. 2006ರಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಈ ಅಭಯಾರಣ್ಯ ಭಾಗದಲ್ಲಿ 194 ಜಾತಿಯ ಪಕ್ಷಿಗಳಿವೆ ಎನ್ನಲಾಗಿದೆ.

ಭೇಟಿ ನೀಡಲು ಉತ್ತಮ ಸಮಯ

ಕಡಮಕ್ಕುಡಿಗೆ ಭೇಟಿ ನೀಡಲು ಮಳೆಗಾಲ ಉತ್ತಮ ಸಮಯವಲ್ಲ. ಹೀಗಾಗಿ, ಅಕ್ಟೋಬರ್​ನಿಂದ ಮಾರ್ಚ್​​ವರೆಗೆ ಈ ಭಾಗಕ್ಕೆ ಭೇಟಿ ನೀಡಬಹುದು. ಈ ತಿಂಗಳುಗಳಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಆರ್ದ್ರತೆಯು ಕಡಿಮೆಯಿರುತ್ತದೆ ಮತ್ತು ತಾಪಮಾನವು ಕೂಡ ಕಡಿಮೆ ಇರುತ್ತದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಓಡಾಟ ಕಷ್ಟ ಆಗಬಹುದು.