ದೆಹಲಿ–ಬೆಂಗಳೂರು ವಿಮಾನವನ್ನು ಮರುನಿಗದಿಪಡಿಸಿದ ಬಳಿಕ ಪ್ರಯಾಣಿಕನಿಗೆ ಚೆಕ್‌ಇನ್ ನಿರಾಕರಿಸಿದ ಪ್ರಕರಣದಲ್ಲಿ ವಿಮಾನಯಾನ ಸಂಸ್ಥೆಗೆ ದೆಹಲಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ 68,047 ರು. ಪಾವತಿಸುವಂತೆ ಆದೇಶಿಸಿದೆ.

2019ರ ಫೆಬ್ರವರಿ 3ರಂದು ಪ್ರಯಾಣಿಕರು ದೆಹಲಿಯಿಂದ ಬೆಂಗಳೂರಿಗೆ ತೆರಳಬೇಕಿತ್ತು. ಮಧ್ಯಾಹ್ನ 1 ಗಂಟೆಗೆ ಹೊರಡಬೇಕಿದ್ದ ವಿಮಾನವನ್ನು ಕಾರ್ಯಾಚರಣಾ ಕಾರಣಗಳಿಂದ ಸಂಜೆ 4 ಗಂಟೆಗೆ ಮುಂದೂಡಿರುವುದಾಗಿ ಸಂಸ್ಥೆ ಅದೇ ದಿನ ಇ-ಮೇಲ್ ಮೂಲಕ ತಿಳಿಸಿತ್ತು. ಪರಿಷ್ಕೃತ ಸಮಯಕ್ಕೆ ಅನುಗುಣವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರೂ, ತಡವಾಗಿ ಬಂದಿದ್ದಾರೆ ಎಂದು ಹೇಳಿ ಅವರಿಗೆ ಚೆಕ್‌ಇನ್ ನಿರಾಕರಿಸಲಾಯಿತು. ನಂತರ ಅವರು 12,713 ರು. ನೀಡಿ ಮತ್ತೊಂದು ವಿಮಾನದ ಟಿಕೆಟ್ ಖರೀದಿಸಿದ್ದು, 334 ರು. ಹೊಟೇಲ್ ವೆಚ್ಚವನ್ನೂ ಭರಿಸಿದ್ದರು.

ವಿಮಾನಯಾನ ಸಂಸ್ಥೆ ಪ್ರಯಾಣಿಕರದ್ದೇ ತಪ್ಪು ಎಂದು ವಾದಿಸಿತು. ಆದರೆ, ಪ್ರಯಾಣಿಕರು ತಡವಾಗಿ ಬಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅಗತ್ಯ ಚೆಕ್‌ಇನ್ ದಾಖಲೆ, ಸಿಸಿಟಿವಿ ದೃಶ್ಯ ಅಥವಾ ಸಿಸ್ಟಂ ಲಾಗ್‌ಗಳನ್ನು ಸಂಸ್ಥೆ ಸಲ್ಲಿಸಿರಲಿಲ್ಲ ಎಂದು ಆಯೋಗ ಗಮನಿಸಿತು. ಹೀಗಾಗಿ 12,713 ರು. ಪರ್ಯಾಯ ಟಿಕೆಟ್ ವೆಚ್ಚ, 334 ರು. ಹೊಟೇಲ್ ವೆಚ್ಚ ಹಾಗೂ 55,000 ರು. ಪರಿಹಾರ ನೀಡುವಂತೆ ಆದೇಶಿಸಿದೆ.