ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿರುವ (Ethiopia) ಹೈಲಿ ಗುಬ್ಬಿ ಜ್ವಾಲಾಮುಖಿ ಸುಮಾರು 12,000 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದ್ದು ವಿಶ್ವದಾದ್ಯಂತ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಇಥಿಯೋಪಿಯಾದ ಈಶಾನ್ಯ ಪ್ರದೇಶದಲ್ಲಿರುವ ಜ್ವಾಲಾಮುಖಿಯಿಂದ (Hayli Gubbi Volcano) ಸ್ಫೋಟಗೊಂಡ ಹೊಗೆ 14 ಕಿ.ಮೀ ಎತ್ತರದವರೆಗೆ ಚಿಮ್ಮಿದ್ದರಿಂದ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಿದೆ.

ಜ್ವಾಲಾಮುಖಿಯಿಂದ ಹೊರಬಿದ್ದ ಹಾರುಬೂದಿಯು ದೆಹಲಿಯನ್ನು ತಲುಪಿ ಆಗಸವನ್ನು ಆವರಿಸಿತ್ತು. ಇದರ ಪರಿಣಾಮ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಳು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಪಡಿಸಲಾಯಿತು. 10ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಯಿತು.

volcanic erruption

ಹಾರುಬೂದಿಯ ದಟ್ಟಮೋಡವು ಸುಮಾರು 4,500 ಕಿಮೀ. ಕ್ರಮಿಸಿ ಭಾರತದ ಗುಜರಾತ್‌, ರಾಜಸ್ಥಾನ, ದೆಹಲಿ ಮುಖಾಂತರ ಚೀನಾದೆಡೆಗೆ ಸಾಗುತ್ತಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯವು ಹಾರು ಬೂದಿಯ ಬಗ್ಗೆ ಎಚ್ಚರ ವಹಿಸುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸಂದೇಶ ನೀಡಿದೆ. ವಿಮಾನಗಳ ಹಾರಾಟಕ್ಕೆ ಸೂಕ್ತ ಸಮಯ, ಮಾರ್ಗ ಮತ್ತು ಇಂಧನವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಿದೆ.

ಮೊದಲೇ ಹದಗೆಟ್ಟಿರುವ ದೆಹಲಿ ಗಾಳಿಯನ್ನು ಈ ಜ್ವಾಲಾಮುಖಿಯ ಹಾರು ಬೂದಿ ಸೇರಿಕೊಳ್ಳುವುದರಿಂದ ಇಲ್ಲಿನ ಗಾಳಿಯ ಗುಣಮಟ್ಟ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.