ವಿಮಾನ ಟಿಕೆಟ್‌ ದರಗಳು ಶೇ.700ರಷ್ಟು ಏರಿಕೆಯಾಗಿವೆ ಎಂಬ ಆರೋಪದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಸಲ್ಲಿಸಲಾದ ಮನವಿಗೆ ಸುಪ್ರೀಂ ಕೋರ್ಟ್‌ ಇಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ವಿಮಾನದಲ್ಲಿ ಪ್ರಯಾಣಿಸಬೇಡಿ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್‌ ವಕೀಲರಿಗೆ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್‌, ಸಂದೀಪ್ ಮೆಹ್ತಾ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠದ ಮುಂದೆ ವಕೀಲರು ಈ ವಿಷಯ ಪ್ರಸ್ತಾಪಿಸಿದ್ದರು. ವಿಮಾನ ಪ್ರಯಾಣ ಅತ್ಯಗತ್ಯ ಸೇವೆಯಾಗಿದ್ದು, ಟಿಕೆಟ್‌ ದರಗಳಲ್ಲಿನ ಭಾರಿ ಏರಿಕೆ ಸಂವಿಧಾನದ 14ನೆಯಸ ವಿಧಿಯ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು. ಆದರೆ, ನ್ಯಾಯಾಲಯ ಆ ಹಂತದಲ್ಲಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲಿಲ್ಲ. ಈ ಕುರಿತು ಯಾವುದೇ ಆದೇಶವನ್ನೂ ಹೊರಡಿಸಲಿಲ್ಲ.

ಇದೇ ವೇಳೆ, ವಿಮಾನಯಾನ ಸಂಸ್ಥೆಗಳ ದರ ನಿಗದಿ ಮತ್ತು ಹೆಚ್ಚುವರಿ ಶುಲ್ಕಗಳ ನಿಯಂತ್ರಣಕ್ಕೆ ಸ್ವತಂತ್ರ ವ್ಯವಸ್ಥೆ ರೂಪಿಸುವಂತೆ ಕೋರಿ ಸಲ್ಲಿಸಿರುವ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಭಾರತೀಯ ವಾಯುಯಾನ ನಿಯಮಗಳು 2026ರ ಪ್ರಕಾರ, 2027ರ ಜನವರಿ 1ರಿಂದ ಸಾಮಾನ್ಯವಾಗಿ ಮಾರುಕಟ್ಟೆಯೇ ವಿಮಾನ ದರಗಳನ್ನು ನಿರ್ಧರಿಸಲಿದೆ. ಆದರೆ, ಅಸಾಧಾರಣ ಸಂದರ್ಭಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರ ಮಧ್ಯಪ್ರವೇಶಿಸಬಹುದು.