ಕರ್ನಾಟಕದ ಪ್ರವಾಸೋದ್ಯಮಕ್ಕೆ ಈಗ ಇತಿಹಾಸ ಮತ್ತು ಅಂಚೆ ಚೀಟಿಗಳ ಸಂಗ್ರಹದ ಹೊಸ ಆಯಾಮ ಸೇರ್ಪಡೆಯಾಗಿದೆ. ‘ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್’ ಎಂಬ ಹೊಸ ಪರಿಕಲ್ಪನೆಯು ರಾಜ್ಯದ ಅಂಚೆ ಇತಿಹಾಸ, ಪರಂಪರೆ ಮತ್ತು ಪ್ರವಾಸಿ ತಾಣಗಳನ್ನು ಒಂದೇ ಅನುಭವದಲ್ಲಿ ಪರಿಚಯಿಸುವ ಉದ್ದೇಶ ಹೊಂದಿದೆ. ಇದು ಸಾಮಾನ್ಯ ಪ್ರಯಾಣದ ದಾಖಲೆಯಲ್ಲ; ಪ್ರವಾಸ ದಿನಚರಿ ಮತ್ತು ಅಂಚೆ ಚೀಟಿ ಸಂಗ್ರಹದ ಸ್ಮರಣಿಕೆಯ ರೂಪದಲ್ಲಿದೆ.

ಈ ಪಾಸ್‌ಪೋರ್ಟ್‌ ಮೂಲಕ ಪ್ರವಾಸಿಗರು ಕರ್ನಾಟಕದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಅಂಚೆ ಕಚೇರಿಗಳು, ಐತಿಹಾಸಿಕ ಹಿನ್ನೆಲೆ ಮತ್ತು ಅಂಚೆ ಸೇವೆಯ ಬೆಳವಣಿಗೆಯೊಂದಿಗೆ ಪರಿಚಯಿಸಿಕೊಳ್ಳಬಹುದು. ಪ್ರತಿಯೊಂದು ತಾಣದ ಭೇಟಿಯನ್ನು ದಾಖಲಿಸಿಕೊಳ್ಳಲು ಇದು ಅವಕಾಶ ಕಲ್ಪಿಸುವುದರ ಜತೆಗೆ, ಪ್ರವಾಸದ ನೆನಪನ್ನು ಸಂಗ್ರಹಿಸಿಡುವ ವಿಶಿಷ್ಟ ಮಾಧ್ಯಮವಾಗಲಿದೆ.

ಕರ್ನಾಟಕದ ಅಂಚೆ ಪರಂಪರೆಯ ಹಿಂದೆ ಹಲವು ದಶಕಗಳ ಇತಿಹಾಸವಿದ್ದು, ಪತ್ರಗಳು, ಅಂಚೆ ಚೀಟಿಗಳು ಮತ್ತು ಹಳೆಯ ಅಂಚೆ ವ್ಯವಸ್ಥೆಗಳು ರಾಜ್ಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯ ಭಾಗವಾಗಿವೆ. ಈ ಪರಿಕಲ್ಪನೆಯ ಮೂಲಕ ಆ ಮರೆಯಾಗುತ್ತಿರುವ ಇತಿಹಾಸವನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿ ಜನರಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.

ಫಿಲಾಟೆಲಿ ಆಸಕ್ತರು, ಇತಿಹಾಸ ಪ್ರಿಯರು ಹಾಗೂ ವಿಭಿನ್ನ ರೀತಿಯ ಪ್ರವಾಸ ಅನುಭವ ಬಯಸುವವರಿಗೆ ಈ ಪಾಸ್‌ಪೋರ್ಟ್‌ ಹೊಸ ಆಕರ್ಷಣೆಯಾಗುವ ನಿರೀಕ್ಷೆಯಿದೆ.