ಅಸ್ಸಾಂ ಸರಕಾರವು ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಸುಸ್ಥಿರ ಪ್ರವಾಸೋದ್ಯಮದ ಮಾದರಿಯನ್ನಾಗಿ ಅಭಿವೃದ್ಧಿಪಡಿಸಲು ಸಮಗ್ರ ಪ್ರವಾಸೋದ್ಯಮ ಕಾರ್ಯತಂತ್ರ (ರೋಡ್‌ಮ್ಯಾಪ್) ರೂಪಿಸಲು ಮುಂದಾಗಿದೆ.

Untitled design - 2026-07-21T162102.057

ಈ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು, ಸ್ಥಳೀಯ ಸಂಘಟನೆಗಳು ಹಾಗೂ ಇತರ ಪಾಲುದಾರರೊಂದಿಗೆ ವಿಶೇಷ ಸಭೆ ನಡೆಸಿ ಹಲವು ಮಹತ್ವದ ಸಲಹೆಗಳನ್ನು ಸಂಗ್ರಹಿಸಿದರು.

ಸಭೆಯಲ್ಲಿ ಪ್ರವಾಸಿಗರಿಗೆ ಉತ್ತಮ ಮೂಲಸೌಕರ್ಯ, ಗುಣಮಟ್ಟದ ವಸತಿ, ಸುಧಾರಿತ ಸಾರಿಗೆ ವ್ಯವಸ್ಥೆ, ಮಾಹಿತಿ ಕೇಂದ್ರಗಳು ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಯಿತು. ಅಲ್ಲದೆ, ಕಾಜಿರಂಗದ ಜೀವವೈವಿಧ್ಯ ಮತ್ತು ಏಕಶೃಂಗ ಖಡ್ಗಮೃಗ ಸೇರಿದಂತೆ ಅಪರೂಪದ ವನ್ಯಜೀವಿಗಳ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವನ್ನು ಸರಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಪ್ರಾಣಿ ಸಂಪತ್ತಿನ ಸಾಂಪ್ರದಾಯಿಕ ಜಾಗ ಒತ್ತುವರಿಯೇ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣ: ಕೆ.ವಿ‌.ಪಿ

ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ ಅವರಿಗೆ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಕಲ್ಪಿಸುವುದಕ್ಕೂ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಮುಂದಿನ ವನ್ಯಜೀವಿ ಪ್ರವಾಸಿ ಋತುವಿನ ಸಿದ್ಧತೆಗಳ ಜತೆಗೆ, ಎಲ್ಲ ಪಾಲುದಾರರಿಂದ ಲಿಖಿತ ಸಲಹೆಗಳನ್ನು ಆಹ್ವಾನಿಸಿ ಅವುಗಳ ಆಧಾರದ ಮೇಲೆ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು ಎಂದು ಅಸ್ಸಾಂ ಸರಕಾರ ತಿಳಿಸಿದೆ. ಕಾಜಿರಂಗವನ್ನು ಅಂತಾರಾಷ್ಟ್ರೀಯ ಮಟ್ಟದ ಪರಿಸರ ಸ್ನೇಹಿ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.