ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕುಂಠಿತಗೊಂಡಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಶ್ರೀನಗರದಲ್ಲಿ ಮೂರು ದಿನಗಳ ಪ್ರವಾಸೋದ್ಯಮ ಸಮಾವೇಶ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸ್ನೋ ಫಾಲ್‌ ಆರಂಭವಾಗುವ ನಿರೀಕ್ಷೆಯಿಂದ ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಸಮಾವೇಶವನ್ನು ಅಡ್ವೆಂಚರ್ ಟೂರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ATOAI) ಆಯೋಜಿಸಿದ್ದು, ದೇಶದ ವಿವಿಧ ರಾಜ್ಯಗಳಿಂದ ಸಾಹಸ ಪ್ರವಾಸೋದ್ಯಮ ತಜ್ಞರು, ಪ್ರವಾಸಿ ಮಾರ್ಗದರ್ಶಕರು ಹಾಗೂ ಉದ್ಯಮ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದು ಪೆಹಲ್ಗಾಮ್‌ ದಾಳಿಯ ಬಳಿಕ ಜಮ್ಮು–ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ದೊಡ್ಡ ಮಟ್ಟದ ಪ್ರವಾಸೋದ್ಯಮ ಕಾರ್ಯಕ್ರಮವಾಗಿದೆ.

Jammu kashmir tourism spot


ಶೆರ್-ಇ-ಕಾಶ್ಮೀರ ಅಂತಾರಾಷ್ಟ್ರೀಯ ಕನ್ವೆಂಶನ್ ಸೆಂಟರ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಾತನಾಡಿ, ಕಠಿಣ ಪರಿಸ್ಥಿತಿಗಳ ನಡುವೆಯೂ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಇಂಥ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ಹೇಳಿದರು. ಕಾಶ್ಮೀರವು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂಬ ವಿಶ್ವಾಸವನ್ನು ದೇಶಾದ್ಯಂತ ತಲುಪಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಕನ್ವೆಂಶನ್‌ನಲ್ಲಿ ಪೆಹಲ್ಗಾಮ್‌ ದಾಳಿಯ ನಂತರ ಮುಚ್ಚಲ್ಪಟ್ಟ ಕೆಲವು ಪ್ರವಾಸಿ ತಾಣಗಳು, ಟ್ರೆಕ್ಕಿಂಗ್ ಮಾರ್ಗಗಳು ಹಾಗೂ ಸಾಹಸ ಚಟುವಟಿಕೆಗಳನ್ನು ಹಂತ ಹಂತವಾಗಿ ಪುನರಾರಂಭಿಸುವ ಕುರಿತು ಚರ್ಚೆ ನಡೆಯುತ್ತಿದೆ. ಜತೆಗೆ, ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸುವುದು ಮತ್ತು ಉದ್ಯಮಕ್ಕೆ ಹೊಸ ಉತ್ತೇಜನ ನೀಡುವ ಕ್ರಮಗಳ ಮೇಲೂ ಗಮನ ಹರಿಸಲಾಗಿದೆ.