ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಟಾರ್ಟ್ ಅಪ್
ಪ್ರವಾಸೋದ್ಯಮ ಕ್ಷೇತ್ರದ ನೈಜ ಸಮಸ್ಯೆ ಮತ್ತು ಅಗತ್ಯ ಗುರುತಿಸಿ, ಅವುಗಳಿಗೆ ಪರಿಹಾರ ಅಭಿವೃದ್ಧಿಪಡಿಸಲು ಸ್ಟಾರ್ಟ್ ಅಪ್, ಯುವ ಉದ್ಯಮಿ ಮತ್ತು ನವೋದ್ಯಮಗಳಿಗೆ ಅವಕಾಶ ಕಲ್ಪಿಸುವುದು ಉದ್ದೇಶಿತ ನೀತಿಯ ಪ್ರಮುಖ ಆಶಯವಾಗಿದೆ.
ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ತಂತ್ರಜ್ಞಾನ, ಉತ್ಪನ್ನ ಮತ್ತು ನವೀನ ಪರಿಹಾರ ರೂಪಿಸಲು ಸ್ಟಾರ್ಟ್ ಅಪ್ಗಳ ಸಾಮರ್ಥ್ಯ ಬಳಸಿಕೊಂಡು ಪ್ರವಾಸೋದ್ಯಮ ಇಲಾಖೆ ಟೂರಿಸಂ ಸ್ಟಾರ್ಟ್ ಅಪ್ ಪ್ರಮೋಷನ್ ಪಾಲಿಸಿ ರೂಪಿಸಲಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಪ್ರವಾಸೋದ್ಯಮ ಕ್ಷೇತ್ರದ ನೈಜ ಸಮಸ್ಯೆ ಮತ್ತು ಅಗತ್ಯ ಗುರುತಿಸಿ, ಅವುಗಳಿಗೆ ಪರಿಹಾರ ಅಭಿವೃದ್ಧಿಪಡಿಸಲು ಸ್ಟಾರ್ಟ್ ಅಪ್, ಯುವ ಉದ್ಯಮಿ ಮತ್ತು ನವೋದ್ಯಮಗಳಿಗೆ ಅವಕಾಶ ಕಲ್ಪಿಸುವುದು ಉದ್ದೇಶಿತ ನೀತಿಯ ಪ್ರಮುಖ ಆಶಯವಾಗಿದೆ. ಪ್ರವಾಸಿಗರ ಅನುಭವ, ಡಿಜಿಟಲ್ ಸೇವೆ, ಪ್ರವಾಸಿ ತಾಣಗಳ ನಿರ್ವಹಣೆ, ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ, ಸಂಚಾರ, ಸುರಕ್ಷತೆ, ಪ್ರವೇಶ ಸೌಲಭ್ಯ, ಪ್ರವಾಸಿ ಮಾಹಿತಿ ಹಾಗೂ ಸ್ಥಳೀಯ ಅನುಭವಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಪರಿಹಾರ ರೂಪಿಸಲು ನೀತಿಯಡಿ ಅವಕಾಶ ಕಲ್ಪಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.
ಕರ್ನಾಟಕವು ದೇಶದ ಪ್ರಮುಖ ಸ್ಟಾರ್ಟ್ ಅಪ್ ಕೇಂದ್ರವಾಗಿದೆ. ಈ ನಾವಿನ್ಯತೆಯ ಶಕ್ತಿ ಪ್ರವಾಸೋದ್ಯಮದೊಂದಿಗೆ ಜೋಡಿಸಬೇಕು. ಪ್ರವಾಸೋದ್ಯಮ ಇಲಾಖೆಯ ಅಗತ್ಯ ಮತ್ತು ಸವಾಲು ಸ್ಟಾರ್ಟ್ ಅಪ್ ಮುಂದೆ ಇಟ್ಟು, ಅವರು ಹೊಸ ಪರಿಹಾರ, ಉತ್ಪನ್ನ ಮತ್ತು ಸೇವೆ ಅಭಿವೃದ್ಧಿಪಡಿಸಲು ಅವಕಾಶ ನೀಡುವುದು ನಮ್ಮ ಉದ್ದೇಶ. ಉತ್ತಮ ಆಲೋಚನೆ ಪ್ರಾಯೋಗಿಕವಾಗಿ ಪರೀಕ್ಷಿಸಿ, ಫಲಿತಾಂಶ ನೀಡುವ ಪರಿಹಾರ ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಬಳಸಿಕೊಳ್ಳು ವಂತಹ ವಾತಾವರಣ ರೂಪಿಸಲು ಈ ನೀತಿ ನೆರವಾಗಲಿದೆ ಎಂದರು.