ಬಸ್ ಟಿಕೆಟ್ ದರ ಏರಿಕೆ, ರೈಲು ಪ್ರಯಾಣ ದರ ಏರಿಕೆ, ಆಟೋ ಟ್ಯಾಕ್ಸಿ ಪ್ರಯಾಣ ದರ ಏರಿಕೆ ಇಂಥ ಸುದ್ದಿಗಳನ್ನು ಸಾಮಾನ್ಯವಾಗಿ ಕೇಳಿಸಿಕೊಳ್ಳುವ ನಾವು ವಿಮಾನ ಪ್ರಯಾಣ ದರ ಏರಿಕೆ ಎಂಬ ಸುದ್ದಿಯನ್ನು ಕೇಳುವುದು ಬಹಳ ಕಡಿಮೆ. ಇದು ನಮ್ಮ ದೈನಂದಿನ ಬದುಕಿಗೆ ಕನೆಕ್ಟೆಡ್ ವಿಷಯವಲ್ಲ ಎಂಬುದು ಒಂದು ಕಾರಣವಾಗಿದ್ದರೆ, ಇದು ಶ್ರೀಮಂತರಿಗೆ ಮಾತ್ರ ಸಂಬಂಧಿಸಿದ ಸುದ್ದಿ ಅನಿಸಿರುವುದು ಮತ್ತೊಂದು ಕಾರಣ. ಇಂಥ ಸುದ್ದಿಗಳು ಪ್ರಕಟವಾಗುವುದು ಕೂಡ ಆರ್ಥಿಕ ಸುದ್ದಿಗಳ ಅಂಕಣದಲ್ಲಿಯೇ ಹೊರತು ಮುಖಪುಟಗಳಲ್ಲಿ ಹೆಡ್ ಲೈನ್ ಆಗುವುದಿಲ್ಲ.

ಆದರೆ ವಾಸ್ತವ ಬದಲಾಗಿದೆ. ಕಾಲ ಬದಲಾಗಿದೆ. ಈಗ ವಿಮಾನ ದರದ ಏರಿಳಿತಗಳು ಕೂಡ ಮನುಷ್ಯನ ದಿನಚರಿಯ ಭಾಗವಾಗಿದೆ. ವಿಮಾನ ಯಾನ ಎಂಬುದು ಇತರ ಟ್ರಾನ್ಸ್ ಪೋರ್ಟ್ ಗಳಷ್ಟೇ ಸರ್ವೇಸಾಮಾನ್ಯವಾಗಿದೆ. ಪ್ರವಾಸ, ವಿದೇಶ ಪ್ರಯಾಣ ಇವೆಲ್ಲವೂ ಈಗ ಜೀವನಶೈಲಿಯ ಅಂಶಗಳಾಗಿವೆ. ಹೀಗಾಗಿ ವಿಮಾನ ಪ್ರಯಾಣ ದುಬಾರಿ ಎಂಬ ಸುದ್ದಿಯೂ ಗಾಬರಿಗೊಳಿಸುವ ಸುದ್ದಿಯಾಗಿದೆ.

ಇದನ್ನೂ ಓದಿ: ನೀವು ಕೋಟ್ಯಧಿಪತಿಗಳಾಗಬೇಕಾ? ಈ ದೇಶಕ್ಕೆ ಹೋಗಿಬನ್ನಿ!

ಇದೇ ಏಪ್ರಿಲ್ ನಿಂದ ವಿಮಾನ ಸಂಸ್ಥೆಗಳು ಟಿಕೆಟ್ ಬೆಲೆ ಏರಿಸಲಿವೆ ಎಂಬುದು ಲೇಟೆಸ್ಟ್ ಶಾಕಿಂಗ್ ಸುದ್ದಿ. ಬೇಸಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡುವವರು ವಿಮಾನದಲ್ಲಿ ಹಾರುವ ಆಸೆ ಹೊತ್ತವರು, ಬ್ಯುಸಿನೆಸ್ ಮತ್ತಿತರ ಕಾರಣಕ್ಕೆ ಸದಾ ವಿಮಾನದಲ್ಲಿ ಓಡಾಡುವವರು ಗಮನಿಸಬೇಕಾದ ಸುದ್ದಿ ಇದು. ಮಧ್ಯಪ್ರಾಚ್ಯದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಇಸ್ರೇಲ್ ಇರಾನ್ ನಡುವಣ ಯುದ್ಧ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ. ಡಾಲರ್ ಎದುರು ರುಪಾಯಿ ಕುಸಿಯುತ್ತಿದೆ. ವಾಯುಪ್ರದೇಶಗಳ ಮೇಲೆ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಕಚ್ಚಾ ತೈಲದ ಬೆಲೆ ಮತ್ತು ಬೇಡಿಕೆ ಹೆಚ್ಚಿ ಅಲ್ಲೋಲಕಲ್ಲೋಲವಾಗುತ್ತಿದೆ. ಇದರ ಪರಿಣಾಮದಿಂದ ಬೆಲೆ ಏರಿಕೆ ಅನಿವಾರ್ಯವಾಗುತ್ತಿದೆ.

New Project (69)

ತೈಲ ಮಾರುಕಟ್ಟೆ ಕಂಪೆನಿಗಳು ಸಾಮಾನ್ಯವಾಗಿ ತಿಂಗಳ ಮೊದಲ ದಿನ ವಿಮಾನ ಇಂಧನದ ಬೆಲೆ ಪರಿಷ್ಕರಿಸುತ್ತವೆ. ಯುದ್ಧದ ಪರಿಣಾಮವಾಗಿ ಮಾರ್ಚ್ ಮಧ್ಯದಲ್ಲೇ ಇಂಧನ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂತು. ಆದರೂ ತಕ್ಷಣವೇ ಬೆಲೆ ಏರಿಕೆ ಆಗಲಿಲ್ಲ. ಆದರೆ ಏಪ್ರಿಲ್ ಒಂದರಿಂದ ಬೆಲೆ ಹೆಚ್ಚಳವಾಗುವುದು ಅನಿವಾರ್ಯ ಮತ್ತು ಖಚಿತ ಎಂಬ ಮಾಹಿತಿಗಳು ಹೊರಬಂದಿವೆ. ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದಲ್ಲಿ ಅತಿ ಹೆಚ್ಚು ಪಾಲಿರುವುದು ಇಂಧನದ್ದೇ. ಶೇಕಡಾ ನಲವತ್ತರಷ್ಟು ಖರ್ಚು ಇಂಧನಕ್ಕೆ ಇಡಬೇಕಾಗುತ್ತದೆ. ಮಾಹಿತಿಗಳ ಪ್ರಕಾರ ಈಗ ಜೆಟ್ ಇಂಧನ ಬೆಲೆ ಸುಮಾರು 85% ಏರಿಕೆಯಾಗಿದೆ. ಇದನ್ನು ಕಳೆದ ಒಂದು ತಿಂಗಳಿಂದ ಕಂಪೆನಿಗಳೇ ಭರಿಸಿದ್ದವು. ಆದರೆ ಇನ್ನು ಸಾಧ್ಯವಿಲ್ಲವೆಂದು ಈಗ ಪ್ರಯಾಣಿಕರ ಮೇಲೆ ಹೊರೆ ಹಾಕಲು ಹೊರಟಿವೆ ವಿಮಾನಯಾನ ಸಂಸ್ಥೆಗಳು.

ಬೆಲೆ ಏರಿಕೆ ಅನಿವಾರ್ಯವಾಗಿತ್ತಾ?

ಹೌದು. ಇಂಧನ ಬೆಲೆ ಏರಿಕೆಯಾಗಿರುವಾಗ, ಸಂಸ್ಥೆಗಳು ಇನ್ನೂ ನಷ್ಟ ಮಾಡಿಕೊಳ್ಳಲು ಸಿದ್ಧವಿಲ್ಲ. ಬ್ಯಾರೆಲ್ ಗೆ ಎಪ್ಪತ್ತು ಡಾಲರ್ ಇದ್ದ ಕಚ್ಚಾ ತೈಲ ಈಗ ನೂರು ಡಾಲರ್ ದಾಟಿದೆ. ಹೀಗಾಗಿ ಇಂಧನ ಸರ್ ಚಾರ್ಜ್ ವಿಧಿಸುವ ಮೂಲಕ ನಷ್ಟ ಸರಿದೂಗಿಸಲು ಹೊರಟಿವೆ ಇಂಡಿಗೋ, ಆಕಾಶ್ ಏರ್, ಸ್ಪೈಸ್ ಜೆಟ್, ಏರ್ ಇಂಡಿಯಾ ಮುಂತಾದ ಕಂಪೆನಿಗಳು.

ಇನ್ನೊಂದು ಕಾರಣ

ಪಾಕ್ ಮೇಲಿನ ವಾಯುಪ್ರದೇಶ ಸಂಚಾರಕ್ಕೆ ಮುಕ್ತವಿಲ್ಲ. ಯುದ್ಧದ ಕಾರಣದಿಂದ ಮಿಡ್ಲ್ ಈಸ್ಟ್ ನಲ್ಲಿಯೂ ಹಲವು ವಾಯುಪ್ರದೇಶಗಳು ನಿರ್ಬಂಧಕ್ಕೊಳಗಾಗಿವೆ. ಹೀಗಾಗಿ ಯುರೋಪ್ ಅಥವಾ ಅಮೆರಿಕ ಹೋಗಲು ವಿಮಾನಗಳು ಸುತ್ತಿ ಬಳಸಿ ದೂರಮಾರ್ಗದಲ್ಲಿ ಹೋಗಬೇಕು. ಇದರಿಂದಾಗಿ ಇಂಧನದ ವ್ಯಯ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಬೆಲೆ ಏರಿಕೆ ಅನಿವಾರ್ಯ.

New Project (66)

ರುಪಾಯಿಯ ಕುಸಿತ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಕುಸಿದಿರುವುದು ವಿಮಾನಯಾನ ಸಂಸ್ಥೆಗಳಿಗೆ ದೊಡ್ಡ ಏಟು ಕೊಟ್ಟಂತಾಗಿದೆ. ವಿಮಾನ ಕಂಪೆನಿಗಳು ತಮ್ಮೆಲ್ಲ ವೆಚ್ಚಗಳನ್ನು ಡಾಲರ್ ಗಳಲ್ಲಿ ಪಾವತಿಸುವುದರಿಂದ ಇದು ಕೂಡ ಬೆಲೆ ಏರಿಕೆಗೆ ಮೂಲವಾಗುತ್ತಿದೆ.

ಇನ್ಶೂರೆನ್ಸ್ ಕೂಡ ಅಧಿಕ

ಯುದ್ಧದ ಸಂದರ್ಭದಲ್ಲಿ ವಿಮಾನಗಳು ಮತ್ತು ಪ್ರಯಾಣಿಕರು ಅಪಾಯಕ್ಕೊಳಗಾಗುವ ಸಾಧ್ಯತೆ ಹೆಚ್ಚೇ ಇರುವುದರಿಂದ ವಿಮಾ ಸಂಸ್ಥೆಗಳು ಹೆಚ್ಚು ಪ್ರೀಮಿಯಂ ವಿಧಿಸಲಿವೆ. ವಿಮಾನದ ಮೇಲಿನ ಪ್ರೀಮಿಯಂ ಹೆಚ್ಚಳವನ್ನೂ ಪ್ರಯಾಣಿಕರಿಂದ ವಸೂಲಿ ಮಾಡುವ ಮೂಲಕವೇ ಸರಿದೂಗಿಸಲಿವೆ ವಿಮಾನಸಂಸ್ಥೆಗಳು.

ಎಷ್ಟು ಅಧಿಕ?

ದೇಶೀಯ ಪ್ರಯಾಣದಲ್ಲಿ 399ರುಪಾಯಿ ಸರ್ ಚಾರ್ಜ್ ಹೆಚ್ಚಳವಾಗಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಕನಿಷ್ಠ 200ಡಾಲರ್ ಹೆಚ್ಚು ತೆತ್ತಬೇಕಾಗುತ್ತದೆ. ಇದು ವಿಮಾನದಿಂದ ವಿಮಾನಕ್ಕೆ ಬದಲಾಗಬಹುದು.

ಸೀಟ್ ಕಮ್ಮಿ ಡಿಮ್ಯಾಂಡ್ ಜಾಸ್ತಿ

ಯೆಸ್. ಭಾರತದಿಂದ ವಿದೇಶಕ್ಕೆ ಹೋಗುವವರಲ್ಲಿ ಹೆಚ್ಚು ಮಂದಿ ಕೊಲ್ಲಿ ದೇಶಕ್ಕೆ ಹೋಗುವವರೇ. ಇನ್ನು ಬೇರೆ ದೇಶಕ್ಕೆ ಹೋಗುವವರೂ ಕೊಲ್ಲಿ ದೇಶದ ಮೂಲಕವೇ ಹಾದು ಹೋಗುತ್ತಾರೆ. ಯುದ್ಧದ ಕಾರಣದಿಂದ ಏರ್ ಇಂಡಿಯಾ ಈಗ ಸುಮಾರು 2500 ವಿಮಾನಗಳನ್ನು ರದ್ದುಗೊಳಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚು, ವಿಮಾನಗಳ ಸಂಖ್ಯೆ ಕಡಿಮೆ ಎಂದಾದಾಗ ಅಟೋಮ್ಯಾಟಿಕ್ ಆಗಿ ಟಿಕೆಟ್ ದರ ಹೆಚ್ಚಾಗುತ್ತದೆ.

New Project (67)

ಅಪಾಯಕಾರಿ ಬೆಳವಣಿಗೆ

ವಿಮಾನ ಟಿಕೆಟ್ ಬೆಲೆಗಳ ಮೇಲೆ ಇದುವರೆಗೂ ಸರಕಾರಕ್ಕೆ ಹಿಡಿತವಿತ್ತು. ಆದರೆ ಏಪ್ರಿಲ್ ನಿಂದ ಈ ಹಿಡಿತ ಕೈತಪ್ಪುವ ಸಾಧ್ಯತೆ ಇದೆ. ಸರಕಾರವು ವಿಮಾನಯಾನ ಸಂಸ್ಥೆಗಳಿಗೆ ತಮ್ಮಿಚ್ಛೆಯಷ್ಟು ಬೆಲೆ ನಿಗದಿಪಡಿಸುವ, ಏರಿಸುವ ಇಳಿಸುವ ಅಧಿಕಾರ ನೀಡಲಿದೆ. ಇದು ಪ್ರಯಾಣಿಕರ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ ಆಗಲಿದೆ.

ಒಂದು ಕಿವಿಮಾತು

ಈ ಸಮಯದಲ್ಲಿ ಗಲ್ಫ್ ಮತ್ತು ಯುರೋಪ್ ಅಥವಾ ಅಮೆರಿಕ ಹೋಗುವುದು ದುಬಾರಿ ಮತ್ತು ರಿಸ್ಕಿ ಇರುವುದರಿಂದ ಪ್ರವಾಸ ಮಾಡುವವರಿಗೆ ಸಿಂಗಾಪುರ, ಬ್ಯಾಂಕಾಕ್, ಹಾಂಗ್ ಕಾಂಗ್, ಶ್ರೀಲಂಕಾ ಮುಂತಾದ ಸ್ಥಳಗಳು ಆಯ್ಕೆ ಆಗಬಹುದು. ಇಲ್ಲಿಗೆ ಪ್ರಯಾಣಿಸಲೂ ವಿಮಾನ ಟಿಕೆಟ್ ದರ ದುಬಾರಿಯೇ ಆಗುತ್ತದೆ. ಆದರೆ ರಿಸ್ಕ್ ಲೆವೆಲ್ ಕಡಿಮೆ ಅಷ್ಟೆ. ಮುಂಗಡ ಬುಕಿಂಗ್ ಮಾಡಿಕೊಂಡಷ್ಟೂ ಕೊಂಚ ಅಗ್ಗವೆನಿಸಬಹುದು. ಒಟ್ಟಾರೆ ವಿಮಾನಯಾನ ಸಂಸ್ಥೆಗಳ ಮೇಲಿನ ಹೊರೆ ಪ್ರಯಾಣಿಕರಿಗೆ ವರ್ಗವಾಗುವುದಂತೂ ಖಚಿತ.

ಯಾರ ಮೇಲೆ ಪರಿಣಾಮ?

ಬಜೆಟ್ ಟ್ರಾವೆಲರ್
ಪ್ಯಾಕೇಜ್ ಟೂರ್ ಗ್ರಾಹಕರು
ಮಧ್ಯಮವರ್ಗದ ಪ್ರವಾಸಿಗರು

ದರ ಏರಿಕೆಗೆ ಕಾರಣ

ಇಂಧನ ಬೆಲೆ ಏರಿಕೆ

ಯುದ್ಧ ಮತ್ತು ಜಾಗತಿಕ ಅಶಾಂತಿ

ವಿಮಾನ ಮಾರ್ಗ ಬದಲಾವಣೆ

ವಿಮಾನಗಳ ಸಂಖ್ಯೆ ಕಡಿತ

ಬೇಡಿಕೆ ಹೆಚ್ಚಳ

ಸರಕಾರದ ನಿಯಂತ್ರಣ ಸಡಿಲಿಕೆ