• ಗೋವಿಂದರಾಜ್ ಹೊಸೂರ

ದೂರದ ಪ್ರದೇಶಕ್ಕೆ ಟ್ರಿಪ್ ಮಾಡುವಾಗ ಎಲ್ಲರೂ ಮುಖ್ಯವಾಗಿ ನೋಡೋದು ಹೊಟೇಲ್. ಇದರ ಜತೆಗೆ ಸರಿಯಾದ ಸಮಯಕ್ಕೆ ಹೊಟ್ಟೆ ಪೂಜೆ ಆಗುವಂತೆ ನೋಡಿಕೊಳ್ಳಲಾಗುತ್ತದೆ. ಸುತ್ತಾಟದ ವೇಳೆ ಬ್ರೇಕ್​ಫಾಸ್ಟ್​ ಕಾಂಪ್ಲಿಮೆಂಟರಿ ಆಗಿ ಕೊಡೋ ಹೊಟೇಲ್ ​ನ ಎಲ್ಲರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಉಚಿತವಾಗಿ ಬ್ರೇಕ್​ಫಾಸ್ಟ್ ಸಿಗುತ್ತದೆ ಎಂದರೆ ಯಾವುದೇ ಚಿಂತೆ ಇಲ್ಲದೆ ಎದ್ದೇಳಬಹುದು. ನೀವು ನಿಮ್ಮ ಸ್ಥಳ ತಲುಪುವುದಕ್ಕೂ ಮೊದಲು ತಿಂಡಿ ತಿಂದು ಹೊರಡಬಹುದು. ಹಾಗಾದರೆ, ಹೊಟೇಲ್ ​ ಗಳಲ್ಲಿ ಬ್ರೇಕ್​ಫಾಸ್ಟ್ ಮಾತ್ರ ಕಾಂಪ್ಲಿಮೆಂಟರಿ ಆಗಿ ಸಿಗೋದೇಕೆ? ಅದಕ್ಕೆ ಹಲವು ಕಾರಣ ಇವೆ.

ಪ್ರವಾಸ ಸುಲಭ..

ನೀವು ಯಾವುದೇ ಪ್ರದೇಶ ನೋಡಲು ಹೊರಟರೂ ತಿಂಡಿ ತಿಂದೇ ಹೊರಡಬೇಕು. ಆ ಕೆಲಸ ಹೊಟೇಲ್ ​ನಲ್ಲೇ ಆದರೆ ನಿಮ್ಮ ಸಮಯ ಉಳಿತಾಯ ಆಗುತ್ತದೆ. ಮುಂದೆಲ್ಲೋ ತಿಂಡಿ ತಿನ್ನೋಕೆ ನಿಲ್ಲಿಸಿ, ಅಲ್ಲಿ ಸಮಯ ವ್ಯರ್ಥ ಮಾಡಿದರೆ ನಿಮ್ಮ ಮೂಲ ಉದ್ದೇಶ ಹಾಳಾಗುತ್ತದೆ. ಈ ಕಾರಣಕ್ಕೆ ಬಂದ ಅತಿಥಿಗಳಿಗೆ ಸುಲಭ ಆಗಲಿ ಎಂದು ಟಿಫಿನ್​ನ ಹೊಟೇಲ್ ​ನವರೇ ನೀಡುತ್ತಾರೆ.

ಗ್ರಾಹಕರ ಆಕರ್ಷಣೆಗೂ ಹೌದು..

ಈಗ ಸ್ಪರ್ಧೆ ಜೋರಾಗಿದೆ. ಹೀಗಾಗಿ, ಗ್ರಾಹಕರನ್ನು ಆಕರ್ಷಿಸೋದು ಅಷ್ಟು ಸುಲಭ ಅಲ್ಲ. ಈ ಕಾರಣದಿಂದಲೇ ಹೊಟೇಲ್ ​ ಗಳು ಬೆಳಿಗ್ಗೆ ತಿಂಡಿ ಆಫರ್ ಮಾಡುತ್ತವೆ. ಉಚಿತವಾಗಿ ತಿಂಡಿ ಸಿಗುತ್ತದೆ ಎಂದಾಗ ಈ ರೀತಿಯ ಹೊಟೇಲ್ ​ಗಳನ್ನೇ ಎಲ್ಲರೂ ಪ್ರಿಫರ್ ಮಾಡುತ್ತಾರೆ. ಆಗ ಹೊಟೇಲ್ ಬ್ಯುಸಿನೆಸ್ ಹೆಚ್ಚುತ್ತದೆ.

having food 1

ಹೀಗೂ ಒಂದು ತಂತ್ರವಿದೆ..

ಸಾಮಾನ್ಯವಾಗಿ ಎಲ್ಲಾ ಹೊಟೇಲ್ ​ ಗಳಲ್ಲಿ ಚೆಕ್​ಇನ್ ಸಮಯ ಮಧ್ಯಾಹ್ನ 12 ಗಂಟೆ ಇದ್ದರೆ, ಚೆಕೌಟ್ ಸಮಯ ಮರುದಿನ ಬೆಳಿಗ್ಗೆ 11 ಗಂಟೆ ಆಗಿರುತ್ತದೆ. ಒಬ್ಬರು ಸರಿಯಾದ ಸಮಯಕ್ಕೆ ಚೆಕೌಟ್ ಆದರೆ ತಾನೇ ಮುಂದೆ ಬರೋ ಅತಿಥಿಗೆ ರೂಂ ರೆಡಿ ಮಾಡಿ ನೀಡೋಕೆ ಸಾಧ್ಯವಾಗೋದು. ಚೆಕೌಟ್ ಆಗುವ ಅತಿಥಿಯೇ ವಿಳಂಬ ಮಾಡಿ ಬಿಟ್ಟರೆ? ಅತಿಥಿಗಳು ಸರಿಯಾದ ಸಮಯಕ್ಕೆ ಚೆಕೌಟ್ ಆಗಲು ಉಚಿತ ಬ್ರೇಕ್​ಫಾಸ್ಟ್ ತಂತ್ರ ಸಹಕಾರಿ ಆಗಿದೆ.

ಅನೇಕ ಹೊಟೇಲ್ ​ಗಳಲ್ಲಿ ಬೆಳಿಗ್ಗೆ ಫ್ರೀ ತಿಂಡಿ ಕೊಡ್ತೀನಿ ಎಂದಾಗ ಅತಿಥಿಗಳು ಬೇಗ ಎದ್ದು ಸ್ನಾನ ಮಾಡಿ ತಿಂಡಿಗೆ ಬರುತ್ತಾರೆ. ತಿಂಡಿ ತಿಂದು ಬ್ಯಾಗ್ ಪ್ಯಾಕ್ ಮಾಡಿ ಹಾಗೆಯೇ ಹೊರಡುತ್ತಾರೆ. ಹೀಗಾಗಿ, ಬ್ರೇಕ್​ಫಾಸ್ಟ್ ತಂತ್ರ ಗ್ರಾಹಕರು ಸರಿಯಾದ ಸಮಯಕ್ಕೆ ಚೆಕೌಟ್ ಆಗಲು ಸಹಕಾರಿ ಆಗಿದೆ.

ಬಫೆಟ್..

ಫೇಮಸ್ ಪ್ರೇಕ್ಷಣೀಯ ಸ್ಥಳ ಎಂದಾಗ ವಿವಿಧ ಕಡೆಗಳಿಂದ ಪ್ರವಾಸಿಗರು ಬರುತ್ತಾರೆ. ಕೆಲವರಿಗೆ ದೋಸೆ ಇಷ್ಟ ಆಗಬಹುದು. ಇನ್ನೂ ಕೆಲವರಿಗೆ ಪೂರಿ ಇಷ್ಟ ಆಗಬಹುದು. ಇನ್ನೂ ಕೆಲವರು ಪೋಹಾ (ಅವಲಕ್ಕಿ) ಬೇಕು ಎಂದು ಕೇಳಬಹುದು. ಕೆಲವರು ಬ್ರೆಡ್ ಟೋಸ್ಟ್ ಕೇಳಬಹುದು. ಈ ಕಾರಣದಿಂದಲೇ ಬಹುತೇಕ ಹೊಟೇಲ್ ​ಗಳಲ್ಲಿ ಬಫೆಟ್ ಆಯ್ಕೆ ಇರುತ್ತದೆ. ಪ್ರತಿ ದಿನ ತಿಂಡಿಗೆ ಹಲವು ವಿಧದ ಆಯ್ಕೆಯನ್ನು ನೀಡಲಾಗುತ್ತದೆ. ಇಲ್ಲಿಗೆ ಬರೋ ಪ್ರವಾಸಿಗರು ತಮ್ಮಿಷ್ಟದ ತಿಂಡಿಯನ್ನು ಆಯ್ಕೆ ಮಾಡಿಕೊಂಡು ಸವಿಯಬಹುದು.

ಮಧ್ಯಾಹ್ನ, ರಾತ್ರಿ ಊಟ ಕಾಂಪ್ಲಿಮೆಂಟರಿಯಾಗಿ ಏಕಿಲ್ಲ?

ಪ್ರವಾಸಕ್ಕೆ ಬರುವವರು ಮಧ್ಯಾಹ್ನ ಹೊಟೇಲ್ ​ಗೆ ಮರಳೋ ಸಾಧ್ಯತೆ ತುಂಬಾನೇ ಕಡಿಮೆ. ಹೀಗಾಗಿ, ಮಧ್ಯಾಹ್ನದ ಊಟ ಕೊಟ್ಟರೂ ಅದು ವೇಸ್ಟ್. ಇನ್ನು, ಪ್ರವಾಸಿಗರು ರಾತ್ರಿ ಹೊರಗೆ ತಿಂದು ಬರೋ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ತಿಂಡಿಯನ್ನು ಉಚಿತವಾಗಿ ಕೊಡೋದು ಅತ್ಯುತ್ತಮ ಆಯ್ಕೆ. ಬೆಳಗ್ಗೆ ತಿಂಡಿ, ರಾತ್ರಿ ಊಟ ಎರಡನ್ನೂ ಉಚಿತವಾಗಿ ಕೊಡ್ತೀವಿ ಎಂದರೆ ಅದು ಹೊಟೇಲ್ ​ನವರಿಗೆ ದುಬಾರಿ ಕೂಡ ಆಗಲಿದೆ.