ವಾರೆ ಗೋಪುರವನ್ನು ನೋಡಲು ಇಲ್ಲಿ ವರ್ಷಪೂರ್ತಿ ಜನ
ಎರಡು ಶತಮಾನದ ಅವಧಿಯಲ್ಲಿ ಈ ಕಟ್ಟಡ ಪೂರ್ಣವಾಗಿದೆ. ಮೊದಲು ಕಟ್ಟಲು ಉದ್ದೇಶಿಸಿದ್ದು 16 ಮಹಡಿಗಳನ್ನು. ಆದರೆ ಕಟ್ಟಲು ಸಾಧ್ಯ ಆಗಿದ್ದು 8 ಮಹಡಿಗಳನ್ನು ಮಾತ್ರ. ಹಲವು ಶತಕಗಳಿಂದ ವಾಲುತ್ತಲೇ ಇದೆ, ಈ ವಾಲು ಗೋಪುರ.
-ಬಾಲಚಂದ್ರ ಹೆಗಡೆ
ಗೋಪುರಗಳಲ್ಲೇ ವಿಶೇಷ ಹಾಗೂ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಎಂದಾದರೆ ಅದು `ಪೀಸಾ ಗೋಪುರʼ. ಇದು ಇಟಲಿ ದೇಶದ ಪೀಸಾ ಎನ್ನುವ ಊರಿನಲ್ಲಿದ್ದು, ಜಗತ್ತಿನ ವಾಲುವ ಗೋಪುರವೆಂದು ಪ್ರಸಿದ್ಧಿ ಪಡೆದಿದೆ.
ಈ ಕಟ್ಟಡದ ಕೆಲಸ ಆರಂಭವಾಗಿದ್ದು 1173ನೇಯ ಇಸವಿಯಲ್ಲಿ. ನಿರ್ಮಾಣ ಪೂರ್ಣಗೊಂಡಿದ್ದು 1350ರಲ್ಲಿ ಎನ್ನಲಾಗಿದೆ. ಎರಡು ಶತಮಾನದ ಅವಧಿಯಲ್ಲಿ ಈ ಕಟ್ಟಡ ಪೂರ್ಣವಾಗಿದೆ. ಮೊದಲು ಕಟ್ಟಲು ಉದ್ದೇಶಿಸಿದ್ದು 16 ಮಹಡಿಗಳನ್ನು. ಆದರೆ ಕಟ್ಟಲು ಸಾಧ್ಯ ಆಗಿದ್ದು 8 ಮಹಡಿಗಳನ್ನು ಮಾತ್ರ. 1178ರವರೆಗೆ ಮೊದಲು ಮೂರು ಮಹಡಿ ಕಟ್ಟಿದ ನಂತರ ಇಟಲಿಯಲ್ಲಿ ಯುದ್ಧ ಪ್ರಾರಂಭವಾಗಿದ್ದರಿಂದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲಾಯಿತು. ಮತ್ತೆ 1275ರಲ್ಲಿ ಮೂರು ಮಹಡಿ ಕಟ್ಟಲಾಯಿತು. ನಂತರ 1319ರ ತನಕ ನಿರ್ಮಾಣ ಕಾರ್ಯ ಸ್ಥಗಿತಗೊಂಡು, ಅಂತಿಮವಾಗಿ 1350ರಲ್ಲಿ ಮತ್ತೆರಡು ಅಂತಸ್ತು ಕಟ್ಟಿ ಕಟ್ಟಡವನ್ನು ಪೂರ್ಣಗೊಳಿಸಲಾಗಿದೆ.

ಪೀಸಾದಲ್ಲಿನ ಬ್ಯಾಪ್ಟಿಸ್ಟ್ರಿ ಪಕ್ಕದಲ್ಲಿ ಒಂದು ಘಂಟಾ ಗೋಪುರವಾಗಿ ಇದನ್ನು ಕಟ್ಟಲಾಯಿತು. ಕಟ್ಟಡ ವಾಲುತ್ತಿದ್ದರಿಂದ ಎಂಟು ಅಂತಸ್ತಿನ ನಂತರ ಕಟ್ಟಲಾಗಿಲ್ಲ. ಪ್ರತಿ ಇಪ್ಪತ್ತು ವರ್ಷಕ್ಕೆ ಸುಮಾರು ಒಂದು ಇಂಚು ಈ ಕಟ್ಟಡ ವಾಲುತ್ತಲಿದೆ. ಆಶ್ಚರ್ಯವೆಂದರೆ ಸುಮಾರು ಎಂಟು ನೂರು ವರ್ಷದಿಂದ ಕಟ್ಟಡ ವಾಲುತ್ತಿದೆಯೆ ಹೊರತೂ ಸಂಪೂರ್ಣವಾಗಿ ಕುಸಿದು ಬೀಳುತ್ತಿಲ್ಲ. ಅದೇ ಇದರ ವಿಶೇಷತೆ. ಹೀಗೆ ಈ ಕಟ್ಟಡ ವಾಲಲು ಕಾರಣ ಇದರ ಅಡಿಪಾಯ ಕೇವಲ ಮೂರು ಮೀಟರ್ ಆಳವಿರುವುದು. ಮೆದುವಾದ ಶಿಲಾ ಪದರದ ಮೇಲೆ ಕಟ್ಟಡ ನಿಂತಿರುವುದರಿಂದಲೂ ವಾಲುತ್ತಿರಲೂಬಹುದು ಎನ್ನಲಾಗಿದೆ.

ವಾಲು ಗೋಪುರದ ವಿಶೇಷಗಳು
ಸಂಗೀತ ನುಡಿಸಬಲ್ಲ ಏಳು ಘಂಟೆಗಳನ್ನು ಅಳವಡಿಸಲಾಗಿದೆ. ಕಟ್ಟಡದ ಒಟ್ಟು ಎಂಟು ಅಂತಸ್ತುಗಳನ್ನು ಏರಲು 297ಮೆಟ್ಟಿಲುಗಳಿವೆ. ಮದ್ಯ ಯುಗದ ರೋಮನೆಸ್ಕ್ ವಾಸ್ತು ವಿನ್ಯಾಸ ಹೊಂದಿದೆ. ವಾಲುತ್ತಿರುವ ಗೋಪುರವಾಗಿದ್ದರಿಂದ 1990 ರಿಂದ ಪ್ರವಾಸಿಗಳಿಗೆ ಕಟ್ಟಡದ ಒಳಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಈ ಕಟ್ಟಡದ ಬಳಿ ಹೋಗುವ ಪ್ರವಾಸಿಗರಿಗೆ ಹೊರಗಿನಿಂದಲಾದರೂ ನೋಡಿ ಆನಂದಿಸುವ, ಫೊಟೋವೊಂದನ್ನು ಕ್ಲಿಕ್ಕಿಸಿಕೊಳ್ಳುವ ಎನಿಸುತ್ತದೆ.