ಮಿನಿ ಸಂಸತ್ತು vs ಮಿನಿ ಸರ್ಕಸ್
ಕುಟುಂಬದ ಪ್ರವಾಸ ‘ಮಿನಿ ಸಂಸತ್’ನಂತಿದ್ದರೆ, ಸ್ನೇಹಿತರೊಂದಿಗಿನ ಪ್ರವಾಸ ‘ಮಿನಿ ಸರ್ಕಸ್’ ಥರ ಇರುತ್ತದೆ. ಸಾಮಾನ್ಯವಾಗಿ ಸ್ನೇಹಿತರ ಪ್ರವಾಸದ ಪ್ಲಾನಿಂಗ್ ಕೌಟುಂಬಿಕ ಪ್ರವಾಸದಂತೆ ತಿಂಗಳುಗಟ್ಟಲೆ ನಡೆಯುವುದಿಲ್ಲ. ಅದು ವರ್ಷಗಟ್ಟಲೆ ನಡೆಯುತ್ತದೆ. ಈ ಸಂಕ್ರಾಂತಿಗೆ ಗ್ರೂಪಲ್ಲೊಬ್ಬ ಎಲ್ಲಾದರೂ ಹೋಗೋಣವಾ ಮೆಸೇಜ್ ಹಾಕಿದರೆ ಮುಂದಿನ ಸಂಕ್ರಾಂತಿಗೇ ಆ ಪ್ಲಾನ್ ಸಿದ್ಧವಾಗುವುದು! ಪ್ರತಿ ಸಲ, ಹೌದು ಹೋಗೋಣ ಅಂತ ಎಲ್ಲರೂ ಅನ್ನುತ್ತಾರೆ. ಆದರೆ ಹೋಗುವ ಸಮಯ ದೇವರಿಗೆ ಮಾತ್ರ ಗೊತ್ತು.
- ವೀರಕಪುತ್ರ ಶ್ರೀನಿವಾಸ
ಕುಟುಂಬದ ಜತೆ ಟ್ರಿಪ್ ಎಂದರೆ ನಮ್ಮ ಮನೆಯನ್ನು ಬೇರೆ ಕಡೆ ಶಿಪ್ಟ್ ಮಾಡಿದಂತಿರುತ್ತದೆ ಎನ್ನುವುದು ವೈಯಕ್ತಿಕ ಅನುಭವ. ಹೊರಗಡೆ ಹೋದ ಮೇಲೂ ಮನೆಯಲ್ಲಿದ್ದಂಥದ್ದೇ ಮಾತುಗಳು, ಅದೇ ಪ್ಲಾನುಗಳು, ತಕರಾರುಗಳು. ಒಂದು ಸಣ್ಣ ಮಿನಿ ಸಂಸತ್ತು ಅಲ್ಲಿ ಹಾಜರಾಗಬಿಡುತ್ತದೆ. ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ಹೇಳಿಕೊಳ್ಳುವ, ಅದಕ್ಕೆ ಕ್ಯಾತೆ ತೆಗೆಯುವ ಉಮೇದು ಇದ್ದೇ ಇರುತ್ತದೆ. ಅಪ್ಪ, ಬೆಳಗ್ಗೆ ಆರಕ್ಕೆ ಹೊರಡೋಣ ಅಂದ್ರೆ, ಅಮ್ಮ ಮೊದಲು 'ತಿಂಡಿ ಮಾಡಿ ಹೋಗೋಣ' ಅಂತ ಸೇರಿಸ್ತಾಳೆ. ಮಗಳು ʻಏನು ಬೇಕಾದರೂ ಮಾಡಿ, ನನಗೆ ವಿಂಡೋ ಸೀಟ್ ಬೇಕು' ಅಂತಾಳೆ. ಮಗ 'ಹೊಟೇಲ್‌ಗೆ ಹೋಗೋಣ' ಅಂತಾನೆ. ಕೊನೆಗೆ ಏನಾಗುತ್ತೆ ಗೊತ್ತಾ? ಬೆಳಗ್ಗೆ 6ಕ್ಕೆ ಹೊರಡೋಣ ಅನ್ನೋ ಪ್ಲಾನ್ 8ಕ್ಕೆ ಸ್ಟಾರ್ಟ್ ಆಗುತ್ತದೆ! ಪ್ರಯಾಣ ಶುರುವಾದಮೇಲೆ ಹೊಟೇಲ್ಲಿಗೂ ಮೊದಲು ಅಮ್ಮನ ಡಬ್ಬಾ ಓಪನ್ ಆಗುತ್ತೆ! ಮತ್ತದೇ ಮನೆಯೂಟ. ಅತ್ತ ಅಪ್ಪ ಯಜಮಾನನ ಸೀಟಲ್ಲಿ ಅಬಾಧಿತ. ಮೊದಲು ಎಲ್ಲಿ ಹೋಗಬೇಕು? ತಿಂಡಿ ಎಲ್ಲಿ? ಊಟ ಎಲ್ಲಿ? ರಾತ್ರಿ ಯಾವ ಹೊಟೇಲ್‌ನಲ್ಲಿ ಉಳಿದುಕೊಳ್ಳಬೇಕು? ಎಷ್ಟು ಹಣ ಉಳಿಸಬೇಕು? ಕುಟುಂಬವನ್ನು ಜೋಪಾನ ಮಾಡಿಕೊಳ್ಳುವುದು ಹೇಗೆ... ಇತ್ಯಾದಿ ಇತ್ಯಾದಿ ಜವಾಬ್ದಾರಿಗಳು ಪ್ರವಾಸದಲ್ಲೂ ಹೆಗಲೇರಿರುತ್ತವೆ! ಅತ್ತ...ಅಮ್ಮ, ಗಂಡ ಯಾವ ಹೊತ್ತಿಗೆ ಏನು ತಿನ್ನಬೇಕು? ಏನು ತಿನ್ನಬಾರದು? ಯಾವ ಮಾತ್ರೆ ತಗೋಬೇಕು? ಕುಡಿಯೋಕೆ ತಣ್ಣೀರಾ, ಬಿಸಿನೀರಾ? ಮಕ್ಕಳನ್ನು ಹೇಗೆ ಕೇರ್ ತಗೋಬೇಕು ಅನ್ನೋದರಲ್ಲಿ ಬ್ಯುಸಿ. ಮತ್ತದೇ ಗೃಹಶೋಭಾ ಪಾತ್ರ! ಇತ್ತ ಮಕ್ಕಳು ಮತ್ತದೇ ಮಕ್ಕಳಾಟದಲ್ಲಿ ಬ್ಯುಸಿ.
ಇದನ್ನೂ ಓದಿ: ಗುಂಪು ಪ್ರವಾಸದಲ್ಲಿ ಲಾಭವೂ ಉಂಟು ನಷ್ಟವೂ ಉಂಟು
ಕುಟುಂಬ ಪ್ರವಾಸದಲ್ಲಿ ಫೊಟೋ ತೆಗೆಸಿಕೊಳ್ಳುದು ದೊಡ್ಡ ಪ್ರಾಜೆಕ್ಟ್ ಆಗಿಬಿಡುತ್ತದೆ. 'ಎಲ್ಲರೂ ಸ್ಮೈಲ್ ಮಾಡಿ' ಅಂದ್ರೆ ಯಾರೋ ಒಬ್ಬರು ಕಣ್ಣು ಮುಚ್ಚಿರ್ತಾರೆ, ಇನ್ನೊಬ್ಬರು ಅತ್ತ ಎಲ್ಲೋ ನೋಡ್ತಿರ್ತಾರೆ. ಕೊನೆಗೆ 10 ಸಲ ಫೊಟೋ ತೆಗೆದರೂ ಸಮಾಧಾನವಾಗುವುದಿಲ್ಲ. ನನ್ನ ಮುಖ ಚೆನ್ನಾಗಿಲ್ಲ ಅನ್ನೋ ಕಾಮೆಂಟ್ ಖಾಯಂ. ಇನ್ನೂ ಹೊಟೇಲ್ನಲ್ಲಿ ಊಟಕ್ಕೆ ಕೂತರಂತೂ ಒಬ್ಬೊಬ್ಬರಿಗೆ ಒಂದೊಂದು ತಿಂಡಿ ಅಂತ ಹೇಳಿ ಮುಗಿಸುವಷ್ಟರಲ್ಲಿ ಸುಸ್ತೋ ಸುಸ್ತು! ಮನೆಯಾಚೆಗಿದ್ದರೂ ಮತ್ತದೇ ಮನೆಯೇ ಇದ್ದಂತಿರುತ್ತದೆ. ಮನೆಯಂತೆಯೇ ಮಾತು, ಬಟ್ಟೆ, ಊಟ, ಉಳಿತಾಯ ಎಲ್ಲದರ ಮೇಲೂ ಕಂಟ್ರೋಲ್ ಬಟನ್ ಒತ್ತಿಟ್ಟುಕೊಂಡಿರಬೇಕು. ಜತೆಗೆ ಒಬ್ಬರ ಬಗ್ಗೆ ಇನ್ನೊಬ್ಬರು ಕಾಳಜಿ ತೋರುತ್ತಾ, ಒಬ್ಬರ ಬಗ್ಗೆ ಇನ್ನೊಬ್ಬರು ಕೋಪ ಮಾಡುತ್ತಾ, ಒಬ್ಬರಿಗಿಂತ ಇನ್ನೊಬ್ಬರು ಜಾಸ್ತಿ ಫೊಟೋ ಕ್ಲಿಕ್ಕಿಸುತ್ತಾ, ಕೇರ್ ತೆಗೆದುಕೊಳ್ಳುತ್ತಾ ಪ್ರವಾಸ ಮುಗಿದಿದ್ದೇ ಗೊತ್ತಾಗುವುದಿಲ್ಲ.

ಆದರೆ ಸ್ನೇಹಿತರ ಜತೆಗಿನ ಪ್ರವಾಸ ಇದಕ್ಕೆ ಹೊರತಾದದ್ದು. ಕುಟುಂಬದ ಪ್ರವಾಸ ಮಿನಿ ಸಂಸತ್ನಂತಿದ್ದರೆ, ಸ್ನೇಹಿತರೊಂದಿಗಿನ ಪ್ರವಾಸ ಮಿನಿ ಸರ್ಕಸ್ ಥರ ಇರುತ್ತದೆ. ಸಾಮಾನ್ಯವಾಗಿ ಸ್ನೇಹಿತರ ಪ್ರವಾಸದ ಪ್ಲಾನಿಂಗ್ ಕೌಟುಂಬಿಕ ಪ್ರವಾಸದಂತೆ ತಿಂಗಳುಗಟ್ಟಲೆ ನಡೆಯುವುದಿಲ್ಲ. ಅದು ವರ್ಷಗಟ್ಟಲೆ ನಡೆಯುತ್ತದೆ. ಈ ಸಂಕ್ರಾಂತಿಗೆ ಗ್ರೂಪಲ್ಲೊಬ್ಬ ಎಲ್ಲಾದರೂ ಹೋಗೋಣವಾ ಮೆಸೇಜ್ ಹಾಕಿದರೆ ಮುಂದಿನ ಸಂಕ್ರಾಂತಿಗೇ ಆ ಪ್ಲಾನ್ ಸಿದ್ಧವಾಗುವುದು! ಪ್ರತಿ ಸಲ, ಹೌದು ಹೋಗೋಣ ಅಂತ ಎಲ್ಲರೂ ಅನ್ನುತ್ತಾರೆ. ಆದರೆ ಹೋಗುವ ಸಮಯ ದೇವರಿಗೆ ಮಾತ್ರ ಗೊತ್ತು. ಯಾರೋ ಒಬ್ಬನು ಕೊನೆಯ ಕ್ಷಣದಲ್ಲಿ ʼಮಗಾ ನಾನು ಬರಲ್ಲʼ ಅಂತ ಹೇಳ್ತಾನೆ. ಅದಕ್ಕೆ ಇನ್ನೊಬ್ಬನು ಕೋರಸ್ ಹಾಡ್ತಾನೆ. ಹಾಗೆ ಡೇಟ್ ಹತ್ತಿರ ಬಂದಂತೆ ಒಬ್ಬೊಬ್ಬರೇ ಒಂದೊಂದು ನೆಪ ಹೇಳಿ ತಪ್ಪಿಸಿಕೊಳ್ತಾರೆ. ಅಲ್ಲಿಗೆ ಪ್ರವಾಸ ಪಾಯಸ ಕುಡಿದು ಮಲಗಿಬಿಡುತ್ತದೆ. ಅದು ಮತ್ತೆ ಎಚ್ಚರವಾಗೋಕೆ ತಿಂಗಳುಗಳೇ ಬೇಕು. ನನ್ನ ಸ್ನೇಹಿತರ ಗುಂಪೊಂದು ಮೂರು ವರ್ಷದಿಂದ ವಿದೇಶ ಪ್ರವಾಸದ ಪ್ಲಾನ್ ಮಾಡುತ್ತಲೇ ಇದೆ.
ಒಂದು ವೇಳೆ ಪ್ರವಾಸ ಹೊರಟೇಬಿಟ್ಟರು ಅಂತ ಇಟ್ಕೊಳ್ಳಿ ಅದು ಮಾತ್ರ ಮಾಮೂಲಿಯಾಗಿರಲ್ಲ! ಕಾರಲ್ಲಿ ಕೂತ ತಕ್ಷಣ ಸೀಟ್ ಬೆಲ್ಟ್ ಹಾಕ್ತಾರೋ ಇಲ್ಲವೋ... ಹೇ ಹಾಡ್ ಹಾಕ್ ಗುರು ಅಂತಾರೆ. ಹಾಡಾದ್ರೆ ಸಾಕೇ, ಸ್ಪೀಕರ್ ಫುಲ್ ಸೌಂಡ್! ಸೌಂಡಾದ್ರೆ ಸಾಕೇ, ಎಲ್ಲರೂ ಗಾಯಕರಾಗಿಬಿಡ್ತಾರೆ. ಹೇ ಪ್ರಭು ಜೇಸುದಾಸ! ಲಿರಿಕ್ಸ್ ಗೊತ್ತಿಲ್ಲ ಅಂದ್ರೂ ಕೂಡ ಜೋರಾಗಿ ಕೂಗೋದ್ರಲ್ಲಿ ಕ್ಷಮಿಸಿ ಹಾಡೋದ್ರಲ್ಲಿ ಬ್ಯುಸಿಯಾಗಿಬಿಡ್ತಾರೆ.
ಒಂದು ವೇಳೆ ಗಾನಪ್ರಿಯ ಸ್ನೇಹಿತರಲ್ಲದೆ ತೀರ್ಥಪ್ರಿಯ ಸ್ನೇಹಿತರಾದರೆ ಇನ್ನೂ ಮಜ! ಕಾರು ಇನ್ನೂ ಬೆಂಗಳೂರು ದಾಟಿರಲ್ಲ, ಮಗಾ ಚಿಪ್ಸ್ ತಗೋಬೇಕಾ? ಅಂತ ತಣ್ಣಗೆ ಉದ್ಘಾಟನಾ ಕಾರ್ಯ ಆರಂಭಿಸುತ್ತಾನೆ!
ಬ್ಯಾಚುಲರ್ಸ್ ಪ್ರವಾಸದಲ್ಲಿ ಊಟಕ್ಕೆ ಯೋಚನೆ ಇಲ್ಲ. ಮಲಗೋಕೆ ಆತುರವಿಲ್ಲ. ಬಟ್ಟೆ ಬರೆಗಳು ಆದ್ಯತೆ ಅಲ್ಲವೇ ಅಲ್ಲ! ಮಲಗುವ ಸ್ಥಳವಂತೂ ಮುಖ್ಯವೇ ಅಲ್ಲ. ಕಾರಾದ್ರೂ ಆದೀತು, ಕಾಡಾದ್ರೂ ಆದೀತು!
ಈ ಸ್ನೇಹಿತರ ಪ್ರವಾಸದ ಹೈಲೈಟ್ ಅಂದರೆ ಕಂಟ್ರೋಲ್ ಇಲ್ಲದ ಮಾತುಗಳು. ದೇವ್ರೇ.. ಆ ಮಾತುಗಳಲ್ಲಿ ಯಾರ್ ಯಾರೆಲ್ಲಾ ಬಂದು ಹೋಗ್ತಾರೆ. ಏನ್ ಏನೆಲ್ಲಾ ಬಂದು ಹೋಗುತ್ತೆ. ಬಾಲ್ಯದ ಎಡವಟ್ಟುಗಳು ಹೆಚ್ಚುಗಾರಿಕೆಗಳು. ಮೇಷ್ಟ್ರುಗಳು ಗರ್ಲ್ ಫ್ರೆಂಡುಗಳು. ಆಂಟಿ, ತುಂಟಿ, ಬಾಸು, ಗ್ಲಾಸು. ಮೋದಿ, ಸಿದ್ದು, ಡಿಕೆಶಿ ಎಲ್ಲರನ್ನೂ ಮಿಕ್ಸಿಗೆ ಹಾಕಿ ರುಬ್ಬಿ ಒಣಗಿ ಹಾಕ್ತಾರೆ. ಮುಖ್ಯವಾಗಿ ಬ್ಯಾಚುಲರ್ಸ್ ಪ್ರವಾಸದಲ್ಲಿ ಬರುವ ಕಾಶಿನಾಥ್ ಕಂಟೆಂಟ್ ಮಾತ್ರ ಮ್ಯಾಚ್ಲೆಸ್! ಗುಲಗಂಜಿಯಷ್ಟು ವಿಷಯಕ್ಕೆ ಕುಂಬಳಕಾಯಿ ಗಾತ್ರದ ಮಸಾಲೆ ಬೆರೆಸಿ ಒಬ್ಬೊಬ್ಬ ಒಂದೊಂದು ಪ್ರಸಂಗ ಹೇಳುವಾಗ ಉಳಿದವರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುವುದು ಸು ಫ್ರಂ ಸೋ ಸಿನಿಮಾವನ್ನು ನೆನಪಿಸಿಬಿಡುತ್ತದೆ. ಇಂಥ ಪ್ರವಾಸ ಸಂದರ್ಭದ ಗಂಡೈಕ್ಳ ಮಾತುಗಳನ್ನು ಹೆಣ್ಣೈಕ್ಳು ಕೇಳಿಸಿಕೊಂಡರೆ ಗಂಡಸರನ್ನು ಆಮರಣಾಂತ ಉಪವಾಸ ಕೆಡವುದು ಮಾತ್ರ ಸತ್ಯ!

ಸ್ನೇಹಿತರ ಪ್ರವಾಸದ ಇನ್ನೊಂದು ಮಜಾ ಅಂದ್ರೆ, ಪ್ರತಿ ದಿನ ಮಲಗುವ ಮುನ್ನ ಖರ್ಚುವೆಚ್ಚಗಳ ಲೆಕ್ಕ ಬರೆದಿಡೋದು! ಪ್ರವಾಸ ಶುರುವಾದಾಗ ಅಂಬಾನಿ ತರ ಆಡ್ತಿದ್ದವರು, ಪ್ರವಾಸದ ಕೊನೆಗೆ ಮಲ್ಯ ತರ ಮುಖ ಮಾಡಿಕೊಳ್ಳಲಾರಂಭಿಸುತ್ತಾರೆ. ಅಷ್ಟೊತ್ತಿಗೆ ಅವರಿಗಾಗಿ ಕಾದ ಜೀವಗಳು, ಇಎಂಐಗಳು, ಜವಬ್ದಾರಿಗಳು ನೆನಪಾಗುತ್ತವೆ. ಆ ನೆನಪು ಮೂರು ದಿನದ ನಿರಪಯಕಾರಿ ಮಾತು, ಮೋಜನ್ನು ಒಂದು ನಿಯಂತ್ರಣಕ್ಕೆ ತಂದು ಸಮತೋಲನದ ಪ್ರವಾಸದ ಅನುಭವವನ್ನು ಉಳಿಸಿಬಿಡುತ್ತವೆ. ಆ ಪ್ರವಾಸ ಮುಗಿಸಿ ಬಂದರೂ ಒಂದಷ್ಟು ವರ್ಷಗಳ ಕಾಲ ಆ ನೆನಪುಗಳಲ್ಲೇ ಖುಷಿಪಡಲಾರಂಭಿಸುತ್ತಾರೆ.
ಕುಟುಂಬದ ಟ್ರಿಪ್ ಅಂದ್ರೆ ಪ್ರೀತಿ, ಕಾಳಜಿ, ಸ್ವಲ್ಪ ಡಿಸಿಪ್ಲಿನ್ ಜತೆಗಿನ ಮಧುರ ಅನುಭವ. ಸ್ವಲ್ಪ ಕಾಮಿಡಿ ಸೀನ್‌ಗಳ ಜೊತೆ. ಆದರೆ ಸ್ನೇಹಿತರ ಟ್ರಿಪ್ ಅಂದ್ರೆ ಪೂರ್ಣ ಕಾಮಿಡಿ ಸಿನಿಮಾ! ಸ್ಕ್ರಿಪ್ಟ್ ಇಲ್ಲ, ಡೈರೆಕ್ಷನ್ ಇಲ್ಲ, ಆದರೆ ಎಂಟರ್‌ಟೈನ್‌ಮೆಂಟ್ ಫುಲ್! ಜೀವನದಲ್ಲಿ ಈ ಎರಡೂ ಅನುಭವಗಳು ಅಗತ್ಯ. ಒಂದು ಮನಸಿಗೆ ಶಾಂತಿ ನೀಡಿದರೆ, ಇನ್ನೊಂದು ಜೀವನಕ್ಕೆ ಉತ್ಸಾಹ ಮತ್ತು ನಗುವನ್ನು ತುಂಬುತ್ತದೆ.
ನಾವು ಐದು ಜನ ಸ್ನೇಹಿತರು ಅಂಥದ್ದೊಂದು ಥೈಲ್ಯಾಂಡ್ ಪ್ರವಾಸವನ್ನು ಇತ್ತೀಚೆಗಷ್ಟೇ ಮುಗಿಸಿ ಬಂದೆವು. ಅದನ್ನು ಮುಂದಿನ ವಾರದಿಂದ ಬರೆಯುವೆ, ಆಸಕ್ತಿ ಇದ್ದರೆ ಓದಿ.