• ಎನ್ನೆಸ್‌

ಒಬ್ಬ ಪ್ರಧಾನಿಯ ವಿದೇಶ ಪ್ರವಾಸವೆಂದರೆ ಕೇವಲ ವಿಮಾನ ಇಳಿಯುವುದು, ನಾಯಕರನ್ನು ಭೇಟಿಯಾಗುವುದು, ಒಪ್ಪಂದಗಳಿಗೆ ಸಹಿ ಹಾಕುವುದು ಅಷ್ಟೇ ಅಲ್ಲ. ಅದರಾಚೆಗೆ ಬೇರೆಯದೇ ವಿಷಯಗಳಿರುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳನ್ನು ಪ್ರವಾಸೋದ್ಯಮದ ಕಣ್ಣಿನಿಂದ ನೋಡುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.

ಸೆಪ್ಟೆಂಬರ್ 17ರಂದು ನರೇಂದ್ರ ಮೋದಿಯವರ ಜನ್ಮದಿನ. ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನ, ಆಡಳಿತ, ಆರ್ಥಿಕ ನೀತಿ, ವಿದೇಶಾಂಗ ನೀತಿ ಕುರಿತು ಸಾಕಷ್ಟು ಬರಹಗಳು ಸಿಗುತ್ತವೆ. ಆದರೆ, ಪ್ರವಾಸಿ ಪ್ರಪಂಚ ಮೋದಿಯವರನ್ನು ಪ್ರವಾಸೋದ್ಯಮ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಮಾಡುತ್ತಿದೆ.

Untitled design (50)

ಪ್ರವಾಸ ಅವರಿಗೆ ಹೊಸದಲ್ಲ. ಪ್ರಧಾನಿಯಾಗುವುದಕ್ಕೂ ಬಹಳ ಹಿಂದೆಯೇ ದೇಶದ ಉದ್ದಗಲಕ್ಕೂ ಸಂಚರಿಸಿದ ಅನುಭವ ಅವರಿಗಿತ್ತು. ಪ್ರಧಾನಮಂತ್ರಿಯ ಅಧಿಕೃತ ಜೀವನಚರಿತ್ರೆಯ ಪ್ರಕಾರ, 17ನೆಯ ವಯಸ್ಸಿನಲ್ಲಿ ಮನೆ ತೊರೆದ ಅವರು ಸುಮಾರು ಎರಡು ವರ್ಷಗಳ ಕಾಲ ಭಾರತದ ವಿವಿಧ ಭಾಗಗಳಲ್ಲಿ ಸಂಚರಿಸಿ, ಅಲ್ಲಿನ ಸಂಸ್ಕೃತಿ ಮತ್ತು ವೈವಿಧ್ಯವನ್ನು ಅರಿತುಕೊಂಡಿದ್ದರು. ಮುಂದೆ ಸಂಘಟನಾ ಕಾರ್ಯದಲ್ಲಿದ್ದ ದಶಕಗಳಲ್ಲೂ ದೇಶದ ಅನೇಕ ಭಾಗಗಳಿಗೆ ತೆರಳಿದರು. ಸ್ವತಃ ಮೋದಿ ಅವರೇ ತಮ್ಮ ಪ್ರವಾಸದ ಅನುಭವವನ್ನು ಹಲವು ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ. ಐನೂರಕ್ಕೂ ಹೆಚ್ಚು ಜಿಲ್ಲೆಗಳನ್ನು ಭೇಟಿ ಮಾಡಿರುವುದಾಗಿ ಮತ್ತು ನಾಲ್ಕುನೂರೈವತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ರಾತ್ರಿ ವಾಸ ಮಾಡಿರುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ಅವರ ಪಾಲಿಗೆ ಪ್ರವಾಸವೆಂದರೆ ಕೇವಲ ಸ್ಥಳ ಬದಲಾವಣೆ ಅಲ್ಲ; ಜನರನ್ನು ನೋಡುವುದು, ಅವರ ಬದುಕನ್ನು ಅರ್ಥಮಾಡಿಕೊಳ್ಳುವುದು ಮತ್ತು ಹೊಸದನ್ನು ಕಲಿಯುವುದು. ಅದೇ ಮನೋಭಾವ ಅವರ ವಿದೇಶ ಪ್ರವಾಸಗಳಲ್ಲೂ ಕಾಣಿಸುತ್ತದೆ.

ಪ್ರವಾಸವೋ? ರಾಜತಾಂತ್ರಿಕತೆಯೋ?

2014ರಲ್ಲಿ ಪ್ರಧಾನಮಂತ್ರಿಯಾದ ನಂತರ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳು ಭಾರತದ ವಿದೇಶಾಂಗ ನೀತಿಯ ಪ್ರಮುಖ ಭಾಗವಾದವು. ಭೂತಾನ್‌ನಿಂದ ಅಮೆರಿಕದವರೆಗೆ, ಜಪಾನ್‌ನಿಂದ ಆಸ್ಟ್ರೇಲಿಯಾದವರೆಗೆ, ಫ್ರಾನ್ಸ್‌ನಿಂದ ಕೆನಡಾದವರೆಗೆ, ಯುಎಇಯಿಂದ ಸೌದಿ ಅರೇಬಿಯಾದವರೆಗೆ, ಆಫ್ರಿಕದ ಹಲವು ದೇಶಗಳಿಂದ ಯುರೋಪಿನ ರಾಷ್ಟ್ರಗಳವರೆಗೆ ಅವರ ಪ್ರವಾಸಗಳ ವ್ಯಾಪ್ತಿ ವಿಸ್ತರಿಸಿತು.

Untitled design (51)

ವಿದೇಶಾಂಗ ಸಚಿವಾಲಯದ ಅಧಿಕೃತ ದಾಖಲೆಗಳಲ್ಲಿ 2014ರಿಂದ ಪ್ರಧಾನಮಂತ್ರಿಯವರ ವಿದೇಶ ಪ್ರವಾಸಗಳ ನೂರಾರು ದಾಖಲೆಗಳಿವೆ. 2026ರಲ್ಲಿಯೂ ಇಸ್ರೇಲ್, ಮಲೇಷಿಯಾ, ಫ್ರಾನ್ಸ್, ಸ್ಲೋವಾಕಿಯಾ, ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ, ಇಟಲಿ ಸೇರಿದಂತೆ ಹಲವು ದೇಶಗಳಿಗೆ ಅವರ ಪ್ರವಾಸಗಳು ದಾಖಲಾಗಿವೆ.

ಆದರೆ ಈ ಪ್ರವಾಸಗಳ ಫಲಿತಾಂಶವನ್ನು ಕೇವಲ ಎಷ್ಟು ದೇಶಗಳಿಗೆ ಹೋದರು ಎಂಬ ಸಂಖ್ಯೆಯಲ್ಲಿ ಅಳೆಯುವುದು ಸರಿಯಲ್ಲ.

ಒಂದು ದೇಶಕ್ಕೆ ಹೋಗುವಾಗ ಅಲ್ಲಿ ಭಾರತದ ಬಗ್ಗೆ ಯಾವ ಚಿತ್ರಣ ಮೂಡುತ್ತದೆ? ಭಾರತೀಯ ಸಂಸ್ಕೃತಿ, ಆಹಾರ, ಯೋಗ, ಆಯುರ್ವೇದ, ಆಧ್ಯಾತ್ಮಿಕತೆ, ಪ್ರವಾಸಿ ತಾಣಗಳು, ಕೈಗಾರಿಕೆ, ಹೂಡಿಕೆ ಅವಕಾಶಗಳು, ಶಿಕ್ಷಣ, ಸಿನಿಮಾ, ಕಲೆ ಮತ್ತು ಭಾರತೀಯ ವಲಸಿಗರ ಸಾಮರ್ಥ್ಯಗಳ ಬಗ್ಗೆ ಎಷ್ಟು ಗಮನ ಸೆಳೆಯುತ್ತದೆ? ಇದು ಮುಖ್ಯವಾಗುತ್ತದೆ. ಇವೆಲ್ಲವೂ ‘ಬ್ರ್ಯಾಂಡ್ ಇಂಡಿಯಾ’ ನಿರ್ಮಾಣದ ಭಾಗ.

ಪ್ರವಾಸ ಮತ್ತು ಬ್ರ್ಯಾಂಡ್ ಇಂಡಿಯಾ

ಇಂದಿನ ಪ್ರವಾಸೋದ್ಯಮದಲ್ಲಿ ಒಂದು ದೇಶದ ಜಾಹೀರಾತು ಕೇವಲ ಪ್ರವಾಸೋದ್ಯಮ ಇಲಾಖೆಯ ಜಾಹೀರಾತಿನಿಂದ ನಡೆಯುವುದಿಲ್ಲ. ಆ ದೇಶದ ಬಗ್ಗೆ ಜಗತ್ತಿನಲ್ಲಿ ಮೂಡುವ ಒಟ್ಟಾರೆ ಇಮೇಜ್ ಬಹಳ ಮುಖ್ಯ.

ಈ ಅರ್ಥದಲ್ಲಿ ಪ್ರಧಾನಿಯೊಬ್ಬರ ವಿದೇಶ ಪ್ರವಾಸವೂ ಒಂದು ರೀತಿಯ ‘ಬ್ರ್ಯಾಂಡ್ ಅಂಬಾಸಿಡರ್’ ಪಾತ್ರ ವಹಿಸುತ್ತದೆ. ವಿದೇಶಿ ನೆಲದಲ್ಲಿ ಮೋದಿ ಭಾರತೀಯ ಉಡುಗೆ ತೊಟ್ಟು ಕಾಣಿಸಿಕೊಂಡಾಗ, ಭಾರತೀಯ ಸಂಸ್ಕೃತಿಯ ಕುರಿತು ಮಾತನಾಡಿದಾಗ, ಯೋಗದ ಕುರಿತು ಪ್ರಸ್ತಾಪಿಸಿದಾಗ, ಭಾರತೀಯ ಆಹಾರ ಅಥವಾ ಪರಂಪರೆಯ ಬಗ್ಗೆ ಮಾತನಾಡಿದಾಗ, ಅದು ಕೇವಲ ರಾಜಕೀಯ ಭಾಷಣವಾಗುವುದಿಲ್ಲ. ಜಗತ್ತಿನ ಪ್ರೇಕ್ಷಕರ ಮುಂದೆ ಭಾರತದ ಒಂದು ಸಾಂಸ್ಕೃತಿಕ ಚಿತ್ರಣವೂ ನಿರ್ಮಾಣವಾಗುತ್ತದೆ. 2015ರಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಮೋದಿ ಜಗತ್ತಿನ ಜನರನ್ನು ಭಾರತಕ್ಕೆ ಬಂದು ಭಾರತದ ಸೌಂದರ್ಯ, ವೈವಿಧ್ಯ ಮತ್ತು ಜನರ ಆತ್ಮೀಯತೆಯನ್ನು ಅನುಭವಿಸುವಂತೆ ಆಹ್ವಾನಿಸಿದ್ದರು.

ಯೋಗ ಪ್ರವಾಸ-ಪ್ರವಾಸ ಯೋಗ

ಮೋದಿಯವರ ವಿದೇಶ ಪ್ರವಾಸಗಳ ಪ್ರವಾಸೋದ್ಯಮದಿಂದ ಆದ ಪರಿಣಾಮಗಳಲ್ಲಿ ಯೋಗ ಪ್ರಮುಖವಾದದ್ದು. 2014ರಲ್ಲಿ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಸ್ತಾಪ ಮುಂದಿಟ್ಟ ನಂತರ, ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಆಯಾಮ ದೊರೆಯಿತು. ಇಂದು ಜಗತ್ತಿನ ಹಲವು ನಗರಗಳಲ್ಲಿ ಜೂನ್ 21ರಂದು ಯೋಗ ಕಾರ್ಯಕ್ರಮಗಳು ನಡೆಯುತ್ತವೆ. ಇದು ಪ್ರವಾಸೋದ್ಯಮಕ್ಕೂ ಮಹತ್ವದ್ದು. ವೆಲ್‌ನೆಸ್‌, ಯೋಗ, ಆಯುರ್ವೇದ, ಸ್ಪಿರಿಚುಯಲ್‌ ಮುಂತಾದ ಮಾದರಿಯ ಪ್ರವಾಸಗಳಿಗೆ ಇದು ಮುನ್ನುಡಿ ಬರೆದದ್ದು ಮೋದಿಯೇ!

ಭಾರತಕ್ಕೆ ಯೋಗದ ಮೂಲ ನೆಲೆಯೆಂಬ ಸ್ಥಾನಮಾನವಿದೆ. ಅದನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವಲ್ಲಿ ಮೋದಿಯವರ ಅಂತಾರಾಷ್ಟ್ರೀಯ ಅಭಿಯಾನ ಪ್ರಮುಖ ಪಾತ್ರ ವಹಿಸಿದೆ. 2026ರ ಅಂತಾರಾಷ್ಟ್ರೀಯ ಯೋಗ ದಿನವೂ ವಿಶ್ವದಾದ್ಯಂತ ಆಚರಣೆಯಾಗಿ ಮುಂದುವರಿದಿದೆ.

ಭಾರತ ಎಲ್ಲಿಗೆ ಹೋಯಿತು?

ಮೋದಿಯವರ ವಿದೇಶ ಪ್ರವಾಸಗಳ ಮತ್ತೊಂದು ಪ್ರಮುಖ ಅಂಶವೆಂದರೆ ಭಾರತೀಯ ವಲಸಿಗರೊಂದಿಗೆ ಸಂಪರ್ಕ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಯುಎಇ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯ ಸಮುದಾಯದೊಂದಿಗೆ ಅವರು ನಡೆಸಿದ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳು ಜಗತ್ತಿನ ಮಾಧ್ಯಮಗಳ ಗಮನ ಸೆಳೆದಿವೆ. ಇದು ಪ್ರವಾಸೋದ್ಯಮಕ್ಕೆ ಏಕೆ ಮುಖ್ಯ? ವಿದೇಶದಲ್ಲಿರುವ ಭಾರತೀಯರೇ ತಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಭಾರತದ ಅನೌಪಚಾರಿಕ ಪ್ರವಾಸೋದ್ಯಮ ರಾಯಭಾರಿಗಳಾಗಬಹುದು. ‘ಒಮ್ಮೆ ಭಾರತಕ್ಕೆ ಹೋಗಿ ನೋಡಿ’, ‘ಕಾಶ್ಮೀರ ನೋಡಿ’, ‘ವಾರಾಣಸಿ ನೋಡಿ’, ‘ಕೇರಳಕ್ಕೆ ಹೋಗಿ’, ‘ಹಂಪಿ ನೋಡಿ’, ‘ರಾಜಸ್ಥಾನ ನೋಡಿ’, ‘ಕರ್ನಾಟಕದ ಜಲಪಾತಗಳನ್ನು ನೋಡಿ’ ಎಂಬ ಮಾತುಗಳು ಸರಕಾರದ ಜಾಹೀರಾತಿಗಿಂತಲೂ ಪರಿಣಾಮಕಾರಿಯಾಗಬಹುದು.

ಭಾರತಕ್ಕೆ ಬಂದ ಪ್ರವಾಸಿ

ಮೋದಿಯವರ ವಿದೇಶ ಪ್ರವಾಸಗಳನ್ನು ಹಿಂತಿರುಗಿ ನೋಡಿದರೆ ಒಂದು ಆಸಕ್ತಿದಾಯಕ ಸಂಗತಿ ಗೋಚರಿಸುತ್ತದೆ. ಅವರು ಜಗತ್ತನ್ನು ನೋಡಲು ಹೋಗುವುದಷ್ಟೇ ಅಲ್ಲ; ಜಗತ್ತಿಗೆ ಭಾರತವನ್ನು ತೋರಿಸಲು ಕೂಡ ಹೋಗುತ್ತಾರೆ. ಯೋಗದ ಮೂಲಕ ಭಾರತ. ಬುದ್ಧನ ಮೂಲಕ ಭಾರತ. ಗಾಂಧಿಯ ಮೂಲಕ ಭಾರತ. ವಿವೇಕಾನಂದರ ಮೂಲಕ ಭಾರತ. ಆಯುರ್ವೇದದ ಮೂಲಕ ಭಾರತ. ಬಸವಣ್ಣನ ಮೂಲಕ ಭಾರತ, ಭಾರತೀಯ ಆಹಾರದ ಮೂಲಕ ಭಾರತ. ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಮೂಲಕ ಭಾರತ. ವಿದೇಶದಲ್ಲಿರುವ ಭಾರತೀಯರ ಮೂಲಕ ಭಾರತ. ಹೀಗೆ ಭಾರತದ ಹಲವು ಮುಖಗಳು ಈ ಪ್ರವಾಸಗಳ ಸಂದರ್ಭದಲ್ಲಿ ಜಾಗತಿಕ ವೇದಿಕೆಗೆ ಬರುತ್ತವೆ. ಇದನ್ನೇ ಒಂದು ರೀತಿಯಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮದ ರಾಜತಾಂತ್ರಿಕತೆ ಎಂದು ಕರೆಯಬಹುದು.

ಪ್ರವಾಸೋದ್ಯಮಕ್ಕೆ ಲಾಭವೇನು?

Untitled design (52)

ಒಬ್ಬ ಪ್ರಧಾನಿಯ ಪ್ರವಾಸದಿಂದ ಪ್ರವಾಸೋದ್ಯಮಕ್ಕೆ ಏನು ಲಾಭ ಎಂದು ಕೇಳಬಹುದು. ಉತ್ತರ ಅಂಕಿಗಳಲ್ಲಿ ಇದೆ.

ಮೋದಿಯವರ ವಿದೇಶ ಪ್ರವಾಸಗಳು ನೇರವಾಗಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಿವೆ ಎಂದು ಹೇಳುವುದು ಅತಿರೇಕವಾಗಬಹುದು. ಪ್ರವಾಸಿಗರ ಆಗಮನಕ್ಕೆ ವಿಮಾನ ಸಂಪರ್ಕ, ವೀಸಾ ನೀತಿ, ಮೂಲಸೌಕರ್ಯ, ಸುರಕ್ಷತೆ, ಜಾಗತಿಕ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳು ಕಾರಣವಾಗುತ್ತವೆ. ಆದರೆ ಪ್ರಧಾನಿಯವರ ಅಂತಾರಾಷ್ಟ್ರೀಯ ಸಂಪರ್ಕಗಳು, ಭಾರತವು ವಿಶ್ವಮಟ್ಟದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಅಂಶವಾಗಿವೆ.

ವಿದೇಶಿ ವಿನಿಮಯ ಗಳಿಕೆ 2014ರಲ್ಲಿ 15 ಬಿಲಿಯನ್ ಡಾಲರ್ ಇದ್ದದ್ದು 2023ರಲ್ಲಿ 28 ಬಿಲಿಯನ್ ಡಾಲರ್ ದಾಟಿದೆ. ಪ್ರವಾಸೋದ್ಯಮದಿಂದ ನೇರ-ಪರೋಕ್ಷವಾಗಿ 8 ಕೋಟಿಗೂ ಹೆಚ್ಚು ಉದ್ಯೋಗಗಳು. ಕಾಶಿಯಂಥ ಒಂದು ಕಾರಿಡಾರ್‌ನಿಂದಾಗಿ ವಾರಾಣಸಿಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷಕ್ಕೆ 1 ಕೋಟಿಯಿಂದ 13 ಕೋಟಿಗೆ ಜಿಗಿದಿದೆ. ಪ್ರವಾಸೋದ್ಯಮ ಸಚಿವಾಲಯದ 2025ರ ಮಾಹಿತಿಯ ಪ್ರಕಾರ, 2014–2024ರ ಅವಧಿಯಲ್ಲಿ ಭಾರತದಲ್ಲಿ 86.22 ಮಿಲಿಯನ್ ವಿದೇಶಿ ಪ್ರವಾಸಿಗರ ಆಗಮನ ದಾಖಲಾಗಿದೆ; ಇದೇ ಅವಧಿಯಲ್ಲಿ ವಿದೇಶಿ ಪ್ರವಾಸಿಗರಿಂದ ಬಂದ ವಿದೇಶಿ ವಿನಿಮಯ ಆದಾಯ ₹18.85 ಲಕ್ಷ ಕೋಟಿಯಷ್ಟಿತ್ತು. ದೇಶೀಯ ಪ್ರವಾಸಗಳ ಸಂಖ್ಯೆಯೂ 18,639.35 ಮಿಲಿಯನ್‌ಗೆ ಏರಿಕೆಯಾಗಿದೆ.

ಇದೆಲ್ಲದರ ಹಿಂದೆ ಇರುವುದು ಒಬ್ಬ ವ್ಯಕ್ತಿಯ ಪ್ರವಾಸಿ ದೃಷ್ಟಿಕೋನ. ಮೋದಿ ಅವರನ್ನು ವಿರೋಧಿಗಳು 'ಹೆಚ್ಚು ವಿದೇಶ ಸುತ್ತುತ್ತಾರೆ' ಎಂದು ಟೀಕಿಸುತ್ತಾರೆ. ಅದು ಅರ್ಥಹೀನ ಟೀಕೆ. ಏಕೆಂದರೆ ಇಂದು ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಅದು ಯೋಗದ ನಾಡು, ಆಧ್ಯಾತ್ಮದ ತಾಣ, ಹಾಗೂ ಸುರಕ್ಷಿತ ಮತ್ತು ಆಧುನಿಕ ಪ್ರವಾಸಿ ತಾಣ ಎಂದೂ ಕೂಡ. ಹಿಮಾಲಯದ ಗುಹೆಗಳಲ್ಲಿ ಅಲೆದಾಡಿದ ಬಾಲಕ ಇಂದು ವಿಶ್ವದ ವೇದಿಕೆಗಳಲ್ಲಿ ಭಾರತದ ಪ್ರವಾಸಿ ನಕ್ಷೆಯನ್ನು ತೆರೆದಿಟ್ಟಿದ್ದಾರೆ. ಮೋದಿ ಪ್ರವಾಸ ಬದುಕಿನ ಸಾರ್ಥಕತೆ ಅಲ್ಲವೇ ಇದು?

ಸುಮ್ಮನೆ ಸುತ್ತಿದ್ದಲ್ಲ

100 ಪ್ರವಾಸಗಳ ದಾಖಲೆ: 2014ರಲ್ಲಿ ಭೂತಾನ್‌ನಿಂದ ಆರಂಭ, 2026ಕ್ಕೆ 100ನೇ ವಿದೇಶ ಪ್ರವಾಸ ಪೂರ್ಣ 75ಕ್ಕೂ ಹೆಚ್ಚು ದೇಶಗಳ ಸಂಪರ್ಕ

ವೀಸಾ ಕ್ರಾಂತಿ: ಇ-ವೀಸಾ 43 ದೇಶಗಳಿಂದ 170 ದೇಶಗಳಿಗೆ ವಿಸ್ತರಣೆ

ವಿದೇಶಿ ಪ್ರವಾಸಿಗರ ಆಗಮನದಲ್ಲಿ ಶೇ.60+ ಏರಿಕೆ

ದೇಖೋ ಅಪ್ನಾ ದೇಶ್: ಭಾರತೀಯರು ಮೊದಲು ಭಾರತ ಸುತ್ತಿ

1.4 ಕೋಟಿ ಜನರು ಭಾಗವಹಿಸಿದ ಅಭಿಯಾನ

ವೆಡ್ ಇನ್ ಇಂಡಿಯಾ: ಮದುವೆ ಡೆಸ್ಟಿನೇಷನ್ ಆಗಿ ಭಾರತ - ರಾಜಸ್ಥಾನ, ಗೋವಾ, ಕೇರಳಕ್ಕೆ ಸಾವಿರಾರು ಕೋಟಿ ಆದಾಯ

ಸ್ವದೇಶ್ ದರ್ಶನ್ & PRASHAD: 76 ಯೋಜನೆಗಳಿಗೆ ರು. 5290 ಕೋಟಿ + 54 ಯೋಜನೆಗಳಿಗೆ ರು. 1726 ಕೋಟಿ - ರಾಮಾಯಣ, ಬೌದ್ಧ, ಕಾಶಿ, ಮಹಾಕಾಲ್ ಲೋಕ್, ಅಯೋಧ್ಯೆ ಅಭಿವೃದ್ಧಿ

ಚಲೋ ಇಂಡಿಯಾ: ಪ್ರತಿ NRI ತನ್ನ 5 ವಿದೇಶಿ ಸ್ನೇಹಿತರನ್ನು ಭಾರತಕ್ಕೆ ಕರೆತರುವ ಗ್ಲೋಬಲ್ ಡಯಾಸ್ಪೋರಾ ಅಭಿಯಾನ

ಪ್ರವಾಸೋದ್ಯಮ ಆದಾಯ 15 ಬಿಲಿಯನ್ ಡಾಲರ್ ನಿಂದ 28 ಬಿಲಿಯನ್ ಡಾಲರ್‌ಗೆ ನೆಗೆತ
ಕಾಶಿಗೆ ಬರುವ ಪ್ರವಾಸಿಗರು 1 ಕೋಟಿಯಿಂದ 13 ಕೋಟಿಗೆ ಜಿಗಿತ