ಈಗ ಯುಗಾದಿಯ ಸಂಭ್ರಮ. ನಾವು ಹೊಸ ಯುಗದ ಹಾದಿಯಲ್ಲಿದ್ದೇವೆ. ವಸಂತ ಋತುವಿನ ಈ ಶುಭ ಘಳಿಗೆ ನಮ್ಮೆಲ್ಲರಿಗೂ ಒಳಿತನ್ನು ಮಾಡಲಿ ಎಂಬ ಹಂಬಲವೂ ಇದೆ. ಕಹಿ ನೆನಪುಗಳನ್ನು ಮರೆಯುತ್ತಾ, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುತ್ತಿದ್ದೇವೆ. ʼಸುರಲೋಕದ ಸುರನದಿಯಲಿ ಮಿಂದು, ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದುʼ ಎಂದಿದ್ದಾರೆ ಮಹಾನ್‌ ದಾರ್ಶನಿಕ ಕವಿ ಮತ್ತು ರಾಷ್ಟ್ರಕವಿ ಕುವೆಂಪು. ನವ ಸಂವತ್ಸರದಲ್ಲಿ ನಾವೂ ನವೋಲ್ಲಾಸದಿಂದ ಇರೋಣ. ಈ ಹಬ್ಬದಲ್ಲಿ ಮನುಷ್ಯನಾದವನು ಪ್ರಕೃತಿಯೊಂದಿಗೆ ಹೆಚ್ಚು ಬೆರೆಯಬೇಕು. ಪ್ರಕೃತಿ ನೀಡುವ ಚಿಕಿತ್ಸೆಯನ್ನು ಯಾವ ವಿಶ್ವ ವಿಖ್ಯಾತ ವೈದ್ಯನೂ ನೀಡಲಾರ. ವಸಂತವೇ ಸಂತಸ. ಇನ್ನು ವಸಂತವನ್ನೇ ಸಂಭ್ರಮಿಸುವ ಹಬ್ಬ ಯುಗಾದಿ. ಅದರಲ್ಲೂ ಮಾವಿನ ಹಣ್ಣಿನಂಥ ಸಿಹಿ ಮನಸಿನ ಕನ್ನಡಿಗರು ಸಂವತ್ಸರವಿಡೀ ಬೇವೋ ಬೆಲ್ಲವೋ ಎಲ್ಲಕ್ಕೂ ಸೈ ಎನ್ನುತ್ತಾ, ʼಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆʼ ಎಂದು ಗುನುಗಿಕೊಂಡು, ಬೆಳ್ಳಂಬೆಳಗ್ಗೆ ಮೈಗೆ ಹರಳೆಣ್ಣೆ ತಿಕ್ಕಿ ಅಭ್ಯಂಜನದಲ್ಲಿ ಮಿಂದು, ದೇವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ, ಸಂತೋಷದಿಂದ ಷಡ್ರಸೋಪೇತ ಭೂರಿ ಭೋಜನ, ಅದರಲ್ಲೂ ಹೋಳಿಗೆಯನ್ನು ಸವಿಸವಿದು, ಮಧ್ಯಾಹ್ನದ ಬಿಸಿಲಲ್ಲಿ ಹೊಂಗೆ ಮರವನ್ನು ಬಾಯಿತುಂಬಾ ಹೊಗಳಿ, ವಸಂತ ಕುಸುಮಗಳಿಂದ ಮಾಲೆಗಳನ್ನು ಕಟ್ಟಿ ಅಕ್ತಂಗೀರಿಗೂ ಅತ್ಗೆ-ನಾದ್ನೀರ್ಗೂ ಕೊಟ್ಟು, ʼವರ್ಷವಿಡೀ ನಗುವೇ ಇರಲಿ; ಅಳಲು ಬಂದರೆ ಬರಲಿ ನಿಮಗೆ ನಾವಿದ್ದೇವೆʼ ಎನ್ನುವುದೇ ಅಲ್ಲವೇ ಯುಗಾದಿ! ಕರುನಾಡಲ್ಲಿ ಪಂಚಾಂಗಗಳ ಪಟ್ಟಿಯೇ ಇದೆ. ಅದನ್ನು ಓದುವುದಂತೂ ಇನ್ನೂ ಖುಷಿಯ ವಿಚಾರ. ಮಳೆ-ಬೆಳೆ, ಯಾವ ರಾಶಿಗೆ ಆಯ-ವ್ಯಯ, ಇನ್ನಿತರ ವಿಷಯಗಳನ್ನು ಕೇಳಿ ಆಹ್ಲಾದಿಸುವುದೂ ಯುಗಾದಿಯ ಒಂದು ಅಂಗವೇ.

ಇದನ್ನೂ ಓದಿ: ಸ್ವಿಟ್ಜರ್‌ಲ್ಯಾಂಡ್‌ ಮತ್ತು ಚಾಕೊಲೆಟ್‌ ಎಂಬ ಪ್ರವಾಸಿಮಿತ್ರ!

ಕನ್ನಡದ ಯುಗಾದಿಯ ಸಣ್ಣದೊಂದು ಚಿತ್ರ ಇದಾಯಿತು. ಜನರೆಲ್ಲರೂ ಥರಾವರಿ ಆಚರಣೆ ಮಾಡುವ ಜನವರಿ ಒಂದು ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ನವ ವರುಷ. ಜಗತ್ತಿನ ಬಹುಪಾಲು ಮಂದಿ ಕ್ಯಾಲೆಂಡರ್ ಬದಲಾದ ದಿನವೇ ಹೊಸ ವರ್ಷವೆಂದು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಆದರೆ ಜಗತ್ತಿನಾದ್ಯಂತ ಇರುವ ನೂರಾರು ಸಂಸ್ಕೃತಿಗಳಲ್ಲಿ ಹೊಸವರುಷದ ಸಂಭ್ರಮ ಹೇಗಿರುತ್ತದೆ ಗೊತ್ತಾ? ಕೆಲವರಿಗೆ ವಸಂತಕಾಲದಲ್ಲಿ ಹೊಸ ವರ್ಷ ಬಂದರೆ, ಇನ್ನೆಲ್ಲೋ ಬೇಸಗೆಯಲ್ಲಿ, ಮತ್ತಿನ್ನೆಲ್ಲೋ ಚಳಿಗಾಲದಲ್ಲಿ ಹೊಸ ವರ್ಷ ಕಾಲಿಡುತ್ತದೆ. ಅಷ್ಟೇ ಯಾಕೆ, ಇಡೀ ದ್ವೀಪವೇ ಮೌನಕ್ಕೆ ಜಾರಿ, ಚೀಕಾರು-ಗದ್ದಲವಿಲ್ಲದೆ ಹೊಸ ವರ್ಷವನ್ನು ಸ್ವಾಗತಿಸುವವರೂ ಇದ್ದಾರೆ! ಮನುಕುಲವು ಹಳೆಯದನ್ನು ಕಳೆದು ಹೊಸದನ್ನು ಅಪ್ಪಿಕೊಳ್ಳುವ ಈ ವೈವಿಧ್ಯಮಯ ರೀತಿಯೇ ಒಂದು ಅದ್ಭುತ ಕಾವ್ಯವಿದ್ದಂತೆ. ಒಂದಷ್ಟನ್ನು ತಿಳಿದು ಆಶ್ಚರ್ಯ ಪಡುವಷ್ಟರಲ್ಲೇ ಮುಂದಿನ ಯುಗಾದಿ ಬಂದು ಬಿಡುತ್ತದೆ! ಬನ್ನಿ, ಜಗತ್ತಿನ ಇತರ ಮೂಲೆಗಳಲ್ಲಿ ಹೊಸ ವರ್ಷದ ರಂಗು ಹೇಗಿರುತ್ತದೆ ಎಂದು ಒಮ್ಮೆ ಇಣುಕಿ ನೋಡೋಣ.

Untitled design (27)

ಏಷ್ಯಾ: ಹತ್ತು ಹಲವು ಹೊಸ ವರ್ಷಗಳ ಬೀಡು

ಚೀನಿಯರ ಹೊಸ ವರ್ಷ ಅಥವಾ 'ಸ್ಪ್ರಿಂಗ್ ಫೆಸ್ಟಿವಲ್' (ವಸಂತೋತ್ಸವ) ಚಾಂದ್ರಮಾನ ಕ್ಯಾಲೆಂಡರ್ ಮೇಲೆ ನಿಂತಿದೆ. ಇದು ಸಾಮಾನ್ಯವಾಗಿ ಜನವರಿ 21 ರಿಂದ ಫೆಬ್ರವರಿ 20ರ ನಡುವೆ ಬರುತ್ತದೆ. ಇವರಲ್ಲಿ ಪ್ರತಿ ವರ್ಷಕ್ಕೂ ಒಂದೊಂದು ಪ್ರಾಣಿಯ ಹೆಸರಿದೆ! ಒಟ್ಟು 12 ಪ್ರಾಣಿಗಳ ಚಕ್ರ ಇವರದು. ಈ ಹಬ್ಬದ ಸಮಯದಲ್ಲಿ ದೂರದೂರಲ್ಲಿರುವವರೆಲ್ಲರೂ ತಮ್ಮ ಊರುಗಳಿಗೆ, ಮನೆಗಳಿಗೆ ಮರಳುತ್ತಾರೆ. ಈ ವಲಸೆ ಎಷ್ಟಿರುತ್ತದೆಯೆಂದರೆ, ಜಗತ್ತಿನ ಅತಿ ಬೃಹತ್‌ ಮಾನವ ವಲಸೆ ಇದೇ ಎನ್ನಬಹುದು. ಹಬ್ಬದಲ್ಲಿ ಕೆಂಪು ಬಣ್ಣದ್ದೇ ಕಾರುಬಾರು; ಏಕೆಂದರೆ ಕೆಂಪು ಎಂಬುದು ರಕ್ಷಣೆ, ಸಂತೋಷಗಳ ಸಂಕೇತ. ದುಷ್ಟ ಶಕ್ತಿಗಳನ್ನು ಓಡಿಸಲು ಧಾರಾಳವಾಗಿ ಪಟಾಕಿ ಸಿಡಿಸುತ್ತಾರೆ. ನಮ್ಮಲ್ಲಿ ಹಬ್ಬಕ್ಕೆ ಹಿರಿಯರು ಕಿರಿಯರ ಕೈಗೆ ದುಡ್ಡು ಇಡುತ್ತಾರಲ್ಲ, ಹಾಗೆಯೇ ಇವರು 'ಹಾಂಗ್ ಬಾವೋ' ಎಂಬ ಕೆಂಪು ಲಕೋಟೆಯಲ್ಲಿ ಹಣವಿಟ್ಟು ಪ್ರೀತಿಯಿಂದ ಉಡುಗೊರೆ ನೀಡುತ್ತಾರೆ.

ಇನ್ನು ನಮ್ಮ ಭಾರತದ ಕಥೆ ಕೇಳಿ; ನಮ್ಮದು ವೈವಿಧ್ಯತೆಯ ನೆಲೆಬೀಡು. ನಾವು ಒಂದೇ ಹೊಸ ವರ್ಷಕ್ಕೆ ಬದ್ಧರಾದವರಲ್ಲ. ಒಂದೊಂದು ರಾಜ್ಯಕ್ಕೂ ತನ್ನದೇ ಆದ ಹೊಸ ವರ್ಷದ ಸಂಭ್ರಮವಿದೆ. ಮಹಾರಾಷ್ಟ್ರದಲ್ಲಿ ವಸಂತಕಾಲದಲ್ಲಿ 'ಗುಡಿಪಾಡ್ವಾ' ಆಚರಿಸಿದರೆ, ಅದೇ ದಿನ ಸಿಂಧಿ ಸಮುದಾಯದವರು 'ಚೇಟಿ ಚಾಂದ್' ಆಚರಿಸುತ್ತಾರೆ. ಗುಡಿಪಾಡ್ವಾದಂದು ಮನೆಯ ಮುಂದೆ ಬಿದಿರಿನ ಕೋಲಿಗೆ ರೇಷ್ಮೆ ಬಟ್ಟೆ, ಬೇವಿನ ಎಲೆ, ಮಾವಿನ ತೋರಣ, ಸಕ್ಕರೆಯ ಅಚ್ಚಿನ ಹಾರ ಹಾಕಿ, ತಲೆಕೆಳಗಾದ ತಾಮ್ರ ಅಥವಾ ಬೆಳ್ಳಿಯ ಚೊಂಬನ್ನಿಟ್ಟು ಪೂಜಿಸುತ್ತಾರೆ. ಇದು ದುಷ್ಟಶಕ್ತಿಗಳನ್ನು ದೂರವಿಟ್ಟು ಸಮೃದ್ಧಿ ತರುವ ವಿಜಯದ ಸಂಕೇತ.

ಸಿಖ್ ಮತ್ತು ಪಂಜಾಬಿ ಹಿಂದೂಗಳಿಗೆ 'ಬೈಸಾಖಿ'ಯೇ ಹೊಸ ವರ್ಷ. ಗೋಧಿ ಬೆಳೆ ಕೈಸೇರುವ ಸುಗ್ಗಿಯ ಸಂಭ್ರಮದ ಜತೆಗೆ, 1699ರಲ್ಲಿ ಗುರು ಗೋವಿಂದ ಸಿಂಗ್ ಅವರು 'ಖಾಲ್ಸಾ ಪಂಥ'ವನ್ನು ಸ್ಥಾಪಿಸಿದ ಐತಿಹಾಸಿಕ ದಿನವೂ ಹೌದು. ಇನ್ನು ಬಂಗಾಳದ 'ಪೊಹೆಲಾ ಬೈಶಾಖ್' ಕಥೆಯೇ ಬೇರೆ. ಮೊಘಲ್ ದೊರೆ ಅಕ್ಬರ್ ಕಂದಾಯ ವಸೂಲಿಗಾಗಿ ಚಾಂದ್ರಮಾನ ಮತ್ತು ಸೌರಮಾನ ಕ್ಯಾಲೆಂಡರ್ ಗಳನ್ನು ಒಗ್ಗೂಡಿಸಿದ ಪರಿಣಾಮವಾಗಿ ಈ ಹಬ್ಬ ಹುಟ್ಟಿಕೊಂಡಿತು ಎನ್ನುತ್ತಾರೆ. ಅಂದು ವ್ಯಾಪಾರಿಗಳು ಲಕ್ಷ್ಮಿ ಪೂಜೆ ಮಾಡಿ 'ಹಾಲ್ ಖಾತಾ' (ಹೊಸ ಲೆಕ್ಕದ ಪುಸ್ತಕ) ತೆರೆಯುತ್ತಾರೆ. ಬಂಗಾಳದ ಬೀದಿ ಬೀದಿಗಳಲ್ಲಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳದ್ದೇ ದರ್ಬಾರು. ಪ್ರತಿಯೊಂದು ಬಂಗಾಳಿ ಕುಟುಂಬವೂ ಅಂದು ಹೊಸ 'ಪಂಜಿಕಾ' (ಪಂಚಾಂಗ) ಖರೀದಿಸುವುದು ಕಡ್ಡಾಯ. ಇತ್ತ ದಕ್ಷಿಣದ ತಮಿಳುನಾಡಿನಲ್ಲಿ ಏಪ್ರಿಲ್ 14ರಂದು 'ಪುತಾಂಡು' ಸಂಭ್ರಮ. ಅಂದು ಬೆಳ್ಳಂಬೆಳಗ್ಗೆ ಎದ್ದು 'ಕನ್ನಿ' ಎಂಬ ತಟ್ಟೆಯಲ್ಲಿ ಜೋಡಿಸಿಟ್ಟ ಹಣ್ಣು, ಕನ್ನಡಿ, ಚಿನ್ನ ಮತ್ತು ಪವಿತ್ರ ಗ್ರಂಥಗಳನ್ನು ನೋಡುವುದರಿಂದ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.

ಥಾಯ್ಲೆಂಡ್ ದೇಶದಲ್ಲಿ ವರ್ಷಕ್ಕೆ ಮೂರು ಹೊಸ ವರ್ಷಗಳಂತೆ! ಆದರೆ ಏಪ್ರಿಲ್ 13 ರಿಂದ 15ರವರೆಗೆ ನಡೆಯುವ 'ಸಾಂಗ್ ಕ್ರಾನ್' ಹಬ್ಬ ಇಡೀ ಪ್ರಪಂಚದ ಗಮನ ಸೆಳೆಯುತ್ತದೆ. ಕಳೆದ ವರ್ಷದ ದುರದೃಷ್ಟವನ್ನು ತೊಳೆದುಹಾಕುವ ಈ ಹಬ್ಬದಲ್ಲಿ, ಕಿರಿಯರು ಹಿರಿಯರ ಕೈ-ಕಾಲುಗಳಿಗೆ ನೀರು ಹಾಕಿ ಆಶೀರ್ವಾದ ಪಡೆಯುತ್ತಾರೆ. ಆದರೆ ಬೀದಿಗಿಳಿದರೆ ಇದೊಂದು ಬೃಹತ್ 'ನೀರಾಟ'ವಾಗಿ ಬದಲಾಗುತ್ತದೆ. ಪ್ರವಾಸಿಗರು, ಸ್ಥಳೀಯರು ಎಂಬ ಭೇದವಿಲ್ಲದೆ ಎಲ್ಲರೂ ವಾಟರ್ ಗನ್ ಹಿಡಿದು ಒಬ್ಬರಿಗೊಬ್ಬರು ನೀರು ಎರಚಿಕೊಂಡು ನಮ್ಮ ಹೋಳಿಯಂತೆ ಸಂಭ್ರಮಿಸುತ್ತಾರೆ. ನೇಪಾಳದಲ್ಲಿ ಬಿಕ್ರಮ್ ಸಂವತ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 13ರಂದು ಹೊಸ ವರ್ಷ. ಅಂದು ಭಕ್ತಪುರದಲ್ಲಿ ನಡೆಯುವ ಬಣ್ಣ ಬಣ್ಣದ ರಥೋತ್ಸವ ಕಣ್ಣಿಗೆ ಹಬ್ಬ. ಶ್ರೀಲಂಕಾದಲ್ಲಿ ಸಿಂಹಳೀಯರು ಮತ್ತು ತಮಿಳರು ಸೂರ್ಯನ ಚಲನೆಯನ್ನು ಆಧರಿಸಿ ಏಪ್ರಿಲ್ ನಲ್ಲಿ ಜತೆಯಾಗಿಯೇ ಹೊಸ ವರ್ಷ ಆಚರಿಸುವುದು, ಜನಾಂಗೀಯ ಭೇದ, ದ್ವೇಷ, ಯುದ್ಧಗಳನ್ನು ಮರೆತು ಎಳೆಬಿಸಿಲಿನ ಅಡಿಯಲ್ಲಿ ಒಂದಾಗುವುದೇ ಅಪರೂಪದ ಹಬ್ಬ ಅಲ್ಲವೇ?!

ಪ್ರಪಂಚದ ಅತಿ ಹಳೆಯ ಹೊಸ ವರ್ಷ

ಪರ್ಷಿಯನ್ ಭಾಷೆಯಲ್ಲಿ 'ನೌರುಜ್' ಅಂದರೆ ‘ಹೊಸ ದಿನ’ ಎಂದರ್ಥ. ಜಗತ್ತಿನ ಅತಿ ಪ್ರಾಚೀನ ಧರ್ಮಗಳಲ್ಲಿ ಒಂದಾದ ಝೋರಾಸ್ಟ್ರಿಯನ್ ಧರ್ಮದ ಬೇರುಗಳನ್ನು ಹೊಂದಿರುವ ಈ ಹಬ್ಬಕ್ಕೆ ಬರೋಬ್ಬರಿ 3,000 ವರ್ಷಗಳ ಇತಿಹಾಸವಿದೆ! ವಸಂತ ಋತುವಿನ ಆಗಮನದೊಂದಿಗೆ ಶುರುವಾಗುವ ಈ 13 ದಿನಗಳ ಹಬ್ಬವನ್ನು ಇರಾನ್, ಅಫ್ಘಾನಿಸ್ತಾನ ಸೇರಿದಂತೆ ಮಧ್ಯ ಏಷ್ಯಾದ ಸುಮಾರು 30 ಕೋಟಿ ಜನರು ಆಚರಿಸುತ್ತಾರೆ. ನಮ್ಮಲ್ಲಿ ದೀಪಾವಳಿ-ಯುಗಾದಿಗೆ ಮನೆ ಗುಡಿಸಿ ಸಾರಿಸುತ್ತೇವಲ್ಲ, ಹಾಗೆ ಇವರೂ 'ಖಾನೇ ತೆಕಾನಿ' ಎಂಬ ಹೆಸರಿನಲ್ಲಿ ಮನೆಯ ಮೂಲೆಮೂಲೆಯನ್ನೂ ಶುಚಿಗೊಳಿಸುತ್ತಾರೆ. ಪರ್ಷಿಯನ್ ಭಾಷೆಯ 'ಎಸ್' ಅಕ್ಷರದಿಂದ ಶುರುವಾಗುವ 7 ವಸ್ತುಗಳನ್ನು ಮೇಜಿನ ಮೇಲಿಟ್ಟು (ಹಸಿರು ಗೋಧಿ ಹುಲ್ಲು, ಸಿಹಿ ಪೇಸ್ಟ್, ಒಣಹಣ್ಣು, ಬೆಳ್ಳುಳ್ಳಿ, ಸೇಬು, ಸುಮಾಕ್ ಮತ್ತು ವಿನೆಗರ್) ಪೂಜಿಸುವುದು ವಿಶೇಷ. ಬೆಂಕಿಯ ಮೇಲಿಂದ ಜಿಗಿದು ಹಳೆಯದನ್ನು ಸುಟ್ಟುಹಾಕುವ ಸಂಪ್ರದಾಯವೂ ಇಲ್ಲಿದೆ. 13 ಎಂದರೆ ಅಪಶಕುನ ಎಂಬ ನಂಬಿಕೆಯಿರುವುದರಿಂದ, 13ನೆಯ ದಿನದಂದು ಎಲ್ಲರೂ ಮನೆಯಿಂದ ಹೊರಬಂದು 'ಸಿಜ್ದಾಹ್ ಬೇದಾರ್' ಹೆಸರಿನಲ್ಲಿ ಒಟ್ಟಾಗಿ ಊಟ ಮಾಡಿ ಹಬ್ಬ ಮುಗಿಸುತ್ತಾರೆ.

ಇಸ್ಲಾಮಿಕ್ ಹೊಸ ವರ್ಷ ಸಂಪೂರ್ಣವಾಗಿ ಚಂದ್ರನ ಚಲನೆಯ ಮೇಲೆ ಅವಲಂಬಿತವಾಗಿರುವುದರಿಂದ, ಇಂಗ್ಲಿಷ್ ಕ್ಯಾಲೆಂಡರಿಗಿಂತ ಪ್ರತಿ ವರ್ಷ 10-11 ದಿನಗಳಷ್ಟು ಹಿಂದೆ ಸರಿಯುತ್ತದೆ. ಇಸ್ಲಾಮಿಕ್ ಕ್ಯಾಲೆಂಡರಿನ ಮೊದಲ ತಿಂಗಳಾದ ಮೊಹರಂ ಅನ್ನು ಪ್ರಾರ್ಥನೆ, ಉಪವಾಸ ಮತ್ತು ಆತ್ಮಾವಲೋಕನದ ಸಮಯವಾಗಿ ಆಚರಿಸಲಾಗುತ್ತದೆ.

Untitled design (28)

ಆಫ್ರಿಕಾದಲ್ಲಿ ಶರತ್ಕಾಲದ ಸಂಭ್ರಮ

ಇಥಿಯೋಪಿಯಾದಲ್ಲಿ 'ಎಂಕುಟಾಟಾಶ್' (ರತ್ನಗಳ ಉಡುಗೊರೆ) ಎಂಬ ಹೊಸ ವರ್ಷದ ಆಚರಣೆಯಿದೆ. ರಾಣಿ ಶೆಬಾ ತನ್ನ ಪ್ರವಾಸ ಮುಗಿಸಿ ತಾಯ್ನಾಡಿಗೆ ಮರಳಿದ ಕಥೆಗೆ ತಳುಕುಹಾಕಿಕೊಂಡಿರುವ ಈ ಹಬ್ಬವೂ 3,000 ವರ್ಷ ಹಳೆಯದು. ಸೆಪ್ಟೆಂಬರ್ 11 ರಂದು ಬರುವ ಈ ಹಬ್ಬದಲ್ಲಿ, ದೊಡ್ಡ ದೊಡ್ಡ ಬೆಂಕಿಯ ಕ್ಯಾಂಪ್-ಫೈರ್ ಹಾಕುತ್ತಾರೆ. ಆ ಬೆಂಕಿ ಯಾವ ಕಡೆಗೆ ವಾಲುತ್ತದೆಯೋ, ಮುಂದಿನ ವರ್ಷದ ಬೆಳೆ ಅಷ್ಟು ಚೆನ್ನಾಗಿ ಬರುತ್ತದೆ ಎಂಬ ನಂಬಿಕೆ ಅವರದು!
ಇತ್ತ ಯಹೂದಿಗಳ 'ರೋಶ್ ಹಶಾನಾ' ಹಬ್ಬವು ಪವಿತ್ರ ದಿನಗಳ ಆರಂಭವಿದ್ದಂತೆ. ಮುಂದಿನ ವರ್ಷವೂ ಸಿಹಿಯಾಗಿರಲಿ ಎಂದು ಸೇಬಿನ ತುಂಡುಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನುತ್ತಾರೆ (ಆಹಾ! ಏನೆಲ್ಲಾ ರುಚಿಗಳು ಸ್ವಾಮೀ!). ಪ್ರಾರ್ಥನೆಯ ಸಮಯದಲ್ಲಿ ಕುರಿಯ ಕೊಂಬಿನಿಂದ ಮಾಡಿದ 'ಶೋಫಾರ್' ಎಂಬ ಕಹಳೆಯನ್ನು ಊದುತ್ತಾರೆ; ಆ ಪ್ರಾಚೀನ ನಾದವು ಮನುಷ್ಯನ ಅಂತರ್ಗತ ಆತ್ಮವನ್ನು ಬಡಿದೆಬ್ಬಿಸುತ್ತದೆ ಎಂಬುದು ಅವರ ನಂಬಿಕೆ.

ವಿಚಿತ್ರ ಮತ್ತು ಕುತೂಹಲಕಾರಿ ಆಚರಣೆಗಳು

ನಾವೆಲ್ಲಾ ಹೊಸ ವರ್ಷ ಬಂದರೆ ಪಟಾಕಿ ಹೊಡೆದು, ಕುಣಿದು ಕುಪ್ಪಳಿಸುತ್ತೇವೆ. ಆದರೆ ಬಾಲಿಯ 'ನ್ಯೇಪಿ' (Nyepi) ಹಬ್ಬದ ಕಥೆ ಕೇಳಿದರೆ ನೀವು ಆಶ್ಚರ್ಯದಿಂದ ಮೂಕರಾಗುವುದು ಖಂಡಿತ! ಇಲ್ಲಿ ಹೊಸ ವರ್ಷವೆಂದರೆ ಗದ್ದಲವಲ್ಲ, ಸಂಪೂರ್ಣ ಮೌನ. ದುಷ್ಟಶಕ್ತಿಗಳು ಈ ದ್ವೀಪದಲ್ಲಿ ಯಾರೂ ಇಲ್ಲ ಎಂದು ಭ್ರಮಿಸಿ ಓಡಿಹೋಗಲಿ ಎಂಬುದು ಇದರ ಉದ್ದೇಶ, ಇಡೀ ದ್ವೀಪವೇ ಸ್ತಬ್ಧವಾಗುತ್ತದೆ. ವಿಮಾನಗಳ ಹಾರಾಟವಿಲ್ಲ, ರಸ್ತೆಗಳು ಬಂದ್, ಅಂಗಡಿ ಮುಂಗಟ್ಟುಗಳು ಕ್ಲೋಸ್. ಎಲ್ಲರೂ ಮನೆಯೊಳಗೇ ಇರಬೇಕು. ಕೆಲವು ಕಡೆ ಇಂಟರ್ನೆಟ್, ಮೊಬೈಲ್ ನೆಟ್ವರ್ಕ್ ಕೂಡ ಕಟ್ ಮಾಡುತ್ತಾರೆ! 'ಪೆಕಾಲಾಂಗ್' ಎಂಬ ಗಾರ್ಡ್ಸ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುತ್ತಾರೆ. ಆದರೆ ಈ ಮೌನಕ್ಕೆ ಹಿಂದಿನ ದಿನ ಮಾತ್ರ ಬಲು ಭರ್ಜರಿ; 'ಓಗೋ-ಓಗೋ' ಎಂಬ ಬೃಹತ್ ರಾಕ್ಷಸರ ಬೊಂಬೆಗಳನ್ನು ಮಾಡಿ, ವಾದ್ಯ-ಸಂಗೀತದೊಂದಿಗೆ ಮೆರವಣಿಗೆ ಮಾಡಿ ಸುಡುತ್ತಾರೆ. ಇಡೀ ಭೂಮಂಡಲದಲ್ಲಿ ನಿಶ್ಯಬ್ದವಾಗಿ ಹೊಸ ವರ್ಷ ಆಚರಿಸುವ ಏಕೈಕ ಜಾಗವೆಂದರೆ ಬಹುಶಃ ಇದೇ ಇರಬೇಕು!

ಸ್ಕಾಟ್ಲೆಂಡಿನ 'ಹೋಗ್ಮನೆ' ಹಬ್ಬ 8ನೆಯ ಶತಮಾನದ ವೈಕಿಂಗ್ಸ್ ಕಾಲದ್ದಂತೆ. ಮಧ್ಯರಾತ್ರಿ 12 ಗಂಟೆಯ ನಂತರ ಮನೆಗೆ ಮೊದಲು ಯಾರು ಕಾಲಿಡುತ್ತಾರೋ ಅವರು ಅದೃಷ್ಟ ತರುತ್ತಾರೆ ಎಂಬ ನಂಬಿಕೆ. ಅದರಲ್ಲೂ ಕಪ್ಪು ಕೂದಲಿನ ವ್ಯಕ್ತಿ ಕಲ್ಲಿದ್ದಲು, ಶಾರ್ಟ್ ಬ್ರೆಡ್, ಉಪ್ಪು ಮತ್ತು ವಿಸ್ಕಿಯನ್ನು ಹಿಡಿದುಕೊಂಡು ಬಂದರೆ, ಆ ವರ್ಷ ಬೊಂಬಾಟ್ ಎಂದು ಅರ್ಥ!

ಡೆನ್ಮಾರ್ಕ್ ದೇಶದ ಜನರ ಪದ್ಧತಿಯೇ ವಿಚಿತ್ರ. ರಾತ್ರಿ 12 ಗಂಟೆಯಾಗುತ್ತಿದ್ದಂತೆ, ಕುರ್ಚಿಗಳ ಮೇಲೆ ನಿಂತುಕೊಂಡು ಒಂದೇ ಸಮನೆ ಕೆಳಗೆ ಜಿಗಿಯುತ್ತಾರೆ! ಹಳೆಯದನ್ನು ಬಿಟ್ಟು ಹೊಸ ವರ್ಷಕ್ಕೆ ಶುದ್ಧವಾಗಿ ಜಿಗಿಯುತ್ತಿದ್ದೇವೆ ಎಂಬುದು ಅವರ ನಂಬಿಕೆ. ನಮ್ಮಲ್ಲಿ ಯಾರಾದರೂ ಸ್ನೇಹಿತರ ಮನೆ ಬಾಗಿಲಿಗೆ ಪ್ಲೇಟ್ ಎಸೆದು ಒಡೆದರೆ ಒದೆ ಬೀಳೋದು ಗ್ಯಾರಂಟಿ. ಆದರೆ ಡೆನ್ಮಾರ್ಕಿನಲ್ಲಿ ಹಬ್ಬದ ದಿನ ಸ್ನೇಹಿತರ ಮನೆ ಬಾಗಿಲಿಗೆ ಹೋಗಿ ಪಿಂಗಾಣಿ ಪ್ಲೇಟ್ ಒಡೆಯುತ್ತಾರೆ. ಬಾಗಿಲ ಮುಂದೆ ಎಷ್ಟು ಹೆಚ್ಚು ಒಡೆದ ಪ್ಲೇಟುಗಳಿರುತ್ತವೆಯೋ, ಆ ಮನೆಗೆ ಅಷ್ಟು ಹೆಚ್ಚು ಪ್ರೀತಿ, ಅದೃಷ್ಟ ಒಲಿದಿದೆ ಎಂದು ಅರ್ಥವಂತೆ! ಅಬ್ಬಬ್ಬಾ!

ಬ್ರೆಜಿಲ್ ನಲ್ಲಿ ಜನರೆಲ್ಲರೂ ಬಿಳಿ ಬಟ್ಟೆ ತೊಟ್ಟು ಸಮುದ್ರ ತೀರಕ್ಕೆ ಹೋಗಿ 'ಯೆಮಾಂಜಾ' ಎಂಬ ಸಮುದ್ರ ದೇವತೆಗೆ ಪೂಜೆ ಸಲ್ಲಿಸುತ್ತಾರೆ. ಸತತವಾಗಿ ಏಳು ಅಲೆಗಳ ಮೇಲೆ ಜಿಗಿಯುತ್ತಾ ಕಳೆದ ವರ್ಷಕ್ಕೆ ಕೃತಜ್ಞತೆ ಹೇಳುತ್ತಾರೆ. ವಾಪಸ್ ಬರುವಾಗ, ಸಮುದ್ರಕ್ಕೆ ಬೆನ್ನು ಹಾಕದೆ ಹಿಂದಕ್ಕೆ ಹೆಜ್ಜೆ ಹಾಕುತ್ತಾ ನೀರಿಂದ ಹೊರಬರಬೇಕು! ಈಕ್ವೆಡಾರ್ ದೇಶದಲ್ಲಿ 'ಆನ್ಯೋಸ್ ವಿಯೆಜೋಸ್' ಎಂಬ ಹೆಸರಿನಲ್ಲಿ ಹಳೆಯ ಬಟ್ಟೆ, ಪಟಾಕಿಗಳನ್ನು ತುಂಬಿದ ಬೊಂಬೆಗಳನ್ನು (ಸಾಮಾನ್ಯವಾಗಿ ರಾಜಕಾರಣಿಗಳ ಅಥವಾ ನಟರ ಮುಖವಾಡ ಹಾಕಿ) ಮಾಡಿ, ಮಧ್ಯರಾತ್ರಿ ಸುಟ್ಟು ಹಳೆಯದನ್ನು ಕಳೆದುಕೊಳ್ಳುತ್ತಾರೆ.

Untitled design (26)

ಜರ್ಮನಿಯಲ್ಲಿ ಒಂದು ಮಜವಾದ ಸಂಪ್ರದಾಯವಿದೆ. ಅಲ್ಲಿ ಪ್ರತಿ ಹೊಸ ವರ್ಷದ ಹಿಂದಿನ ರಾತ್ರಿ 1972ರ 'ಡಿನ್ನರ್ ಫಾರ್ ಒನ್' ಎಂಬ 18 ನಿಮಿಷದ ಬ್ರಿಟಿಷ್ ಕಾಮಿಡಿ ವಿಡಿಯೋ ನೋಡುವುದು ಕಡ್ಡಾಯವಂತೆ! ಜರ್ಮನಿಯಾಚೆ ಯಾರಿಗೂ ಗೊತ್ತಿಲ್ಲದ ಈ ವಿಡಿಯೋದಲ್ಲಿ, ಒಂಟಿ ಮುದುಕಿಯೊಬ್ಬಳ ಊಟದ ಟೇಬಲ್ ಬಳಿ, ಸತ್ತು ಹೋದ ಅತಿಥಿಗಳೆಲ್ಲರ ಧ್ವನಿಯನ್ನೂ ಅವಳ ಆಳೇ (ಬಟ್ಲರ್) ಅನುಕರಿಸಿ ನಗಿಸುವ ದೃಶ್ಯವಿದೆ. ಕೊಲಂಬಿಯಾ ಮುಂತಾದ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ, ರಾತ್ರಿ 12 ಗಂಟೆಗೆ ಜನ ಖಾಲಿ ಸೂಟ್ ಕೇಸ್ ಹಿಡಿದುಕೊಂಡು ಓಣಿಯೆಲ್ಲಾ ಓಡುತ್ತಾರಂತೆ! ಹೀಗೆ ಮಾಡಿದರೆ ಬರುವ ವರ್ಷ ತುಂಬಾ ಪ್ರವಾಸ ಮಾಡುವ ಅವಕಾಶ ಸಿಗುತ್ತದೆ ಎಂಬ ನಂಬಿಕೆ. (ನೋಡಿ ಪ್ರವಾಸಿ ಪ್ರಪಂಚದ ಓದುಗರೇ…ಟ್ರೈ ಮಾಡ್ತೀರಾ? ಜತೆಗೊಂದು ಪ್ರಪ್ರ ಪ್ರತಿ ಇಟ್ಕೊಳಿ….)

ಇನ್ನು ಫಿಲಿಪೈನ್ಸ್ ದೇಶದ ಕಡೆ ಹೋದರೆ, ಎಲ್ಲಿ ನೋಡಿದರೂ ಗುಂಡು ಗುಂಡು! (ಒಳಗೆ ಸೇರಿ ಏರುವ ಗುಂಡು ಅಲ್ಲ!) ಗುಂಡಗಿನ ಆಕಾರವೆಂದರೆ ನಾಣ್ಯ, ಅಂದರೆ ಸಮೃದ್ಧಿ. ಹಾಗಾಗಿ ಬಟ್ಟೆಯ ಮೇಲಿನ ಪ್ರಿಂಟ್, ತಿನ್ನುವ ಊಟ, ಜೋಡಿಸಿಡುವ 12 ಹಣ್ಣುಗಳು ಎಲ್ಲವೂ ದುಂಡಗೇ ಇರಬೇಕು! ಜೇಬು ತುಂಬಾ ನಾಣ್ಯ ತುಂಬಿಕೊಂಡು ಓಡಾಡುತ್ತಾರಂತೆ.

ಒಂದೇ ಜಗತ್ತು-ಹತ್ತು ಹಲವು ಆರಂಭಗಳು

ಹೀಗೆ ಜಗತ್ತಿನ ನಾನಾ ಮೂಲೆಗಳಲ್ಲಿ ಇಣುಕಿ ನೋಡಿದರೆ ಒಂದು ಸುಂದರ ಸತ್ಯ ಅರಿವಾಗುತ್ತದೆ. ಯಾರೋ ಪರಸ್ಪರ ನೀರು ಎರಚಿಕೊಂಡು, ಮತ್ತಾರೋ ಕುರ್ಚಿಯಿಂದ ಜಿಗಿದು, ಇನ್ನಾರೋ ಖಾಲಿ ಸೂಟ್ ಕೇಸ್ ಹಿಡಿದು ಓಡಿ, ಮತ್ಯಾರೋ ಕಗ್ಗತ್ತಲಿನ ಮೌನದಲ್ಲಿ ಕೂತು, ಇಲ್ಲವೇ ನಮ್ಮಂತೆ ಹೊಸ ಪಂಚಾಂಗ ತೆರೆದು ಲೆಕ್ಕಾಚಾರ ಹಾಕಿ ಹೊಸ ವರ್ಷವನ್ನು ಸ್ವಾಗತಿಸಬಹುದು. ಆಚರಣೆಗಳು ಸಾವಿರ ಇರಬಹುದು. ಆದರೆ ಆಶಯ ಮಾತ್ರ ಒಂದೇ. ಕಳೆದುಹೋದ ನೋವುಗಳನ್ನು ಬಿಟ್ಟು, ನಮ್ಮನ್ನು ನಾವು ಶುದ್ಧೀಕರಿಸಿಕೊಂಡು ಭರವಸೆಯ ಹೊಸ ನಾಳೆಗೆ ಕಾಲಿಡುವುದು. ಹೊಸ ವರ್ಷವೆಂಬುದು ಕೇವಲ ಜನವರಿ ಒಂದನೇ ತಾರೀಖಿನ ಸ್ವತ್ತಲ್ಲ. ಇದು ಇಡೀ ಮನುಕುಲದ ಸಂಭ್ರಮ. ಹಾಗೆ ನೋಡಿದರೆ ಪ್ರಪಂಚದ ಯಾವುದೋ ಮೂಲೆಯಲ್ಲಿ, ಬಹುಪಾಲು ಪ್ರತಿ ವಾರವೂ ಒಂದಲ್ಲ ಒಂದು ಹೊಸ ವರ್ಷ ಹುಟ್ಟುತ್ತಲೇ ಇರುತ್ತದೆ! ಹಳೆಯ ಬೇರು, ಹೊಸ ಚಿಗುರು ಕೂಡಿರುವ ಮರದ ಸೊಗಸಿನಂತೆ, ಪ್ರಪಂಚದ ಈ ಎಲ್ಲ ಆಚರಣೆಗಳೂ ನವ ಉಲ್ಲಾಸದ ಪ್ರತೀಕವೇ ಸರಿ. ಪ್ರವಾಸಿಗನಿಗೆ ಪ್ರತಿ ದಿನವೂ ಒಂದೊಂದು ಆಚರಣೆ, ಪ್ರತಿ ದಿನವೂ ಹೊಸತೊಂದು ಹಬ್ಬವೇ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನಿಮ್ಮ ಪ್ರವಾಸಿ ಬದುಕಿಗೂ ಶುಭವಾಗಲಿ.