• ಶಿವನಗೌಡ ಕಿಲಬನೂರು

‘ಜಯತು ರುಕ್ಮಿಣಿ ಪಾಂಡುರಂಗ ವಿಠ್ಠಲ’. ಇಂದಿಗೂ ನಮ್ಮ ಊರುಗಳಲ್ಲಿ ಕಾರ್ತಿಕ ಹಾಗೂ ಆಷಾಢದಲ್ಲಿ ʼದಿಂಡಿʼ ಅಂತ ಒಂದು ಸಂತ ಸಮೂಹ ಅನೇಕ ಭಜನಾ ವಾದ್ಯಗಳೊಂದಿಗೆ ಬರುತ್ತಾರೆ. ತಮ್ಮ ತಮ್ಮ ಊರುಗಳನ್ನು ತೊರೆದು ತಿಂಗಳುಗಟ್ಟಲೆ ಪಾದಚಾರಿಗಳಾಗಿ ಎಲ್ಲಿಗೆ ಹೊರಡುವರು ಎಂಬುದು ನಾವು ಸಣ್ಣವರಿದ್ದಾಗ ಅಷ್ಟೇನು ತಿಳಿಯದಿದ್ದರೂ ಈಗ ತಿಳಿಯುತ್ತದೆ. ಅವರ ಭಕ್ತಿ ಭಾವದ ಪಾದಯಾತ್ರೆ ಮುಟ್ಟುವುದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರದ ಶ್ರೀ ರುಕ್ಮಿಣಿ ವಿಠ್ಠಲ ದೇವಸ್ಥಾನ.

ಚಂದ್ರಭಾಗ ಅಥವಾ ಈಗಿನ ಭೀಮಾ ನದಿಯ ತೀರದ ಮೇಲೆ ಇರುವ ಈ ದೇವಸ್ಥಾನವು ಲಕ್ಷಾಂತರ ಭಕ್ತಾಧಿಗಳನ್ನು ಕರೆಸಿಕೊಳ್ಳುವ ವಿಠೋಬಾ (ವಿಷ್ಣುವಿನ ಅವತಾರ) ಆರಾಧನೆಯ ಹಿಂದೂ ದೇವಾಲಯ. ಸಾಮಾನ್ಯವಾಗಿ ಪುಂಡಲೀಕ ದೇವಾಲಯ ಎಂದು ಕರೆಯಲಾಗುವ, ಪಿರಾಮಿಡ್ ಗನ್ ಶಿಖರ ಹೊಂದಿರುವ ಮುಖ್ಯ ದೇವಸ್ಥಾನಕ್ಕೆ ವಿಠ್ಠಲನೇ ಪ್ರಮುಖ ದೇವರು ಹಾಗೂ ಅಕ್ಕಪಕ್ಕದಲ್ಲಿ ಜಯ ಮತ್ತು ವಿಜಯರ ಪ್ರತಿಮೆಗಳಿವೆ. ಈ ಚೌಕಾಕಾರದ ದೇವಸ್ಥಾನದ ಆಕರ್ಷಣೆ ಅದರ ಮುಖ್ಯ ಮಂಟಪ. ಮುಖ್ಯ ಮಂಟಪದಲ್ಲಿ ಶಿವನ ವಿಗ್ರಹವಿದ್ದು ಹಿತ್ತಾಳೆಯ ಹೊದಿಕೆಯಿದೆ.ನೀರಿನ ನಡುವೆ ಇರುವ ಈ ಪುಂಡಲೀಕ ದೇವಸ್ಥಾನಕ್ಕೆ ತೀರದಲ್ಲಿರುವ ದೋಣಿಗಳ ಸೇತುಬಂಧವು ಆಕರ್ಷಕವಾಗಿ ಕಂಡುಬರುತ್ತವೆ.

Pandharapur

ಸಾಮಾನ್ಯವಾಗಿ ಪಾಂಡುರಂಗ ದೇವಾಲಯ ಎಂದು ಕರೆಯಲಾಗುವ ರುಕ್ಮಿಣಿ ಮಂದಿರ ನದಿ ತೀರಕ್ಕೆ ಇಳಿಜಾರಾಗಿ ನಿರ್ಮಿತವಾದ ದೇವಸ್ಥಾನ ಎತ್ತರದ ಗೋಡೆಗಳು, ಬೃಹತ್ ಕಟ್ಟಡಗಳು ಈ ದೇವಸ್ಥಾನದ ಹೆಗ್ಗುರುತುಗಳು. 12 ಮೆಟ್ಟಿಲುಗಳಿರುವ, ತಂಬೂರಿ ಹಿಡಿದಿರುವ ನಾಮದೇವರ ಪ್ರತಿಮೆ ಇರುವ ಈ ದೇವಸ್ಥಾನಕ್ಕೆ ಪ್ರವೇಶ ಕೂಡ ನಾಮದೇವರ ದ್ವಾರದಿಂದಿದೆ. ರುಕ್ಮಿಣಿ ಶ್ರೀಕೃಷ್ಣನ ಹೆಂಡತಿಯಾಗಿದ್ದರೂ ಇವರಿಬ್ಬರೂ ಒಟ್ಟಿಗೆ ಇಲ್ಲಿ ಕಾಣುವುದಿಲ್ಲ. ದಂತ ಕಥೆಗಳ ಪ್ರಕಾರ ರುಕ್ಮಿಣಿ ತಪಸ್ಸಿನಲ್ಲಿ ನಿರತಳಾಗಿರುವುದಕ್ಕೆ ಒಂಟಿಯಾಗಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಮೊದಲಿಗೆ ಸಣ್ಣ ದೇವಾಲಯ ಮತ್ತು ಮೊಗಸಾಲೆ ಮಾತ್ರವಿದ್ದು ಕಾಲಾಂತರದಲ್ಲಿ ಅಂತರಾಳ, ಮಂಟಪ ಮತ್ತು ಸಭಾಮಂಟಪಗಳನ್ನು ಸೇರಿಸಲಾಗಿದೆ ಎಂಬ ಮಾಹಿತಿಯಿದೆ. ಹದಿನಾರು ಕಲ್ಲಿನ ಕಂಬಗಳು, ಸಮತಟ್ಟಾದ ಛಾವಣಿಯಿಂದ ನಿರ್ಮಿತವಾದ ದೇವಾಲಯ, ಪ್ರತಿಯೊಂದು ಕಂಬಗಳಲ್ಲಿ ಕೃಷ್ಣ ಮತ್ತು ವಿಷ್ಣುವನ್ನು ವಿಶಿಷ್ಟ ಭಂಗಿಯಲ್ಲಿ ಚಿತ್ರಿಸಲಾಗಿದೆ. ಭಗವಂತನ ಕಮಲದ ಪಾದಗಳು ಭದ್ರವಾಗಿರುವ ಬಂಡೆಗಲ್ಲುಗಳ ಮೇಲೆ ಹಸುವಿನ ಪಾದ ಗುರುತುಗಳನ್ನು ಕೂಡ ನೋಡಬಹುದು. ಶತ ಶತಮಾನಗಳಷ್ಟು ಪುರಾತನವಾದ ಈ ದೇವಾಲಯವು 11 - 12 ನೇಯ ಶತಮಾನದ ಆಸುಪಾಸಿನಲ್ಲಿ ಹೊಯ್ಸಳ ರಾಜಮನೆತನದ ವಿಷ್ಣುವರ್ಧನನಿಂದ ನಿರ್ಮಿತಗೊಂಡು, ಸೋಮೇಶ್ವರನಿಂದ ಪ್ರಗತಿಯಾಗಿ ಕಾಲಾಂತರದಲ್ಲಿ ಪೂರ್ಣಗೊಂಡಿತು.

ವಿಶೇಷತೆ

ಚಂದ್ರಭಾಗ ನದಿ ತೀರದ ಭವ್ಯ ಪರಿಸರದಲ್ಲಿ ಈ ದೇವಾಲಯ ಹರಡಿಕೊಂಡಿದೆ. ಶಾಂತಿಯುತ ಮತ್ತು ಮನಸ್ಸು ಮುದಗೊಳಿಸುವ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿಗಳಿಸಿದೆ. ಅಲ್ಲಿ ಸುತ್ತಮುತ್ತಲಿರುವ ವಿಶಿಷ್ಟ ರೀತಿಯ ಹಳೆಯ ಮನೆಗಳು, ಗೋಪಾಲನೆ, ಅಲ್ಲಿನ ಜನ ಜೀವನ, ಆಚರಣೆಗಳು ಒಂದು ಸಲ ಪ್ರತ್ಯೇಕ ಬದುಕಿಗೆ ಕರೆದುಕೊಂಡು ಹೋಗುತ್ತವೆ. ಕಾರ್ತಿಕ ಏಕಾದಶಿ ಹಾಗೂ ಆಷಾಢ ಏಕಾದಶಿಗಳಲ್ಲಿ ಕೋಟ್ಯಂತರ ಭಕ್ತಾದಿಗಳನ್ನು ಸೆಳೆಯುವ ಅದ್ಭುತ ಸ್ಥಳವಾಗಿದೆ. ಸಾಮಾನ್ಯ ದಿನಗಳಲ್ಲೇ ಕಂಗೊಳಿಸುವ ಈ ದೇವಸ್ಥಾನ ಹಬ್ಬ ಹರಿದಿನಗಳಲ್ಲಿ ಮತ್ತಷ್ಟು ಸೊಬಗು ಹೊಂದಿರುತ್ತದೆ. ದಸರಾ, ನವರಾತ್ರಿ, ದೀಪಾವಳಿಗಳಲ್ಲಿ ಪ್ರತಿದಿನವೂ ವಿಶೇಷ ಅವತಾರಗಳಲ್ಲಿ ಮುಖ್ಯ ದೇವ ದೇವತೆಗಳನ್ನು ಅಲಂಕರಿಸಲಾಗಿರುತ್ತದೆ. ತುಳಸಿ, ಜಾಸ್ಮೀನ್ ಮತ್ತು ಕಮಲದ ಹೂಗಳು ಈ ದೇವಾಸ್ಥಾನದ ಪ್ರಮುಖ ಅಲಂಕಾರ ರಾಯಭಾರಿಗಳು. ಅಚ್ಚುಕಟ್ಟಾದ ನಿರ್ವಹಣೆ ಮತ್ತು ಪರಿಸರ ಕಾಳಜಿಯಿಂದ ಈ ದೇವಸ್ಥಾನ ಪ್ರವಾಸಿಗರಿಗೆ ಇಷ್ಟವಾಗುವಂಥದ್ದು.

vithoba rukmini

ಭಗವಂತನ ಪಾದಸ್ಪರ್ಶದ ದರ್ಶನ ಸಾಮಾನ್ಯ ದಿನಗಳಲ್ಲೇ ಮೂರು - ನಾಲ್ಕು ಗಂಟೆಯ ಕ್ಯೂ ನಂತರ ಸಿಗುವ, ಕೋಟಿ ಕೊಟ್ಟರೂ ಬಾರದ ಬದುಕಿನ ಸುಂದರ ಘಳಿಗೆ ಎನ್ನಬಹುದು. ಕೇವಲ ದೂರದಿಂದ ಮುಖದರ್ಶನ ಬಯಸುವವರು ಇಪ್ಪತ್ತು ಇಪ್ಪತ್ತೈದು ನಿಮಿಷಗಳ ಕ್ಯೂ ನಂತರ ಸ್ವಲ್ಪ ಅಂತರದಲ್ಲಿ ಮುಖದರ್ಶನ ಪಡೆಯಬಹುದು.

ವ್ಯವಸ್ಥೆ

ದೇವಸ್ಥಾನದ ಆವರಣದಲ್ಲಿ ಆಶ್ರಯ ಪಡೆದುಕೊಳ್ಳಬಹುದು. ಹಲವಾರು ಮಂಟಪಗಳು, ಸಭಾಂಗಣಗಳು ಕೂಡ ಇರುವಿಕೆಗೆ ಸೂಕ್ತವಾಗಿವೆ. ಸುತ್ತಮುತ್ತಲೂ ರೂಮ್, ಹೊಟೇಲ್, ಮುಂತಾದ ವ್ಯವಸ್ಥೆಗಳಿದ್ದು ಪ್ರವಾಸಿಗರು, ಭಕ್ತಾದಿಗಳು ನಿರಾತಂಕವಾಗಿ ಇರಬಹುದು. ಹತ್ತಿರದಲ್ಲಿ ತುಳಸಿ ಬೃಂದಾವನ, ಗಜಾನನ ಮಹಾರಾಜ ಮಠ, ಇಸ್ಕಾನ್ ಪಂಡರಿನಾಥ್, ಕೈಕಡಿ ಮಹಾರಾಜ ದೇವಸ್ಥಾನ ಮುಂತಾದ ಸ್ಥಳಗಳನ್ನು ನೋಡಬಹುದು. ವಾರದ ಎಲ್ಲ ದಿನಗಳಲ್ಲೂ ಬೆಳಗ್ಗೆ 4 ರಿಂದ ರಾತ್ರಿ 11 ವರೆಗೆ ದೇವಸ್ಥಾನ ತೆರೆದಿರುತ್ತದೆ.

ದಾರಿ ಹೇಗೆ?

ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರ ತಲುಪಿ, ವಿಜಯಪುರದಿಂದ 125 ಕಿಮೀ ದೂರವಿರುವ ಪಂಡರಾಪುರಕ್ಕೆ ಬಸ್ಸು, ಅಥವಾ ವೈಯಕ್ತಿಕ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.