• ಅಶ್ವಿನಿ ರಾಮ್ ಪಾಲ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ ಖಾಸಗಿ ಸಮಯ ಮತ್ತು ಜಾಗ ಬಯಸುವುದು ಸಾಮಾನ್ಯ. ಒಬ್ಬರನ್ನೊಬ್ಬರು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲಿ ಮತ್ತು ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂಬ ಕಾರಣಕ್ಕೆ ಇಬ್ಬರ ಮನೆಯವರೂ ಸೇರಿ ನವಜೋಡಿಯನ್ನು ಹನಿಮೂನ್ ಗೆ ಕಳುಹಿಸುತ್ತಾರೆ. ಇದು ಪ್ರೀತಿ, ಪ್ರಣಯ ಮತ್ತು ನೆನಪುಗಳನ್ನು ಸೃಷ್ಟಿಸುವ ಅವಕಾಶ. ಅನೇಕ ದಂಪತಿಗಳು ಈ ಅನುಭವವನ್ನು ಸ್ಮರಣೀಯವಾಗಿಸಲು ತಮ್ಮ ನೆಚ್ಚಿನ ತಾಣಗಳಿಗೆ ಭೇಟಿ ನೀಡುತ್ತಾರೆ. ಹನಿಮೂನ್ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಹೇಳಬೇಕಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಇದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ನವಜೋಡಿಗಳಲ್ಲಿ ಹನಿಮೂನ್ ಗಿಂತ ಹೆಚ್ಚಾಗಿ ಫ್ರೆಂಡ್‍ಮೂನ್ ಚರ್ಚೆಯಾಗುತ್ತಿದೆ. ಹೌದು ಸಾಕಷ್ಟು ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಹಾಗಾದ್ರೆ ಏನಿದು ಫ್ರೆಂಡ್‍ಮೂನ್? ಹನಿಮೂನ್ ಗಿಂತ ಹೇಗೆ ಭಿನ್ನ?

ಏನಿದು ಫ್ರೆಂಡ್‍ಮೂನ್?

ಫ್ರೆಂಡ್‍ಮೂನ್ ಎಂದರೆ ಹೆಸರೇ ಸೂಚಿಸುವಂತೆ ಹನಿಮೂನ್ ಗೆ ಫ್ರೆಂಡ್ಸ್ ಜೊತೆ ಹೋಗುವುದು. ಅಂದರೆ ನವಜೋಡಿಗಳು ಹನಿಮೂನ್ ಗೆ ಹೋಗುವಾಗ ಜೊತೆಯಲ್ಲಿ ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗುವ ಟ್ರೆಂಡ್. ಇದರ ಇನ್ನೊಂದು ಹೆಸರು ಬಡ್ಡಿ ಮೂನ್(Buddymoon). ಈ ಮೂಲಕ ನವಜೋಡಿ ಹನಿಮೂನ್‌ಗೆ ಹೋಗುವಾಗ, ಅವರ ಕ್ಲೋಸ್ ಫ್ರೆಂಡ್ ಸಹ ಜೊತೆಯಾಗುತ್ತಾರೆ. ಇದು ಮೊದಲು ತಮಾಷೆಯಾಗಿ ಕಂಡುಬಂದರೂ ಕೂಡ, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಜೋಡಿಗಳು ಈ ರೀತಿಯ ಪ್ರವಾಸ ಆಯ್ಕೆಮಾಡಿಕೊಳ್ಳುತ್ತಿದ್ದಾರೆ. 2016ರಲ್ಲಿ ಬಂದ ಇಂಗ್ಲಿಷ್ ಹಾಸ್ಯ ಚಿತ್ರವೊಂದರಿಂದಾಗಿ ಈ ಬಡ್ಡಿ ಮೂನ್ ಜನಪ್ರಿಯವಾಯಿತು ಎಂದು ಹೇಳಲಾಗುತ್ತದೆ.

honeymoon

ಫ್ರೆಂಡ್ಸ್ ಜೊತೆಗಿನ ಟೂರ್ ಮನಸ್ಸಿಗೆ ಬಲು ಹಿತ ನೀಡುವುದರ ಜೊತೆಗೆ ಈ ಪ್ರವಾಸ ಸ್ಮರಣೀಯ ಅನುಭವವನ್ನು ತರುತ್ತದೆ. ಆದ್ದರಿಂದಲೇ ಇಲ್ಲಿ ನವಜೋಡಿಯ ಜೊತೆಗೆ ಅವರ ಸ್ನೇಹಿತರು ಕೂಡ ಹನಿಮೂನ್ ಟ್ರಿಪ್‍ಗೆ ಸಾಥ್ ನೀಡುವ ಮೂಲಕ ಪ್ರವಾಸದ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸುತ್ತಾರೆ. ಇದರ ಜೊತೆಗೆ ಫ್ರೆಂಡ್‍ಮೂನ್ ನಿಂದ ಸಾಕಷ್ಟು ಲಾಭಗಳಿವೆ. ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಇದು ಸಕತ್ ಟ್ರೆಂಡಿಂಗ್ ನಲ್ಲಿದೆ.

ಫ್ರೆಂಡ್‍ಮೂನ್ ನಿಂದಾಗುವ ಪ್ರಯೋಜನಗಳೇನು?

ಹಣದ ಉಳಿತಾಯ:

ಇತ್ತೀಚಿನ ದಿನಗಳಲ್ಲಿ, ಸರಳ ಮದುವೆಗಳಿಗಿಂತ ಆಡಂಬರದ ಮದುವೆಗಳಿಗೆ ಭಾರೀ ಬೇಡಿಕೆ. ಹಾಗಾಗಿ ಸಾಲ ಮಾಡಿಯಾದರೂ ಸಾಕಷ್ಟು ಜನರು ಬಹಳಷ್ಟು ಹಣ ಖರ್ಚು ಮಾಡಿ ಮದುವೆಯಾಗುತ್ತಾರೆ. ಆದರೆ ಮದುವೆ ಬಳಿಕ ಹೊರದೇಶಗಳಿಗೆ ಹನಿಮೂನ್ ಗೆ ಹೋಗಬೇಕಾದರೆ ಮತ್ತೆ ಲಕ್ಷಾಂತರ ರೂಪಾಯಿ ಖರ್ಚಾಗುವ ತಲೆಬಿಸಿ. ಆದ್ದರಿಂದಲೇ ದುಬಾರಿ ವಿವಾಹದ ಹೊರೆಯನ್ನು ಕಡಿಮೆ ಮಾಡಲು ಸಾಕಷ್ಟು ನವಜೋಡಿ ಫ್ರೆಂಡ್‍ಮೂನ್ ಕಡೆ ವಾಲುತ್ತಿದ್ದಾರೆ. ಹೌದು ಇಬ್ಬರೇ ಪ್ರವಾಸ ಹೋಗುವುದಕ್ಕಿಂತ ಗುಂಪಾಗಿ ಪ್ರಯಾಣಿಸುವ ಮೂಲಕ, ವಸತಿ, ಸಾರಿಗೆ ಮತ್ತು ಕೆಲವು ಚಟುವಟಿಕೆಗಳ ವೆಚ್ಚವನ್ನು ವಿಭಜಿಸಬಹುದು ಅಂದರೆ ಒಟ್ಟು ಮೊತ್ತವನ್ನು ಶೇರ್ ಮಾಡಿ ಪಾವತಿಸಬಹುದು. ಇಲ್ಲಿ 7-8 ಜನ ಒಟ್ಟಿಗೆ ಪ್ರವಾಸಕ್ಕೆ ತೆರಳಿದಾಗ ದೊಡ್ಡ ವಿಲ್ಲಾ ಬುಕ್ ಮಾಡಬಹುದು. ದುಬಾರಿಯಾದರೂ ಕೂಡ ಸುಂದರವಾಗಿರುವ ಪರಿಸರದಲ್ಲೇ ತಂಗಬಹುದು. ವಿಶೇಷವಾಗಿ ನವಜೋಡಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಇದು ನವವಿವಾಹಿತರು ಸೇರಿದಂತೆ ಎಲ್ಲರಿಗೂ ಬಜೆಟ್ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

ಕಡಿಮೆ ಒತ್ತಡ:

ಮದುವೆಯ ಸಿದ್ಧತೆಗಳಿಂದಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದ ಜೋಡಿಗೆ ಮಧುಚಂದ್ರದ ಬಗ್ಗೆ ಯೋಚಿಸುವುದು ಮತ್ತೊಂದು ಹೊರೆಯಾಗಿರುತ್ತದೆ. ಆದರೆ ಫ್ರೆಂಡ್‌ಮೂನ್ ಪ್ರವಾಸವನ್ನು ಹೆಚ್ಚು ಆರಾಮದಾಯಕವಾಗಿಸುವ ಮೂಲಕ ನವಜೋಡಿಯ ಜವಾಬ್ದಾರಿಯನ್ನು ಕಡಿಮೆ ಮಾಡುತ್ತದೆ. ಸ್ನೇಹಿತರ ಸಹಾಯದೊಂದಿಗೆ ನವಜೋಡಿ ಹೊರದೇಶದಲ್ಲಿ ಯಾವುದೇ ಒತ್ತಡವಿಲ್ಲದೇ ಸುಂದರಕ್ಷಣಗಳನ್ನು ಕಳೆಯಬಹುದು. ಗೆಳೆಯರ ಜೊತೆ ಮಾತನಾಡುತ್ತಾ,ಪಾರ್ಟಿ ಮಾಡುತ್ತಾ, ನವಜೋಡಿಯ ಕಾಲೆಳೆಯುತ್ತಿದ್ದರೆ ಪ್ರವಾಸದ ಸುಸ್ತು ಕಾಡುವುದಿಲ್ಲ. ಇಲ್ಲಿ ಸ್ನೇಹಿತರ ಜೊತೆಗೆ ಕಾಲ ಕಳೆಯುವುದು ಮಾತ್ರವಲ್ಲ, ಇದಲ್ಲದೇ ನವವಿವಾಹಿತರು ಸ್ವಲ್ಪ ಮಟ್ಟಿನ ತಮ್ಮ ಸಮಯವನ್ನೂ ಪಡೆಯಬಹುದು.

buddymoon

ಒಂದು ವಿಶಿಷ್ಟ ಅನುಭವ:

ಫ್ರೆಂಡ್‌ಮೂನ್ ಸಾಂಪ್ರದಾಯಿಕ ಹನಿಮೂನ್ ಒದಗಿಸದ ಅನನ್ಯ ಅನುಭವಗಳು ಮತ್ತು ನೆನಪುಗಳನ್ನು ಸೃಷ್ಟಿಸುತ್ತದೆ. ಸ್ನೇಹಿತರೊಂದಿಗೆ ಸಾಹಸ, ಶಾಶ್ವತ ಬಂಧಗಳು ಮತ್ತು ಮರೆಯಲಾಗದ ಕ್ಷಣಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಇಬ್ಬರು ಹೋಗುವುದಕ್ಕಿಂತ ಸ್ನೇಹಿತರನ್ನು ಜೊತೆಗೆ ಕರೆದುಕೊಂಡು ಹೋಗುವುದರಿಂದ ಸಂತಸ ಜಾಸ್ತಿ ಎಂದು ಹೇಳಲಾಗುತ್ತದೆ. ವಿವಾಹದ ತಯಾರಿಯಿಂದ ಸಾಕಷ್ಟು ದಣಿದಿದ್ದ ಜೋಡಿಗೆ ಈ ಪ್ರವಾಸ ರಿಫ್ರೆಶ್ ಅನುಭವವನ್ನು ನೀಡುವುದಂತೂ ಸುಳ್ಳಲ್ಲ.

ಇನ್ನು ಮೇಲ್ನೋಟದಲ್ಲೇ ಗೊತ್ತಾಗುವ ಹಾಗೆ, ಗಂಡಿನ ಕಡೆಯ ಗೆಳೆಯ ಗೆಳತಿಯರು ಎರಡುಮೂರು ಜನ, ಹೆಣ್ಣಿನ ಕಡೆಯ ಗೆಳೆಯಗೆಳತಿಯರು ಎರಡುಮೂರು ಜನ ಜೊತೆಯಾಗಿಬಿಟ್ಟರೆ ಆ ಪ್ರವಾಸ ಇನ್ನಷ್ಟು ಅದ್ಭುತವಾಗುವುದರಲ್ಲಿ ಸಂಶಯವಿಲ್ಲ. ನೂತನ ದಂಪತಿಗಳ ಫೊಟೋ, ವಿಡಿಯೋ ಮಾಡೋದಕ್ಕೂ ಗೆಳೆಯರ ಸಾಥ್ ಸಿಗುತ್ತದೆ. ಗಂಡಹೆಂಡತಿ ಪರಸ್ಪರ ಸಂಕೋಚದ ಚಿಪ್ಪಿನಿಂದ ಆಚೆ ಬರುವುದಕ್ಕೂ ಸಹಕಾರಿ, ಜವಾಬ್ದಾರಿ ಗೆಳೆಯರ ಬಳಗದ ಮೇಲೆ ಹೊರಿಸಿ ಆರಾಮಾಗಿ ಹನಿಮೂನ್ ಅನುಭವಿಸಬಹುದು. ಹೀಗಾಗಿ ಫ್ರೆಂಡ್ ಮೂನ್ ಟ್ರೆಂಡಿಂಗ್ ಆಗ್ತಿದೆ.