• ಡಾ.ಪದ್ಮಿನಿ ನಾಗರಾಜು

ನಾನು ಮತ್ತು ನನ್ನ ಗೆಳತಿಯರು ಮಂಗಳೂರಿನ ಪಿಲಿಕುಳದಲ್ಲಿ ನಡೆಯುತ್ತಿದ್ದ ಜಿನಭಜನಾ ಕಾರ್ಯಕ್ರಮಕ್ಕೆ ಹೊರಟುನಿಂತಾಗಲೇ ಪುತ್ತಿಗೆಯಲ್ಲಿ ಇತ್ತೀಚೆಗೆ ನವೀಕರಣಗೊಂಡ ಶ್ರೀ ಸೋಮನಾಥೇಶ್ವರ ದೇವಸ್ಥಾನ ನೋಡಲು ನಿರ್ಧರಿಸಿದ್ದೆವು.

ಇದನ್ನೂ ಓದಿ: ಹಾಳು ಹಂಪಿಯೆನ್ನದಿರಿ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪುತ್ತಿಗೆಯಲ್ಲಿ ಮಹಾತೋಭರ ಶ್ರೀ ಸೋಮನಾಥೇಶ್ವರ ದೇವಾಲಯವಿದೆ. ತುಳುನಾಡಿನ ಪ್ರಸಿದ್ಧ ಅರಸು ಮನೆತನವಾದ ಚೌಟರಿಂದ ಸುಮಾರು 900 ವರ್ಷಗಳ ಹಿಂದೆ ಸ್ಥಾಪಿತವಾಗಿದೆ. 1544ರಲ್ಲಿ ಚೌಟ ಸಂಸ್ಥಾನವು ಉಳ್ಳಾಲ ಮತ್ತು ಪುತ್ತಿಗೆ ಎಂಬ ಎರಡು ಪ್ರತ್ಯೇಕ ರಾಜಧಾನಿಗಳಾಗಿ ವಿಭಜನೆಯಾಯಿತು. ವೀರರಾಣಿ ಅಬ್ಬಕ್ಕ ಚೌಟ ಮನೆತನದವರು. ಚೌಟರು ತಮ್ಮ ಅರಸೊತ್ತಿಗೆಯನ್ನು ಉಳ್ಳಾಲದಿಂದ ಮೂಡುಬಿದಿರೆಗೆ ಸ್ಥಳಾಂತರಗೊಳಿಸಿದರು. ಆಗ ಅವರು ನಿತ್ಯ ಶ್ರೀ ಸೋಮನಾಥನ ದರ್ಶನ ಮಾಡುವುದಕ್ಕಾಗಿ ಒಂದು ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದರು. ಹುಲಿ ಹಾಗೂ ದನ ಒಟ್ಟಿಗೆ ಇದ್ದ ದ್ರುಶ್ಯವನ್ನು ಈ ಸನ್ನಿಧಾನದಲ್ಲಿ ಕಂಡು ಇಲ್ಲಿಯೇ ದೇವಾಲಯವನ್ನು ನಿರ್ಮಿಸಲು ಸಂಕಲ್ಪ ಮಾಡಿದರು. ಸಂಶೋಧಕರು ಹೇಳುವಂತೆ ʻಪುತ್ತಿಗೆʼ ಎಂದರೆ ಹೊಸದಾಗಿ ಜನವಸತಿಗೆ ಒಳಪಟ್ಟ ಪ್ರದೇಶ. ಪುತ್‌ ಎಂದರೆ ಹೊಸತು ಎಂದು ಅರ್ಥ. ದೇವಾಲಯ ನಿರ್ಮಾಣದ ನಂತರ ಇಲ್ಲಿ ಜನ ವಾಸಿಸಲಾರಂಭಿಸಿದರು.

Untitled design (55)

ದೇವಾಲಯವು ನಾಗು ನದಿಯ ತಟದಲ್ಲಿದೆ. ಅತ್ಯಂತ ದೊಡ್ಡ ದೇವಾಲಯವಾಗಿರುವ ಇಲ್ಲಿ ವಿಶಾಲವಾದ ಮೂರು ಸುತ್ತಿನ ಪ್ರಾಕಾರವಿದೆ. ಕ್ರಿಶ 1255ರಲ್ಲಿ ಈ ದೇವಾಲಯ ನಿರ್ಮಾಣ ಪ್ರಾರಂಭವಾಯಿತು ಎಂಬ ದಾಖಲೆ ಇಲ್ಲಿದೆ. ಕ್ರಿಶ 15ನೆಯ ಶತಮಾನದಲ್ಲಿ ದೇವಾಲಯಕ್ಕೆ ಮಾಡಿದ ದಾನದ ಉಲ್ಲೇಖವಿರುವ ಶಾಸನವೂ ದೇವಾಲಯದಲ್ಲಿದೆ. ಕ್ಷೇತ್ರದ ದೈವವಾದ ಪಂಚ ಧೂಮಾತಿಯನ್ನು ದೇವಾಲಯದ ಪೂರ್ವಕ್ಕೆ ನೆಲೆಗೊಳಿಸಲಾಗಿದೆ. ರಕ್ತೇಶ್ವರಿ ಸನ್ನಿಧಾನವೂ ಇಲ್ಲಿದೆ. ಚೌಟರ ಘನತೆಯನ್ನು ಎತ್ತಿಹಿಡಿಯುವ ದೇವಾಲಯ ಇದಾಗಿದೆ. ದೇವಳದ ಒಳ ಪ್ರಾಕಾರದಲ್ಲಿ ಎರಡು ಗರ್ಭಗುಡಿಗಳಿದ್ದು, ಶ್ರೀ ಸೋಮನಾಥ ದೇವರ ಸುಂದರ ಲಿಂಗವಿದೆ. ದೇವರ ಬಲಭಾಗದಲ್ಲಿ ಆರು ಭುಜಗಳುಳ್ಳ ಶ್ರೀ ಮಹಿಷಮರ್ದಿನಿಯ ಶಾಂತಗಂಭೀರ ಆಕರ್ಷಣೀಯ ವಿಗ್ರಹವಿದೆ. ಇಲ್ಲಿ ಮಹಾಗಣಪತಿ ದೇವರ ಮೂರ್ತಿಯೂ ಪ್ರತಿಷ್ಠಾಪಿತಗೊಂಡಿದೆ.

ಪ್ರಾಚೀನತೆ, ಚಾರಿತ್ರಿಕ ಹಿನ್ನಲೆ ಹೊಂದಿರುವ ಈ ಧಾರ್ಮಿಕ ಕ್ಷೇತವನ್ನು ಅನುವಂಶಿಕ ಆಡಳಿತ ಮೊಕ್ತೇಸರರಾದ ಚೌಟರ ಅರಮನೆಯ ಕುಲದೀಪ್‌ ಎಂ. ಅವರು ಜೀರ್ಣೋದ್ಧಾರ ಮಾಡಿಸಿ ದೇವಾಲಯವನ್ನು ಪುನರುತ್ಥಾನಗೊಳಿಸಿದ್ದಾರೆ. ಇಲ್ಲಿ ಧಾರ್ಮಿಕ ಕಾರ್ಯಗಳಾದ ಹದಿನೈದು ದಿನಗಳ ವಾರ್ಷಿಕ ನಡಾವಳಿ, ನಿತ್ಯಪೂಜೆ, ಪಂಚಪರ್ವಾದಿಗಳು, ಉತ್ಸವ, ಜಾತ್ರೆಗಳು ನಡೆಯುತ್ತವೆ.

Untitled design (53)

ಪ್ರಾಕೃತಿಕ ಸೌಂದರ್ಯದಿಂದ ಕಂಗೋಳಿಸುವ ಈ ಕ್ಷೇತ್ರ ತನ್ನ ಇತ್ತೀಚಿನ ನಿರ್ಮಾಣದಿಂದಲೂ ಗಮನ ಸೆಳೆಯುತ್ತದೆ. ಗುಡಿಗಳ ಸುತ್ತಲೂ ರಾಮಾಯಣದ ಕತೆಗಳಿವೆ. ದೇವಾಲಯಗಳು ಎರಡು ಪ್ರಾಕಾರದಿಂದ ಮುಗಿಯುತ್ತವೆ. ಆದರೆ ಪುತ್ತಿಗೆಯಲ್ಲಿ ಮೂರನೇ ಸುತ್ತು ಪ್ರತ್ಯೇಕವಿದ್ದು, ರಾಜಾಂಗಣ ಎಂದು ಗುರುತಿಸಲಾಗುತ್ತದೆ. ಇದು ದೇವಾಲಯಕ್ಕೆ ಭವ್ಯತೆಯನ್ನು ಹಾಗೂ ವೈಶಿಷ್ಟ್ಯತೆಯನ್ನು ತಂದಿದೆ. ದೇವಾಲಯದ ಹೊರಗೆ ರಾಜಾಂಗಣದಲ್ಲಿ ಸರೋವರವಿದೆ. ಅರಮನೆಯಿಂದ ದೇವಾಲಯಕ್ಕೆ ಬರುವಲ್ಲಿ ದ್ವಾರಗೋಪುರವಿದೆ. ದ್ವಾರದ ಎದುರು ಕಟ್ಟೆಯಲ್ಲಿ ಜಾತಿ ವೈರತ್ವ ಮರೆತು ಒಡನಾಡಿದ ಹುಲಿ-ದನಗಳ ಸಾಂಕೇತಿಕ ಪ್ರತಿಮೆಗಳಿವೆ. ಇಂದು ಅತ್ಯಂತ ಅವಶ್ಯವಾಗಿರುವ ಸಾಂಕೇತಿಕತೆ. ಪ್ರಾಣಿಗಳೇ ವೈರತ್ವ ಬಿಟ್ಟು ಬದುಕುವಾಗ, ಮನುಷ್ಯರಾದ ನಾವು ಜಾತಿಯ ಕಗ್ಗಂಟಿನಲ್ಲಿ ಸಿಲಿಕಿಕೊಂಡು, ಅದರಿಂದಾಗುತ್ತಿರುವ ವಿನಾಶ, ಹಾನಿ, ವೈರತ್ವಗಳನ್ನು ನಾವಿಂದು ನೋಡುತ್ತಿದ್ದೇವೆ. ಇಂಥ ಮಹತ್ವದ ಸಂದೇಶ ಸಾರುವ ಈ ದೇವಾಲಯವನ್ನು ಕೇವಲ ದರ್ಶನ ಮಾಡದೆ ಇದರ ಹಿಂದಿರುವ ಅರ್ಥವನ್ನು ಮನಗಾಣಲು ಅವಶ್ಯಕವಾಗಿ ಭೇಟಿ ನೀಡಬೇಕಿದೆ.

ಮಂಗಳೂರಿನಿಂದ ಸುಮಾರು 35 ಕಿಲೋಮೀಟರ್‌ ದೂರದಲ್ಲಿರುವ ಈ ಧಾರ್ಮಿಕ ಕ್ಷೇತ್ರ ದರ್ಶನವನ್ನು ಬಸ್ಸು ಹಾಗೂ ಸ್ವಂತ ವಾಹನಗಳಲ್ಲಿಯೂ ಮಾಡಬಹುದಾಗಿದೆ.