-ಶಿವನಗೌಡ ಕಿಲಬನೂರ

ಉಧೋ.. ಉಧೋ.. ಉಧೋ.. ಉಧೋ.. ಇದು ದೇವಿ ಜಗದಂಬೆಗೆ ಸಲ್ಲಿಸುವ ನಮಸ್ಕಾರ. ಉತ್ತರ ಕರ್ನಾಟಕದ ಪೈಕಿ ಬಹಳಷ್ಟು ಧಾರ್ಮಿಕ ಕ್ಷೇತ್ರಗಳಿವೆ. ಎಲ್ಲವೂ ಅದರದ್ದೇ ಆದ ಮಹತ್ವವನ್ನು ಹೊಂದಿವೆ. ಬಹಳಷ್ಟು ಕ್ಷೇತ್ರಗಳು ನಿಗದಿತ ಸಂದರ್ಭಕ್ಕೆ ತಕ್ಕಂತೆ ಭಕ್ತಾದಿಗಳನ್ನು ಕರೆಸಿಕೊಳ್ಳುತ್ತವೆ. ಆದರೆ ಕೆಲವೇ ದೇವಸ್ಥಾನಗಳು ವರ್ಷಪೂರ್ತಿ ಜನಜಾತ್ರೆಯಿಂದ ಕೂಡಿರುತ್ತವೆ. ಅವುಗಳಲ್ಲಿ ಹೆಚ್ಚು ಭಕ್ತರನ್ನು ಕರೆಸಿಕೊಳ್ಳುವ, ಸರಕಾರಕ್ಕೆ ಅತಿ ಹೆಚ್ಚು ದೇಣಿಗೆ ಸಂದಾಯ ಮಾಡುವ (2024ರ ಅಂಕಿ ಅಂಶದಂತೆ 13 ಕೋಟಿಗೂ ಹೆಚ್ಚು) ಪ್ರಸಿದ್ಧ ದೇವತಾ ಕ್ಷೇತ್ರ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ.

ಪೌರಾಣಿಕ ಹಿನ್ನೆಲೆ

ಸಪ್ತ ಋಷಿಗಳಲ್ಲಿ ಒಬ್ಬರಾದ ಜಮದಗ್ನಿ ಸಕಲ ವೇದ ಪಾಂಡಿತ್ಯನಾಗಿ ಧಾರ್ಮಿಕ ಕ್ಷೇತ್ರಗಳನ್ನು ಸಂಚರಿಸುತ್ತಾ ಕೊನೆಗೆ ಸೂರ್ಯವಂಶದ ರಾಜ ಪ್ರಸೇನಜಿತನ ಆಸ್ಥಾನಕ್ಕೆ ಬರುತ್ತಾರೆ. ನಂತರ ರಾಜನ ಮಗಳಾದ ರೇಣುಕಾದೇವಿಗೆ ಮನಸೋತು ರಾಜರಲ್ಲಿ ಮನವಿ ಮಾಡಿಕೊಂಡು ಕೊನೆಗೆ ಮದುವೆಯೂ ಮಾಡಿಕೊಳ್ಳುತ್ತಾರೆ. ಐದು ಮಕ್ಕಳನ್ನು ಪಡೆದು ನಂತರ ತಪಸ್ವಿ ಜೀವನ ಆರಂಭಿಸುತ್ತಾರೆ. ಕಾಲಾನುಕ್ರಮೇಣ ಪರಸ್ಪರ ತಾಯಿ ತಂದೆ ಮಕ್ಕಳ ನಡುವೆ ಶಾಪಗಳು ತಾಂಡವವಾಡಿ ತಾಯಿಯ ಶಿರಚ್ಛೇದನ ಮತ್ತೆ ಪರಶುರಾಮನ ಬೇಡಿಕೆಗೆ ತಾಯಿಯ ಮರುಜೀವ ಹೀಗೆ ದೇವಿಯ ಪುರಾಣದ ಸಾಲುಗಳು ಸಾಗುತ್ತವೆ.

Savadatti Yellamma

ಐತಿಹಾಸಿಕ ಹಿನ್ನೆಲೆ

ಸಿದ್ದಾಚಲ ಮತ್ತು ರಾಮಗಿರಿ ಪರ್ವತ ಶ್ರೇಣಿಯಲ್ಲಿ ಬರುವ ಈ ದೇವಾಲಯವನ್ನು ರಾಯಬಾಗ್ ಬೊಮ್ಮಪ್ಪ ನಾಯಕ 1514ರಲ್ಲಿ ನಿರ್ಮಿಸಿದನು. ಪುರಾತತ್ವ ಪುರಾವೆಗಳ ಪ್ರಕಾರ ರಾಷ್ಟ್ರಕೂಟರು, ಚಾಲುಕ್ಯರು ಹಾಗೂ ಬನವಾಸಿ ಕದಂಬರ ಕಾಲದಲ್ಲೂ ಈ ದೇವಸ್ಥಾನ ಇತ್ತು ಎನ್ನಲಾಗಿದೆ. ಬೆಟ್ಟದ ಮೇಲೆ ಕಂಡುಬರುವ ಕೆಂಪು ಮತ್ತು ಕಪ್ಪು ಮಣ್ಣಿನ ಮಡಿಕೆ ಚೂರುಗಳು ಐತಿಹಾಸಿಕ ಪುರಾವೆ ಒದಗಿಸುತ್ತವೆ.

ಯಲ್ಲಮ್ಮನ ಬೆಟ್ಟದ ಸುತ್ತಲು

ಬೆಟ್ಟದ ಕೆಳ ತುದಿಯಲ್ಲಿ ಮಲಪ್ರಭಾ ನದಿಯ ದಂಡೆಯ ಮೇಲೆ ಜೋಗುಳಬಾವಿ ಸತ್ಯಮ್ಮನ ಕೊಳ ಇದೆ. ಇಲ್ಲಿ ಭಕ್ತರು ಮೊದಲಿಗೆ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿಕೊಂಡು ಹೋಗುತ್ತಾರೆ. ಈ ಪದ್ದತಿಗೆ ʻನಿಮ್ಮನʼ ಎಂದು ಕರೆಯುತ್ತಾರೆ. ಇದರ ಹೊರತು ನೇರವಾಗಿ ದೇವಸ್ಥಾನಕ್ಕೆ ಹೋದರೂ ಪರವಾಗಿಲ್ಲ. ಇದು ಅವರವರ ಆಚರಣೆಗೆ ಬಿಟ್ಟಿದ್ದು. ದೇವಸ್ಥಾನದ ಹಿಂಭಾಗದಲ್ಲಿ ಕುಂಕುಮ ಕುಂಡ, ಯೋನಿ ಕುಂಡ, ಅರಿಹಣ ಕುಂಡ ಎಂಬ ಮೂರು ಸ್ನಾನದ ಕೊಳಗಳಿವೆ. ಇಲ್ಲಿ ತಾಯಿ ಯಲ್ಲಮ್ಮಳ ಜತೆ ಅವಳ ಮಗನಾದ ಪರಶುರಾಮನಿಗೂ ದೇವಸ್ಥಾನವಿದೆ. ಏಕನಾಥ, ಸಿದ್ದೇಶ್ವರ, ಗಣೇಶ, ಮಲ್ಲಿಕಾರ್ಜುನರಿಗೂ ಇಲ್ಲಿ ಪೂಜೆಗಳು ನಡೆಯುತ್ತವೆ.

yellamma devi temple

ಆಚರಣೆಗಳೇನು? ಅರ್ಪಣೆಗಳೇನು?

ಬೇವಿನ ಎಲೆ ಮತ್ತು ಹೂವು ಇಲ್ಲಿನ ಪ್ರಮುಖ ಪೂಜಾ ಅರ್ಪಣೆ ಆಗಿದ್ದು, ಮನಃಶಾಂತಿಗೆ, ಕಷ್ಟ ನಿವಾರಣೆಗೆ ಭಕ್ತರು ಯಲ್ಲಮ್ಮಳಿಗೆ ಹೂ ಹಾರಿಸಿ ಹೋಗುತ್ತಾರೆ. ಇಡೀ ದೇವಾಲಯದ ವಾತಾವರಣ ಕುಂಕುಮ ಮತ್ತು ಬಂಡಾರಗಳಲ್ಲಿ ಜಗಮಗಿಸುತ್ತದೆ. ಪದಕಟ್ಟಿ ಯಲ್ಲಮ್ಮ ದೇವಿಯನ್ನು ಹಾಡಿ ಹೊಗಳುತ್ತಾರೆ. ಹಬ್ಬ ಹುಣ್ಣಿಮೆ ದಿನಗಳಲ್ಲಂತೂ ಮಹಾರಾಷ್ಟ್ರ, ಪುಣೆ, ಕರ್ನಾಟಕದಾದ್ಯಂತ ಎಲ್ಲಾ ಕಡೆಯಿಂದ ಅಸಂಖ್ಯಾತ ಭಕ್ತರು ಕುಟುಂಬ ಸಮೇತರಾಗಿ ತಮ್ಮ ದಿನನಿತ್ಯದ ಸಾಮಾಗ್ರಿಗಳೊಂದಿಗೆ ವಾರಾನುಪೂರ್ತಿ ಬಂದು ಅಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಮುಖ್ಯವಾಗಿ ಭರತ ಹುಣ್ಣಿಮೆ ಹಾಗೂ ಬನದ ಹುಣ್ಣಿಮೆಗಳಲ್ಲಂತೂ ಇಡೀ ಗುಡ್ಡವೇ ಒಂದು ವಲಸೆ ಬಂದ ಊರಿಗಿಂತ ಹತ್ತು ಪಟ್ಟಿರುತ್ತದೆ. ಸಾಲು ಸಾಲು ಟ್ರ್ಯಾಕ್ಟರ್, ಎತ್ತಿನಗಾಡಿಗಳ ಝಲಕ್ ನೋಡಿದರೆ ದಿಗ್ಭ್ರಮೆ ಆಗುವಂತಿರುತ್ತದೆ. ಯಾವುದೇ ಸೂಟು ಬೂಟು ಆಡಂಬರವಿಲ್ಲದ ಪಕ್ಕಾ ಹಳ್ಳಿ ಸೊಬಗಿನ ಭಕ್ತಿ ಪರಾಕಾಷ್ಠೆ ಕಾಣಸಿಗುವುದು ಇಲ್ಲಿಯೇ.

ಹುಣ್ಣಿಮೆ ಹಬ್ಬಗಳಲ್ಲಿ ದೇವಾಲಯ ಬಹಳ ವಿಜೃಂಭಿಸುವ ಕಾರಣ ತಾಯಿಯ ಮುಖದರ್ಶನ ಮಾಡಲು ದೀರ್ಘ ಕಾಲ ಕ್ಯೂನಲ್ಲಿ ಸಾಗಬೇಕು. ಉಳಿದ ಯಾವುದೇ ದಿನಗಳಲ್ಲಿ ಸುಲಭವಾಗಿ ದರ್ಶನ ಮಾಡಿಕೊಳ್ಳಬಹುದು. ವಾಸ್ತವ್ಯಕ್ಕಾಗಿ ಸರಕಾರದ ವಸತಿ ಗೃಹಗಳು, ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಮತ್ತು ಅನೇಕ ಖಾಸಗಿ ವಸತಿ ವ್ಯವಸ್ಥೆಗಳೂ ಲಭ್ಯವಿರುತ್ತವೆ. ಪ್ರಸ್ತುತ ಈ ದೇವಾಲಯದ ಅಭಿವೃದ್ಧಿ ಮತ್ತು ನಿರ್ವಹಣೆ ಕರ್ನಾಟಕ ಸರಕಾರದ ಅಡಿಯಲ್ಲಿ ಬರುತ್ತದೆ. ದೇವಾಲಯದ ಶ್ರೇಯಾಭಿವೃದ್ಧಿಯಲ್ಲಿ ಸರಕಾರ ಇನ್ನೂ ಆದ್ಯತೆ ಕೊಡಬೇಕಾಗಿದೆ. ಅದೇ ರೀತಿ ದೇವಾಲಯದ ಸ್ವಚ್ಛತೆ ನಮ್ಮೆಲ್ಲರ ಹೊಣೆ ಆಗಿರಬೇಕು.

ದಾರಿ ಹೇಗೆ?

ಬೆಂಗಳೂರಿನಿಂದ ಹುಬ್ಬಳ್ಳಿಗೆ ತಲುಪಿ ಅಲ್ಲಿಂದ 57 ಕಿಮೀ ದೂರದಲ್ಲಿರುವ ಸವದತ್ತಿಗೆ ಬಸ್ ಮೂಲಕ ಧಾರವಾಡ ಮಾರ್ಗವಾಗಿ ಸುಲಭವಾಗಿ ತಲುಪಬಹುದು.