• ಸುವರ್ಣ ಲಕ್ಷ್ಮೀ ಎಂ.ಎಚ್.‌

ವಾರಾಣಸಿಯ ಜೈತ್ಪುರದಲ್ಲಿ ಚಂದ್ರಘಂಟಾ ದುರ್ಗಾ ನೆಲೆಸಿದ್ದಾಳೆ. ನವ ದುರ್ಗಿಯರಲ್ಲಿ ಈಕೆ ಮೂರನೆಯವಳು. ನವರಾತ್ರಿ ಆಚರಣೆಯ ಮೂರನೆಯ ದಿನ ಭಕ್ತರು ಚಂದ್ರಘಂಟಾ ದೇವಿದರ್ಶನಕ್ಕಾಗಿ ಸಾಲುಗಟ್ಟುತ್ತಾರೆ. ನಾವಲ್ಲಿಗೆ ಹೋಗಿ ಆಕೆಯನ್ನು ನೋಡಲಾಗದಿದ್ದರೂ ಆಕೆಯ ವಿವರ ತಿಳಿದು ಪೂಜಿಸೋಣ.

ಚಂದ್ರಘಂಟಾ ದೇವಿಯ ಸ್ವರೂಪ

ಹುಲಿ ವಾಹನಳಾಗಿ ಹತ್ತು ಕೈಗಳಲ್ಲಿ ಕಮಂಡಲ, ತ್ರಿಶೂಲ, ಕಮಲ, ಗದೆ, ಖಡ್ಗ, ಬಿಲ್ಲು, ಬಾಣ, ಜಪಮಾಲೆ, ಅಭಯ ಮುದ್ರೆಗಳಿಂದ ಶೋಭಿತಳಾಗಿದ್ದಾಳೆ.

ಪಾರ್ವತಿಯು ಬಹಳ ವರ್ಷಗಳ ಕಾಲ ತಪಸ್ಸು ಮಾಡಿ ಕಡೆಗೂ ಶಿವನನ್ನು ಮದುವೆಯಾಗಲು ಒಪ್ಪಿಸುತ್ತಾಳೆ. ಆದರೆ ಶಿವನು ತನ್ನ ಗಣಗಳೊಂದಿಗೆ ಮದುವೆ ಮನೆಗೆ ಬಂದಾಗ ಆತನ ಭಯಂಕರ ರೂಪವನ್ನು ನೋಡಿ ಪಾರ್ವತಿಯ ತಾಯಿ ಮೇನಾದೇವಿಯು ಮೂರ್ಛೆ ಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ದೇವಿಯ ಅವತಾರ ತಾಳಿ ಶಿವನನ್ನು ಸುಂದರ ರಾಜಕುಮಾರನಂತೆ ಬದಲಾಗಬೇಕೆಂದು ಕೇಳಿಕೊಳ್ಳುತ್ತಾಳೆ. ನಂತರ ಸಾಂಗವಾಗಿ ಮದುವೆ ನೆರವೇರುತ್ತದೆ.

ಚಂದ್ರಘಂಟಾ ದೇವಿಯು ವಿವಾಹಿತ ಸ್ತ್ರೀ ಸ್ವರೂಪ:

ಈಕೆ ಮದುವೆಯ ನಂತರ ಹಣೆಯ ಮೇಲೆ ಅರ್ಧ ಚಂದ್ರನನ್ನು ಧರಿಸಲು ಆರಂಭಿಸುತ್ತಾಳೆ. ಇದರಿಂದ ಆಕೆಗೆ ಈ ಹೆಸರು ಬಂತು ಎಂಬುದು ದಂತಕಥೆ.

ಚಂದ್ರಘಂಟಾ ಹೆಸರು ಬರಲು ಮತ್ತೊಂದು ಪುರಾಣದ ಕಥೆಯೂ ಇದೆ. ತಾಯಿ ಪಾರ್ವತಿಯು ಶಿವನನ್ನು ಮದುವೆಯಾಗಿ ಕೆಲದಿನಗಳ ನಂತರ ಮಹಿಷಾಸುರನೆಂಬ ರಕ್ಕಸನ ಹಾವಳಿ ಹೆಚ್ಚಾದಾಗ ಬ್ರಹ್ಮ ವಿಷ್ಣು ಇಬ್ಬರೂ ಶಿವನ ಬಳಿ ಬಂದು ಆತನ ಸಂಹಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಮೂವರ ಆಕ್ರೋಶವೂ ಒಂದು ಸ್ತ್ರೀ ರೂಪ ಪಡೆಯುತ್ತದೆ ಹಾಗೂ ಈ ರೂಪಕ್ಕೆ ಎಲ್ಲಾ ದೇವತೆಗಳು ತಮ್ಮ ತಮ್ಮ ಅಸ್ತ್ರಗಳನ್ನು ಕೊಡುತ್ತಾರೆ. ಶಿವನು ತ್ರಿಶೂಲ, ವಿಷ್ಣುವು ಚಕ್ರ ಹಾಗೂ ಬ್ರಹ್ಮ ದೇವನು ಒಂದು ಗಂಟೆಯನ್ನೂ ಕೊಡುತ್ತಾನೆ. ಹಾಗಾಗಿ ಈಕೆಗೆ ಚಂದ್ರಘಂಟಾ ಎಂಬ ಹೆಸರು ಬಂತು ಎಂದೂ ಹೇಳಲಾಗುತ್ತದೆ. ಇವೆಲ್ಲ ಅಸ್ತ್ರಗಳ ಸಹಾಯದಿಂದ ತಾಯಿ ಮಹಿಷಾಸುರನನ್ನು ಸಂಹರಿಸುತ್ತಾಳೆ. ಹಣೆಯಲ್ಲಿ ಮೂರನೆಯ ಕಣ್ಣನ್ನು ಹೊಂದಿರುವ ಈಕೆಗೆ ಶುಕ್ರ ಗ್ರಹವನ್ನು ನಿಯಂತ್ರಿಸುವ ಶಕ್ತಿ ಇದೆ ಎಂದು ನಂಬಿಕೆ. ಈಕೆಯನ್ನು ನಾವು ಆಶ್ರಯಿಸಿದರೆ ದುಷ್ಟಶಕ್ತಿ ನಿವಾರಣಿಯಾದ ಈ ತಾಯಿ ನಮ್ಮನ್ನು ದುಷ್ಟಶಕ್ತಿಗಳಿಂದ ಕಾಪಾಡುತ್ತಾಳೆ.