ಕರ್ನಾಟಕದ ಕರಾವಳಿ ಪ್ರದೇಶ ಸುಂದರವಾದ ಕಡಲತೀರಗಳು ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರು ಮಾಡಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಪಡುಬಿದ್ರಿಯು ಪುರಾತನ ಇತಿಹಾಸ ಹೊಂದಿರುವ ಕರಾವಳಿ ಗ್ರಾಮವಾಗಿದ್ದು, ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಹಾಗೂ ಜಾನಪದ ಹಿನ್ನೆಲೆಯ ನೆಲೆಬೀಡಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಮತ್ತು ಮಂಗಳೂರು ನಡುವೆ ಇರುವ ಈ ಊರು, ತನ್ನದೇ ಆದ ವಿಶಿಷ್ಟ ಪ್ರವಾಸಿ ಆಕರ್ಷಣೆಗಳು ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ವರ್ಷಗಳ ಐತಿಹ್ಯವಿರುವ ಅನೇಕ ದೇವಾಲಯಗಳಿವೆ. ಅದರಲ್ಲೂ 1100 ವರ್ಷಗಳ ಇತಿಹಾಸವಿರುವ ಪಡುಬಿದ್ರಿಯ ಒಡೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಂತೂ ಭಕ್ತರು, ಧಾರ್ಮಿಕ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಇದನ್ನೂ ಓದಿ: ರಾಣೇಬೆನ್ನೂರು ಪ್ರವಾಸೋದ್ಯಮ : ಸಫಾರಿಯಿಂದ ಪರಂಪರೆಯವರೆಗೆ ಪಯಣ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಭಕ್ತಿ, ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಶಾಂತಿ ಮತ್ತು ಆತ್ಮೀಯತೆಯನ್ನು ಹುಡುಕುವ ಭಕ್ತರಿಗೆ ಈ ದೇವಸ್ಥಾನವು ಪವಿತ್ರ ತಾಣವಾಗಿದೆ. ಕರಾವಳಿ ಕರ್ನಾಟಕದ ಧಾರ್ಮಿಕ ವೈಭವವನ್ನು ಅನುಭವಿಸಲು ಈ ದೇವಸ್ಥಾನ ಭೇಟಿ ನೀಡುವುದು ಒಂದು ವಿಶಿಷ್ಟ ಅನುಭವವಾಗಿದೆ.

Untitled design (38)

ದೇವಸ್ಥಾನದ ಇತಿಹಾಸ

ಪಡುಬಿದ್ರಿ ಎಂದರೆ ಸಾಮಾನ್ಯವಾಗಿ ಜನರಿಗೆ ನೆನಪಾಗುವುದು ಬೀಚ್, ಕರಾವಳಿ ಊರು, ಮಂಗಳೂರು–ಉಡುಪಿ ನಡುವಿನ ಪ್ರಮುಖ ಪಟ್ಟಣ. ಆದರೆ ಈ ಊರಿನ ಆತ್ಮವನ್ನು ಅರಿಯಬೇಕಾದರೆ ಇಲ್ಲಿ ನಿಂತಿರುವ ಮಹಾಲಿಂಗೇಶ್ವರ–ಮಹಾಗಣಪತಿ ದೇವಸ್ಥಾನವನ್ನು ನೋಡಲೇಬೇಕು.

ಸ್ಥಳೀಯ ಜನರ ನಂಬಿಕೆಯ ಪ್ರಕಾರ, 1200 ವರ್ಷಗಳ ಹಿಂದೆಯೇ ಭೃಗು ಮಹರ್ಷಿಗಳು ಈ ದೇವಾಲಯದಲ್ಲಿ ಮಹಾಲಿಂಗೇಶ್ವರನನ್ನು ಪ್ರತಿಷ್ಠಾಪಿಸಿ, ಆರಾಧಿಸಿದರು. ಅಲ್ಲದೆ ರುದ್ರಾಕ್ಷಿ ಶಿಲೆಯಿಂದ ರೂಪುಗೊಂಡ 1100 ವರ್ಷಗಳ ಹಿಂದಿನ ಮಹಾಗಣಪತಿಗೂ ಇಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು. ಅಂದಿನಿಂದ ಪ್ರಾರಂಭವಾದ ಪೂಜೆ, ಪುನಸ್ಕಾರಗಳು ಇಂದಿಗೂ ನೆರವೇರುತ್ತಲೇ ಇದೆ. ಹಲವು ಶತಮಾನಗಳ ಇತಿಹಾಸವನ್ನು ಹೊಂದಿ, ಅನೇಕ ರಾಜವಂಶಗಳ ಕಾಲದಲ್ಲಿ ಅಭಿವೃದ್ಧಿಗೊಂಡಿರುವ ಈ ದೇವಾಲಯ ಕಳೆದ 65 ವರ್ಷಗಳಿಂದಲೂ ಕಳೆಗುಂದಿತ್ತು. ದಕ್ಷಿಣ ಭಾರತೀಯ ದೇವಾಲಯಗಳ ಪರಂಪರೆಯನ್ನು ಪ್ರತಿಬಿಂಬಿಸುವ ಈ ದೇವಾಲಾಯದ ಜೀರ್ಣೋದ್ಧಾರ ನೆರವೇರಿಸುವಲ್ಲಿ ಡಾ. ಕೆ. ಪ್ರಕಾಶ್‌ ಶೆಟ್ಟಿ ಬಂಜಾರ ಅವರ ಪಾತ್ರವನ್ನು ಮೆಚ್ಚಲೇಬೇಕು.

ಮುಕ್ಕಣ್ಣಿಗೂ ಏಕದಂತನಿಗೂ ವಿಶೇಷ ಪೂಜೆ

ಕರಾವಳಿಯ ಅನೇಕ ದೇವಾಲಯಗಳಲ್ಲಿ ಶಿವ ಮತ್ತು ಗಣಪತಿಗೆ ಸಮಾನ ಮಹತ್ವವಿದೆ. ಅಂತೆಯೇ ಪಡುಬಿದ್ರಿಯಲ್ಲಿ ಪ್ರಧಾನ ದೇವರಾಗಿ ಶ್ರೀ ಮಹಾಲಿಂಗೇಶ್ವರ ಸ್ವಾಮಿ ವಿರಾಜಮಾನರಾಗಿದ್ದು, ಶಿವನ ಆರಾಧನೆಗೆ ಪ್ರಮುಖ ಸ್ಥಾನವಿದೆ. ಜತೆಗೆ ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ಎರಡೂ ದೇವತೆಗಳ ಆರಾಧನೆ ಊರಿನ ದಿನನಿತ್ಯದ ಬದುಕಿನೊಳಗೆ ಬೆರೆತುಹೋಗಿದೆ. ಬೆಳಗಿನ ಪೂಜೆಗಳಿಂದ ಹಿಡಿದು ರಾತ್ರಿ ದೀಪಾರಾಧನೆವರೆಗೂ ಇಲ್ಲಿ ಭಕ್ತಿ ಒಂದು ಆಚರಣೆ ಮಾತ್ರವಲ್ಲ, ಬದುಕಿನ ಶಿಸ್ತು. ಭಕ್ತರು ತಮ್ಮ ಸಂಕಷ್ಟ ನಿವಾರಣೆ, ವಿದ್ಯಾಭ್ಯಾಸ, ಉದ್ಯೋಗ ಮತ್ತು ಕುಟುಂಬದ ಶಾಂತಿಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ.

Untitled design (41)

ಬೆರಗು ಮೂಡಿಸುವ ವಾಸ್ತುಶಿಲ್ಪ

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಕಾಲಿಟ್ಟಾಗ ಮೊದಲಿಗೆ ಕಾಣಿಸುವುದು ಅಲ್ಲಿನ ಕರಾವಳಿ ಶೈಲಿಯ ಸಾಂಪ್ರದಾಯಿಕ ವಾಸ್ತುಶಿಲ್ಪ. ಮರದ ಕೆತ್ತನೆಗಳು, ಕಲ್ಲಿನ ಶಿಲ್ಪಗಳು ಮತ್ತು ಸುಂದರ ಗೋಪುರವು ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸಿವೆ. ದೇವಸ್ಥಾನದ ಆವರಣದಲ್ಲಿ ಇರುವ ಶತ ವಾತಾವರಣ ಭಕ್ತರಿಗೆ ಆತ್ಮೀಯ ಅನುಭವವನ್ನು ನೀಡುತ್ತದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವ

ದೇವಸ್ಥಾನವು ಕೇವಲ ಪೂಜಾ ಕೇಂದ್ರವಲ್ಲ; ಇದು ಸ್ಥಳೀಯ ಜನರ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ಪ್ರಮುಖ ಭಾಗವಾಗಿದೆ. ಅನೇಕ ಧಾರ್ಮಿಕ ಶಿಕ್ಷಣ ಕಾರ್ಯಕ್ರಮಗಳು, ಸೇವಾ ಕಾರ್ಯಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಈ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಗಣೇಶ ಚತುರ್ಥಿ, ಕಾರ್ತಿಕ ಮಾಸ ಪೂಜೆ, ವಾರ್ಷಿಕ ಬ್ರಹ್ಮಕಲಶೋತ್ಸವ ಮಾತ್ರವಲ್ಲದೆ ರಥೋತ್ಸವವನ್ನೂ ಬಹಳ ವಿಶೇಷವಾಗಿಯೇ ಆಚರಣೆ ಮಾಡಲಾಗುತ್ತದೆ. ಉತ್ಸವದ ಸಮಯದಲ್ಲಿ ಭಜನೆ, ಯಕ್ಷಗಾನ, ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ದೇವಸ್ಥಾನದ ವಿಶೇಷತೆ ಅದರ ಸಮುದಾಯ ಆಧಾರಿತ ವ್ಯವಸ್ಥೆ. ಇಲ್ಲಿ ಒಂದೇ ಸಮುದಾಯದ ದೇವಸ್ಥಾನ ಎನ್ನುವ ಗಡಿ ಇಲ್ಲ. ಬಂಟರು, ಬ್ರಾಹ್ಮಣರು, ದೇವಾಡಿಗರು, ಮೊಗವೀರರು, ವಿಶ್ವಕರ್ಮರು, ಬಿಲ್ಲವರು, ಮಹಿಳಾ ಮಂಡಳಿಗಳು, ಯುವಕ ಸಂಘಗಳು—ಎಲ್ಲರನ್ನೂ ಈ ದೇವಸ್ಥಾನದ ಉತ್ಸವಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಡಾ. ಪ್ರಕಾಶ್‌ ಶೆಟ್ಟಿ ಅವರ ಶ್ರಮ ಗಮನಾರ್ಹ.

ಇಲ್ಲಿನ ಮಹಾರಥೋತ್ಸವ ವಿಶೇಷ ಆಕರ್ಷಣೆಗಳಲ್ಲಿ ಒಂದು. ಕರಾವಳಿ ದೇವಸ್ಥಾನಗಳ ರಥೋತ್ಸವಗಳಲ್ಲಿ ಭಕ್ತಿಯ ಜತೆಗೆ ಜನಪದ ಸಂಭ್ರಮವೂ ಬೆರೆತುಹೋಗಿರುತ್ತದೆ. ರಥ ಬೀದಿಯಲ್ಲಿ ಸಾವಿರಾರು ಜನ ಸೇರಿ ರಥ ಎಳೆಯುವ ಕ್ಷಣ ಕೇವಲ ಧಾರ್ಮಿಕ ಘಟನೆ ಅಲ್ಲ; ಅದು ಸಮುದಾಯದ ಒಗ್ಗಟ್ಟಿನ ದೃಶ್ಯ. ಈ ದೇವಸ್ಥಾನದ ಮತ್ತೊಂದು ಗಮನಾರ್ಹ ಅಂಶ ಅದರ ಸಂಘಟನಾ ಶಕ್ತಿ. ಅನ್ನಸಂತರ್ಪಣೆ, ಅಲಂಕಾರ, ಭಜನೆ, ತಂತ್ರಜ್ಞಾನ, ವೈದ್ಯಕೀಯ, ವಾಹನ ನಿಲುಗಡೆ, ಸ್ವಚ್ಛತೆ—ಪ್ರತಿ ಕಾರ್ಯಕ್ಕೂ ಪ್ರತ್ಯೇಕ ಸಮಿತಿಗಳನ್ನು ರೂಪಿಸಿರುವ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್‌ ಶೆಟ್ಟಿಯವರು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡಚಣೆಗಳಾದಂತೆ ಗಮನವಹಿಸಿದ್ದಾರೆ. ಈ ಮೂಲಕ ದೇವಸ್ಥಾನಗಳು ಕೇವಲ ಪೂಜಾಸ್ಥಳವಲ್ಲ, ಸಮಾಜದ ಸ್ವಯಂಸೇವಾ ವ್ಯವಸ್ಥೆಯ ಕೇಂದ್ರಗಳೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಒಟ್ಟಿನಲ್ಲಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಭಕ್ತಿ, ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಶಾಂತಿ ಮತ್ತು ಆತ್ಮೀಯತೆಯನ್ನು ಹುಡುಕುವ ಭಕ್ತರಿಗೆ ಈ ದೇವಸ್ಥಾನವು ಪವಿತ್ರ ತಾಣವಾಗಿದೆ. ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಸ್ಥಳೀಯ ಗುರುತಿನ ಸಂಕೇತವಾಗಿದೆ. ಕರಾವಳಿ ಸಂಸ್ಕೃತಿಯ ನಿರಂತರತೆಯನ್ನು ಉಳಿಸುವ ಸೇತುವೆಗಳಾಗಿವೆ.

Untitled design (39)

ಕರ್ನಾಟಕದ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಈ ಸುಂದರ ಕರಾವಳಿ ಪಟ್ಟಣ ಪಡುಬಿದ್ರಿಯು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

- ಇತಿಹಾಸ ಪ್ರಸಿದ್ಧ ದೇವಾಲಯವಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಾನ್ಯತೆಯ ‘ಬ್ಲೂ ಫ್ಲಾಗ್’ (Blue Flag) ಟ್ಯಾಗ್ ಪಡೆದ ಭಾರತದ ಕೆಲವೇ ಕೆಲವು ಕಡಲತೀರಗಳಲ್ಲಿ ಪಡುಬಿದ್ರಿ ಬೀಚ್‌ ಸಹ ಒಂದಾಗಿದೆ. ಇಲ್ಲಿ ಶಾಂಭವಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುವ ರಮಣೀಯ ನದೀಮುಖ ಪ್ರದೇಶವಿದೆ. ಸುರಕ್ಷಿತವಾದ ಈಜುಕೊಳಗಳು, ವಾಕಿಂಗ್ ಟ್ರ್ಯಾಕ್ ಮತ್ತು ಉತ್ತಮ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ.

- ಇಲ್ಲಿನ ದೈವಾರಾಧನೆ ಮತ್ತು ಸಂಸ್ಕೃತಿಯ ಭಾಗವಾಗಿರುವ 'ಢಕ್ಕೆಬಲಿ ಉತ್ಸವʼ ಆಚರಣೆಯು ಬಹಳ ಪ್ರಸಿದ್ಧವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಉತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.

--

1100 ವರ್ಷಗಳ ಇತಿಹಾಸವಿರುವ ಪಡುಬಿದ್ರಿಯ ಒಡೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧರವಾಗಿ ಅನೇಕ ವರ್ಷಗಳೇ ಕಳೆದಿತ್ತು. ತಮ್ಮ ನೆಚ್ಚಿನ ದೇವಾಲಯದ ಜೀರ್ಣೋದ್ಧಾರವಾಗಬೇಕೆಂಬ ಬಗ್ಗೆ ಶ್ರೀಮತಿ ಆಶಾ, ತಮ್ಮ ಪತಿ ಡಾ. ಪ್ರಕಾಶ್‌ ಶೆಟ್ಟಿ ಬಂಜಾರ ಅವರ ಬಳಿ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ, ಈ ಬಗ್ಗೆ ತ್ವರಿತ ನಿರ್ಧಾರಕ್ಕೆ ಬಂದ ಪ್ರಕಾಶ್‌ ಶೆಟ್ಟಿಯವರು, ವರ್ಷದ ಹಿಂದಷ್ಟೇ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರನ್ನು ಬರಮಾಡಿಕೊಂಡು ಶಿಲಾಮಯ ನೂತನ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಳದ ಶಿಲಾನ್ಯಾಸವನ್ನು ನೆರವೇರಿಸಿದ್ದರು. ಪ್ರಕಾಶ್‌ ಶೆಟ್ಟಿಯವರ ಪತ್ನಿ ಆಶಾ ಅವರ ವರ್ಷಗಳ ಕನಸು ನನಸಾಯಿತು ಎಂಬಂತೆ ವರ್ಷದೊಳಗಾಗಿ ದೇವಾಲಯ ಜೀರ್ಣೋದ್ದಾರಗೊಂಡು ನೂತನ ವಿನ್ಯಾಸವನ್ನು ಪಡೆದುಕೊಂಡಿದೆ. ಇದೇ ಏಪ್ರಿಲ್ 24ರಿಂದ ಮೇ 14ವರೆಗೆ ದೇವಾಲಯದಲ್ಲಿ ಮಹಾಗಣಪತಿ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ರಥೋತ್ಸವ ಅದ್ಧೂರಿಯಾಗಿ ನೆರವೇರಿದೆ. ಜೀರ್ಣೋದ್ಧಾರದಿಂದ ದೇವಸ್ಥಾನ ಮತ್ತಷ್ಟು ಭವ್ಯ ರೂಪ ಪಡೆದುಕೊಂಡಿದೆ. ಹೊಸದಾಗಿ ನಿರ್ಮಿಸಲಾದ ಕಲ್ಲಿನ ಗರ್ಭಗುಡಿ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ರಥೋತ್ಸವದ ಸಂಭ್ರಮ-ಇವೆಲ್ಲವೂ ಸೇರಿ ದೇವಸ್ಥಾನವನ್ನು ಒಂದು ಆಧ್ಯಾತ್ಮಿಕ ಉತ್ಸವಕ್ಷೇತ್ರವನ್ನೇ ಮಾಡಿವೆ.

Untitled design (40)

ಈ ಉತ್ಸವದ ಇನ್ನೊಂದು ವಿಶೇಷ ಅಂಶ ಅದರ ಸಾಂಸ್ಕೃತಿಕ ವೈವಿಧ್ಯ. ಕರಾವಳಿಯ ದೇವಸ್ಥಾನಗಳು ಯಾವಾಗಲೂ ಕಲೆಗಳ ಆಶ್ರಯಸ್ಥಾನ. ಇಲ್ಲಿ ನಡೆದ ಕಾರ್ಯಕ್ರಮಗಳ ಪಟ್ಟಿ ಅದಕ್ಕೆ ಸಾಕ್ಷಿ. ಯಕ್ಷಗಾನ, ತಾಳಮದ್ದಳೆ, ಭರತನಾಟ್ಯ, ತುಳು ನಾಟಕ, ಭಜನೆ, ಕಾರ್ನಾಟಿಕ್ ಸಂಗೀತ, ಪಂಚವಾದ್ಯ, ಹರಿಕಥೆ—ಒಂದು ಕರಾವಳಿ ಸಂಸ್ಕೃತಿಯ ಸಂಪೂರ್ಣ ಚಿತ್ರವೇ ಇಲ್ಲಿ ಕಾಣುತ್ತದೆ.‌

--

ನನ್ನ ಊರು ಪಡುಬಿದ್ರಿಯಲ್ಲ, ಉಡುಪಿ. ಆದರೆ ನಾನು ಪಡುಬಿದ್ರಿಯ ನೆಂಟ, ದಿ. ಮಹಾಬಲ ಶೆಟ್ಟರ ಮಗಳನ್ನು ಮದುವೆಯಾಗಿ 39 ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳಲ್ಲಿ ನನ್ನ ಧರ್ಮ ಪತ್ನಿ ಆಶಾ ನನ್ನ ಬಳಿ ಏನೂ ಕೇಳಿದವರಲ್ಲ. ನನ್ನ ಊರಿನ ದೇವಸ್ಥಾನ, ನನ್ನ ತಂದೆಯವರು ಜೀರ್ಣೋದ್ಧಾರ ಮಾಡಿದ್ದ 1100 ವರ್ಷಗಳ ಇತಿಹಾಸವಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯ ಜೀರ್ಣೋದ್ಧಾರವಾಗದೆ ಸುಮಾರು 65 ವರ್ಷಗಳೇ ಕಳೆದಿತ್ತು. ಈ ದೇವಾಲಯದ ಜೀರ್ಣೋದ್ದಾರ ಮಾಡಿಕೊಡುವಂತೆ ಬೇಡಿಕೆಯಿದ್ದರು. ಊರಿನವರ ಸಂಕಲ್ಪವೂ ಅದೇ ಆಗಿದ್ದು, ಎಲ್ಲರ ಬೇಡಿಕೆಯಂತೆ 2014ರಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಎಲ್ಲರನ್ನೂ ಈ ಮಹತ್ಕಾರದಲ್ಲಿ ಒಗ್ಗೂಡುವಂತೆ ಮಾಡಿದೆ. 2025ರ ಏಪ್ರಿಲ್‌ ನಿಂದ ಎರಡು ತಿಂಗಳು ಕಾಲ ದೇವಾಲಯವನ್ನು ಕೆಡವಿಹಾಕಿ ಅಲ್ಲಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭಿಸಿ ಸುಮಾರು 11 ತಿಂಗಳಲ್ಲಿ ದೇವಾಲಯದ ಎಲ್ಲ ಕೆಲಸಗಳೂ ಪೂರ್ಣಗೊಂಡಿವೆ. ಏಪ್ರಿಲ್‌ 22ರಿಂದ ಮೇ 14ರ ವರೆಗೆ ದೇವಾಲಯದ ಬ್ರಹ್ಮಕಲಶೋತ್ಸವ ಅದ್ಧೂರಿಯಾಗಿಯೇ ನೆರವೇರಿದ್ದು, ಸುಮಾರು 20 ದಿನಗಳ ಕಾಲ ನನ್ನ ಧರ್ಮ ಪತ್ನಿಯೊಂದಿಗೆ ಈ ದೇವಾರಕಾರ್ಯದಲ್ಲಿ ಭಾಗವಹಿಸಿದ ಖುಷಿ ನನಗಿದೆ. ದಿನನಿತ್ಯ ಪೂಜೆ, ಅನ್ನಸಂತರ್ಪಣೆ, ಸಂಜೆಯ ವೇಳೆ ಪರಮಪೂಜ್ಯ ಸ್ವಾಮೀಜಿಗಳವರಿಂದ ಧಾರ್ಮಿಕ ಸಭೆ, ದೇಶವಿದೇಶಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ವಿಜಯ್‌ ಪ್ರಕಾಶ್‌ ರಂಥ ಮೇರು ಗಾಯಕರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಳ್ವಾಸ್‌ ತಂಡದಿಂದ ಸಾಂಸ್ಕ್ರತಿಕ ಚಟುವಟಿಕೆಗಳು, ಹೀಗೆ ಅನೇಕ ಕಾರ್ಯಕ್ರಮಗಳು ಲಕ್ಷಾಂತರ ಭಕ್ತರ ಸಂತಸಕ್ಕೆ ಕಾರಣವಾಗಿತ್ತು.

ಈ ದೇವಾಲಯ ಕಟ್ಟುವುದಲ್ಲಿ ನಾನು ನಿಮಿತ್ತವಷ್ಟೇ. ಎಲ್ಲ ಭಕ್ತ ವೃಂದದವರು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳು, ಎಲ್ಲರೂ ಕೈಜೋಡಿಸಿ ಮಾಡಿದ ಕೆಲಸ ಮಾಡಿದ್ದರಿಂದ ಎಲ್ಲ ಕೆಲಸಗಳೂ ಸುಗಮವಾಗಿಯೇ ನೆರವೇರಿದೆ. ಜೀರ್ಣೋದ್ಧಾರ ಕಾರ್ಯದ ಸಂಪೂರ್ಣ ಮೇಲುಸ್ತುವಾರಿಯನ್ನು ಶ್ರೀ ನವೀನ್ ಶೆಟ್ಟಿ ಮತ್ತು ಶ್ರೀ ಪ್ರೇಮ್ ಶೆಟ್ಟಿ ಅವರು ವಹಿಸಿಕೊಂಡು, ರಾತ್ರಿಹಗಲು ಶ್ರಮಿಸಿದ್ದಾರೆ. ಗುತ್ತಿಗೆದಾರರಾದ ಸುಜಯ್ ಶೆಟ್ಟಿ ಮತ್ತು ಅವರ ತಂಡ, ಕಾಷ್ಠ ಶಿಲ್ಪಿ ಸುಹಾಸ್ ಹೆಗ್ಡೆ ಬೆಳ್ಮಣ್ ಅವರ ನೇತೃತ್ವದಲ್ಲಿ ನಡೆದ ಮರದ ಕೆತ್ತನೆ ಕೆಲಸ, ಹಾಗೂ ಶಿಲ್ಪಿ ವಿಷ್ಣುಮೂರ್ತಿ ಆಚಾರ್ಯರ ನೇತೃತ್ವದಲ್ಲಿ ನೆರವೇರಿದ ಕಲ್ಲಿನ ಕೆತ್ತನೆ ಕಾರ್ಯ — ಇವೆಲ್ಲದರ ಹಿಂದೆ ಅನೇಕ ಕೈಗಳ ನಿಸ್ವಾರ್ಥ ಪರಿಶ್ರಮ ಅಡಗಿದೆ. ಎಲ್ಲರೂ ಹಗಲು-ರಾತ್ರಿ ಶ್ರಮಿಸಿದ ಪರಿಣಾಮವಾಗಿ, ಇಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಕರಾವಳಿಯ ಅತ್ಯಂತ ವೈಭವಶಾಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

- ಡಾ. ಕೆ. ಪ್ರಕಾಶ್‌ ಶೆಟ್ಟಿ ಬಂಜಾರ , ಚೇರ್‌ಮನ್‌, ಎಂಆರ್‌ಜಿ ಸಮೂಹ ಸಂಸ್ಥೆ

Untitled design (40)

ಈ ದೇವಾಲಯ ಜೀರ್ಣೋದ್ದಾರಗೊಂಡು ಸುಮಾರು 65 ವರ್ಷಗಳೇ ಕಳೆದಿತ್ತು. ಇತ್ತೀಚೆಗಷ್ಟೇ ಡಾ. ಪ್ರಕಾಶ್‌ ಶೆಟ್ಟಿ ಬಂಜಾರ ಅವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ನೆರವೇರಿದೆ. ಸುತ್ತೂರುಗಳಿಂದಲೂ ಈ ಕಾರ್ಯಕ್ರಮಕ್ಕೆ ಬಂದ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಮಹಾಲಿಂಗೇಶ್ವರ ದೇವರು ಹಾಗೂ ಮಹಾಗಣಪತಿ ದೇವರ ಗರ್ಭಗುಡಿ ಶಿಲಾಮಯ, ತೀರ್ಥಮಂಟಪದ ಮರದ ಕೆತ್ತನೆಗಳೂ ಅದ್ಭುತವಾಗಿ ಮೂಡಿಬಂದಿದೆ. ಅಚ್ಚರಿಯೆಂದರೆ ಬರಿಯ 11 ತಿಂಗಳುಗಳೊಳಗೆ ಈ ಎಲ್ಲ ಕೆಲಸಗಳೂ ಪೂರ್ಣಗೊಂಡು ನವೀಕೃತಗೊಂಡಿದೆ. ಇದು ಎ ಗ್ರೇಡ್‌ ಧಾರ್ಮಿಕ ದತ್ತಿಗೆ ಒಳಪಟ್ಟ ದೇವಾಲಯವಾಗಿದ್ದು ಇಲ್ಲಿ ಕಾರ್ಯನಿರ್ವಾಹಕರೊಂದಿಗೆ ಮೂರು ಜನ ಅನುವಂಶೀಯ ಮುಕ್ತೇಸರರೂ ಇದ್ದು, ದೇವಾಲಯದ ಅಭಿವೃದ್ಧಿ ಕಾರ್ಯಗಳ ಬಗೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಇನ್ನು ನಿತ್ಯವೂ ಬೆಳಗ್ಗೆ 4 ಗಂಟೆಗೆ ಉಷಾಕಾಲದ ಪೂಜೆ, 7 ಗಂಟೆಗೆ ಬೆಳಗ್ಗಿನ ಪೂಜೆ, ಮಧ್ಯಾಹ್ನ 12 ಗಂಟೆಗೆ ಪ್ರಸನ್ನ ಪೂಜೆ, ರಾತ್ರಿ 7 ಗಂಟೆಗೆ ಗಣಪತಿ ಹಾಗೂ ರುದ್ರ ದೇವರಿಗೆ ಪೂಜೆ ನೆರವೇರುತ್ತದೆ. ಇಲ್ಲಿ ರುದ್ರ ದೇವರು ಪ್ರಮುಖರಾದರೂ ಮಹಾಗಣಪತಿಯ ಕಾರಣಿಕವನ್ನು ನಂಬುವವರೇ ಹೆಚ್ಚು. ನಂಬಿದ ಕೆಲಸಗಳು ಕೈಗೂಡಿದರೆ ಪಂಚಕಜ್ಜಾಯದ ಹರಕೆ ಹೊತ್ತುಕೊಳ್ಳುತ್ತಾರೆ. ಅಲ್ಲದೆ ಸಿಹಿ ಅಪ್ಪ, 108 ಕಾಯಿ ಗಣಹೋಮಗಳು ನೆರವೇರುತ್ತವೆ.

- ವೈ ಗುರುರಾಜ್‌ ಭಟ್‌, ಪ್ರಧಾನ ಅರ್ಚಕರು

--

ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ, ಜೀರ್ಣೋದ್ಧಾರಕ್ಕಾಗಿ ಸುಮಾರು 34 ಕೋಟಿ ವೆಚ್ಚವಾಗಿದೆ. ವಿಶೇಷವೆಂದರೆ ಇದಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರಕಾರವನ್ನು ಅನೇಕ ಬಾರಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಡಾ. ಪ್ರಕಾಶ್‌ ಶೆಟ್ಟಿ ಬಂಜಾರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷನಾಗಿ ಅನೇಕ ಅಭಿವೃದ್ಧಿಪರ ಕೆಲಸಗಳಿಗೆ ಚಾಲನೆ ಕೊಟ್ಟರು. ಊರಿನ ಪ್ರಮುಖ ಮನೆತನ ಹಾಗೂ ಗ್ರಾಮದ ಪ್ರಮುಖರು, ಭಕ್ತರ ಸಹಕಾರದಿಂದ ಬ್ರಹ್ಮಕಲಶೋತ್ಸವ ಸೇರಿದಂತೆ ದೇವರ ಸಕಲ ಕೆಲಸಕಾರ್ಯಗಳೂ ನಿರಾಯಾಸವಾಗಿ ನೆರವೇರಿದೆ. ಇದರ ಗೌರವಾಧ್ಯಕ್ಷನಾಗಿ ಅಳಿಲು ಸೇವೆ ಮಾಡುವ ಅವಕಾಶ ನನಗೂ ಸಿಕ್ಕಿರುವುದು ಖುಷಿಯ ವಿಚಾರ. ದೇವಾಲಯವನ್ನು ಒಬ್ಬರೇ ನಿಂತು ಕಟ್ಟಿಸುವದಲ್ಲ, ಸಾವಿರಾರು ಕೈಗಳ ಶ್ರಮ ಅದರ ಹಿಂದಿರಬೇಕೆಂಬುದು ಕರಾವಳಿ ಭಾಗದ ನಂಬಿಕೆ. ಅದರಂತೆ ಧನಸಹಾಯ, ಸ್ವಯಂಸೇವಕರಾದವರು, ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು, ಪೂಜಾ ನೆರವೇರಿಸಿಕೊಟ್ಟರವರು ಹೀಗೆ ಅನೇಕ ರೀತಿಯಲ್ಲಿ ಸೇವೆಗಳನ್ನು ಮಾಡಿದ್ದಾರೆ. ಇದೆಲ್ಲವೂ ದೇವರ ಸೇವೆಯ ವಿವಿಧ ರೂಪಗಳಷ್ಟೇ. ʻದೇಗುಲಗಳ ನಗರಿʼ ಎಂದೇ ಹೆಸರು ಮಾಡಿರುವ ಉಡುಪಿಯ ಹಿರಿಮೆ ಹೆಚ್ಚಿಸುವಲ್ಲಿ ನವೀಕರಣಗೊಂಡ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯ ಪಾತ್ರವೂ ಪ್ರಮುಖವಾಗಿದೆ.

- ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ

ದಾರಿ ಹೇಗೆ ?

  • ಪಡುಬಿದ್ರಿಯು ಉಡುಪಿಯಿಂದ ಸುಮಾರು 25 ಕಿಮೀ. ಹಾಗೂ ಮಂಗಳೂರಿನಿಂದ ಸುಮಾರು 30 ಕಿಮೀ. ದೂರದಲ್ಲಿದೆ. ರಸ್ತೆ ಹಾಗೂ ರೈಲು ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು.