• ಸ್ವಾಮಿನಾಥನ್

ಹಲವು ದಿನಗಳಿಂದ ಲೇಪಾಕ್ಷಿಯ ಇತಿಹಾಸ ಮತ್ತು ಶಿಲ್ಪಕಲೆಯ ಬಗ್ಗೆ ಅಲ್ಲಲ್ಲಿ ಓದಿದ್ದ ನಮಗೆ, ಅಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಬೇಕೆಂಬ ಹಂಬಲವಿತ್ತು. ಆದರೆ, ಸೂಕ್ತ ಸಮಯ ಕೂಡಿಬಂದಿರಲಿಲ್ಲ. ಕೊನೆಗೂ ಈ ವಾರಾಂತ್ಯದಲ್ಲಿ ಸ್ನೇಹಿತರೊಂದಿಗೆ ಪ್ರವಾಸದ ಯೋಜನೆ ರೂಪಿತವಾಯಿತು. ನಾವು ನಾಲ್ಕು ಜನ ಕಾರಿನಲ್ಲಿ ಬೆಂಗಳೂರಿನಲ್ಲಿ ಬ್ರೇಕ್‌ಫಾಸ್ಟ್ ಮುಗಿಸಿ ಪ್ರಯಾಣ ಬೆಳೆಸಿದೆವು. ರಸ್ತೆಗಳು ಅತ್ಯುತ್ತಮವಾಗಿದ್ದರಿಂದ ಬೆಂಗಳೂರಿನಿಂದ ಕೇವಲ ಎರಡು ಗಂಟೆಗಳಲ್ಲಿ ಲೇಪಾಕ್ಷಿಯನ್ನು ತಲುಪಿದೆವು. ಸುಡು ಸುಡು ಬಿಸಿಲಿನ ಪ್ರಯಾಣ. ಆದರೆ, ಒಮ್ಮೆ ಲೇಪಾಕ್ಷಿ ತಲುಪಿದ ಮೇಲೆ ಅಲ್ಲಿನ ಕಲಾ ವೈಭವದ ಮುಂದೆ ಆ ಬಿಸಿಲಿನ ಝಳ ಮರೆತುಹೋಯಿತು. ಇಡೀ ದಿನ ಅತ್ಯಂತ ಆನಂದದಾಯಕ ಹಾಗೂ ಅರ್ಥಪೂರ್ಣವಾಗಿ ಕಳೆಯಿತು.

ಇದನ್ನೂ ಓದಿ: ಸ್ಪಿಟಿ ಕಣಿವೆಯ ಕಟ್ಟಡಗಳಿಗೆ ಬಿಳಿ-ಹಳದಿ-ಕಂದು-ಕೆಂಪು ಬಣ್ಣಗಳೇಕೆ?

ಬೆಂಗಳೂರಿನ ಜಂಜಾಟದ ಬದುಕಿನಿಂದ ಕೊಂಚ ವಿರಾಮ ಪಡೆದು, ಇತಿಹಾಸ ಮತ್ತು ಕಲೆಯ ಮಡಿಲಲ್ಲಿ ಒಂದು ದಿನ ಕಳೆಯಲು ಬಯಸುವವರಿಗೆ ಲೇಪಾಕ್ಷಿ ಅತ್ಯಂತ ಸೂಕ್ತವಾದ ತಾಣ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿದ್ದರೂ, ಇದು ಕರ್ನಾಟಕದ ಗಡಿಗೆ ತೀರಾ ಹತ್ತಿರದಲ್ಲಿದೆ. ವಿಜಯನಗರ ಸಾಮ್ರಾಜ್ಯದ ವೈಭವ, ಅದ್ಭುತ ಶಿಲ್ಪಕಲೆ ಮತ್ತು ಪೌರಾಣಿಕ ಹಿನ್ನೆಲೆಗಳ ಸಂಗಮವೇ ಈ ಪುಟ್ಟ ಗ್ರಾಮ. ಪ್ರವಾಸಿಗರಿಗೆ ಇದೊಂದು ಕಣ್ಣಿನ ಹಬ್ಬ ಮತ್ತು ಜ್ಞಾನದ ಗಣಿ.

ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ

ಲೇಪಾಕ್ಷಿ ಎಂಬ ಹೆಸರಿನ ಹಿಂದೆ ಒಂದು ಸುಂದರವಾದ ಪೌರಾಣಿಕ ಕಥೆಯಿದೆ. ರಾಮಾಯಣದ ಕಾಲದಲ್ಲಿ, ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಪಕ್ಷಿಯು ಆತನನ್ನು ತಡೆಯಲು ಯತ್ನಿಸಿ, ರೆಕ್ಕೆಗಳು ಕತ್ತರಿಸಿ ಇದೇ ಜಾಗದಲ್ಲಿ ಬಿದ್ದಿತಂತೆ. ಸೀತೆಯನ್ನು ಹುಡುಕುತ್ತಾ ಬಂದ ಶ್ರೀರಾಮನು ಜಟಾಯುವನ್ನು ಕಂಡು ಕರುಣೆಯಿಂದ ‘ಲೇ ಪಕ್ಷಿ’ (ತೆಲುಗಿನಲ್ಲಿ ‘ಪಕ್ಷಿಯೇ ಏಳು’ ಎಂದರ್ಥ) ಎಂದು ಕರೆದಿದ್ದರಿಂದ ಈ ಸ್ಥಳಕ್ಕೆ ಲೇಪಾಕ್ಷಿ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.

ಐತಿಹಾಸಿಕವಾಗಿ, ಇಲ್ಲಿನ ಪ್ರಸಿದ್ಧ ವೀರಭದ್ರ ಸ್ವಾಮಿ ದೇವಾಲಯವನ್ನು 16ನೆಯ ಶತಮಾನದಲ್ಲಿ (ಸುಮಾರು ಕ್ರಿಶ 1530) ವಿಜಯನಗರದ ಅರಸರಾದ ಅಚ್ಯುತರಾಯರ ಆಳ್ವಿಕೆಯಲ್ಲಿ ಪೆನುಕೊಂಡದ ಪ್ರಾಂತ್ಯಾಧಿಕಾರಿಗಳಾಗಿದ್ದ ವಿರೂಪಣ್ಣ ಮತ್ತು ವೀರಣ್ಣ ಎಂಬ ಸಹೋದರರು ನಿರ್ಮಿಸಿದರು. ಈ ದೇವಾಲಯದಲ್ಲಿ ಕನ್ನಡದ ಶಾಸನಗಳಿರುವುದು ಕನ್ನಡ ಮತ್ತು ತೆಲುಗಿನ ಸಾಂಸ್ಕೃತಿಕ ಸಂಬಂಧವನ್ನು ಎತ್ತಿ ತೋರಿಸುತ್ತದೆ.

Untitled Design (2)

ವಾಸ್ತುಶಿಲ್ಪ ಮತ್ತು ಪುರಾತತ್ವ ಮಹತ್ವ

ಪುರಾತತ್ವ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಲೇಪಾಕ್ಷಿ ವಿಜಯನಗರ ಶೈಲಿಯ ಶಿಲ್ಪಕಲೆಯ ಪರಮೋಚ್ಚ ಬಿಂದುವಾಗಿದೆ. ಇಡೀ ದೇವಾಲಯ ಸಂಕೀರ್ಣವನ್ನು 'ಕೂರ್ಮಶೈಲ' (ಆಮೆಯ ಆಕಾರದ ಬೆಟ್ಟ) ಎಂಬ ಬಂಡೆಯ ಮೇಲೆ ಜಗತ್ತನ್ನೇ ಬೆರಗುಗೊಳಿಸುವಂತೆ ನಿರ್ಮಿಸಲಾಗಿದೆ.

ಏಕಶಿಲಾ ನಂದಿ (Monolithic Nandi): ದೇವಾಲಯಕ್ಕೆ ತಲುಪುವ ಮುನ್ನವೇ ನಮ್ಮನ್ನು ಸ್ವಾಗತಿಸುವ ಬೃಹತ್ ನಂದಿ ವಿಗ್ರಹವು ಭಾರತದಲ್ಲೇ ಅತಿ ದೊಡ್ಡ ಏಕಶಿಲಾ ನಂದಿಗಳಲ್ಲಿ ಒಂದಾಗಿದೆ. 15 ಅಡಿ ಎತ್ತರ ಹಾಗೂ 27 ಅಡಿ ಉದ್ದವಿರುವ ಈ ನಂದಿಯ ನಯವಾದ ಕೆತ್ತನೆ ಕಣ್ಣು ಸೆಳೆಯುತ್ತದೆ.

ಬೃಹತ್ ಗಣೇಶ (Monolithic Ganesha): ದೇವಾಲಯದ ಹೊರ ಆವರಣದ ಬಂಡೆಯೊಂದರಲ್ಲಿ ಕೆತ್ತಲಾಗಿರುವ ಬೃಹತ್ ಗಣೇಶನ ವಿಗ್ರಹವು ಪ್ರವಾಸಿಗರ ಪ್ರಮುಖ ಆಕರ್ಷಣೆ. ಕಲ್ಲಿನ ಆಸನದ ಮೇಲೆ ಕುಳಿತಿರುವ ಭಂಗಿಯಲ್ಲಿರುವ ಈ ಗಣಪತಿಯ ಕೆತ್ತನೆ ಅತ್ಯಂತ ಸರಳ ಹಾಗೂ ಆಕರ್ಷಕವಾಗಿದ್ದು, ವಿಜಯನಗರದ ಶಿಲ್ಪಿಗಳ ಅದ್ಭುತ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ.

ಬೃಹತ್ ನಾಗಲಿಂಗ: ದೇವಾಲಯದ ಆವರಣದಲ್ಲಿರುವ ಏಳು ಹೆಡೆಯ ಸರ್ಪವು ವಿಶಾಲವಾದ ಶಿವಲಿಂಗಕ್ಕೆ ಛತ್ರಿಯಂತೆ ನೆರಳು ನೀಡುತ್ತಿರುವ ದೃಶ್ಯ ಅತ್ಯಂತ ಭವ್ಯವಾಗಿದೆ. ಇದನ್ನು ಕೇವಲ ಒಂದು ದೊಡ್ಡ ಬಂಡೆಯಲ್ಲಿ ಕೆತ್ತಲಾಗಿದೆ ಎನ್ನುವುದೇ ವಿಸ್ಮಯ.

Untitled Design (1)

ತೇಲುವ ಕಂಬ (Hanging Pillar): ಇಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದಾದ ಈ ಕಂಬವು ನೆಲವನ್ನು ಮುಟ್ಟದೆ ಗಾಳಿಯಲ್ಲಿ ತೇಲುತ್ತಿರುವಂತೆ ನಿಂತಿದೆ. ಇದರ ಅಡಿಯಲ್ಲಿ ಬಟ್ಟೆ ಅಥವಾ ಕಾಗದವನ್ನು ಸುಲಭವಾಗಿ ದಾಟಿಸಬಹುದು. ಇದು ಅಂದಿನ ಶಿಲ್ಪಿಗಳ ವಾಸ್ತುಶಾಸ್ತ್ರದ ಜ್ಞಾನಕ್ಕೆ ಸಾಕ್ಷಿ. ರಂಗ ಮಂಟಪ ಮತ್ತು ಭಿತ್ತಿಚಿತ್ರಗಳು: ನಾಟ್ಯ ಮಂಟಪದ ಕಂಬಗಳ ಮೇಲಿರುವ ಸಂಗೀತಗಾರರು ಹಾಗೂ ನೃತ್ಯಗಾರ್ತಿಯರ ಶಿಲ್ಪಗಳು ಜೀವಂತವಾಗಿವೆ.

ಅಪೂರ್ಣ ಕಲ್ಯಾಣ ಮಂಟಪ: ಇಲ್ಲಿನ ಕಲ್ಯಾಣ ಮಂಟಪವು ಅರ್ಧಕ್ಕೆ ನಿಂತಿದೆ. ಅರಸನ ಅನುಮತಿಯಿಲ್ಲದೆ ರಾಜಕೋಶದ ಹಣ ಬಳಸಿ ಇದನ್ನು ಕಟ್ಟುತ್ತಿದ್ದರಿಂದ ವಿರೂಪಣ್ಣನ ಕಣ್ಣುಗಳನ್ನು ಕಿಟ್ಟುಹಾಕುವಂತೆ ರಾಜನು ಆಜ್ಞಾಪಿಸಿದನೆಂದೂ, ಭಾವುಕನಾದ ವಿರೂಪಣ್ಣ ತಾನೇ ತನ್ನ ಕಣ್ಣುಗಳನ್ನು ಕಿತ್ತು ಇಲ್ಲಿನ ಗೋಡೆಗೆ ಎಸೆದನೆಂದೂ ಇತಿಹಾಸ ಹೇಳುತ್ತದೆ. ಆ ರಕ್ತದ ಕಲೆಗಳು ಇಂದಿಗೂ ಗೋಡೆಯ ಮೇಲೆ ಕಾಣಿಸುತ್ತವೆ ಎಂಬ ನಂಬಿಕೆಯಿದೆ.

ಇಲ್ಲಿ ಜಟಾಯು ಥೀಮ್ ಪಾರ್ಕ್ ಕೂಡ ಇದೆ

ಬಂಡೆಗಳ ಎತ್ತರದ ಸ್ಥಳದಲ್ಲಿ ಜಟಾಯು ಪಕ್ಷಿಯ ಪ್ರತಿಮೆ ಇದೆ. ಮೇಲ್ಭಾಗವನ್ನು ತಲುಪಲು ಲೋಹದ ಮೆಟ್ಟಿಲುಗಳನ್ನು ಹತ್ತಬೇಕು. ಯಾವುದೇ ಲಿಫ್ಟ್‌ಗಳಿಲ್ಲ. ತುಂಬಾ ಬಿಸಿಲಿನ ತಾಪದ ಕಾರಣ ನಾವು ಮೇಲೆ ಏರುವ ಸಾಹಸ ಮಾಡಲಿಲ್ಲ. ದೂರದಿಂದಲೇ ಜಟಾಯು ಕಾಣುತ್ತದೆ, ಅಲ್ಲಿಂದಲೇ ಫೊಟೋ ತೆಗೆದು ವಾಪಸ್ ಆದೆವು.

ಲೇಪಾಕ್ಷಿ ಕೇವಲ ಒಂದು ಪ್ರವಾಸಿ ತಾಣವಲ್ಲ; ಇದು ಕಲ್ಲಿನಲ್ಲಿ ಕೆತ್ತಿದ ಕಾವ್ಯ. ನಮ್ಮ ಪೂರ್ವಜರ ಕಲಾಪ್ರೌಢಿಮೆಯನ್ನು ಕಣ್ಣಾರೆ ಕಂಡು ಆಸ್ವಾದಿಸಲು ಪ್ರತಿಯೊಬ್ಬ ಕಲಾಪ್ರೇಮಿಯೂ ಭೇಟಿ ನೀಡಲೇಬೇಕಾದ ಸುಂದರ ತಾಣ.

ಇದನ್ನೂ ಓದಿ: ಲೋಕದಲ್ಲೆಲ್ಲೂ ಸಿಗದು ಲೋಕಲ್‌ ತಿಂಡಿ ರುಚಿ

ದಾರಿ ಹೇಗೆ?

ಲೇಪಾಕ್ಷಿ ಬೆಂಗಳೂರಿನಿಂದ ಕೇವಲ 120 ರಿಂದ 130 ಕಿಲೋಮೀಟರ್ ದೂರದಲ್ಲಿದೆ. ಇದು ಒಂದು ದಿನದ ರಸ್ತೆ ಪ್ರವಾಸಕ್ಕೆ ಅತ್ಯಂತ ಸೂಕ್ತ. ಬೆಂಗಳೂರಿನಿಂದ ಹೆಬ್ಬಾಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 44 (ಬೆಂಗಳೂರು-ಹೈದರಾಬಾದ್ ಹೈವೇ) ಹಿಡಿದು ನೇರವಾಗಿ ಪ್ರಯಾಣಿಸಬಹುದು. ದೇವನಹಳ್ಳಿ, ಚಿಕ್ಕಬಳ್ಳಾಪುರ ದಾಟಿದ ನಂತರ ಆಂಧ್ರದ ಗಡಿಯ ಸಮೀಪ ಬಲಕ್ಕೆ ತಿರುವು ಪಡೆದು ಲೇಪಾಕ್ಷಿ ತಲುಪಬಹುದು. ಉತ್ತಮ ರಸ್ತೆ ಸಂಪರ್ಕ ಇರುವುದರಿಂದ ಕೇವಲ 2 ರಿಂದ 2.5 ಗಂಟೆಗಳಲ್ಲಿ ತಲುಪಬಹುದು.