ಭಾರತದಲ್ಲಿ ಹನ್ನೆರಡು‌ ಪವಿತ್ರ ಶಿವಸ್ಥಾನಗಳಿವೆ. ಅದನ್ನು ಹನ್ನೆರಡು ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ಸಾಕಷ್ಟು ಶಿವನ ದೇಗುಲಗಳಿವೆ. ಆದರೆ ಈ ಹನ್ನೆರಡು ಜ್ಯೋತಿರ್ಲಿಂಗಗಳಿಗೆ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆಯಿದೆ. ಶೈವ ಭಕ್ತರ ಪಾಲಿಗೆ ಅದು ಪವಿತ್ರ ಕ್ಷೇತ್ರ.

ಜ್ಯೋತಿರ್ಲಿಂಗದಲ್ಲಿ ನೆಲೆಸಿರುವ ಶಿವನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನು ಜ್ಯೋತಿಯ ರೂಪದಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಜ್ಯೋತಿರ್ಲಿಂಗವು ಮಹಾದೇವನ ಸ್ವಯಂಭೂ ಅವತಾರವಾಗಿದ್ದು, ಭಗವಾನ್ ಶಿವನ ಜ್ಯೋತಿ ಗೋಚರಿಸುವಲ್ಲೆಲ್ಲಾ ಜ್ಯೋತಿರ್ಲಿಂಗವನ್ನು ಸ್ಥಾಪಿಸಲಾಗಿದೆ.

mahakaleshwar mandir

ಉಜ್ಜಯಿನಿಯ ಮಹಾಕಾಳೇಶ್ವರ

ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶ ದ ಉಜ್ಜಯಿನಿ ಜಿಲ್ಲೆಯಲ್ಲಿದೆ. ಉಜ್ಜಯಿನಿ ಅತ್ಯಂತ ಪುರಾತನವಾದ ಐತಿಹಾಸಿಕ ಹಿನ್ನೆಲೆಯುಳ್ಳ ನಗರ. ಅದರಲ್ಲೂ ಉಜ್ಜಯಿನಿ ಸ್ಥಳವು ದೈವಿಕವಾಗಿದೆ. ಇದರ ಪ್ರಾಚೀನ ಹೆಸರು 'ಅವಂತಿಕಾ'. ಇದು ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅತಿದೊಡ್ಡ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶಿವನ ಪವಿತ್ರ ವಾಸಸ್ಥಾನವಾಗಿದೆ. ಇದು ಮೂರು ಅಂತಸ್ತಿನ ದೇವಾಲಯವಾಗಿದ್ದು, ರುದ್ರ ಸಾಗರ ಸರೋವರದ ತಟದಲ್ಲಿದೆ.

ujaini

ಕೆಳಭಾಗದಲ್ಲಿ ಮಹಾಕಾಳೇಶ್ವರ ಲಿಂಗ ಮತ್ತು ದೇಗುಲದ ಮೇಲ್ಭಾಗದಲ್ಲಿ ನಾಗಚಂದ್ರೇಶ್ವರನನ್ನು ಸ್ಥಾಪಿಸಲಾಗಿದೆ. ನಾಗ ಪಂಚಮಿಯ ಹಬ್ಬದ ಸಮಯದಲ್ಲಿ ನಾಗಚಂದ್ರೇಶ್ವರನ ದರ್ಶನ ಪಡೆಯಬಹುದು. ಇನ್ನು ದೇವಾಲಯದ ದಕ್ಷಿಣ ಭಾಗದಲ್ಲಿ, ಶಿಂಧೆಯ ಆಳ್ವಿಕೆಯಲ್ಲಿ ನಿರ್ಮಿಸಲಾದ ಅನೇಕ ಸಣ್ಣ ದೇವಾಲಯಗಳಿವೆ. ದೇವಾಲಯ ಸಂಕೀರ್ಣದಲ್ಲಿರುವ ಸರ್ವತೋಭದ್ರ ಶೈಲಿಯಲ್ಲಿ ಕೋಟಿ ತೀರ್ಥ ಎಂಬ ಎತ್ತರದ ಕುಂಡವನ್ನು ನಿರ್ಮಿಸಲಾಗಿದೆ. ದೇವಾಲಯದ ಶಿಖರವು ಆಕಾಶದೆತ್ತರಕ್ಕಿದೆ. ಇಲ್ಲಿನ ಜ್ಯೋತಿರ್ಲಿಂಗವು ಅತ್ಯಂತ ಶಕ್ತಿಶಾಲಿ ಎಂಬುದು ಭಕ್ತರ ನಂಬಿಕೆ.