ಕಾನನದ ನಡುವೆ ಕನ್ನಡಿಗರ ಕಣ್ಮಣಿ ಕ್ಯಾಪ್ಟನ್ ಅರ್ಜುನನ ಪ್ರತಿಮೆ
ದಟ್ಟ ಕಾಡು, ಕಚ್ಚಾ ರಸ್ತೆ, ದೂರದಲ್ಲಿ ನವಿಲಿನ ಕೂಗು, ಇನ್ನೇನು ಆನೆ ಘೀಳಿಡುವ ಶಬ್ದವೂ ಕೇಳಬಹುದು ಎಂದು ಮನಸು ಆತಂಕಗೊಳ್ಳುತ್ತಿದ್ದಂತೆಯೇ ಆನೆಯೊಂದು ನಿಂತಂತೆ ಕಾಣುತ್ತಿದೆ. ಒಂದಿನಿತೂ ಅಲುಗಾಡದೆ, ಮುರಿದ ತನ್ನ ಬಾಲವನ್ನೂ ಬೀಸದೆ, ಸೊಂಡಿಲನ್ನು ಮಣ್ಣಿಗೆ ಇಳಿಬಿಟ್ಟು, ಗಾಂಭೀರ್ಯದಿಂದ ನಿಂತ ಅದನ್ನು ನೋಡುತ್ತಲೇ ಅವನಿರುವತ್ತ ಹೆಜ್ಜೆ ಹಾಕಿದೆ. ಅದು ಕರುನಾಡಿನ ಪಾಲಿಗೆ ಕ್ಯಾಪ್ಟನ್ ಎಂದೇ ಹೆಸರಾದ, ಮೈಸೂರು ದಸರಾದಲ್ಲಿ 8 ಬಾರಿ ತಾಯಿ ಚಾಮಂಡೇಶ್ವರಿಯ ಅಂಬಾರಿ ಹೊತ್ತಿದ್ದ ಅರ್ಜುನ ಎಂಬ ವೀರಗ್ರಣಿಯ ಪ್ರತಿಮೆ.
- ಅನಿಲ್ ಹೆಚ್.ಟಿ. ಮಡಿಕೇರಿ
ಎಲ್ಲಿ ಅರ್ಜುನ ಸಾವನ್ನಪ್ಪಿದ್ದನೋ ಅದು ಈಗ ಅಪಾರ ಸಂದರ್ಶಕರ ಭೇಟಿಯ ತಾಣವಾಗಿದೆ. ವಾರಾಂತ್ಯದಲ್ಲಿ 500ಕ್ಕೂ ಅಧಿಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಉಳಿದ ದಿನಗಳಲ್ಲಿ 100-200 ಜನರಾದರೂ ಇಲ್ಲಿಗೆ ಬರುತ್ತಾರೆ. ಅರ್ಜುನನ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸುತ್ತಾರೆ. ಅರ್ಜುನನ ಸಮಾಧಿ ಸ್ಥಳದಲ್ಲಿ ಈಗ ಅದರ ಸುಂದರ ಪ್ರತಿಕೃತಿ ನಿರ್ಮಾಣವಾಗಿದೆ.
ನಾಡಹಬ್ಬ ದಸರಾದ ಪಟ್ಟದಾನೆಯಾಗಿದ್ದ ಅರ್ಜುನನಿಗೆ ಗೌರವದ ದ್ಯೋತಕ ಎಂಬಂತೆ ಆತನ ಪ್ರತಿಮೆ ಮುಂದೆ ನಿತ್ಯವೂ ದೀಪ ಬೆಳಗಿಸಲಾಗುತ್ತಿದೆ. ಪೂಜೆ ಸಲ್ಲಿಸಲು ಪ್ರತಿಮೆಯ ಎದುರಿಗೆ ತುಳಸಿ ಕಟ್ಟೆಯೂ ರೂಪುಗೊಂಡಿದೆ. ಅರ್ಜುನನ ಅಭಿಮಾನಿಗಳು ಸಮಾಧಿ ಮುಂದೆ ಹೂವಿನ ಹಾರ ತಂದಿಟ್ಟು ಭಾವುಕತೆಯೊಂದಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಎಸಳೂರು ಗ್ರಾಮದಿಂದ 3.50 ಕಿಮೀ ದೂರದಲ್ಲಿ ಅರ್ಜುನನ ಈ ಪ್ರತಿಮೆ ಇದೆ. 2 ಕಿಮೀ ಡಾಂಬರು ರಸ್ತೆಯ ಬಳಿಕ 1.50 ಕಿಮೀ ಮಣ್ಣಿನ ಹಾದಿಯಲ್ಲಿ ಸಾಗಬೇಕು. ಇದು ಅರಣ್ಯದ ನಡುವೆ ಸಾಗುವ ರಸ್ತೆ. ಮುಂದೆ ಸಾಗುತ್ತಿದ್ದಂತೆ ಅರ್ಜುನನ ಪ್ರತಿಮೆ ಕಾಣಸಿಗುತ್ತದೆ.
ಅರ್ಜುನನ ಪ್ರತಿಮೆಯ ಸುತ್ತ ಸೋಲಾರ್ ತಂತಿಯನ್ನು ಅಳವಡಿಸಲಾಗಿದೆ. ಈ ತಂತಿಯಲ್ಲಿ ಪ್ರವಹಿಸುವ ವಿದ್ಯುತ್ ಅನ್ನು ಆಫ್ ಮಾಡಿದರೆ ಮಾತ್ರ ಸಂದರ್ಶಕರು ಪ್ರತಿಮೆ ಬಳಿ ತೆರಳಬಹುದು. ಇದಕ್ಕೆ ಅರಣ್ಯ ರಕ್ಷಕ ಗುರುವಪ್ಪ ತಿಳಿಸಿದ ಕಾರಣ ಹೀಗಿತ್ತು. ʻಇದು ಕಾಡು. ಅನೇಕ ಕಾಡಾನೆಗಳು ಸಂಚರಿಸುತ್ತವೆ. ಅವುಗಳಲ್ಲಿ ಕೆಲವು ಪ್ರತಿನಿತ್ಯ ಬೆಳಗ್ಗೆ ಇಲ್ಲಿಗೆ ಬರುತ್ತವೆ. ಪ್ರತಿಮೆಯನ್ನು ದೂರದಿಂದಲೇ ದಿಟ್ಟಿಸಿ ಮರಳುತ್ತವೆ. ಈ ಪ್ರತಿಮೆಯನ್ನು ನಿಜವಾದ ಆನೆಯೆಂದು ಬಾವಿಸಿ ಕಾದಾಡಲು ಮುಂದಾಗಬಾರದಲ್ಲ, ಹಾಗಾಗಿ ಸೋಲಾರ್ ತಂತಿ ಅಳವಡಿಸಲಾಗಿದೆʼ.
ಅರ್ಜುನನ ಪ್ರತಿಮೆಯ ಸುತ್ತಲು ಸಂದರ್ಶಕರು ಕುಳಿತುಕಳ್ಳಲು ಕಲ್ಲುಬೆಂಚು ವ್ಯವಸ್ಥೆಯಿದೆ. ಕುಡಿಯುವ ನೀರಿನ ಸೌಕರ್ಯ, 500 ಮೀ. ದೂರದಲ್ಲಿ ಸಾರ್ವಜನಿಕ ಶೌಚಾಲಯ, ಮಾಹಿತಿ ಕೇಂದ್ರವೂ ಇದೆ. ಅರಣ್ಯ ಇಲಾಖೆಯ ಪಾಲಿಗೆ ಪ್ರತಿಷ್ಠೆಯ ಆನೆನಾಗಿದ್ದ ಅರ್ಜುನನ ಸಾಹಸವನ್ನು ಸಾರುವ, ವೀರ ಅಂತ್ಯದ ಕುರಿತ ಮಾಹಿತಿ ಫಲಕವನ್ನು ಪ್ರತಿಮೆಯ ಬಳಿಯೇ ಅಳವಡಿಸಲಾಗಿದೆ.
ಕನ್ನಡಿಗರ ಕಣ್ಮಣಿ ಕ್ಯಾಪ್ಟನ್ ಅರ್ಜುನ
1971ರಲ್ಲಿ ಕರ್ನಾಟಕದ ಎಚ್.ಡಿ.ಕೋಟೆ ಬಳಿಯ ಆನೆ ಪಳಗಿಸುವ ಕಾರ್ಯಾಚರಣೆಗೆ ಹೆಸರಾದ ಕಾಕನಕೋಟೆ ಕಾಡಿನಲ್ಲಿ ಅರ್ಜುನನನ್ನು ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಯಿತು. ಅದನ್ನು ಪಳಗಿಸಿ 1990ರ ದಶಕದ ಕೊನೆಯಲ್ಲಿ ಮೈಸೂರಿನ ದಸರಾ ಉತ್ಸವಕ್ಕೆ ಕರೆತರಲಾಯಿತು. ಆ ವೇಳೆಗೆ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ದ್ರೋಣನ ಸ್ಥಾನಕ್ಕೆ ಬಲರಾಮ ಬಂದಿದ್ದ. ಆದರೆ ಬಲರಾಮನ ಬಗ್ಗೆ ಅಷ್ಟೇನೂ ಒಲವು ತೋರದ ಅಧಿಕಾರಿಗಳು ಅರ್ಜುನನನ್ನು ಗಮನಿಸಿದರು. ಅದರ ಗತ್ತು, ಗಾಂಭೀರ್ಯ, ದೈತ್ಯ ಆಕಾರ ಕಂಡು ಅಂಬಾರಿ ಹೊರಲು ಅರ್ಜುನನ್ನೇ ಆಯ್ಕೆ ಮಾಡಿದರು. ಕೆಲವು ವರ್ಷಗಳ ಕಾಲ ಜಂಬೂ ಸವಾರಿಯಲ್ಲಿ ಅಂಬಾರಿ ಆನೆ ದ್ರೋಣನ ಹಿಂದೆ ನಡೆದಿದ್ದ ಅರ್ಜುನ 2012- 2019ರವರೆಗೆ ದಾಖಲೆಯ 8 ವರ್ಷಗಳ ಕಾಲ ದಸರಾ ಅಂಬಾರಿ ಹೊತ್ತಿದ್ದ. ಕಳೆದ 4 ವರ್ಷಗಳ ಹಿಂದೆ ವಯೋನಿವೃತ್ತಿ ಹೊಂದಿದ್ದ.
ಇದನ್ನೂ ಓದಿ: ಮೈಸೂರು ಟಾಂಗಾ ಸ್ವಾಗತಿಸುವ ಹೊತ್ತು
ನಿವೃತ್ತಿಯ ನಂತರ ಅರ್ಜುನ ಎಚ್.ಡಿ.ಕೋಟೆ ಬಳಿಯ ಬಳ್ಳೆ ಸಾಕಾನೆ ಶಿಬಿರದಲ್ಲಿ ವಾಸವಾಗಿದ್ದ. ಗಜಗಾಂಭೀರ್ಯ ಎಂಬುದು ಅರ್ಜುನನಿಗೆ ಸಂಪೂರ್ಣ ಸಿದ್ದಿಸಿತ್ತು. ಹಾಗಾಗಿ ದಸರಾದಲ್ಲಿ ಅರ್ಜುನನ ಬಗ್ಗೆ ದೂರುಗಳೇ ಇರಲಿಲ್ಲ. ಅರ್ಜುನನಿಗೆ ವಯಸ್ಸಾದ ಕಾರಣದಿಂದ ಅಭಿಮನ್ಯು ಆನೆಯನ್ನು ಕಳೆದ 5 ವರ್ಷಗಳಿಂದ ದಸರಾದಲ್ಲಿ ಬಳಸಲಾಗುತ್ತಿದೆ. 2023ರ ಡಿಸೆಂಬರ್ 4ರಂದು ಎಸಳೂರು ವ್ಯಾಪ್ತಿಯ ಬಾಳೆಕೆರೆಯಲ್ಲಿ ಕಾಡಾನೆ ಸೆರೆ ವೇಳೆ ಅರ್ಜುನ ಕಾಡಾನೆಯೊಂದಿಗೆ ನಡೆದ ಭೀಕರ ಕದನದಲ್ಲಿ ಸಾವನ್ನಪ್ಪಿದ.
2023, ಡಿಸೆಂಬರ್ 5ಕ್ಕೆ ಅರ್ಜುನ ಸಾವನ್ನಪ್ಪಿದ ಸ್ಥಳದಲ್ಲೇ ರಾಜ್ಯದ ಹಲವೆಡೆಗಳಿಂದ ಬಂದಿದ್ದ ಅರ್ಜುನನ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಾಜ್ಯ ಸರಕಾರಿ ಗೌರವದೊಂದಿಗೆ ಅರ್ಜುನನ ಅಂತ್ಯಕ್ರಿಯೆ ನೆರವೇರಿತು.
2026, ಮೇ 6ಕ್ಕೆ ಅರ್ಜುನನ ಅಂತ್ಯಕ್ರಿಯೆಯಾದ ಜಾಗದಲ್ಲೇ ಅದರ ಸುಂದರ ಪ್ರತಿಮೆ ಜನ್ಮತಾಳಿದೆ. ಅಂದಿನ ಅರಣ್ಯ ಸಚಿವ ಈಶ್ವರಖಂಡ್ರೆ ಅವರು ಅರ್ಜುನನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ಕರ್ನಾಟಕದಲ್ಲೇ ಮೊದಲು
ಕರ್ನಾಟಕದಲ್ಲಿ ಕಾಡಾನೆ, ಸಾಕಾನೆಗಳಿಗೆ ಬರವಿಲ್ಲ. ಮೈಸೂರು ದಸರಾ ವಿಶ್ವವಿಖ್ಯಾತವಾಗಿರಲು ಜಂಬೂಸವಾರಿ ಮುಖ್ಯ ಕಾರಣ ಎಂಬುದನ್ನೂ ಮರೆಯುವಂತಿಲ್ಲ. ಮಡಿಕೇರಿ ಕೋಟೆ ಸೇರಿ ರಾಜ್ಯದ ಅಲ್ಲಲ್ಲಿ ಐತಿಹಾಸಿಕ ಮಹತ್ವದ ಆನೆಗಳ ಪ್ರತಿಮೆಗಳಿವೆ. ಆದರೆ, ಕಾಡಾನೆಯೊಂದಿಗೆ ಕಾದಾಡಿ ವೀರಮರಣವನ್ನಪ್ಪಿದ, ಕನ್ನಡಿಗರ ಅಚ್ಚುಮೆಚ್ಚಿನ ಸಾಕಾನೆಗೆ ಪ್ರತಿಮೆ ನಿರ್ಮಿಸಿ ನಿತ್ಯ ಪೂಜೆ ನಡೆಯುತ್ತಿರುವ, ಸಂದರ್ಶಕರ ಭೇಟಿಗೆ ಅವಕಾಶವಿರುವ ಉದಾಹರಣೆ ಕರ್ನಾಟಕದಲ್ಲಿ ಇದೇ ಮೊದಲು.
ಅರ್ಜುನನ ಪ್ರತಿಮೆ ಹೀಗಿದೆ
ಕಲಾವಿದ ಧನಂಜಯ ಅವರು ರೂಪಿಸಿದ ಪ್ರತಿಮೆ 9.8 ಅಡಿ ಎತ್ತರ, 12.3 ಅಡಿ ಅಗಲವಾಗಿದ್ದು, 10 ಕಲಾವಿದರ ಸಹಕಾರದೊಂದಿಗೆ 650 ಕೆಜಿ ತೂಕದ ಪ್ರತಿಮೆ ರೂಪುಗೊಂಡಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಸುಮಾರು 14 ಲಕ್ಷ ರು. ಸುತ್ತಲಿನ ಸ್ಥಳವನ್ನು ಉದ್ಯಾನವಾಗಿಸಲು 30 ಲಕ್ಷ ರು. ವೆಚ್ಚವಾಗಿದೆ. ಗಮನಾರ್ಹವೆಂದರೆ ಕಾಡಾನೆಯ ಜತೆ ಕಾದಾಟದಲ್ಲಿ ಅರ್ಜುನನ ಎಡಕಿವಿ ಬಳಿ ಗಾಯವಾಗಿ ತೂತಾಗಿತ್ತು. ಈ ಪ್ರತಿಮೆಯಲ್ಲೂ ಈ ಗಾಯವನ್ನು ಕಾಣಬಹುದಾಗಿದೆ. ಅಷ್ಟು ನೈಜತೆಯನ್ನು ಕಲಾವಿದರು ಅರ್ಜುನನ ಪ್ರತಿಮೆಗೆ ನೀಡಿದ್ದಾರೆ.

ಬಳ್ಳೆ ಸಾಕಾನೆ ಶಿಬಿರದಲ್ಲೂ ಅರ್ಜುನನ ಪ್ರತಿಮೆ
ಅರ್ಜುನ ಆನೆಯ ಪ್ರತಿಮೆಯನ್ನು ನೈಜತೆಗೆ ಅತೀ ಸನಿಹವಾಗುವಂತೆ ರೂಪಿಸಿದ ಕೀರ್ತಿ ಮಂಗಳೂರಿನ ಕಲಾವಿದ ಧನಂಜಯ್ ಕುಂದರ್ ಪಡು ಅವರಿಗೆ ಸಲ್ಲಬೇಕು. ಮಂಗಳೂರು ಮಹಾಲಸಾ ಕಲಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಧನಂಜಯ್, ಈ ಮೊದಲು ನಾಗರಹೊಳೆ ರಕ್ಷಿತಾರಣ್ಯದ ಪ್ರವೇಶ ದ್ವಾರದಲ್ಲಿ ಬೋಗೇಶ್ವರ ಆನೆಯ ಬೖಹತ್ ಪ್ರತಿಕೃತಿ ರಚಿಸಿ ಗಮನ ಸೆಳೆದಿದ್ದರು. ಹೀಗಾಗಿ ಮತ್ತೆ ಅರಣ್ಯ ಇಲಾಖೆಯ ಅಧಿಕಾರಿಗಳು ಧನಂಜಯ್ ಅವರನ್ನು ಸಂಪರ್ಕಿಸಿ ಅರ್ಜುನ ಆನೆಯ ಎರಡು ಪ್ರತಿಕೃತಿ ರೂಪಿಸಲು ಕೋರಿದರು. ನಾಗರಹೊಳೆ ಬಳ್ಳೆ ಸಾಕಾನೆ ಶಿಬಿರದಲ್ಲೇ ಕೊನೆಯವರೆಗೂ ಇದ್ದ ಅರ್ಜುನನಿಗೆ ಆ ಕ್ಯಾಂಪ್ ಮೇಲಿನ ಪ್ರೀತಿ ಮತ್ತು ಕಾವಾಡಿಗಳಿಗೆ ಅರ್ಜುನನ ನೆನಪು ಸದಾ ಇರುವಂತೆ ಮಾಡಲು ಬಳ್ಳೆ ಕ್ಯಾಂಪ್‌ನಲ್ಲೂ ಅರ್ಜುನ ಆನೆಯ ಪ್ರತಿಕೃತಿ ರೂಪಿಸಲಾಗಿದೆ. ಎಸಳೂರು ಮತ್ತು ಬಳ್ಳೆ ಶಿಬಿರ ಎರಡು ಕಡೆಯೂ ಅರ್ಜುನನ ಪ್ರತಿಮೆಗಳನ್ನು ರೂಪಿಸುವ ಸವಾಲು ಧನಂಜಯ ಅವರ ಮೇಲಿತ್ತು. ಮೂರು ತಿಂಗಳ ಕಾಲ ಬಳ್ಳೆ ಕ್ಯಾಂಪ್‌ನಲ್ಲೇ ಠಿಕಾಣಿ ಹೂಡಿದ್ದ ಧನಂಜಯ ಅವರು ಅರಣ್ಯ ಅಧಿಕಾರಿಗಳು, ಮಾವುತ, ಕಾವಾಡಿಗರೊಂದಿಗೆ ಚರ್ಚಿಸಿ ಅರ್ಜುನನ ಫೊಟೋ- ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿ ಪ್ರತಿಮೆಯನ್ನು ರೂಪಿಸಿದ್ದಾರೆ.
ಒಂದೇ ಅಚ್ಚಿನಲ್ಲಿ ಅರ್ಜುನನ ಎರಡು ಪ್ರತಿಮೆಗಳು ಮೂಡಿ ಬಂದಿವೆ. ಕನ್ನಡಿಗರ ಕಣ್ಮಣಿ ಆನೆ ಕ್ಯಾಪ್ಟನ್ ಅರ್ಜುನನ ಪ್ರತಿಮೆಯನ್ನು ರೂಪಿಸುವ ಅವಕಾಶ ನನಗೆ ದೊರಕಿದ್ದು ನನ್ನ ಪುಣ್ಯ ಎಂದೇ ಭಾವಿಸುತ್ತೇನೆ ಎಂದು ಧನಂಜಯ್ ಪ್ರವಾಸಿ ಪ್ರಪಂಚದೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ದಾರಿ ಹೇಗೆ?
ಹಾಸನ ಜಿಲ್ಲೆಯ ಸಕಲೇಶಪುರದ ಎಸಳೂರು ಗ್ರಾಮದ ವ್ಯಾಪ್ತಿಯಲ್ಲಿನ ದಬ್ಬಳ್ಳಿಕಟ್ಟೆಯಲ್ಲಿ ಅರ್ಜುನನ ಪ್ರತಿಮೆ ಇದೆ. ಸಕಲೇಶಪುರದಿಂದ 30 ಕಿಮೀ ದೂರದಲ್ಲಿದೆ.
ಮಾಹಿತಿ ಪೆಟ್ಟಿಗೆ:
ಎಸಳೂರು ಗ್ರಾಮೀಣ ಪ್ರದೇಶ. ಹಾಗಾಗಿ ಊಟೋಪಚಾರಕ್ಕೆ ಉತ್ತಮ ಹೊಟೇಲ್‌ಗಳಿಲ್ಲ. ಸಕಲೇಶಪುರ, ಹಾಸನ, ಕೊಡ್ಲಿಪೇಟೆಯನ್ನು ಅವಲಂಭಿಸುವುದು ಉತ್ತಮ.
ಮಳೆಗಾಲದಲ್ಲಿ ಸಾಗುವವರು ಕೊಡೆ, ರೇನ್ ಕೋಟ್ ಕೊಂಡೊಯ್ಯುವುದು ಸೂಕ್ತ.
ಸ್ಥಳೀಯ ಮಾಹಿತಿ ಕೇಂದ್ರದ ಸಂಪರ್ಕ ಸಂಖ್ಯೆ - 9972900771