ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರವಾಸಿಗರ ಬೇಡಿಕೆಗೆ ತಕ್ಕಂತೆ ಕೆಎಸ್‌ಆರ್‌ಟಿಸಿ ಹೊಚ್ಚ ಹೊಸ ಯೋಜನೆಗಳನ್ನು ತಂದಿದ್ದು, ಬೆಂಗಳೂರಿನಿಂದ ಒಂದು ದಿನದ ಹೊಸ ಟೂರ್‌ ಪ್ಯಾಕೇಜ್‌ ಆರಂಭಿಸಿದೆ. ಚಿಕ್ಕತಿರುಪತಿ, ಕೋಟಿಲಿಂಗೇಶ್ವರ ದೇವಸ್ಥಾನಗಳೂ ಸೇರಿ ಕೋಲಾರದ 7 ಪ್ರಮುಖ ದೇವಸ್ಥಾನಗಳ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.

ಈಗಾಗಲೇ ಬೆಂಗಳೂರಿನಲ್ಲಿರುವ ಪ್ರಮುಖ ದೇವಾಲಯಗಳನ್ನು ಸೇರಿಸಿ, ದಿವ್ಯ ದರ್ಶನ, ಬೆಂಗಳೂರಿನಿಂದ ಗಗನಚುಕ್ಕಿ ಘಾಟಿ ಸುಬ್ರಹ್ಮಣ್ಯ,ತಲಕಾಡು, ಮೇಲುಕೋಟೆ ಸೇರಿದಂತೆ ಅನೇಕ ಸ್ಥಳಗಳಿಗೆ ಟೂರ್‌ ಪ್ಯಾಕೇಜ್‌ಗಳನ್ನು ಆರಂಭಿಸಿ ಯಶಸ್ವಿಯಾಗಿರುವ ಕೆಎಸ್‌ಆರ್‌ಟಿಸಿ, ಜೂನ್‌ 28 ರಿಂದ ಮತ್ತೊಂದು ಪ್ಯಾಕೇಜ್‌ ಆರಂಭಿಸಿದೆ. ಬಸ್‌ಗಳಲ್ಲಿ ತೆರಳಿ ಒಂದೇ ದಿನ ಕೋಲಾರ ಜಿಲ್ಲೆಯ ದೇವಸ್ಥಾನಗಳನ್ನು ದರ್ಶನ ಪಡೆಯಬೇಕು ಅಂದುಕೊಂಡವರಿಗಾಗಿ ಈ ಪ್ಯಾಕೇಜ್‌ ಪರಿಚಯಿಸಿದೆ.

ksrtc ashwamedha 1

ಪ್ಯಾಕೇಜ್‌ನಲ್ಲಿ ಯಾವೆಲ್ಲಾ ದೇವಸ್ಥಾನಕ್ಕೆ ಭೇಟಿ ?

ಈ ಪ್ಯಾಕೇಜ್‌ ಒಟ್ಟು 270 ಕಿ.ಮೀ ಒಳಗೊಂಡಿದ್ದು, ಬಸ್‌ ಬೆಳಿಗ್ಗೆ 6.30 ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8.30 ಕ್ಕೆ ವಾಪಸ್‌ ಆಗಲಿದೆ. ಕೋಲಾರದ ಚಿಕ್ಕತಿರುಪತಿ, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ, ಆವಣಿ ರಾಮಲಿಂಗೇಶ್ವರ ದೇವಸ್ಥಾನ, ಮುಳಬಾಗಿಲು ವೀರಾಂಜನೇಯ ಸ್ವಾಮಿ ದೇವಸ್ಥಾನ, ಕುರುಡುಮಲೆ ಗಣೇಶ ದೇವಸ್ಥಾನ, ಕೋಲಾರ ಕೋಲಾರಮ್ಮ ದೇವಸ್ಥಾನಗಳನ್ನು ಈ ವೇಳೆ ಭೆಟಿ ನೀಡಬಹುದು. ಆದರೆ ಈ ಪ್ರವಾಸ ಪ್ಯಾಕೇಜ್‌ ಶನಿವಾರ ಹಾಗೂ ಭಾನುವಾರ ಮಾತ್ರ ಲಭ್ಯ.

ರಾಜಹಂಸ ಹಾಗೂ ಅಶ್ವಮೇಧ ಕ್ಲಾಸಿಕ್ (ಶಕ್ತಿ ಯೋಜನೆ ಅನ್ವಯವಾಗಲ್ಲ) ಬಸ್‌ ಗಳಲ್ಲಿ ಈ ಪ್ರವಾಸಕ್ಕೆ ಅವಕಾಶವಿದ್ದು, ಟಿಕೆಟ್‌ ದರ ವಯಸ್ಕರಿಗೆ 600 ರು ಹಾಗೂ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ 450 ರು ನಿಗದಿ ಮಾಡಲಾಗಿದೆ. ಆದರೆ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ ಹಾಗೂ ರಾತ್ರಿ ಊಟವನ್ನು ಹೊರತುಪಡಿಸಿರಲಿದೆ ಈ ಪ್ಯಾಕೇಜ್‌.