ಹ್ಯಾಪಿ ’ಗುಂಯ್ಯ್’ ಇಯರ್!
ನಮ್ಮ ಕಿವಿಯ ಒಳಗಿನ ಭಾಗದಲ್ಲಿ 'ಯೂಸ್ಟಾಚಿಯನ್ ಟ್ಯೂಬ್' (Eustachian tube) ಎಂಬ ಸಣ್ಣ ನಳಿಕೆ ಇರುತ್ತದೆ. ಇದು ಕಿವಿಯ ಒಳಗಿನ ಗಾಳಿಯ ಒತ್ತಡ ಮತ್ತು ಹೊರಗಿನ ವಾತಾವರಣದ ಒತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆದರೆ ವಿಮಾನ ಟೇಕ್ ಆಫ್ ಆಗುವಾಗ ಮತ್ತು ಕೆಳಗೆ ಇಳಿಯುವಾಗ ವಾತಾವರಣದ ಒತ್ತಡ ಬಹಳ ವೇಗವಾಗಿ ಬದಲಾಗುತ್ತದೆ. ಆಗ ಕಿವಿಯ ಒಳಗಿನ ಗಾಳಿಯ ಒತ್ತಡ ಮತ್ತು ಹೊರಗಿನ ಗಾಳಿಯ ಒತ್ತಡದ ಸಮತೋಲನ ಏರುಪೇರಾಗುತ್ತದೆ. ಈ ಬದಲಾವಣೆಗೆ ಯೂಸ್ಟಾಚಿಯನ್ ಟ್ಯೂಬ್ ಸರಿಯಾಗಿ ಸ್ಪಂದಿಸುವುದಿಲ್ಲ. ಆಗ ಕಿವಿ ತಮಟೆಯ ಮೇಲೆ ಒತ್ತಡ ಉಂಟಾಗಿ ಕಿವಿ ಬ್ಲಾಕ್ ಆದ ಅನುಭವವಾಗುತ್ತದೆ.
-ಎನ್ನೆಸ್
ವಿಮಾನದಲ್ಲಿ ಪ್ರಯಾಣಿಸುವಾಗ ನೂರಕ್ಕೆ ತೊಂಬಂತ್ತೊಂಬತ್ತು ಅನುಭವಿಸುವ ವಿಷಯ ಇದು. ಇನ್ನೇನು ವಿಮಾನ ಟೇಕ್ ಆಫ್ ಆಯ್ತು ಅನ್ನುವಷ್ಟರಲ್ಲಿ ಕಿವಿ ಕಟ್ಟಿಕೊಂಡು ಬಿಡುತ್ತದೆ. ಜೋರಾಗಿ ಕೇಳ್ತಾ ಇದ್ದ ಅಕ್ಕಪಕ್ಕದವರ ಮಾತು, ವಿಮಾನದ ಶಬ್ದ ಎಲ್ಲವೂ ವಂದವಾಗುತ್ತದೆ. ಕಿವಿಯೊಳಗೆ ನೀರು ತುಂಬಿಕೊಂಡಿತೇನೋ ಎಂಬಂತೆ ಭಾರವಾದ ಅನುಭವ. ಮೊದಲ ಬಾರಿ ಈ ಅನುಭವವಾದಾಗ ಅರೆ ನಮ್ಮ ಕಿವಿಗೇನಾಯ್ತು ಎಂಬ ಆತಂಕವೂ ಹುಟ್ಟಬಹುದು. ಸ್ನಾನ ಮಾಡುವಾಗ ಕಿವಿಯಲ್ಲಿ ನೀರು ತುಂಬಿಕೊಂಡರೆ ಆಗುವಂಥ ಅನುಭವವೇ ವಿಮಾನದಲ್ಲಿ ನಿಮಗೆ ಪದೇಪದೇ ಆಗುತ್ತದೆ. ಹೀಗ್ಯಾಕೆ ಆಗುತ್ತದೆ? ಇದು ದೈಹಿಕ ಸಮಸ್ಯೆಯಾ? ಏನಿದಕ್ಕೆ ಪರಿಹಾರ?
ಗಾಬರಿ ಬೇಡ. ಇದು ಕಾಯಿಲೆಯೋ ಸಮಸ್ಯೆಯೋ ಅಲ್ಲವೇ ಅಲ್ಲ. ನಿಮಗೆ ಇದು ಕಾರಿನಲ್ಲಿ ಕಿಟಕಿ ಬಂದ್ ಮಾಡಿಕೊಂಡು ಎಸಿ ಆನ್ ಮಾಡಿಕೊಂಡು ಹೋಗುವಾಗಲೂ ಆಗಬಹುದು. ಎತ್ತರದ ಜಾಗಕ್ಕೆ ಹೋದಾಗಲೂ ಆಗಬಹುದು.ಇದೊಂದು ತಾತ್ಕಾಲಿಕ ವ್ಯತ್ಯಯ ಅಷ್ಟೆ. ಇದು ವೈದ್ಯರ ಬಳಿ ಹೋಗಿ ಸರಿಮಾಡಿಕೊಳ್ಳಬೇಕಾದ ಸಮಸ್ಯೆಯೂ ಅಲ್ಲ. ನಮ್ಮ ದೇಹದ ಮೆಕ್ಯಾನಿಸಂ ಹೇಗಿರುತ್ತದೆ ಅಂದರೆ ಅದನ್ನು ಸರಿಪಡಿಸಿಕೊಳ್ಳುವುದು ಹೇಗೆಂದು ಮೆದುಳು ದೇಹಕ್ಕೆ ಹೇಳಿಕೊಟ್ಟುಬಿಡುತ್ತದೆ. ನಾವೇ ಅದನ್ನು ಸರಿಪಡಿಸಿಕೊಂಡುಬಿಡುತ್ತೇವೆ.
ಯೆಸ್. ವಿಮಾನದಲ್ಲಿ ಹೀಗೆ ಕಿವಿ ಕಟ್ಟಿಕೊಳ್ಳುವುದಕ್ಕೆ ವೈದ್ಯಕೀಯ ಭಾಷೆಯಲ್ಲಿ ’ಇಯರ್ ಬರೋಟ್ರಾಮಾ’ ಅಂತ ಕರೆಯುತ್ತಾರೆ. ವಿಮಾನದಲ್ಲೇ ಹೆಚ್ಚು ಕಂಡುಬರುವುದರಿಂದ ಇದನ್ನು ಏರ್ ಪ್ಲೇನ್ ಇಯರ್ ಅಂತಲೂ ಕರೆಯುತ್ತಾರೆ
ಕಿವಿ ಏರ್ ಬ್ಲಾಕ್ ಆಗಲು ಕಾರಣ?

ನಮ್ಮ ಕಿವಿಯ ಒಳಗಿನ ಭಾಗದಲ್ಲಿ 'ಯೂಸ್ಟಾಚಿಯನ್ ಟ್ಯೂಬ್' (Eustachian tube) ಎಂಬ ಸಣ್ಣ ನಳಿಕೆ ಇರುತ್ತದೆ. ಇದು ಕಿವಿಯ ಒಳಗಿನ ಗಾಳಿಯ ಒತ್ತಡ ಮತ್ತು ಹೊರಗಿನ ವಾತಾವರಣದ ಒತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆದರೆ ವಿಮಾನ ಟೇಕ್ ಆಫ್ ಆಗುವಾಗ ಮತ್ತು ಕೆಳಗೆ ಇಳಿಯುವಾಗ ವಾತಾವರಣದ ಒತ್ತಡ ಬಹಳ ವೇಗವಾಗಿ ಬದಲಾಗುತ್ತದೆ. ಆಗ ಕಿವಿಯ ಒಳಗಿನ ಗಾಳಿಯ ಒತ್ತಡ ಮತ್ತು ಹೊರಗಿನ ಗಾಳಿಯ ಒತ್ತಡದ ಸಮತೋಲನ ಏರುಪೇರಾಗುತ್ತದೆ. ಈ ಬದಲಾವಣೆಗೆ ಯೂಸ್ಟಾಚಿಯನ್ ಟ್ಯೂಬ್ ಸರಿಯಾಗಿ ಸ್ಪಂದಿಸುವುದಿಲ್ಲ. ಆಗ ಕಿವಿ ತಮಟೆಯ ಮೇಲೆ ಒತ್ತಡ ಉಂಟಾಗಿ ಕಿವಿ ಬ್ಲಾಕ್ ಆದ ಅನುಭವವಾಗುತ್ತದೆ.
ಕೇಳ್ತೈತೆ ಕೇಳಕ್ಕಿಲ್ಲ!
ವಿಮಾನ ಹಾರುತ್ತಿದ್ದಂತೆ ಒಳಗೆ ಕೂತವರಿಗೆ ಇದ್ದಕ್ಕಿದ್ದಂತೆ ಕಿವಿಗೆ ಗಾಳಿ ತುಂಬಿಕೊಂಡಂತಾಗುತ್ತದೆ. ಬ್ಲಾಕ್ ಆದತಕ್ಷಣ ದಿಢೀರ್ ಯಾರೋ ಕಿವಿಗೆ ಹತ್ತಿ ತುರುಕಿದರೇನೋ ಎಂಬಂತೆ ಭಾಸವಾಗುತ್ತದೆ. ಇದು ಅಪಾಯಕಾರಿ ಏನಲ್ಲ. ಆದರೆ ಕೆಲವರಿಗೆ ಈಗಾಗಲೇ ಕಿವಿಯ ಸಮಸ್ಯೆ ಇದ್ದವರಿಗೆ ಸಣ್ಣ ನೋವು ಬರಬಹುದು. ಸಹಜವಾಗಿ ಶಬ್ದ ಬಹಳ ಕಡಿಮೆ ಕೇಳಿಸತೊಡಗುತ್ತದೆ. ಕಿವಿಯಲ್ಲಿ ಒಂದು ವಿಚಿತ್ರವಾದ ಬಡಿತವೂ ಕೇಳಿಬರಬಹುದು. ಇನ್ನು ಕೆಲವರಿಗೆ ಕಿವಿ ಕಟ್ಟಿಕೊಳ್ಳುತ್ತಿದ್ದ ಹಾಗೆ ತಲೆಸುತ್ತು ಬರುತ್ತದೆ.
ಪರಿಹಾರವೇ ಇಲ್ವಾ?

ಹಾಗಾದ್ರೆ ಈ ಕಿವಿಕಟ್ಟಿಕೊಳ್ಳುವಿಕೆಗೆ ಪರಿಹಾರವೇ ಇಲ್ವಾ ಅಂತ ನೀವು ಕೇಳಬಹುದು. ಬಹಳ ಸರಳ ಪರಿಹಾರಗಳೇ ಇವೆ.
ಆಕಳಿಸುವುದು ಮತ್ತು ನುಂಗುವುದು:
ಹೀಗೆ ಕಿವಿ ಬ್ಲಾಕ್ ಆದ ತಕ್ಷಣ ಒಮ್ಮೆ ಆಕಳಿಸಿಬಿಡಿ ಅಥವಾ ಎಂಜಲನ್ನು ಗುಟುಕ್ ಎಂದು ನುಂಗಿ .ಆಗ ಕಿವಿಯ ನಳಿಕೆ, ಅಂದ್ರೆ ಯೂಸ್ಟಾಚಿಯನ್ ಟ್ಯೂಬ್ ಓಪನ್ ಆಗುತ್ತದೆ. ಕಿವಿಯ ಮೇಲಿನ ಒತ್ತಡ ಹೋಗಿ ಕಿವಿ ಫ್ರೀ ಆಗುತ್ತದೆ.
ಚೂಯಿಂಗ್ ಗಮ್ ಅಥವಾ ಸ್ವೀಟು:
ವಿಮಾನ ಇಳಿಯುವ ಸಮಯದಲ್ಲಿ ಅಥವಾ ಟೇಕ್ ಆಫ್ ಸಮಯದಲ್ಲಿ ಚೂಯಿಂಗ್ ಗಮ್ ಅಗಿಯುವುದು ಅಥವಾ ಸಿಹಿ ಚಾಕೊಲೆಟ್ ಮೆಲ್ಲುವುದರಿಂದ ಬಾಯೊಳಗಿನ ಜೊಲ್ಲು ಜಾಸ್ತಿ ಉತ್ಪತ್ತಿಯಾಗುತ್ತದೆ. ಅದನ್ನು ನುಂಗಿದಲ್ಲಿ ಕಿವಿ ತೆರೆದುಕೊಳ್ಳುತ್ತದೆ.
ವಲ್ಸಾಲ್ವಾ ಟ್ರಿಕ್!
ಕೆಲವರಿಗೆ ಆಕಳಿಕೆಯಿಂದ, ಉಗುಳು ನುಂಗೋದ್ರಿಂದ ಕಿವಿಯ ಬ್ಲಾಕ್ ಓಪನ್ ಆಗುವುದಿಲ್ಲ. ಅವರಿಗಾಗಿ ಒಂದು ಚಿಕ್ಕ ವ್ಯಾಯಾಮವಿದೆ. ನಿಮ್ಮ ಮೂಗಿನ ಹೊಳ್ಳೆಗಳನ್ನು ಬೆರಳುಗಳಿಂದ ಗಟ್ಟಿಯಾಗಿ ಹಿಡಿದು, ಬಾಯಿ ಮುಚ್ಚಿ, ಮೆಲ್ಲಗೆ ಮೂಗಿನ ಮೂಲಕ ಗಾಳಿಯನ್ನು ಹೊರಹಾಕಲು ಪ್ರಯತ್ನಿಸಿ (ಮೂಗು ಸ್ವಚ್ಛಗೊಳಿಸುವಂತೆ). ಇದು ಕಿವಿಯ ನಳಿಕೆಗಳನ್ನು ತೆರೆಯಲು ಸಹಾಯ ಮಾಡುತ್ತದೆ.
ಪ್ಲೀಸ್ ನೋಟ್
ವಿಮಾನ ಟೇಕ್ ಆಫ್ ಆಗುವಾಗ ಅಥವಾ ಲ್ಯಾಂಡ್ ಆಗುವಾಗ ನಿದ್ರೆ ಮಾಡಬೇಡಿ. ಆ ಸಮಯದಲ್ಲಿ ನಿದ್ರೆಯಲ್ಲೇ ಕಿವಿ ಕಟ್ಟಿಕೊಂಡರೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು. ಮತ್ತೊಂದು ಉಪಾಯವೆಂದರೆ ವಿಮಾನಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಫಿಲ್ಟರ್ಡ್ ಇಯರ್ ಪ್ಲಗ್ ಗಳನ್ನು ಬಳಸುವುದರಿಂದ ಇಯರ್ ಬ್ಲಾಕ್ ಸಮಸ್ಯೆಯನ್ನು ದೂರವಿಡಬಹುದು.
ನವಜಾತ ಶಿಶು ಮತ್ತು ಮಕ್ಕಳಿಗೆ?
ಹೌದು. ನಾವು ಕೆಲವು ಸಿಂಪಲ್ ಕಸರತ್ತುಗಳ ಮೂಲಕ ಕಿವಿಯನ್ನು ಫ್ರೀ ಮಾಡ್ಕೋಬಹುದು. ಮಕ್ಕಳು ಮತ್ತು ಪುಟ್ಟ ಹಸುಗೂಸುಗಳು ಏನು ಮಾಡಬೇಕು? ಮೊದಲೇ ಮಕ್ಕಳ ಕಿವಿಯ ಅವರ ಜವಾಬ್ದಾರಿ ತಾಯಿಯದ್ದು. ಮೊದಲೇ ಮಕ್ಕಳ ಯೂಸ್ಟಾಚಿಯನ್ ಟ್ಯೂಬ್‌ಗಳು ಚಿಕ್ಕದಾಗಿರುತ್ತವೆ. ಹೀಗಾಗಿ ಅದು ಇನ್ನೂ ಬೇಗ ಕಟ್ಟಿಕೊಳ್ಳುತ್ತದೆ. ಇದನ್ನು ತಪ್ಪಿಸಲು ತಾಯಂದಿರು ಆ ಸಮಯದಲ್ಲಿ ಮಕ್ಕಳಿಗೆ ಹಾಲು ಅಥವಾ ನೀರು ಕುಡಿಸಬೇಕು.ಚಿಕ್ಕ ಮಕ್ಕಳಿಗೆ ಸಿಪ್ಪರ್ ಅಥವಾ ಪೆಸಿಫೈಯರ್ ಕೊಟ್ಟರೆ, ಅವರು ಅದನ್ನು ಗುಟುಕರಿಸುವುದರಿಂದ ಕಿವಿಯ ವಾಯುಮಾರ್ಗ ಸರಾಗವಾಗುತ್ತದೆ.
ಡೇಂಜರ್ ಯಾರಿಗೆ?
ಶೀತ, ಅಸ್ತಮಾ, ಸೈನಸ್ ಸೋಂಕು ಅಥವಾ ಕಿವಿಯ ಸೋಂಕು ಇದ್ದರೆ, ವಿಮಾನ ಪ್ರಯಾಣದ ಸಮಯದಲ್ಲಿ ಕಿವಿ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚು. ಇಂಥ ಸಮಯದಲ್ಲಿ ವೈದ್ಯರ ಸಲಹೆಯ ಮೇರೆಗೆ 'ಡಿಕಂಜೆಸ್ಟೆಂಟ್' (Decongestant) ಸ್ಪ್ರೇ ಅಥವಾ ಮಾತ್ರೆಗಳನ್ನು ಬಳಸಬಹುದು. ವಿಮಾನ ಇಳಿದ ನಂತರವೂ ಕಿವಿ ನೋವು ಅಥವಾ ಬ್ಲಾಕ್ ಆಗಿರುವುದು ಕೆಲವು ದಿನಗಳವರೆಗೆ ಮುಂದುವರಿದರೆ ತಕ್ಷಣವೇ ಇಎನ್‌ಟಿ (ENT) ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.