-ಎನ್ನೆಸ್

ಬಸ್ ಸ್ಟ್ಯಾಂಡ್ ನಲ್ಲೋ ರೈಲಿನಲ್ಲೋ ಬ್ಯಾಗ್ ಕಳೆದುಕೊಂಡರೆ ವಾಪಸ್ ಸಿಗುವುದು ಬಹುತೇಕ ಅಸಾಧ್ಯ. ಆಟೋ ಕ್ಯಾಬ್ ಮುಂತಾದೆಡೆ ಕಳೆದುಕೊಂಡರೆ ಕಡೇ ಪಕ್ಷ ಸಿಗುವ ಭರವಸೆ ಇಟ್ಟುಕೊಳ್ಳಬಹುದಷ್ಟೆ. ಖಾತರಿ ಇರುವುದಿಲ್ಲ. ಸಿಕ್ಕರೂ ಬ್ಯಾಗ್ ಯಥಾಸ್ಥಿತಿಯಲ್ಲಿ ಸಿಗುವುದು ಅಪರೂಪ. ಆದರೆ ವಿಮಾನದಲ್ಲೋ, ವಿಮಾನ ನಿಲ್ದಾಣದಲ್ಲೋ ನೀವು ಬ್ಯಾಗ್ ಕಳೆದುಕೊಂಡರೆ ಅಥವಾ ಮರೆತುಬಿಟ್ಟುಬಂದರೆ ನೀವು ಗಾಬರಿ ಪಡುವ ಅಗತ್ಯವಿಲ್ಲ. ಜಗತ್ತಿನ ಯಾವ ಏರ್ ಪೋರ್ಟ್ ಕೂಡ ಈ ವಿಷಯದಲ್ಲಿ ಅಸುರಕ್ಷಿತವಿಲ್ಲ.

ಇದನ್ನೂ ಓದಿ: ಇದು ವಿಮಾನ ಯಾನದ ಜಮಾನ

ನೇರವಾಗಿ ವಿಷಯಕ್ಕೆ ಬರೋಣ. ವಿಮಾನದಿಂದ ಇಳಿಯುತ್ತೀರಿ. ನಿಮ್ಮ ಲಗೇಜ್ ಪ್ರತ್ಯೇಕವಾಗಿ ಬಂದು ಏರ್ ಪೋರ್ಟ್ ನ ಲಗೇಜ್ ಬೆಲ್ಟ್ ಅಥವಾ ಕನ್ವೇಯರ್ ಬೆಲ್ಟ್ ಮೇಲೆ ಬಂದು ಬೀಳುತ್ತದೆ. ಮೂರೋ ನಾಲ್ಕೋ ಬ್ಯಾಗ್ ಇರುವ ನೀವು ಗಡಿಬಿಡಿಯಲ್ಲಿ ಒಂದು ಬ್ಯಾಗ್ ಮರೆತು ಮನೆಗೆ ಹೋಗಿಬಿಡುತ್ತೀರಿ. ಹಾಗೆ ಮರೆತು ಹೋದ ಬ್ಯಾಗ್ ಮತ್ತೆ ಸಿಗುತ್ತದೆಯೇ? ಅದರ ಕಥೆ ಏನಾಗುತ್ತದೆ?

ಬ್ಯಾಗ್ ಗಳು ಅದರ ವಾರಸುದಾರರು ಎತ್ತಿಕೊಳ್ಳುವ ತನಕವೂ ಕನ್ವೇಯರ್ ಬೆಲ್ಟ್ ಮೇಲೆ ಸುತ್ತುತ್ತಲೇ ಇರುತ್ತವೆಯೇ?

Untitled design - 2026-03-06T145807.610

ಗಾಬರಿ ಬೇಡ

ಕನ್ವೇಯರ್ ಬೆಲ್ಟ್ ಮೇಲೆ ಬಂದ ಮೊದಲ ಇಪ್ಪತ್ನಾಲ್ಕು ಗಂಟೆ ಆ ಬ್ಯಾಗ್ ಅಲ್ಲೇ ಸುತ್ತಾಡುತ್ತದೆ. ಆದರೆ ಆ ನಂತರ ಅದನ್ನು ’ಲಾಸ್ಟ್ ಅಂಡ್ ಫೌಂಡ್’ ವಿಭಾಗಕ್ಕೆ ಕಳಿಸಲಾಗುತ್ತದೆ ಅಥವಾ ನೀವು ಯಾವ ವಿಮಾನದಲ್ಲಿ ಪಯಣಿಸಿ ಬಂದಿದ್ದೀರೋ ಆ ವಿಮಾನದ ಲಗೇಜ್ ಆಫೀಸಿಗೆ ಕಳಿಸಲಾಗುತ್ತದೆ. ಆ ಬ್ಯಾಗ್ ಮೇಲಿರುವ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಗರಿಷ್ಠ 72 ಗಂಟೆಗಳ ಕಾಲ ಅದರ ಸರಿಯಾದ ವಾರಸುದಾರರಿಗಾಗಿ ಬ್ಯಾಗನ್ನು ಕಾಯ್ದುಕೊಳ್ಳುತ್ತಾರೆ.

ಹಾಗಂತ ಪ್ರಯಾಣಿಕರೇ ಕರೆಮಾಡಲಿ ಅಥವಾ ಬಂದು ಕೊಂಡೊಯ್ಯಲಿ ಎಂದು ಅಧಿಕಾರಿಗಳು ಕಾಯುತ್ತಾ ಕೂರುವುದಿಲ್ಲ. ಪ್ರಯಾಣಿಕರ ಬ್ಯಾಗೇಜ್ ಮೇಲಿರುವ ಟ್ಯಾಗ್, ನಿಮ್ಮ ಇಮೇಲ್, ಫೋನ್ ನಂಬರ್ ಇತ್ಯಾದಿಗಳನ್ನು ಬಳಸಿ ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಕನೆಕ್ಟಿಂಗ್ ಫ್ಲೈಟ್ ಹಿಡಿಯುವ ಆತುರದಲ್ಲಿ ಬ್ಯಾಗ್ ಮಿಸ್ ಮಾಡಿಕೊಂಡು ಇನ್ನೊಂದು ಸ್ಥಳಕ್ಕೆ ಹೋಗಿಬಿಟ್ಟಿದ್ದರೆ, ಅವರಿರುವ ಜಾಗಕ್ಕೇ ಲಗೇಜ್ ಕಳಿಸುವ ಏರ್ಪಾಟನ್ನೂ ಅಧಿಕಾರಿಗಳು ಮಾಡುತ್ತಾರೆ. ಹೀಗಾಗಿ ಬ್ಯಾಗ್ ಮಿಸ್ ಆದಾಗ ಗಾಬರಿ ಆಗುವ

ಅಗತ್ಯವಿಲ್ಲ.

ಬ್ಯಾಗ್ ಓಪನ್ ಮಾಡಬಹುದು!

ಕೆಲವೊಮ್ಮೆ ಬ್ಯಾಗ್ ಮಿಸ್ ಆದಾಗ ವಾರಸುದಾರರು ದಿಕ್ಕು ತೋಚದೇ ಅಥವಾ ನಿರ್ಲಕ್ಷ್ಯದಿಂದ ಅಥವಾ ಕಳೆದೇಹೋಯ್ತೆಂದು ಕೈಚೆಲ್ಲಿಬಿಡುತ್ತಾರೆ. ಆಗ ಏನಾಗುತ್ತದೆ? ಸಾಮಾನ್ಯವಾಗಿ, ಪ್ರಯಾಣಿಕರೇ ಬ್ಯಾಗ್ ಮಿಸ್ ಆಗಿದೆಯೆಂದು ಕಂಪ್ಲೇಂಟ್ ಕೊಟ್ಟರೆ, 21ದಿನಗಳ ಒಳಗಾಗಿ ಹುಡುಕಿ ಹಿಂದಿರುಗಿಸುವುದಾಗಿ ಅಧಿಕಾರಿಗಳು ಕಾಲಾವಕಾಶ ಪಡೆಯುತ್ತಾರೆ. ಆಗ ಕೂಡ ಸಿಗದಿದ್ದರೆ, ಅದು ಕಳೆದುಹೋಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಹುಡುಕುವ ಶ್ರಮ ಹಾಕಿದ್ದಕ್ಕಾಗಿ ಮತ್ತು ಪ್ರಯಾಣಿಕರ ಬೇಜವಾಬ್ದಾರಿಗಾಗಿ ಪ್ರಯಾಣಿಕರಿಂದಲೇ ಶುಲ್ಕ ವಸೂಲು ಮಾಡಲಾಗುತ್ತದೆ.

ಬ್ಯಾಗ್ ಕಳೆದೇಹೋಯ್ತೆಂದು ಆಸೆ ಬಿಟ್ಟು, ವಿಚಾರಣೆಗಾಗಿ ಕರೆ ಕೂಡ ಮಾಡದೇ, ಅಧಿಕಾರಿಗಳ ಕರೆಗೂ ಉತ್ತರಿಸದೇ ಕೆಲವೊಮ್ಮೆ ಬ್ಯಾಗ್ ಗಳು ಹಾಗೆಯೇ ಉಳಿದುಕೊಂಡುಬಿಡ್ತವೆ. ಅಂಥ ಸಮಯದಲ್ಲಿ ಕೂಡ ಅಧಿಕಾರಿಗಳ ಪ್ರಯತ್ನ ಮುಂದುವರೆಯುತ್ತದೆ. ಸುಮಾರು ತೊಂಬತ್ತು ದಿನಗಳ ತನಕ ಬ್ಯಾಗ್ ಗಳನ್ನು ಗೋಡೌನ್ ನಲ್ಲಿ ಇರಿಸಿಕೊಳ್ಳಲಾಗುತ್ತದೆ. ಆಗ ಬ್ಯಾಗ್ ಓಪನ್ ಮಾಡಿ ಅದರಲ್ಲೇನಾದರೂ ಬೋರ್ಡಿಂಗ್ ಪಾಸ್, ವಿಳಾಸ, ಗುರುತಿನ ಚೀಟಿ ಸಿಗಬಹುದಾ ಎಂದು ನೋಡುತ್ತಾರೆ. ಒಂದು ವೇಳೆ ಬೆಲೆಬಾಳುವ ವಸ್ತುಗಳಿದ್ದರೆ, ಅಥವಾ ಅತ್ಯಂತ ಅಗತ್ಯದ ವಸ್ತುಗಳಿದ್ದರೆ ಆಗ ಆ ಮಾಲೀಕರನ್ನು ಪತ್ತೆ ಹಚ್ಚಲು ಮತ್ತಷ್ಟು ವಿಶೇಷ ಪ್ರಯತ್ನಗಳನ್ನು ನಡೆಸಲಾಗುತ್ತದೆ.

ಹರಾಜು ಹಾಕ್ತಾರೆ!

ತೊಂಬತ್ತು ದಿನಗಳಾದರೂ ಬ್ಯಾಗ್ ನ ಹಕ್ಕುದಾರರು ಬಾರದೇ ಹೋದಲ್ಲಿ ಅನಿವಾರ್ಯವಾಗಿ ಅದನ್ನು ಅನ್ ಕ್ಲೈಮ್ಡ್ ಪ್ರಾಪರ್ಟಿ ಎಂದು ಘೋಷಿಸಲಾಗುತ್ತದೆ. ಹಾಗೆ ಘೋಷಿಸಿದ ನಂತರ ಅಧಿಕಾರಿಗಳು ಆಥವಾ ವಿಮಾನ ಸಂಸ್ಥೆಯವರು ಅದನ್ನು ಹರಾಜು ಹಾಕಬಹುದು ಅಥವಾ ದತ್ತಿ ಸಂಸ್ಥೆಗಳಿಗೆ ದಾನವಾಗಿ ಕೊಡಬಹುದು. ಅಮೆರಿಕದಲ್ಲಿ ಅಂಥ ಬ್ಯಾಗುಗಳಲ್ಲಿರುವ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವ ಅಂಗಡಿಗಳಿವೆ.

ಒಂದು ವೇಳೆ ಬ್ಯಾಗ್ ನ ಒಳಗೆ ಆಹಾರಪದಾರ್ಥಗಳು ಅಥವಾ ಕೊಳೆಯುವ ವಸ್ತುಗಳಿವೆ ಎಂದು ಗೊತ್ತಾದಲ್ಲಿ ವಾಸನೆ ಮತ್ತು ಗಲೀಜಾಗುವದನ್ನು ತಡೆಯುವ ಸಲುವಾಗಿ ಬ್ಯಾಗ್ ತೆರೆದು ಅದನ್ನು ತ್ಯಾಜ್ಯ ಸಂಗ್ರಹಕ್ಕೆ ಎಸೆಯಲಾಗುತ್ತದೆ. ವಿಮಾನ ನಿಲ್ದಾಣದ ನೈರ್ಮಲ್ಯದ ದೃಷ್ಟಿಯಿಂದ ಇದು ಅನಿವಾರ್ಯ.

Untitled design - 2026-03-06T145819.877

ಟ್ಯಾಗ್ ಇಲ್ಲದದ್ರೆ?

ಕೆಲವೊಮ್ಮೆ ಬ್ಯಾಗ್ ಮೇಲೆ ಟ್ಯಾಗ್ ಇರುವುದಿಲ್ಲ. ಬ್ಯಾಗ್ ಒಳಗೂ ಯಾವುದೇ ಗುರುತಿನ ಮಾಹಿತಿ ಸಿಗುವುದಿಲ್ಲ. ಆದರೆ ವಾರಸುದಾರರು ತಮ್ಮ ಬ್ಯಾಗ್ ಮಿಸ್ ಆಗಿದೆ ಎಂದು ಕಂಪ್ಲೇಂಟ್ ಕೊಟ್ಟಿರುತ್ತಾರೆ. ಇಂಥ ಸಮಯದಲ್ಲಿ ಅಧಿಕಾರಿಗಳು, ಬ್ಯಾಗ್ ನ ಬಣ್ಣ, ಗಾತ್ರ, ಕಂಪನಿ ಹೆಸರು, ಲಾಕ್ ನ ಕೋಡ್, ಒಳಗಿರುವ ವಸ್ತುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ನಿಜವಾದ ವಾರಸುದಾರರು ಅವರೇ ಎಂದು ಖಚಿತ ಪಡಿಸಿಕೊಳ್ಳುತ್ತಾರೆ.

ಬ್ಯಾಗ್ ಮಿಸ್ ಆದಾಗ ಸುಲಭವಾಗಿ ವಾಪಸ್ ಪಡೆಯಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬಹುದು. ತಮ್ಮದೇ ಆದ ರಿಬ್ಬನ್ ಅಥವಾ ಟ್ಯಾಗ್ ಕಟ್ಟುವುದು. ಫೋನ್ ನಂಬರ್ ಮತ್ತು ಹೆಸರನ್ನು ಬ್ಯಾಗ್ ನ ವಿವಿಧ ಭಾಗದಲ್ಲಿ ಬರೆದಿರುವುದು ಅಥವಾ ಅಂಟಿಸಿರುವುದು ಚಿಕ್ಕ ಫೊಟೋ ಸಮೇತ ಸ್ವವಿವರ ಬರೆದಿರುವುದು ಇವೆಲ್ಲ ಒಳ್ಳೆಯ ಉಪಾಯಗಳು. ಇತ್ತೀಚಿನ ತಂತ್ರಜ್ಞಾನದ ಉಪಯೋಗ ಪಡೆಯುವುದಾದರೆ, ಆಪಲ್ ಏರ್ ಟ್ಯಾಗ್ ನಂಥ ಟ್ರ್ಯಾಕಿಂಗ್ ಸಾಧನಗಳನ್ನು ಬ್ಯಾಗ್ ನಲ್ಲಿ ಇರಿಸಬಹುದು. ಆಗ ಬ್ಯಾಗ್ ಎಲ್ಲಿದೆ ಎಂದು ಫೋನ್ ಮೂಲಕವೇ ಟ್ರ್ಯಾಕ್ ಮಾಡಬಹುದು.