ಆ ದಿನ ವರ್ಕ್‌ ಫ್ರಂ ಹೋಮ್‌ನಲ್ಲಿದ್ದೆ. ರಜೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿದ್ದರಿಂದ ಮನಸ್ಸು ದಣಿದಿತ್ತು. ಚೇರ್‌ನ ಹಿಂದಕ್ಕೆ ಒರಗಿ ಆಲಸ್ಯದಿಂದ ಮೈಮುರಿದು ಒಂದು ಕ್ಷಣ ಕಣ್ಮುಚ್ಚಿಕೊಂಡೆ. ʼಟಿಕ್‌ʼ ಎನ್ನುವ ಶಬ್ದ ಮಾಡುತ್ತ ವ್ಯಾಟ್ಸ್‌ಆ್ಯಪ್‌ಗೆ ಮೆಸೇಜೊಂದು ಬಂತು. ಮೊಬೈಲ್‌ ಕೈಗೆತ್ತಿಕೊಂಡೆ. ಗೆಳೆಯ ಕಿರಣ್‌ ಮೆಸೆಜ್‌ ಮಾಡಿದ್ದ. ʼʼಮುಂದಿನ ಸೋಮವಾರ ಫ್ರೀ ಇದ್ಯಾ? ಇಲ್ಲದಿದ್ದರೆ ಫ್ರೀ ಮಾಡ್ಕೋ. ಟ್ರಿಪ್‌ ಪ್ಲ್ಯಾನ್‌ ಮಾಡಿದ್ದೇನೆʼʼ ಎಂದ.

ತೂಕಡಿಸುತ್ತಿದ್ದವನಿಗೆ ಹಾಸಿಗೆ ಹಾಸಿ ಕೊಟ್ಟಂತಾಯ್ತು. ನಾನೂ ಯಾವುದಾದರೂ ಟ್ರಿಪ್‌ ಪ್ಲ್ಯಾನ್‌ ಮಾಡಬೇಕು ಅಂದುಕೊಂಡಿದ್ದೆ. ಈ ಜಂಜಡಗಳಿಂದೆಲ್ಲ ಒಂದು ದಿನವಾದರೂ ಮುಕ್ತಿ ಬೇಕಿತ್ತು. ಮಚ್‌ ನೀಡೆಡ್‌ ಬ್ರೇಕ್‌ ಅಂತಾರಲ್ಲ ಹಾಗೆ. ನಮ್ಮ ಗ್ರೂಪಲ್ಲಿ ಟೂರ್‌ ಪ್ಲ್ಯಾನ್‌ ಮಾಡೋದ್ರಲ್ಲಿ ಕಿರಣ್‌ ಎತ್ತಿದ ಕೈ. ಅವನು ಆಗಾಗ ಎಲ್ಲಿಗಾದರೂ ಹೋಗುತ್ತಿರುತ್ತಾನೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ನಾವೆಲ್ಲ ಟ್ರಿಪ್‌ ತಪ್ಪಿಸಿ ಬಳಿಕ ಆತನ ವ್ಯಾಟ್ಸ್‌ಆ್ಯಪ್‌ ಸ್ಟೇಟಸ್‌, ಫೇಸ್‌ಬುಕ್‌ ಪೋಸ್ಟ್‌ ನೋಡಿ ಸಪ್ಪೆ ಮೋರೆ ಮಾಡಿಕೊಳ್ಳುವುದೂ ಇದೆ. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಮಿಸ್‌ ಮಾಡಬಾರದು ಎಂದು ನಿರ್ಧರಿಸಿದೆ.

ರಜೆಗೆ ಅಪ್ಲೈ ಮಾಡಿದೆ. ಬಿಡುವಿಲ್ಲದೆ ಕೆಲಸ ಮಾಡಿದ್ನಲ್ಲ. ಹೀಗಾಗಿ ಕೂಡಲೇ ರಜೆ ಮಂಜೂರಾಯ್ತು. ತಕ್ಷಣ ʼʼಡನ್‌ʼʼ ಎಂದು ಕಿರಣಂಗೆ ಮೆಸೆಜ್‌ ಹಾಕಿದೆ. ಆ ಕಡೆಯಿಂದ ಥಮ್ಸ್‌ಅಪ್‌ ಬಂತು. ಅಲ್ಲಿಗೆ ನಮ್ಮ ಟ್ರಿಪ್‌ ಮೋಡ್‌ ಆನ್‌ ಆಯ್ತು.

ಈ ಬಾರಿ ನಮ್ಮೊಂದಿಗೆ ಜತೆಯಾದವರು ಪ್ರವೀಣ್‌ ಮತ್ತು ರಾಮಚಂದ್ರ. ಹೀಗೆ ನಾಲ್ವರನ್ನು ಹೊತ್ತ ಕಾರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ತಾಣ ಕವಲೇದುರ್ಗದ ಕಡೆಗೆ ಓಡತೊಡಗಿತು. ಅದು ಆಗಸ್ಟ್‌ ತಿಂಗಳು. ತುಂತುರು ಮಳೆ ಒಂದೊಳ್ಳೆ ಸಾಥ್‌ ಕೊಡ್ತು. ಆಗುಂಬೆ ತಲುಪಿದಾಗ ಒದ್ದೆ ನೆಲ, ಮುಸುಕಿದ ಮಂಜು, ಎಲ್ಲೆಲ್ಲೂ ಹಸಿರು, ತಂಪು ತಂಪು ವಾತಾವರಣ, ಮೈ ನಡುಗಿಸುವ ಕುಳಿರ್ಗಾಳಿ...ಸ್ವರ್ಗಕ್ಕೆ ಬಂದ ಅನುಭವವಾಯ್ತು. ಅಲ್ಲೊಂದಷ್ಟು ಸಮಯ ಕಳೆದು ಪಯಣ ಮುಂದುವರಿಯಿತು.

kavale durga new

ಮಲೆನಾಡ ಸೊಬಗು ತೀರ್ಥಹಳ್ಳಿಯಿಂದ ಸುಮಾರು 18 ಕಿ.ಮೀ. ದೂರದ ಕವಲೇದುರ್ಗ ಕೋಟೆಯ ಬುಡಕ್ಕೆ ಬಂದು ತಲುಪಿದೆವು. ಆಗಷ್ಟೇ ಮಳೆ ಸುರಿದು ನಿಂತಿತ್ತು. ಬೀಸಿ ಬಂದ ತಂಗಾಳಿ, ಮರದ ಎಲೆಯಿಂದ ತೊಟ್ಟಿಕ್ಕಿದ ನೀರ ಹನಿ ಸ್ವಾಗತ ಕೋರಿದವು. ವಾರದ ದಿನವಾದ್ದರಿಂದ ಹೆಚ್ಚು ಪ್ರವಾಸಿಗರು ಇರಲಿಲ್ಲ. ಅಲ್ಲಿಂದ ಸುಮಾರು 2 ಕಿ.ಮೀ. ಕಾಲ್ನಡಿಗೆಯಿಂದ ಸಾಗಬೇಕು. ಅಲ್ಲಿದ್ದ ಅಂಗಡಿಯಿಂದ ತಲೆಗೆ ಹೊದ್ದುಕೊಳ್ಳುವ ಪ್ಲಾಸ್ಟಿಕ್ ಕೆಡೆಂಜೋಲು ಅನ್ನು ಬಾಡಿಗೆಗೆ ಪಡೆದ ನಾವು ಒಂದು ಅವರ್ನನೀಯ ಅನುಭೂತಿ ಪಡೆಯಲು ಕೋಟೆಯತ್ತ ಹೆಜ್ಜೆ ಹಾಕಿದೆವು. ಗದ್ದೆಯ ನಡುವಿನ ಪುಟ್ಟ ಕಾಲು ದಾರಿಯಿಂದ ಬೆಟ್ಟದ ಕಡೆಗೆ ಸಾಗುವಾಗ ನಮ್ಮ ಬಾಲ್ಯ ಕಣ್ಣ ಮುಂದೆ ಬಂತು. ಬಾಲ್ಯದ ದಿನಗಳೇ ಚೆಂದ ಎಂದು ಮಾತನಾಡಿಕೊಂಡು ಬೆಟ್ಟದ ಕಾಲು ದಾರಿಗೆ ತಲುಪಿದೆವು.

ಅದು ಕಲ್ಲುಗಳಿಂದ ಕೂಡಿದ ದಾರಿಯಾಗಿದ್ದರಿಂದ ಜಾರುತ್ತದೆ, ಎಚ್ಚರಿಕೆಯಿಂದ ನಡೆಯುವಂತೆ ಅಂಗಡಿಯವರು ಮೊದಲೇ ಸೂಚಿಸಿದ್ದರಿಂದ ಅದನ್ನು ಅಕ್ಷರಶಃ ಪಾಲಿಸಿದೆವು. ಕಾಡಿನ ದಿವ್ಯ ಮೌನಕ್ಕೆ ಮನ ಸೋತೆವು. ಮಳೆ ಸುರಿದು ಚಿಗಿತುಕೊಂಡಿದ್ದ ಹಸಿರು ಕಣ್ಣಿಗೆ ತಂಪನೀಯುತ್ತಿದ್ದರೆ, ಮನಸ್ಸು ಹಗುರವಾಗಿತ್ತು. ಪ್ರಕೃತಿಯ ಮೌನ ಆಲಿಸುತ್ತು, ಜೀರುಂಡೆಯ ಧ್ವನಿಗೆ ಕಿವಿಯಾಗುತ್ತ ಬೆರಗಿನಿಂದ ಕವಲೇದುರ್ಗ ಕೋಟೆ ತಲುಪಿದೆವು.

kavaledurga-fort-enterance

ಮುಗಿಲ ಚುಂಬಿಸುವ ಈ ಕೋಟೆ ಭುವನಗಿರಿ ದುರ್ಗ ಎಂಬ ಹೆಸರೂ ಇದೆ. ವೆಂಕಟಪ್ಪ ನಾಯಕ (ಕ್ರಿ.ಶ. 1588-1679) ಈ ಕೋಟೆಯನ್ನು ನಿರ್ಮಿಸಿದನು. ಕೋಟೆಯ ಆವರಣದಲ್ಲಿ ಅರಮನೆ, ಮಹತ್ತಿನಮಠ, ಟಂಕಶಾಲೆ, ಆನೆ ಮತ್ತು ಕುದರೆಲಾಯ, ಕೊಳ ಇದೆ. ನೈಸರ್ಗಿಕವಾದ ಗುಡ್ಡದ ಬೃಹತ್ ಕಣಶಿಲೆಯ ಕಲ್ಲುಗಳಿಂದ ಇದನ್ನು ನಿರ್ಮಿಸಲಾಗಿದೆ. ಶಿಥಿಲಗೊಂಡ ಅರಮನೆ ನಿವೇಶನಗಳು ಮತ್ತು ಕಟ್ಟಡಗಳ ಅವಶೇಷ ಈಗಲೂ ಇದೆ.

ಈ ದುರ್ಗದ ಮಧ್ಯಭಾಗದಲ್ಲಿ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಾಲಯವಿದೆ. ಈ ದೇವಾಲಯವು ತಲವಿನ್ಯಾಸದಲ್ಲಿ ಗರ್ಭಗೃಹ, ನಂದಿಮಂಟಪ ಹಾಗೂ ಮುಖಮಂಟಪವನ್ನು ಹೊಂದಿದೆ. ಯಾವುದೇ ತಂತ್ರಜ್ಞಾನಗಳು ಇಲ್ಲದ ಆ ಕಾಲದಲ್ಲಿ ಕೋಟೆಯನ್ನು ಕಟ್ಟಿದ ರೀತಿಯೇ ಅದ್ಭುತ ಎಂದು ಉದ್ಘರಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡೆವು. ಅಲ್ಲಿ ಒಂದಷ್ಟು ಹೊತ್ತು ಕಳೆದು ಕೋಟೆಯಿಂದ ಕೆಳಗಿಳಿದೆವು.

kavaledurga

ಅದಾದ ಬಳಿಕ ನಾವು ಅಲ್ಲಿಂದ ಸಾಗರದಲ್ಲಿರುವ ಹೆಗ್ಗೋಡಿನ ನೀನಾಸಂಗೆ ತೆರಳಿದೆವು. ರಂಗಭೂಮಿ, ಸಿನಿಮಾ ಮತ್ತು ಪ್ರಕಾಶನ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಾಂಸ್ಕೃತಿಕ ಸಂಸ್ಥೆ ಇದು. ಇದರ ಪೂರ್ಣ ಹೆಸರು ಶ್ರೀ ನೀಲಕಂಠೇಶ್ವರ ನಾಟ್ಯಸೇವಾ ಸಂಘ. 1949ರಲ್ಲಿ ಇದನ್ನು ಕುಂಟಗೋಡು ವಿಭೂತಿ ಸುಬ್ಬಣ್ಣ ಸ್ಥಾಪಿಸಿದರು. ಅಂತಾರಾಷ್ಟ್ರೀಯ ಮನ್ನಣೆ ಪಡೆದ ಈ ಸಂಸ್ಥೆ ಡಿಪ್ಲೊಮಾ ಮತ್ತು ಬೇಸಗೆ ಶಿಬಿರದ ಮೂಲಕ ಕಲೆಯ ಶಿಕ್ಷಣ ನೀಡುತ್ತಿದೆ. ನಾವು ತೆರಳಿದ ಅಂದು ಸಂಜೆ ನಡೆಯಲಿರುವ ಯಕ್ಷಗಾನದ ಹಜ್ಜೆಗಾರಿಕೆ ಪ್ರಸ್ತುತಿ ಒಡ್ಡೋಲಗ ಪ್ರದರ್ಶನಕ್ಕೆ ಬೇಕಾದ ಅಂತಿಮ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದರು. ಅಲ್ಲಿ ಓಡಾಡಿ ಮಾಹಿತಿ ಪಡೆದು ಹೊರ ಬಂದೆವು.

ಅಲ್ಲಿಂದ ನಾವು ಊರಿನ ದಾರಿ ಹಿಡಿದೆವು. ಅದಾಗಲೇ ಶಿವಮೊಗ್ಗಕ್ಕೆ ಬಂದು ಜೋಗಕ್ಕೆ ಹೋಗದಿದ್ದರೆ ಹೇಗೆ? ಎಂದು ನಮ್ಮನ್ನು ನಾವೇ ಪ್ರಶ್ನಿಸಿದೆವು. ಅದೂ ಮಳೆಗಾಲದಲ್ಲಿ ಜೋಗ ದರ್ಶನ ಮಾಡದಿದ್ದರೆ ನಮ್ಮ ಟ್ರಿಪ್‌ಗೆ ಅವಮಾನ ಎಂದುಕೊಂಡು ಕಾರನ್ನು ಅತ್ತ ತಿರುಗಿಸಿದೆವು. ಹೇಗೂ ನಮ್ಮ ಸಹಾಯಕ್ಕೆ ಟೊಂಕ ಕಟ್ಟಿ ಗೂಗಲ್‌ ಮ್ಯಾಪ್‌ ಇದ್ದೇ ಇತ್ತು.

ಹಸಿರು ಗದ್ದೆಯ ನಡುವೆ ಸಾಗಿದ ರಸ್ತೆ, ತುಂತುರು ಮಳೆ, ತೇಲಿ ಬರುವ ತಂಗಾಳಿ...ದಿವ್ಯ ಅನುಭೂತಿಯಲ್ಲಿದ್ದ ನಾವು ಕಾರು ಜೋಗದ ಮುಂದೆ ಗಕ್ಕನೆ ನಿಂತಾಗಲೇ ವಾಸ್ತವಕ್ಕೆ ಮರಳಿದ್ದು. ಜೋಗ ದರ್ಶನಕ್ಕೆ ನಾವು ತಲುಪಿದಾಗ 6.30. ಪ್ರಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಾಗದಿಂದ, ಅನಂತರ ಶಿವಮೊಗ್ಗ ಜಿಲ್ಲೆಯ ಭಾಗ ಸೇರಿದಂತೆ ಎರಡು ಕಡೆಯಿಂದ ಜಲಪಾತ ವೀಕ್ಷಿಸಿದೆವು. ಕಾಮಗಾರಿ ನಡೆಯುತ್ತಿದ್ದರಿಂದ ಜಲಪಾತದ ಕೆಳಗಡೆ ಹೋಗಬೇಕು ಎನ್ನುವ ನಮ್ಮ ಕನಸು ಕೈಗೂಡಲಿಲ್ಲ. ರಾಜ, ರಾಣಿ, ರೋರರ್, ರಾಕೆಟ್ ಎಂಬ ಕವಲುಗಳಾಗಿ ಶರಾವತಿ ನದಿ ಕೆಳ ಭಾಗಕ್ಕೆ ಧುಮ್ಮಿಕ್ಕುವ ದೃಶ್ಯ ವೈಭವವನ್ನು ಕಣ್ತುಂಬಿಕೊಂಡು, ಕ್ಯಾಮೆರಾದಲ್ಲೂ ಸೆರೆ ಹಿಡಿದೆವು.

Jog-Falls

ಅದಾಗಲೇ ಕತ್ತಲು ಆವರಿಸಿತೊಡಗಿತು. ಮತ್ತೆ ಕಾರು ಹತ್ತಿದೆವು. ಆದರೆ ನಮ್ಮ ಸಂಚಾರಕ್ಕೆ ಮಳೆ-ಮಂಜು ತಡೆ ಒಡ್ಡಿತು. ರಸ್ತೆಯೇ ಕಾಣದಷ್ಟು ಮಂಜು ಆವರಿಸಿದ್ದರಿಂದ ಹೇಗೋ ಸಾಗರ ತಲುಪಿ ಅಲ್ಲಿ ಉಳಿದುಕೊಂಡೆವು. ಅಲ್ಲಿಗೆ 1 ದಿನ ಅಂದುಕೊಂಡಿದ್ದ ಪ್ರವಾಸ 2 ದಿನಕ್ಕೆ ಮುಂದುವರಿಯಿತು. ಹೇಗೂ ಮಾರನೇ ದಿನ ಮಧ್ಯಾಹ್ನ ಶಿಫ್ಟ್‌ ಇದ್ದುದರಿಂದ ಯಾರಿಗೂ ತೊಂದರೆ ಇರಲಿಲ್ಲ. ಆದರೆ ಫಜೀತಿಗಿಟ್ಟುಕೊಂಡಿದ್ದು ಐಬಿಯ ರೂಮ್‌ಗೆ ತಲುಪಿದಾಗ. ಹಾಲ್ಟ್‌ ಆಗುವ ಆಲೋಚನೆಯೇ ಇರಲಿಲ್ಲವಾದ್ದರಿಂದ ಯಾರಲ್ಲೂ ಅದಕ್ಕೆ ಬೇಕಾದ ವ್ಯವಸ್ಥೆ ಇರಲಿಲ್ಲ. ಹೇಗೋ ಹೊಂದಿಕೊಂಡು ರಾತ್ರಿ ಕಳೆದೆವು. ಮರುದಿನ ಬೆಳಗ್ಗೆ 5 ಗಂಟೆಗೆ ಅಲ್ಲಿಂದ ಹೊರಟೆವು. ಮತ್ತೊಂದು ಟೂರ್‌ ಪ್ಲ್ಯಾನ್‌ ಮಾಡುತ್ತಲೇ ಕಾರು ಇಳಿದೆವು.