ನೀರಿಗಾಗಿ ಕದನ
ಎಷ್ಟೋ ಹೊಟೇಲ್‌ಗಳಲ್ಲಿ ಉಚಿತ ನೀರಿನ ಪದ್ಧತಿಯೇ ಇಲ್ಲವಾಗಿದೆ. ಅಂದರೆ ನಾವು ನೀರನ್ನು ಕೊಳ್ಳುವುದು ಅನಿವಾರ್ಯ ಎಂಬ ಕಾಲಘಟ್ಟದಲ್ಲಿದ್ದೇವೆ. ಇದು ಮೊದಲೇ ಗೊತ್ತಿರುವ ವಿಷಯವಾಗಿದ್ದರೂ ನೀರಿಗೆ ಬಿಲ್ ಹಾಕಿದಾಗ ಜಗಳಕ್ಕೆ ನಿಲ್ಲುವುದು ವಿಚಿತ್ರವೆನಿಸುತ್ತದೆ. ಮುಖ್ಯವಾಗಿ ನೋಡುವುದಾದರೆ ನಾವು ಮನೆಯಲ್ಲಿ ಕುಡಿಯುವ ನೀರು ಕೂಡ ಉಚಿತವಲ್ಲ. ಅದಕ್ಕೂ ನಾವು ಪ್ರತಿ ತಿಂಗಳು ಬಿಲ್ ಪಾವತಿ ಮಾಡುತ್ತೇವೆ. ಅದಕ್ಕಿಂತ ಕೊಂಚ ಶುದ್ಧ ನೀರು ಬೇಕೆಂದರೆ, ಹೊರಗಿನಿಂದ ತರಲು ಹಣ ತೆರಬೇಕಾಗುತ್ತದೆ. ಹೀಗಿರುವಾಗ ಐಷಾರಾಮಿ ಹೊಟೇಲ್‌ನಲ್ಲಿ ನೀರು ಉಚಿತವಾಗಿ ಬೇಕೆಂದು ನಿರೀಕ್ಷಿಸುವುದು ಮೂರ್ಖತನ ಮತ್ತು ಅಗ್ಗದ ಜಗಳವಲ್ಲವೇ?
ನಮ್ಮ ಇಂದಿನ ಕಾಲದ 'ಹೈ-ಫೈ' ಗ್ರಾಹಕರ ಪದ್ಧತಿಯೇ ವಿಚಿತ್ರ. ಹೊಟೇಲ್‌ಗೆ ಕಾಲಿಡುತ್ತಲೇ ಮೊದಲು ನೋಡುವುದು ಅಲ್ಲಿನ ಆಂಬಿಯೆನ್ಸ್. ಎಸಿ ಗಾಳಿ ಮೈಗೆ ಸೋಕುತ್ತಿದ್ದಂತೆ, ಕೈಯಲ್ಲಿರುವ ಐಫೋನ್‌ನಲ್ಲಿ ಒಂದು ಸೆಲ್ಫಿ ತೆಗೆದು, ಡಿಸೈನ್ ಡಿಸೈನಾಗಿ ಬರೆದು ಇನ್‌ಸ್ಟಾಗ್ರಾಮ್‌ಗೆ ಅಪ್ ಲೋಡ್ ಮಾಡದೇ ಇದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ..
ಮೆನು ಕಾರ್ಡ್ ಕೈಗೆ ಬರುತ್ತಿದ್ದಂತೆ ಇವರ ಕಣ್ಣುಗಳು ಮೊದಲು ಹುಡುಕುವುದು ವಿಚಿತ್ರ ಹೆಸರಿನ ಖಾದ್ಯಗಳನ್ನು. ನಾರ್ತ್ ಇಂಡಿಯನ್ ಸ್ಪೆಷಲ್' ಪನೀರ್ ಗ್ರೇವಿಗೆ 550 ರುಪಾಯಿ ಇದ್ದರೂ ಹೆಚ್ಚನಿಸುವುದಿಲ್ಲ. ಬರೀ ಫ್ರೆಶ್ ಲೈಮ್ ಸೋಡಾಗ ಇನ್ನೂರು ರುಪಾಯಿ ಚಾರ್ಜ್ ಮಾಡಿದರೂ ಪಿಚ್ಚೆನಿಸುವುದಿಲ್ಲ. ನಾಲ್ಕೇ ನಾಲ್ಕು ಪೀಸ್ ಹಣ್ಣು ಮತ್ತು ಒಂದು ಸ್ಕೂಪ್ ಐಸ್ ಕ್ರೀಮ್ ಹಾಕಿ ಐನೂರು ರುಪಾಯಿ ಸುಲಿದರೂ ಗ್ರಾಹಕನಿಗೆ ಏನೂ ಅನಿಸುವುದಿಲ್ಲ. ಆದರೆ ಬಿಲ್ ಪಾವತಿ ಸಮಯದಲ್ಲಿ ಹೈಫೈ ಗ್ರಾಹಕ ಕಿರಿಕ್ ಗ್ರಾಹಕನಾಗಿ ಬದಲಾಗುತ್ತಾನೆ. ಕಾರಣ? ಕೇವಲ ಇಪ್ಪತ್ತು ರುಪಾಯಿ! ಬಿಲ್ ಹತ್ತು ಸಾವಿರ ಆಗಿರಲಿ, ಅದರ ಮೇಲೆ ಟ್ಯಾಕ್ಸ್ ಐನೂರು ಬಿದ್ದಿರಲಿ, ಮೇಲೆ ಮುನ್ನೂರು ರುಪಾಯಿ ಸರ್ವರ್‌ಗೆ ಟಿಪ್ಸ್ ಕೊಟ್ಟಿರಲಿ, ಅದ್ಯಾವುದೂ ಆ ಗ್ರಾಹಕನನ್ನು ಕಂಗೆಡಿಸುವುದಿಲ್ಲ. ಆದರೆ ಆ ಇಪ್ಪತ್ತು ರುಪಾಯಿ ಮಾತ್ರ ಮಹಾನ್ ಆಸ್ತಿಯಂತೆ ಭಾಸವಾಗುತ್ತದೆ. ಏನದು? ಬಿಲ್ ನಲ್ಲಿ ವಾಟರ್ ಬಾಟಲ್-Rs20 ಎಂಬ ವಿವರ. ಗ್ರಾಹಕ ಸಿಡಿದೇಳುತ್ತಾನೆ. ಕುಡಿಯೋ ನೀರಿಗೂ ಚಾರ್ಜ್ ಮಾಡ್ತೀರಾ? ಸಾವಿರಾರು ರುಪಾಯಿ ಬ್ಯುಸಿನೆಸ್ ಕೊಡ್ತೀವಿ. ಕುಡಿಯುವ ನೀರನ್ನಾದ್ರೂ ಉಚಿತವಾಗಿ ಕೊಡೋಕಾಗೋದಿಲ್ವಾ? ಎಂದು ಕ್ಯಾತೆ ಶುರು ಮಾಡುತ್ತಾರೆ. ನಮ್ಮ ಮನೆಗೆ ಬನ್ನಿ ಎಷ್ಟು ನೀರು ಬೇಕು ಕೇಳಿ.. ನಮ್ ಊರಿಗೆ ಬನ್ನಿ ಇಡೀ ನದೀನೇ ಕೊಡ್ತೀವಿ.. ಇಂಥದ್ದೆಲ್ಲ ಡೈಲಾಗ್ ಗಳು ಹೊರಬರ್ತವೆ. ಬಿರಿಯಾನಿಯಲ್ಲಿ ಪೀಸ್ ಕಮ್ಮಿ ಎಂದಾಗಲೀ, ಐಸ್ ಕ್ರೀಮಿನಲ್ಲಿ ಹಣ್ಣು ಕಮ್ಮಿ ಇತ್ತೆಂದಾಗಲೀ ಅಥವಾ ಅವುಗಳ ದರಗಳ ಬಗ್ಗೆಯಾಗಲೀ ಗಲಾಟೆ ಮಾಡದ ಇವರು ನೀರಿಗ್ಯಾಕೆ ಇಷ್ಟು ಬಡಿದಾಡ್ತಾರೆ?
ಇದನ್ನೂ ಓದಿ: ಪ್ರವಾಸಿಗರ ರೂಟ್ ಮ್ಯಾಪ್ ಬದಲಿಸಿದ ಯುದ್ಧ
ಸಾವಿರಾರು ರುಪಾಯಿ ಖರ್ಚು ಮಾಡುವ ಪಾರ್ಟಿಗೆಂದು ಬರುತ್ತಾರೆ. ಆದರೆ ಐವತ್ತು ರುಪಾಯಿ ಪಾರ್ಕಿಂಗ್‌ಗೆ ಕೇಳಿದಾಗ ಇನ್ನಿಲ್ಲದ ಚೌಕಾಸಿ ಶುರುವಿಡುತ್ತಾರೆ ಅಥವಾ ಉಚಿತ ಜಾಗಕ್ಕಾಗಿ ಹುಡುಕುತ್ತಾರೆ.ಇಲ್ಲಿ ಯಾರು ಸರಿ ಯಾರು ತಪ್ಪು? ಎಷ್ಟೋ ಹೊಟೇಲ್‌ಗಳಲ್ಲಿ ಉಚಿತ ನೀರಿನ ಪದ್ಧತಿಯೇ ಇಲ್ಲವಾಗಿದೆ. ಅಂದರೆ ನಾವು ನೀರನ್ನು ಕೊಳ್ಳುವುದು ಅನಿವಾರ್ಯ ಎಂಬ ಕಾಲಘಟ್ಟದಲ್ಲಿದ್ದೇವೆ. ಇದು ಮೊದಲೇ ಗೊತ್ತಿರುವ ವಿಷಯವಾಗಿದ್ದರೂ ನೀರಿಗೆ ಬಿಲ್ ಹಾಕಿದಾಗ ಜಗಳಕ್ಕೆ ನಿಲ್ಲುವುದು ವಿಚಿತ್ರವೆನಿಸುತ್ತದೆ. ಮುಖ್ಯವಾಗಿ ನೋಡುವುದಾದರೆ ನಾವು ಮನೆಯಲ್ಲಿ ಕುಡಿಯುವ ನೀರು ಕೂಡ ಉಚಿತವಲ್ಲ. ಅದಕ್ಕೂ ನಾವು ಪ್ರತಿ ತಿಂಗಳು ಬಿಲ್ ಪಾವತಿ ಮಾಡುತ್ತೇವೆ. ಅದಕ್ಕಿಂತ ಕೊಂಚ ಶುದ್ಧ ನೀರು ಬೇಕೆಂದರೆ, ಹೊರಗಿನಿಂದ ತರಲು ಹಣ ತೆರಬೇಕಾಗುತ್ತದೆ. ಹೀಗಿರುವಾಗ ಐಷಾರಾಮಿ ಹೊಟೇಲ್‌ನಲ್ಲಿ ನೀರು ಉಚಿತವಾಗಿ ಬೇಕೆಂದು ನಿರೀಕ್ಷಿಸುವುದು ಮೂರ್ಖತನ ಮತ್ತು ಅಗ್ಗದ ಜಗಳವಲ್ಲವೇ?