• ತೇಜಸ್‌ ಎಚ್‌ ಬಾಡಾಲ

ಚಳಿಗಾಲದ ಪ್ರವಾಸವೆಂದರೆ ಅದೊಂದು ಪ್ರಕೃತಿಯ ಧ್ಯಾನ. ದೂರದಲ್ಲಿ ಮಿನುಗುವ ದೀಪಗಳು, ಕೈಯಲ್ಲಿ ಬಿಸಿಬಿಸಿ ಕಾಫಿಯ ಕಪ್ ಮತ್ತು ಮೈ ಕೊರೆಯುವ ಚಳಿಯ ನಡುವೆ ಸಿಗುವ ಆ ಬೆಚ್ಚನೆಯ ಅನುಭವ, ಇವೆಲ್ಲವೂ ಸೇರಿ ಚಳಿಗಾಲದ ಪಯಣವನ್ನು ಒಂದು ಅದ್ಭುತ ನೆನಪನ್ನಾಗಿ ಮಾಡುತ್ತವೆ. ಆದರೆ ಈ ಸೌಂದರ್ಯದ ಹಿಂದೆಯೇ ಅಡಗಿರುವ ಸವಾಲುಗಳನ್ನು ನಾವು ಮರೆಯುವಂತಿಲ್ಲ. ಈ ಸವಾಲುಗಳನ್ನು ಮೆಟ್ಟಿ ನಿಂತು, ಪ್ರವಾಸದ ಪೂರ್ಣ ಆನಂದವನ್ನು ಪಡೆಯಲು ಬೇಕಾಗಿರುವುದು ಒಂದಿಷ್ಟು ಪೂರ್ವಸಿದ್ಧತೆ ಮತ್ತು ಎಚ್ಚರಿಕೆ.

ಬಟ್ಟೆಯೆಂಬ ಕಲೆ: ಚಳಿಯನ್ನು ಗೆಲ್ಲಲು ಒಂದೇ ಒಂದು ದಪ್ಪ ಕೋಟ್ ಹಾಕುವುದಕ್ಕಿಂತ, 'ಲೇಯರಿಂಗ್' (ಪದರಗಳಂತೆ ಬಟ್ಟೆ ಧರಿಸುವುದು) ಮಾಡುವುದು ಜಾಣತನದ ನಡೆ. ಇದೊಂದು ಕಲೆ!

  1. ಒಳ ಪದರ: ಮೈಗೆ ಅಂಟಿಕೊಂಡಂತಿದ್ದು ಬೆವರು ಹೀರುವಂತಿರಲಿ.
  2. ನಡುವಿನ ಪದರ: ದೇಹದ ಉಷ್ಣತೆಯನ್ನು ಹಿಡಿದಿಡುವ ಉಣ್ಣೆಯ ಸ್ವೆಟರ್ ಇರಲಿ.
  3. ಹೊರ ಕವಚ: ಕೊನೆಗೆ, ಗಾಳಿ-ಮಳೆ ತಡೆಯುವ ಜಾಕೆಟ್ ಧರಿಸಿ. ಜತೆಗೆ ತಲೆಗೆ ಟೋಪಿ, ಕೈಗೆ ಗವಸು ಮತ್ತು ಕಾಲಿಗೆ ಗಟ್ಟಿಯಾದ ಬೂಟುಗಳಿದ್ದರೆ ಚಳಿ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ!

ರಸ್ತೆಗಿಳಿದರೆ ಎಚ್ಚರ: ನಮ್ಮ ಹಿಮಾಲಯದ (ಶಿಮ್ಲಾ, ಮನಾಲಿ) ರಸ್ತೆಗಳು ಬಳುಕುವ ಹಾವಿನಂತೆ ಸುಂದರ, ಆದರೆ ಮಂಜುಗಡ್ಡೆಯಿಂದಾಗಿ ಅಷ್ಟೇ ಅಪಾಯಕಾರಿ. ಇಲ್ಲಿ ನಿಮ್ಮ ವಾಹನವೇ ನಿಮ್ಮ ರಥ. ಪ್ರಯಾಣಕ್ಕೆ ಮುನ್ನ ಬ್ರೇಕ್, ಲೈಟ್ ಚೆಕ್ ಮಾಡಿ, ಚಕ್ರಗಳಿಗೆ ಸ್ಕಿಡ್ ಆಗದಂತೆ ಸರಪಳಿ ಅಳವಡಿಸಿ. ಇಂಧನದ ಟ್ಯಾಂಕ್ ಸದಾ ತುಂಬಿರಲಿ; ಎಲ್ಲಾದರೂ ಸಿಕ್ಕಿಹಾಕಿಕೊಂಡರೆ ಬೆಚ್ಚಗಿರಲು ಹೀಟರ್ ಹಾಕಿಕೊಳ್ಳಲು ಇದು ಬೇಕೇ ಬೇಕು. ಕಾರಿನಲ್ಲಿ ಕಂಬಳಿ, ಒಣ ಆಹಾರ ಮತ್ತು ನೀರು ಇಟ್ಟುಕೊಳ್ಳುವುದು ಮರೆಯಬೇಡಿ. ನೆನಪಿರಲಿ, ನೆರಳಿನ ಜಾಗಗಳಲ್ಲಿ ರಸ್ತೆ ಬೇಗ ಹೆಪ್ಪುಗಟ್ಟುತ್ತದೆ, ಅಲ್ಲಿ ವೇಗಕ್ಕೆ ಕಡಿವಾಣವಿರಲಿ.

Winter Journeys Made Safer with the Right Preparation

ವಿಮಾನ ಮತ್ತು ವಿಳಂಬ: ಚಳಿಗಾಲದ ಮಂಜಿನಲ್ಲಿ ವಿಮಾನಗಳು ತಡವಾಗುವುದು ಸಾಮಾನ್ಯ (ಅದರಲ್ಲೂ ಇಂಡಿಗೋ ಎಂದಿಗೋ ಕಥೆ ಗೊತ್ತೇ ಇದೆಯಲ್ಲ!). ಆದ್ದರಿಂದ ಕೈಯಲ್ಲಿ ಸಾಕಷ್ಟು ಸಮಯವಿರಲಿ. ಮುಖ್ಯ ಬ್ಯಾಗ್ ಕೈತಪ್ಪಿದರೂ ಪರವಾಗಿಲ್ಲ, ಒಂದು ದಿನಕ್ಕೆ ಬೇಕಾದ ಬಟ್ಟೆ ಮತ್ತು ಔಷಧಿಯನ್ನು ನಿಮ್ಮ ಹ್ಯಾಂಡ್-ಬ್ಯಾಗ್‌ನಲ್ಲೇ ಇಟ್ಟುಕೊಳ್ಳಿ. ಇಲ್ಲಿ ತಾಳ್ಮೆಯೇ ನಿಮ್ಮ ನಿಜವಾದ ಮಿತ್ರ.

ಆರೋಗ್ಯವೇ ಭಾಗ್ಯ: ಚಳಿಯಲ್ಲಿ ಬಾಯಾರಿಕೆ ಆಗದಿದ್ದರೂ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಆಗಾಗ ಬಿಸಿ ನೀರು ಅಥವಾ ಮಸಾಲೆ ಚಹಾವನ್ನು ಗುಟುಕರಿಸುತ್ತಿರಿ. ಚರ್ಮ ಒಣಗದಂತೆ ಮಾಯಿಶ್ಚರೈಸರ್ ಮತ್ತು ಹಿಮದ ಪ್ರತಿಫಲನದಿಂದ ಮುಖ ಸುಡದಂತೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.

ಒಟ್ಟಿನಲ್ಲಿ, ಸರಿಯಾದ ತಯಾರಿಯಿದ್ದರೆ ಪ್ರಕೃತಿಯ ಈ ರೌದ್ರ ಮತ್ತು ರಮ್ಯ ರೂಪಗಳೆರಡನ್ನೂ ಮನಸಾರೆ ಅನುಭವಿಸಬಹುದು. ಕೊರೆಯುವ ಚಳಿಯಲ್ಲೂ ಬೆಚ್ಚನೆಯ ನೆನಪುಗಳನ್ನು ಮೂಟೆ ಕಟ್ಟಿಕೊಂಡು ಬನ್ನಿ!