2017ರ ಏಪ್ರಿಲ್ 5ರಂದು ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಕೆಲವು ಪ್ರಮುಖ ಪತ್ರಿಕೆಗಳಲ್ಲಿ ಒಂದು ಫೊಟೋ ಪ್ರಕಟವಾಗಿತ್ತು. ಪೋಲೆಂಡ್‌ನ ಮೇಲೆ ಎಮಿರೇಟ್ಸ್ ಮತ್ತು ಪಾಕಿಸ್ತಾನ್ ಇಂಟರ್‌ ನ್ಯಾಷನಲ್ ಏರ್‌ರ್ಲೈ ವಿಮಾನ ಪರಸ್ಪರ ಮುಖಾಮುಖಿಯಾಗಿ ಆಗಸದಲ್ಲಿ ಇನ್ನೇನು ಡಿಕ್ಕಿ ಹೊಡೆದೇ ಬಿಟ್ಟವು ಎಂದು ಭಾಸವಾಗುವ ಫೊಟೋ ಅದು. ಆ ಫೊಟೋ ವಾಯುಯಾನ ಪ್ರೇಮಿಗಳನ್ನು ಮತ್ತು ಸಾಮಾನ್ಯ ಜನರನ್ನು ಹೌಹಾರುವಂತೆ ಮಾಡಿತ್ತು.

ಅದು ಎರಡು ದೈತ್ಯ ಬೋಯಿಂಗ್ 777 ವಿಮಾನಗಳು ಒಂದೇ ಸಮಯದಲ್ಲಿ, ಒಂದೇ ಚೌಕಟ್ಟಿನಲ್ಲಿ, ಅತಿ ಸಮೀಪದಲ್ಲಿ ಹಾರುತ್ತಿರುವಂತೆ ಕಂಡ ಅಪರೂಪದ ಕ್ಷಣವಾಗಿತ್ತು. ಈ ಘಟನೆ ಆಧುನಿಕ ವಾಯುಯಾನ ತಂತ್ರಜ್ಞಾನ, ನಿಖರವಾದ ಸಂಚಾರ ನಿಯಂತ್ರಣ ಮತ್ತು ಛಾಯಾಗ್ರಾಹಕನ ಅದೃಷ್ಟದ ಸುಂದರ ಸಂಗಮವಾಗಿತ್ತು.

ಎಮಿರೇಟ್ಸ್ ( EK218 ) ವಿಮಾನ ಅಮೆರಿಕದ ಲಾಸ್ ಏಂಜಲೀಸ್ʼನಿಂದ ಹೊರಟು ದುಬೈಗೆ ಸಾಗುತ್ತಿತ್ತು. ಇದು ಬೋಯಿಂಗ್ 777-&200LR (Long Range) ಮಾದರಿಯ ವಿಮಾನ (‘ಲಾಂಗ್ ರೇಂಜ್’ ಎಂದರೆ ಇದು ಜಗತ್ತಿನ ಅತಿ ಹೆಚ್ಚು ದೂರವನ್ನು ತಡೆರಹಿತವಾಗಿ ಕ್ರಮಿಸಬಲ್ಲ ಸಾಮರ್ಥ್ಯವಿರುವ ವಿಮಾನ). ಇನ್ನೊಂದು, ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್‌ಲೈನ್ಸ್‌ಗೆ ( PIA PK733) ಸೇರಿದ ವಿಮಾನ, ಫ್ರಾನ್ಸ್‌ನ ಪ್ಯಾರಿಸ್‌ನಿಂದ ಹೊರಟು ಪಾಕಿಸ್ತಾನದ ಲಾಹೋರ್ ಕಡೆಗೆ ಪ್ರಯಾಣಿಸುತ್ತಿತ್ತು.

ಇದನ್ನೂ ಓದಿ: ವಿಮಾನಗಳು ಎತ್ತರದಲ್ಲಿ ಹಾರುವುದೇಕೆ ?

ಇದು ಬೋಯಿಂಗ್ 777&200 ER (Extended Range) ಮಾದರಿಯ ವಿಮಾನ. ಈ ಎರಡೂ ವಿಮಾನಗಳು ತಮ್ಮದೇ ಆದ ವೇಗದಲ್ಲಿ, ತಮ್ಮದೇ ಆದ ತಾಣದ ಕಡೆಗೆ ಸಾಗುತ್ತಿದ್ದಾಗ, ಪೋಲೆಂಡ್‌ ನ ಆಕಾಶದಲ್ಲಿ ಅವುಗಳ ಪಥಗಳು ಅಡ್ಡಲಾಗಿ ಸಂಧಿಸಿದವು. ಹಾಗಾದರೆ ಆ ಎರಡೂ ವಿಮಾನಗಳೂ ಇಷ್ಟು ಹತ್ತಿರವಿದ್ದರೂ ಡಿಕ್ಕಿ ಹೊಡೆಯಲಿಲ್ಲವೇಕೆ? ಈ ಫೊಟೋ ನೋಡಿದ ತಕ್ಷಣ ಯಾರಿಗಾದರೂ ಭಯವಾಗುವುದು ಸಹಜ.

ಆದರೆ ವಾಸ್ತವ ಹಾಗಿಲ್ಲ. ಇಲ್ಲಿ ಎರಡು ಪ್ರಮುಖ ವಿಷಯಗಳನ್ನು ಗಮನಿಸಬೇಕು. ಮೊದಲನೆಯದು, ಲಂಬ ಅಂತರ ( Vertical Separation ). ವಿಮಾನಯಾನದಲ್ಲಿ RVSM (Reduced Vertical Separation Minimum) ಎಂಬ ನಿಯಮವಿದೆ. ಇದರ ಪ್ರಕಾರ, ಒಂದೇ ಮಾರ್ಗದಲ್ಲಿ ಅಥವಾ ಅಡ್ಡಲಾಗಿ ಚಲಿಸುವ ವಿಮಾನಗಳ ನಡುವೆ ಕನಿಷ್ಠ 1000 ಅಡಿಗಳ ಲಂಬ ಅಂತರ (Vertical distance) ಇರಲೇಬೇಕು.

A viral photo that looks like an Emirates and Pakistan International Airlines plane collided in mid-air over Poland

ಫೊಟೋದಲ್ಲಿ ಇವೆರಡು ಅಕ್ಕಪಕ್ಕದಲ್ಲಿ ಇರುವಂತೆ ಕಂಡರೂ, ವಾಸ್ತವದಲ್ಲಿ ಒಂದು ವಿಮಾನವು ಇನ್ನೊಂದಕ್ಕಿಂತ ಕನಿಷ್ಠ 1000 ಅಡಿ ಮೇಲೆ ಅಥವಾ ಕೆಳಗೆ ಹಾರುತ್ತಿರುತ್ತದೆ. ಉದಾಹರಣೆಗೆ, ಎಮಿರೇಟ್ಸ್ ವಿಮಾನವು 37000 ಅಡಿ ಎತ್ತರದಲ್ಲಿದ್ದರೆ, ಪಿಐಎ ವಿಮಾನವು 3500 ಅಥವಾ 39000 ಅಡಿ ಎತ್ತರದಲ್ಲಿರುತ್ತದೆ. ಎರಡನೆಯದು, ದೃಗ್ವಿಜ್ಞಾನದ ಭ್ರಮೆ (Optical Illusion). ನಾವು ನೆಲದಿಂದ ಬಲವಾದ ಝೂಮ್ ಲೆನ್ಸ್ (ಟೆಲಿಫೊಟೋ ಲೆನ್ಸ್) ಬಳಸಿ ಫೊಟೋ ತೆಗೆದಾಗ, ದೂರದ ವಸ್ತುಗಳು ಹತ್ತಿರವಿರುವಂತೆ ಕಾಣುತ್ತವೆ.

ಇದನ್ನು ‘ಲೆನ್ಸ್ ಕಂಪ್ರೆಷನ್’ ಅಂತಾರೆ. ಅಂದರೆ, ಆ ಎರಡು ವಿಮಾನಗಳ ನಡುವೆ ಕಿಲೋ ಮೀಟರ್‌ಗಟ್ಟಲೆ ಅಂತರವಿದ್ದರೂ, ಕೆಮೆರಾದ ಕಣ್ಣಿಗೆ ಅವು ಒಂದರ ಮೇಲೊಂದು ಇರುವಂತೆ ಅಥವಾ ತೀರ ಹತ್ತಿರವಿರುವಂತೆ ಗೋಚರಿಸುತ್ತವೆ. ಈ ಫೊಟೋದಲ್ಲಿ ಕಾಣುವ ಎರಡೂ ವಿಮಾನಗಳು ‘ಬೋಯಿಂಗ್ 777’ ಕುಟುಂಬಕ್ಕೆ ಸೇರಿದವು. ಇವುಗಳನ್ನು ಆಧುನಿಕ ಯುಗದ ಎಂಜಿನಿಯರಿಂಗ್ ಅದ್ಭುತಗಳೆಂದೇ ಕರೆಯಬಹುದು.

ಇವು ಎರಡು ಎಂಜಿನ್‌ಗಳನ್ನು ಹೊಂದಿರುವ ಬೃಹತ್ ಜೆಟ್‌ಗಳು. ಈ ವಿಮಾನಗಳ ರೆಕ್ಕೆಗಳು ಎಷ್ಟು ವಿಶಾಲವಾಗಿರುತ್ತವೆ ಎಂದರೆ, ಅವುಗಳ ಮೇಲೆ ಟೆನ್ನಿಸ್ ಆಡಬಹುದು. ಇಂಥ ಎರಡು ದೈತ್ಯ ಯಂತ್ರಗಳು ಆಕಾಶದಲ್ಲಿ ಸಂಧಿಸಿದಾಗ ಉಂಟಾಗುವ ದೃಶ್ಯವೈಭವವೇ ಬೇರೆ. ಈ ಫೊಟೋ ತೆಗೆಯಲು ಚಾಕಚಕ್ಯತೆ ಬೇಕು. ಈ ವಿಮಾನಗಳು ನೆಲದಿಂದ ಸುಮಾರು 35000 ಅಡಿ ಎತ್ತರದಲ್ಲಿ ಹಾರುತ್ತಿರುತ್ತವೆ.

ಇವುಗಳ ವೇಗ ಗಂಟೆಗೆ ಸುಮಾರು 900 ಕಿಮೀ ಇರುತ್ತದೆ. ಈ ಎರಡು ವಿಮಾನಗಳು ಒಂದೇ ಬಿಂದುವಿನಲ್ಲಿ ಕೇವಲ ಸೆಕೆಂಡುಗಳ ಕಾಲ ಮಾತ್ರ ಸಂಧಿಸುತ್ತವೆ. ನೆಲದ ಮೇಲಿಂದ, ಸರಿಯಾದ ಸಮಯಕ್ಕೆ, ಸರಿಯಾದ ಫೋಕಸ್ ಮಾಡಿ, ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಈ ಕ್ಷಣವನ್ನು ಸೆರೆಹಿಡಿಯಲು ಅಪಾರ ತಾಳ್ಮೆ ಮತ್ತು ಉತ್ತಮ ಕೆಮೆರಾ ಬೇಕು. ಛಾಯಾಗ್ರಾಹಕ ಫ್ಲೈಟ್ ಟ್ರ್ಯಾಕಿಂಗ್ ಆಪ್‌ಗಳನ್ನು ಬಳಸಿ, ಯಾವ ವಿಮಾನಗಳು ಎಲ್ಲಿ ಸಂಧಿಸಲಿವೆ ಎಂಬುದನ್ನು ಮೊದಲೇ ಲೆಕ್ಕಾಚಾರ ಹಾಕಿ ತೆಗೆದಿರಬಹುದು.