ವಿಶ್ವದ ಶ್ರೇಷ್ಠ ಸಾಹಸ ಗಾಥೆಯ ಕರುಣಾಜನಕ ಚಿತ್ರಣ 'ದಿ ವರ್ಸ್ಟ್ ಜರ್ನಿ ಇನ್ ದಿ ವರ್ಲ್ಡ್' ಒಂದು ಅವಲೋಕನ
ಮೈ ಕೊರೆಯುವ ಆ ಭೀಕರ ಚಳಿಯಲ್ಲಿ ತಿಂಗಳುಗಟ್ಟಲೆ ನರಕಯಾತನೆ ಅನುಭವಿಸಿ, ಸ್ಕಾಟ್ ಮತ್ತು ಅವನ ತಂಡ ಧ್ರುವದ ತುತ್ತತುದಿ ತಲುಪಿದಾಗ ಅಲ್ಲಿ ಕಂಡ ದೃಶ್ಯ ಅವರ ಉತ್ಸಾಹವನ್ನೆಲ್ಲ ಜರ್ರನೆ ಇಳಿಸಿಬಿಟ್ಟಿತು. ಅಲ್ಲಿ ಆಗಲೇ ನಾರ್ವೆಯ ವೀರ ರೋಲ್ಡ್ ಅಮುಂಡ್ಸನ್ ಹಾರಿಸಿದ್ದ ಬಾವುಟ ಗಾಳಿಯಲ್ಲಿ ಪಟಪಟನೆ ಬಡಿದುಕೊಳ್ಳುತ್ತಿತ್ತು. ಅದೊಂದು ಕ್ಷಣ ಸ್ಕಾಟ್ ಪಾಲಿಗೆ ಜಗತ್ತೇ ಕತ್ತಲಾದಂತಾಗಿತ್ತು. ‘ಹೇ ಭಗವಂತ...ಈ ಜಾಗಕ್ಕೆ ಮೊದಲು ಯಾರೂ ಬರಲು ಸಾಧ್ಯವಿಲ್ಲ ಅಂತ ಅಂದುಕೊಂಡರೆ, ಆಗಲೇ ಮತ್ತೊಬ್ಬ ನನಗಿಂತ ಮೊದಲೇ ಬಂದುಬಿಟ್ಟಿದ್ದಾನಲ್ಲ...’ ಎಂದು ಹತಾಶೆಯಿಂದ ಉದ್ಗಾರ ತೆಗೆದ.
ಕಳೆದ ಹದಿನೈದು ದಿನಗಳಿಂದ ನನ್ನನ್ನು ಅತೀವವಾಗಿ ಕಾಡಿದ ಕೃತಿ ಅಂದ್ರೆ ಅಪ್ಸ್ಲಿ ಚೆರಿ-ಗಾರಾರ್ಡ್ ಬರೆದ 'The Worst Journey in the World'. ಸುಮಾರು 630 ಪುಟಗಳ ಈ ಕೃತಿ ಯಾವಾಗ ಓದಲಾರಂಭಿಸಿದೆನೋ, ಮುಗಿಸುವ ತನಕ ಸಮಾಧಾನವಿರಲಿಲ್ಲ. ಈ ಕೃತಿಗೆ ಮುನ್ನುಡಿ ಬರೆದ ಖ್ಯಾತ ಬ್ರಿಟಿಷ್ ಪ್ರವಾಸಿ ಲೇಖಕಿ ಮತ್ತು ಉತ್ತರಧ್ರುವ ಹಾಗೂ ದಕ್ಷಿಣ ಧ್ರುವಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ ಸಾರಾ ಡೈನೆ ವೀಲರ್, ‘ಈ ಕೃತಿ ನನ್ನ ಪಾಲಿಗೆ ಒಂದು masterpiece ಮತ್ತು ಅದನ್ನು ಬರೆದ ಲೇಖಕ ನಾನು ಕಂಡ ಮಹಾನ್ ಸಾಹಸಿ’ ಎಂದು ಮೊದಲ ವಾಕ್ಯದಲ್ಲಿಯೇ ಬರೆದಿದ್ದನ್ನು ಓದಿದಾಗ, ಆ ಪುಸ್ತಕವನ್ನು ಕೆಳಗಿಡಲು ಮನಸಾಗಲಿಲ್ಲ. ಜತೆಗೆ ಈ ಪುಸ್ತಕದ ಶೀರ್ಷಿಕೆಯೂ ನನ್ನನ್ನು ಗಾಢವಾಗಿ ಕಾಡಿತು. ಅಂದ ಹಾಗೆ ಇದು ಇತ್ತೀಚಿನ ಕೃತಿಯೇನೂ ಅಲ್ಲ. ಇದನ್ನು ಬರೆದಿದ್ದು ಸುಮಾರು ನೂರಾನಾಲ್ಕು (1922) ವರ್ಷಗಳ ಹಿಂದೆ. ಇದೊಂದು ಕೇವಲ ಪ್ರವಾಸ ಕಥನವಲ್ಲ. ಅದು ಮಾನವನ ಛಲ, ದೈಹಿಕ ಯಾತನೆ ಮತ್ತು ಪ್ರಕೃತಿಯ ಕ್ರೂರ ಅಟ್ಟಹಾಸದ ಅಪ್ರತಿಮ ದಾಖಲೆ. ಈ ಪುಸ್ತಕವನ್ನು ಇಂದಿಗೂ 'ವಿಶ್ವದ ಶ್ರೇಷ್ಠ ಸಾಹಸ ಗಾಥೆ' ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ರಕ್ತ, ಶೃಂಗಾರ, ಅಧಿಕಾರ ವ್ಯಾಮೋಹದ ಅರಮನೆಯ ಅಂತರಂಗ
ಅಪ್ಸ್ಲಿ ಚೆರಿ-ಗಾರಾರ್ಡ್... ಈ ಹೆಸರು ಕೇಳಿದೊಡನೆ ಮೈಯಲ್ಲೊಮ್ಮೆ ಸಣ್ಣ ನಡುಕ ಹುಟ್ಟುತ್ತದೆ. ಅದು ಚಳಿಯದ್ದಲ್ಲ, ಮನುಷ್ಯನ ಅತಿಮಾನುಷ ಸಾಹಸದ ಕಥೆ ಕೇಳಿ ಉಂಟಾಗುವ ರೋಮಾಂಚನದ್ದು! ಅಷ್ಟಕ್ಕೂ ನಾನು ಒಂದು ಪುಸ್ತಕ ಓದುತ್ತಿದ್ದೇನೆ ಎಂದು ಅನಿಸಲೇ ಇಲ್ಲ. ಅಂಟಾರ್ಕ್ಟಿಕಾದ ಆ ಭೀಕರ ಮಂಜಿನ ರಾತ್ರಿಯಲ್ಲಿ ಆ ಮೂವರು ಸಾಹಸಿಗಳ ಜತೆ ನಾಲ್ಕನೇ ವ್ಯಕ್ತಿಯಾಗಿ ಹೆಜ್ಜೆ ಹಾಕುತ್ತಿದ್ದೇನಾ ಎಂದೆನಿಸಿತು. ಹೌದು, ಇದು ಮಾಸ್ಟರ್‌ಪೀಸ್‌ಗಳಿಗೂ ಮಾಸ್ಟರ್‌ಪೀಸ್. ಯಾಕೆ ಗೊತ್ತಾ? ನೂರು ವರ್ಷಗಳ ಹಿಂದೆ, ಕೈಯಲ್ಲಿ ಇಂದಿನ ಗೂಗಲ್ ಮ್ಯಾಪ್ ಇರಲಿಲ್ಲ, ಮೈಮೇಲೆ ಥರ್ಮಲ್ ವೇರ್‌ಗಳಿರಲಿಲ್ಲ. ಇದ್ದದ್ದು ಕೇವಲ ಉಣ್ಣೆಯ ಬಟ್ಟೆ ಮತ್ತು ಗುಂಡಿಗೆಯಲ್ಲಿ ಕಿಚ್ಚು! 1922ರಲ್ಲಿ ಈ ಪುಸ್ತಕ ಹೊರಬಂದಾಗ ಜಗತ್ತು ಬೆಚ್ಚಿಬಿದ್ದಿತ್ತು. ಅಪ್ಸ್ಲಿ ಚೆರಿ-ಗಾರಾರ್ಡ್ ಕೇವಲ ಪ್ರವಾಸ ಕಥನ ಬರೆಯಲಿಲ್ಲ, ಅಲ್ಲಿ ಅವನು ತನ್ನ ಆತ್ಮವನ್ನೇ ಬಸಿದಿಟ್ಟಿದ್ದ. ನೂರಾನಾಲ್ಕು ವರ್ಷಗಳಾದರೂ ಈ ಪುಸ್ತಕದ ಬಿಸಿ ಆರದಿದ್ದಕ್ಕೆ ಕಾರಣ ಅದರ ಪ್ರತಿ ಸಾಲಿನಲ್ಲಿರುವ ಕ್ರೂರ ಸತ್ಯ. ಆ ಸತ್ಯದ ದರ್ಶನ ನಿಮಗಾಗಿದೆ ಅಂದರೆ, ನೀವು ಕೂಡ ನಿಜವಾದ 'ಅನ್ವೇಷಕ'ರೇ.

1910ರಲ್ಲಿ ಕ್ಯಾಪ್ಟನ್ ರಾಬರ್ಟ್ ಫಾಲ್ಕನ್ ಸ್ಕಾಟ್ ನೇತೃತ್ವದಲ್ಲಿ 'ಟೆರಾ ನೋವಾ' ಎಂಬ ಹಡಗು ಅಂಟಾರ್ಕ್ಟಿಕಾದತ್ತ ಹೊರಡುತ್ತದೆ. ಅದರ ಮುಖ್ಯ ಗುರಿ ದಕ್ಷಿಣ ಧ್ರುವವನ್ನು ತಲುಪುವ ಮೊದಲ ತಂಡವಾಗುವುದು. ಈ ತಂಡದಲ್ಲಿ 24 ವರ್ಷದ ಯುವಕನಾಗಿ ಚೆರಿ-ಗಾರಾರ್ಡ್ ಸೇರಿಕೊಳ್ಳುತ್ತಾನೆ. ಆದರೆ, ದಕ್ಷಿಣ ಧ್ರುವ ತಲುಪುವ ಮುನ್ನವೇ ಅವರು ನಡೆಸಿದ ಒಂದು ಉಪ-ಅನ್ವೇಷಣೆ ಈ ಪುಸ್ತಕಕ್ಕೆ ‘ಜಗತ್ತಿನ ಅತ್ಯಂತ ಕೆಟ್ಟ ಪ್ರಯಾಣ’ ಎಂಬ ಹೆಸರನ್ನು ತಂದುಕೊಟ್ಟಿತು. ಪುಸ್ತಕದ ಕೇಂದ್ರಬಿಂದು ಸ್ಕಾಟ್‌ನ ದಕ್ಷಿಣ ಧ್ರುವದ ಪಯಣವಲ್ಲ, ಬದಲಿಗೆ ಚಳಿಗಾಲದಲ್ಲಿ ಕೈಗೊಂಡ ‘ವಿಂಟರ್ ಜರ್ನಿ’. ವಿಜ್ಞಾನಿ ಎಡ್ವರ್ಡ್ ವಿಲ್ಸನ್, ‘ಎಂಪರರ್ ಪೆಂಗ್ವಿನ್’ಗಳ ಭ್ರೂಣವನ್ನು (Embryos) ಅಧ್ಯಯನ ಮಾಡಿದರೆ ಹಕ್ಕಿಗಳು ಮತ್ತು ಸರೀಸೃಪಗಳ ನಡುವಿನ ವಿಕಾಸದ ಕೊಂಡಿ ಸಿಗಬಹುದು ಎಂದು ನಂಬಿದ್ದರು. ಈ ಮೊಟ್ಟೆಗಳನ್ನು ಸಂಗ್ರಹಿಸಲು ತಂಡವು ಅಂಟಾರ್ಕ್ಟಿಕಾದ ಭೀಕರ ಚಳಿಗಾಲದಲ್ಲಿ 60 ಮೈಲುಗಳ ದೂರದ ‘ಕೇಪ್ ಕ್ರೋಜಿಯರ್’ಗೆ ಹೋಗಲು ನಿರ್ಧರಿಸುತ್ತದೆ.
ಕಲ್ಪನೆ ಮಾಡಿಕೊಳ್ಳಿ. ಸುತ್ತಲೂ ಕಗ್ಗತ್ತಲೆ. ಅದೆಂಥಾ ಕತ್ತಲೆ ಅಂದರೆ ನಿಮ್ಮ ಕೈ ನಿಮ್ಮ ಕಣ್ಣಿಗೇ ಕಾಣಿಸದಷ್ಟು. ಗಾಳಿಯ ವೇಗ ಗಂಟೆಗೆ ನೂರು ಮೈಲಿಗಿಂತಲೂ ಹೆಚ್ಚು. ಮೈನಸ್ 60 ಡಿಗ್ರಿ ಸೆಲ್ಸಿಯಸ್ ಚಳಿ! ಅವರ ಬೆವರಿನ ಹನಿಗಳು ಬಟ್ಟೆಯ ಒಳಗೇ ಮಂಜುಗಡ್ಡೆಯಾಗುತ್ತಿದ್ದವು. ಅವರು ಹಾಕಿಕೊಂಡಿದ್ದ ಉಡುಪುಗಳು ಎಷ್ಟು ಗಟ್ಟಿಯಾಗುತ್ತಿದ್ದವು ಎಂದರೆ, ಅವುಗಳನ್ನು ಬಗ್ಗಿಸುವುದು ಕೂಡ ಅಸಾಧ್ಯವಾಗಿತ್ತು. ರಾತ್ರಿ ಮಲಗಲು ಹೋದರೆ ಅವರ ಬೆವರಿನಿಂದ ನೆನೆದಿದ್ದ ಬಟ್ಟೆಗಳು ಮಂಜಿನಂತೆ ಬಿಗಿಯಾಗಿ, ಕಬ್ಬಿಣದ ಕವಚದಂತಾಗುತ್ತಿದ್ದವು. ಚಳಿಗೆ ಹಲ್ಲುಗಳು ಕಟಕಟಕಟ ಎಂದು ಅದೆಷ್ಟು ಜೋರಾಗಿ ಬಡಿಯುತ್ತಿದ್ದವು ಅಂದ್ರೆ ಅವು ಗರಗಸದಂತೆ ಕೊಚ್ಚುಕೊಚ್ಚಾಗಿದ್ದವು. ಅವುಗಳ ಮೇಲಿನ ಎನಾಮಲ್ ಒಡೆದುಹೋಗಿತ್ತು. ಮಲಗುವ ಚೀಲದೊಳಗೆ ಹೋಗಬೇಕೆಂದರೆ ಅರ್ಧ ಗಂಟೆ ಕಷ್ಟಪಡಬೇಕಿತ್ತು. ಈ ವಾತಾವರಣದಲ್ಲಿ ಮೂವರು ಮನುಷ್ಯರು—ಎಡ್ವರ್ಡ್ ವಿಲ್ಸನ್, ಹೆನ್ರಿ ಬೋವರ್ಸ್ ಮತ್ತು ಈ ಕಥೆಯ ನಾಯಕ ಅಪ್ಸ್ಲಿ ಚೆರಿ ಗಾರಾರ್ಡ್ - ಬರೀ ಮೂರು ಪೆಂಗ್ವಿನ್ ಮೊಟ್ಟೆಗಳಿಗಾಗಿ ಸಾವು-ಬದುಕಿನ ನಡುವೆ ಆಟವಾಡಲು ಹೊರಡುತ್ತಾರೆ.
ವಿಜ್ಞಾನಿ ಎಡ್ವರ್ಡ್ ವಿಲ್ಸನ್ ಗೆ ಒಂದು ನಂಬಿಕೆಯಿತ್ತು. 'ಎಂಪರರ್ ಪೆಂಗ್ವಿನ್'ಗಳ ಮೊಟ್ಟೆಯೊಳಗಿನ ಭ್ರೂಣವನ್ನು ತಂದು ಪರೀಕ್ಷಿಸಿದರೆ, ಹಕ್ಕಿಗಳು ಸರೀಸೃಪಗಳಿಂದ ಹೇಗೆ ವಿಕಾಸವಾದವು ಎಂಬ ರಹಸ್ಯ ಬಯಲಾಗುತ್ತದೆ, ಇದರಿಂದ ವಿಕಾಸವಾದಕ್ಕೆ ಅದ್ಭುತ ಕೊಡುಗೆ ಕೊಟ್ಟಂತಾಗುತ್ತದೆ, ಅದು ಜೀವವಿಜ್ಞಾನದ ಹೊಸ ಹೊಲವಿಗೆ ಸಹಾಯಕವಾಗಬಹುದು ಎಂದು ಅವನು ನಂಬಿದ್ದ. ಆದರೆ ಆ ಪೆಂಗ್ವಿನ್‌ಗಳು ಮೊಟ್ಟೆ ಇಡುವುದು ಅಂಟಾರ್ಕ್ಟಿಕಾದ ಅತ್ಯಂತ ಭೀಕರ ಚಳಿಗಾಲದಲ್ಲಿ! ಸಾವು ಅನ್ನೋದು ನಮಗೆ ಕೇವಲ ಒಂದು ಪದವಾಗಿರಬಹುದು. ಆದರೆ ಅಂಟಾರ್ಕ್ಟಿಕಾದ ಆ ‘ಕೇಪ್ ಕ್ರೋಜಿಯರ್’ನ ಹಿಮದ ಗುಡ್ಡದ ಮೇಲೆ, 1911ರ ಆ ಕರಾಳ ರಾತ್ರಿ ವಿಲ್ಸನ್, ಬೋವರ್ಸ್ ಮತ್ತು ಚೆರಿ-ಗಾರಾರ್ಡ್ ಪಾಲಿಗೆ ಸಾವು ಅಂದ್ರೆ ಅದು ಸಾಕ್ಷಾತ್ ಎದುರಿಗಿದ್ದ ಕಟುಕ!
ಒಂದು ರಾತ್ರಿ ಅವರು ನಿರ್ಮಿಸಿಕೊಂಡಿದ್ದ ಗುಡಿಸಲು ಮತ್ತು ಅದರ ಮೇಲಿದ್ದ ಕ್ಯಾನ್ವಾಸ್ ಟೆಂಟ್ ಗಾಳಿಗೆ ತರಗೆಲೆಯಂತೆ ಹಾರಿಹೋಯಿತು. ಕಲ್ಪನೆ ಮಾಡಿಕೊಳ್ಳಿ, ಸುತ್ತಲೂ ಬೆಟ್ಟದಂಥ ಮಂಜಿನ ರಾಶಿ, ಘೋರ ಕಗ್ಗತ್ತಲು. ಹೊರಗೆ ಹಿಮದ ಬಿರುಗಾಳಿ. ಮೈಮೇಲಿದ್ದ ಬಟ್ಟೆಗಳು ಬಿರುಗಾಳಿಯ ಹೊಡೆತಕ್ಕೆ ಚಿಂದಿಯಾಗುತ್ತಿದ್ದವು. ಆ ಕ್ಷಣದಲ್ಲಿ ಅವರಿಗೆ ಅನಿಸಿದ್ದು ಇಷ್ಟೇ - ‘ಇವತ್ತೇ ನಮ್ಮ ಕೊನೆಯ ರಾತ್ರಿ!’ ಸಾವು ಇವರ ಕಣ್ಣೆದುರೇ ಇತ್ತು. ಆದರೂ ಅವರು ಸೋಲಲಿಲ್ಲ. ಎರಡು ದಿನಗಳ ಕಾಲ ಅವರು ಆಹಾರವಿಲ್ಲದೇ, ನೀರಿಲ್ಲದೇ, ಕೇವಲ ಆ ಮಂಜಿನ ರಾಶಿಯಲ್ಲಿ ಮಲಗುವ ಚೀಲಗಳೊಳಗೆ ಮುದುರಿಕೊಂಡು ಬಿದ್ದರು. ಹೊರಗೆ ಪ್ರಕೃತಿ ರಾಕ್ಷಸಿಯಂತೆ ಅರಚುತ್ತಿತ್ತು.
ನಂತರ ಚೆರಿ-ಗಾರಾರ್ಡ್ ಬರೆಯುತ್ತಾನೆ - ‘ನಾವು ಆಗ ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗಿದ್ದೆವು. ಅದು ಪ್ರೀತಿಯಲ್ಲ, ಅನಿವಾರ್ಯತೆ.’ ಗಾಳಿಯ ವೇಗ ಎಷ್ಟಿತ್ತೆಂದರೆ, ಅವರ ಬಾಯಿಯಿಂದ ಹೊರಬರುವ ಉಸಿರು ಕೂಡ ಕ್ಷಣಮಾತ್ರದಲ್ಲಿ ಮಂಜಿನ ಗಡ್ಡೆಯಾಗಿ ಮುಖಕ್ಕೆ ಚುಚ್ಚುತ್ತಿತ್ತು. ಬಿರುಗಾಳಿ ಸ್ವಲ್ಪ ಕಡಿಮೆಯಾದಾಗ, ಪವಾಡ ಸದೃಶ ಎಂಬಂತೆ ಅವರಿಗೆ ಹಾರಿಹೋಗಿದ್ದ ಟೆಂಟ್ ಸಿಕ್ಕಿತು! ಅದೇ ಅವರ ಪಾಲಿಗೆ ಪುನರ್ಜನ್ಮ. ಆ ಸ್ಥಿತಿಯಲ್ಲೂ ಅವರು ತಾವು ಬಂದ ಕೆಲಸ ಮರೆಯಲಿಲ್ಲ. ಆ ಕಡಿದಾದ ಹಿಮದ ಕಂದಕಗಳನ್ನು ದಾಟಿ, ಪೆಂಗ್ವಿನ್ ಗುಂಪುಗಳಿದ್ದಲ್ಲಿಗೆ ಹೋಗಿ ಮೂರು ಮೊಟ್ಟೆಗಳನ್ನು ತಮ್ಮ ಜಾಕೆಟ್‌ನೊಳಗೆ ಇಟ್ಟುಕೊಂಡು ವಾಪಸ್ ಬಂದರು. ಆ ಮೊಟ್ಟೆಗಳು ಒಡೆಯದಂತೆ ಅವರು ಕಾಪಾಡಿಕೊಂಡ ರೀತಿ ಇದೆಯಲ್ಲ, ಅದು ಅವರ ಪ್ರಾಣಕ್ಕಿಂತಲೂ ಹೆಚ್ಚಾಗಿತ್ತು.

ಮೈ ಕೊರೆಯುವ ಆ ಭೀಕರ ಚಳಿಯಲ್ಲಿ ತಿಂಗಳುಗಟ್ಟಲೆ ನರಕಯಾತನೆ ಅನುಭವಿಸಿ, ಸ್ಕಾಟ್ ಮತ್ತು ಅವನ ತಂಡ ಧ್ರುವದ ತುತ್ತತುದಿ ತಲುಪಿದಾಗ ಅಲ್ಲಿ ಕಂಡ ದೃಶ್ಯ ಅವರ ಉತ್ಸಾಹವನ್ನೆಲ್ಲ ಜರ್ರನೆ ಇಳಿಸಿಬಿಟ್ಟಿತು. ಅಲ್ಲಿ ಆಗಲೇ ನಾರ್ವೆಯ ವೀರ ರೋಲ್ಡ್ ಅಮುಂಡ್ಸನ್ ಹಾರಿಸಿದ್ದ ಬಾವುಟ ಗಾಳಿಯಲ್ಲಿ ಪಟಪಟನೆ ಬಡಿದುಕೊಳ್ಳುತ್ತಿತ್ತು. ಅದೊಂದು ಕ್ಷಣ ಸ್ಕಾಟ್ ಪಾಲಿಗೆ ಜಗತ್ತೇ ಕತ್ತಲಾದಂತಾಗಿತ್ತು. ‘ಹೇ ಭಗವಂತ...ಈ ಜಾಗಕ್ಕೆ ಮೊದಲು ಯಾರೂ ಬರಲು ಸಾಧ್ಯವಿಲ್ಲ ಅಂತ ಅಂದುಕೊಂಡರೆ, ಆಗಲೇ ಮತ್ತೊಬ್ಬ ನನಗಿಂತ ಮೊದಲೇ ಬಂದುಬಿಟ್ಟಿದ್ದಾನಲ್ಲ...’ ಎಂದು ಹತಾಶೆಯಿಂದ ಉದ್ಗಾರ ತೆಗೆದ. ಮೊದಲ ಸ್ಥಾನ ಸಿಗಲಿಲ್ಲ ಎಂಬ ಹಳಹಳಿಕೆ ಒಂದು ಕಡೆಯಾದರೆ, ಸತತ ಎಂಟು ನೂರು ಮೈಲುಗಳ ನರಕ ಸದೃಶ ಪ್ರಯಾಣ ಅವರ ದೈಹಿಕ ಶಕ್ತಿಯನ್ನು ನುಜ್ಜುಗುಜ್ಜು ಮಾಡಿತ್ತು. ವಾಪಸ್ ಬರುವ ಹಾದಿ ಇದೆಯಲ್ಲ, ಅದನ್ನು ನೆನಪಿಸಿಕೊಂಡರೆ, ಅವರು ಅಲ್ಲಿಯೇ ಮೂರ್ಛೆ ಹೋಗುವುದೊಂದೇ ಬಾಕಿ. ಅಕ್ಷರಶಃ ಅದು ಸಾವಿನ ಹಾದಿಯಾಗಿತ್ತು.
ಒಬ್ಬೊಬ್ಬರಾಗಿ ಉದುರತೊಡಗಿದರು. ಮೊದಲು ಬಿದ್ದವನು ಎಡ್ಗರ್ ಇವಾನ್ಸ್. ಆಮೇಲೆ ಓಟ್ಸ್ ಎಂಬ ವೀರ, ತನ್ನ ಕಾಲುಗಳು ಕೊಳೆತು ಗ್ಯಾಂಗ್ರಿನ್ ಆದಾಗ, ತನ್ನಿಂದಾಗಿ ಉಳಿದವರಿಗೆ ತಡವಾಗಬಾರದೆಂದು ‘ನಾನು ಹೊರಗೆ ಹೋಗಿ ಬರುತ್ತೇನೆ, ಸ್ವಲ್ಪ ತಡವಾಗಬಹುದು’ ಎಂದು ಹೇಳಿ ಆ ಮಂಜಿನ ಬಿರುಗಾಳಿಯೊಳಗೆ ನಡೆದುಕೊಂಡೇ ಹೋದ. ಆತ ಎಲ್ಲಿ ಹೋದನೋ ಎಂದು ಉಳಿದವರು ಗಾಬರಿಯಾದರು.
ಕೊನೆಗೆ ಉಳಿದದ್ದು ಮೂವರು - ಕ್ಯಾಪ್ಟನ್ ಸ್ಕಾಟ್, ವಿಲ್ಸನ್ ಮತ್ತು ಬೋವರ್ಸ್. ಅವರು ತಮ್ಮ ಬೇಸ್ ಕ್ಯಾಂಪ್‌ನಿಂದ ಕೇವಲ 11 ಮೈಲಿ ದೂರದಲ್ಲಿದ್ದಾಗ ಭೀಕರ ಹಿಮದ ಬಿರುಗಾಳಿ ಅಪ್ಪಳಿಸಿತು. ಹೊರಗೆ ಹೋಗಲು ಸಾಧ್ಯವೇ ಇರಲಿಲ್ಲ. ಆಹಾರ ಮುಗಿದಿತ್ತು, ಗುಂಡು ಖಾಲಿಯಾಗಿತ್ತು. ಹಸಿವು ಮತ್ತು ‘ಫ್ರಾಸ್ಟ್‌ಬೈಟ್’ನಿಂದ ಬೆರಳುಗಳು ಕಪ್ಪುಗಟ್ಟುತ್ತಿದ್ದವು. 1912ರ ಮಾರ್ಚ್ ತಿಂಗಳು. ಅಂಟಾರ್ಕ್ಟಿಕಾದ ಮೈ ಮರಗಟ್ಟಿಸುವ ಚಳಿ. ಕ್ಯಾಪ್ಟನ್ ಸ್ಕಾಟ್ ತಂಡ ವಾಪಸ್ ಬರುವಾಗ ಲಾರೆನ್ಸ್ ಓಟ್ಸ್ ಎಂಬ ಸೈನಿಕನ ಪರಿಸ್ಥಿತಿ ದಾರುಣವಾಗಿತ್ತು. ಅವನ ಕಾಲುಗಳು ಪೂರ್ಣವಾಗಿ ಕಟ್ಟಿಗೆಯಂತಾಗಿ ಹೋಗಿದ್ದವು. ಪ್ರತಿ ಹೆಜ್ಜೆಯೂ ಅವನ ಪಾಲಿಗೆ ನರಕಯಾತನೆಯಾಗಿತ್ತು. ತಾನು ಬದುಕುವುದು ಅಸಾಧ್ಯ ಎಂಬುದು ಅವನಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ತನ್ನಿಂದಾಗಿ ಉಳಿದ ಗೆಳೆಯರ ವೇಗ ಕಡಿಮೆಯಾಗಿ ಅವರೂ ಸಾಯಬಹುದು ಅನ್ನೋದು ಅವನನ್ನು ಕಾಡುತ್ತಿತ್ತು.
ಮಾರ್ಚ್ 17, ಓಟ್ಸ್‌ನ ಜನ್ಮದಿನ. ಆವತ್ತು ಆತ ಒಂದು ನಿರ್ಧಾರ ಮಾಡಿದ. ಆ ಪುಟ್ಟ ಟೆಂಟ್‌ನಿಂದ ಹೊರಗೆ ಭೀಕರ ಹಿಮದ ಬಿರುಗಾಳಿ ಬೀಸುತ್ತಿತ್ತು. ಓಟ್ಸ್ ಎದ್ದು ನಿಂತು ಗೆಳೆಯರ ಕಡೆಗೆ ನೋಡಿ ಸಮಾಧಾನವಾಗಿ ಹೇಳಿದ - ‘I am just going outside and may be some time.’ (ನಾನು ಸುಮ್ಮನೆ ಹೊರಗೆ ಹೋಗಿ ಬರುತ್ತೇನೆ, ಸ್ವಲ್ಪ ತಡವಾಗಬಹುದು).
ಅವನಿಗೆ ಗೊತ್ತಿತ್ತು ತಾನು ವಾಪಸ್ ಬರುವುದಿಲ್ಲ ಎಂದು. ಕೇವಲ ಒಂದು ತೆಳು ಬಟ್ಟೆ ಧರಿಸಿ ಆತ ಮಂಜಿನ ಬಿರುಗಾಳಿಯೊಳಗೆ ನಡೆದುಹೋದ. ಅದು ಆತ್ಮಹತ್ಯೆಯಲ್ಲ, ಅದು ತನ್ನ ಗೆಳೆಯರನ್ನು ಉಳಿಸಲು ಮಾಡಿದ ಪರಮೋಚ್ಚ ಬಲಿದಾನ! ಅವನ ಆ ಕೊನೆಯ ವಾಕ್ಯ ಇವತ್ತಿಗೂ ಬ್ರಿಟಿಷ್ ಇತಿಹಾಸದಲ್ಲಿ ‘ಅಪ್ರತಿಮ ಧೈರ್ಯ’ದ ಸಂಕೇತವಾಗಿ ಉಳಿದಿದೆ.

ಸ್ಕಾಟ್ ತನ್ನ ಟೆಂಟ್‌ನಲ್ಲಿ ಸಾವಿಗೆ ಕಾಯುತ್ತಾ ಕುಳಿತಿದ್ದಾಗ, ಅವನ ಬೆರಳುಗಳು ಕೊಳೆಯುತ್ತಿದ್ದವು. ಆದರೂ ಆತ ಬರೆಯುವುದನ್ನು ನಿಲ್ಲಿಸಲಿಲ್ಲ. ಸ್ಕಾಟ್ ತನ್ನ ಪತ್ನಿ ಕ್ಯಾಥ್ಲೀನ್‌ಗೆ ಬರೆಯುತ್ತಾನೆ - ‘ನಮ್ಮ ಮಗ ಪೀಟರ್‌ನನ್ನು ನೈಸರ್ಗಿಕ ಇತಿಹಾಸದಲ್ಲಿ ಆಸಕ್ತಿ ಬೆಳೆಸುವಂತೆ ಮಾಡು. ಅವನನ್ನು ಸೋಮಾರಿ ಮಾಡಬೇಡ. ಮುಖ್ಯವಾಗಿ ಅವನು ಶಾಲೆಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡು.’ ನಂತರ ಸ್ಕಾಟ್ ಗೆ ಬರೆಯಲು ಸಾಧ್ಯವಾಗುವುದಿಲ್ಲ. ಕೈ ಹೆಪ್ಪುಗಟ್ಟಿಹೋಗಿತ್ತು. ಉಸಿರು ನಿಂತಂತೆ ಅನಿಸುತ್ತಿತ್ತು. ಆದರೂ ತನ್ನ ಕೊನೆಯ ಕ್ಷಣಗಳಲ್ಲಿ ನಡುಗುವ ಕೈಗಳಿಂದ ಹೀಗೆ ಬರೆಯುತ್ತಾನೆ - ‘ನಾವು ಈ ಸಾಹಸದಲ್ಲಿ ಸೋತಿರಬಹುದು, ಆದರೆ ನಾವು ಬ್ರಿಟಿಷರು ಹೇಗೆ ಸಂಕಷ್ಟಗಳನ್ನು ಎದುರಿಸುತ್ತೇವೆ ಮತ್ತು ಹೇಗೆ ಸಾವನ್ನಪ್ಪುತ್ತೇವೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. For God's sake look after our people.’
ಆ ಅಕ್ಷರಗಳು ಹೋಗುತ್ತಾ ಹೋಗುತ್ತಾ ಅಸ್ಪಷ್ಟವಾಗುತ್ತವೆ, ಏಕೆಂದರೆ ಸ್ಕಾಟ್‌ನ ಪ್ರಾಣಪಕ್ಷಿ ಅಷ್ಟರಲ್ಲಿ ಹಾರಿಹೋಗಿತ್ತು. (ಇಂದಿಗೂ ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿ ಆತನ ಟಿಪ್ಪಣಿಯನ್ನು ಇಡಲಾಗಿದೆ. ಚೆರಿ-ಗಾರಾರ್ಡ್ ಹೇಳಿದಂತೆ, ಇವರು ನಿಜಕ್ಕೂ ದೇವರಿಗೆ ಹತ್ತಿರವಾಗಿದ್ದರು. ಯಾಕೆಂದರೆ ಅಷ್ಟು ದೊಡ್ಡ ಸಂಕಷ್ಟದಲ್ಲೂ ಅವರು ತಮ್ಮ ಘನತೆಯನ್ನು ಬಿಟ್ಟುಕೊಡಲಿಲ್ಲ.)
ಇತ್ತ ಬೇಸ್ ಕ್ಯಾಂಪ್‌ನಲ್ಲಿ ಕುಳಿತು ಗೆಳೆಯರಿಗಾಗಿ ಕಾಯುತ್ತಿದ್ದ ಅಪ್ಸ್ಲಿ ಚೆರಿ-ಗಾರಾರ್ಡ್‌ನ ಪರಿಸ್ಥಿತಿ ಅತಂತ್ರವಾಗಿತ್ತು. ಮುಂದಿನ ವಸಂತ ಕಾಲ ಬಂದಾಗ, ಆತನೇ ಒಂದು ಶೋಧಕ ತಂಡದ ನೇತೃತ್ವ ವಹಿಸಿ ಗೆಳೆಯರನ್ನು ಹುಡುಕುತ್ತಾ ಹೊರಟ. ಮಂಜಿನಡಿಯಲ್ಲಿ ಹೂತು ಹೋಗಿದ್ದ ಆ ಪುಟ್ಟ ಟೆಂಟ್ ಸಿಕ್ಕಾಗ ಅವನ ಎದೆ ಬಡಿತ ನಿಂತೇ ಹೋಗಿತ್ತು. ಟೆಂಟ್ ತೆರೆದು ನೋಡಿದಾಗ... ಅಲ್ಲಿ ಅವನ ಪ್ರೀತಿಯ ಗೆಳೆಯರು ಹೆಪ್ಪುಗಟ್ಟಿದ ಶವಗಳಾಗಿ ಮಲಗಿದ್ದರು. ವಿಲ್ಸನ್ ಮತ್ತು ಬೋವರ್ಸ್ ಶಾಂತವಾಗಿ ಮಲಗಿರುವಂತೆ ಕಂಡರೆ, ಸ್ಕಾಟ್ ತನ್ನಿಬ್ಬರು ಗೆಳೆಯರ ಮೇಲೆ ಕೈಹಾಕಿ ಮಲಗಿದ್ದ. ಅವನ ಪಕ್ಕದಲ್ಲೇ ಆ (ಐತಿಹಾಸಿಕ) ಡೈರಿಗಳಿದ್ದವು. ಚೆರಿ-ಗಾರಾರ್ಡ್ ಆ ಶವಗಳನ್ನು ನೋಡಿ ಚೀರಾಡಲಿಲ್ಲ, ಬದಲಿಗೆ,’ಇವರು ಅನುಭವಿಸಿದ ಯಾತನೆಗೆ ಸಾವೇ ದೊಡ್ಡ ಶಾಂತಿ’ ಅಂತ ಅಂದುಕೊಂಡ.
ಚೆರಿ-ಗಾರಾರ್ಡ್ ಆ ದಿನ ಅಲ್ಲಿಂದ ವಾಪಸ್ ತಂದಿದ್ದು ಬರೀ ಗೆಳೆಯರ ಶವಗಳನ್ನಲ್ಲ, ಬದಲಿಗೆ ಇಡೀ ಜಗತ್ತು ಎಂದೂ ಮರೆಯದ ಆ ‘ಶತಮಾನದ ಸಾಹಸಗಾಥೆ’ಯನ್ನು! ಅಷ್ಟಕ್ಕೂ ಆತ ತನ್ನ ಜೀವನದುದ್ದಕ್ಕೂ ಪಶ್ಚಾತ್ತಾಪದಲ್ಲಿ ಬೆಂದಿದ್ದು ಯಾಕೆ ಗೊತ್ತಾ? ‘ಒಂದು ವೇಳೆ ನಾನು ಇನ್ನೂ ಹನ್ನೊಂದು ಮೈಲಿ ಮುಂದೆ ಹೋಗಿದ್ದರೆ ನನ್ನ ಗೆಳೆಯರನ್ನು ಉಳಿಸಬಹುದಿತ್ತೇ?’ ಎಂಬ ಪ್ರಶ್ನೆ ಅವನನ್ನು ಸಾಯುವವರೆಗೂ ಕಾಡಿತು.
ಚೆರಿ-ಗಾರಾರ್ಡ್ ತನ್ನ ಪುಸ್ತಕದ ಕೊನೆಯಲ್ಲಿ ಒಂದು ವಾಕ್ಯ ಬರೆಯುತ್ತಾನೆ - ‘If you are marching your life out, they will tell you that you are mad... but you have gone nearer to God than you were before.’
ಅವರು ಐದು ವಾರಗಳ ಕಾಲ ನರಕಯಾತನೆ ಅನುಭವಿಸಿ, ಸಾವು ಗೆದ್ದು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂಗೆ ಆ ಮೊಟ್ಟೆಗಳನ್ನು ತಂದುಕೊಟ್ಟಾಗ, ಅಲ್ಲಿನ ಅಧಿಕಾರಿಗಳು ತೋರಿದ ಉದಾಸೀನತೆ ಅಸಹನೀಯವಾಗಿತ್ತು. ‘ನಮಗೆ ಇದರ ಅಗತ್ಯವಿಲ್ಲ, ನಿಮಗೆ ಅಷ್ಟು ದೂರ ಹೋಗಿ ಈ ಮೊಟ್ಟೆಗಳನ್ನು ತರುವಂತೆ ಯಾರು ಹೇಳಿದ್ದು? ಇದರಿಂದ ಕವಡೆ ಕಾಸಿನ ಪ್ರಯೋಜನವೂ ಇಲ್ಲ. ನೀವು ಬೇಕಿದ್ದರೆ ಅಲ್ಲಿಟ್ಟು ಹೋಗಿ’ ಎಂಬ ಉತ್ತರ ಅವರಿಗೆ ಸಿಕ್ಕಿತು. ವಿಜ್ಞಾನ ಅಂದುಕೊಂಡಿದ್ದ ಆ 'ವಿಕಾಸದ ಕೊಂಡಿ'ಯ ರಹಸ್ಯ ಕೂಡ ಆ ಮೊಟ್ಟೆಗಳಿಂದ ಹೊರಬರಲೇ ಇಲ್ಲ. ಮೂರು ಮೊಟ್ಟೆಗಳಿಗಾಗಿ ನಡೆದ ಆ 60 ಮೈಲುಗಳ ಪ್ರಯಾಣ ಇವತ್ತಿಗೂ ಇತಿಹಾಸದ ಪುಟಗಳಲ್ಲಿ 'The Worst Journey' ಅಂತಲೇ ಉಳಿದಿದೆ. ಯಾಕೆಂದರೆ ಅಲ್ಲಿ ಜಯಿಸಿದ್ದು ವಿಜ್ಞಾನವಲ್ಲ, ಬದಲಿಗೆ ಸಾವಿನ ಮನೆಯಲ್ಲೂ ಸೋಲದ ಮನುಷ್ಯನ ಛಲ!
ಚೆರಿ-ಗಾರಾರ್ಡ್ ತನ್ನ ಪುಸ್ತಕದಲ್ಲಿ ಅತ್ಯಂತ ಸೂಕ್ಷ್ಮವಾಗಿ ಒಂದು ವಿರೋಧಾಭಾಸವನ್ನು ದಾಖಲಿಸುತ್ತಾನೆ. ನಾರ್ವೆಯ ಅಮುಂಡ್ಸನ್ ಒಬ್ಬ 'ವೃತ್ತಿಪರ'ನಂತೆ ಹೋಗಿ ಗೆದ್ದು ಬಂದರು. ಅವರು ನಾಯಿಗಳನ್ನು ಬಳಸಿದರು ಮತ್ತು ವೇಗಕ್ಕೆ ಮಹತ್ವ ನೀಡಿದರು. ಆದರೆ ಸ್ಕಾಟ್ ತಂಡಕ್ಕೆ ಇದು ಕೇವಲ ಓಟವಾಗಿರಲಿಲ್ಲ, ಅದು ವಿಜ್ಞಾನದ ಬಗೆಗಿನ ಅತೀವ ತುಡಿತವಾಗಿತ್ತು. ಬ್ರಿಟಿಷರು ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ತಮ್ಮ ದೈಹಿಕ ಶ್ರಮದ ಮೇಲೆ ನಂಬಿಕೆ ಇಟ್ಟಿದ್ದರು. ಇದೇ ಅವರ ಸಾವಿಗೆ ಕಾರಣವಾಯಿತು ಎಂಬ ಕಹಿ ಸತ್ಯವನ್ನೂ ಚೆರಿ ಒಪ್ಪಿಕೊಳ್ಳುತ್ತಾರೆ.
ಈ ಪುಸ್ತಕದ ಒಂದು ದೊಡ್ಡ ವ್ಯಂಗ್ಯವೆಂದರೆ, ಇಷ್ಟೆಲ್ಲ ಕಷ್ಟಪಟ್ಟು ತಂದ ಪೆಂಗ್ವಿನ್ ಮೊಟ್ಟೆಗಳು ವಿಕಾಸವಾದದ ಬಗ್ಗೆ ಯಾವುದೇ ಹೊಸ ಸಂಶೋಧನೆಗೆ ಪೂರಕವಾಗಲಿಲ್ಲ. ವಿಜ್ಞಾನದ ದೃಷ್ಟಿಯಿಂದ ಆ ‘ವರ್ಸ್ಟ್ ಜರ್ನಿ’ ಒಂದು ವ್ಯರ್ಥ ಪ್ರಯತ್ನವಾಗಿ ಕಂಡರೂ, ಸಾಹಿತ್ಯದ ದೃಷ್ಟಿಯಿಂದ ಅದು ಮನುಷ್ಯನ ಘನತೆಯನ್ನು ಎತ್ತಿ ಹಿಡಿಯಿತು. ಚೆರಿ-ಗಾರಾರ್ಡ್ ಬರೆಯುತ್ತಾರೆ - ‘If you have the desire for knowledge and the power to give it, go for it. But don't expect thanks.’ (ನಿನಗೆ ಜ್ಞಾನದ ಹಸಿವಿದ್ದರೆ ಮುನ್ನುಗ್ಗಿ ಸಾಧಿಸಿ, ಆದರೆ ಅದಕ್ಕೆ ಯಾರೂ ಧನ್ಯವಾದ ಹೇಳ್ತಾರೆ ಅಂತ ನಿರೀಕ್ಷಿಸಬೇಡಿ).
‘The Worst Journey in the World’ ಓದಿ ಮುಗಿಸಿದ ಮೇಲೆ ನಿಮಗೆ ಉಳಿಯುವುದು ‘ಸಾಧನೆ ಎಂದರೆ ಕೇವಲ ಟ್ರೋಫಿ ಗೆಲ್ಲುವುದಲ್ಲ’ ಎಂಬ ಸತ್ಯ. ಪ್ರಪಂಚದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಮನುಷ್ಯ ತನ್ನ ಮನುಷ್ಯತ್ವವನ್ನು, ಗೆಳೆತನವನ್ನು ಮತ್ತು ಶಿಸ್ತನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದಕ್ಕೆ ಈ ಪುಸ್ತಕವೇ ಸಾಕ್ಷಿ.
ನಂತರದ ದಿನಗಳಲ್ಲಿ ಚೆರಿ-ಗಾರಾರ್ಡ್ ಅನುಭವಿಸಿದ ಆ ‘ಸರ್ವೈವರ್ಸ್ ಗಿಲ್ಟ್’ (Survivors Guilt) ಇದೆಯಲ್ಲ... ಅದು ಆ ಅಂಟಾರ್ಕ್ಟಿಕಾದ ಚಳಿಗಿಂತಲೂ ನೂರು ಪಟ್ಟು ಹೆಚ್ಚು ಕ್ರೂರವಾಗಿತ್ತು. ದೈಹಿಕ ಗಾಯಗಳು ವಾಸಿಯಾಗುತ್ತವೆ, ಆದರೆ ಆತ್ಮಕ್ಕೆ ಬಿದ್ದ ಗಾಯಗಳು ಮನುಷ್ಯನನ್ನು ಜೀವಂತವಾಗಿ ದಹಿಸುತ್ತವೆ ಅನ್ನೋದಕ್ಕೆ ಚೆರಿ-ಗಾರಾರ್ಡ್ ದೊಡ್ಡ ಉದಾಹರಣೆ.

ಚೆರಿ-ಗಾರಾರ್ಡ್ ಆ ದಕ್ಷಿಣ ಧ್ರುವದ ಪಯಣದಿಂದ ವಾಪಸ್ ಬಂದಾಗ ಅವನ ವಯಸ್ಸು ಕೇವಲ ಇಪ್ಪತ್ತಾರು. ಆದರೆ ಅವನ ಕಣ್ಣುಗಳಲ್ಲಿ ನೂರು ವರ್ಷದ ಮುಪ್ಪಿತ್ತು. ಯಾಕೆ ಗೊತ್ತಾ? ಅವನ ಜತೆ ನರಕವನ್ನು ಹಂಚಿಕೊಂಡಿದ್ದ ಗೆಳೆಯರೆಲ್ಲ ಮಂಜಿನಲ್ಲಿ ಸಮಾಧಿಯಾಗಿದ್ದರು. ಆದರೆ ಇವನು ಮಾತ್ರ ಬೆಚ್ಚಗಿನ ಲಂಡನ್‌ನಲ್ಲಿ ಬದುಕಿ ಉಳಿದಿದ್ದ. ಅದೇ ಅವನ ಪಾಲಿಗೆ ದೊಡ್ಡ ಶಿಕ್ಷೆಯಾಯಿತು.
ಅವನನ್ನು ಕಾಡುತ್ತಿದ್ದ ಅತಿ ದೊಡ್ಡ ಪ್ರಶ್ನೆ ಒಂದೇ - ‘ಒಂದು ವೇಳೆ ನಾನು ಇನ್ನೂ ಹನ್ನೊಂದು ಮೈಲಿ ಮುಂದೆ ಹೋಗಿದ್ದರೆ ಸ್ಕಾಟ್ ಮತ್ತು ಅವನ ತಂಡ ಬದುಕುತ್ತಿತ್ತೇ?’
ಸ್ಕಾಟ್ ತನ್ನ ಕೊನೆಯ ದಿನಗಳಲ್ಲಿ ಅತೀವ ನಿರೀಕ್ಷೆಯಿಂದ ಕಾಯುತ್ತಿದ್ದದ್ದು ಇದೇ ಚೆರಿ-ಗಾರಾರ್ಡ್‌ಗಾಗಿ! ಸ್ಕಾಟ್ ಮತ್ತು ಅವನ ತಂಡ ಮಂಜಿನ ಗುಡಿಸಲಿನಲ್ಲಿ ಆಹಾರವಿಲ್ಲದೇ ಸಾಯುವ ಅಂಚಿನಲ್ಲಿದ್ದಾಗ, ಅದೇ ಸಮಯದಲ್ಲಿ ಚೆರಿ-ಗಾರಾರ್ಡ್ ಆಹಾರದ ಪೊಟ್ಟಣಗಳೊಂದಿಗೆ ಕೇವಲ 11 ಮೈಲಿ ದೂರದ 'ಒನ್ ಟನ್ ಡಿಪೋ' (One Ton Depot) ತನಕ ಹೋಗಿದ್ದ. ಆದರೆ ಹವಾಮಾನ ತೀರ ಹದಗೆಟ್ಟಿದ್ದರಿಂದ ಮತ್ತು ನಾಯಿಗಳು ಸಾಯಬಹುದು ಎಂಬ ಕಾರಣಕ್ಕೆ ಅವನು ಅಲ್ಲಿಂದ ವಾಪಸ್ ಬಂದಿದ್ದ. ನಂತರದ ದಿನಗಳಲ್ಲಿ ಚೆರಿ-ಗಾರಾರ್ಡ್‌ಗೆ ಆ 11 ಮೈಲಿಗಳ ಅಂತರ ಒಂದು ಯುಗವಾಗಿ ಕಂಡಿತು. ‘ನಾನು ಯಾಕೆ ನಾಯಿಗಳ ಬಗ್ಗೆ ಯೋಚಿಸಿದೆ? ನಾನು ಯಾಕೆ ಸಾವು ಬಂದರೂ ಪರವಾಗಿಲ್ಲ ಎಂದು ಮುಂದೆ ಸಾಗಲಿಲ್ಲ?’ ಎಂಬ ಪಶ್ಚಾತ್ತಾಪ ಅವನನ್ನು ಹುಚ್ಚನನ್ನಾಗಿ ಮಾಡಿತ್ತು. ರಾತ್ರಿ ಮಲಗಿದರೆ ಸಾಕು, ಅವನಿಗೆ ಸ್ಕಾಟ್‌ನ ಆರ್ತನಾದ ಕೇಳಿಸುತ್ತಿತ್ತು. ಅವನ ಮೈ ನಡುಗುತ್ತಿತ್ತು.
'The Worst Journey in the World' ಕೇವಲ ಪುಸ್ತಕವಲ್ಲ, ಅದು ಚೆರಿ-ಗಾರಾರ್ಡ್ ಪಾಲಿನ ಪ್ರಾಯಶ್ಚಿತ್ತ. ಪುಸ್ತಕಕ್ಕೆ ಆತ ಆ ಹೆಸರಿಟ್ಟಿದ್ದೇ ಆ ವಿಷಾದದಿಂದ. ಆತ ಬರೆಯುತ್ತಾನೆ - ‘ನಾವು ವಾಪಸ್ ಬಂದೆವು, ಆದರೆ ನಮ್ಮ ಆತ್ಮಗಳು ಅಲ್ಲೇ ಉಳಿದುಹೋದವು.’ ಆತ ನಂತರದ ದಿನಗಳಲ್ಲಿ ಖಿನ್ನತೆಗೆ (Depression) ಜಾರಿದ. ಅವನಿಗೆ ಜನರು ಗೌರವ ಕೊಟ್ಟಾಗೆಲ್ಲ ಆತ ಒಳಗೊಳಗೆ ಕುಸಿಯುತ್ತಿದ್ದ. ‘ಸತ್ತವರು ಮಹಾನ್ ಸಾಹಸಿಗಳು, ಬದುಕಿ ಬಂದ ನಾನು ಕೇವಲ ಒಬ್ಬ ಅದೃಷ್ಟವಂತ ಅಷ್ಟೇ" ಎಂಬ ಭಾವನೆ ಅವನನ್ನು ಜೀವನಪೂರ್ತಿ ಕಾಡಿತು. ಚೆರಿ-ಗಾರಾರ್ಡ್ ತನ್ನ ಜೀವನದ ಕೊನೆಯ ದಿನಗಳಲ್ಲಿ ಆ ಅಂಟಾರ್ಕ್ಟಿಕಾದ ದಿನಗಳನ್ನು ಹಂಬಲಿಸುತ್ತಿದ್ದ. ಆ ಕ್ರೂರ ಚಳಿಯಲ್ಲೂ ಅವನಿಗೆ ಗೆಳೆಯರ ಸಾಂಗತ್ಯವಿತ್ತು, ಒಂದು ಗುರಿಯಿತ್ತು. ಆದರೆ ಲಂಡನ್‌ನ ಸುಖಕರ ಜೀವನದಲ್ಲಿ ಅವನಿಗೆ ಒಬ್ಬಂಟಿತನದ ಭೀತಿ ಕಾಡುತ್ತಿತ್ತು. ಅವನಿಗೆ ಆ ಮಂಜಿನ ಲೋಕವೇ ತನ್ನ ನಿಜವಾದ ಮನೆ ಎಂದು ಅನಿಸತೊಡಗಿತ್ತು. ಸಾವು ಒಂದು ಸಲ ಸಂಭವಿಸುತ್ತದೆ, ಆದರೆ ಚೆರಿ-ಗಾರಾರ್ಡ್ ಪ್ರತಿ ದಿನವೂ ಆ 11 ಮೈಲಿಗಳ ಅಂತರವನ್ನು ನೆನೆಸಿಕೊಳ್ಳುತ್ತಾ ನಿತ್ಯವೂ ಸಾಯುತ್ತಿದ್ದ!
ಇದನ್ನೂ ಓದಿ: ನವ ಪ್ರವಾಸೋದ್ಯಮ : ಪ್ರವಾಸಿಗರನ್ನು ಮತ್ತೆ ಮತ್ತೆ ಸೆಳೆಯುವ ಕಲೆ
* 'ಜಗತ್ತಿನ ಅತ್ಯಂತ ಕೆಟ್ಟ ಪ್ರಯಾಣ' (Worst Journey) ಎಂಬ ಪದವನ್ನು ಮೊದಲು ಬಳಸಿದ್ದು ಕ್ಯಾಪ್ಟನ್ ರಾಬರ್ಟ್ ಫಾಲ್ಕನ್ ಸ್ಕಾಟ್. ಮಧ್ಯ ಚಳಿಗಾಲದಲ್ಲಿ ಪೆಂಗ್ವಿನ್ ಮೊಟ್ಟೆಗಳಿಗಾಗಿ ನಡೆಸಿದ ಭೀಕರ ಬೇಟೆಯನ್ನು ಕಂಡು ಅವರು ಚೆರಿ-ಗಾರಾರ್ಡ್‌ಗೆ ಈ ಮಾತು ಹೇಳಿದ್ದರು. ಅದನ್ನೇ ಚೆರಿ ತಮ್ಮ ಪುಸ್ತಕದ ಹೆಸರಾಗಿ ಬಳಸಿಕೊಂಡರು.
* 'ಪೆಂಗ್ವಿನ್ ಪಾರ್ಟಿ' ಪ್ರಯಾಣ: ಈ ಪುಸ್ತಕದ ಶೀರ್ಷಿಕೆಗೆ ಕಾರಣವಾದ ಆ 'ಕೆಟ್ಟ ಪ್ರಯಾಣ' ದಕ್ಷಿಣ ಧ್ರುವಕ್ಕೆ ನಡೆಸಿದ್ದಲ್ಲ; ಬದಲಿಗೆ ಅದು ಎಂಪರರ್ ಪೆಂಗ್ವಿನ್‌ಗಳ ಭ್ರೂಣದ ಅಧ್ಯಯನಕ್ಕಾಗಿ ಮೊಟ್ಟೆಗಳನ್ನು ಸಂಗ್ರಹಿಸಲು 'ಕೇಪ್ ಕ್ರೋಜಿಯರ್'ಗೆ ಕೈಗೊಂಡ ಐದು ವಾರಗಳ ಚಳಿಗಾಲದ ಪಯಣವಾಗಿತ್ತು.
* ದಕ್ಷಿಣ ಧ್ರುವವನ್ನು ತಲುಪುವ ಸ್ಪರ್ಧೆಯ ಜತೆಗೆ, ಈ ಅಭಿಯಾನವು ಒಂದು ಪ್ರಮುಖ ವೈಜ್ಞಾನಿಕ ಉದ್ದೇಶವನ್ನು ಹೊಂದಿತ್ತು. ಪೆಂಗ್ವಿನ್ ಮೊಟ್ಟೆಗಳ ಸಂಗ್ರಹವು ವಿಕಾಸವಾದದ ರಹಸ್ಯಗಳನ್ನು ಬಿಡಿಸಲು ನಿರ್ಣಾಯಕ ಎಂದು ನಂಬಲಾಗಿತ್ತು.
* ಇಷ್ಟೆಲ್ಲ ದುರಂತಗಳ ನಡುವೆಯೂ, ಈ ಪುಸ್ತಕವು ತನ್ನ ಎದ್ದುಕಾಣುವ ವರ್ಣನೆಗಳು, ವೈಜ್ಞಾನಿಕ ವಿವರಗಳು ಮತ್ತು ಮಾನವ ಸಹಿಷ್ಣುತೆಯ ಪ್ರಾಮಾಣಿಕ ಚಿತ್ರಣಕ್ಕಾಗಿ ಪ್ರಸಿದ್ಧವಾಗಿದೆ. ಇದನ್ನು ಜಗತ್ತಿನ ಶ್ರೇಷ್ಠ ಸಾಹಸಮಯ ಪುಸ್ತಕ ಎಂದು ಕರೆಯಲಾಗುತ್ತದೆ.
* ತಂಡದ ಅತ್ಯಂತ ಕಿರಿಯ ಸದಸ್ಯನಾಗಿದ್ದ ಚೆರಿ-ಗಾರಾರ್ಡ್, ದಕ್ಷಿಣ ಧ್ರುವದ ಪಯಣದಲ್ಲಿ ಮಡಿದ ತನ್ನ ಗೆಳೆಯರ ದಿನಚರಿಗಳನ್ನು ಬಳಸಿಕೊಂಡು ಈ ಕಥನಕ್ಕೆ ಒಂದು ವಿಶಿಷ್ಟ ಆಯಾಮ ನೀಡಿದ್ದಾರೆ.
ಈ ಪ್ರಯಾಣ ಮುಗಿಸಿ ವಾಪಸ್ ಬಂದಾಗ ಚೆರಿ-ಗಾರಾರ್ಡ್ ಅವರ ಕೂದಲು ಪೂರ್ತಿ ಬಿಳಿಯಾಗಿತ್ತು ಮತ್ತು ಅವರ ದೃಷ್ಟಿ ಸಾಮರ್ಥ್ಯ ಕುಂದಿತ್ತು. ಕೆಲವೊಮ್ಮೆ ಗೆಲುವಿಗಿಂತಲೂ, ಆ ಹಾದಿಯಲ್ಲಿ ನಾವು ತೋರುವ ಶಿಸ್ತು ಮತ್ತು ಗೆಳೆಯರಿಗಾಗಿ ತೋರುವ ತ್ಯಾಗವೇ ಜೀವನದ ದೊಡ್ಡ ಸಾಧನೆ.