ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?
ವಿಮಾನ ಪ್ರಯಾಣವು ಇಂದಿನ ದಿನಗಳಲ್ಲಿ ಅತ್ಯಂತ ಸುರಕ್ಷಿತ ಸಾರಿಗೆ ಮಾಧ್ಯಮಗಳಲ್ಲಿ ಒಂದಾಗಿದೆ. ವಿಮಾನಯಾನ ಉದ್ಯಮವು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಅನುಸರಿಸುತ್ತದೆ ಮತ್ತು ಬೋಯಿಂಗ್, ಏರ್ಬಸ್ ನಂಥ ವಿಮಾನ ತಯಾರಿಕಾ ಕಂಪನಿಗಳು ತಮ್ಮ ವಿಮಾನಗಳನ್ನು ತೀವ್ರ ಒತ್ತಡ ಮತ್ತು ಅಪಾಯಕಾರಿ ಪರಿಸ್ಥಿತಿಗಳಿಗೆ ಒಡ್ಡಿ ಪರೀಕ್ಷಿಸುತ್ತವೆ.
ವಿಮಾನದಲ್ಲಿ ಯಾವ ಆಸನವು ಅತ್ಯಂತ ಸುರಕ್ಷಿತ? ಈ ಪ್ರಶ್ನೆಗೆ ಇಲ್ಲಿಯ ತನಕ ನಿಖರ, ಸ್ಪಷ್ಟ ಉತ್ತರ ಸಿಕ್ಕಿಲ್ಲ. ಏಕೆಂದರೆ ಇದು ಆಸನದ ಸ್ಥಾನ, ಅಪಘಾತದ ಸ್ವರೂಪ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಪ್ರಶ್ನೆಗೆ ಉತ್ತರಿಸಲು, ಸುರಕ್ಷತೆಯನ್ನು ವಿವಿಧ ದೃಷ್ಟಿಕೋನ ಗಳಿಂದ, ಅಂದರೆ ಅಂಕಿ-ಅಂಶಗಳು, ತಾಂತ್ರಿಕ ಅಂಶಗಳು, ಅಪಘಾತದ ವಿಶ್ಲೇಷಣೆ ಮತ್ತು ಪ್ರಯಾಣಿಕರ ಆರಾಮದಿಂದ ಪರಿಗಣಿಸಬೇಕು.
ವಿಮಾನ ಪ್ರಯಾಣವು ಇಂದಿನ ದಿನಗಳಲ್ಲಿ ಅತ್ಯಂತ ಸುರಕ್ಷಿತ ಸಾರಿಗೆ ಮಾಧ್ಯಮಗಳಲ್ಲಿ ಒಂದಾಗಿದೆ. ವಿಮಾನಯಾನ ಉದ್ಯಮವು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಅನುಸರಿಸುತ್ತದೆ ಮತ್ತು ಬೋಯಿಂಗ್, ಏರ್ಬಸ್ ನಂಥ ವಿಮಾನ ತಯಾರಿಕಾ ಕಂಪನಿಗಳು ತಮ್ಮ ವಿಮಾನಗಳನ್ನು ತೀವ್ರ ಒತ್ತಡ ಮತ್ತು ಅಪಾಯಕಾರಿ ಪರಿಸ್ಥಿತಿಗಳಿಗೆ ಒಡ್ಡಿ ಪರೀಕ್ಷಿಸುತ್ತವೆ.
ಆದರೂ, ವಿಮಾನ ಅಪಘಾತಗಳು ಸಂಭವಿಸಿದರೆ, ಕೆಲವು ಆಸನಗಳು ಇತರರಿಗಿಂತ ಸುರಕ್ಷಿತವಾಗಿರಬಹುದು ಎಂಬುದನ್ನು ಅಂಕಿ-ಅಂಶಗಳು ಮತ್ತು ಅಧ್ಯಯನಗಳು ಸೂಚಿಸುತ್ತವೆ. ವಿಮಾನದ ಆಸನದ ಸುರಕ್ಷತೆಯನ್ನು ಮೌಲ್ಯಮಾಪನ ಮಾಡುವಾಗ, ನಿರ್ಗಮನ ದ್ವಾರಗಳ ಸಾಮೀಪ್ಯ ಅಂದರೆ ತುರ್ತು ಸ್ಥಿತಿಯಲ್ಲಿ ಶೀಘ್ರವಾಗಿ ವಿಮಾನದಿಂದ ಹೊರಬರಲು ಸಹಾಯಕವಾಗುವ ಆಸನಗಳು, ವಿಮಾನದ ರಚನಾತ್ಮಕ ಸ್ಥಾನ, (ಉದಾಹರಣೆಗೆ ರೆಕ್ಕೆಗಳ ಬಳಿಯ ಆಸನಗಳು, ರಚನಾತ್ಮಕವಾಗಿ ಬಲಿಷ್ಠವಾಗಿರುತ್ತವೆ), ಅಪಘಾತದ ಸ್ವರೂಪ ಹಾಗೂ ಆಸನದ ಸ್ಥಾನ (ಕಿಟಕಿಯ ಬಳಿಯ ಆಸನ, ಕಾರಿಡಾರ್ ಆಸನ ಅಥವಾ ಮಧ್ಯದ ಆಸನ)ವನ್ನು ಪರಿಗಣಿಸಲಾಗುತ್ತದೆ.

ವಿಮಾನ ಅಪಘಾತಗಳನ್ನು ವಿಶ್ಲೇಷಿಸಿದ ಹಲವು ಅಧ್ಯಯನಗಳು, ವಿಮಾನದ ಹಿಂಭಾಗದ ಆಸನಗಳು ಸಾಮಾನ್ಯವಾಗಿ ಸುರಕ್ಷಿತವೆಂದು ಸೂಚಿಸಿವೆ. 2007ರಲ್ಲಿ ‘ಪಾಪ್ಯುಲರ್ ಮೆಕಾನಿಕ್ಸ್’ ನಡೆಸಿದ ಅಧ್ಯಯನವು, 1971ರಿಂದ 2007ರವರೆಗಿನ ವಾಣಿಜ್ಯ ವಿಮಾನ ಅಪಘಾತಗಳನ್ನು ವಿಶ್ಲೇಷಿಸಿತು. ಈ ಅಧ್ಯಯನವು ತೋರಿಸಿದಂತೆ, ವಿಮಾನದ ಹಿಂಭಾಗದ ಆಸನಗಳಲ್ಲಿ ಕುಳಿತವರ ಬದುಕುವ ದರವು ಸರಾಸರಿ ಶೇ.69ರಷ್ಟಿದ್ದರೆ, ಮಧ್ಯ ಭಾಗದಲ್ಲಿ ಶೇ.56 ಮತ್ತು ಮುಂಭಾಗದಲ್ಲಿ ಶೇ.49 ಆಗಿತ್ತು. ಈ ಅಂಕಿ-ಅಂಶವು ವಿಮಾನದ ಹಿಂಭಾಗವು ಸಾಮಾನ್ಯವಾಗಿ ಸುರಕ್ಷಿತವೆಂದು ಸೂಚಿಸುತ್ತದೆ.
ಇದಕ್ಕೆ ಕಾರಣವೇನೆಂದರೆ, ವಿಮಾನದ ಮುಂಭಾಗವು (ಕಾಕ್ಪಿಟ್ ಮತ್ತು ಫಸ್ಟ್ -ಕ್ಲಾಸ್ ವಿಭಾಗ) ಸಾಮಾನ್ಯವಾಗಿ ಗಾಳಿಯಲ್ಲಿ ಘರ್ಷಣೆ ಅಥವಾ ರನ್ವೇ ಅಪಘಾತದಲ್ಲಿ ಮೊದಲಿಗೆ ತಗಲುವ ಭಾಗವಾಗಿರುತ್ತದೆ. ರೆಕ್ಕೆಗಳ ಬಳಿಯ ಆಸನಗಳು ರಚನಾತ್ಮಕವಾಗಿ ಬಲಿಷ್ಠವಾಗಿದ್ದರೂ, ಇಂಧನ ಟ್ಯಾಂಕ್ ಗಳ ಸಾಮೀಪ್ಯವು ಬೆಂಕಿಯ ಅಪಾಯವನ್ನು ಹೆಚ್ಚಿಸಬಹುದು.

ಹಿಂಭಾಗದ ಆಸನಗಳು ಈ ಎರಡೂ ಅಪಾಯಗಳಿಂದ ತುಲನಾತ್ಮಕವಾಗಿ ದೂರವಿರುತ್ತವೆ. 2015ರಲ್ಲಿ ‘ಟೈಮ್’ ಮ್ಯಾಗಜಿನ್ನ ಇನ್ನೊಂದು ವಿಶ್ಲೇಷಣೆಯು, 1985ರಿಂದ 2000ದವರೆಗಿನ 17 ವಿಮಾನ ಅಪಘಾತಗಳನ್ನು ಪರಿಶೀಲಿಸಿತು. ಈ ಅಧ್ಯಯನವು, ವಿಮಾನದ ಹಿಂಭಾಗದ ಮೂರನೇ ಭಾಗದಲ್ಲಿ ಕುಳಿತವರ ಬದುಕುವ ದರವು ಶೇ.32ರಷ್ಟು ಹೆಚ್ಚಿನದೆಂದು ಕಂಡುಕೊಂಡಿತು.
ಆದರೆ, ಈ ಅಂಕಿ-ಅಂಶಗಳು ಸಾರ್ವತ್ರಿಕವಾಗಿ ಎಲ್ಲ ಅಪಘಾತಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮುಂಭಾಗದ ಆಸನಗಳು ಸುರಕ್ಷಿತವಾಗಿರಬಹುದು. ತುರ್ತು ಸ್ಥಿತಿಯಲ್ಲಿ, ವಿಮಾನದಿಂದ ಶೀಘ್ರವಾಗಿ ಹೊರಬರಲು ಸಾಧ್ಯವಾಗುವುದು ಬಚಾವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿ, ‘ನಿರ್ಗಮನ ದ್ವಾರಗಳ (exit rows) ಬಳಿಯ ಆಸನಗಳು’ ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲ್ಪಡುತ್ತವೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ( FAA) ಮತ್ತು ಇತರ ವಿಮಾನಯಾನ ನಿಯಂತ್ರಣ ಸಂಸ್ಥೆಗಳು, ಈ ಆಸನಗಳಲ್ಲಿ ಕುಳಿತವರು ತುರ್ತು ಸಂದರ್ಭದಲ್ಲಿ ಸಿಬ್ಬಂದಿಗೆ ಸಹಾಯ ಮಾಡಲು ಸಮರ್ಥರಾಗಿರಬೇಕೆಂದು ಬಯಸುತ್ತವೆ. ನಿರ್ಗಮನ ದ್ವಾರಗಳ ಬಳಿಯ ಆಸನಗಳು, ವಿಶೇಷವಾಗಿ ರೆಕ್ಕೆಗಳ ಮೇಲಿರುವ ತುರ್ತು ನಿರ್ಗಮನ ದ್ವಾರಗಳ ಬಳಿಯವು, ತುರ್ತು ಸ್ಥಿತಿಯಲ್ಲಿ ಶೀಘ್ರವಾಗಿ ವಿಮಾನದಿಂದ ಹೊರಬರಲು ಅವಕಾಶ ನೀಡುತ್ತವೆ. ಆದರೆ, ಈ ಆಸನಗಳನ್ನು ಆಯ್ಕೆ ಮಾಡುವವರು ತಮಗೆ ಜವಾಬ್ದಾರಿಯೂ ಇದೆ ಎಂಬುದನ್ನು ಅರಿತಿರಬೇಕು. ಏಕೆಂದರೆ ತುರ್ತು ಸಂದರ್ಭದಲ್ಲಿ ನಿರ್ಗಮನ ದ್ವಾರವನ್ನು ತೆರೆಯಲು ಸಹಾಯ ಮಾಡಬೇಕಾಗಬಹುದು.