ಮಾಚಾ-ಜಪಾನಿ ರುಚಿ ವೈಶಿಷ್ಟ್ಯದ ಪ್ರತೀಕ
ಜಪಾನ್ ಪ್ರವಾಸವೆಂದರೆ ಕೇವಲ ಪುರಾತನ ದೇವಾಲಯಗಳು, ಸುಂದರ ನಗರಗಳು ಮತ್ತು ತಂತ್ರಜ್ಞಾನದ ವೈಭವವನ್ನು ನೋಡುವುದಷ್ಟೇ ಅಲ್ಲ, ಅಲ್ಲಿನ ಆಹಾರ ಮತ್ತು ಸಂಸ್ಕೃತಿಯ ವಿಶಿಷ್ಟ ಪರಂಪರೆಯನ್ನೂ ಅರಿಯುವ ಅವಕಾಶ. ಅಂಥ ಅನುಭವದಲ್ಲಿ ನಮ್ಮನ್ನು ಸೆಳೆದದ್ದು ಗಿಣಿಹಸಿರು ಬಣ್ಣದ ‘ಮಾಚಾ’, ಜಪಾನಿನ ಚಹಾ ಸಂಸ್ಕೃತಿಯ ಹೆಮ್ಮೆಯ ಪ್ರತೀಕ. ಮಾಚಾದ ತವರು ಊಜಿ ಪಟ್ಟಣಕ್ಕೆ ಕಾಲಿಟ್ಟಾಗ, ಒಂದು ಕಪ್ ಚಹಾದ ಹಿಂದಿರುವ ಶತಮಾನಗಳ ಇತಿಹಾಸ, ರುಚಿ ಮತ್ತು ಸಂಸ್ಕೃತಿಯ ಪರಿಚಯವೂ ನಮ್ಮದಾಯಿತು.
- ಎಸ್. ಶಿವಲಿಂಗಯ್ಯ
ನಾವು ಜಪಾನಿಗೆ ಹೊರಟು ನಿಂತ ವಿಷಯ ಕುಟುಂಬಸ್ಥರಲ್ಲಿ ಹಲವರಿಗೆ ಬಗೆಬಗೆಯ ನಿರೀಕ್ಷೆಗಳು ಗರಿಗೆದರಲು ಕಾರಣವಾಯಿತು. ಸಾಧ್ಯವಾಗುವುದಾದರೆ, ನಾನೂ ಏಕೆ ಜತೆಯಾಗಬಾರದು ಎಂಬ ಆಸೆ ಕೆಲವರಲ್ಲಿ ಮೂಡಿದರೆ, ಮತ್ತೆ ಕೆಲವರಿಂದ ನಮಗಾಗಿ ಇಂತಿಂಥ ಜಪಾನಿ ವಿಶಿಷ್ಟ ವಸ್ತುಗಳನ್ನು ತರಬೇಕೆಂಬ ಆಗ್ರಹದ ಜತೆಗೆ ಬ್ರಾಂಡ್ ಹೆಸರಿನೊಂದಿಗೆ ಆ ವಸ್ತುಗಳ ಫೊಟೋ ಇರುವ ಪಟ್ಟಿ ಸಹ ನಮ್ಮ ಕೈಸೇರಿದವು. ಬೆಂಗಳೂರಿನಲ್ಲಿ ಅಲಭ್ಯವಾದ / ದುಬಾರಿಯಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೇಡಿಕೆ ಸಹಜವಾದರೂ, ಜತೆಗೆ ಇನ್ನೂ ಶಾಲಾ ಹಂತದಲ್ಲಿರುವ ಮೊಮ್ಮಗಳು ಶ್ರೇಷ್ಠ ಬೈದ್ಯ ಕೊಟ್ಟ ಮಾಚಾ ಪರಿಮಳದ ತಿನಿಸುಗಳು ಹಳೆಯ ತಲೆಮಾರಿನ ನಮಗೆ ಆಗಂತುಕವೆನಿಸಿದವು.
ಇದನ್ನೂ ಓದಿ: ಜಪಾನಿನ ಸಾಂಪ್ರದಾಯಿಕ ಪುಷ್ಪಾಲಂಕಾರ ಕಲೆ
ಘಮಘಮಿಸಿದ ಮಾಚಾ
ಕ್ಯೊಟೊ ನಗರ ತಲುಪಿದ ನಂತರ, ಊರು ನೋಡುವ ಉಮೇದಿನಲ್ಲಿದ್ದ ನಮಗೆ ಮಾಚಾ ಎನ್ನುವ ಪದ ನೆನಪಿನಿಂದ ಹಾರಿಹೋಗಿತ್ತು. ಆದರೆ, ನಮ್ಮ ಪ್ರವಾಸದ ಆಯೋಜಕಿ, ಮಾರ್ಗದರ್ಶಿ ಮೊಮ್ಮಗಳು ಶಕ್ತಿ ಶ್ರೀಧರ್ ಮಸ್ತಿಷ್ಕದಲ್ಲಿ ದಾಖಲಾಗಿದ್ದ ಕಾರಣ ನಿಶ್ಚಿಂತೆಯಿಂದ ಅವಳು ಹೇಳಿದ ಕಡೆಗೆ ರೈಲೊ, ಬಸ್ಸೊ ಹತ್ತುತ್ತಿದ್ದೆವು. ಹಾಗಾಗಿ ಒಂದು ಬೆಳಗ್ಗೆ ಕ್ಯೊಟೊ ಜಿಲ್ಲೆಯಲ್ಲೇ ಇರುವ ಸಮೀಪದ ಊಜಿ ಎಂಬ ಪಟ್ಟಣಕ್ಕೆ ನಮ್ಮ ಸವಾರಿ ಹೊರಟಿತು. ರೈಲು ನಿಲ್ದಾಣದಿಂದ ಹೊರಬಂದು ಅಂಗಡಿ ಸಾಲಿನಲ್ಲಿ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ನಮ್ಮ ಗ್ರಹಣೇಂದ್ರಿಯ ಯಾವುದೊ ವಿಶಿಷ್ಟ ಪರಿಮಳವನ್ನು ಆಘ್ರಾಣಿಸಿತು. ಎತ್ತ ತಿರುಗಿದರೂ, ಯಾವ ಅಂಗಡಿ ಹೊಕ್ಕರೂ ಅದೇ ಪರಿಮಳ - ಹೆಸರು ʼಮಾಚಾʼ.

ಚೀನಾದಿಂದ ಜಪಾನ್‌ಗೆ ಮಾಚಾ
ಮಾಚಾ ಎನ್ನುವುದು ಒಂದು ಬಗೆಯ ಚಹಾದ ಹೆಸರು. ಝೆನ್ ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಜಪಾನ್ ಧರ್ಮಗುರುಗಳು ಚೀನಾಕ್ಕೆ ಆಗಾಗ್ಗೆ ಭೇಟಿಕೊಡುತ್ತಿದ್ದು, ಅವರ ಮೂಲಕ 8ನೆಯ ಶತಮಾನದಲ್ಲಿ ಜಪಾನಿಗೆ ಚೀನಾ ಮೂಲದ ಈ ಸಸ್ಯದ ಪ್ರವೇಶವಾಯಿತು. ಪೂರ್ಣವಾಗಿ ನೆರಳಿನಲ್ಲಿ ಬೆಳೆಸಲಾಗುವ ಒಂದು ವಿಶಿಷ್ಠ ತಳಿಯ ಚಹಾ ಗಿಡವಾದ ಇದರ ಚಿಗುರು ಎಲೆಗಳನ್ನು ಶೇಖರಿಸಿ, ನೆರಳಿನಲ್ಗಿ ಒಣಗಿಸಿ, ಬೀಸುವ ಕಲ್ಲಿನ ಸಹಾಯದಿಂದ ನುಣ್ಣಗೆ ಅರೆದು ಹೊರತರುವ ಗಿಣಿ ಹಸಿರು ಬಣ್ಣದ ಪುಡಿಯೇ ಮಾಚಾ. ಚೀನಾ ಮೂಲದಲ್ಲಿ ಇದನ್ನು ಮೋಚಾ ಎಂದು ಕರೆಯುವ ವಾಡಿಕೆಯೂ ಉಂಟು. ನಾವು ಅಡಿಗೆಗೆ ಬಳಸುವ ಅರಿಶಿನದ ಪುಡಿಗಿಂತಲೂ ನವಿರಾಗಿ ಅರೆದು ಮಾಡಿದ ಈ ಪುಡಿಯಲ್ಲಿ ಕಣಗಳ ಸೂಕ್ಷ್ಮತೆಯ ಆಧಾರದಲ್ಲಿ ವಿವಿಧ ವರ್ಗಗಳಿವೆ. ಪುಡಿಯನ್ನು ಕುಡಿಯುವ ಬಸಿಗೆ ಹಾಕಿ ಬಿಸಿ ನೀರು ಸುರಿದಾಗ ದಪ್ಪನೆಯ ಕಣಗಳು ತಳಕ್ಕೆ ಇಳಿದರೆ ಅದು ಎರಡನೆಯ ದರ್ಜೆಯದೆಂದು ಪರಿಗಣಿಸಲಾಗುತ್ತದೆ. ಬಿಸಿ ನೀರಿನಲ್ಲಿ ಪೂರ್ಣವಾಗಿ ಲೀನವಾಗಿ ತನಗೇ ವಿಶಿಷ್ಠವಾದ ಪರಿಮಳದೊಂದಿಗೆ ಉಮಾಮಿ ಎಂಬ ರುಚಿಯನ್ನು ನೀಡಿದರೆ ಅದು ಪ್ರಥಮ ದರ್ಜೆಯದೆನಿಸಿಕೊಳ್ಳತ್ತದೆ.
ಒಂದು ಕಾಲದಲ್ಲಿ ಮಾಚಾ ಜಪಾನೀ ಸಮಾಜದ ಉಚ್ಚ ವರ್ಗದವರ ಪೇಯವೆನಿಸಿಕೊಂಡಿತ್ತು. ಕುಡಿಯುವಾಗ ನಾಲಗೆಯ ತುದಿಗೆ ಸ್ತುಸು ಖಾರದಂತೆ ಎಂದು ಅನಿಸಿದರೂ, ಗುಟುಕಿಸಿದಾಗ ಮಧುರ ಅನುಭವ ನೀಡುವ ಈ ಪೇಯ (ಉಪ್ಪು, ಹುಳಿ, ಸಿಹಿ, ಖಾರದಂತೆ) ಉಮಾಮಿ ಎಂದು ವರ್ಗೀಕರಿಸಿರುವ ರುಚಿಯನ್ನು ಹೊಂದಿದೆ. ನಾವು ಅಡುಗೆಗೆ ಬಳಸುವ ಇಂಗಿನಂತೆ, ಮಾನೋಸೋಡಿಯಂ ಗ್ಲುಟನೇಟ್ (MSG - ಚೈನೀ ಸಾಲ್ಟ್) ಗುಣದ ಇದು ಮೂಗಿಗೆ ತುಸು ಮೀನಿನ ವಾಸನೆ ಹೊರಸೂಸುತ್ತದೆ. ಭಾರತದಲ್ಲಿ ನಾವು ಸೇವಿಸುವ ಚಹಾವನ್ನು ಹಾಲಿನೊಂದಿಗೆ ಬೆರಸಿ, ಬೇಕಾದರೆ ಬೇರೆಬೇರೆ ಮಸಾಲೆಗಳನ್ನು ಸಂಯೋಗಿಸುವ ಮೂಲಕ ವಿಶಿಷ್ಟ ಪರಿಮಳ / ಕಡು ರುಚಿಯನ್ನು ಅನುಭವಿಸಿದರೆ, ಜಪಾನೀಯರು ಗಿಣಿ ಹಸಿರು ವರ್ಣದ ಈ ಪುಡಿಯನ್ನು ಬಿಸಿ ನೀರಿನೊಂದಿಗೆ ಬೆರಸಿ ಕುಡಿಯುವುದರಲ್ಲಿ ಸುಖ ಕಾಣುತ್ತಾರೆ. ಇದು ಅವರು ಕುಡಿಯುವ ಅನೇಕ ಪುಷ್ಪಾಧಾರಿತ ಲಘು ಚಹಾಗಳಂಥೆ ಹೃದಯದ ಆರೋಗ್ಯಕ್ಕೆ, ತೂಕ ಇಳಿಸಲು, ಇತ್ಯಾದಿ ಆರೋಗ್ಯ ಲಾಭವಿದೆಯೆಂದು ಹೇಳಲಾಗುತ್ತದೆ.
ಚೀನಾ ಮೂಲದ ಈ ಸಸ್ಯ ಕ್ರಮೇಣ ತವರು ನೆಲದಲ್ಲಿ ಕಾಣೆಯಾಗಿ, ಜಪಾನಿನ ಸಾಂಸ್ಕೃತಿಕ ಪ್ರತಿಷ್ಠೆಯ ಸಸ್ಯವಾಯಿತು. ಅದರ ಸ್ವಾದ, ರುಚಿಗೆ ಮರುಳಾದ ಜನಕ್ಕೆ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸಲಾಗದ ಕಾರಣಕ್ಕೆ ಇದು ಕೆಲಕಾಲ ಪಡಿತರಕ್ಕೂ ಒಳಗಾಗಿತ್ತಂತೆ. ಇತ್ತೀಚೆಗೆ ಕೆಲವು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿಯೂ ಇದನ್ನು ಬೆಳೆಯಲಾರಂಭಿಸಿದ್ದಾರೆ. ಆದರೂ ಜಪಾನಿ ಮಾಚಾಗಿರುವ ಪ್ರತಿಷ್ಠೆ ಮುಕ್ಕಾಗಿಲ್ಲ. ಭಾರತದಲ್ಲಿ ಬೇರೆಬೇರೆ ಭಾಗಗಳಲ್ಲಿ ಬೆಳೆಯುವ ಚಹಾವನ್ನು ಆ ವಿಭಾಗದ ಹೆಸರಿನಲ್ಲಿ ಗುರುತಿಸುವಂತೆ, ಆರಂಭದಲ್ಲಿ ಇದರ ಕೃಷಿ ಮಾಡಿದ / ಮಾರಾಟ ಮಾಡಿದ ಕೆಲವು ಕುಟುಂಬಗಳ ಹೆಸರಿನಲ್ಲಿ ಇದು ಬ್ರಾಂಡಿಂಗ್ ಆಗಿದೆ.

ಮಾಚಾದ ತವರೂರು ಊಜಿ
ಮಾಚಾ ಬಗ್ಗೆ ಇಷ್ಟೆಲ್ಲಾ ಸರಿ ಆದರೆ, ಇಡೀ ಜಪಾನಿನಾದ್ಯಂತ ಲಭ್ಯವಿರುವ ಇದರ ಬಳಕೆಯ ತಿನಿಸುಗಳನ್ನು ಕೊಳ್ಳಲು ಊಜಿಗೆ ಬಂದುದೇಕೆ? ಕಾರಣ, ಜಪಾನಿನಲ್ಲಿ ಮಾಚಾ ಕೃಷಿ ಮೊದಲಾಗಿದ್ದೇ ಊಜಿಯಲ್ಲಿ. ಜಪಾನಿನ ಹಳೆಯ ರಾಜಧಾನಿ ಕ್ಯೊಟೊ ಮತ್ತು ನಾರಾ ನಗರಗಳ ಮಧ್ಯದಲ್ಲಿದೆ ಸುಮಾರು 2 ಲಕ್ಷ ಜನಸಂಖ್ಯೆಯ ಈ ಊಜಿ ಪಟ್ಟಣ. ಇಲ್ಲಿ ಮಾಚಾ ಬೆಳೆಯನ್ನು ಪ್ರಧಾನವಾಗಿ ಕೃಷಿ ಮಾಡುವ, ಸಂಗ್ರಹಿಸಿದ ಎಲೆಗಳನ್ನು ಸಂಸ್ಕರಿಸುವ ವಿವಿಧ ಹಂತಗಳನ್ನು ಪ್ರವಾಸಿಗರು ವೀಕ್ಷಿಸುವ ಸೌಲಭ್ಯವೂ ಇದೆ. ಹಾಗಾಗಿಯೇ ಮಾಚಾ ಎಂದರೆ ಊಜಿ, ಊಜಿ ಎಂದರೆ ಮಾಚಾ ಎನ್ನುವಂತಾಗಿದೆ. ಮಾಚಾ ಕೇವಲ ಚಹಾ ಮಾತ್ರವಲ್ಲ, ಇದರ ಪರಿಮಳ, ರುಚಿಗೆ ಮಾರುಹೋಗಿರುವ ಜಪಾನೀಯರು ಬೇಕರಿ ಉತ್ಪನ್ನಗಳು, ಚಾಕೊಲೆಟ್, ಐಸ್‌ಕ್ರೀಮ್ ಇತ್ಯಾದಿಗಳ ತಯಾರಿಕೆಯಲ್ಲಿಯೂ ಬಳಸಿ ಮಾಚಾವನ್ನು ವಿಶ್ವವ್ಯಾಪಿಯಾಗಿಸಿದ್ದಾರೆ. ಊಜಿಯ ಬೀದಿಗಳ ನೂರಾರು ಅಂಗಡಿಗಳಲ್ಲಿ ನಾನಾ ಬಗೆಯ ಮಾಚಾ ತಿನಿಸುಗಳು ಪ್ರವಾಸಿಗರ ಮೂಗನ್ನು / ಚಿತ್ತವನ್ನು ಆಕರ್ಷಿಸುತ್ತವೆ. ಕೆಲವರು ಸ್ಯಾಂಪಲ್ ನೀಡುವ ಮೂಲಕ ಗ್ರಾಹಕರನ್ನು ಸಮ್ಮೋಹನಗೊಳಿಸುವ ಪ್ರಯತ್ನ ಮಾಡುವುದುಂಟು.
ನದಿ ಸಾಕ್ಷಿಯಾದ ಇತಿಹಾಸ
ಮಾಚಾ ಮಾತ್ರವಲ್ಲದೆ, ಸ್ಥಳೀಯರು ಊಜಿ ಗವಾ ಎಂದು ಕರೆಯುವ, ಸುಂದರ ಪ್ರಕೃತಿಯ ಮಡಿಲಿಂದ ಹರಿದು ಬರುವ ಒಂದು ಸ್ವಚ್ಛ ನದಿ ಊಜಿ ಪಟ್ಟಣವನ್ನು ಇಬ್ಭಾಗಿಸುತ್ತದೆ. ಎರಡು ಭಾಗಗಳನ್ನು ಸಂಪರ್ಕಿಸಲು 1300 ವರ್ಷಗಳ ಇತಿಹಾಸವಿರುವ ಸುಮಾರು 155 ಮೀ. ಉದ್ದ, 25ಮೀ. ಅಗಲದ ಜಪಾನಿನಲ್ಲಿರುವ ಅತ್ಯಂತ ಹಳೆಯ ಸೇತುವೆಗಳಲ್ಲಿ ಒಂದಾಗಿರುವ ಸೇತುವೆಯಿದೆ. ಇದರ ಮೇಲಿಂದ ಕಣ್ಣಿಗೆ ಕಾಣುವ ಪ್ರಕೃತಿ ದೃಶ್ಯ ನಯನಮನೋಹರ. ಈ ಸೇತುವೆಯ ಸುದೀರ್ಘ ಇತಿಹಾಸದಲ್ಲಿ ಅನೇಕ ಸಲ ಯುದ್ದ, ಪ್ರವಾಹ, ಭೂಕಂಪ ಇತ್ಯಾದಿಗಳಿಂದ ಶಿಥಿಲಗೊಂಡರೂ, ಊಜಿ ನಾಗರಿಕರ ಸ್ವಾಭಿಮಾನದ ಪ್ರತೀಕವಾಗಿ ಮತ್ತೆ ಮತ್ತೆ ಪುನರ್‌ನಿರ್ಮಾಣಗೊಳ್ಳುತ್ತಿದೆ. ಈ ನದಿಯ ದಂಡೆಯ ಮೇಲೆ 9-12ನೆಯ ಶತಮಾನಗಳ ಸುಮಾರಿಗೆ ರಚಿತವಾಗಿದೆ ಎಂದು ಭಾವಿಸಲಾಗಿರುವ ಜಪಾನಿ ಭಾಷೆಯ ಮಹೋನ್ನತ ಸಾಹಿತ್ಯ ಕೃತಿ ʼಟೇಲ್ ಆಫ್ ಗೆನ್ಝಿʼಯ ಕರ್ತೃ ಮುರಸಕಿ ಶಿಕಿಬು ಅವರ ಸುಂದರ ಪ್ರತಿಮೆಯಿದೆ. ಊಜಿಯ ಈ ನದಿ ಮತ್ತು ಅದರ ಮೇಲಿನ ಸೇತುವೆ ಕುರಿತು ಅನೇಕ ಜಪಾನಿ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖವಿದೆ, ಚಿತ್ರ ಮತ್ತು ಶಿಲ್ಪಗಳಲ್ಲಿ ಸಹ ಪ್ರತಿಬಿಂಬಿತವಾಗಿದೆ.
ತಣ್ಣನೆಯ ನದಿಯ ನೀರಿನಲ್ಲಿ ಕಾಲು ತೋಯಿಸಿ, ದಂಡೆಯ ಮೇಲೆ ಕುಳಿತು ಸುಂದರ ಪ್ರಕೃತಿಯ ಚಿತ್ರ ಬಿಡಿಸುತ್ತಿರುವ ಕಲಾವಿದರ ತನ್ಮಯತೆಗೆ ಭಂಗಬರದಂತೆ ಫೊಟೋಶೂಟ್ ಮುಗಿಸಿ, ಮಾಚಾ ಟೀ ಕುಡಿದು, ಮೊದಲೇ ಪಟ್ಟಿಮಾಡಿದ್ದ ಮಾಚಾ ಫ್ಲೇವರ್ / ರುಚಿಯುಳ್ಳ ತಿನಿಸುಗಳನ್ನು ಖರೀದಿಸಿ, ಹೊರಡುವ ಮುನ್ನ ಜಪಾನಿನ ಒಂದು ಸಾಂಸ್ಕೃತಿಕ ಹೆಗ್ಗುರುತಿಗೆ ಮಡಿಲಾಗಿರುವ ಪುಟ್ಟ ಪಟ್ಟಣ ಊಜಿಗೆ ಬಂದದ್ದು ವ್ಯರ್ಥವಾಗಲಿಲ್ಲ ಎಂಬ ಸಾರ್ಥಕ ಭಾವದೊಡನೆ ನಮ್ಮನ್ನು ಕ್ಯೊಟೊ ನಗರಕ್ಕೆ ಹೊತ್ತೊಯ್ಯುವ ರೈಲಿನ ಒಳಹೊಕ್ಕೆವು.