ಇದು 1753ರ ಮನೆ, ಗೊತ್ತಿರಲಿ!
ಇದು ಬರ್ಕ್ ಶೈರ್ ಭಾಗದಲ್ಲಿ ಹದಿನೆಂಟನೇ ಶತಮಾನದ ಮಧ್ಯದಲ್ಲಿ ಇಲ್ಲಿ ವಲಸೆ ಬಂದು ನೆಲೆಸಿದವರು ಕಟ್ಟಿಕೊಂಡ ಮನೆಗಳ ಮಾದರಿ.
ಮೆಸೆಚ್ಯುಸೆಟ್ಸ್ ನ ವಿಲಿಯಮ್ಸ್ ಟೌನ್ ನ ರಸ್ತೆಯೊಂದರ ಬದಿಯಲ್ಲಿ ಓಡಾಡುವಾಗ 1753ಯ ಮನೆ ಎಂಬ ಫಲಕ ಕಾಣಿಸಿತು. ಅದರ ಬದಿಯಲ್ಲಿಯೇ ಮರದಿಂದ ತಯಾರಾದ ಚಿಕ್ಕ ಮನೆಯೊಂದು ಗೋಚರಿಸಿತು. ಮನೆಯ ವಿವರಗಳನ್ನು ಕುತೂಹಲದಿಂದ ಓದಿದಾಗ ತಿಳಿದ ವಿಷಯಗಳು ಉಪಯುಕ್ತವಾಗಿದ್ದವು.
ಹದಿನೆಂಟನೇ ಶತಮಾನದ ಮಧ್ಯದಲ್ಲಿ, ಬರ್ಕ್ ಶೈರ್ ಗೆ ವಲಸೆ ಬಂದು ನೆಲೆಸಿದವರು ಕಟ್ಟಿಕೊಂಡ ಮನೆಗಳ ಮಾದರಿ. ವಿಲಿಯಮ್ಸ್ ಟೌನ್ ನ ಎರಡು ಶತಕಗಳು ಪೂರೈಸಿದ ಸಂದರ್ಭದಲ್ಲಿ 1953ರಲ್ಲಿ ಸ್ಥಳೀಯ ನಾಗರಿಕರ ಶ್ರಮದಾನದ ಫಲವಾಗಿ ಎದ್ದು ನಿಂತ ಚಿಕ್ಕ ಮನೆ. ಇದು ಸದ್ಯಕ್ಕೆ ವಿಲಿಯಮ್ಸ್ ಟೌನ್ ನ ಹಿಸ್ಟರಿ ಮ್ಯೂಸಿಯಂನ ಅಧೀನದಲ್ಲಿದೆ.
1750ರ ನಂತರ ವಿಲಿಯಮ್ಸ್ ಟೌನ್ ಮತ್ತು ಪಕ್ಕದ ನಾರ್ತ್ ಆಡಮ್ಸ್ ಜಾಗಗಳಲ್ಲಿ ನೆಲೆಸಬೇಕಾದರೆ ಜನರು ಸ್ಥಳೀಯ ಆಡಳಿತದೊಡನೆ ಕರಾರುಪತ್ರ ಮಾಡಿಸಿಕೊಳ್ಳಬೇಕಾಗಿತ್ತು. ಕಟ್ಟಿಕೊಳ್ಳುವ ಮನೆ 15×18 ಅಡಿಗಳ ವಿಸ್ತೀರ್ಣ ಹಾಗೂ ಏಳು ಅಡಿಗಳ ಎತ್ತರವಿರಬೇಕಾಗಿತ್ತು. ಸುತ್ತಲೂ ಸುಮಾರು 5 ಎಕರೆಗಳಷ್ಟು ಖಾಲಿ ಜಾಗ ಇರಬೇಕಾಗಿತ್ತು. ಹಾಗಾದಲ್ಲಿ ಮಾತ್ರ ಅವರ ಹೆಸರಿಗೆ ಜಾಗ ವರ್ಗಾವಣೆಯಾಗುತ್ತಿತ್ತು. ಈ ಕಾರಣದಿಂದಾಗಿ ಈ ಮನೆಗಳಿಗೆ “ರೆಗ್ಯುಲೇಶನ್ ಹೌಸಸ್” ಎಂಬ ಅನ್ವರ್ಥನಾಮ ಅನ್ವಯವಾಯಿತು. ಹತ್ತಿರದ ಮೆಸೆಚ್ಯುಸೆಟ್ಸ್ ಫೋರ್ಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕರು ಈ ತರಹದ ಮನೆಗಳ ಒಡೆಯರಾಗಿದ್ದರು.
1953ರಲ್ಲಿ ಮಾದರಿ ಮನೆ
1753ರಲ್ಲಿ ಬಳಸಿದ ಕಚ್ಚಾವಸ್ತುಗಳು, ಉಪಕರಣಗಳು ಉಪಯೋಗಿಸಿ ಆ ಕಾಲದ್ದೇ ವಿಧಾನಗಳನ್ನು ಬಳಸಿ ಕೆತ್ತಲಾಯಿತು. ತಾತ್ಕಾಲಿಕ ನಿರ್ಮಿತಿ ಎಂದು ಕಟ್ಟಲಾದ ಈ ಪುಟ್ಟಮನೆ ಬಹಳಷ್ಟು ಜನಪ್ರಿಯವಾದುದರಿಂದ ಕಾಲಕಾಲಕ್ಕೆ ರಿಪೇರಿಗೊಂಡು ಇನ್ನೂ ಸುಸ್ಥಿತಿಯಲ್ಲಿದೆ.
ಈಗಿನ ಕಾಲದ ಮನೆಗಳಿಗೆ ಹೋಲಿಸಿದರೆ ಅತಿ ಚಿಕ್ಕದಾಗಿದೆ. ಓಕ್ ಮರಗಳನ್ನು ಬಳಸಲಾಗಿದೆ. ಒಂದು ಬದಿ ಬಾಗಿಲು ಹಾಗೂ ಒಂದು ಕಿಟಕಿ ಇದ್ದರೆ ಇನ್ನೊಂದು ಗೋಡೆಯಲ್ಲಿ ಒಂಟಿ ಕಿಟಕಿ ಇದೆ. ಛಾವಣಿಯಲ್ಲಿರುವ ಕಲ್ಲಿನ ಹೊಗೆಕೊಳವೆ ಆಕರ್ಷಕವಾಗಿದೆ. ಮುಂಚೆ ಇದರ ಒಳಗೆ ಹೋಗಿ ನೋಡುವ ಸಾಧ್ಯತೆಯೂ ಇತ್ತಂತೆ. ಈಗಿನ ದಿನಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಹಾಗೂ ಶಾಲಾ ಮಕ್ಕಳ ಭೇಟಿಗಾಗಿ ಮಾತ್ರ ತೆರೆದಿರುತ್ತದಂತೆ. ಸ್ಥಳೀಯ ವಲಸಿಗರ ಬದುಕು ಆಗಿನ ಕಾಲದಲ್ಲಿ ಹೇಗಿತ್ತು ಎಂಬುದನ್ನು ತಿಳಿಸಲು ಶಾಲಾ ವಿದ್ಯಾರ್ಥಿಗಳನ್ನು ಕರೆತರುವುದು ನಿಜವಾಗಿಯೂ ಪ್ರಶಂಸನೀಯ. ಮೊದಲೇ ಕಾದಿರಿಸಿದರೆ ಇಲ್ಲಿ ಉಳಿದುಕೊಳ್ಳುವ ಸೌಲಭ್ಯವನ್ನೂ ಪಡೆದುಕೊಳ್ಳಬಹುದಂತೆ.