ವ್ಹಾವ್..ವ್ಹಾವ್..ಗೋವಾ!
ಮುಜುಗರವೆನಿಸದ ಒಂಥರಾ ನಿರಾತಂಕ, ಮುಕ್ತ ವಾತಾವರಣ ಹೊಂದಿದೆ ಈ ಗೋವಾ. ಜೊತೆ-ಜೊತೆಗೆ ಒಳಗೊಂದಷ್ಟು ಗಾಂಭೀರ್ಯವನ್ನೂ ಸಹಾ. ನಮ್ಮ ಕದಂಬರ ಆಡಳಿತ ಗೋವಾವರೆಗೂ ಹಬ್ಬಿತ್ತು.
ಗೋವಾ ಅಂದಾಕ್ಷಣ, ಕಡಲ ತೀರದ ಮೋಜು, ಗೋವನ್ ಫೆನ್ನಿ ನೆನಪಾಗೋದು ಸರ್ವೇ ಸಾಮಾನ್ಯ. ಅದರ ಹೊರತಾಗಿಯೂ ಗೋವಾವನ್ನ ಒಮ್ಮೆ ನೋಡಿದ್ದೇ ಆದರೆ ಅದರೊಡನೆ ಇನ್ನಷ್ಟು ಪ್ರೀತಿಯಲ್ಲಿ ಬಿದ್ದುಬಿಡುತ್ತೀರಿ. ಇತ್ತೀಚೆಗಷ್ಟೇ ಗೋವಾ ಪ್ರವಾಸ ಮುಗಿಸಿದ ನನಗೆ ಈಗ ಗೋವಾ ಒಂದು ತೀರದ ಘಮಲು.
ಜೆಟ್ -ಸ್ಕೀ , ಹಾಟ್ ಏರ್ ಬಲೂನ್, ಬೋಟ್ ರೈಡ್, ಕ್ರೂಸ್, ಅಂಡರ್ ವಾಟರ್ ಡೈವ್, ದ್ವೀಪಗಳು, ಗೋವಾ ನೈಟ್ ಲೈಫ್, ಊಟ - ಬಟ್ಟೆ - ವಸತಿ ಎಲ್ಲವೂ ಎಲ್ಲ ದರದಲ್ಲಿ ಲಭ್ಯ; ಆದರೆ ಅದೊಂದರ ಬಗ್ಗೆಯೂ ನಾನು ಹೇಳಬೇಕಾದದ್ದು ಏನೂ ಇಲ್ಲ, ಗೂಗಲ್ ಮಹಾರಾಜ ಬೆರಳ ತುದಿಯಲ್ಲೇ ನಮ್ಮೊಡನಿರುವಾಗ. ನಮ್ಮ-ನಮ್ಮ ಇತಿ-ಮಿತಿಯಲ್ಲಿ, ತುಸು ಎಚ್ಚರಿಕೆಯಿಂದ, ಚೆನ್ನಾಗಿ ವಿಚಾರಿಸಿಕೊಂಡು ಪ್ಲಾನ್ ಮಾಡಿಕೊಂಡರಾಯ್ತು ಅಷ್ಟೇ. (ಒಂದಷ್ಟು, ಅಡ್ವರ್ಟೈಸೆಮೆಂಟ್ / ಪೇಯ್ಡ್ ಬ್ಲಾಗ್ ಗಳ ಫೇಕ್ ನ್ಯೂಸ್ಗಳಿಂದ ದೂರವಿದ್ದು)
ಇದನ್ನೆಲ್ಲಾ ತುಸು ಬದಿಗಿಟ್ಟು, ಕಡಲ ತೀರಕ್ಕೆ ಅಂಟಿಕೊಂಡೇ ಬೆಳೆದಿರುವ ಈ ಪುಟ್ಟ ರಾಜ್ಯವನ್ನ ಅವಲೋಕಿಸಿದರೆ ನನ್ನಂತೆ ನಿಮಗೂ ಘಮಲು ತಲೆಗೇರುವುದು ಸತ್ಯ. ಮುಜುಗರವೆನಿಸದ ಒಂತರಾ ನಿರಾತಂಕ, ಮುಕ್ತ ವಾತಾವರಣ ಹೊಂದಿದೆ ಈ ಗೋವಾ. ಜೊತೆ-ಜೊತೆಗೆ ಒಳಗೊಂದಷ್ಟು ಗಾಂಭೀರ್ಯವನ್ನೂ ಸಹಾ.

ನಮ್ಮ ಕದಂಬರ ಆಡಳಿತ ಗೋವಾವರೆಗೂ ಹಬ್ಬಿತ್ತು, ಹಾಗಾಗಿ ಅಲ್ಲಿನ ಪ್ರಾಚೀನ ಕಾಲದ ಕಟ್ಟಡಗಳಲ್ಲಿ (ಕಟ್ಟಡ ಮನೆಯಿರಲಿ, ಕಚೇರಿಯಿರಲಿ, ಚರ್ಚ್-ದೇವಸ್ಥಾನವೇ ಆಗಿರಲಿ) , “ಇಂಡೋ-ಪೋರ್ಚುಗೀಸ್” ಶೈಲಿ ಎಂದೇನು ಕರೆಯುತ್ತಾರಲ್ಲ, ಅದರಲ್ಲಿ ನಮ್ಮ ಕದಂಬರ ಕುರುಹಿದೆ. ಛಾವಣಿಗಳ ಹೊರಭಾಗದ, ಹೊರ ಅಂಚಿನಲ್ಲಿ ಪುಟ್ಟ ಮೆಟ್ಟಿಲುಗಳಂತೆ ಕಾಣುವ ಮಜಲುಗಳಲ್ಲಿದೆ; ಕಟ್ಟಡದ ಮುಂಭಾಗದ ಕಿಟಕಿಯ ಮರದ ಸರಳುಗಳ ಕೆತ್ತನೆಯಲ್ಲಿದೆ; ಕಟ್ಟಡದ ಛಾವಣಿಯ ಅಂಚು ಅಥವಾ ಮಾಡಿನ ಅಂಚಿನಲ್ಲಿ ಹೊಂದಿಸಿದ ವಿನ್ಯಾಸಗಳಲ್ಲಿದೆ ಭಾರತೀಯ ಪ್ರಾಚೀನ ಕಲಾ-ಕುಸುರಿ. “ಹೌಸ್ ಆಫ್ ಗೋವಾ ಮ್ಯೂಸಿಯಂ” ನಲ್ಲಿ (ಇದೊಂದು ಪ್ರೈವೇಟ್ ಮ್ಯೂಸಿಯಂ) ಈ ಎಲ್ಲ ಪ್ರಾಚೀನತೆಯನ್ನ ಸಾರುವ ಕುರುಹಗಳನ್ನ ನಮ್ಮಂಥ ನೋಡುಗರಿಗಾಗಿ ಕಾಪಿಡಲಾಗಿದೆ.
ಶಿವಾಜಿ ಮಹಾರಾಜರು ಕಟ್ಟಿಸಿದ ಕೋಟೆಗಳು, ಮರಾಠ ಪಡೆ, ಡಚ್ ಪಡೆಗಳಿಂದ ಪೋರ್ಚುಗೀಸ್ ವಸಾಹತುವನ್ನ ಕಾಪಾಡಿಕೊಳ್ಳಲು ಪೋರ್ಚುಗೀಸರು ಕಟ್ಟಿಸಿಕೊಂಡ ಕೋಟೆಗಳು ನದಿ ತೀರದ ಮೇಲಿದ್ದು, ಅಲ್ಲಿಂದ ಕಣ್ತಂಪು ಮಾಡುವ ರಮಣೀಯ ನಿಸರ್ಗ ಸೌಂದರ್ಯ ಮಾತಿನಲ್ಲಿ ಹೇಳಿ ಮುಗಿಸುವಂಥದ್ದಲ್ಲ. ಮಾಂಡೋವಿಯ ಸೆರಗಲ್ಲಿ ಮತ್ತೆ ನವೀಕರಣಗೊಂಡು ನಳನಳಿಸುತ್ತಿರುವ ಅಗ್ವಾದಾ ಜೈಲನ್ನ ನೋಡಿ ಬನ್ನಿ. ಹೆಚ್ಚೂ-ಕಡಿಮೆ ಒಂದೂವರೆ ಸಾವಿರ ಸ್ವಾತಂತ್ರ್ಯ ವೀರರ ಹೆಸರನ್ನ ಕಾಣುವಿರಿ ಅಲ್ಲಿ. ಜೈಲಿನ ಹೊರಗೋಡೆಗಳನ್ನ ಮುತ್ತಿಕ್ಕುವ ಮಾಂಡೋವಿಯ ಭೋರ್ಗರೆತ ಅದ್ಭುತವೇ ಸರಿ.

“ವಡ್ಡೊ ಅಥವಾ ವಡ್ಡು”, “ಜೆಟ್ಟಿ” - ಸರ್ವೇ ಸಾಮಾನ್ಯವಾಗಿ ಕಾಣುವ ಫಲಕಗಳು ಗೋವಾದಲ್ಲಿ. ಜೆಟ್ಟಿ ಅಂದರೆ - ನದಿ ಕಡಲನ್ನು ಸೇರುವ ಜಾಗ. ವಡ್ಡೊ ಅಥವಾ ವಡ್ಡು - ನಾಲ್ಕೈದು ಅಡಿ ಎತ್ತರ ಬೆಳೆದ ಹುಲ್ಲು ಗದ್ದೆಯೋ, ಅಥವಾ ಭತ್ತದ ಗದ್ದೆಯನ್ನೋ ದಾಟುವಾಗ ಮನೆಯ ಮೇಲ್ಭಾಗ ಮಾತ್ರ ಕಂಡು, ಗದ್ದೆಯನ್ನ ದಾಟಿ ಹೋಗುತ್ತಿದ್ದಂತೆ ಸ್ವಲ್ಪ ತಗ್ಗಿನಲ್ಲಿರುವ ಭವ್ಯ ಮನೆ. ಅಂದರೆ ಗದ್ದೆಯ ಮಧ್ಯದಲ್ಲಿ ಕಟ್ಟಿಕೊಂಡ ಪ್ರಾಚೀನ ಕಾಲದ ಮನೆ ಅಂತನ್ನಬಹುದೇನೋ.
ಪಣಜಿಯ ಸುತ್ತ-ಮುತ್ತಲಲ್ಲಿ ಇರುವ ವಾಸದ ಮನೆಗಳಿಗೆ ಅದರದ್ದೇ ವಿಶೇಷತೆ. ರಸ್ತೆಯಿಂದ, ಒಂದು ಹತ್ತು-ಹದಿನೈದು ಅಡಿ ಎತ್ತರಕ್ಕೆ ಲಂಬಕೋನದ ಮೆಟ್ಟಿಗಳನ್ನ ಹತ್ತಿದರೆ ಮನೆ. ಹೊರ ಸುತ್ತಲೆಲ್ಲ ಮರದ ಆಯಕಟ್ಟಿನಲ್ಲಿ ಗಾಜನ್ನ ಅಳವಡಿಸಿದ ಅಗಲಗಲ ಕಿಟಕಿಗಳು, ಅದರೊಳಗೆ ಮನೆ ಸುತ್ತಲಿನ ಓಣಿ (ಪ್ಯಾಸೆಜು), ಆಮೇಲೆ ಮನೆಯ ಹಜಾರ, ಕೋಣೆ ಇತ್ಯಾದಿ. ಒಂತರಾ, ಪುಟ್ಟ ಗುಡ್ಡವನ್ನ ಹತ್ತಿ ಅದರ ಸಮತಟ್ಟಾದ ತಪ್ಪಲಿನಲ್ಲಿ ಮನೆ ಕಟ್ಟಿದಂತೆ. ಅಚ್ಚ ನೀಲಿ, ಬಿಳಿ, ಮಾಸಲು ಹಳದಿ - ಈ ಮೂರು ಬಣ್ಣಗಳನ್ನ ಹೆಚ್ಚಾಗಿ ಕಾಣಬಹುದು ಯಾವುದೇ ಮನೆಗಳಿಗೆ ಅಥವಾ ಕಟ್ಟಡಗಳಿಗೆ.
ದಕ್ಷಿಣ ಗೋವಾದಲ್ಲಿ ಅದ್ಭುತವೆನಿಸುವ ಮ್ಯಾನ್ಶನ್ ಗಳಿವೆ; 15, 16ನೇ ಶತಮಾನದ, ಈಗಲೂ ಅಲ್ಲಿ 16-17ನೇ ತಲೆಮಾರಿನ ಸದಸ್ಯರು ವಾಸಿಸುತ್ತಿರುವ ಮೂಲ ಗೋವನ್ ನಾಗರೀಕರಾಗಿರುವವರ ಭವ್ಯ ಬಂಗಲೆಗಳಿವೆ. ಪೂರ್ವಜರ ನೆನಪನ್ನ ಕೂಡಿಟ್ಟು , ಪ್ರಾಚೀನ ಪುರಾವೆಗಳನ್ನ ರಕ್ಷಿಸುತ್ತಾ, ಬಂಗಲೆಯ ವಾಸ್ತುಶಿಲ್ಪವನ್ನ ಕಾಪಿಟ್ಟು ನಮ್ಮಂತ ಆಸಕ್ತರಿಗೆ ಅದನ್ನ ವಿವರಿಸುವ ಬಂಗಲೆಯ ಇಂದಿನ ಒಡೆಯರ ಭಾಷೆಯಲ್ಲಿ ಪೋರ್ಚಿಗೀಸ್ ಇಣುಕುವುದನ್ನ ಕೇಳುವುದು ಚಂದದ ಅನುಭವ.

ಅಂದಹಾಗೆ, ಇಂಗ್ಲೀಷಿನಲ್ಲಿ ಬರೆಯುವ ಜಾಗಗಳ ಹೆಸರಿಗೂ ಅವನ್ನು ಹೇಳುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಹೆಚ್ಚಾಗಿ ‘ರ’ ಇದ್ದಲ್ಲಿ ‘ಡ’ ಬಂದರೆ, ಜಾಗದ ಹೆಸರಿನ ತುದಿಯಲ್ಲಿ ಬರುವ ‘ಮ’ ಪೂರ್ತಿ ಸೈಲೆಂಟ್. ಇಂಗ್ಲೀಷಿನ ಮಾರ್ಗೋವ, ಮಡಗಾವ್; ಚಪೋರಾ, ಚಪೋಡಾ ಅಥವಾ ಚಪ್ಡಾ.ಇಂಗ್ಲೀಷಿನ ಕ್ಯಾಂಡೋಲಿಮ್ ‘ಕಾಂಡೊಲಿ ಅಥವಾ ಕಾಂದೋಳಿ’, ಮಾಂಡ್ರೆಮ್ ‘ಮಾಂಡ್ರೆ’; ಹೀಗೇ ಇನ್ನೂ ಹಲವಾರು! ಇವೆಲ್ಲ ಪೋರ್ಚುಗೀಸರ ಪ್ರಭಾವದಿಂದ ಆಗಿದ್ದು ಅನ್ನುತ್ತಾರೆ ಸ್ಥಳೀಯರು.
ಅಂಜುನಾ, ಅಶ್ವೇ, ಮೊರ್ಜಿ,ವಾಗತೊರ್, ಭಾಗಾ, ಕಲಂಗುಟೆ, ವಾರ್ಕಾ, ಕೋಲ್ವಾ , ಬಟರ್ ಫ್ಲೈ … ಉಫ್, ಗೋವಾದ ಕಡಲ ತೀರಗಳಿಗಿ ತೀರದಷ್ಟು ಹೆಸರುಗಳು. ಅತೀ ಸರಳವೆನಿಸುವ ಜನಜೀವನ, (ಹಲವರು ಅದನ್ನ “ಹಿಂದುಳಿದವರು” ಅಂತಲೂ ಕರೆದದ್ದಿದೆ), ಕೃಷಿಗಿಂತಲೂ ಬಿಸಿನೆಸ್ ಇಷ್ಟಪಡುವ ಜನರು, ಪ್ರಾಚೀನತೆಯಲ್ಲಿ ನವ ಚೈತನ್ಯ ತುಂಬಿಕೊಂಡು ತನ್ನ ತನವನ್ನ ಉಳಿಸಿಕೊಂಡ ಜೀವನ ಶೈಲಿ, ವಸ್ತುನಿಷ್ಠ ವಿಷಯಗಳು, ಮೋಜು-ಮಸ್ತಿಯ ಹೊರತಾಗಿ ಭಾವನಾತ್ಮಕವಾಗಿ ಬೆಸೆಯಿತು ನನ್ನನ್ನು.
ಒಂದು ಹೊಸ ಜಾಗವನ್ನ ನೋಡೋಕೆ ಅಂತ ಹೋದಮೇಲೆ, ಇಷ್ಟಾದರೂ ತಿಳಿಯಲೇ ಬೇಕು ಅನ್ನೋದು ನನ್ನ ನಿಲುವು, ಏನಂತೀರಿ ? ಹೋಗಿ, ಹೊಸತಾಗಿ ಒಮ್ಮೆ ಗೋವಾವನ್ನ ಅನುಭವಿಸಿ ಬನ್ನಿ.. ನಗುವಾ ನಯನಾ ಮಧುರ ಮೌನ!