Thursday, June 12, 2025
Thursday, June 12, 2025

ಮಾರಿಷಸ್‌ ಎಂಬ ಸ್ವರ್ಗಸೀಮೆ!

ಸಿಟಿ ಟೂರ್ ಅಲ್ಲಿ ಪೋರ್ಟ್ ಲೂಯಿಸ್ ನೋಡಬಹುದು. ಇಲ್ಲಿ ಗಗನಚುಂಬಿ ಕಟ್ಟಡಗಳಿಲ್ಲ. ದೊಡ್ಡ ದೊಡ್ಡದಾದ ಬೆಟ್ಟ ಗುಡ್ಡಗಳ ನಡುವಿನ ಊರು ಪೋರ್ಟ್ ಲೂಯಿಸ್. ಸುತ್ತಲೂ ಕಣ್ಣು ಹಾಯಿಸಿದರೆ ಬೆಟ್ಟಗಳನ್ನು ಕಾಣಬಹುದು.

ಸಮುದ್ರ, ವಿವಿಧ ಬಗೆಯ ನೀಲಿಯ ಬಣ್ಣಗಳ ನೀರು, ಬಿಳಿಯ ಮರಳು, ನೀರಲ್ಲಿ ಆಡುವ ಆಟಗಳು ಇವೆಲ್ಲಾ ತುಂಬಾ ಇಷ್ಟ ಇರುವವರಿಗೆ ಮಾರಿಷಸ್ ಪ್ರವಾಸ ಎಂದರೆ ಅಚ್ಚುಮೆಚ್ಚು. ಮಾರಿಷಸ್ (Marisas) ಹೆಸರು ಯಾರು ಕೇಳಿರೋಲ್ಲ. ಆಫ್ರಿಕಾ ಖಂಡದ ಪೂರ್ವದ ದೇಶವಾಗಿರುವ ಮಾರಿಷಸ್ ಒಂದು ದ್ವೀಪ ರಾಷ್ಟ. ಪುಟ್ಟದಾದರೂ ಅದರ ಸೊಬಗು ಸವಿಯಲು ಏನೂ ಕಡಿಮೆಯಿಲ್ಲ. ಮಾರಿಷಸ್ ಪ್ರವಾಸದ ಅನುಭವ ಹೇಳುವ ಸಮಯವಿದು. ಮಾರಿಷಸ್'ಗೆ ಬೆಂಗಳೂರಿನಿಂದ ಸುಮಾರು 8-9 ಗಂಟೆಗಳ ಪ್ರಯಾಣ. ಬೆಂಗಳೂರಿನಿಂದ(Bangalore) ಮುಂಬೈಗೆ(Mumbai) ತೆರಳಿ, ನಂತರ ಅಲ್ಲಿಂದ ಮಾರಿಷಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಎಸ್ ಎಸ್ ಆರ್ ತಲುಪಬಹುದು. ಬೆಂಗಳೂರಿನಿಂದ ಚೆನ್ನೈ ಮೂಲಕವಾಗಿಯೂ ಪ್ರಯಾಣಿಸಬಹುದು. ಭಾರತೀಯ ಕಾಲಮಾನದಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಹಿಂದಿರುವ ಸಮಯ, ಅಲ್ಲಿಯ ಕರೆನ್ಸಿ ಮಾರಿಷಸ್ ರೂಪಾಯಿ. ಪ್ರಪಂಚದ ವಿವಿಧೆಡೆಯಿಂದ ನೆಲೆಸಿರುವ ಜನರಿದ್ದಾರೆ. ಫ್ರೆಂಚರ ಆಡಳಿತವಿದ್ದ(French Administration) ಕಾರಣ ಬಹುತೇಕ ಊರಿನ ಹೆಸರುಗಳು ಫ್ರೆಂಚ್ ಶೈಲಿಯಲ್ಲಿದೆ.

ಇನ್ನು ಪೋರ್ಟ್ ಲೂಯಿಸ್ ಎನ್ನುವ ಊರು ಮಾರಿಷಸ್'ನ ರಾಜಧಾನಿ. ಸಿಟಿ ಟೂರ್ ಅಲ್ಲಿ ಪೋರ್ಟ್ ಲೂಯಿಸ್ ನೋಡಬಹುದು. ಇಲ್ಲಿ ಗಗನಚುಂಬಿ ಕಟ್ಟಡಗಳಿಲ್ಲ. ದೊಡ್ಡ ದೊಡ್ಡದಾದ ಬೆಟ್ಟ ಗುಡ್ಡಗಳ ನಡುವಿನ ಊರು ಪೋರ್ಟ್ ಲೂಯಿಸ್. ಸುತ್ತಲೂ ಕಣ್ಣು ಹಾಯಿಸಿದರೆ ಬೆಟ್ಟಗಳನ್ನು ಕಾಣಬಹುದು. ಇದೊಂದು ಸರಳ ಸುಂದರ ಊರು. ಅಲ್ಲಲ್ಲಿ ಐಟಿ ಕಂಪೆನಿಗಳನ್ನು ಹೊಂದಿದ್ದರೂ, ಕಣ್ಣು ಕೋರೈಸದ ಕಟ್ಟಡಗಳಿವೆ.

ಶಿಪ್ ಮಾಡೆಲ್ ಫ್ಯಾಕ್ಟರಿ

ದೇಶದ ಸಂಖ್ಯೆಯ ಪ್ರತಿಶತ ಶೇಕಡ ಐವತ್ತರಷ್ಟು ಹಿಂದುಗಳಿರುವ ರಾಷ್ಟದಲ್ಲಿ, ಪುಟ್ಟದಾದ ದೋಣಿಯ ಮಾದರಿಯನ್ನು ಹೆಚ್ಚಿನ ಮನೆಗಳಲ್ಲಿ ವಾಸ್ತು ಪ್ರಕಾರ ಇಡುತ್ತಾರೆಂದರೆ ನೀವು ನಂಬುತ್ತೀರಾ? ಹೌದು, ಇಲ್ಲಿ ಯಾವುದೇ ವ್ಯವಹಾರ ಪ್ರಾರಂಭಿಸುವ ಮೊದಲು ಅಥವಾ ಮನೆಗಳಲ್ಲಿ ದೋಣಿಯ ಮಾದರಿ (ಶಿಪ್ ಮಾಡೆಲ್) ಅನ್ನು ವಾಸ್ತು ಪ್ರಕಾರವಿಟ್ಟು ಶುಭ ಕಾರ್ಯಗಳನ್ನು ಆರಂಭಿಸುತ್ತಾರಂತೆ. ಇದಕ್ಕಾಗಿಯೇ ಶಿಪ್ ಮಾಡೆಲ್ ಫ್ಯಾಕ್ಟರಿ ಇವೆ. ಇಲ್ಲಿ ಸಣ್ಣದಾದ ಗಾತ್ರಗಳಿಂದ ಹಿಡಿದು ಸಾಧಾರಣ ಗಾತ್ರದ ಮಾದರಿಗಳಿವೆ. ಮಾರಿಷಸ್ ರೂಪಾಯಿ ಒಂದು ಸಾವಿರದಿಂದ ಪ್ರಾರಂಭವಾಗುವ ವೆಚ್ಚ, ಗಾತ್ರದ ಪ್ರಕಾರ ವಿವಿಧ ವೆಚ್ಚದ ಮಾದರಿಗಳಿವೆ.

ಸಿಟಾಡೆಲ್ ಫೋರ್ಟ್

ಪೋರ್ಟ್ ಲೂಯಿಸ್ ನಗರವನ್ನು ಕಣ್ತುಂಬಿಕೊಳ್ಳಲು ಸಿಟಾಡೆಲ್ ಫೋರ್ಟ್'ಗೆ ತೆರಳಬಹುದು. ಇಲ್ಲಿಂದ ಚಿಕ್ಕ ಚೊಕ್ಕವಾದ ನಗರವನ್ನು, ಅದರ ಸುತ್ತಲಿರುವ ಸಮುದ್ರವನ್ನು ನೋಡಲು ಸಾಧ್ಯ. ಸ್ವಾತಂತ್ರ್ಯ ಸಿಗುವ ಮೊದಲು ಯುದ್ಧಗಳಿಗೆ ಬಳಸುತ್ತಿದ್ದ ಫಿರಂಗಿಗಳಿವೆ. ಪೋರ್ಟ್'ಗೆ ಒಂದು ಸುತ್ತು ಹೊಡೆದರೆ, ಸಿಟಿಯ ನಾಲ್ಕು ದಿಕ್ಕುಗಳನ್ನೂ ಕಾಣಲು ಸಾಧ್ಯ.

ವಾಟರ್ ಫ್ರಂಟ್

ನಗರವನ್ನು ಸುತ್ತಿ ಸುತ್ತಿ ಸುಸ್ತಾದರೆ ತಿಂಡಿ ಊಟ ಮಾಡಲು, ಬೋಟ್'ಗಳನ್ನು ತೀರಾ ಹತ್ತಿರದಿಂದ ನೋಡಲು ಸೂಕ್ತವಾದ ಪ್ರದೇಶವೆಂದರೆ ವಾಟರ್ ಫ್ರಂಟ್. ಇಲ್ಲಿ ಭಾರತೀಯ ಶೈಲಿಯ ಹೋಟೆಲ್'ಗಳಿವೆ. ಮಾರಿಷಸ್'ನ ಪ್ರವಾಸಿ ತಾಣಗಳಲ್ಲಿ ಒಂದಾದ ಕಲರ್ಫುಲ್ ಕೊಡೆಗಳನ್ನು ಅಡಿಮೇಲು ಮಾಡಿ ತೂಗು ಹಾಕಿದ ಜಾಗವಿದೆ.

ಕಟಮಾರನ್ ಐಲ್ಯಾಂಡ್

ಒಂದು ದಿನ ನಗರ ತಿರುಗಿ ಜಾಗಗಳನ್ನು ನೋಡಿದರೆ, ಇನ್ನೊಂದು ದಿನ ಇತರೆ ದ್ವೀಪಗಳಿಗೆ ಭೇಟಿ ಕೊಡಬಹುದು. ಇವುಗಳಲ್ಲಿ ಪ್ರಸಿದ್ಧವಾದ ದ್ವೀಪವೆಂದರೆ ಕಟಮಾರನ್ ದ್ವೀಪ. ಇಲ್ಲಿ ಅನೇಕ ನೀರಿನಾಟಗಳನ್ನು ಆಡಬಹುದು. ದ್ವೀಪಕ್ಕೆ ಹೋಗುವ ಬೋಟಿನ ದಾರಿಯಲ್ಲಿ ಒಂದು ವಾಟರ್ ಫಾಲ್'ಗೆ ಕರೆದುಕೊಂಡು ಹೋಗುತ್ತಾರೆ. ಪ್ಯಾರ ಸೈಲಿಂಗ್, ಸೀ ವಾಕ್, ಕಟಮಾರನ್ ಕ್ರೂಸ್, ಹಾಗೂ ಇನ್ನಿತರೆ ಚಟುವಟಿಕೆಗಳಿವೆ. ಈ ದ್ವೀಪದಲ್ಲಿ ಊಟ ತಿಂಡಿ ತಿನ್ನಲು ಒಂದೇ ಒಂದು ಹೋಟೆಲ್ ಇದೆ. ಸರಳವಾದ ತೀರಾ ಚಿಕ್ಕದಾದ ದ್ವೀಪವಿದು. ಅಲ್ಲಿಗೆ ಹೋಗಿ ಎಲ್ಲಾ ಆಟಗಳನ್ನು ಆಡಿ ವಾಪಸ್ ಬರಲು ಒಂದು ದಿನ ಬೇಕು.

ನೇಚರ್ ಟೂರ್

ಮಾರಿಷಸ್ ಬೀಚ್'ಗೆ ಎಷ್ಟು ಪ್ರಸಿದ್ಧವೋ ಅಷ್ಟೇ ಪ್ರಖ್ಯಾತಿ ತನ್ನ ನಿಸರ್ಗದ ಅನುಭವಕ್ಕೂ ಪಡೆದಿದೆ. ಆಫ್ರಿಕಾ ಖಂಡದ ದೇಶ ಎಂದ ಮೇಲೆ ಗುಡ್ಡ ಬೆಟ್ಟ, ಮರ, ಕಾಡು ಇವೆಲ್ಲಾ ಇದ್ದೇ ಇರುತ್ತದೆ. ಮಾರಿಷಸ್ ನಗರಗಳನ್ನು ಬೆಟ್ಟ ಗುಡ್ಡಗಳ ನಡುವೆ ನಿರ್ಮಿಸಲಾಗಿದೆ. ಹಾಗೆಂದು ಪರಿಸರಕ್ಕೆ ಏನೂ ಹಾನಿ ಮಾಡದೆ ಕಟ್ಟಲಾಗಿದೆ. ನಗರದ ಮಧ್ಯ ನಿಂತು ಸುತ್ತಲೂ ನೋಡಿದರೆ ಗುಡ್ಡಗಳು ಇನ್ನೂ ಇವೆ. ಒಂದು ದಿನವನ್ನು ನೇಚರ್ ಟೂರ್'ಗೆ ಸೀಮಿತವಾಗಿಡಬೇಕು.

ವೊಲ್ಕೇನೋ

ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಅಬ್ಬರಿಸಿದ್ದ ವೋಲ್ಕೇನೋ ಒಂದು ಈಗ ತಣ್ಣಗೆ ಕುಳಿತಿದೆ. ನೇಚರ್ ಟೂರ್ ಎಂದು ಕರೆದುಕೊಂಡು ಹೋಗುವ ಪ್ಯಾಕೇಜ್ ಸಿಬ್ಬಂದಿ, ಇಲ್ಲಿಗೆ ಭೇಟಿ ಕೊಡಿಸುತ್ತಾರೆ. ಈ ತಾಣದಲ್ಲಿ ವಾಲ್ಕೇನೋ ಹರಿದು ಹೋದ ಜಾಗವನ್ನು ಕಾಣಬಹುದು.

ದೇವಸ್ಥಾನ

ಮಾರಿಷಸ್ ದೇಶದಲ್ಲಿ ಅವೆಷ್ಟೋ ದೇವಸ್ಥಾನಗಳಿವೆ. ಭಾರತದ ಮೂಲದಿಂದ ವಲಸೆ ಹೋಗಿ ಅಲ್ಲೇ ನೆಲೆಯೂರಿದ ಹಿಂದೂಗಳ ಸಂಖ್ಯೆ ಐವತ್ತು ಶೇಕಡಕ್ಕಿಂತಲೂ ಜಾಸ್ತಿ ಇದ್ದಾರೆ. ತಮಿಳು, ಹಿಂದಿ ಹೀಗೆ ಭಾರತೀಯ ಭಾಷೆಗಳನ್ನು ಅಲ್ಲಿ ಕೇಳಬಹುದು. ದೊಡ್ಡದಾದ ಶಿವ ದೇವರ ಮೂರ್ತಿಯಿರುವ ದೇವಸ್ಥಾನಕ್ಕೆ ಭೇಟಿ ನೀಡಿ. ಶಿವ ರಾತ್ರಿಯಂದು ಈ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಅಧಿಕ.

ಲಾ ವ್ಯಾಲಿ ನೇಚರ್ ಪಾರ್ಕ್

ವಾಲ್ಕೆನೊ ಹರಿದು ಹೋದ ಮೇಲೆ ನೈಸರ್ಗಿಕವಾಗಿ ಉಂಟಾದ ಏಳು ಬಣ್ಣಗಳ ಮಣ್ಣನ್ನು ಈ ನೇಚರ್ ಪಾರ್ಕ್ ಅಲ್ಲಿ ಕಾಣಬಹುದು. ಸುಮಾರು ಇಪ್ಪತ್ತಮೂರು ಬಣ್ಣಗಳೆಂದು ಫಲಕ ಹಾಕಿದ್ದಾರೆ, ಆದರೆ ಅಂದು ಏಳು ಬಣ್ಣಗಳ ಓಕುಳಿ ನಿರ್ಮಿತವಾಗಿತ್ತು. ಇದರ ಹೊರತಾಗಿ ಎರಡು ಜಲಪಾತಗಳನ್ನು ನೋಡಬಹುದು. ನಡೆದು ಹೊರಟರೆ ಸುಮಾರು ಎರಡು ಗಂಟೆಗಳಷ್ಟು ಕಾಲ ಬೇಕು, ಕ್ವಾಡ್ ಬೈಕ್ ಮತ್ತು ಬಗ್ಗಿ ವಾಹನಗಳ ಆಯ್ಕೆಗಳಿವೆ. ಇದಕ್ಕೆ ಒಂದು ಅರ್ಧ ದಿನ ಮೀಸಲಿಡುವುದು ಒಳ್ಳೆಯದು. ನಗರದ ಜಂಜಾಟದಿಂದ ಸ್ವಲ್ಪ ಸಮಯ ದೂರವಿದ್ದು ಬಯಸಿ, ಆರಾಮದಾಯಕ ರಜೆ ಕಳೆಯಬೇಕೆಂದು ಬಯಸುವವರಿಗೆ ಮಾರಿಷಸ್ ಒಂದು ಅತ್ಯುತ್ತಮ ಆಯ್ಕೆ. ಮಾರ್ವಲಸ್ ಮಾರಿಷಸ್ ಎಂದೇ ಹೇಳಬಹುದು!

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..