ನವ ಪ್ರವಾಸೋದ್ಯಮ : ಪ್ರವಾಸಿಗರನ್ನು ಮತ್ತೆ ಮತ್ತೆ ಸೆಳೆಯುವ ಕಲೆ
ಇಂದಿನ ಕಾಲದಲ್ಲಿ ತಂತ್ರಜ್ಞಾನವು ಪ್ರವಾಸಿಗರನ್ನು ಮತ್ತೆ ಸೆಳೆಯಲು ಮುಖ್ಯ ಪಾತ್ರ ವಹಿಸುತ್ತಿದೆ. ಪ್ರವಾಸಿಗರ ಮೊದಲ ಭೇಟಿಯ ಡೇಟಾ ಬಳಸಿಕೊಂಡು, ಅವರಿಗೆ ಬೇಕಾದ ವಿಶೇಷ ಆಫರ್‌ಗಳನ್ನು ನೀಡುವುದು, ಅಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಮಾಹಿತಿ ನೀಡುವುದರಿಂದ ಅವರು ಮತ್ತೆ ಬರಲು ಆಸಕ್ತಿ ತೋರುತ್ತಾರೆ. ಪ್ರವಾಸೋದ್ಯಮ ಎನ್ನುವುದು ಕೇವಲ ವ್ಯಾಪಾರವಲ್ಲ. ಅದೊಂದು ಭಾವನಾತ್ಮಕ ಸಂಬಂಧ. ಒಬ್ಬ ಪ್ರವಾಸಿ ಒಮ್ಮೆ ಬಂದಾಗ ಆ ಜಾಗವನ್ನು ನೋಡುತ್ತಾನೆ. ಎರಡನೇ ಬಾರಿ ಬಂದಾಗ ಆ ಜಾಗದೊಂದಿಗೆ ನೆನಪುಗಳನ್ನು ಮರುಕಳಿಸಿಕೊಳ್ಳುತ್ತಾನೆ. ಈ ನೆನಪುಗಳನ್ನು ಮರುಸೃಷ್ಟಿಸುವ, ಪ್ರತಿ ಭೇಟಿಯನ್ನೂ ವಿಶಿಷ್ಟ ಅನುಭವವನ್ನಾಗಿ ಮಾಡುವುದೇ 'ನವ ಪ್ರವಾಸೋದ್ಯಮ'.
ಹೊಸ ಹೊಸ ಊರುಗಳನ್ನು ತೋರಿಸುವುದು ಅಥವಾ ಸೆಳೆಯುವುದು ಪ್ರವಾಸೋದ್ಯಮವಾದರೆ, ಈಗಾಗಲೇ ನೋಡಿದ ಪ್ರವಾಸಿ ತಾಣಗಳಿಗೆ ಅದೇ ಅದೇ ಪ್ರವಾಸಿಗರನ್ನು ಮತ್ತೆ ಮತ್ತೆ ಬರುವಂತೆ ಮಾಡುವುದು ನವ ಪ್ರವಾಸೋದ್ಯಮ. ಪ್ರವಾಸೋದ್ಯಮ ಎನ್ನುವುದು ಕೇವಲ ಭೌಗೋಳಿಕ ಗಡಿಗಳನ್ನು ದಾಟಿ ಹೊಸ ಜಾಗಗಳನ್ನು ನೋಡುವುದಕ್ಕೆ ಸೀಮಿತವಾಗಿಲ್ಲ. ಸಾಂಪ್ರದಾಯಿಕ ಪ್ರವಾಸೋದ್ಯಮವು 'ಹೊಸ ತಾಣಗಳ ಅನ್ವೇಷಣೆ'ಗೆ ಒತ್ತು ನೀಡಿದರೆ, 'ನವ ಪ್ರವಾಸೋದ್ಯಮ' (New Tourism) ಎನ್ನುವುದು ಪ್ರವಾಸಿಗರು ತಾವು ಈಗಾಗಲೇ ನೋಡಿದ ಜಾಗಕ್ಕೆ ಮತ್ತೆ ಮತ್ತೆ ಭೇಟಿ ನೀಡುವಂತೆ ಮಾಡುವ ಕಲೆ ಮತ್ತು ತಂತ್ರವಾಗಿದೆ.
ಹಿಂದೆ ಪ್ರವಾಸ ಅಂದ್ರೆ ಒಂದು ಪಟ್ಟಿಯಲ್ಲಿರುವ ಜಾಗಗಳನ್ನು ನೋಡಿ ಮುಗಿಸುವುದು (Tick-box tourism) ಎಂದರ್ಥವಾಗಿತ್ತು. ಆದರೆ ಇಂದು ಪ್ರವಾಸಿಗರು ಕೇವಲ 'ನೋಟ'ಗಳನ್ನಷ್ಟೇ ಬಯಸದೇ, ಅಲ್ಲಿನ 'ಅನುಭವ'ಗಳನ್ನು ಬಯಸುತ್ತಾರೆ. ಒಮ್ಮೆ ನೋಡಿದ ಜಾಗಕ್ಕೆ ಮತ್ತೆ ಬರಬೇಕೆಂದರೆ ಅಲ್ಲಿ ಪ್ರತಿ ಬಾರಿಯೂ ಹೊಸತನ ಇರಬೇಕು. ಇದನ್ನೇ 'Repeat Tourism' ಅಥವಾ 'ಪುನರಾವರ್ತಿತ ಪ್ರವಾಸೋದ್ಯಮ' ಅಂತಾರೆ. ದುಬೈಗೆ ಹೋಗುವವರು ಹೊಸಬರಷ್ಟೇ ಅಲ್ಲ, ಹೋದವರೇ ಒಂದಕ್ಕಿಂತ ಹೆಚ್ಚು ಸಲ ಹೋಗುವುದು ಸಾಮಾನ್ಯ. ಪ್ರತಿ ಸಲ ಹೋದಾಗಲೂ ಅಲ್ಲಿ ನೋಡಲು ಹೊಸ ಹೊಸ ಸಂಗತಿಗಳಿರುತ್ತವೆ. ಹೀಗಾಗಿ ಅಲ್ಲಿಗೆ ಪದೇಪದೆ ಹೋದರೂ ಬೋರಾಗುವುದಿಲ್ಲ. ಒಂದು ಪ್ರವಾಸಿ ತಾಣಕ್ಕೆ ಪ್ರವಾಸಿಗರು ಯಾವಾಗ ಪದೇಪದೆ ಹೋಗುತ್ತಾರೆ? ಪ್ರತಿ ಸಲ ಹೋದಾಗಲೂ ಅಲ್ಲಿ ನೋಡಲು ಹೊಸ ಹೊಸ ಆಕರ್ಷಣೆಗಳಿದ್ದಾಗ ಮಾತ್ರ ತಾನೇ. ಯಾವ ನಗರ ಅಥವಾ ಪ್ರವಾಸಿತಾಣ ಅಂಥ ಆಕರ್ಷಣೆಗಳನ್ನು ಕಲ್ಪಿಸಿಕೊಡುವುದೋ, ಆ ತಾಣಗಳಿಗೆ ಹೊಸಬರು ಮತ್ತು ಈಗಾಗಲೇ ಭೇಟಿ ನೀಡಿದವರೂ ಹೋಗುತ್ತಾರೆ.
ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ವಿಶೇಷವಾಗಿ ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿನ ಅನೇಕ ರಾಷ್ಟ್ರಗಳು ಪುನರಾವರ್ತಿತ ಪ್ರವಾಸೋದ್ಯಮದ ಮೇಲೆ ಒತ್ತು ನೀಡುತ್ತಿವೆ. ನಾಲ್ವರು ಇರುವ ಒಂದು ಮನೆಯಲ್ಲಿ ಒಬ್ಬರೋ, ಇಬ್ಬರೋ ಸಿಂಗಾಪುರವನ್ನು ನೋಡಿದ್ದಾರೆನ್ನಿ. ಮನೆ-ಮಂದಿಯೆಲ್ಲ ಎಲ್ಲಿಗೆ ಪ್ರವಾಸ ಹೋಗಬೇಕು ಎಂದು ತೀರ್ಮಾನಿಸುವಾಗ, ಸಿಂಗಾಪುರವನ್ನು ಆಯ್ಕೆ ಮಾಡುವ ಸಾಧ್ಯತೆ ಕಮ್ಮಿ. ಹೀಗಾಗಿ ಈಗಾಗಲೇ ನೋಡಿದವರನ್ನೂ ಸೆಳೆಯಲು, ಹೊಸ ಆಕರ್ಷಣೆಗಳನ್ನು ಕಾಲಕಾಲಕ್ಕೆ ಸೇರಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಭೇಟಿ ನೀಡಿದವರನ್ನೂ ಸೆಳೆಯುವುದು ನವ ಪ್ರವಾಸೋದ್ಯಮದ ಆಶಯ. ಇದಕ್ಕಾಗಿ ಆ ದೇಶಗಳು ಪ್ರತಿ ವರ್ಷವೂ ತಮ್ಮ ದೇಶದಲ್ಲಿನ ಆಕರ್ಷಣೆಗಳ ಪಟ್ಟಿಗೆ ಹೊಸ ಹೊಸ ತಾಣಗಳನ್ನು, 'ಚಮಕ್' ಗಳನ್ನು ಸೇರಿಸುತ್ತಲೇ ಇರುತ್ತವೆ.

ಒಂದು ತಾಣಕ್ಕೆ ಪ್ರವಾಸಿಗರು ಪದೇಪದೆ ಬರಬೇಕಾದರೆ ಕೆಲವು ಅಂಶಗಳು ಮುಖ್ಯವಾಗುತ್ತವೆ. ಕೇವಲ ಸ್ಮಾರಕಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ, ಅಲ್ಲಿನ ಜನರೊಂದಿಗೆ ಬೆರೆತು, ಅಲ್ಲಿನ ಸಂಪ್ರದಾಯಗಳನ್ನು ಅನುಭವಿಸಲು ಅವಕಾಶ ನೀಡಬೇಕು. ಉದಾಹರಣೆಗೆ, ಮಲೆನಾಡಿನ ಹೋಂಮ್‌ಸ್ಟೇಗಳಲ್ಲಿ ಕೇವಲ ಉಳಿದುಕೊಳ್ಳುವುದಷ್ಟೇ ಅಲ್ಲ, ಅಲ್ಲಿನ ಕೃಷಿ ಪದ್ಧತಿ, ಸ್ಥಳೀಯ ಜೀವನವಿಧಾನ, ಹಬ್ಬ, ಆಚರಣೆ, ಜಾತ್ರೆ ಅಥವಾ ಅಡುಗೆಯನ್ನು ಕಲಿಯುವ ಅವಕಾಶವಿದ್ದರೆ ಪ್ರವಾಸಿಗರು ಮತ್ತೆ ಬರುತ್ತಾರೆ. ಒಂದೇ ತಾಣವು ಬೇಸಿಗೆಯಲ್ಲಿ ಒಂದು ರೀತಿ, ಮಳೆಯಲ್ಲಿ ಇನ್ನೊಂದು ರೀತಿ ಮತ್ತು ಚಳಿಗಾಲದಲ್ಲಿ ಮತ್ತೊಂದು ರೀತಿ ಅನುಭವ ನೀಡುವಂತಿರಬೇಕು. ಕರಾವಳಿ, ಮಲೆನಾಡು ಮತ್ತು ಅದರಲ್ಲೂ ವಿಶೇಷವಾಗಿ ಕೊಡಗು ಅಥವಾ ಚಿಕ್ಕಮಗಳೂರು ಮಳೆಗಾಲದಲ್ಲಿ ನೀಡುವ ಅನುಭವವೇ ಬೇರೆ, ಚಳಿಗಾಲದ ಅನುಭವವೇ ಬೇರೆ. ಪ್ರತಿ ಭೇಟಿಯಲ್ಲೂ ಪ್ರವಾಸಿಗರಿಗೆ ಹೊಸತೇನಾದರೂ ಸಿಗಬೇಕು. ಮೊದಲ ಭೇಟಿಯಲ್ಲಿ ಸಿಕ್ಕ ಉತ್ತಮ ಆತಿಥ್ಯ ಮತ್ತು ಸುರಕ್ಷಿತ ಭಾವನೆ ಪ್ರವಾಸಿಗರನ್ನು ಮಾನಸಿಕವಾಗಿ ಆ ತಾಣಕ್ಕೆ ಹತ್ತಿರವಾಗಿಸುತ್ತದೆ. 'ಮನೆಗಿಂತಲೂ ಆರಾಮದಾಯಕ' ಎಂಬ ಭಾವನೆ ಮೂಡಿದರೆ ಅವರು ಮರಳಿ ಬರುವುದು ಖಚಿತ.
ಇಂದಿನ ಕಾಲದಲ್ಲಿ ತಂತ್ರಜ್ಞಾನವು ಪ್ರವಾಸಿಗರನ್ನು ಮತ್ತೆ ಸೆಳೆಯಲು ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರವಾಸಿಗರ ಮೊದಲ ಭೇಟಿಯ ಡೇಟಾವನ್ನು ಬಳಸಿಕೊಂಡು, ಅವರಿಗೆ ಬೇಕಾದ ವಿಶೇಷ ಆಫರ್‌ಗಳನ್ನು ನೀಡುವುದು, ಅಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವುದರಿಂದ ಅವರು ಮತ್ತೆ ಬರಲು ಆಸಕ್ತಿ ತೋರುತ್ತಾರೆ. ಪ್ರವಾಸೋದ್ಯಮ ಎನ್ನುವುದು ಕೇವಲ ವ್ಯಾಪಾರವಲ್ಲ. ಅದೊಂದು ಭಾವನಾತ್ಮಕ ಸಂಬಂಧ. ಒಬ್ಬ ಪ್ರವಾಸಿ ಒಮ್ಮೆ ಬಂದಾಗ ಆ ಜಾಗವನ್ನು ನೋಡುತ್ತಾನೆ. ಆದರೆ ಎರಡನೇ ಬಾರಿ ಬಂದಾಗ ಆ ಜಾಗದೊಂದಿಗೆ ನೆನಪುಗಳನ್ನು ಮರುಕಳಿಸಿಕೊಳ್ಳುತ್ತಾನೆ. ಈ ನೆನಪುಗಳನ್ನು ಮರುಸೃಷ್ಟಿಸುವ ಮತ್ತು ಪ್ರತಿ ಭೇಟಿಯನ್ನೂ ಒಂದು ವಿಶಿಷ್ಟ ಅನುಭವವನ್ನಾಗಿ ಮಾಡುವುದೇ 'ನವ ಪ್ರವಾಸೋದ್ಯಮ'. ಊರುಗಳನ್ನು ತೋರಿಸುವುದು ಕೇವಲ ಆರಂಭ, ಆದರೆ ಆ ಊರುಗಳನ್ನು Feel at home ಎಂಬಂತೆ ಮಾಡುವುದೇ ನವ ಪ್ರವಾಸೋದ್ಯಮದ ನಿಜವಾದ ಯಶಸ್ಸು.

ನವ ಪ್ರವಾಸೋದ್ಯಮವು ಕೇವಲ 'ಸ್ಥಳದ ದರ್ಶನ'ಕ್ಕಿಂತ ಹೆಚ್ಚಾಗಿ 'ಸ್ಥಳದೊಂದಿಗಿನ ಅನುಬಂಧ'ವನ್ನು ಬೆಳೆಸುವುದರ ಮೇಲೆ ನಿಂತಿದೆ. ಪ್ರವಾಸಿಗರು ಒಂದು ತಾಣಕ್ಕೆ ಮತ್ತೆ ಮರಳಿ ಬರಬೇಕೆಂದರೆ ಅಲ್ಲಿನ ಅನುಭವಗಳು ಅವರ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯಬೇಕು. ಸ್ಥಳೀಯ ಸಂಸ್ಕೃತಿ ಮತ್ತು ಕಲೆಗಳು ಪ್ರವಾಸಿಗರನ್ನು ಭಾವನಾತ್ಮಕವಾಗಿ ಸೆಳೆಯುತ್ತವೆ. ಹಂಪಿಯನ್ನು ಒಮ್ಮೆ ನೋಡಿದವರು 'ಕಲ್ಲುಗಳನ್ನು ನೋಡಿದ್ದಾಯಿತು' ಎಂದು ಸುಮ್ಮನಾಗಬಹುದು. ಆದರೆ, ಪ್ರತಿ ವರ್ಷ ನಡೆಯುವ 'ಹಂಪಿ ಉತ್ಸವ' ಅಥವಾ ಅಲ್ಲಿನ ಸ್ಥಳೀಯ 'ವಿರೂಪಾಕ್ಷ ರಥೋತ್ಸವ'ಕ್ಕೆ ವಿಶೇಷ ಆಮಂತ್ರಣ ಅಥವಾ ಆ ಸಂಭ್ರಮದ ಬಗ್ಗೆ ಅರಿವು ಮೂಡಿಸಿದರೆ, ಅವರು ಪ್ರತಿ ವರ್ಷ ಆ ಸಾಂಸ್ಕೃತಿಕ ಹಬ್ಬಕ್ಕಾಗಿ ಮರಳಿ ಬರುತ್ತಾರೆ. ನವ ಪ್ರವಾಸೋದ್ಯಮವು ಕೇವಲ ಕಣ್ಣಿಗೆ ಕಾಣುವ ನೋಟವನ್ನಷ್ಟೇ ಮಾರಾಟ ಮಾಡುವುದಿಲ್ಲ, ಅದು ಪ್ರವಾಸಿಗರ 'ನೆನಪು'ಗಳನ್ನು ಮತ್ತು 'ಭಾವನೆ'ಗಳನ್ನು ಮಾರಾಟ ಮಾಡುತ್ತದೆ. ಊರು ಹಳೆಯದಾದರೂ ಅನುಭವ ಹೊಸದಾಗಿರುವಂತೆ ನೋಡಿಕೊಳ್ಳುವುದೇ ಈ ಉದ್ದಿಮೆಯ ಯಶಸ್ಸಿನ ರಹಸ್ಯ.
ನನಗೆ ಈ ಮಾತನ್ನು ಹೇಳುವಾಗ ಜೋರ್ಡಾನಿನ ಪೆಟ್ರಾ ನಗರ ನೆನಪಾಗುತ್ತದೆ. ನಾನು ಪೆಟ್ರಾಕ್ಕೆ ಐದು ಸಲ ಹೋಗಿ ಬಂದಿದ್ದೇನೆ. ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಕರ್ಷಣೆಗಳೊಂದಿಗೆ ಕಾಲಕಾಲಕ್ಕೆ ಹೇಗೆ ಅಭಿವೃದ್ಧಿಪಡಿಸಬಹುದು, ಪ್ರವಾಸೋದ್ಯಮದಲ್ಲಿ ನವವಿಧಾನ ಜಾರಿ ಯಾಕೆ ಅತ್ಯಗತ್ಯ, ಪ್ರವಾಸೋದ್ಯಮದಲ್ಲಿ ತಂತ್ರಜ್ಞಾನವನ್ನು ಹೇಗೆ ಜಾರಿಗೊಳಿಸಿ ಪ್ರವಾಸಿಗರನ್ನು ಸೆಳೆಯಬಹುದು ಎಂಬುದಕ್ಕೆ ಪೆಟ್ರಾ ಉತ್ತಮ ನಿದರ್ಶನ.

ಜೋರ್ಡಾನ್ ದೇಶದ ಹೆಮ್ಮೆಯ ಸಂಕೇತವಾದ ಪೆಟ್ರಾ ನಗರವು ಕೇವಲ ಒಂದು ಐತಿಹಾಸಿಕ ತಾಣವಲ್ಲ. ಅದು ಮಾನವನ ಅಸಾಧಾರಣ ಕೆತ್ತನೆಯ ಕೌಶಲಕ್ಕೆ ಸಾಕ್ಷಿ. 'ಗುಲಾಬಿ ಬಣ್ಣದ ನಗರ' ಎಂದು ಕರೆಯುವ ಪೆಟ್ರಾ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ ಮತ್ತು ಜಗತ್ತಿನ ಹೊಸ ಏಳು ಅದ್ಭುತಗಳಲ್ಲಿ ಸ್ಥಾನ ಪಡೆದಿದೆ. ಆದರೆ, ಕೇವಲ ಇತಿಹಾಸವನ್ನು ನಂಬಿ ಕುಳಿತಿದ್ದರೆ ಆಧುನಿಕ ಪ್ರವಾಸೋದ್ಯಮದಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಅರಿತ ಜೋರ್ಡಾನ್, ಪೆಟ್ರಾವನ್ನು ಕಾಲಕಾಲಕ್ಕೆ ಹೊಸತನದೊಂದಿಗೆ ಸಜ್ಜುಗೊಳಿಸುತ್ತಿದೆ. ಪ್ರವಾಸೋದ್ಯಮದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ಪೆಟ್ರಾ ತನ್ನ ಹಳೆಯ ವೈಭವವನ್ನು ಉಳಿಸಿಕೊಳ್ಳುತ್ತಲೇ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ಹಲವಾರು ಸುಧಾರಣೆಗಳನ್ನು ತಂದಿದೆ. ರಾತ್ರಿಯ ಪೆಟ್ರಾ (Petra by Night) ಅತ್ಯಂತ ಜನಪ್ರಿಯ ಆಕರ್ಷಣೆ. ಹಗಲಿನಲ್ಲಿ ಕಲ್ಲಿನ ಕೆತ್ತನೆಗಳನ್ನು ನೋಡುವ ಪ್ರವಾಸಿಗರಿಗೆ ರಾತ್ರಿಯ ಹೊತ್ತು ಸಾವಿರಾರು ಮೇಣದಬತ್ತಿಗಳ ಬೆಳಕಿನಲ್ಲಿ ಅಲ್- ಖಜ್ನೆಹ್ ಕಟ್ಟಡದ ಮುಂದೆ ಕುಳಿತು ಸಾಂಪ್ರದಾಯಿಕ ಬೆಡೋಯಿನ್ ಸಂಗೀತ ಆಲಿಸುವ ಅವಕಾಶ ಕಲ್ಪಿಸಲಾಗಿದೆ. ಇದು ಪ್ರವಾಸಿಗರಿಗೆ ಮರೆಯಲಾಗದ ರೊಮ್ಯಾಂಟಿಕ್ ಮತ್ತು ಐತಿಹಾಸಿಕ ಅನುಭವ ನೀಡುತ್ತದೆ. ಕೇವಲ ಮುಖ್ಯ ದ್ವಾರದಿಂದ ಪೆಟ್ರಾ ನೋಡುವುದರ ಬದಲು, ಪರ್ವತಗಳ ಹಿಂಭಾಗದಿಂದ ಹೈಕಿಂಗ್ ಮಾಡಿಕೊಂಡು ಬರುವ ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಾಹಸಪ್ರಿಯ ಯುವ ಪ್ರವಾಸಿಗರನ್ನು ಸೆಳೆಯುತ್ತಿದೆ. ಪೆಟ್ರಾ ನಗರದ ಸುತ್ತಮುತ್ತಲ ವಾಡಿ ಮೂಸಾ (Wadi Musa) ಎಂಬಲ್ಲಿ ಅತ್ಯಾಧುನಿಕ ಐಷಾರಾಮಿ ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಐತಿಹಾಸಿಕ ತಾಣದ ಜತೆಗೆ ಆಧುನಿಕ ಸೌಕರ್ಯಗಳೂ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.
ಕಾಲ ಬದಲಾದಂತೆ, ಪೆಟ್ರಾ ತನ್ನ ಪ್ರವಾಸಿ ನೀತಿಯನ್ನು ಬದಲಿಸುತ್ತಿದೆ. ಪೆಟ್ರಾದ ಕಲ್ಲುಗಳು ಮೃದುವಾಗಿರುವುದರಿಂದ, ಅತಿಯಾದ ಪ್ರವಾಸಿಗರ ಒತ್ತಡದಿಂದ ಅವು ಸವೆಯುವ ಅಪಾಯವಿದೆ. ಇದನ್ನು ತಡೆಯಲು ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ ಮತ್ತು ದಿನಕ್ಕೆ ಇಷ್ಟೇ ಜನರಿಗೆ ಪ್ರವೇಶ ಎಂಬ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹಿಂದೆ ಪ್ರವಾಸಿಗರನ್ನು ಹೊತ್ತೊಯ್ಯಲು ಕತ್ತೆ ಮತ್ತು ಕುದುರೆಗಳನ್ನು ಬಳಸಲಾಗುತ್ತಿತ್ತು. ಆದರೆ ಪ್ರಾಣಿ ಹಿಂಸೆಯ ದೂರುಗಳು ಬಂದ ಹಿನ್ನೆಲೆಯಲ್ಲಿ, ಈಗ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಗಾಡಿಗಳನ್ನು ಪರಿಚಯಿಸಲಾಗಿದೆ. ಇದು ಹಿರಿಯ ನಾಗರಿಕರಿಗೆ ಸುಲಭವಾಗಿ ಪೆಟ್ರಾ ನೋಡಲು ಸಹಾಯ ಮಾಡಿದೆ. ಪುರಾತತ್ವ ಇಲಾಖೆಯು ಇಂದಿಗೂ ಪೆಟ್ರಾದಲ್ಲಿ ಹೊಸ ಹೊಸ ಕೆತ್ತನೆಗಳನ್ನು ಹುಡುಕುತ್ತಿದೆ. ಪ್ರತಿ ಬಾರಿ ಹೊಸದೊಂದು ಸ್ಮಾರಕ ಪತ್ತೆಯಾದಾಗಲೂ ಅದು ಜಾಗತಿಕ ಸುದ್ದಿಯಾಗಿ ಪ್ರವಾಸಿಗರ ಆಸಕ್ತಿಯನ್ನು ಹೆಚ್ಚಿಸುತ್ತಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ಕೇವಲ ಒಂದು ಜಾಗವನ್ನು ನೋಡಲು ಹೋಗುವುದಿಲ್ಲ, ಅವರು ಒಂದು 'ಅನುಭವ'ವನ್ನು ಹುಡುಕುತ್ತಾರೆ. ಒಂದು ಜಾಗದಲ್ಲಿ ಪ್ರತಿ ಬಾರಿ ಹೋದಾಗಲೂ ಹೊಸದೇನಾದರೂ ಇಲ್ಲದಿದ್ದರೆ ಪ್ರವಾಸಿಗರು ಎರಡನೇ ಬಾರಿ ಹೋಗುವುದಿಲ್ಲ. ಪೆಟ್ರಾದಲ್ಲಿ ಸೌರಶಕ್ತಿಯ ದೀಪಾಲಂಕಾರ ಅಥವಾ ಹೊಸ ಮ್ಯೂಸಿಯಂಗಳನ್ನು ಸ್ಥಾಪಿಸಿರುವುದು ಈಗಾಗಲೇ ಭೇಟಿ ನೀಡಿದವರಿಗೂ ಹೊಸ ಆಕರ್ಷಣೆಗಳಾಗಿವೆ. ಸೌದಿ ಅರೇಬಿಯಾದ ಅಲ್-ಉಲಾನಂಥ ಹೊಸ ಐತಿಹಾಸಿಕ ತಾಣಗಳು ಪ್ರವಾಸಿಗರನ್ನು ಸೆಳೆಯುತ್ತಿರುವಾಗ, ಪೆಟ್ರಾ ತನ್ನ ಪ್ರಾಮುಖ್ಯವನ್ನು ಉಳಿಸಿಕೊಳ್ಳಲು ನವೀನ ತಂತ್ರಗಳನ್ನು ಬಳಸಲೇಬೇಕಿದೆ. ಪ್ರವಾಸೋದ್ಯಮವು ಜೋರ್ಡಾನ್‌ನ ಜಿಡಿಪಿಯ ದೊಡ್ಡ ಭಾಗವಾಗಿದೆ. ಹೊಸ ವಿಧಾನಗಳಿಂದ ಪ್ರವಾಸಿಗರು ಹೆಚ್ಚು ದಿನ ಅಲ್ಲಿ ಉಳಿಯುವಂತೆ ಮಾಡಿದರೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತದೆ. ಪೆಟ್ರಾದ ಅನೇಕ ಕಟ್ಟಡಗಳು ಇಂದು ಶಿಥಿಲಗೊಂಡಿವೆ. ಆದರೆ ಎಆರ್ (AR) ತಂತ್ರಜ್ಞಾನದ ಮೂಲಕ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾವನ್ನು ಕಟ್ಟಡದತ್ತ ಹಿಡಿದರೆ, ಆ ಕಟ್ಟಡವು ಸಾವಿರಾರು ವರ್ಷಗಳ ಹಿಂದೆ ಹೇಗಿತ್ತು ಎಂಬ ಪೂರ್ಣ ಚಿತ್ರಣವನ್ನು ಮೊಬೈಲ್ ಪರದೆಯ ಮೇಲೆ ತೋರಿಸುತ್ತದೆ. ಪ್ರವಾಸಿಗರು ಗೈಡ್‌ಗಳ ಹಿಂದೆ ಓಡುವ ಬದಲು, ತಮ್ಮ ಮೊಬೈಲ್‌ನಲ್ಲಿ ಆಯಾ ಸ್ಥಳದ ಇತಿಹಾಸವನ್ನು ತಮಗೆ ಬೇಕಾದ ಭಾಷೆಯಲ್ಲಿ ಕೇಳಿಸಿಕೊಳ್ಳುವ ಸೌಲಭ್ಯವಿದೆ. ಇನ್‌ಸ್ಟಾಗ್ರಾಮ್ ಪ್ರಿಯರಿಗಾಗಿ 'ಫೊಟೋಜೆನಿಕ್' ಪಾಯಿಂಟ್‌ಗಳನ್ನು ಗುರುತಿಸುವುದು ಮತ್ತು ಅಲ್ಲಿ ಉಚಿತ ವೈಫೈ ಸೌಲಭ್ಯ ನೀಡುವುದು ಪ್ರವಾಸಿಗರನ್ನು ಸೆಳೆಯುವ ಆಧುನಿಕ ತಂತ್ರ.

ಪೆಟ್ರಾ ನಗರವು ತನ್ನ ಪ್ರಾಚೀನತೆಯ ಗಾಂಭೀರ್ಯವನ್ನು ಬಿಟ್ಟುಕೊಡದೇ, ಆಧುನಿಕ ಪ್ರವಾಸಿಗನ ಅಗತ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಪ್ರವಾಸೋದ್ಯಮದಲ್ಲಿ ತಂತ್ರಜ್ಞಾನ ಎನ್ನುವುದು ಕೇವಲ ಲಕ್ಸುರಿ ಅಲ್ಲ, ಅದು ಅನಿವಾರ್ಯತೆ. ಇತಿಹಾಸದ ಕಥೆಗಳನ್ನು ತಂತ್ರಜ್ಞಾನದ ಭಾಷೆಯಲ್ಲಿ ಹೇಳಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ತಲುಪಲು ಸಾಧ್ಯ. ಪೆಟ್ರಾ ಈ ನಿಟ್ಟಿನಲ್ಲಿ ಜಗತ್ತಿಗೆ ಮಾದರಿಯಾಗಿದೆ.
ಪೆಟ್ರಾದ ಜತೆಗೆ ಜಗತ್ತಿನ ಇತರ ದೇಶಗಳೂ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುತ್ತಿವೆ. ಈಜಿಪ್ಟ್‌ನ ಪಿರಮಿಡ್‌ಗಳ ಒಳಗೆ ಹೋಗಲಾಗದ ಜಾಗಗಳನ್ನು ನೋಡಲು ವರ್ಚುವಲ್ ಟೂರ್‌ಗಳನ್ನು ನೀಡಲಾಗುತ್ತಿದೆ. ಪ್ಯಾರಿಸಿನಲ್ಲಿ (ಲೌವ್ರೆ ಮ್ಯೂಸಿಯಂ) ಪ್ರವಾಸಿಗರು ದಾರಿ ತಪ್ಪದಂತೆ ಮತ್ತು ಪ್ರತಿ ಚಿತ್ರದ ವಿವರ ಪಡೆಯಲು ಅತಿ ಸುಧಾರಿತ ಮೊಬೈಲ್ ಆಪ್‌ಗಳನ್ನು ಬಳಸಲಾಗುತ್ತಿದೆ. ಜಪಾನ್ ನಲ್ಲಿ ರೋಬೋಟ್ ಗೈಡ್‌ಗಳು ಮತ್ತು ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ಸಿಂಗಾಪುರ (ಗಾರ್ಡನ್ಸ್ ಬೈ ದಿ ಬೇ) ತಂತ್ರಜ್ಞಾನ ಮತ್ತು ಪರಿಸರವನ್ನು ಬಳಸಿಕೊಂಡು ಕೃತಕ ಮರಗಳಿಗೆ ದೀಪಾಲಂಕಾರ ಮತ್ತು ಸಂಗೀತ ಹೊಮ್ಮಿಸುವ ಮೂಲಕ ಪ್ರತಿ ರಾತ್ರಿ ಸಾವಿರಾರು ಜನರನ್ನು ಸೆಳೆಯುತ್ತಿದೆ.
ಬರೀ ಹಳೆ ಕಲ್ಲು-ಮಣ್ಣು ತೋರಿಸಿ ಕಾಸು ಮಾಡುವ ಜಮಾನ ಮುಗಿದುಹೋಯಿತು. ಇವತ್ತಿನ ಟೂರಿಸಂ ಮಂತ್ರ ಅಂದ್ರೆ ಅದು 'ತಾಜಾತನ'. ಪ್ರವಾಸ ಅಂದ್ರೆ ಬರೀ ಲಗೇಜ್ ಹೊತ್ತು ಹೋಗಿ ಬರೋದಲ್ಲ, ಅದು ಒಳಗಣ್ಣು ತೆರೆಸುವ ಅನುಭವಗಳ ಹೊಸ ಲೋಕ. ಇಂದಿನ ಪ್ರವಾಸೋದ್ಯಮದಲ್ಲಿ ಹೊಸತನ ಮತ್ತು ತಾಜಾತನವೇ ಮಂತ್ರ. ಒಮ್ಮೆ ನೋಡಿದ ಜಾಗಕ್ಕೆ ಮತ್ತೆ ಮತ್ತೆ ಯಾಕೆ ಸೆಳೆಯುತ್ತದೆ? ಅಲ್ಲಿನ ಗಾಳಿಯಲ್ಲಿ, ಅಲ್ಲಿನ ಮಣ್ಣಿನ ಮೌನದಲ್ಲಿ ಏನೋ ಒಂದು ಹೊಸ ಸೆಳೆತ ಇರಬೇಕು. ಹಳೆ ಪ್ರೇಯಸಿಯನ್ನು ಪ್ರತಿ ಬಾರಿ ಭೇಟಿಯಾದಾಗಲೂ ಅವಳು ಹೊಸಬಳಂತೆ ಕಾಣಿಸುತ್ತಾಳಲ್ಲ, ಹಾಗೆ! ಆ ಊರಿನಲ್ಲಿ ಪ್ರತಿ ಸಲವೂ ಹೊಸ ರುಚಿ, ಹೊಸ ಕತೆ ಸಿಗಬೇಕು. ಈ 'ನಾವೀನ್ಯ' ಅನ್ನೋದು ಇಲ್ಲದಿದ್ರೆ ಟೂರಿಸಂ ಅನ್ನೋದು ಒಣಗಿದ ರೊಟ್ಟಿ. ಹೊಸಬರನ್ನು ಸೆಳೆಯೋದು ವ್ಯಾಪಾರ, ಆದರೆ ನೋಡಿದ್ದನ್ನೇ ಹತ್ತನೇ ಬಾರಿಯೂ ಹೊಸತಾಗಿ ಕಾಣುವಂತೆ ಮಾಡೋದು ಅಸಲಿ ಕಲೆ! ಪ್ರವಾಸೋದ್ಯಮ ಕ್ಷೇತ್ರದಲ್ಲಿರುವವರ ಚಿಂತನೆ ಹೊಸ ಬದುವಿಗೆ ಹೊರಳಬೇಕಾಗಿದೆ.