ಕಾಲದ ಹೆಜ್ಜೆಗುರುತುಗಳನ್ನು ಅಡಗಿಸಿಟ್ಟ ದೈತ್ಯ ಬೀಜ

ಅನೇಕ ಸ್ಥಳಗಳು ತಮ್ಮನ್ನು ತಾವು ಸ್ವರ್ಗ ಎಂದು ಕರೆದುಕೊಳ್ಳುತ್ತವೆ, ಆದರೆ ಪಶ್ಚಿಮ ಹಿಂದೂ ಮಹಾಸಾಗರದ ದೂರದ ನೀಲಿ ಅಲೆಗಳ ನಡುವೆ ಪಚ್ಚೆ ಮಣಿಗಳಂತೆ ಪೋಣಿಸಿದ ಸಮಭಾಜಕ ವೃತ್ತದ ಹತ್ತಿರದ ದ್ವೀಪಸಮೂಹವಾದ ಸೀಶೆಲ್ಸ್ (Seychelles) ಮಾತ್ರ ನಿಸ್ಸಂದೇಹವಾಗಿ ಈ ಕಿರೀಟಕ್ಕೆ ಅರ್ಹವಾಗಿದೆ. ನಾನು ಸೀಶೆಲ್ಸ್ ದ್ವೀಪ ರಾಷ್ಟ್ರಕ್ಕೆ ಹೊರಟಾಗ, ಅಲ್ಲಿ ವ್ಯಾಪಕವಾಗಿ ಸಂಚರಿಸಿದ ನನ್ನ ಸ್ನೇಹಿತರೊಬ್ಬರು, 'ಸೀಶೆಲ್ಸ್ ಗೆ ಹೋದವರ ಪೈಕಿ ಹೆಚ್ಚಿನವರು ಅಲ್ಲಿನ ಬೀಚ್ ಗಳನ್ನು ನೋಡಿ ಬರುತ್ತಾರೆ. ಆದರೆ ಅಲ್ಲಿನ ಪ್ರಸ್ಲಿನ್ ದ್ವೀಪದಲ್ಲಿ 'ವ್ಯಾಲಿ ಡಿ ಮೇ' ಎಂಬ ಒಂದು ಅದ್ಭುತ ಕಾಡನ್ನು ನೋಡದೇ ಬರುತ್ತಾರೆ. ಅಲ್ಲಿ 'ಕೊಕೊ ಡಿ ಮೆರ್' ಎಂಬ ತಾಳೆ ಮರಗಳನ್ನು ಹೋಲುವ ಮರಗಳಿವೆ. ಅಲ್ಲಿಗೆ ಹೋಗದೇ ಬರಬೇಡಿ, ಅದೊಂದು ಅದ್ಭುತ ಅನುಭವ ನೀಡುವ ಕಾಡು’ ಎಂದು ಹೇಳಿದ್ದರು.

ಹೀಗಾಗಿ 'ವ್ಯಾಲಿ ಡಿ ಮೇ' ಕಾಡು ಮತ್ತು 'ಕೊಕೊ ಡಿ ಮೆರ್' ನನ್ನ ಮನಸ್ಸಿನಲ್ಲಿ ತಣ್ಣಗೆ ಕುಳಿತಿದ್ದವು.

ಇದನ್ನೂ ಓದಿ: ಈ ಲೈಬ್ರರಿಯಲ್ಲಿ ಪುಸ್ತಕಗಳ ಬದಲಿಗೆ ‘ಮನುಷ್ಯರೇ ಪುಸ್ತಕ’ಗಳಾಗಿರುತ್ತಾರೆ!

ಆ ದಿನ ಬೆಳಗ್ಗೆ ನಾನು 'ವ್ಯಾಲಿ ಡಿ ಮೇ' ಕಾಡಿನೊಳಗೆ ಕಾಲಿಟ್ಟಾಗ, ಸಮಯವು ಏಕಾಏಕಿ ತನ್ನ ಗಡಿಯಾರವನ್ನು ಕಳಚಿ ಪಕ್ಕಕ್ಕಿಟ್ಟಂತೆ ಭಾಸವಾಯಿತು. ಅಲ್ಲಿನ ಗಾಳಿಯಲ್ಲಿ ಯಾವುದೋ ಹಳೆಯ ಮಳೆಯ ವಾಸನೆಯಿದೆ. ಆಕಾಶವನ್ನು ಮುಚ್ಚಿದ ಬೃಹತ್ ಎಲೆಗಳ ನಡುವೆ ಸೂರ್ಯನ ಕಿರಣಗಳು ನೆಲದ ಮೇಲಿರುವ ಒಣಗಿದ ಎಲೆಗಳ ಮೇಲೆ ಬಿದ್ದಾಗ, ಯಾವುದೋ ಪ್ರಾಚೀನ ಕಾಲದ ಪತ್ರವೊಂದು ನಿಧಾನಕ್ಕೆ ತೆರೆದುಕೊಂಡಂತೆನಿಸುತ್ತದೆ. ಇಲ್ಲಿನ ಮೌನವು ಕೂಡ ಒಂದು ಭಾಷೆಯಂತಿದೆ, ಅದು ನಮಗೆ ಅರ್ಥವಾಗದಿದ್ದರೂ ನಮ್ಮನ್ನು ಆವರಿಸಿಕೊಳ್ಳುತ್ತದೆ.

Untitled design - 2026-04-17T182129.035

ಸೋಜಿಗವೆಂದರೆ ಆ ಕಾಡಿನಲ್ಲಿ ಬೇರೆ ಮರಗಳೇ ಇಲ್ಲ. ಬರೀ 'ಕೊಕೊ ಡಿ ಮೆರ್' ಎಂದು ಕರೆಸಿಕೊಳ್ಳುವ ತಾಳೆ ಮರಕ್ಕೆ ಹೋಲುವ ಮರಗಳೇ. ಕೊಕೊ ಡಿ ಮೆರ್ ಮರಗಳು ಬರಿಯ ಮರಗಳಲ್ಲ, ಅವು ಈ ದ್ವೀಪದ ಮೂಕ ಸಾಕ್ಷಿಗಳು. ಗಾಳಿಯ ಅಲೆಗಳಿಗೆ ಅವುಗಳ ದೈತ್ಯಾಕಾರದ ಎಲೆಗಳು ಪರಸ್ಪರ ಉಜ್ಜಿಕೊಂಡಾಗ ಹೊರಬರುವ ಶಬ್ದವು, ಯಾವುದೋ ಪುರಾತನ ರಾಗದ ಅಸ್ಪಷ್ಟ ಗುನುಗಿನಂತಿದೆ. ಆ ಮರಗಳ ಎತ್ತರವನ್ನು ನೋಡುತ್ತಾ ಹೋದರೆ, ಕತ್ತಿಗೆ ನೋವಾದರೂ, ಕಣ್ಣುಗಳಿಗೆ ಒಂದು ಬಗೆಯ ಅತೀಂದ್ರಿಯ ತೃಪ್ತಿ. ಅಲ್ಲಿನ ಮರಗಳು ಆಕಾಶದ ಎತ್ತರಕ್ಕೆ ಮೈ ಚಾಚಿ ನಿಂತಿರುವುದು ಬರಿಯ ಸೂರ್ಯನ ಬೆಳಕಿಗಾಗಿ ಅಲ್ಲ, ಬದಲಿಗೆ ಯುಗಯುಗಾಂತರಗಳಿಂದ ಮರೆತುಹೋದ ಯಾವುದೋ ರಹಸ್ಯವನ್ನು ಆಕಾಶಕ್ಕೆ ಪಿಸುಗುಟ್ಟಲೆಂದು ಕಾದು ನಿಂತ ಹಿರಿಯರಂತೆ ಕಾಣುತ್ತವೆ.

ಅಲ್ಲಿನ ದೈತ್ಯಾಕಾರದ ಕೊಕೊ ಡಿ ಮೆರ್ ಎಲೆಗಳ ಕೆಳಗೆ ನಿಂತಾಗ, ಮನುಷ್ಯನ ಅಹಂಕಾರವೆಲ್ಲ ಬತ್ತಿಹೋಗಿ ತಾನು ಪ್ರಕೃತಿಯ ಅತಿ ಸಣ್ಣ ಕಣ ಎಂಬ ಅರಿವು ಮೂಡದಿರದು. ಮಳೆ ಬಂದಾಗ ಆ ಬೃಹತ್ ಎಲೆಗಳ ಮೇಲೆ ಬೀಳುವ ಹನಿಗಳು ಹೊರಡಿಸುವ ಶಬ್ದವು, ಯಾವುದೋ ಹಳೆಯ ಟೈಪ್‌ರೈಟರ್ ಮೇಲೆ ಪ್ರಕೃತಿಯು ತನ್ನ ದಿನಚರಿಯನ್ನು ಬರೆಯುತ್ತಿರುವಂತೆ ಕೇಳಿಸುತ್ತದೆ. ಇಲ್ಲಿನ ಪ್ರತಿ ಮರವೂ ತನ್ನದೇ ಆದ ಏಕಾಂತವನ್ನು ಅಪ್ಪಿಕೊಂಡು ಕುಳಿತಿದೆಯೆನೋ. ಈ ಕಣಿವೆಯ ಹಾದಿಯಲ್ಲಿ ನಡೆಯುವುದು ಅಂದರೆ ನಮಗೆ ನಾವೇ ಮುಖಾಮುಖಿಯಾಗುವ ಪ್ರಕ್ರಿಯೆ. ದಾರಿಯುದ್ದಕ್ಕೂ ಹರಡಿರುವ ಒಣಗಿದ ಎಲೆಗಳು ನಮ್ಮ ಹೆಜ್ಜೆಯ ಸದ್ದಿಗೆ ಮರುಮಾತನಾಡದಿದ್ದರೂ, ನಮ್ಮನ್ನು ಇನ್ನೂ ಆಳದ ಮೌನಕ್ಕೆ ಕೊಂಡೊಯ್ಯುತ್ತವೆ. ಪ್ರಕೃತಿಯ ಈ ಅಗಾಧವಾದ ಲಯದಲ್ಲಿ ಮನುಷ್ಯನ ಉಪಸ್ಥಿತಿಯು ಕೇವಲ ಒಂದು ಕ್ಷಣಿಕ ನೆರಳಿನಷ್ಟೇ ಎಂಬ ಸತ್ಯ ಇಲ್ಲಿ ನಿಚ್ಚಳವಾಗುತ್ತದೆ.

ಪ್ರಕೃತಿಯು ತನ್ನ ಒಡಲಲ್ಲಿ ಅಸಂಖ್ಯಾತ ವಿಸ್ಮಯಗಳನ್ನು ಅಡಗಿಸಿಟ್ಟುಕೊಂಡಿದೆ ಅಂತಾರೆ. ಅದು ನಿಜ ಎಂದು ಅನಿಸಲು ಇಂಥ ಕಡೆ ಬರಬೇಕು. ಈ ವಿಸ್ಮಯಗಳಲ್ಲಿ ಅತ್ಯಂತ ವಿಶಿಷ್ಟವಾದುದು 'ಕೊಕೊ ಡಿ ಮೆರ್'. ಇದನ್ನು ಸಸ್ಯಶಾಸ್ತ್ರೀಯವಾಗಿ Lodoicea maldivica ಎಂದು ಕರೆಯಲಾಗುತ್ತದೆ. ಇದು ಕೇವಲ ಒಂದು ತೆಂಗಿನ ಜಾತಿಯ ಮರವಲ್ಲ, ಬದಲಿಗೆ ಜಗತ್ತಿನ ಸಸ್ಯ ಸಾಮ್ರಾಜ್ಯದ ಅತ್ಯಂತ ಅಪರೂಪದ ಮತ್ತು ಬೆಲೆಬಾಳುವ ಸಂಪತ್ತುಗಳಲ್ಲಿ ಒಂದು. ಅಚ್ಚರಿಯ ಸಂಗತಿಯೆಂದರೆ, ಕೊಕೊ ಡಿ ಮೆರ್ ಪ್ರಪಂಚದಲ್ಲಿ ಬೇರೆಲ್ಲೂ ಕಂಡುಬರುವುದಿಲ್ಲ, ಸೀಶೆಲ್ಸ್ ದ್ವೀಪಸಮೂಹದ ಕೇವಲ ಎರಡು ದ್ವೀಪಗಳಾದ ಪ್ರಸ್ಲಿನ್ ಮತ್ತು ಕ್ಯೂರಿಯಸ್ ದ್ವೀಪಗಳಲ್ಲಿ ಮಾತ್ರ!

'ಕೊಕೊ ಡಿ ಮೆರ್' ಎಂಬುದು ಫ್ರೆಂಚ್ ಭಾಷೆಯಿಂದ ಬಂದಿದೆ. ಇದರರ್ಥ 'ಸಮುದ್ರದ ತೆಂಗಿನಕಾಯಿ'. ಈ ಹೆಸರಿನ ಹಿಂದೆ ಒಂದು ಕುತೂಹಲಕಾರಿ ಇತಿಹಾಸವಿದೆ. ಈ ದ್ವೀಪಗಳು ಮನುಷ್ಯರಿಗೆ ಪರಿಚಯವಾಗುವ ಮೊದಲು, ಈ ಬೃಹತ್ ಕಾಯಿಗಳು ಸಮುದ್ರದ ಅಲೆಗಳ ಮೂಲಕ ಮಾಲ್ಡೀವ್ಸ್ ಮತ್ತು ಇಂಡೋನೇಷ್ಯಾದ ತೀರಗಳಿಗೆ ಬಂದು ಬೀಳುತ್ತಿದ್ದವು. ಈ ಕಾಯಿಗಳು ಎಲ್ಲಿಂದ ಬರುತ್ತವೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಜನರು ಇವು ಸಮುದ್ರದ ತಳದಲ್ಲಿ ಬೆಳೆಯುವ ಕಾಡಿನಿಂದ ಬರುತ್ತವೆ ಎಂದು ನಂಬಿದ್ದರು. ಹಾಗಾಗಿಯೇ ಇದಕ್ಕೆ 'ಸಮುದ್ರದ ತೆಂಗು' ಎಂಬ ಹೆಸರು ಬಂದಿತು.

'ಕೊಕೊ ಡಿ ಮೆರ್' ತಾಳೆ ಜಾತಿಗೆ (Palm Family) ಸೇರಿದ ಮರವಾಗಿದೆ. ಇದರ ವಿಶಿಷ್ಟಗಳು ಸಸ್ಯಶಾಸ್ತ್ರಜ್ಞರಿಗೂ ಸೋಜಿಗವೇ. ಈ ಮರಗಳು ಸುಮಾರು 25 ರಿಂದ 34 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯಬಲ್ಲವು. ಇವು ಬಹಳ ನಿಧಾನವಾಗಿ ಬೆಳೆಯುವ ಮರಗಳಾಗಿದ್ದು, ಸುಮಾರು 200 ರಿಂದ 350 ವರ್ಷಗಳವರೆಗೆ ಬದುಕಬಲ್ಲವು. ಇದರ ಎಲೆಗಳು ಬೀಸಣಿಗೆಯ ಆಕಾರದಲ್ಲಿದ್ದು, ಸುಮಾರು 7 ರಿಂದ 10 ಮೀಟರ್ ಉದ್ದವಿರುತ್ತವೆ. ಈ ಮರಗಳಲ್ಲಿ ಗಂಡು ಮತ್ತು ಹೆಣ್ಣು ಮರಗಳು ಪ್ರತ್ಯೇಕವಾಗಿರುತ್ತವೆ. ಗಂಡು ಮರದಲ್ಲಿ ಉದ್ದನೆಯ ಕ್ಯಾಟ್‌ಕಿನ್ ಥರದ ಹೂಗೊಂಚಲುಗಳಿದ್ದರೆ, ಹೆಣ್ಣು ಮರದಲ್ಲಿ ದೊಡ್ಡದಾದ ಕಾಯಿಗಳು ಬಿಡುತ್ತವೆ. 'ಕೊಕೊ ಡಿ ಮೆರ್' ಪ್ರಪಂಚದಾದ್ಯಂತ ಪ್ರಸಿದ್ಧಿಯಾಗಿರುವುದು ಅದರ ಕಾಯಿಯ ಗಾತ್ರದಿಂದಾಗಿ. ಒಂದು ಪಕ್ವವಾದ 'ಕೊಕೊ ಡಿ ಮೆರ್' ಕಾಯಿಯು 15 ರಿಂದ 30 ಕೆಜಿ ತೂಕವಿರುತ್ತದೆ. ಇದು ಪ್ರಪಂಚದ ಅತ್ಯಂತ ಭಾರವಾದ ಬೀಜವಾಗಿದೆ. ಈ ಕಾಯಿಗಳು ಸುಮಾರು 40 ರಿಂದ 50 ಸೆಂಟಿಮೀಟರ್ ವ್ಯಾಸವನ್ನು ಹೊಂದಿರುತ್ತವೆ.

'ಕೊಕೊ ಡಿ ಮೆರ್' ಕಾಯಿಯ ಅತ್ಯಂತ ವಿಶಿಷ್ಟ ಮತ್ತು ಬೆರಗುಗೊಳಿಸುವ ಅಂಶವೆಂದರೆ ಅದರ ಅಸಾಮಾನ್ಯ ಆಕಾರ. ಪ್ರಕೃತಿಯು ಈ ಬೀಜವನ್ನು ಕೆತ್ತಿರುವ ರೀತಿ ಎಂಥವರನ್ನೂ ಒಂದು ಕ್ಷಣ ಸ್ತಂಭೀಭೂತರನ್ನಾಗಿಸುತ್ತದೆ. ಇದನ್ನು ಸಸ್ಯಶಾಸ್ತ್ರದ ಲೋಕದಲ್ಲಿ 'ಡಬಲ್ ಕೋಕೊನಟ್' ಎಂದು ಕರೆಯಲು ಅದರ ದ್ವಿಮುಖ ವಿನ್ಯಾಸವೇ ಕಾರಣ. ಈ ಕಾಯಿಯು ಪೂರ್ಣವಾಗಿ ಬೆಳೆದಾಗ ನೋಡಲು ಮನುಷ್ಯನ, ಅದರಲ್ಲೂ ವಿಶೇಷವಾಗಿ ಮಹಿಳೆಯ ಸೊಂಟದ ಭಾಗದ (Female Pelvis) ಅಚ್ಚೊತ್ತಿದ ರೂಪದಂತೆ ಕಾಣುತ್ತದೆ. ಅದರ ನೈಸರ್ಗಿಕ ವಕ್ರರೇಖೆಗಳು ಮತ್ತು ಮಧ್ಯದಲ್ಲಿರುವ ಸೀಳು ನೋಡುಗರಿಗೆ ಮಾನವ ಶರೀರದ ಅಂಗರಚನೆಯನ್ನು ನೆನಪಿಸುತ್ತವೆ. ಕುತೂಹಲಕಾರಿ ವಿಷಯವೆಂದರೆ, ಕೇವಲ ಹೆಣ್ಣು ಕಾಯಿ ಮಾತ್ರವಲ್ಲ, ಗಂಡು ಮರದ ಹೂಗೊಂಚಲು ಕೂಡ ಪುರುಷ ಜನನಾಂಗದ ಆಕಾರವನ್ನು ಹೋಲುತ್ತದೆ. ಪ್ರಕೃತಿಯ ಈ 'ಲಿಂಗಾಧಾರಿತ' ವಿನ್ಯಾಸವು ಸಸ್ಯಲೋಕದ ಬೇರೆಲ್ಲೂ ಕಂಡುಬರದ ಅಪರೂಪದ ವಿಸ್ಮಯ.

ಈ ವಿಶಿಷ್ಟ ಆಕಾರದಿಂದಾಗಿಯೇ ಕೊಕೊ ಡಿ ಮೆರ್ ಅನ್ನು ಶತಮಾನಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಫಲವತ್ತತೆಯ (Fertility) ಸಂಕೇತವೆಂದು ಆರಾಧಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿ ಈ ಕಾಯಿಗಳು ಸಮುದ್ರ ತೀರಕ್ಕೆ ಬಂದು ಬಿದ್ದಾಗ, ಜನರು ಇವುಗಳನ್ನು ದೇವತೆಗಳು ನೀಡಿದ ವರವೆಂದು ಭಾವಿಸುತ್ತಿದ್ದರು. ಇವುಗಳನ್ನು ಹೊಂದಿರುವ ಮನೆಯಲ್ಲಿ ಸಂತಾನ ಭಾಗ್ಯ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿತ್ತು. ಏಷ್ಯಾದ ರಾಜರು ಮತ್ತು ಮೊಘಲ್ ಚಕ್ರವರ್ತಿಗಳು ಈ ಕಾಯಿಗಳನ್ನು ಅತ್ಯಂತ ಬೆಲೆಬಾಳುವ ಉಡುಗೊರೆಗಳೆಂದು ಪರಿಗಣಿಸುತ್ತಿದ್ದರು. ಇವುಗಳನ್ನು ಆಭರಣಗಳಂತೆ ಅಲಂಕರಿಸಿ ಅರಮನೆಗಳಲ್ಲಿ ಇರಿಸಲಾಗುತ್ತಿತ್ತು. ಇದರ ಆಕಾರದಿಂದಾಗಿ, ಈ ಕಾಯಿಯ ತಿರುಳು ಕಾಮೋತ್ತೇಜಕ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಹರಡಿತ್ತು. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಇತ್ತು.

ವಿಜ್ಞಾನವು ಇದನ್ನು ಕೇವಲ ಒಂದು ಬೀಜದ ವಿಕಾಸ ಎಂದು ವಿವರಿಸಬಹುದು. ಆದರೆ ಮನುಷ್ಯನ ಕಣ್ಣಿಗೆ ಇದು ಪ್ರಕೃತಿಯು ಸೃಷ್ಟಿಸಿದ ಒಂದು ಜೀವಂತ ಶಿಲ್ಪದಂತೆ ಕಾಣುತ್ತದೆ. ‘ವ್ಯಾಲಿ ಡಿ ಮೇ’ ಕಾಡಿನ ಮೌನದಲ್ಲಿ ಬೆಳೆಯುವ ಈ ಕಾಯಿಗಳು, ಜೀವ ಸೃಷ್ಟಿಯ ರಹಸ್ಯ ಮತ್ತು ಫಲವತ್ತತೆಯ ಶಕ್ತಿಯನ್ನು ಮೌನವಾಗಿಯೇ ಸಾರುತ್ತಿವೆ. ಈ ಮಾಂತ್ರಿಕ ಆಕಾರವೇ ಇಂದು ಕೊಕೊ ಡಿ ಮೆರ್ ಅನ್ನು ವಿಶ್ವದ ಅತ್ಯಂತ ಅಮೂಲ್ಯ ಮತ್ತು ಆಕರ್ಷಕ ನೈಸರ್ಗಿಕ ಸಂಪತ್ತನ್ನಾಗಿ ಮಾಡಿದೆ.

ಈ ಮರದ ಜೀವನ ಚಕ್ರವು ತುಂಬಾ ನಿಧಾನಗತಿಯದು. ಒಂದು ಬೀಜವು ಮೊಳಕೆಯೊಡೆಯಲು ಸುಮಾರು 2 ರಿಂದ 3 ವರ್ಷಗಳು ಬೇಕು. ಮರವು ಹೂ ಬಿಡುವ ಹಂತಕ್ಕೆ ತಲುಪಲು ಸುಮಾರು 20 ರಿಂದ 40 ವರ್ಷಗಳು ಬೇಕು. ಒಮ್ಮೆ ಹೂವು ಪರಾಗಸ್ಪರ್ಶವಾದ ನಂತರ, ಕಾಯಿಯು ಪೂರ್ಣವಾಗಿ ಬೆಳೆದು ಮಾಗಲು 6 ರಿಂದ 7 ವರ್ಷಗಳು ತಗಲುತ್ತವೆ. ಈ ನಿಧಾನಗತಿಯ ಪ್ರಕ್ರಿಯೆಯೇ ಈ ಮರಗಳ ಸಂಖ್ಯೆ ಕಡಿಮೆಯಾಗಲು ಒಂದು ಮುಖ್ಯ ಕಾರಣ.

Untitled design - 2026-04-17T182136.093

ಕೊಕೊ ಡಿ ಮೆರ್ ಮರಗಳ ಪರಾಗಸ್ಪರ್ಶ (Pollination) ಪ್ರಕ್ರಿಯೆಯೂ ಪ್ರಕೃತಿಯ ಅತ್ಯಂತ ನಿಗೂಢ ಮತ್ತು ರೋಚಕ ವಿದ್ಯಮಾನವೇ. ವಿಜ್ಞಾನಿಗಳು ದಶಕಗಳಿಂದ ಈ ರಹಸ್ಯವನ್ನು ಭೇದಿಸಲು ಪ್ರಯತ್ನಿಸುತ್ತಿದ್ದರೂ, ಇಂದಿಗೂ ಇದು ಪೂರ್ಣವಾಗಿ ಅರ್ಥವಾಗದ ಒಂದು 'ಜೈವಿಕ ಒಗಟು'. ಸಾಮಾನ್ಯವಾಗಿ ಹೂವುಗಳಲ್ಲಿ ಪರಾಗಸ್ಪರ್ಶಕ್ಕೆ ಜೇನುನೊಣಗಳು ಅಥವಾ ಚಿಟ್ಟೆಗಳು ಕಾರಣವಾಗುತ್ತವೆ. ಆದರೆ ಇದಕ್ಕೆ 'ಬ್ರಾಂಜೀ ಗೆಕ್ಕೊ' ಎಂಬ ವಿಶಿಷ್ಟ ಹಲ್ಲಿಗಳು ಈ ಕೆಲಸವನ್ನು ಮಾಡುತ್ತವೆ. ಗಂಡು ಕೊಕೊ ಡಿ ಮೆರ್ ಮರದ ಹೂಗೊಂಚಲು ಬಿಡುವ 'ಬಾಸ್ಮತಿ ಅಕ್ಕಿ'ಯಂಥ ತೀವ್ರವಾದ ಸುವಾಸನೆಯು ಈ ಹಲ್ಲಿಗಳನ್ನು ಆಕರ್ಷಿಸುತ್ತದೆ. ಹಲ್ಲಿಗಳು ಗಂಡು ಹೂವಿನ ಮೇಲಿರುವ ಪರಾಗದ ಕಣಗಳನ್ನು ತಿನ್ನಲು ಅಥವಾ ಅಲ್ಲಿರುವ ಕೀಟಗಳನ್ನು ಬೇಟೆಯಾಡಲು ಬಂದಾಗ, ಅವುಗಳ ಮೈಗೆ ಹಳದಿ ಬಣ್ಣದ ಪರಾಗ ಅಂಟಿಕೊಳ್ಳುತ್ತದೆ. ನಂತರ ಇವು ಹೆಣ್ಣು ಮರಕ್ಕೆ ಹೋದಾಗ ಆ ಪರಾಗವು ವರ್ಗಾವಣೆಯಾಗುತ್ತದೆ.

ಕೊಕೊ ಡಿ ಮೆರ್ ಪರಾಗಸ್ಪರ್ಶದಲ್ಲಿರುವ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅದರ ಸಮಯದ ಮಿತಿ. ಹೆಣ್ಣು ಮರದ ಹೂವು ಪರಾಗವನ್ನು ಸ್ವೀಕರಿಸಲು ಸಿದ್ಧವಾದಾಗ, ಅದು ಕೇವಲ 24 ಗಂಟೆಗಳ ಕಾಲ ಮಾತ್ರ ಸಕ್ರಿಯವಾಗಿರುತ್ತದೆ. ಅಷ್ಟರೊಳಗೆ ಪರಾಗಸ್ಪರ್ಶ ನಡೆಯದಿದ್ದರೆ ಆ ಹೂವು ಕಾಯಿಯಾಗುವ ಅವಕಾಶವನ್ನು ಕಳೆದುಕೊಳ್ಳುತ್ತದೆ. ಅಷ್ಟು ಎತ್ತರದ ಮರಗಳ ನಡುವೆ, ದಟ್ಟ ಕಾಡಿನಲ್ಲಿ ಈ ಅಲ್ಪಾವಧಿಯಲ್ಲಿ ಹಲ್ಲಿಗಳು ಅಥವಾ ಗಾಳಿಯು ಪರಾಗವನ್ನು ಸರಿಯಾದ ಜಾಗಕ್ಕೆ ತಲುಪಿಸುವುದು ಒಂದು ಅದ್ಭುತವೇ ಸರಿ. ಹಲ್ಲಿಗಳ ಜತೆಗೆ ಗಾಳಿಯೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಂಡು ಮರಗಳು ಹೆಣ್ಣು ಮರಗಳಿಗಿಂತ ಎತ್ತರವಾಗಿ ಬೆಳೆಯುವುದರಿಂದ, ಗಾಳಿಯು ಪರಾಗವನ್ನು ಕೆಳಗಿರುವ ಹೆಣ್ಣು ಹೂವುಗಳ ಮೇಲೆ ಉದುರಿಸಲು ಸಹಾಯ ಮಾಡುತ್ತದೆ.

ಮಳೆಯ ಹನಿಗಳು ಕೂಡ ಮೇಲಿನಿಂದ ಪರಾಗವನ್ನು ಕೆಳಕ್ಕೆ ಹರಿಸುವ ಮೂಲಕ ಈ ಪ್ರಕ್ರಿಯೆಗೆ ವೇಗ ನೀಡುತ್ತವೆ. ಈ ಪರಾಗಸ್ಪರ್ಶದ ವಿಧಾನವು ಪ್ರಕೃತಿಯಲ್ಲಿನ 'ಅಂತರ ಅವಲಂಬನೆ'ಯನ್ನು ತೋರಿಸುತ್ತದೆ. ಮರವೊಂದು ಬದುಕಲು ಒಂದು ಪುಟ್ಟ ಹಲ್ಲಿಯ ಮೇಲೆ ಅವಲಂಬಿತವಾಗಿರುವುದು ವಿಕಾಸದ ವಿಶಿಷ್ಟ ಹಂತ. ಒಂದು ವೇಳೆ ಈ ಹಲ್ಲಿಗಳ ಸಂತತಿ ನಾಶವಾದರೆ, ವಿಶ್ವದ ಅತಿದೊಡ್ಡ ಬೀಜವನ್ನು ನೀಡುವ ಈ ಮರಗಳೂ ಅಳಿದುಹೋಗುತ್ತವೆ. ಒಂದು ದಿನದ ಅವಧಿಯಲ್ಲಿ ನಡೆಯುವ ಈ ಸಣ್ಣ ಘಟನೆಯು ಸೀಶೆಲ್ಸ್‌ನ ಕಾಡುಗಳಲ್ಲಿ ಶತಮಾನಗಳಿಂದಲೂ ಈ ದೈತ್ಯ ಮರಗಳ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ.

ಕೊಕೊ ಡಿ ಮೆರ್ ಮರಗಳಲ್ಲಿ ಗಂಡು ಮತ್ತು ಹೆಣ್ಣು ಪ್ರತ್ಯೇಕವಾಗಿರುತ್ತವೆ. ಹೆಣ್ಣು ಮರವು ವಿಶ್ವದ ಬೃಹತ್ ಬೀಜಗಳನ್ನು ಉತ್ಪಾದಿಸಿದರೆ, ಗಂಡು ಮರವು ಉದ್ದನೆಯ ಹೂಗೊಂಚಲುಗಳನ್ನು (Catkins) ಹೊಂದಿರುತ್ತದೆ. ಈ ಮರಗಳು ಪ್ರೌಢಾವಸ್ಥೆಗೆ ಬರಲು ಸುಮಾರು 25 ವರ್ಷಗಳು ಬೇಕು. ಅಲ್ಲಿಯವರೆಗೂ ಅದು ಗಂಡು ಮರವೋ ಅಥವಾ ಹೆಣ್ಣು ಮರವೋ ಎಂದು ಗುರುತಿಸುವುದು ಅಸಾಧ್ಯ. ಸಸ್ಯ ಸಾಮ್ರಾಜ್ಯದಲ್ಲೇ ಅತ್ಯಂತ ದೊಡ್ಡದಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಎಲೆಗಳು ಇವುಗಳದ್ದೇ. ಈ ಎಲೆಗಳು 6 ಮೀಟರ್ ಉದ್ದ ಮತ್ತು 3 ಮೀಟರ್ ಅಗಲವಿರುತ್ತವೆ. ಈ ಎಲೆಗಳ ಜೀವಿತಾವಧಿ ಸುಮಾರು 50 ವರ್ಷಗಳು! ಇದರ ವಿನ್ಯಾಸವು ಒಂದು ಬೃಹತ್ ಆಲಿಕೆಯಂತೆ (ಫನೆಲ್) ಇರುತ್ತದೆ. ಇದು ಮಳೆನೀರನ್ನು ನೇರವಾಗಿ ಮರದ ಬುಡಕ್ಕೆ ಹರಿಸುತ್ತದೆ. ನೀರಿನೊಂದಿಗೆ ಹಕ್ಕಿಗಳ ಮಲ ಮತ್ತು ಪರಾಗದಂಥ ಪೋಷಕಾಂಶಗಳೂ ಬುಡಕ್ಕೆ ಬಂದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.

ಇದನ್ನು 'ಲವ್ ನಟ್' ಎಂದೂ ಕರೆಯುತ್ತಾರೆ. ಒಂದು ಕಾಯಿಯ ತೂಕ ಸಾಮಾನ್ಯವಾಗಿ 15 ರಿಂದ 30 ಕಿಲೋಗ್ರಾಂ ಇರುತ್ತದೆ. ಈವರೆಗೆ ದಾಖಲಾದ ಅತ್ಯಂತ ಭಾರದ ಕಾಯಿಯ ತೂಕ 42 ಕಿಲೋಗ್ರಾಂ! ಈ ಮರಗಳ ಜೀವಿತಾವಧಿ 200 ರಿಂದ 300 ವರ್ಷಗಳು. ಗಂಡು ಮರಗಳು ಹೆಣ್ಣು ಮರಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ. ಅಂದರೆ ಸೀಶೆಲ್ಸ್‌ನಲ್ಲಿ ಜನವಸತಿ ಆರಂಭವಾಗುವ ಮೊದಲೇ ಈ ಮರಗಳು ಅಲ್ಲಿ ಬೆಳೆಯುತ್ತಿದ್ದವು. ಇಷ್ಟು ಭಾರವಾದ ಕಾಯಿಗಳನ್ನು ಹೊತ್ತಿದ್ದರೂ, ಚಂಡಮಾರುತ ಬಂದಾಗ ಈ ಮರಗಳು ಮುರಿದು ಬೀಳುವುದಿಲ್ಲ. ಮರದ ಬುಡವು ಒಂದು 'ಬಾಲ್ ಅಂಡ್ ಸಾಕೆಟ್' (Ball-and-socket) ಕೀಲಿನಂತೆ ಇರುತ್ತದೆ. ಇದು ಬಲವಾದ ಗಾಳಿಗೆ ಮರವು ಸುತ್ತಲೂ ಅಲುಗಾಡಲು ಮತ್ತು ಬಾಗಲು ಸಹಾಯ ಮಾಡುತ್ತದೆ.

ಕೊಕೊ ಡಿ ಮೆರ್ ಇಂದು ಅಳಿವಿನ ಅಂಚಿನಲ್ಲಿರುವ ಪ್ರಕೃತಿಯ ಅತ್ಯಮೂಲ್ಯ ಪರಂಪರೆಯಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಕೇವಲ 8,000 ಕ್ಕಿಂತ ಕಡಿಮೆ ಪ್ರೌಢ ಮರಗಳು ಮಾತ್ರ ನೈಸರ್ಗಿಕವಾಗಿ ಉಳಿದುಕೊಂಡಿವೆ ಎಂಬುದು ಆತಂಕಕಾರಿ ಸಂಗತಿ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘ (IUCN) ಕೊಕೊ ಡಿ ಮೆರ್ ಅನ್ನು 'ಅಳಿವಿನಂಚಿನಲ್ಲಿರುವ' (Endangered/Vulnerable) ಸಸ್ಯಗಳ ಕೆಂಪು ಪಟ್ಟಿಗೆ ಸೇರಿಸಿದೆ. ಇದಕ್ಕೆ ಮುಖ್ಯ ಕಾರಣಗಳು ಅದರ ಸೀಮಿತ ಭೌಗೋಳಿಕ ವ್ಯಾಪ್ತಿ (ಕೇವಲ ಎರಡು ದ್ವೀಪಗಳು), ಅತಿ ನಿಧಾನಗತಿಯ ಬೆಳವಣಿಗೆ ಮತ್ತು ಮಾನವನ ಹಸ್ತಕ್ಷೇಪ. ಒಂದು ಮರವು ಫಲ ನೀಡಲು ಸುಮಾರು ನಲವತ್ತು ವರ್ಷ ಕಾಯಬೇಕಿರುವುದು ಅದರ ಸಂತತಿ ವೃದ್ಧಿಗೆ ದೊಡ್ಡ ಅಡ್ಡಿಯಾಗಿದೆ. ಈ ಕಾಯಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಒಂದು ಕಾಯಿಯು ಸಾವಿರಾರು ಡಾಲರ್‌ಗಳಿಗೆ ಮಾರಾಟವಾಗುವುದರಿಂದ, ಕಾಡುಗಳಿಂದ ಕಾಯಿಗಳನ್ನು ಕಳ್ಳತನ ಮಾಡುವ ಜಾಲಗಳು ಸಕ್ರಿಯವಾಗಿವೆ. ಬೀಜಗಳ ಕಳ್ಳತನದಿಂದಾಗಿ ಹೊಸ ಮರಗಳು ಮೊಳಕೆಯೊಡೆಯಲು ಅವಕಾಶವೇ ಸಿಗುತ್ತಿಲ್ಲ, ಇದು ಕಾಡಿನ ನೈಸರ್ಗಿಕ ಪುನರುಜ್ಜೀವನಕ್ಕೆ ಕೊಡಲಿ ಪೆಟ್ಟಿನಂತಾಗಿದೆ.

Untitled design - 2026-04-17T182120.931

ಸೀಶೆಲ್ಸ್ ಸರಕಾರವು ಈ 'ರಾಷ್ಟ್ರೀಯ ಸಂಪತ್ತನ್ನು' ಉಳಿಸಲು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಂದು ಮರ ಮತ್ತು ಅದರಲ್ಲಿ ಬೆಳೆಯುವ ಪ್ರತಿಯೊಂದು ಕಾಯಿಯನ್ನು ಸರಕಾರವು ನೋಂದಾಯಿಸುತ್ತದೆ. ಪ್ರತಿ ಕಾಯಿಗೂ ಒಂದು ವಿಶಿಷ್ಟ ಗುರುತಿನ ಸಂಖ್ಯೆ (Identification Number) ಮತ್ತು ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್ ಅಳವಡಿಸುವ ವ್ಯವಸ್ಥೆಯೂ ಇದೆ. ಅಧಿಕೃತ ಪರವಾನಗಿ ಇಲ್ಲದೇ ಈ ಕಾಯಿಯನ್ನು ಹೊಂದುವುದು ಅಥವಾ ಮಾರಾಟ ಮಾಡುವುದು ಗುರುತರ ಅಪರಾಧ. ಕಾಯಿಯನ್ನು ವಿದೇಶಕ್ಕೆ ಕೊಂಡೊಯ್ಯಲು ಸರಕಾರದ ಸೀಲು ಇರುವ ಹಸಿರು ಲೇಬಲ್ ಮತ್ತು ರಫ್ತು ಪರವಾನಗಿ ಕಡ್ಡಾಯ. ಅಕ್ರಮವಾಗಿ ಕೊಕೊ ಡಿ ಮೆರ್ ಕಳ್ಳತನ ಮಾಡಿದರೆ ಅಥವಾ ಸಾಗಾಟ ಮಾಡಿದರೆ ಭಾರಿ ಪ್ರಮಾಣದ ದಂಡ ಮತ್ತು ದೀರ್ಘಕಾಲದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಸೀಶೆಲ್ಸ್ ಐಲ್ಯಾಂಡ್ ಫೌಂಡೇಶನ್ (SIF) ನಂಥ ಸಂಸ್ಥೆಗಳು ದಿನದ 24 ಗಂಟೆಯೂ 'ವ್ಯಾಲಿ ಡಿ ಮೇ' ಕಾಡನ್ನು ಕಾವಲು ಕಾಯುತ್ತವೆ. ಕಾಳ್ಗಿಚ್ಚಿನಿಂದ ಮರಗಳನ್ನು ರಕ್ಷಿಸಲು ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ.

'ಕೊಕೊ ಡಿ ಮೆರ್' ಸೀಶೆಲ್ಸ್ ದೇಶದ ರಾಷ್ಟ್ರೀಯ ಸಂಕೇತವೆಂದು ಪರಿಗಣಿಸಲಾಗಿದೆ. 'ವ್ಯಾಲಿ ಡಿ ಮೇ'ಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಸಾವಿರಾರು ಪ್ರವಾಸಿಗರು ಈ ಅಪರೂಪದ ಮರಗಳನ್ನು ನೋಡಲು ಇಲ್ಲಿಗೆ ಬರುತ್ತಾರೆ.

ಈ ವ್ಯಾಲಿ ಡಿ ಮೇ ಮನುಷ್ಯನ ಅಹಂಕಾರವನ್ನು ಕರಗಿಸುವ ತಾಣ. ಇಲ್ಲಿನ ಪ್ರತಿಯೊಂದು ಮರದ ಎಲೆಯ ಮೇಲೆ ಬರೆಯದ ಕಥೆಗಳಿವೆ. ನಾವಿಕರು ಇವುಗಳನ್ನು ಸಮುದ್ರದ ಆಳದ ಅದ್ಭುತಗಳೆಂದು ಕರೆದಾಗ, ಅವರ ಕಣ್ಣಲ್ಲಿ ಒಂದು ಬಗೆಯ ಮುಗ್ಧ ಬೆರಗಿತ್ತು. ಆ ಬೆರಗು ಇಂದಿಗೂ ಆ ದ್ವೀಪದ ಗಾಳಿಯಲ್ಲಿ ಹಾಗೆಯೇ ಉಳಿದುಕೊಂಡಿದೆ. ಸಂಶೋಧನೆಗಳು ಎಲ್ಲವನ್ನೂ ವಿವರಿಸಬಹುದು, ಆದರೆ ಆ ರಹಸ್ಯದ ಮಾಧುರ್ಯವನ್ನು ಮಾತ್ರ ಹಿಡಿಯಲಾರವು. ಕೊಕೊ ಡಿ ಮೆರ್ ಎಂಬ ಈ ಅಪರೂಪದ ಸೃಷ್ಟಿ, ನಮಗೆ ನಮ್ಮ ಮೂಲದ ಬಗ್ಗೆ ನೆನಪಿಸುತ್ತದೆ. ಸಮುದ್ರದ ತೀರದಲ್ಲಿ ಬಿದ್ದ ಕಾಯಿಯನ್ನು ನೋಡಿ ನಾವಿಕರು ಕಂಡ ಕನಸುಗಳು ಈಗಲೂ ನಮ್ಮನ್ನು ಕಾಡುತ್ತವೆ. ಪ್ರಕೃತಿಯು ತನ್ನ ಅತಿದೊಡ್ಡ ಬೀಜವನ್ನು ಈ ಪುಟ್ಟ ದ್ವೀಪದಲ್ಲಿ ಬಚ್ಚಿಟ್ಟಿದೆ ಎಂದರೆ, ಅದಕ್ಕೆ ತನ್ನ ಸುಂದರ ರಹಸ್ಯಗಳನ್ನು ಕಾಪಾಡುವ ಕಲೆಯೂ ಗೊತ್ತು ಎಂದೇ ಅರ್ಥ.

ಪ್ರಸ್ಲಿನ್ ದ್ವೀಪದ ಆ ಹಸಿರು ಮೌನದಿಂದ ಹೊರಬರುವಾಗ ನಮಗೆ ಅರಿವಾಗುವುದು ಒಂದೇ; ಕೊಕೊ ಡಿ ಮೆರ್ ಎಂಬುದು ಕಾಲವು ತನ್ನ ಅಂಗೈಯಲ್ಲಿ ಅಡಗಿಸಿಟ್ಟಿರುವ ಒಂದು ಹಳೆಯ ರಹಸ್ಯ. ಮನುಷ್ಯ ತನ್ನ ಅಸ್ತಿತ್ವಕ್ಕಾಗಿ ಸೆಣಸಾಡುತ್ತಿರುವ ಈ ಧಾವಂತದ ಜಗತ್ತಿನಲ್ಲಿ, ನೂರಾರು ವರ್ಷಗಳ ಕಾಲ ಒಂದೇ ಕಡೆ ನಿಂತು, ನಿಧಾನಕ್ಕೆ ಮಾಗುತ್ತಾ, ಸಮುದ್ರದ ಅಲೆಗಳಿಗೆ ತನ್ನ ಕಾಯಿಗಳನ್ನು ಒಪ್ಪಿಸುವ ಈ ಮರಗಳು ಬದುಕಿನ ನಿಜವಾದ ಲಯವನ್ನು ಕಲಿಸುತ್ತವೆ. ಇಲ್ಲಿ ಯಾವುದೂ ವ್ಯರ್ಥವಲ್ಲ, ಯಾವುದೂ ಅಕಾಲಿಕವಲ್ಲ. ಪ್ರತಿಯೊಂದು ಕಾಯಿಯೂ ತನ್ನ ಒಳಗೆ ಒಂದು ಇಡೀ ದ್ವೀಪದ ಕನಸನ್ನು ಹೊತ್ತು ಮಲಗಿರುವಂತೆ ತೋರುತ್ತದೆ.

ಇದನ್ನೂ ಓದಿ: 'ದಿ ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೋ' : ಪ್ರತಿ ಪ್ರವಾಸಿಯೂ ಓದಲೇಬೇಕಾದ ಕೃತಿ

ಆ ಕಾಡಿನ ದಾರಿಯ ಕೊನೆಯಲ್ಲಿ ನಿಂತು ತಿರುಗಿ ನೋಡಿದಾಗ, ಆ ದೈತ್ಯ ಮರಗಳು ಆಕಾಶದ ನೀಲಿಯಲ್ಲಿ ಕರಗಿ ಹೋದಂತೆ ಕಾಣುತ್ತವೆ. ಸೀಶೆಲ್ಸ್‌ನ ಗಾಳಿಯಲ್ಲಿ ಇಂದಿಗೂ ಆ ಹಳೆಯ ನಾವಿಕರ ಬೆರಗು, ಹಲ್ಲಿಗಳ ಓಡಾಟದ ಸದ್ದು ಮತ್ತು ಬಾಸ್ಮತಿ ಅಕ್ಕಿಯ ಸುವಾಸನೆ ಹಾಗೆಯೇ ಉಳಿದುಕೊಂಡಿದೆ. ನಾವು ಹೊತ್ತು ತರುವುದು ಆ ಕಾಯಿಯನ್ನಲ್ಲ, ಬದಲಿಗೆ ಆ ದ್ವೀಪದ ಏಕಾಂತವನ್ನು ಮತ್ತು ಪ್ರಕೃತಿಯು ತನ್ನ ಅತಿದೊಡ್ಡ ರಹಸ್ಯವನ್ನು ಎಷ್ಟು ಜೋಪಾನವಾಗಿ ಕಾಪಾಡಿಕೊಂಡಿದೆ ಎಂಬ ವಿಸ್ಮಯವನ್ನು. ಕೊಕೊ ಡಿ ಮೆರ್ ಎಂಬುದು ನಮಗೆ ಕೇವಲ ಒಂದು ಅಪರೂಪದ ಸಸ್ಯವಾಗಿ ಉಳಿಯದೇ, ನಮ್ಮೊಳಗಿನ ಮೌನಕ್ಕೆ ಮರಳಿ ಹೋಗಲು ಪ್ರಕೃತಿ ನೀಡಿದ ಒಂದು ಸುಂದರ ನೆಪವಾಗಿ ಉಳಿಯುತ್ತದೆ. ಸೀಶೆಲ್ಸ್ ಗೆ ಹೋಗಿಯೂ ಈ ಕಾಡಿಗೆ ಹೋಗದಿದ್ದರೆ, ಕೊಕೊ ಡಿ ಮೆರ್ ಮರವನ್ನು ಒಮ್ಮೆ ತಬ್ಬಿಕೊಳ್ಳದಿದ್ದರೆ, ನೀವು ಪ್ರಮುಖವಾದ ಒಂದು ಅನುಭವವನ್ನು ಕಳೆದುಕೊಂಡಂತೆ!

--

* ಸೀಶೆಲ್ಸ್ ಸರಕಾರವು ತನ್ನ ದೇಶಕ್ಕೆ ಆಗಮಿಸುವ ವಿಶ್ವದ ಗಣ್ಯ ವ್ಯಕ್ತಿಗಳಿಗೆ ಅತ್ಯುನ್ನತ ಗೌರವದ ಸಂಕೇತವಾಗಿ ಕೊಕೊ ಡಿ ಮೆರ್ ಕಾಯಿಯನ್ನು ಉಡುಗೊರೆಯಾಗಿ ನೀಡುತ್ತದೆ. ಭಾರತದ ಪ್ರಧಾನಿಗಳಿಗೆ ಮತ್ತು ವಿಶ್ವದ ವಿವಿಧ ರಾಷ್ಟ್ರಾಧ್ಯಕ್ಷರಿಗೆ ಸೀಶೆಲ್ಸ್ ಭೇಟಿಯ ಸಂದರ್ಭದಲ್ಲಿ ಇದನ್ನು ನೀಡಲಾಗಿದೆ. ಇದು ಕೇವಲ ಒಂದು ಬೀಜವಲ್ಲ, ಬದಲಿಗೆ ಆ ದೇಶದ ಸ್ನೇಹ ಮತ್ತು ವಿಶ್ವಾಸದ ಸಂಕೇತ.

* ಇದು 'ಸಮುದ್ರದ ತೆಂಗು' ಆದರೂ, ವಿಚಿತ್ರವೆಂದರೆ ಈ ಕಾಯಿಗಳು ಸಮುದ್ರದ ಉಪ್ಪುನೀರಿನಲ್ಲಿ ಹೆಚ್ಚು ಕಾಲ ಬದುಕಲಾರವು. ಒಂದು ಪಕ್ವವಾದ ಕಾಯಿ ನೀರಿಗಿಂತ ಭಾರವಾಗಿರುತ್ತದೆ, ಆದ್ದರಿಂದ ಅದು ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಕಾಯಿ ಕೊಳೆತು ಹಗುರಾದಾಗ ಮಾತ್ರ ಅದು ನೀರಿನ ಮೇಲೆ ತೇಲುತ್ತದೆ. ಹೀಗಾಗಿ, ಸಮುದ್ರದ ಅಲೆಗಳ ಮೇಲೆ ತೇಲಿ ಬೇರೆ ದೇಶಗಳ ತೀರಕ್ಕೆ ತಲುಪುತ್ತಿದ್ದ ಕಾಯಿಗಳು ಈಗಾಗಲೇ ಸತ್ತು ಹೋಗಿರುತ್ತಿದ್ದವು. ಇದೇ ಕಾರಣಕ್ಕೆ ಸೀಶೆಲ್ಸ್ ಬಿಟ್ಟು ಬೇರೆಲ್ಲೂ ಈ ಮರಗಳು ನೈಸರ್ಗಿಕವಾಗಿ ಬೆಳೆಯಲು ಸಾಧ್ಯವಾಗಲಿಲ್ಲ.

* ಈ ಮರದ ಎಲೆಗಳು ಕೇವಲ ಬೃಹತ್ ಗಾತ್ರದವಲ್ಲ, ಅವು ಅತ್ಯಂತ ಬುದ್ಧಿವಂತಿಕೆಯಿಂದ ವಿನ್ಯಾಸಗೊಂಡಿವೆ. ಪ್ರತಿ ಎಲೆಯೂ ದೋಣಿಯ ಆಕಾರದಲ್ಲಿದ್ದು, ಮಳೆನೀರನ್ನು ಹಿಡಿದಿಟ್ಟು ಮರದ ಕಾಂಡದ ಮೂಲಕ ನೇರವಾಗಿ ಬುಡಕ್ಕೆ ಹರಿಯುವಂತೆ ಮಾಡುತ್ತದೆ. ಮಳೆಯ ನೀರಿನೊಂದಿಗೆ ಎಲೆಯ ಮೇಲಿರುವ ಪರಾಗ, ಪಕ್ಷಿಗಳ ಮಲ ಮತ್ತು ಇತರ ಪೋಷಕಾಂಶಗಳು ಮರದ ಬುಡಕ್ಕೆ ಬಂದು ಬೀಳುತ್ತವೆ. ಇದರಿಂದ ಮರಕ್ಕೆ ಬೇಕಾದ ಗೊಬ್ಬರ ತಾನಾಗಿಯೇ ತಯಾರಾಗುತ್ತದೆ.

* ಕೊಕೊ ಡಿ ಮೆರ್ ಮರದ ಕಾಂಡಕ್ಕೆ ಕೊಂಬೆಗಳಿರುವುದಿಲ್ಲ. ಮರದ ತುದಿಯಲ್ಲಿರುವ ಒಂದು ಪ್ರಮುಖ ಮೊಗ್ಗಿನಿಂದಲೇ ಹೊಸ ಎಲೆಗಳು ಮತ್ತು ಹೂವುಗಳು ಬೆಳೆಯುತ್ತವೆ. ಒಂದು ವೇಳೆ ಈ ತುದಿಯನ್ನು ಕತ್ತರಿಸಿದರೆ ಅಥವಾ ಹಾನಿ ಮಾಡಿದರೆ, ಇಡೀ ಮರವೇ ಸತ್ತು ಹೋಗುತ್ತದೆ. ಇದು ಇತರ ಮರಗಳಂತೆ ಚಿಗುರುವುದಿಲ್ಲ. ಅದಕ್ಕಾಗಿಯೇ ಸೀಶೆಲ್ಸ್‌ನಲ್ಲಿ ಈ ಮರಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ರಕ್ಷಿಸಲಾಗುತ್ತದೆ.

* ಈ ಮರ ಸತ್ತ ನಂತರವೂ ಅದರ ಕಾಂಡ ಮತ್ತು ಕಾಯಿಗಳ ಕವಚ ದಶಕಗಳ ಕಾಲ ಕೆಡುವುದಿಲ್ಲ. ಆ ಕವಚಗಳು ಎಷ್ಟು ಗಟ್ಟಿಯಾಗಿರುತ್ತವೆ ಎಂದರೆ, ಹಿಂದೆ ಜನರು ಇವುಗಳನ್ನು ಬೆಂಕಿ ಆರಿಸುವ ಬಕೆಟ್‌ಗಳಾಗಿ ಮತ್ತು ಧಾನ್ಯಗಳನ್ನು ಅಳೆಯುವ ಪಾತ್ರೆಗಳಾಗಿ ಬಳಸುತ್ತಿದ್ದರು.