ಈ ಲೈಬ್ರರಿಯಲ್ಲಿ ಪುಸ್ತಕಗಳ ಬದಲಿಗೆ ‘ಮನುಷ್ಯರೇ ಪುಸ್ತಕ’ಗಳಾಗಿರುತ್ತಾರೆ!
ನಾನು ಸುಮಾರು ಏಳು ವರ್ಷಗಳ ಹಿಂದೆ, ಇಂಡೋನೇಷ್ಯಾದ ಸುಲಾವೆಸಿ ದ್ವೀಪಕ್ಕೆ ಹೋಗಿದ್ದೆ. ಅಲ್ಲಿನ ಪರ್ವತ ಪ್ರದೇಶದಲ್ಲಿ ತೋರಜಾ ಎಂಬ ಸ್ಥಳೀಯ ಬುಡಕಟ್ಟಿನ ಜನ ವಾಸಿಸುತ್ತಾರೆ. ನಾನು ಅಲ್ಲಿಗೆ ಹೋದಾಗ ಒಂದು ವಿಚಿತ್ರ ಅನುಭವ ಆಯಿತು. ಆ ದಿನ ಊರಲ್ಲಿ ಹಿರಿಯರೊಬ್ಬರು ಮೃತಪಟ್ಟಿದ್ದರು. ಆದರೆ ಅಲ್ಲಿ ಶೋಕದ ವಾತಾವರಣ ಇರಲಿಲ್ಲ. ಇಡೀ ಊರಿನಲ್ಲಿ ಒಂದು ಸಂಭ್ರಮವಿತ್ತು.
ತಿರುಗಿ ಕೆಟ್ಟವರಿಲ್ಲವೋ
ಕೆಲ ವರ್ಷಗಳ ಹಿಂದೆ ಡೆನ್ಮಾರ್ಕಿನ ರಾಜಧಾನಿ ಕೋಪನ್ ಹೇಗನ್‌ಗೆ ಹೋಗಿದ್ದೆ. ಅಲ್ಲಿನ ಉದ್ಯಾನವೊಂದರಲ್ಲಿ ಓಡಾಡುವಾಗ, 'ಹ್ಯೂಮನ್ ಲೈಬ್ರರಿ ರೀಡಿಂಗ್ ಗಾರ್ಡನ್' ಎಂಬ ಫಲಕ ಕಾಣಿಸಿತು. ಇದೇನು ಹೊಸ ಲೈಬ್ರರಿ ಎಂದು ಕುತೂಹಲವಾಯಿತು. ನಂತರ ವಿಚಾರಿಸಿದಾಗ ಗೊತ್ತಾಗಿದ್ದೇನೆಂದರೆ, ಇಲ್ಲಿ ಪುಸ್ತಕಗಳ ಬದಲಿಗೆ ನಿಜವಾದ ಮನುಷ್ಯರೇ 'ಪುಸ್ತಕ'ಗಳಾಗಿರುತ್ತಾರೆ. ಅಂದರೆ ಯಾರು ಬೇಕಾದರೂ ಈ ವ್ಯಕ್ತಿಗಳನ್ನು ನಿರ್ದಿಷ್ಟ ಸಮಯದವರೆಗೆ (ಸಾಮಾನ್ಯವಾಗಿ 30 ನಿಮಿಷ) ಎರವಲು ಪಡೆಯಬಹುದು ಮತ್ತು ಅವರ ಜೀವನದ ಅನುಭವಗಳು, ಅವರು ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಬಹುದು.
ಇದೊಂದು ರೀತಿಯಲ್ಲಿ ಲೈವ್ ಪುಸ್ತಕವನ್ನು ಓದಿದಂತೆ ಅಥವಾ ಕೇಳಿದಂತೆ. ಅರ್ಧ ಗಂಟೆ ಮಾತಾಡಿದರೆ, ಒಂದು ಒಳ್ಳೆಯ ಪುಸ್ತಕವನ್ನು ಓದಿದ ಅನುಭವ ನಮ್ಮದಾಗುತ್ತದೆ.
ಇದನ್ನೂ ಓದಿ: ಹೈಡಿ ಎಂಬ ಹೆಸರಿಲ್ಲದೆ ಜರ್ಮನಿ ಅಸ್ತಿತ್ವವೇ ಅಪೂರ್ಣ!
ನಂತರ ನಾನು ಅಲ್ಲಿನ ಲೈಬ್ರರಿಗೆ ಹೋದಾಗ, ಲೈಬ್ರರಿ ಕ್ಯಾಟಲಾಗ್‌ನಲ್ಲಿ ಪುಸ್ತಕಗಳ ಹೆಸರಿನ ಜಾಗದಲ್ಲಿ 'ನಿರಾಶ್ರಿತ', 'ಮಾಜಿ ಸೈನಿಕ', 'ತೃತೀಯಲಿಂಗಿ' ಮತ್ತು 'ಮಾನಸಿಕ ಖಿನ್ನತೆಯಿಂದ ಹೊರಬಂದವರು' ಎಂಬ ಲೇಬಲ್‌ಗಳಿದ್ದವು. ನೀವು ಆ ವ್ಯಕ್ತಿಯನ್ನು (ಪುಸ್ತಕವನ್ನು) 30 ನಿಮಿಷಗಳ ಕಾಲ 'ಎರವಲು' ಪಡೆಯಬಹುದು. ಅಂದರೆ, ಅವರ ಎದುರು ಕುಳಿತು ಅವರ ಜೀವನದ ಕಷ್ಟ-ಸುಖ, ಸಮಾಜ ಅವರನ್ನು ನೋಡುವ ರೀತಿ ಮತ್ತು ಅವರ ನಿಜವಾದ ಕಥೆಯನ್ನು ಕೇಳಬಹುದು.
ನಾವು ಜನರ ಬಗ್ಗೆ ಇಟ್ಟುಕೊಂಡಿರುವ ಪೂರ್ವಗ್ರಹ ಪೀಡಿತ ನಿರ್ಧಾರಗಳನ್ನು ಹೋಗಲಾಡಿಸುವುದು ಇದರ ಮುಖ್ಯ ಗುರಿ. ನಾವೆಲ್ಲರೂ ಪುಸ್ತಕದ ಮುಖಪುಟ ನೋಡಿ ಕಥೆ ನಿರ್ಧರಿಸುತ್ತೇವೆ, ಆದರೆ ಇಲ್ಲಿ ನೇರವಾಗಿ 'ಜೀವಂತ ಪುಸ್ತಕ'ದ ಜತೆ ಸಂವಹನ ನಡೆಸಲು ಅವಕಾಶವಿರುತ್ತದೆ.
'ಹ್ಯೂಮನ್ ಲೈಬ್ರರಿ' ಅಥವಾ 'ಮಾನವ ಗ್ರಂಥಾಲಯ' ಎಂಬುದು ಕೇವಲ ಪುಸ್ತಕಗಳ ಸಂಗ್ರಹವಲ್ಲ, ಅದು ಮನುಷ್ಯರ ನಡುವಿನ ಪೂರ್ವಗ್ರಹಗಳನ್ನು ತೊಡೆದುಹಾಕಲು ರೂಪಿಸಲಾದ ಒಂದು ಜಾಗತಿಕ ಚಳವಳಿ.
ನನಗೆ ಕೊನೆಗೆ ಗೊತ್ತಾಗಿದ್ದೇನೆಂದರೆ, 2000ರಲ್ಲಿ 'ಹ್ಯೂಮನ್ ಲೈಬ್ರರಿ' ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ಪ್ರಾರಂಭವಾಯಿತು. 'ರೋನಿ ಅಬರ್ಗೆಲ್' ಮತ್ತು ಅವರ ತಂಡವು ಅಹಿಂಸೆಯನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು ರೂಪಿಸಿದರು. ಇಂದು ಇದು 80ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದೆ.
ಸಮಾಜದಲ್ಲಿ ಅಪಾರ್ಥಕ್ಕೊಳಗಾದ, ಪೂರ್ವಗ್ರಹಕ್ಕೆ ಒಳಗಾದ ಅಥವಾ ವಿಶಿಷ್ಟ ಜೀವನದ ಅನುಭವ ಹೊಂದಿರುವ ವ್ಯಕ್ತಿಗಳು (ಉದಾಹರಣೆಗೆ: ಎಚ್‌ಐವಿ ಪೀಡಿತರು, ನಿರಾಶ್ರಿತರು, ನಿರಪರಾಧಿಗಳು, ನೊಂದವರು, ವೇಶ್ಯೆಯರು, ಮಾಜಿ ಕೈದಿಗಳು ಇತ್ಯಾದಿ) ಹ್ಯೂಮನ್ ಲೈಬ್ರರಿಗಳಲ್ಲಿ 'ಮಾನವ ಪುಸ್ತಕ'ಗಳಾಗುತ್ತಾರೆ. ಅವರು ತಮ್ಮ ಜೀವನದ ಸತ್ಯ ಘಟನೆಗಳನ್ನು ಹೇಳಿದ ಬಳಿಕ, ಅವರೊಂದಿಗೆ ಮುಕ್ತವಾಗಿ ಪ್ರಶ್ನೆಗಳನ್ನು ಕೇಳಬಹುದು. ಇದು ಅಪರಿಚಿತರ ಬಗ್ಗೆ ನಮ್ಮಲ್ಲಿರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ನೇರ ಮಾತುಕತೆಯ ಮೂಲಕ ಹೋಗಲಾಡಿಸುವುದು. ಒಬ್ಬರೇ 'ಮಾನವ ಪುಸ್ತಕ'ಗಳೊಂದಿಗೆ ಮಾತಾಡಬಹುದು, ಮೂರ್ನಾಲ್ಕು ಜನ ಸೇರಿಯೂ ಕೇಳಬಹುದು.

ಇತರರ ಸಂಕಷ್ಟ ಮತ್ತು ಸವಾಲುಗಳನ್ನು ಅವರದೇ ಬಾಯಿಂದ ಕೇಳಿದಾಗ ನಮ್ಮಲ್ಲಿ ಮೂಡುವ ಭಾವನೆಯೇ ಬೇರೆ. ಪುಸ್ತಕಕ್ಕೆ ಅಂದರೆ ವ್ಯಕ್ತಿಗೆ ಯಾವುದೇ ಹಾನಿ ಮಾಡಬಾರದು ಅಥವಾ ಅವಮಾನಿಸಬಾರದು. ವ್ಯಕ್ತಿ ಯಾವಾಗ ಬೇಕಾದರೂ ಸಂಭಾಷಣೆಯನ್ನು ನಿಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ. ಇದು ಸಂಪೂರ್ಣವಾಗಿ ಗೌಪ್ಯತೆ ಮತ್ತು ಪರಸ್ಪರ ಗೌರವದ ಮೇಲೆ ಆಧರಿತವಾಗಿರುತ್ತದೆ.
ಭಾರತದಲ್ಲೂ ಮೊದಲ ಬಾರಿಗೆ ಇಂದೋರ್‌ನಲ್ಲಿ (2016) 'ಹ್ಯೂಮನ್ ಲೈಬ್ರರಿ' ಆರಂಭವಾಯಿತು. ನಂತರ ಹೈದರಾಬಾದ್, ಮುಂಬೈ, ದೆಹಲಿಗಳಲ್ಲೂ ಇದು ಆರಂಭವಾಗಿದೆಯೆಂದು ಕೇಳಿದ್ದೇನೆ.
**
ಇಲ್ಲಿ ಸಾವನ್ನು ಸಂಭ್ರಮಿಸುತ್ತಾರೆ!
ನಾನು ಸುಮಾರು ಏಳು ವರ್ಷಗಳ ಹಿಂದೆ, ಇಂಡೋನೇಷ್ಯಾದ ಸುಲಾವೆಸಿ ದ್ವೀಪಕ್ಕೆ ಹೋಗಿದ್ದೆ. ಅಲ್ಲಿನ ಪರ್ವತ ಪ್ರದೇಶದಲ್ಲಿ ತೋರಜಾ ಎಂಬ ಸ್ಥಳೀಯ ಬುಡಕಟ್ಟಿನ ಜನ ವಾಸಿಸುತ್ತಾರೆ. ನಾನು ಅಲ್ಲಿಗೆ ಹೋದಾಗ ಒಂದು ವಿಚಿತ್ರ ಅನುಭವ ಆಯಿತು. ಆ ದಿನ ಊರಲ್ಲಿ ಹಿರಿಯರೊಬ್ಬರು ಮೃತಪಟ್ಟಿದ್ದರು. ಆದರೆ ಅಲ್ಲಿ ಶೋಕದ ವಾತಾವರಣ ಇರಲಿಲ್ಲ. ಇಡೀ ಊರಿನಲ್ಲಿ ಒಂದು ಸಂಭ್ರಮವಿತ್ತು.
ನಮಗೆ ಸಾವು ಎಂದರೆ ಒಂದು ಅಂತ್ಯ ಅಥವಾ ಅಗಲಿಕೆ. ಆದರೆ ತೋರಜಾದಲ್ಲಿ ಜನರಿಗೆ ಸಾವು ಎಂಬುದು ಜೀವನದ ಒಂದು ಹಂತ ಮಾತ್ರ. ಅವರು ಸಾವನ್ನು ಸಂಭ್ರಮದಂತೆ ಆಚರಿಸುತ್ತಾರೆ ಅಂದು ಗೊತ್ತಾಯಿತು.
ನಂತರ ಅಲ್ಲಿನ ಜನರೊಂದಿಗೆ ಮಾತಾಡಿದಾಗ ನನಗೆ ಗೊತ್ತಾಗಿದ್ದೇನೆಂದರೆ, ಈ ಸಮುದಾಯದಲ್ಲಿ ಯಾರಾದರೂ ಮರಣ ಹೊಂದಿದರೆ ಅವರನ್ನು ತಕ್ಷಣ ಹೂಳುವುದಿಲ್ಲ. ಕುಟುಂಬದವರು ಹಣವನ್ನು ಸಂಗ್ರಹಿಸಿ ದೊಡ್ಡ ಮಟ್ಟದ ಅಂತ್ಯಸಂಸ್ಕಾರ ಮಾಡಲು ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೆ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಳ್ಳಲಾಗುತ್ತದೆ. ಅವರನ್ನು ಸತ್ತವರು ಎಂದು ಕರೆಯುವ ಬದಲು 'ಅನಾರೋಗ್ಯ ಪೀಡಿತರು' ಅಥವಾ 'ನಿದ್ರಿಸುತ್ತಿರುವವರು' ಎಂದು ಕರೆಯುತ್ತಾರೆ. ಅವರಿಗೆ ಪ್ರತಿದಿನ ಆಹಾರ ನೀಡಲಾಗುತ್ತದೆ, ಬಟ್ಟೆ ಬದಲಿಸಲಾಗುತ್ತದೆ ಮತ್ತು ಕುಟುಂಬದ ಸದಸ್ಯರಂತೆ ಮಾತನಾಡಿಸಲಾಗುತ್ತದೆ.
ಇದು ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾದ ಆಚರಣೆ. ಪ್ರತಿ ಕೆಲವು ವರ್ಷಗಳಿಗೊಮ್ಮೆ (ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ), ಈ ಜನರು ಹೂತಿಟ್ಟ ಅಥವಾ ಗುಹೆಗಳಲ್ಲಿಟ್ಟ ತಮ್ಮ ಪೂರ್ವಜರ ಶವಪೆಟ್ಟಿಗೆಗಳನ್ನು ಹೊರತೆಗೆಯುತ್ತಾರೆ. ಮೃತದೇಹಗಳನ್ನು ಹೊರತೆಗೆದು, ಅವುಗಳನ್ನು ಸ್ವಚ್ಛಗೊಳಿಸಿ, ಹೊಸ ಬಟ್ಟೆಗಳನ್ನು ತೊಡಿಸುತ್ತಾರೆ. ಮೊಮ್ಮಕ್ಕಳು, ಮರಿಮಕ್ಕಳು ತಮ್ಮ ಮುತ್ತಜ್ಜರ ಮೃತದೇಹಗಳ ಜತೆಗೆ ಫೊಟೋ ತೆಗೆದುಕೊಳ್ಳುತ್ತಾರೆ, ಅವರ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಮೃತದೇಹಗಳನ್ನು ಹಳ್ಳಿಯಾದ್ಯಂತ ಮೆರವಣಿಗೆ ಮಾಡಿ, ನಂತರ ಮತ್ತೆ ಗೌರವಪೂರ್ವಕವಾಗಿ ಶವಪೆಟ್ಟಿಗೆಯಲ್ಲಿಟ್ಟು ಗುಹೆಗಳಲ್ಲಿ ಇರಿಸಲಾಗುತ್ತದೆ.
ತೋರಜಾ ಸಂಸ್ಕೃತಿಯಲ್ಲಿ ಎಮ್ಮೆಗಳು ಅತ್ಯಂತ ಪವಿತ್ರ. ಒಬ್ಬ ವ್ಯಕ್ತಿ ಸತ್ತಾಗ ಎಷ್ಟು ಎಮ್ಮೆಗಳನ್ನು ಬಲಿ ನೀಡುತ್ತಾರೋ ಅಷ್ಟು ಬೇಗ ಅವರ ಆತ್ಮವು ಪರಲೋಕ ತಲುಪುತ್ತದೆ ಎಂದು ನಂಬುತ್ತಾರೆ. ವಿಶೇಷವಾಗಿ ಬಿಳಿ ಬಣ್ಣದ ಎಮ್ಮೆಗಳಿಗೆ ಇಲ್ಲಿ ಇಪ್ಪತ್ತು-ಮೂವತ್ತು ಲಕ್ಷ ರುಪಾಯಿ ಬೆಲೆ.
ನಾನು ಕುತೂಹಲ ತಾಳಲಾರದೇ, ಯಾರ ಮನೆಯಲ್ಲಿ ವ್ಯಕ್ತಿ ಸತ್ತಿದ್ದಾನೋ, ಆ ಮನೆಗೆ ಹೋದೆ. ಆಲ್ಲಿ ಸುಮಾರು ಇನ್ನೂರು ಜನ ಸೇರಿದ್ದರು. ಹೋದವರಿಗೆಲ್ಲ ಊಟದ ಏರ್ಪಾಡು ಮಾಡಲಾಗಿತು. ನನಗೂ ಊಟ ಮಾಡುವಂತೆ ಹೇಳಿದರು. ಸತ್ತವರ ಮನೆಯಲ್ಲಿ ಏನನ್ನೂ ಸೇವಿಸಬಾರದು ಎಂಬುದು ನಮ್ಮ ಸಂಪ್ರದಾಯ. ಆದರೆ ಅಲ್ಲಿ ಏನನ್ನಾದರೂ ಸೇವಿಸಲೇಬೇಕು. ನಾನು ಬೇರೆ ದಾರಿಯಿಲ್ಲದೇ ಬಾಳೆಹಣ್ಣು ಸೇವಿಸಿ ಬಂದೆ.
**
ಕಾಂಡೋಮ್ ಎಂಬ ಊರಲ್ಲಿ...
ನಾನು ಫ್ರಾನ್ಸಿನ ಹೆಸರು ಹೇಳಲು ತೀರಾ ಮುಜುಗರವಾದ ಒಂದು ಊರಿಗೆ ಹೋಗಿದ್ದೆ. ಆ ಊರಿನ ಹೆಸರು ಕಾಂಡೋಮ್ (Condom). ಸುಮಾರು ಆರು ಸಾವಿರ ಜನಸಂಖ್ಯೆ ಇರುವ ಈ ಊರು ಬಹಳ ಸುಂದರವಾಗಿದೆ. ಫ್ರೆಂಚ್ ಹೊರತುಪಡಿಸಿ ಇಂಗ್ಲಿಷ್ ಅಥವಾ ಬೇರೆ ಭಾಷೆ ಮಾತನಾಡುವವರಿಗೆ ಈ ಹೆಸರನ್ನು ಕೇಳಿದಾಗ ಅಥವಾ ಹೇಳುವಾಗ ಮುಜುಗರವಾಗುವುದು ಸಹಜ. ಆದರೆ ಅಲ್ಲಿನ ಜನರಿಗೆ ತಮ್ಮ ಊರಿನ ಹೆಸರಿನ ಬಗ್ಗೆ ಯಾವ ಮುಜುಗರವೂ ಇಲ್ಲ.

ಇದಕ್ಕೆ ಕಾರಣ ಫ್ರೆಂಚ್ ಭಾಷೆಯಲ್ಲಿ Condom ಎಂಬ ಪದಕ್ಕೆ ಲೈಂಗಿಕ ಸುರಕ್ಷತಾ ಸಾಧನ ಎಂಬ ಅರ್ಥವಿಲ್ಲ. ಅಲ್ಲಿನ ಜನರಿಗೆ ಇದು ಕೇವಲ ಒಂದು ಸ್ಥಳದ ಹೆಸರು. ಇದನ್ನು ಫ್ರೆಂಚ್‌ನಲ್ಲಿ ಉಚ್ಚರಿಸುವಾಗ 'ಕಾಂಡೋಮ್' ಎನ್ನದೇ, ಕೊನೆಯ 'm' ಅನ್ನು ಮೂಗಿನಿಂದ ಉಚ್ಚರಿಸುತ್ತಾ 'ಕಾಂ-ಡೋನ್' (Kōn-dōn) ಎನ್ನುವಂತೆ ಹೇಳುತ್ತಾರೆ. ಹಾಗಾಗಿ ಅಲ್ಲಿನ ಸ್ಥಳೀಯರಿಗೆ ಇದರಲ್ಲಿ ಯಾವುದೇ ಮುಜುಗರವಿಲ್ಲ.
ಈ ನಗರದ ಹೆಸರು ಬಹಳ ಹಳೆಯದು. ಇದು ಲ್ಯಾಟಿನ್ ಭಾಷೆಯ 'Condatomagus' ಎಂಬ ಪದದಿಂದ ಬಂದಿದೆ. ಇದರ ಅರ್ಥ 'ನದಿಗಳು ಕೂಡುವ ಸ್ಥಳ' ಎಂದು. ಈ ನಗರವು 'ಬೈಸ್' ಮತ್ತು 'ಗೆಲೆ' ಎಂಬ ಎರಡು ನದಿಗಳ ಸಂಗಮ ಸ್ಥಾನದಲ್ಲಿದೆ. ಹೀಗಾಗಿ, ಈ ಹೆಸರಿಗೂ ಆಧುನಿಕ ಇಂಗ್ಲಿಷ್ ಪದಕ್ಕೂ ಯಾವುದೇ ಸಂಬಂಧವಿಲ್ಲ.
ವಿಶ್ವದಾದ್ಯಂತ ಪ್ರವಾಸಿಗರು ಈ ನಗರಕ್ಕೆ ಬಂದಾಗ ಬಹಳ ಮುಜುಗರಕ್ಕೆ ಒಳಗಾಗುತ್ತಾರೆ ಅಥವಾ ತಮಾಷೆ ಮಾಡುತ್ತಾರೆ. ಈ ನಗರದ ಹೆಸರಿರುವ ಬೋರ್ಡ್‌ಗಳ ಮುಂದೆ ನಿಂತು ಫೊಟೋ ತೆಗೆಸಿಕೊಳ್ಳುವುದು ಪ್ರವಾಸಿಗರಿಗೆ ದೊಡ್ಡ ಹವ್ಯಾಸ. ಆ ಊರಿನ ಹೆಸರಿನ ಫಲಕಗಳೆಲ್ಲ 'ಇನ್‌ಸ್ಟಾ ಹಾಟ್ ಸ್ಪಾಟ್'ಗಳೇ! ಇಲ್ಲಿನ ಪೋಸ್ಟ್ ಆಫೀಸ್‌ನಿಂದ ಈ ಹೆಸರಿರುವ ಸೀಲು (Stamp) ಹಾಕಿದ ಪತ್ರಗಳನ್ನು ಕಳುಹಿಸುವುದು ಪ್ರವಾಸಿಗರಿಗೆ ಒಂದು ತಮಾಷೆಯ ಸಂಗತಿ.
ಮುಜುಗರವಾದರೂ, ಈ ನಗರದ ಜನರು ಇದನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ನಿರ್ಧರಿಸಿದರು. 1995 ರಲ್ಲಿ ಈ ನಗರದಲ್ಲಿ ಒಂದು ಕಾಂಡೋಮ್ ಮ್ಯೂಸಿಯಂ ಅನ್ನು ಪ್ರಾರಂಭಿಸಲಾಯಿತು! ಆದರೆ ವಿಪರ್ಯಾಸವೆಂದರೆ, ಹೆಚ್ಚು ಜನರು ಬಾರದ ಕಾರಣ ಅದು ಕೆಲವೇ ವರ್ಷಗಳಲ್ಲಿ ಮುಚ್ಚಿಹೋಯಿತು.
ಒಮ್ಮೆ ಈ ನಗರದ ಮೇಯರ್ ಅವರನ್ನು ಈ ಹೆಸರಿನ ಬಗ್ಗೆ ಕೇಳಿದಾಗ, ಅವರು ಬಹಳ ಗಾಂಭೀರ್ಯದಿಂದ ಉತ್ತರಿಸಿದ್ದರು - 'ನಮಗೆ ಈ ಹೆಸರಿನಿಂದ ಯಾವುದೇ ಮುಜುಗರವಿಲ್ಲ, ಏಕೆಂದರೆ ನಮ್ಮ ನಗರವು ಕಾಂಡೋಮ್ ಆವಿಷ್ಕರಿಸುವ ಸಾವಿರಾರು ವರ್ಷಗಳಷ್ಟು ಹಳೆಯದು!’
**
ರಮಣೀಯ ಹಳ್ಳಿ
ಸ್ವಿಟ್ಜರ್‌ಲ್ಯಾಂಡ್ ಅಂದಾಕ್ಷಣ ನಮಗೆ ನೆನಪಾಗುವುದು ಜೂರಿಚ್, ಲೂಸರ್ನ್ ಅಥವಾ ಇಂಟರ್ಲೇಕನ್. ಬಹುತೇಕ ಪ್ರಯಾಣಿಕರು ಈ ಮೂರು ಊರುಗಳನ್ನು ನೋಡಿ ಬರುತ್ತಾರೆ. ಆದರೆ ಪ್ರವಾಸಿಗರ ಅಬ್ಬರವಿಲ್ಲದ ಮತ್ತು ಅತ್ಯಂತ ವಿಸ್ಮಯಕಾರಿಯಾದ ಒಂದು ತಾಣವೆಂದರೆ 'ವ್ಯಾಲೆ ವೆರ್ಜಾಸ್ಕಾ' ಅಥವಾ ವೆರ್ಜಾಸ್ಕಾ ಕಣಿವೆ. ಈ ಊರಿನಲ್ಲಿ ಕಣ್ಮುಚ್ಚಿಕೊಂಡು ಕ್ಯಾಮೆರಾವನ್ನು ಯಾವ ದಿಕ್ಕಿಗೆ ಹಿಡಿದು, ಬಟನ್ ಕ್ಲಿಕ್ಕಿಸಿದರೂ ನೀವು ತೆಗೆದ ಫೊಟೋ ಅದ್ಭುತವಾಗಿರುತ್ತದೆ.
ಇದು ಸ್ವಿಟ್ಜರ್‌ಲ್ಯಾಂಡ್‌ನ ಇಟಾಲಿಯನ್ ಭಾಷೆ ಮಾತನಾಡುವ 'ಟಿಸಿನೊ' (Ticino) ಕ್ಯಾಂಟನ್‌ನಲ್ಲಿದೆ. ಸುಮಾರು ಮೂರು ಸಾವಿರ ಜನಸಂಖ್ಯೆ ಇರುವ ಈ ಕಣಿವೆಯ ಪ್ರಮುಖ ಆಕರ್ಷಣೆ ವೆರ್ಜಾಸ್ಕಾ ನದಿ. ಈ ನದಿಯ ನೀರು ಎಷ್ಟು ಸ್ವಚ್ಛವಾಗಿದೆ ಎಂದರೆ, 50 ಅಡಿ ಆಳದಲ್ಲಿರುವ ಸಣ್ಣ ಕಲ್ಲುಗಳು ಕೂಡ ಮೇಲಿನಿಂದ ಸ್ಪಷ್ಟವಾಗಿ ಕಾಣುತ್ತವೆ. ಇದರ ಬಣ್ಣ ಗಾಢವಾದ ಪಚ್ಚೆ (Emerald Green) ಹಸಿರು. ಈ ನದಿ ಪ್ರಪಂಚದ ಅತ್ಯಂತ ಸ್ವಚ್ಛವಾದ ನದಿಗಳಲ್ಲೊಂದು.
ಈ ಕಣಿವೆಯ ಪ್ರವೇಶದ್ವಾರದಲ್ಲೇ ಬೃಹತ್ ಅಣೆಕಟ್ಟಿದೆ. ಇದು ಜೇಮ್ಸ್ ಬಾಂಡ್ ಚಿತ್ರ 'ಗೋಲ್ಡನ್ ಐ' ಮೂಲಕ ಜಗತ್ಪ್ರಸಿದ್ಧವಾಯಿತು. ಚಿತ್ರದ ಆರಂಭದಲ್ಲಿ ಬಾಂಡ್ ಈ ಅಣೆಕಟ್ಟಿನಿಂದ ಕೆಳಕ್ಕೆ ಜಿಗಿಯುವ ದೃಶ್ಯವಿದೆ. ಸಾಹಸ ಪ್ರಿಯರಿಗಾಗಿ ಇಲ್ಲಿ ಇಂದು 'ಬಂಜೀ ಜಂಪಿಂಗ್' ಸೌಲಭ್ಯವಿದೆ, ಇದು ವಿಶ್ವದ ಅತ್ಯಂತ ಎತ್ತರದ ಸ್ಥಿರ ಬಂಜೀ ಜಂಪ್‌ಗಳಲ್ಲಿ ಒಂದಾಗಿದೆ.
ಅಲ್ಲಿನ 'ಲಾವೆರ್ಟೆಜ್ಜೊ' ಎಂಬ ಪುಟ್ಟ ಹಳ್ಳಿಯಲ್ಲಿ ಹದಿನೇಳನೆಯ ಶತಮಾನದ ಕಲ್ಲಿನ ಸೇತುವೆಯಿದೆ. ಇದು ಎರಡು ಕಮಾನುಗಳನ್ನು ಹೊಂದಿದ್ದು, ನದಿಯ ಮೇಲೆ ವಿಶಿಷ್ಟವಾಗಿ ಕಾಣುತ್ತದೆ. ಬೇಸಗೆಯಲ್ಲಿ ಸ್ಥಳೀಯರು ಮತ್ತು ಕೆಲವು ಸಾಹಸಿ ಪ್ರವಾಸಿಗರು ಈ ಸೇತುವೆಯ ಮೇಲಿಂದ ನೇರವಾಗಿ ನೀರಿಗೆ ಜಿಗಿಯುತ್ತಾರೆ.
ಈ ಕಣಿವೆಯಲ್ಲಿರುವ 'ಸೊಗ್ನೊ' ಎಂಬ ಹಳ್ಳಿ ಅತ್ಯಂತ ವಿಶಿಷ್ಟವಾಗಿದೆ. ಇಲ್ಲಿನ ಮನೆಗಳು, ರಸ್ತೆಗಳು ಮತ್ತು ಚಾವಣಿಗಳು ಸಂಪೂರ್ಣವಾಗಿ ಸ್ಥಳೀಯವಾಗಿ ಸಿಗುವ ಕಲ್ಲುಗಳಿಂದಲೇ ನಿರ್ಮಿತವಾಗಿವೆ. ಆಧುನಿಕ ಸಿಮೆಂಟ್ ಬಳಕೆ ಇಲ್ಲದಿದ್ದರೂ ಈ ಮನೆಗಳು ಶತಮಾನಗಳಿಂದ ಗಟ್ಟಿಯಾಗಿ ನಿಂತಿವೆ. ಇದು ಒಂದು ರೀತಿಯಲ್ಲಿ 'ಜೀವಂತ ವಸ್ತುಸಂಗ್ರಹಾಲಯ'ದಂತೆ ಭಾಸವಾಗುತ್ತದೆ.

**
ಜಪಾನಿನಲ್ಲಿ ತಮಾಷೆಯ ಪ್ರಸಂಗ
ನಾನು ಯಾವುದೇ ದೇಶಕ್ಕೆ ಹೋದರೂ, ಸ್ಥಳೀಯರೊಂದಿಗೆ, ಗೈಡ್‌ಗೆ ಸ್ಥಳೀಯ ತಮಾಷೆ ಪ್ರಸಂಗ ಅಥವಾ ಜೋಕ್ ಹೇಳುವಂತೆ ಹೇಳುತ್ತೇನೆ. ಜಪಾನಿನ ಕ್ಯೋಟೋದಲ್ಲಿ ನಮ್ಮೊಂದಿಗಿದ್ದ ಗೈಡ್ ಜತೆ ಮಾತಾಡುವಾಗ ಆತ ಹೇಳಿದ ಕೆಲವು ಜೋಕ್ಸ್.
ಒಬ್ಬ ಜಪಾನಿ ಮ್ಯಾನೇಜರ್ ತನ್ನ ಉದ್ಯೋಗಿಗೆ ಹೇಳಿದ - 'ನೋಡು, ನಿನಗೆ ಕೆಲಸದಲ್ಲಿ ಸೋಮಾರಿತನ ತೋರಿಸಲು ಇಲ್ಲಿ ಅವಕಾಶವಿಲ್ಲ. ನೀನು ಸತ್ತರೆ ಮಾತ್ರ ರಜೆ ಸಿಗುತ್ತದೆ.'
ಮಾರನೇ ದಿನ ಉದ್ಯೋಗಿ ಆಫೀಸಿಗೆ ಬರಲಿಲ್ಲ.
ಮ್ಯಾನೇಜರ್ ಫೋನ್ ಮಾಡಿದಾಗ ಉದ್ಯೋಗಿ ಹೇಳಿದ - 'ಸಾರ್, ನಾನು ಸತ್ತಿದ್ದೇನೆ, ಆದರೆ ಅಂತ್ಯಕ್ರಿಯೆಗೆ ಹೋಗಲು ರಜೆ ಇಲ್ಲದ ಕಾರಣ ಇನ್ನು ಐದು ನಿಮಿಷದಲ್ಲಿ ಆಫೀಸಿಗೆ ಕೆಲಸಕ್ಕೆ ಬರುತ್ತೇನೆ!'
*
ಜಪಾನೀಯರು ಬಹಳ ವಿನಯವಂತರು. ತಮ್ಮಿಂದ ಒಂದು ಸಣ್ಣ ತಪ್ಪಾದರೂ ಅತಿ ಎನಿಸುವಷ್ಟು ಕ್ಷಮೆಯಾಚಿಸುತ್ತಾರೆ.
ಇಬ್ಬರು ಜಪಾನಿಯರು ರಸ್ತೆಯಲ್ಲಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದರು. ಇಬ್ಬರೂ ತಕ್ಷಣ ಬಾಗಿ ನಮಸ್ಕರಿಸಿ, ಕ್ಷಮೆ ಕೇಳಲು ಶುರು ಮಾಡಿದರು.
'ನನ್ನದೇ ತಪ್ಪು, ಕ್ಷಮಿಸಿ' ಎಂದು ಒಬ್ಬ ಬಗ್ಗಿದರೆ, 'ಇಲ್ಲ ಇಲ್ಲ, ನನ್ನದೇ ತಪ್ಪು' ಎಂದು ಇನ್ನೊಬ್ಬ ಇನ್ನೂ ಕೆಳಕ್ಕೆ ಬಗ್ಗಿದ. 'ಇಲ್ಲ..ಇಲ್ಲ.. ನನ್ನದೇ ತಪ್ಪು' ಎಂದ ಮೊದಲಿನವ. ಅದಕ್ಕೆ ಎರಡನೆಯವ, 'ಸಾಧ್ಯವೇ ಇಲ್ಲ.. ತಪ್ಪು ನನ್ನದೇ' ಎಂದು ಮತ್ತಷ್ಟು ಬಗ್ಗಿದ.
ಹೀಗೆ ಒಬ್ಬರಿಗಿಂತ ಒಬ್ಬರು ಕೆಳಕ್ಕೆ ಬಗ್ಗುತ್ತಾ ಹೋಗಿ, ಕೊನೆಗೆ ಇಬ್ಬರೂ ರಸ್ತೆಯ ಮೇಲೆ ಮಲಗಿಬಿಟ್ಟರು!
ದಾರಿಹೋಕರು ಬಂದು ಅವರು ವ್ಯಾಯಾಮ ಮಾಡುತ್ತಿದ್ದಾರೆಂದು ಭಾವಿಸಿ, ಅವರ ಪಕ್ಕದಲ್ಲೇ ತಾವೂ ಪುಷ್-ಅಪ್ಸ್ ಮಾಡಲು ಶುರು ಮಾಡಿದರು. ಅದನ್ನು ನೋಡಿದ ಅವರಿಬ್ಬರೂ, ಇವರೂ ನಮ್ಮ ಹಾಗೆ ತಪ್ಪು ಮಾಡಿರಬೇಕು ಎಂದು ಭಾವಿಸಿದರು.
*
ಒಬ್ಬ - 'ಜಪಾನಿನ ಅತ್ಯಂತ ವೇಗದ ಬುಲೆಟ್ ಟ್ರೇನ್ ಸಮಸ್ಯೆ ಏನು?'
ಮತ್ತೊಬ್ಬ - 'ನೀವು ಟಿಕೆಟ್ ತಗೊಳ್ಳುವ ಮೊದಲೇ ಅದು ಸ್ಟೇಷನ್ ಬಿಟ್ಟಿರುತ್ತದೆ!'