Saturday, April 11, 2026
Saturday, April 11, 2026

ಹೈಡಿ ಎಂಬ ಹೆಸರಿಲ್ಲದೆ ಜರ್ಮನಿ ಅಸ್ತಿತ್ವವೇ ಅಪೂರ್ಣ!

ಹೈಡಿ ಎಂಬ ಪದ ಜಗದ್ವ್ಯಾಪಿಯಾಗುವಂತೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಸರಿಸುಮಾರು ಇಪ್ಪತ್ತು ಚಲನಚಿತ್ರಗಳು ಈಕೆಯ ಕಥೆಯನ್ನಾಧರಿಸಿ ಚಿತ್ರೀಕರಣಗೊಂಡಿವೆ. ಬೇರೆ ಬೇರೆ ಭಾಷೆಗಳಲ್ಲಿ, ಆಯಾ ಭಾಷೆಯ ಪ್ರಸಿದ್ಧ ಲೇಖಕರು ಹೈಡಿಯನ್ನು ಭಾಷಾಂತರಿಸಿದ್ದಾರೆ. ಇಂದಿಗೂ ಹೈಡಿ ಅಮೆರಿಕದಲ್ಲಿ ಪ್ರಥಮ ಹೆಸರಾಗಿ ಬಳಸಲ್ಪಡುತ್ತಿದೆ. ಜರ್ಮನ್ ಮಾತನಾಡುವ ಎಲ್ಲ ದೇಶಗಳಲ್ಲಿ ಹೈಡಿ ಇತರ ಹೆಸರುಗಳೊಂದಿಗೆ ಜೋಡಿಸಲ್ಪಟ್ಟಿದೆ. ಹೈಡಿ ಹೆಸರಿನಲ್ಲಿ ಸಂಗೀತ, ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯ.

ಜರ್ಮನ್ ಭಾಷೆಯಲ್ಲಿ ಹೈಡಿ ಅಂದರೆ `ನೋಬಲ್’, `ವೆರಿ ಕೈಂಡ್’ ಅನ್ನುವ ಅರ್ಥಕೊಡುತ್ತದೆ. ಜೊಹನ್ನ ಸ್ಪೈರಿ ಎನ್ನುವ ಪ್ರಸಿದ್ಧ ಲೇಖಕಿ `ಹೈಡಿ’ ಎಂಬ ಒಂದು ಕಾದಂಬರಿಯನ್ನು ಬರೆದಳು. ಅದನ್ನು ಕಾದಂಬರಿ ಅನ್ನುವುದಕ್ಕಿಂತ ಮಕ್ಕಳಿಗಾಗಿ ಬರೆದ ಕಥೆ ಎನ್ನಬಹುದು. ಸರಿಸುಮಾರು 1880ರಲ್ಲಿ ಪ್ರಕಟಗೊಂಡ ಹೈಡಿ ಎಂಬ ಪುಟ್ಟ ಬಾಲಕಿಯೊಬ್ಬಳ ಸುತ್ತ ಸುತ್ತುವ ಕಥೆ. ಸ್ವಿಸ್ಸಿನ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಅಂದಿನಿಂದ ಇಂದಿನವರೆಗೂ ಉತ್ತಮ ಮಾರಾಟ ಕಂಡ ಹೆಗ್ಗಳಿಕೆ ಕೂಡ ಈ ಪುಸ್ತಕಕ್ಕೆ ಸಿಕ್ಕಿದೆ. ಇದೊಂದು ಅನಾಥ ಮಗುವಿನ ಕಥೆ. ಹೈಡಿ ಎನ್ನುವ ಪುಟ್ಟ ಬಾಲಕಿ, ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಅವಳ ಚಿಕ್ಕಮ್ಮ ಐದು ವರ್ಷಗಳ ಕಾಲ ಈ ಬಾಲೆಯನ್ನು ಸಲಹುತ್ತಾಳೆ. ಹೈಡಿಗೆ ಐದು ವರ್ಷವಾದಾಗ ಆಕೆಯನ್ನು ಆಕೆ ಅಜ್ಜನ ಸುಪರ್ದಿಗೆ ಒಪ್ಪಿಸಿ, ಜರ್ಮನಿಯ ಫ್ರಾಂಕ್‍ಫರ್ಟ್ ನಗರದಲ್ಲಿ ಆಕೆಗೆ ಸಿಕ್ಕ ಕೆಲಸಕ್ಕೆಂದು ಹೊರಟು ಹೋಗುತ್ತಾಳೆ.

ಇದನ್ನೂ ಓದಿ: ವಿದೇಶದ ಹಿಮಾಲಯದಲ್ಲಿ ಜನಗಣಮನ ಕೇಳುವ ಖುಷಿ!

ಆಲ್ಪ್ಸ್ ವಾತಾವರಣದಲ್ಲಿ ಈ ಹುಡುಗಿ ಬೆಳೆದ ಕಥೆ. ಬಾಲ್ಯದ ಹಸಿಹಸಿ ನೆನಪುಗಳು ಗಟ್ಟಿಗೊಂಡ ಸಂಬಂಧಗಳು, ಅವಳು ಮರಳಿ ಬಂದಾಗ ಆಗುವ ಬದಲಾವಣೆ ಮುಂತಾದವನ್ನು ಕುತೂಹಲಕಾರಿಯಾಗಿ ಮಕ್ಕಳಿಗಾಗಿ ಹೆಣೆದ ಕಥೆ. ಇದೊಂದು ಕಾಲ್ಪನಿಕ ಕಥೆ, ಅದಾಗ್ಯೂ ಇಲ್ಲಿಯ ಜನಮನದಲ್ಲಿ ಹೈಡಿ ಫ್ಯಾಕ್ಟರ್ ಸಾಕಷ್ಟು ಪ್ರಬಲವಾಗಿಯೇ ನೆಲೆಗೊಂಡಿದೆ. ಇಲ್ಲಿನ ಪ್ರವಾಸೋದ್ಯಮ ಇಲಾಖೆ, ಕಥೆಯಲ್ಲಿ ವರ್ಣಿಸಿರುವ ಆಲ್ಪ್ಸ್ ಪರ್ವತ ಶ್ರೇಣಿಯನ್ನು ಹೈಡಿಲ್ಯಾಂಡ್ ಎಂದೇ ಕರೆದಿದೆ. ಲಿಚನ್‍ಸ್ಟೈನ್ ಎನ್ನುವ ಒಂದು ದೇಶದ ಸರಹದ್ದಿಗೆ ಹೊಂದಿಕೊಂಡಿರುವ ಈ ನೆಲವನ್ನು ಹೈಡಿ ಹೆಸರಿನೊಂದಿಗೆ ಜೋಡಿಸಿ, ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ.

Untitled design - 2026-04-11T143532.393

ಹೈಡಿ ಎಂಬ ಪದ ಜಗದ್ವ್ಯಾಪಿಯಾಗುವಂತೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಸರಿಸುಮಾರು ಇಪ್ಪತ್ತು ಚಲನಚಿತ್ರಗಳು ಈಕೆಯ ಕಥೆಯನ್ನಾಧರಿಸಿ ಚಿತ್ರೀಕರಣಗೊಂಡಿವೆ. ಬೇರೆ ಬೇರೆ ಭಾಷೆಗಳಲ್ಲಿ, ಆಯಾ ಭಾಷೆಯ ಪ್ರಸಿದ್ಧ ಲೇಖಕರು ಹೈಡಿಯನ್ನು ಭಾಷಾಂತರಿಸಿದ್ದಾರೆ. ಇಂದಿಗೂ ಹೈಡಿ ಅಮೆರಿಕದಲ್ಲಿ ಪ್ರಥಮ ಹೆಸರಾಗಿ ಬಳಸಲ್ಪಡುತ್ತಿದೆ. ಜರ್ಮನ್ ಮಾತನಾಡುವ ಎಲ್ಲ ದೇಶಗಳಲ್ಲಿ ಹೈಡಿ ಇತರ ಹೆಸರುಗಳೊಂದಿಗೆ ಜೋಡಿಸಲ್ಪಟ್ಟಿದೆ. ಹೈಡಿ ಹೆಸರಿನಲ್ಲಿ ಸಂಗೀತ, ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯ. ಒಂದು ಕಾಲ್ಪನಿಕ ಕಥೆಯನ್ನು ಸತ್ಯಕ್ಕಿಂತ ಹೆಚ್ಚಾಗಿ ಇಲ್ಲಿನ ಜನ ಜಗತ್ತಿಗೆ ಮಾರುವ ರೀತಿ ನೋಡಿದರೆ, ಇವರನ್ನು ಅತ್ಯುತ್ತಮ ಮಾರಾಟಗಾರರು ಎಂದು ಒಪ್ಪಲೇಬೇಕು. ಥಟ್ಟನೆ ನನಗೆ ನೆನಪಾದದ್ದು ಆರ್. ಕೆ. ನಾರಾಯಣ್ ಅವರ `ಮಾಲ್ಗುಡಿ ಡೇಸ್’.

ಹೈಡಿಲ್ಯಾಂಡ್ ಬಗ್ಗೆ ಸ್ವಿಸ್ಸಿಗೆ ಹೋಗಿ ಬಂದಿದ್ದ ನನ್ನ ಮಿತ್ರರು, ಸಹೋದ್ಯೋಗಿಗಳಿಂದ ಹಿಡಿದು ಅಂತರ್ಜಾಲದಲ್ಲಿ ಕೂಡ ಬಹಳವೇ ಮಾಹಿತಿ ಕಲೆಹಾಕಿದ್ದೆವು. ಇಷ್ಟು ದೂರ ಬಂದು ಹೈಡಿಲ್ಯಾಂಡ್ ನೋಡದಿದ್ದರೆ ಹೇಗೆ? ಎತ್ತೆತ್ತ ಸಾಗಿದರೂ ಹಿಮ, ಹಿಮವ ಬಿಟ್ಟು ಬೇರೇನೂ ಇಲ್ಲವೇನೋ ಎನ್ನುವಷ್ಟು ಹಿಮದ ರಾಶಿ, ಅಂದು ಸ್ವಲ್ಪ ಜಾಸ್ತಿಯೇ ಹಿಮ ಬೀಳುತ್ತಿತ್ತು. ಹೈಡಿಲ್ಯಾಂಡ್ ಇರುವುದು ಕಾಂಟೋನ್ ಗ್ರವ್‍ಬಂಡನ್ನಿನಲ್ಲಿ. ಸುಮಾರು 40,000 ಜನಸಂಖ್ಯೆಯುಳ್ಳ ಒಂದು ರಾಜ್ಯ. ಈ ರಾಜ್ಯವು ಲಿಚನ್‍ಸ್ಟೈನ್‍ ಎಂಬ ದೇಶದ ಸರಹದ್ದಿನಲ್ಲಿದೆ. ದಕ್ಷಿಣ ಯುರೋಪಿನ ಒಂದು ಸಣ್ಣ ದೇಶ. ಉತ್ತರದಿಂದ ದಕ್ಷಿಣಕ್ಕೆ ಈ ದೇಶದ ಉದ್ದ 24 ಕಿಲೋಮೀಟರುಗಳು ಮಾತ್ರ. ಈ ದೇಶವು ಸ್ವಿಸ್ ಹಾಗೂ ಆಸ್ಟ್ರಿಯಾ ದೇಶಗಳೊಂದಿಗೆ ಸರಹದ್ದು ಹಂಚಿಕೊಂಡಿದೆ. ಇಲ್ಲಿಗೆ ಹೋಗಲು ವಿಶೇಷವಾದ ವೀಸಾ ಅವಶ್ಯಕತೆಯಿಲ್ಲ. ಸ್ವಿಸ್ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಹಾಗಾಗಿ ಓಡಾಟ ಸುಗಮ. ಅಕಸ್ಮಾತ್ ನೀವು ಪಾಸ್‍ಪೋರ್ಟ್ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರೆ, ನೆನಪಿಗಾಗಿ ನೀವು ಆ ದೇಶಕ್ಕೆ ದಾಖಲಾದ ಬಗ್ಗೆ ಒಂದು ಮೊಹರು ಹಾಕಿಸಿಕೊಳ್ಳಬಹುದು. ಎಲ್ಲಾ ದೇಶದಲ್ಲಿ ಇದು ಕಡ್ಡಾಯ. ಇಲ್ಲಿ ಮೊಹರು ಬೇಕೆಂದರೆ ಹಣ ಕೊಡಬೇಕು. ನಾವು ಪಾಸ್‍ಪೋರ್ಟಿನಲ್ಲಿ ಮುದ್ರೆ ಒತ್ತಿಸಿಕೊಂಡೆವು. ಲಿಚನ್‍ಸ್ಟೈನ್ ಟ್ಯಾಕ್ಸ್ ಹೆವೆನ್ ಎಂದು ಪ್ರಸಿದ್ಧಿ ಪಡೆದಿದೆ. ಜಗತ್ತಿನಲ್ಲೇ ಜರ್ಮನ್ ಮಾತನಾಡುವ ಅತಿ ಸಣ್ಣ ದೇಶ ಕೂಡ ಇದಾಗಿದೆ. ರೈಲು, ಬಸ್ಸುಗಳ ಓಡಾಟ, ತನ್ನ ಅಭಿವೃದ್ಧಿ ಮತ್ತಿತರ ಎಲ್ಲಾ ವಿಷಯಗಳಿಗೂ ಸ್ವಿಟ್ಜರ್ ಲ್ಯಾಂಡ್ ಹಾಗೂ ಆಸ್ಟ್ರಿಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಹಬಾಳ್ವೆ ನಡೆಸುತ್ತಿದೆ.

ಲಿಚನ್‍ಸ್ಟೈನ್ ಹಾದು ನಾವು ಹೈಡಿಲ್ಯಾಂಡಿಗೆ ಬರುವಲ್ಲಿ ಹೊಟ್ಟೆ ಚುರುಗುಟ್ಟುತ್ತಿತ್ತು. ನಾವಿದ್ದ ಬಸ್ಸು ಒಂದು ಸಣ್ಣ ಬೆಟ್ಟದ ತಪ್ಪಲಲ್ಲಿ ನಿಂತಿತು. ನಮ್ಮ ಗೈಡ್ ಒಂದು ಕಿಲೋಮೀಟರ್ ಬೆಟ್ಟದ ಮೇಲೆ ಹತ್ತಿ ಹೈಡಿ ಮನೆಯನ್ನು ನೋಡಲು ತಾಕತ್ತಿದ್ದರೆ ನನ್ನೊಂದಿಗೆ ಬನ್ನಿ ಎಂದಳು. ಹಿಮ ಧಾರಾಕಾರವಾಗಿ ಸುರಿಯುತ್ತಿತ್ತು. ನನಗೂ ಅತೀವ ಆನಂದ. ಹಿಮ, ಜೊತೆಗೆ ಬೆಟ್ಟ ಹತ್ತುವ ತವಕ. ಬಸ್ಸಿನಲ್ಲಿ ಒಟ್ಟು 25 ಜನರಿದ್ದೆವು. ಎಲ್ಲರಿಗಿಂತ ಮೊದಲು ನಾನಾಗಬೇಕೆಂಬ ಬಾಲ್ಯದಲ್ಲಿದ್ದ ಹುಚ್ಚು ಈಗಲೂ ನನ್ನನ್ನು ಕಾಡುತ್ತದೆ. ವೇಗವಾಗಿ ಬೆಟ್ಟವನ್ನು ಹತ್ತತೊಡಗಿದೆ. ನಾನು, ನಂತರ ಕ್ರಮವಾಗಿ ಒಂದು ಮಲೇಷಿಯಾ ಜೋಡಿ, ನಂತರ ರಮ್ಯ ಹೀಗೆ ಸಾಗಿ ಬರುತ್ತಿದ್ದರು. ಬೆಟ್ಟದ ಮೇಲಿನಿಂದ, ನಮ್ಮ ಸಹ ಪ್ರಯಾಣಿಕರು, ಇಡೀ ಹಳ್ಳಿ, ಅಲ್ಲಿಯ ಮನೆಗಳು, ಬೆಂಕಿಪೊಟ್ಟಣದಂತೆ ಕಂಡವು. ಬೆಟ್ಟದ ಮೇಲೆ ಒಂದು ಮನೆ. ತೀರ ಹಳೆಯದು. ಅದನ್ನು ಹೈಡಿ ಮನೆಯೆಂದು ಹೇಳಿದರು. ಅದರ ಪ್ರವೇಶಕ್ಕೆ ನಾಲ್ಕು ಸ್ವಿಸ್ ಫ್ರಾಂಕ್ ವಸೂಲಿ ಮಾಡಿದರು. ಪಕ್ಕದಲ್ಲಿಯೇ ಹೈಡಿಗೆ ಸಂಬಂಧಿಸಿದ ಚಿತ್ರಗಳು, ಕಥೆ ಪುಸ್ತಕ, ಪೆನ್ನು ಇತ್ಯಾದಿ ಮಾರಾಟಮಾಡಲು ಒಂದು ಚಿಕ್ಕ ಅಂಗಡಿಯೂ ಇತ್ತು. ಒಂದು ಕಾಲ್ಪನಿಕ ಕಥೆಯ ಪಾತ್ರವನ್ನು ನಿಜವಾಗಿ ಇಲ್ಲಿಯೇ ಆಕೆ ವಾಸಿಸಿದ್ದಳು ಎಂಬಂತೆ ಬಿಂಬಿಸುತ್ತಾರೆ; ಮೆಚ್ಚಲೇಬೇಕು ಇವರ ವ್ಯವಹಾರ ಪ್ರಜ್ಞೆಗೆ. ನಾವು ನಾಲ್ಕೈದು ಗಂಟೆ ಜ್ಯೂರಿಕ್ ನಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದಿದ್ದೆವು. ಒಂದು ಸಣ್ಣ ಶಿಥಿಲಗೊಂಡ ಮನೆ ನೋಡಲು! ನಮ್ಮಲ್ಲಿ ಇಡೀ ಪಂಚತಂತ್ರದ ಕಥೆಗಳಿಗೇಕೆ ಜೀವಕೊಟ್ಟು ಇಂಥ ಪಾರ್ಕ್ ನಿರ್ಮಿಸಿಲ್ಲ?9

Untitled design - 2026-04-11T143052.164

ಹೈಡಿಯನ್ನು ಆಕೆಯ ಕಾಲ್ಪನಿಕ ಪ್ರಪಂಚದಲ್ಲೇ ಬಿಟ್ಟು ನಾವು ಜ್ಯೂರಿಕ್ ಗೆ ಮುಖ ಮಾಡಿದೆವು.

ಜ್ಯೂರಿಕ್ ನಗರದಿಂದ 20 ನಿಮಿಷಗಳ ರೈಲು ಪ್ರಯಾಣವು ನಮ್ಮನ್ನು ವಿಂತೆರ್ತೂರ್ ಎನ್ನುವ ಪುಟ್ಟ ನಗರಕ್ಕೆ ಕರೆತಂದಿತು. ವಿಂತೆರ್ತೂರ್ ಎಂದಾಕ್ಷಣ ಎಂಥವರಿಗೂ ಕಿವಿ ನಿಮಿರುವುದು ಸಹಜ. ಈ ನಗರದ ಹೆಸರಿನಲ್ಲಿ ವಿಮಾ ಕಂಪನಿಯೊಂದು ಜಗದ್ವಿಖ್ಯಾತಿ ಹೊಂದಿದೆ. ಸ್ವಿಟ್ಜರ್ ಲ್ಯಾಂಡ್ ಬಹು ಹಿಂದಿನಿಂದಲೂ ತನ್ನ ಗ್ರಾಹಕರ ಹಿತರಕ್ಷಣೆಯನ್ನು ಪಾಲಿಸುವುದರಲ್ಲಿ ಹೆಸರುವಾಸಿ. ನಂಬಿಕೆ ಮತ್ತು ಕಾರ್ಯದಕ್ಷತೆಗಳಿಂದ ಜಗತ್ತಿನಲ್ಲಿ ಕೋಟ್ಯಂತರ ಗ್ರಾಹಕರನ್ನು ಹೊಂದಿದೆ. ವಿಂತೆರ್ತೂರಿನಿಂದ ಇಪ್ಪತ್ತು ನಿಮಿಷಗಳ ರೈಲು ಪ್ರಯಾಣ ನಮ್ಮನ್ನು ಯುರೋಪಿನ ಅತಿ ದೊಡ್ಡ ವಾಟರ್ ಫಾಲ್ಸ್ ಗೆ ಕರೆದಂತಿತ್ತು. ಹಾಗೆ ನೋಡಿದರೆ ನಮ್ಮ ಜೋಗದ ಆಸುಪಾಸಿಗೂ ಬರದ ಇದರ ಎತ್ತರ ಕೇವಲ 23 ಮೀಟರ್ ಮಾತ್ರ. ಅಗಲ 150 ಮೀಟರುಗಳು, ಈ ಸರೋವರದ ಆಳ 13 ಮೀಟರ್. ಸುಮಾರು 17,000 ವರ್ಷ ಇದರ ವಯಸ್ಸೆಂದು ಬೋರ್ಡಿನಲ್ಲಿ ಬರೆದು ಸಮೀಪದಲ್ಲೇ ನೇತುಹಾಕಿದ್ದಾರೆ. ನಾಲ್ಕಾರು ದಿನದಿಂದ ಹಿಮದಲ್ಲಿ ನಲಿದಾಡಿದ್ದ ದೇಹ, ಮನಸ್ಸುಗಳಿಗೆ ಭೋರ್ಗರೆವ ನೀರಿನ ಲಾಸ್ಯ ಬಹಳವೇ ಮುದ ನೀಡಿತು.

ನೀರಿನ ರಭಸವು ಉಕ್ಕಿ ಬರುವ ನೊರೆ ಹಾಲೆಂಬಂತೆ ಭಾಸವಾಗುತ್ತಿತ್ತು. ವಿವಿಧ ಭಂಗಿಗಳಲ್ಲಿ ಧುಮ್ಮಿಕ್ಕುವ ನೀರಿನ ಬಳುಕಾಟವನ್ನು ಸೆರೆ ಹಿಡಿದೆವು. ಬೆಳಗ್ಗೆ ಏಳೂವರೆಗೆ ಜ್ಯೂರಿಕ್ ಬಿಟ್ಟಿದ್ದೆವು. ಹೊತ್ತು ಏರುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಸರೋವರದ ಮಧ್ಯದಲ್ಲಿ ಒಂದು ನಡುಗಡ್ಡೆಯಿದೆ. ಆ ನಡುಗಡ್ಡೆಗೆ ದೋಣಿಯ ಮೂಲಕ ಹೋಗಬಹುದು. ದೋಣಿಯಲ್ಲಿ ಹೋಗಿದ್ದೇ ಆದರೆ ಹೃದಯ ಒಂದು ಕ್ಷಣ `ಧಡ್’ ಎನ್ನದೆ ಇರದು. ನೀರು ನಮ್ಮ ಮೇಲೆ ಬಿತ್ತೇನೋ ಅನ್ನುವಷ್ಟು ಹತ್ತಿರ ಕರೆದೊಯ್ದು, ಒಂದು ಸುತ್ತು ಹಾಕಿಸಿ ನಡುಗಡ್ಡೆಗೆ ಸೇರಿಸುತ್ತಾರೆ. ನಡುಗಡ್ಡೆಯ ನೆತ್ತಿಯ ಮೇಲೆ ಕೆಂಪುಬಣ್ಣದಲ್ಲಿ ಸಂಕಲನ ಚಿಹ್ನೆಯ ಸ್ವಿಸ್ಸಿನ ಬಾವುಟ ಧೀಮಂತಿಕೆಯಿಂದ ಬಾನಿನಲ್ಲಿ ಹಾರಾಡುತ್ತಿತ್ತು.

ಆಗಸ್ಟ್ ಒಂದನ್ನು ಸ್ವಿಸ್ ತನ್ನ ರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತದೆ. ಆ ದಿನದಲ್ಲಿ ನದಿಯ ದಂಡೆಯಲ್ಲಿ ಬಣ್ಣ ಬಣ್ಣದ ಪಟಾಕಿ, ಸಿಡಿಮದ್ದುಗಳನ್ನು ಬಾನೆತ್ತರಕ್ಕೆ ಹಾರಿಸುತ್ತಾರಂತೆ. ಅದನ್ನು ಸವಿಯುವುದೇ ಒಂದು ಸಂತಸ. ರೇನ್ ಫಾಲ್ಸ್ ನೋಡುವುದಕ್ಕೆ ಆ ದಿನ ಪ್ರವಾಸಿಗರ ದಂಡು ಹೆಚ್ಚಾಗಿಯೇ ಬರುತ್ತದೆ.

ಇದನ್ನೂ ಓದಿ: ಸ್ವಿಟ್ಜರ್‌ಲ್ಯಾಂಡ್‌ ಮತ್ತು ಚಾಕೊಲೆಟ್‌ ಎಂಬ ಪ್ರವಾಸಿಮಿತ್ರ!

ಸರೋವರದ ಮೇಲೆ, ಪುಟ್ಟ ಬೆಟ್ಟವನ್ನು ಏರಿ ಮತ್ತೊಂದು ಭಾಗಕ್ಕೆ ಬಂದೆವು. ಅಲ್ಲಿ ಹೊಟೇಲ್. ಸಾವನೀರ್ ಅಂಗಡಿ ಹಾಗೂ ಒಂದು ಸುಂದರ ಚರ್ಚು ಇದ್ದವು. ನಮ್ಮ ಆದ್ಯತೆ ಹೊಟ್ಟೆಯ ಕಡೆಗೆ. ರಮ್ಯ ಎಲ್ಲಿಗೆ ಹೋದರೂ `ಅಪ್ಪನಿಗೆ’ ಎಂದು ಒಂದು ಪೆನ್ನು ಕೊಳ್ಳುವುದು ಅವಳ ಖರೀದಿಯ ಪಟ್ಟಿಯಲ್ಲಿರುತ್ತದೆ. ಈ ಬಾರಿಯೂ ಮರದಿಂದ ಮಾಡಿದ ಒಂದು ಪೆನ್ನು ಕೊಂಡಳು. ಆ ಪೆನ್ನಿನ ಒಂದು ಭಾಗ ಮೂತಿಯಾದರೆ, ಹಿಂಭಾಗದಲ್ಲಿ ನೇಗಿಲನ್ನು ಹೋಲುವಂತೆ ಅಲ್ಯೂಮಿನಿಯಮ್ಮಿನಿಂದ ಮಾಡಲಾದ ತುಂಡನ್ನು ಸಿಕ್ಕಿಸಲಾಗಿತ್ತು.

ನಾವು ಬಾರ್ಸಿಲೋನಾಕ್ಕೆ ಮರಳಿ ಹೊರಟೆವು. ಬೋರ್ಡಿಂಗ್ ಪಾಸ್ ಪಡೆದು, ಸೆಕ್ಯೂರಿಟಿ ಚೆಕ್ಕಿಗೆ ನಡೆದೆವು. ನಮ್ಮಿಬ್ಬರಿಗೂ ಮೆಷಿನ್ ಕುಂಯ್‍ಗುಡದೆ ದಾರಿಬಿಟ್ಟಿತು. ಆದರೆ ತಪಾಸಣೆ ಮಾಡುವಾಕೆ ನಮ್ಮ ಕೈಚೀಲವನ್ನು ತೆಗೆಯುವಂತೆ ಸೂಚಿಸಿದಳು. ಬ್ಯಾಗ್ ಪೂರಾ ಜಾಲಾಡಿ, ಆಕೆ ಹೆಕ್ಕಿ ತೆಗೆದದ್ದು ರಮ್ಯ ಪ್ರೀತಿಯಿಂದ ಅಪ್ಪನಿಗೆಂದು ಕೊಂಡ ಪೆನ್ನು. ಬಲರಾಮನ ಆಯುಧದಂತೆ ಕಾಣುತ್ತಿತ್ತು. ನಿಜ. ಪೆನ್ನು ಕೂಡ ಆಯುಧ ತಾನೆ? `ಅದನ್ನು ಬಿಟ್ಟುಬಿಡಿ’ ಎಂದು ಗೋಗರೆದಳು. ಸ್ಕ್ಯಾನಿಂಗ್ ಸಿಬ್ಬಂದಿ ಬಡಪೆಟ್ಟಿಗೆ ಒಪ್ಪಲಿಲ್ಲ. ರಮ್ಯ ಸ್ವಿಸ್ ಕ್ಯಾಪ್ ಧರಿಸಿದ್ದಳು. ಅದನ್ನು ನೋಡಿಯೋ ಏನೋ ಅವರಲ್ಲಿ ದೇಶಭಕ್ತಿ ಜಾಗೃತವಾಗಿ ನಮ್ಮ ಬಡಪಾಯಿ ಪೆನ್ನು ಬಚಾವಾಯಿತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?