• ಅನಿಲ್ ಎಚ್.ಟಿ.

ಕಾಡಿನೊಳಗೆ ಸಫಾರಿ ಹೋಗುತ್ತಾ ಇರುತ್ತೀರಿ. ಸಾಕಷ್ಟು ಸಮಯ ಸಾಗಿದರೂ ಮೊಲ, ಜಿಂಕೆ.. ಬಿಟ್ಟರೆ ಬೇರೇನೂ ಪ್ರಾಣಿ ಕಂಡಿರುವುದಿಲ್ಲ. ನಿರಾಶೆಯಿಂದ ಲೊಚಗುಟ್ಟಬೇಕು ಅನ್ನುವಷ್ಟರಲ್ಲಿಯೇ ನಿಮ್ಮ ಸಫಾರಿ ಬಸ್ ನ ಹತ್ತಿರದಲ್ಲಿಯೇ ಹುಲಿಯೊಂದು ಮರಿಗಳ ಜತೆ ಆಟವಾಡುತ್ತಿರುವ ರೋಮಾಂಚಕ ದೖಶ್ಯ ಕಾಣುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಂಡು ಕ್ಯಾಮೆರಾದಲ್ಲಿ ಕ್ಲಿಕ್ಕಿಸಬೇಕು ಎಂಬಷ್ಟರಲ್ಲಿಯೇ ನಿಮ್ಮ ಹಿಂಬದಿಯಲ್ಲಿದ್ದವನ್ನೊಬ್ಬ ಟೈಗರ್.. ಟೈಗರ್.. ಅಂತ ಜೋರಾಗಿ ಕಿರುಚಿಬಿಡುತ್ತಾನೆ.
ಈ ಬೊಬ್ಬೆಗೆ ಮರಿಯೊಂದಿಗೆ ಹುಲಿ ದಟ್ಟ ಕಾನನದೊಳಗೆ ಸಾಗಿಯೇ ಬಿಡುತ್ತದೆ. ಒಂದು ಅದ್ಭುತ ಕ್ಷಣ ಮಿಸ್ ಆಗಿಬಿಡುತ್ತದೆ.

ಅದೊಂದು ಚಂದದ ಪುಪ್ಪವನ. ಅಲ್ಲಿ ಬೀಸಿಬರುವ ತಂಗಾಳಿಯಲ್ಲಿ ಹೆಜ್ಜೆ ಹಾಕುತ್ತಾ.. ಒಂದಿನಿತು ಕಾಲ ಧ್ಯಾನ ಮಾಡಬೇಕಂತ ಬಯಸಿರುತ್ತೀರಿ. ಮನಸ್ಸು ರಿಲ್ಯಾಕ್ಸ್ ಆಗುವ ಸಮಯವದು. ಹಸಿರಿನ ಮೇಲೆ ಧ್ಯಾನಕ್ಕೆ ಕುಳಿತು ಕಣ್ಣು ಮುಚ್ಚಿಕೊಳ್ಳುವಷ್ಟರಲ್ಲಿಯೇ ವನದೊಳಕ್ಕೆ ಮಂಗಗಳಂತೆ ಬಂದ ಯುವಪಡೆಯೊಂದು. ನೋಡ್ ಮಚ್ಚಾ.. ಬ್ಯೂಟಿಫುಲ್ ಫ್ಲವರ್ ಗಳು ಎಲ್ಲೆಲ್ಲೂ ಇವೆ. ಕಲರ್.. ಕಲರ್.. ವಾಟ್ ಕಲರ್.. ವಾವ್ ಬ್ಯೂಟೀಸ್ ಅಂತ ಅರಚಿಕೊಂಡು ಅದುವರೆಗಿದ್ದ ಆಹ್ಲಾದಕರ ವಾತಾವರಣವನ್ನೇ ಮಾಲಿನ್ಯಗೊಳಿಸಿಬಿಡುತ್ತಾರೆ.

silence 1

ಆ ದೇವಾಲಯದೊಳಕ್ಕೆ ಸರದಿ ಸಾಲಿನಲ್ಲಿ ನಿಂತು ಧ್ಯಾನ ಮಾಡುುತ್ತಾ ದೇವರ ದರ್ಶನ ಪಡೆಯಲು ನಿಂತಿರುತ್ತೀರಿ. ಆಲಯದಲ್ಲಿ ಹಾಕಿರುವ ಧೂಪ, ಅಲ್ಲಿನ ಧ್ವನಿವರ್ಧಕದಲ್ಲಿ ಮೆಲುವಾಗಿ ಕೇಳಿಬರುತ್ತಿರುವ ಸ್ತೋತ್ರಗಳು ಕಿವಿಗಷ್ಟೇ ಅಲ್ಲ.. ಮನಸಿಗೂ ಹಾಯ್ ಅನಿಸುವಂತಿರುತ್ತದೆ. ದೇವರ ಸ್ಮರಣೆಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಮುಂದೆ ಸಾಗುವಂತೆಯೇ.. ಸರದಿ ಸಾಲಿನಲ್ಲಿದ್ದವನೋರ್ವನ ಮಾತು ದೇವರಿಗೂ ಕೇಳುವಂತೆ ಕಿವಿಗೆ ಅಪ್ಪಳಿಸುತ್ತದೆ. ಲೋ ಬಡ್ಡೆತ್ತದೇ... ಟೆಂಪಲ್ ನಲ್ಲಿದ್ದೀನಿ ಕಣೋ.. ಬೆಳಗ್ಗೆಯಿಂದ ಏನೂ ತಿಂದಿಲ್ಲ. ಹೊಟ್ಟೆಯಲ್ಲಿ ಹುಳುಗಳೆಲ್ಲಾ ಸತ್ತೇ ಹೋಗಿದೆ ಗುರೂ.... ಬೇಗ ಬಂದ್ ಬಿಡ್ತೀನಿ. ಮಟನ್ ಬಿರಿಯಾನಿ ಮಾಡಿಟ್ಟಿರೋ.. ಗಬಗಬ ತಿಂದಾಕ್ತೀನಿ..!! …
ಅಲ್ಲಿಗೆ ನಿಮ್ಮ ದೇವ ಸ್ಮರಣೆಯ ಗತಿ.. ಅಧೋಗತಿ!

ಹೊಟ್ಟೆ ತುಂಬಿರುತ್ತದೆ. ಪ್ರವಾಸಿ ತಾಣ ನೋಡಿ ಸುಸ್ತಾಗಿರುತ್ತದೆ. ಮತ್ತೊಂದು ತಾಣಕ್ಕೆ ರೈಲಿನಲ್ಲಿಯೋ ಬಸ್ ನಲ್ಲಿಯೋ ಹೋಗ್ತಾ ಇರುತ್ತೀರಿ. ನಿದ್ದೆಯ ಜೊಂಪು ಆವರಿಸಿರುತ್ತದೆ. ಒಂದಿಷ್ಟು ರೆಸ್ಟ್ ಮಾಡಿಕೊಂಡರೆ ಮುಂದಿನ ತಾಣ ವೀಕ್ಷಣೆಗೆ ಸುಲಭವಾಗುತ್ತದೆ ಎಂದು ಇದ್ದಲ್ಲಿಯೇ ರಿಲ್ಯಾಕ್ಸ್ ಮೂಡಿಗೆ ಬರಬೇಕು ಅನ್ನುವಷ್ಟರಲ್ಲಿಯೇ ಹಿಂಬದಿ ಸೀಟ್ ನಲ್ಲಿದ್ದವನು ಮೊಬೈಲ್ ನಲ್ಲಿ ಕಿರುಚುತ್ತಾನೆ. ಊಟ ಆಯ್ತಾ..? ವಂದೇಭಾರತ್ ನಲ್ಲಿದ್ದೇನೆ ಕಣೇ. ಬೊಂಬಾಟ್ ಆಗಿದೆ. ಪಾಪು ಏನ್ ಮಾಡ್ತಾ ಇದೆ. ಬಿಗ್ ಬಾಸ್ ನೋಡ್ತಾ ಇದ್ದೀಯಾ..? ಏನೂ ಕೇಳಿಸ್ತಾ ಇಲ್ಲ ಕಣೇ.. ಜೋರಾಗಿ ಮಾತಾಡೇ.. ನನ್ ವಾಯ್ಸ್ ಕೇಳ್ತಾ ಇಲ್ವಾ.. ಈಗ ಜೋರಾಗಿ ಮಾತಾಡ್ತಾ ಇದ್ದೇನೆ.. ಕೇಳ್ತಾ ಇದೆಯಾ....? ಬಿಗ್ ಬಾಸ್ ನಲ್ಲಿ ಸುದೀಪ್ ಬರಲಿಲ್ಲವಾ? ಮಾರ್ಕ್ ನೋಡೋಕೆ ಹೋಗಿರ್ತಾನೆ.. ಅಲ್ವಾ?

ಇದನ್ನೂ ಓದಿ: ಪ್ರವಾಸದ ಅನಿರೀಕ್ಷಿತ ಅತಿಥಿಗಳು !

ಮನೆ ವಿಚಾರ.. ಊರ ವಿಚಾರವನ್ನೆಲ್ಲಾ ಜೋರಾಗಿ ಅರಚಿಕೊಂಡಾದ ಮೇಲೆ ಇದನ್ನೆಲ್ಲಾ ಕೇಳುತ್ತಿರುವ ನಿಮಗೆ ನಿದ್ದೆ ಬರೋದು ಹೇಗೆ ಹೇಳಿ...? ಇಂಥ ಅರಚುವವರು, ಕಿರುಚುವವರು, ಬೊಬ್ಬಿಡುವವರು, ಆರ್ಭಟಿಸೋರು.. ಅಬ್ಬರಿಸೋರು.. ಪ್ರವಾಸಿ ತಾಣ ಎಂದಲ್ಲ, ರೆಸ್ಟೋರೆಂಟ್, ಸಿನಿಮಾ ಹಾಲ್, ಬಸ್ ಸ್ಟಾಂಡ್, ಏರ್ ಪೋರ್ಟ್, ಸಭೆಗಳು.. ಹೀಗೆ ಎಲ್ಲ ಕಡೆ ತುಂಬಿರುತ್ತಾರೆ. ಮುಖ್ಯವಾಗಿ ಊರಿಂದೂರಿಗೆ ಪ್ರವಾಸ ಹೋಗುವ ಪ್ರವಾಸಿಗರಿಗೆ ಇಂಥವರ ದರ್ಶನ ಆಗಿಂದಾಗ್ಗೆ ಆಗುತ್ತಲೇ ಇರುತ್ತದೆ. ಬೊಬ್ಬಿಡುವವರ ಬಾಯಿ ಮುಚ್ಚಬೇಕು ಅಂದ್ರೆ ಏನು ಮಾಡಬೇಕು?

ಈ ರೀತಿ ಮೌನವನ್ನು ಹಾಳು ಮಾಡುವ ಲಂಪಟರ ಬಾಯಿ ಮುಚ್ಚಬೇಕು ಎಂದರೆ ಅವರಿಗಿಂತ ಜೋರಾಗಿ ಬಾಯಿ ಬಿಡಬೇಕು. ಅಂತೀರಾ? ಹಾಗೇ ಮಾಡಿದರೆ ಅವರಿಗೂ ನಿಮಗೂ ವ್ಯತ್ಯಾಸವೇನು? ಹಲೋ ಸ್ವಲ್ಪ ಸುಮ್ಮನಿರುತ್ತೀರಾ? ಮೆಲ್ಲಗೆ ಮಾತನಾಡಿ.. ಯಾಕೆ ಜೋರಾಗಿ ಮಾತನಾಡ್ತಾ ಇದ್ದೀರಿ ಎಂದೆಲ್ಲಾ ಹೇಳಬಹುದು. ಆದರೆ ಅದು ಆ ಶಬ್ದಮಾಲಿನ್ಯ ಮಾಡಿದ ಶಬ್ದ ರಾಕ್ಷಸನಿಗೆ ಅರ್ಥವಾಗಬೇಕಲ್ಲ. ನಾನಿರೋದೇ ಹೀಗೆ. ನನ್ ಬಾಯಿಯಿರೋದೇ ಹೀಗೆ. ಮೌನ ಸಾಮ್ರಾಜ್ಯ ಮುರಿಯೋಕೆ ಅಂತ ಶಪಥ ತೊಟ್ಟವನಿಗೆ ನಿಮ್ಮ ಮಾತು ಅರ್ಥವಾದೀತಾದರೂ ಹೇಗೆ?

ಸರ್.. ಸ್ವಲ್ಪ ಮೆಲ್ಲನೆ ಮಾತನಾಡುತ್ತೀರಾ..? ಅಂತ ವಿನಯವಾಗಿ ಕೇಳಬಹುದು. ಆದರೆ, ಎಲ್ಲರೂ ನಿಮ್ಮ ವಿನಯವಂತಿಕೆಗೆ ಸ್ಪಂದಿಸುತ್ತಾರೆ ಅಂತ ಹೇಳಲಾಗದು. ನಾನು.. ನನ್ನಿಷ್ಟ ಕಣ್ರೀ.. ಅಂದು ಬಿಟ್ಟರೆ ಎಲ್ಲರೆದುರು ನಿಮ್ಮ ಸ್ಥಿತಿ ಏನಾಗಬೇಡ? ಅದೂ. ಗುಂಪಿನಲ್ಲಿ ಕಿರುಚಾಡುತ್ತಾ ಬರುವ ಯುವಕರ ಗುಂಪಿಗೆ ನಿಮ್ಮೊಬ್ಬರ ಬುದ್ಧಿ ಮಾತು ಹಿಡಿಸೋದು ಕಷ್ಟಕಷ್ಟ. ಮೊದಲೇ ಟೂರ್ ಬಂದ ಉಮೇದು ಅವರದ್ದು. ನಿಮ್ಮ ಸಲಹೆ ಕೇಳಿಬಿಟ್ಟರೆ ಅವಮಾನವಾಗದೇ? ಮತ್ತಷ್ಟು ಜೋರಾಗಿ ಕಿರುಚುತ್ತಾ ಸಾಗಿ ನಿಮಗೆ ಅವಮಾನ ಮಾಡುವುದೇ ಗುರಿ ಎಂಬಂಥ ಮನೋಪ್ರವೃತ್ತಿಯೂ ಅವರಲ್ಲಿರುತ್ತದೆ.

ಪ್ರವಾಸಿ ತಾಣಗಳಲ್ಲಿರುವ ಗೈಡ್ ಗಳು, ಸೆಕ್ಯೂರಿಟಿಗಳು, ಕೇಂದ್ರದ ಮುಖ್ಯಸ್ಥರ ಗಮನಕ್ಕೆ ಇಂಥ ಶಬ್ದ ರಕ್ಕಸರ ಬಗ್ಗೆ ದೂರು ನೀಡುವುದು ಸೂಕ್ತವೇ. ಆದರೆ, ಎಲ್ಲ ಗೈಡ್, ಸೆಕ್ಯೂರಿಟಿಗಳೂ ನಿಮ್ಮ ನೆರವಿಗೆ ಬರುತ್ತಾರೆಂದೋ ನಿಮಗೆ ಸ್ಪಂದನ ಸಿಗುತ್ತದೆಂದೋ ಹೇಳಲಾಗದು. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಸಾರ್.. ಎಂಬ ಉಪದೇಶ ಕೊಡುವವರೇ ಹೆಚ್ಚು.

ಇದನ್ನೂ ಓದಿ: ಕನ್ನಡದವರಿಂದ ಕನ್ನಡದವರಿಗಾಗಿಯೇ ಇರುವ ಪ್ರಯಾಣ ಸಂಸ್ಥೆ ನಮ್ಮದು: ಕೆ. ನಾಗರಾಜ ಅಡಿಗ

ಇತ್ತೀಚೆಗೆ ಕೊಡಗಿನಲ್ಲಿ ಇಂಥದ್ದೊಂದು ಟ್ರೆಂಡ್ ಹೆಚ್ಚಾಗುತ್ತಿದೆ. ಕೇರಳದಲ್ಲಿ ಪ್ರವಾಸಿ ಬಸ್ ಗಳಲ್ಲಿ ಜೋರಾಗಿ ಸೌಂಡ್ ಹಾಕುವುದಕ್ಕೆ ನಿರ್ಬಂಧವಿದೆ. ಬಸ್ ಅಥವಾ ವ್ಯಾನ್ ಚಾಲಕನಿಗೆ ಇಂಥ ಸೌಂಡ್ ನಿಂದ ಚಾಲನೆ ಮಾಡಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕಾಗಿ ಕೇರಳದಲ್ಲಿ ಸೌಂಡ್ ನ್ನು ಪ್ರವಾಸಿ ವಾಹನಗಳಲ್ಲಿ ನಿಷೇಧಿಸಲಾಗಿದೆ. ಆದರೆ ಕೇರಳದಿಂದ ಕೊಡಗಿಗೆ ಪ್ರತಿನಿತ್ಯ ಬರುತ್ತಿರುವ 40-50 ಬಸ್, ವ್ಯಾನ್ ಗಳಲ್ಲಿ ಕೊಡಗಿನ ಗಡಿ ಪ್ರವೇಶವಾದ ಕೂಡಲೇ ಜೋರಾಗಿ ಸೌಂಡ್ ಹಾಕಲಾಗುತ್ತದೆ. ಕೇರಳದ ಪ್ರವಾಸಿಗರು ಬಸ್, ವ್ಯಾನಿನೊಳಗೆ ಸಂಗೀತಕ್ಕೆ ಡಾನ್ಸ್ ಮಾಡುತ್ತಾ ಸಂಭ್ರಮಿಸುತ್ತಾರೆ. ತಮ್ಮ ರಾಜ್ಯದೊಳಗೆ ಸಾಧ್ಯವಾಗದ ನೖತ್ಯ, ಹುಚ್ಚಾಟವನ್ನು ಕೊಡಗಿನೊಳಗೆ ಬಂದ ಕೂಡಲೇ ಪ್ರಾರಂಭಿಸುತ್ತಾರೆ. ವಾಹನದೊಳಕ್ಕೆ ಮಾತ್ರವೇ ಅಲ್ಲ.

ಪ್ರಶಾಂತ ಜಾಗ ಕಂಡಕೂಡಲೇ, ಕೊಡಗಿನ ಕಾಡಿನ ಬದಿಗಳಲ್ಲಿ ಬಸ್, ವ್ಯಾನ್ ನಿಲ್ಲಿಸಿಕೊಂಡು ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಡಾನ್ಸ್ ಮಾಡುತ್ತಾ, ಬಿಯರ್ ಬಾಟಲ್ ಹಿಡಿದುಕೊಂಡು ಮೈಯಲ್ಲಿ ದೆವ್ವ ಬಂದಂತೆ ವರ್ತಿಸುವ ಪ್ರವಾಸಿಗರಿಗೇನೂ ಕಮ್ಮಿಯಿಲ್ಲ. ಇತ್ತೀಚೆಗೆ ಕುಶಾಲನಗರದ ನಿಸರ್ಗಧಾಮ ಪ್ರವಾಸಿ ತಾಣದಲ್ಲಿ ಈ ರೀತಿ ಮ್ಯೂಸಿಕ್ ಹಾಕಿಕೊಂಡು ಅಬ್ಬರಿಸುತ್ತಿದ್ದ ಬಸ್ ಡ್ರೈವರ್ ಗೆ ಸ್ಥಳೀಯರು ಸರಿಯಾದ ಪಾಠ ಕಲಿಸಿದ್ದಾರೆ. ಆದರೆ ಇಂಥ ಪಾಠಗಳು ಎಷ್ಟು ದಿನ ಮನಸ್ಸಿನಲ್ಲಿ ಉಳಿದೀತು? ಹೊಸ ಚಾಲಕರು, ಹೊಸ ಬಸ್ ಗಳು, ಹೊಸ ಪ್ರವಾಸಿಗರು. ಮತ್ತದೇ ಹಳೇ ಹುಚ್ಚಾಟ! ಕೇರಳ - ಕೊಡಗು ಗಡಿಯಲ್ಲಿ ವನ್ಯಜೀವಿಗಳಿಗೆ ಅನೇಕ ಸಿನಿಮಾ ಹಾಡುಗಳು ದಿನನಿತ್ಯ ಕೇಳಿಬರುತ್ತಿರುವಂತಿದೆ. ಕುಣಿದು ಕುಪ್ಪಳಿಸಿ, ಬಿಯರ್ ಬಾಟಲಿಗಳು, ಪ್ಲಾಸ್ಟಿಕ್ ಗಳನ್ನು ಕಾಡಿಗೆಸೆದು ಹೋದರೆ ತಮ್ಮ ಕೆಲಸವಾಯಿತು ಎಂಬಂತಿದೆ ಇವರ ವರ್ತನೆ. ಇಂಥ ಪ್ರವಾಸಿಗರನ್ನು ಕಂಡ ಆ ಕಾಡು ಎಷ್ಟು ಮರುಗಬಹುದು?

silence 2

ಅನೇಕ ಪ್ರವಾಸಿತಾಣಗಳಿಗೆ ಮೊಬೈಲ್ ಬಿಟ್ಟುಹೋಗಿ ಎನ್ನುವುದೂ ಇದೇ ಕಾರಣಕ್ಕಾಗಿ. ಕೆಲವರು ಮೊಬೈಲ್ ಬದಲಿಗೆ ಪುಟ್ಟ ಮಕ್ಕಳನ್ನು ಕರೆದೊಯ್ಯುತ್ತಾರೆ. ನೀವು ಧ್ಯಾನಾಸಕ್ತರಾಗಿ ಯಾವುದಾದರೂ ವಿಚಾರದ ಬಗ್ಗೆ ಗೈಡ್ ಗಳಿಂದ ಮಾಹಿತಿ ಪಡೆಯುತ್ತಿರುವಾಗಲೇ ಜೊತೆಗಿದ್ದವರ ಮಕ್ಕಳ ಅಳು, ರಂಪಾಟ, ಮಕ್ಕಳ ಅರಚುವಿಕೆಯಿಂದ ವಿಪರೀತ ತೊಂದರೆಯಾಗುತ್ತದೆ. ಆದರೆ ಏನೂ ಆಗಲೇ ಇಲ್ಲ ಎಂಬಂತೆ ನಿರ್ಲಿಪ್ತತೆಯಿಂದ ಇರುವ ಪೋಷಕರು.. ಇವೆಲ್ಲಾ ಟೂರ್ ಸಂದರ್ಭ ನಿಮಗೆ ದೊರಕುವ ಬಿಟ್ಟಿ ಭಾಗ್ಯ! ಹೇಳುವಂತಿಲ್ಲ. ಕೇಳುವಂತಿಲ್ಲ.. ಅನುಭವಿಸಲೇಬೇಕು. ಇನ್ನು ಕೆಲವು ಗಂಡಹೆಂಡತಿಗೆ ಪ್ರವಾಸ ಹೋದಾಗಲೇ ಮನೆ ಸಮಸ್ಯೆ ಹೇಳಿಕೊಂಡು ಜಗಳವಾಡಬೇಕು. ನೀನ್ ಸರಿಯಿಲ್ಲ.. ನಿನ್ನಪ್ಪ ಸರಿಯಿಲ್ಲ ಅಂತೆಲ್ಲಾ ಎಲ್ಲರ ಎದುರು ಮನೆ ವರ್ತಮಾನ ಅರುಹಿಕೊಂಡು ಬೊಬ್ಬಿಟ್ಟಾಗಲೇ ಈ ದಂಪತಿ ಜೀವನ ಧನ್ಯ! ಇಂಥವರು ಮನೆಯಲ್ಲಿಯೂ ನೆಮ್ಮದಿಯಾಗಿರೋದಿಲ್ಲ. ಪ್ರವಾಸ ಕಾಲದಲ್ಲಿಯೂ ಶಾಂತವಾಗಿರೋಲ್ಲ. ಮಾತ್ರವಲ್ಲ. ಜತೆಗಿರುವ ಪ್ರವಾಸಿಗರೂ ನೆಮ್ಮದಿಯಾಗಲು ಬಿಡೋದಿಲ್ಲ..ಎಂಥ ಕರ್ಮಾರೀ.
ನಿಮ್ಮ ಕಿರುಚುವಿಕೆ, ಬೊಬ್ಬಿಡುವಿಕೆ ಸಾರ್ವಜನಿಕವಾಗಿ ಬೇಡವೇ ಬೇಡ.. ಅವೆಲ್ಲವನ್ನೂ ಮನೆಯಲ್ಲಿಯೇ ತೋರಿಸಿಕೊಳ್ಳಿ. ಪ್ರವಾಸಿ ತಾಣಗಳಿಗೆ ಅಥವಾ ಸಾರ್ವಜನಿಕ ಸ್ಥಳಗಳಿಗೆ ಬಂದಾಗಲಾದರೂ ಸ್ವಲ್ಪ ಮೌನದಿಂದ ಇರಲು ಕಲಿಯಿರಿ. ಪರಿಸರವನ್ನು ನೀವು ಮೌನವಾಗಿರುವುದನ್ನು ಆ ದಿವ್ಯ ಪರಿಸರ ಬಯಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ..

ಪರಿಸರದ ಮಧ್ಯೆ ನಡೆಯುವಾಗ, ಮೖಗಾಲಯಕ್ಕೆ ತೆರಳಿದಾಗ. ಅಲ್ಲಿನ ಜೀವಿಗಳ ಮಾತು ಕೇಳಿಸಿಕೊಳ್ಳಿ. ಹಕ್ಕಿಗಳ ಇಂಪಿನಂತೆ, ಹುಲಿಗಳ ಪಿಸುಗುಡುವಿಕೆಯನ್ನೂ ಆಲಿಸಿ. ಸಫಾರಿಗೆ ತೆರಳಿದಾಗ ಅಲ್ಲಿನ ಆಹ್ಲಾದತೆಗೆ ಮನಸ್ಸು ನೀಡಿ. ಪ್ರವಾಸಿ ಕೇಂದ್ರಗಳಲ್ಲಿ ಹೊಸ ಹೊಸ ವಿಚಾರಗಳಿಗೆ ಕಣ್ಣಾಗಿ, ಕಿವಿಯಾಗಿ,, ಆದರೆ ಅಲ್ಲಿ ಬಾಯಿಯಾಗಿ ಪ್ರಶಾಂತತೆಯನ್ನು ನಾಶವಾಗಿಸಬೇಡಿ..

ಇಲ್ಲ... ನಾನು ಕಿರುಚಲೇ ಬೇಕು. ಜನ ಕಂಡೊಡನೆ, ಮೌನ ಪರಿಸರ ನೋಡಿದೊಡನೆ ನಂಗೆ ಸುಮ್ಮನೇ ಇರಲು ಸಾಧ್ಯವೇ ಇಲ್ಲ. ಜೋರಾಗಿ ಬೊಬ್ಬಿಡಬೇಕು.. ಗೆಳೆಯರ ಜತೆ ಹೋದಾಗ ವ್ಯಂಗ್ಯವಾಡಬೇಕು. ಆರ್ಭಟಿಸಬೇಕು.. ಎಲ್ಲರನ್ನೂ ಕಿಚಾಯಿಸಿ ಸರ್ವರ ನೆಮ್ಮದಿ ಭಂಗ ಮಾಡಲೇಬೇಕು ಹೀಗೆಲ್ಲಾ ಅಂದುಕೊಂಡರೆ ಇಂಥ ಮನಸ್ಥಿತಿ ನಿಮ್ಮದಾಗಿದ್ದರೆ.. ನಿಮಗೊಂದು ಸಲಹೆ ಇದೆ..

ಶ್.. ಮೌನ ಸಹಿಸಲಾಗದೇ ಹೋದಲ್ಲಿ.. ಮೌನ (ಮಾನ)ವಂತರಾಗದೇ ಹೋದಲ್ಲಿ. ದಯವಿಟ್ಟು ಮನೆಯಲ್ಲಿಯೇ ಇದ್ದು ಬಿಡಿ, ಪ್ರವಾಸ ನಿಮ್ಮಂಥವರಿಗೆ ಖಂಡಿತ ಅಲ್ಲ. ಪ್ರವಾಸ ಹೋಗಲೇಬೇಕಾ? ಹಾಗಿದ್ರೆ.. ಹೋದಲ್ಲಿ.. ಬಾಯ್ ಮುಚ್ಚಿಕೊಂಡಿರು. ಸ್ವಲ್ಪ ತೆಪ್ಪಗಿರುತ್ತಿಯಾ? ಸೈಲೆಂಟ್ ಪ್ಲೀಸ್