Saturday, March 7, 2026
Saturday, March 7, 2026

ಲಾಸ್ಟ್‌ ಅಂಡ್‌ ಫೌಂಡ್‌ ಇನ್‌ ಬೆಂಗಳೂರು ಏರ್‌ಪೋರ್ಟ್‌

ಅಷ್ಟು ಪ್ರಶ್ನೆಗಳನ್ನು ಕೇಳಿದರೂ ಕೊನೆಗೆ ʻಸರಿ ಸರ್ ಪರ್ಫ್ಯೂಮ್ ಬ್ರಾಂಡ್ ಯಾವ್ದು? ಅಂದ! ನನಗೆ ತಲೆಯೆಲ್ಲಾ ಸಿಡಿದಂತೆ ಆಯ್ತು. ಸಿಗದಿರೋ ವಸ್ತುವಿಗೆ ಇಷ್ಟೆಲ್ಲಾ ಬೇಕಾ ಅಂತ ಸಿಟ್ಟು ಬಂತು. ಆದ್ರೂ ತೋರಿಸಿಕೊಳ್ಳದೆ, ʻಸರ್, ನನಗೆ ಪೂರ್ತಿ ಹೆಸರು ನೆನಪಿಲ್ಲ. ಅದೇನೋ Bleu ಅಂತ ಇತ್ತು, ವಾಸನೆ ಚೆನ್ನಾಗಿತ್ತುʼ ಅಂದೆ. ತಕ್ಷಣ ಆ ಕಡೆ ಇದ್ದ ವ್ಯಕ್ತಿ ʻನಿಮ್ಮ ಪರ್ಫ್ಯೂಮ್ ಸಿಕ್ಕಿದೆ ಸರ್. ಪಾಸ್‌ಪೋರ್ಟ್, ಬೋರ್ಡಿಂಗ್ ಪಾಸ್ ತಂದು ತಗೊಂಡು ಹೋಗಿʼ ಅಂದ!

- ಚಂದನ್‌ ಶರ್ಮ

ಕಳೆದ ವಾರ ​ಬೆಂಗಳೂರು ಏರ್ಪೋರ್ಟ್ ಟರ್ಮಿನಲ್-2 ರಲ್ಲಿ ನಾನು ಇಳಿದಾಗ ಬೆಳಗ್ಗೆ 8:30. ಪ್ರಯಾಣದ ವೇಳೆ ನನಗೆ ವಿಮಾನದಲ್ಲಿ ನಿದ್ದೆ ಬರಲ್ಲ. ಜೆಟ್‌ಲ್ಯಾಗ್‌ನಿಂದ ನಾಲ್ಕು ಜನ ಹಿಡ್ಕೊಂಡು ಮೈಯೆಲ್ಲಾ ಜಜ್ಜಿದ ಹಾಗೆ ಸುಸ್ತಾಗಿತ್ತು. ಕೈಯಲ್ಲಿದ್ದ ಮೂರು ಬ್ಯಾಗ್ ಇರೋ ಟ್ರಾಲಿಯನ್ನು ತಳ್ಳಿಕೊಂಡು ಇಮಿಗ್ರೇಷನ್ ಮುಗಿಸಿ ಬರುವಾಗ ʻಡ್ಯೂಟಿ ಫ್ರೀʼ ಕಣ್ಣಿಗೆ ಬಿತ್ತು. ಸಾಮಾನ್ಯವಾಗಿ ನಾನೇನೂ ಅಲ್ಲಿ ಕೊಳ್ಳುವ ಗಿರಾಕಿಯಲ್ಲ. ಆದ್ರೆ ಅಂದು ಯಾಕೋ ನನ್ನ ಅಪ್ಪನಿಗೆ ಒಂದು ಪರ್ಫ್ಯೂಮ್ ಬಾಟಲ್ ಕೊಂಡರೆ ಹೇಗೆ ಎಂದು ಯೋಚಿಸಿ, ಹಾಗೆ ಕಣ್ಣಾಡಿಸಿ ಸುಮಾರು ಐದು ಸಾವಿರ ರುಪಾಯಿಯ ಒಂದು ಪರ್ಫ್ಯೂಮ್ ಖರೀದಿಸಿದೆ. ಅದನ್ನೂ ಕೈಚೀಲದಲ್ಲಿರಿಸಿ ಟ್ರಾಲಿಯ ಮೇಲಿಟ್ಟೆ.

ಇದನ್ನೂ ಓದಿ: ಹಾರುವ ಹಕ್ಕಿಯ ವಿಮಾನ ಯಾನ

​ಅರ್ಧ ಮಂಪರಿನಲ್ಲೇ ಹೊರಗೆ ಬಂದು ಪಿಕ್-ಅಪ್ ಪಾಯಿಂಟ್ ಹತ್ತಿರ ನಿಂತೆ. ಅಪ್ಪ ಗಾಡಿ ತಗೊಂಡು ಬಂದಿದ್ದರು. ಎಲ್ಲಾ ಬ್ಯಾಗ್‌ಗಳನ್ನು ಕಾರಿಗೆ ತುಂಬಿ ಹೊರಟೆವು. ಸ್ವಲ್ಪದೂರ ಹೋಗಿರಬೇಕಷ್ಟೆ, ದಿಗ್ಗನೆ ನೆನಪಾಯಿತು, ʻಅರೆ ನಾನು ಪರ್ಫ್ಯೂಮ್ ಇದ್ದ ಕೈಚೀಲ ಕಾರಿನ ಒಳಗೆ ಇಟ್ನಾ ಇಲ್ವಾ? ಅಂತ. ಇಟ್ಟಿರ್ತೀನಿ ಬಿಡು ಅಂದುಕೊಂಡು ಮನೆಗೆ ಬಂದವನೇ ಡಿಕ್ಕಿ ತೆಗೆದರೆ, ಎಲ್ಲಾ ಬ್ಯಾಗ್‌ಗಳು ಇವೆ. ಆ ಪರ್ಫ್ಯೂಮ್ ಮಾತ್ರ ಇಲ್ಲ!

Untitled design - 2026-03-07T181947.148

​ನನ್ನ ಮಂದ ಬುದ್ಧಿಗೆ ನಾನೇ ಬೈದುಕೊಂಡು ಸುಮ್ಮನಾದೆ. ಪಿಕ್-ಅಪ್ ಪಾಯಿಂಟ್ ಹತ್ತಿರ ನೂರಾರು ಜನ ಇರುತ್ತಾರೆ, ನಾನೋ ಪರ್ಫ್ಯೂಮ್‌ ಅನ್ನು ಟ್ರಾಲಿಯಲ್ಲೇ ಬಿಟ್ಟು ಬಂದಿದ್ದೀನಿ ಅಂದಮೇಲೆ ಇನ್ನು ಸಿಗುವ ಮಾತಿದೆಯಾ? ಅಪ್ಪನಿಗೂ ಈ ವಿಷಯ ಹೇಳದೆ ಮೌನವಾದೆ. ಅಪ್ಪನಿಗಾಗಿ ಕೊಂಡ ವಸ್ತು ಹೀಗಾಯಿತಲ್ಲ ಅಂತ ಒಳಗೊಳಗೇ ಹಿಂಸೆ ಪಟ್ಟುಕೊಂಡೆ. ​ಅಷ್ಟರಲ್ಲಿ ನಾನು ಮನೆಗೆ ಬಂದು ಮೂರು-ನಾಲ್ಕು ಗಂಟೆ ಸಮಯ ಆಗಿತ್ತು. ಅದೇನೋ ನೆನಪಾದಂತೆ ಆಗಿ ಏರ್‌ಪೋರ್ಟ್‌ನಲ್ಲಿ 'ಲಾಸ್ಟ್ ಅಂಡ್ ಫೌಂಡ್' ಏನಾದರೂ ಇದೆಯೇ ಅಂತ ಹುಡುಕಾಡಿದೆ. ಕೈಚೀಲ ಸಿಗುವ ಯಾವ ಭರವಸೆ ಇರಲಿಲ್ಲ. ಆದರೂ ಒಂದು ಪ್ರಯತ್ನ ಇರಲಿ ಅಂತ ಕಾಲ್ ಮಾಡಿದೆ. ಮೂರು ಸಲ ರಿಂಗಾಯಿತು, ನಾಲ್ಕನೇ ಸಲಕ್ಕೆ ಒಬ್ಬ ಫೋನ್ ಎತ್ತಿ, ʻಸರ್ ನಿಮ್ಮ ರಿಕ್ವೆಸ್ಟ್ ತಗೊಂಡಿದ್ದೀನಿ ಸಿಕ್ಕರೆ ನಾವೇ ಕಾಲ್ ಮಾಡ್ತೀವಿʼ ಅಂದ.

​ಮಾತುಕತೆ ಮುಗಿಸಿ ಫೋನ್‌ ಇಟ್ಟೆ. ಹತ್ತು ನಿಮಿಷ ಕಳೆದಿರಬೇಕು, ನಾನು ಕರೆ ಮಾಡಿದ್ದ ನಂಬರ್‌ನಿಂದಲೇ ಫೋನ್ ಬಂತು! ʻಸರ್, ಚಂದನ್ ಅವರಾ?ʼ ನನ್ನ ಹೆಸರು ʻಅಮಲ್ʼ ಅಂದ. ʻಹೂʼ ಅಂದೆ. ಪಾಸ್‌ಪೋರ್ಟ್‌ನಲ್ಲಿರೋ ಪೂರ್ತಿ ಹೆಸರು ಹೇಳಿ, ಕೈಚೀಲ ಕಳದುಕೊಂಡಿದ್ದು ಯಾವಾಗ? ಯಾವ ಪಿಕ್ ಅಪ್ ಪಾಯಿಂಟ್? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ. ಎಲ್ಲದಕ್ಕೂ ಉತ್ತರ ಕೊಟ್ಟೆ.

ಅಷ್ಟು ಪ್ರಶ್ನೆಗಳನ್ನು ಕೇಳಿದರೂ ಕೊನೆಗೆ ʻಸರಿ ಸರ್ ಪರ್ಫ್ಯೂಮ್ ಬ್ರಾಂಡ್ ಯಾವ್ದು? ಅಂದ! ​ನನಗೆ ತಲೆಯೆಲ್ಲಾ ಸಿಡಿದಂತೆ ಆಯ್ತು. ಸಿಗದಿರೋ ವಸ್ತುವಿಗೆ ಇಷ್ಟೆಲ್ಲಾ ಬೇಕಾ ಅಂತ ಸಿಟ್ಟು ಬಂತು. ಆದ್ರೂ ತೋರಿಸಿಕೊಳ್ಳದೆ, ʻಸರ್, ನನಗೆ ಪೂರ್ತಿ ಹೆಸರು ನೆನಪಿಲ್ಲ. ಅದೇನೋ Bleu ಅಂತ ಇತ್ತು, ವಾಸನೆ ಚೆನ್ನಾಗಿತ್ತುʼ ಅಂದೆ. ​ತಕ್ಷಣ ಆ ಕಡೆ ಇದ್ದ ವ್ಯಕ್ತಿ ʻನಿಮ್ಮ ಪರ್ಫ್ಯೂಮ್ ಸಿಕ್ಕಿದೆ ಸರ್. ಪಾಸ್‌ಪೋರ್ಟ್, ಬೋರ್ಡಿಂಗ್ ಪಾಸ್ ತಂದು ತಗೊಂಡು ಹೋಗಿʼ ಅಂದ!

ಅಣ್ಣೋ ನಿದ್ದೆ ಎಳೀತಾ ಇದೆ ತಮಾಷೆ ಮಾಡಬೇಡಿ ಅಂದೆ. ಅದಕ್ಕೆ ಆತ ʻಇಲ್ಲ ಸರ್, ನಿಜಕ್ಕೂ ನಿಮ್ಮ ಪರ್ಫ್ಯೂಮ್‌ ಇರುವ ಕೈಚೀಲ ಸಿಕ್ಕಿದೆ. ನಮ್ಮ ಕೆಲಸವೇ ಕಳೆದುಕೊಂಡದ್ದನ್ನು ವಾಪಸ್ ಕೊಡೋದುʼಅಂದ!

Untitled design - 2026-03-07T182004.861

ನಮ್ಮ ಮನೆ ಅಲ್ಲಿಂದ ಬಹಳ ದೂರವಿದ್ದುದರಿಂದ ನಾಳೆ ಅದನ್ನು ತೆಗೆದುಕೊಳ್ಳುವುದಾಗಿ ವಿನಂತಿಸಿದೆ. ಅದಕ್ಕೆ ಅವರು ಒಪ್ಪಿಗೆಯನ್ನೂ ನೀಡಿದರು. ​ಮರುದಿನವೂ ನನಗೆ ಅಲ್ಲಿಗೆ ಹೋಗೋಕೆ ಆಗಲಿಲ್ಲ. ನಾಲ್ಕು ದಿನ ಬಿಟ್ಟು ಹೋದೆ. ಟರ್ಮಿನಲ್-2ರ ಪಕ್ಕದಲ್ಲೇ ಪುಟ್ಟದಾದ ʻಲಾಸ್ಟ್ ಅಂಡ್ ಫೌಂಡ್ʼ ಜಾಗ ಇದೆ. ಜನ ಕಳೆದುಕೊಂಡ ವಸ್ತುಗಳನ್ನೆಲ್ಲಾ ಇಲ್ಲಿ ನೀಟಾಗಿ ಜೋಡಿಸಿದ್ದಾರೆ. ಎಲ್ಲದಕ್ಕೂ ಒಂದು ರೆಫರೆನ್ಸ್ ನಂಬರ್ ಇದೆ. ನನ್ನ ಬೋರ್ಡಿಂಗ್ ಪಾಸ್ ನೋಡಿ, ಒಂದು ಫೊಟೋ ತೆಗೆದು, ನಗುನಗುತ್ತಾ ನನ್ನ ಪರ್ಫ್ಯೂಮ್ ಬಾಟಲಿ ನನಗೆ ಕೊಟ್ಟರು!

I was impressed!

ʻಅಲ್ಲ ಕಣಣ್ಣೋ, ದೂರದ ಊರಿನಲ್ಲಿ ಇರೋರೂ ಇಲ್ಲಿಗೇ ಬಂದು ತಗೋಬೇಕಾ? ಕಷ್ಟ ಆಯ್ತದೆ ಕಣಣ್ಣೋʼ ಅಂದೆ. ʻಇಲ್ಲ ಅಗತ್ಯವಿದ್ದರೆ ಕೊರಿಯರ್ ಮಾಡ್ತೀವಿ ಸರ್ʼ ಅಂದ!

So amazing!

​ಬೆಂಗಳೂರಿನಲ್ಲಿ ಇದ್ದುಕೊಂಡು, ವಿಮಾನದಲ್ಲಿ ನೂರಾರು ಬಾರಿ ಓಡಾಡಿಯೂ ಇಂಥದೊಂದು ಅಚ್ಚುಕಟ್ಟಾದ ವ್ಯವಸ್ಥೆ ಇರೋದು ನನಗೆ ಗೊತ್ತೇ ಇರಲಿಲ್ಲ. ಏನನ್ನಾದರೂ ಕಳೆದುಕೊಂಡಾಗಲೇ ಗಳಿಸಲು ಸಾಧ್ಯ ಅನ್ನೋದು ಮತ್ತೊಮ್ಮೆ ನಿಜವಾಯಿತು. ​ಈ ಸಲ ನಾನು ಗಳಿಸಿದ್ದು ಅನುಭವ ಮತ್ತು ಘಮಲು. ಬರೀ ಪರ್ಫ್ಯೂಮ್ ಮಾತ್ರ ಅಲ್ಲ. ನಮ್ಮ ಬೆಂಗಳೂರು ಏರ್‌ಪೋರ್ಟ್‌ನ ಘಮಲೂ ಅದ್ಭುತ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat