ಪ್ರವಾಸೋದ್ಯಮ ಎನ್ನುವುದು ಒಂದಿಷ್ಟು ದೇಶಗಳಿಗೆ ಕೇವಲ ಒಂದು ಉದ್ಯಮ ಅಲ್ಲ. ಅದು ಅವರ ಆರ್ಥಿಕತೆಯ ಉಸಿರು. ವಿಮಾನ ನಿಲ್ದಾಣಕ್ಕೆ ಇಳಿಯುವ ಪ್ರತಿಯೊಬ್ಬ ಪ್ರವಾಸಿಗ, ಹೊಟೇಲ್‌ನಲ್ಲಿ ಕಾಫಿ ಕುಡಿಯುವ ಪ್ರತಿಯೊಬ್ಬ ಅತಿಥಿ, ಕಡಲತೀರದಲ್ಲಿ ಫೊಟೋ ತೆಗೆಯುವ ಪ್ರತಿಯೊಬ್ಬ ಯುವಕ ಮಾಡುವ ಖರ್ಚಿನ ಹಿಂದೆ ಒಂದು ದೇಶದ ಬದುಕು ನಿಂತಿರುತ್ತದೆ.

ಇತ್ತೀಚೆಗೆ ವೊರೊನಾಯ್ ಎಂಬ ಟ್ರಾವೆಲ್ ಸುದ್ದಿಗಳ ಅಪ್ಲಿಕೇಶನ್ ಒಂದು ಇಂಟರೆಸ್ಟಿಂಗ್ ಅಂಕಿಅಂಶವನ್ನು ಹಂಚಿಕೊಂಡಿತ್ತು. ಅದರಲ್ಲಿ ವಿಶ್ವದ ಯಾವ ಯಾವ ದೇಶಗಳು ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿವೆ ಎಂಬ ಮಾಹಿತಿಗಳಿದ್ದವು. ಈ ಅಂಕಿಅಂಶ ನೋಡಿದಾಗ ಹಲವಾರು ಪ್ರಶ್ನೆಗಳು ಉದ್ಭವವಾದವು. ದೇಶವೊಂದರ ಆರ್ಥಿಕತೆ ಕೇವಲ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗುವುದು ಕ್ಷೇಮವಾ? ದೇಶದ ಆರ್ಥಿಕತೆ ಸುಭದ್ರವಾಗಿರಬೇಕು ಅಂದರೆ ಪರ್ಯಾಯ ಉದ್ಯಮಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆಯಾ? ಪ್ರವಾಸೋದ್ಯಮಕ್ಕೆ ಇರುವ ಕಂಟಕಗಳು ಯಾವುವು?ಒಂದು ವೇಳೆ ದಿಢೀರ್ ಪ್ರವಾಸೋದ್ಯಮ ನಿಂತು ಹೋದರೆ ಆ ದೇಶದ ಭವಿಷ್ಯವೇನು?

ಇದನ್ನೂ ಓದಿ: ಚೌಕಾಸಿ ಮಾಡಿ ನೋಡು

ಇಂದಿನ ಜಗತ್ತು ಹೇಗೆ ಅಂದರೆ ಇಲ್ಲಿ ಯಾವ ಮನುಷ್ಯನೂ ಒಂದೇ ಆದಾಯದ ಮೇಲೆ ಡಿಪೆಂಡ್ ಆಗಿ ಅದನ್ನು ನಂಬಿಕೊಂಡು ಇರುವಂತಿಲ್ಲ. ಕೇವಲ ಒಂದು ಮೂಲದ ಆದಾಯ ಸಾಕಾಗುವುದೂ ಇಲ್ಲ. ಅದಕ್ಕಿಂತ ಹೆಚ್ಚಾಗಿ ಅಕಸ್ಮಾತ್ ಆ ಆದಾಯ ನಿಂತುಹೋದರೆ ಅದು ಬದುಕನ್ನು ಡೆಡ್ ಎಂಡಿಗೆ ತಂದು ನಿಲ್ಲಿಸಿಬಿಡುತ್ತದೆ. ಇದು ದೇಶಕ್ಕೂ ಅನ್ವಯ.

ನಾನು ಕಳೆದೊಂದು ವರ್ಷದಲ್ಲಿ ಭೇಟಿ ನೀಡಿದ ದೇಶಗಳ ಸಂಖ್ಯೆ ಮೂರು. ವಿಯೆಟ್ನಾಂ, ಇಸ್ರೇಲ್ ಮತ್ತು ಶ್ರೀಲಂಕಾ. ಶ್ರೀಲಂಕಾದ ಎಕಾನಮಿ ಬಹುವಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದೆ. ವಿಯೆಟ್ನಾಂಗೂ ಪ್ರವಾಸಿಗರೇ ಅನ್ನದಾತರು. ಆದರೆ ಇಸ್ರೇಲ್ ಹಾಗಲ್ಲ. ಇಸ್ರೇಲ್ ಗೆ ಪ್ರವಾಸೋದ್ಯಮವೂ ಒಂದು ಉದ್ಯಮ. ಹಾಗಂತ ಅದು ಪ್ರವಾಸೋದ್ಯಮವನ್ನು ಕಡೆಗಣಿಸುವುದಿಲ್ಲ. ಅದರ ಉನ್ನತಿಗೆ ಪ್ರತಿನಿತ್ಯ ಶ್ರಮ ಹಾಕುತ್ತಲೇ ಇರುತ್ತದೆ. ಏಕೆಂದರೆ ಯಾವುದೇ ದೇಶದ ಪಾಲಿಗೆ ಪ್ರವಾಸೋದ್ಯಮ ಕೇವಲ ಆರ್ಥಿಕತೆಯ ವಿಷಯವಾಗಿರುವುದಿಲ್ಲ. ಅದು ಆ ದೇಶ ಹೊರಗಿನವರಿಗೆ ಸೇಫ್ ಎಂಬ ಮೆಸೇಜನ್ನೂ ಪಾಸ್ ಮಾಡುವ ಸಂಗತಿಯಾಗಿರುತ್ತದೆ.

ರೀಜನರೇಟಿವ್ ಟೂರಿಸಂ ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ (5)

ಈಗ ನಾನು ಮೇಲೆ ಹೆಸರಿಸಿದ ಮೂರು ದೇಶಗಳನ್ನು ಬಿಟ್ಟು ಹಲವಾರು ದೇಶಗಳು ಕೇವಲ ಪ್ರವಾಸೋದ್ಯಮವೆಂಬ ತಳಹದಿಯ ಮೇಲೆಯೇ ನಿಂತಿವೆ. ಹೌದು. ಕೆಲವು ದೇಶಗಳಲ್ಲಿ ಪ್ರವಾಸೋದ್ಯಮದ ಆದಾಯ ಜಿಡಿಪಿಯ 20% ಗಿಂತಲೂ ಹೆಚ್ಚು. ಕೆಲವು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಇದು 40% ಗಿಂತ ಹೆಚ್ಚಿದೆ. ಮೆಕಾವೊ ಎಂಬ ಸಣ್ಣ ಪ್ರದೇಶದ ಬೊಕ್ಕಸಕ್ಕೆ ಪ್ರವಾಸೋದ್ಯಮದಿಂದಲೇ GDPಯ 70% ಕ್ಕೂ ಹೆಚ್ಚು ಬರುತ್ತದೆ. ಕೆರಿಬಿಯನ್ ದ್ವೀಪ ರಾಷ್ಟ್ರಗಳು, ಮಾಲ್ಡೀವ್ಸ್, ಅರಬ್ ದೇಶಗಳು, ಬಹಾಮಾಸ್, ಫಿಜಿ ಮುಂತಾದ ಅನೇಕ ದೇಶಗಳ ಆರ್ಥಿಕತೆಯಲ್ಲೂ ಪ್ರವಾಸೋದ್ಯಮವೇ ಪ್ರಧಾನ ಶಕ್ತಿ. ಯುದ್ಧವಿಲ್ಲ, ಕಾರ್ಖಾನೆ ಮಾಲಿನ್ಯವಿಲ್ಲ, ಕೇವಲ ಪ್ರಕೃತಿಯನ್ನು ಮಾರಾಟಮಾಡಿ ಹಣ ಸಂಪಾದಿಸುವ ಪ್ರವಾಸೋದ್ಯಮ ಸೂಪರ್ ಅಲ್ವಾ ಎಂದು ನಮಗನಿಸಬಹುದು. ಆದರೆ ಹಾಗೆ ನಂಬಿಕೊಂಡಿರುವ ಪ್ರವಾಸೋದ್ಯಮ ಏಕಾಏಕಿ ಕುಸಿದರೆ ಗತಿ? ಅರೇಬಿಯಾದ GDP ಕೋವಿಡ್ ಅವಧಿಯಲ್ಲಿ 24% ಕುಸಿದಿತ್ತು. ಪ್ರವಾಸಿಗರ ಮೇಲೆ ಅತಿಯಾದ ಅವಲಂಬನೆ ಎಷ್ಟು ಅಪಾಯಕಾರಿ ಎನ್ನುವುದನ್ನು ಅದು ಜಗತ್ತಿಗೆ ತೋರಿಸಿತು. ಅಂದರೆ ಈ ದೇಶಗಳಿಗೆ ಪ್ರವಾಸೋದ್ಯಮ ಕೇವಲ ಒಂದು ಉದ್ಯಮವಲ್ಲ; ಅದು ಅವರ ಆರ್ಥಿಕ ಉಸಿರು. ಪ್ರವಾಸಿಗರು ಬಂದರೆ ದೇಶ ಉಸಿರಾಡುತ್ತದೆ. ಬರದೇ ಹೋದರೆ ಸಂಪೂರ್ಣ ವ್ಯವಸ್ಥೆಯೇ ತತ್ತರಿಸುತ್ತದೆ.

ಒಂದು ಕ್ಷಣ ಕೋವಿಡ್ ದಿನಗಳನ್ನು ನೆನಪಿಸಿಕೊಳ್ಳಿ. ಕೊರೋನಾ ಎಂಬ ಒಂದು ಚಿಕ್ಕ ವೈರಸ್ ಇಡೀ ಚಲನಶೀಲ ಜಗತ್ತನ್ನು ಸ್ತಬ್ಧಗೊಳಿಸಿಬಿಟ್ಟಿತು. ವಿಮಾನಗಳು ಹಾರಲಿಲ್ಲ. ಹೊಟೇಲ್‌ಗಳು ಬಾಗಿಲು ಮುಚ್ಚಿದವು. ಸಮುದ್ರ ತೀರಗಳು ಖಾಲಿ ಹೊಡೆಯತೊಡಗಿದವು. ಕಾರಣ ಪ್ರವಾಸೋದ್ಯಮ ಎಂಬುದು ಕೋಮಾಗೆ ಹೋಗಿತ್ತು.

ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಗಳ ಪಟ್ಟಿಯಲ್ಲಿ ಅಂಡೋರಾ, ಅರುಬಾ, ಮಾಲ್ಡೀವ್ಸ್, ಬಹಾಮಾಸ್, ಸೇಂಟ್ ಲೂಸಿಯಾ, ಸೆಶೆಲ್ಸ್ ಮುಂತಾದ ಸಣ್ಣ ದೇಶಗಳು ಪ್ರಮುಖವಾಗಿವೆ. ಇವುಗಳಲ್ಲಿ ಕೈಗಾರಿಕೆ, ಕೃಷಿ, ತಂತ್ರಜ್ಞಾನ ಇವೆಲ್ಲವೂ ಬಹಳ ಸೀಮಿತ. ಆದರೆ ಪ್ರಕೃತಿ ಸೌಂದರ್ಯ, ಹೆರಿಟೇಜ್, ರೆಸಾರ್ಟ್, ಹೊಟೇಲ್, ಮೋಜು ಮಸ್ತಿ ಇವೆಲ್ಲವೂ ಅಧಿಕ ಎಂಬಷ್ಟು ತುಂಬಿತುಳುಕುತ್ತಿವೆ.

ರೀಜನರೇಟಿವ್ ಟೂರಿಸಂ ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ (6)

ಮಾಲ್ಡೀವ್ಸ್ ಅನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಜಗತ್ತಿನ ಅನೇಕ ಶ್ರೀಮಂತರು ಸ್ವರ್ಗ ಎಂದು ನೋಡುವ ಈ ದೇಶ, ಕೋವಿಡ್ ಸಮಯದಲ್ಲಿ ಪ್ರವಾಸಿಗರ ಬರದಿಂದಾಗಿ ಆರ್ಥಿಕವಾಗಿ ಬಡವಾಗಿಬಿಟ್ಟಿತ್ತು. ಭಾರತದೊಂದಿಗಿನ ಅದರ ಒಂದು ತಪ್ಪು ರಾಜತಾಂತ್ರಿಕ ನಡೆ ಪ್ರವಾಸೋದ್ಯಮವನ್ನೇ ಮುಳುಗಿಸಿ ಆರ್ಥಿಕತೆಗೆ ಪೆಟ್ಟುಕೊಟ್ಟಿತ್ತು. ವಿಮಾನ ನಿಲ್ದಾಣದಿಂದ ಹಿಡಿದು ಸ್ಪೀಡ್‌ಬೋಟ್, ಡೈವಿಂಗ್ ಸೆಂಟರ್, ರೆಸಾರ್ಟ್, ಮೀನುಗಾರಿಕೆ .. ಈ ಎಲ್ಲವೂ ನಿಂತದ್ದು ಅಲ್ಲಿಗೆ ಬರುವ ಪ್ರವಾಸಿಗರ ಮೇಲೆ. ಅದೇ ಐಸಿಯು ಸೇರಿತೆಂದರೆ, ಅದನ್ನೇ ನಂಬಿಕೊಂಡ ದೇಶದ ಪ್ರಜ್ಞೆ ತಪ್ಪಿದಂತೆಯೇ ಅಲ್ಲವೇ?

ಒಂದು ದೇಶದ ಆರ್ಥಿಕತೆ ಸಂಪೂರ್ಣವಾಗಿ ಪ್ರವಾಸೋದ್ಯಮದ ಮೇಲೆ ನಿಂತರೆ ಆಗುವ ಅಪಾಯವೇ ಇದು.

ಪ್ರವಾಸೋದ್ಯಮ ಎಷ್ಟು ಬೇಗ ಹಣ ತರಬಹುದೋ, ಅಷ್ಟೇ ಬೇಗ ಬರ್ಬಾದ್ ಕೂಡ ಮಾಡಬಹುದು. ಯುದ್ಧ, ಕೋವಿಡ್, ಭಯೋತ್ಪಾದನೆ, ರಿಸೆಶನ್, ಹವಾಮಾನ ವೈಪರೀತ್ಯ, ಇವೆಲ್ಲವೂ ಮೊದಲು ಹೊಡೆದಾಕುವುದು ಪ್ರವಾಸೋದ್ಯಮವನ್ನೇ. ಪ್ರವಾಸೋದ್ಯಮದಲ್ಲಿ ಕೇವಲ ಹಣ ಮಾತ್ರ ಇರುವುದಿಲ್ಲ; ಅದರ ಜೊತೆ ಅನಿಶ್ಚಿತತೆಯೂ ಇರುತ್ತದೆ. ಒಂದು ವೈರಸ್, ಒಂದು ಯುದ್ಧ, ಒಂದು ಭೂಕಂಪ, ಒಂದು ರಾಜಕೀಯ ಅಶಾಂತಿ… ಸಾಕು. ವಿಮಾನ ಟಿಕೆಟ್ ಬುಕಿಂಗ್‌ಗಳು ಕ್ಷಣಮಾತ್ರದಲ್ಲಿ ರದ್ದು. ಹೊಟೇಲ್‌ಗಳು ಖಾಲಿ. ಸಾವಿರಾರು ಜನರ ಉದ್ಯೋಗ ಅಪಾಯದಲ್ಲಿ!

ಶ್ರೀಲಂಕಾ ಉದಾಹರಣೆ ಇನ್ನೂ ಕಣ್ಣ ಮುಂದೆಯೇ ಇದೆ. ರಾಜಕೀಯ ಮತ್ತು ಆರ್ಥಿಕ ಸಂಕಷ್ಟದ ಸಮಯದಲ್ಲಿ ಪ್ರವಾಸೋದ್ಯಮ ಕುಸಿದಾಗ ದೇಶದ ವಿದೇಶಿ ವಿನಿಮಯ ಸಂಪಾದನೆಗೆ ದೊಡ್ಡ ಹೊಡೆತ ಬಿದ್ದಿತು. ಅದೇ ರೀತಿ ಥೈಲ್ಯಾಂಡ್, ಗ್ರೀಸ್, ಸ್ಪೇನ್ ಮುಂತಾದ ದೇಶಗಳೂ ಕೋವಿಡ್ ಅವಧಿಯಲ್ಲಿ ಭಾರಿ ಹೊಡೆತ ತಿಂದವು.

ಪ್ರವಾಸೋದ್ಯಮವೇ ಹಲವಾರು ದೇಶಗಳನ್ನು ಬಡತನದಿಂದ ಹೊರತಂದಿರುವ ಉದಾಹರಣೆಗಳೂ ಇವೆ. ಎಲ್ಲ ಅಂತೇನಿಲ್ಲ. ಒಮ್ಮೆ ಯೂರೋಪಿನ ಬಡ ರಾಷ್ಟ್ರ ಎಂದು ಪರಿಗಣಿಸಲ್ಪಟ್ಟಿದ್ದ ಪೋರ್ಚುಗಲ್ ಇಂದು ಪ್ರವಾಸೋದ್ಯಮದಿಂದ ಹೊಸ ಜೀವ ಪಡೆದಿದೆ. ಅಲ್ಬೇನಿಯಾ ಈಗ ಹೊಸ ಯುರೋಪಿಯನ್ ಡೆಸ್ಟಿನೇಶನ್ ಆಗಿ ಬೆಳೆಯುತ್ತಿದೆ.

ಕೈಗಾರಿಕೆ ಇಲ್ಲದ ಪ್ರದೇಶಗಳಲ್ಲಿ ಪ್ರವಾಸೋದ್ಯಮವೇ ಉದ್ಯೋಗ ಸೃಷ್ಟಿಕರ್ತ. ವಿಶ್ವದ ಅನೇಕ ಸರ್ಕಾರಗಳು ಈಗ ಪ್ರವಾಸೋದ್ಯಮವನ್ನು ಐಷಾರಾಮಿ ಕ್ಷೇತ್ರವಲ್ಲ, ಅದೊಂದು ಆರ್ಥಿಕ ಮೂಲಸೌಕರ್ಯ ಎಂದು ಪರಿಗಣಿಸುತ್ತಿವೆ.

ವಿಶ್ವ ಪ್ರವಾಸೋದ್ಯಮ ಮಂಡಳಿ ಪ್ರಕಾರ, 2019ರಲ್ಲಿ ಜಾಗತಿಕ ಜಿಡಿಪಿ ಯ ಸುಮಾರು 10% ಪ್ರವಾಸೋದ್ಯಮದಿಂದಲೇ ಬಂದಿತ್ತು. ಜಗತ್ತಿನ ಉದ್ಯೋಗಗಳಲ್ಲಿ ಪ್ರತಿ ಹತ್ತು ಉದ್ಯೋಗಗಳಲ್ಲಿ ಒಂದು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ್ದಾಗಿತ್ತು. ಎಲ್ಲವೂ ಸತ್ಯ.

ಆದರೆ ಅದನ್ನೇ ನಂಬಿಕೊಂಡರೆ ಸಾಕಾ?

ಭಾರತವನ್ನು ಗಮನಿಸಿ ನೋಡಿ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗೋವಾದಿಂದ ಗಂಗೋತ್ರಿವರೆಗೆ—ಪ್ರವಾಸೋದ್ಯಮ ಈಗ ಭಾರತಕ್ಕೆ ಕೇವಲ ಮನೋರಂಜನೆ ಕ್ಷೇತ್ರವಲ್ಲ. ಅದು ವಿದೇಶಿ ವಿನಿಮಯ, ಸ್ಥಳೀಯ ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಸ್ಕೃತಿಯ ಬೆಳವಣಿಗೆಯ ದೊಡ್ಡ ಸಾಧನ. ಆದರೆ ಭಾರತದ ಸ್ಟ್ರೆಂತ್ ಏನೆಂದರೆ, ನಮ್ಮ ಆರ್ಥಿಕತೆ ಸಂಪೂರ್ಣವಾಗಿ ಪ್ರವಾಸೋದ್ಯಮದ ಮೇಲೆ ನಿಂತಿಲ್ಲ. ಅಮೆರಿಕ, ಚೀನಾ, ಭಾರತಗಳಂಥ ದೊಡ್ಡ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮದ ಕೊಡುಗೆ ದೊಡ್ಡದಾದರೂ ಅದು ಸಂಪೂರ್ಣ ಆರ್ಥಿಕತೆಯನ್ನು ನಿಯಂತ್ರಿಸುವುದಿಲ್ಲ. ಇಲ್ಲಿ ಕೃಷಿ, ಉತ್ಪಾದನೆ, ತಂತ್ರಜ್ಞಾನ, ಸೇವಾ ವಲಯಗಳು ಕೂಡ ಸಮಾನವಾಗಿ ಬಲವಾಗಿವೆ. ಅದರರ್ಥ ಏನು? ನಾವು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಆದರೆ ಅದರ ಮೇಲೆ ಪೂರ್ತಿಯಾಗಿ ಅವಲಂಬಿತವಾಗಬಾರದು.

ಇದಕ್ಕಿಂತ ಇನ್ನೊಂದು ದೊಡ್ಡ ಸಮಸ್ಯೆ ಇದೆ. ಅದು ಓವರ್ ಟೂರಿಸಂ!

ಯುರೋಪಿನ ಅನೇಕ ನಗರಗಳು ಈಗ ಪ್ರವಾಸಿಗರ ಭಾರದಿಂದ ನರಳುತ್ತಿವೆ. ಬಾರ್ಸಿಲೋನಾ, ಲಿಸ್ಬನ್, ವೆನಿಸ್, ಗ್ರೀಸ್‌ನ ದ್ವೀಪಗಳ ಪಾಲಿಗೆ ಪ್ರವಾಸಿಗರು ಶತ್ರುಗಳಾಗಿಬಿಟ್ಟಿದ್ದಾರೆ. ಇಲ್ಲಿ ಸ್ಥಳೀಯರು ತಮ್ಮ ಊರು ತಮ್ಮ ಊರಾಗಿ ಉಳಿದಿಲ್ಲ ಎಂದು ದೂರುತ್ತಿದ್ದಾರೆ. ಪ್ರವಾಸಿಗರಿಂದಾಗಿ ತಾವು ನಿರ್ಲಕ್ಷಿಸಲ್ಪಡುತ್ತಿದ್ದೇವೆ, ತಮಗೆ ತಮ್ಮ ಊರು ದುಬಾರಿಯಾಗುತ್ತಿದೆ ಎಂದು ದುಃಖಿಸುತ್ತಿದ್ದಾರೆ. ತನ್ನ ಸ್ವಾಭಾವಿಕ ಚೆಲುವು ಮತ್ತು ಅಸ್ಮಿತೆಯಿಂದ ಪ್ರವಾಸಿ ತಾಣವಾದ ಊರು, ಈಗ ಪ್ರವಾಸಿಗರಿಗಾಗಿ ರೂಪಾಂತರಗೊಳ್ಳುತ್ತಿದೆ ಎಂಬ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು. ಒಂದು ಕಾಲದಲ್ಲಿ ಸ್ಥಳೀಯರ ಬದುಕಿನ ಭಾಗವಾಗಿದ್ದ ಪ್ರದೇಶಗಳು ಈಗ ಇನ್ ಸ್ಟಾ ಪೋಸ್ಟ್‌ಗಳ ಬ್ಯಾಗ್ರೌಂಡ್ ಆಗಿ ಬದಲಾಗುತ್ತಿದೆ.

ಪ್ರವಾಸೋದ್ಯಮದಿಂದ ಬರುವ ಹಣ ಬಹಳ ಆಕರ್ಷಕ. ಸರ್ಕಾರಗಳಿಗೆ ಅದು ಸುಲಭದ ಆದಾಯ. ದೊಡ್ಡ ಕಾರ್ಖಾನೆಗಳ ಕಟ್ಟುವ ಅವಶ್ಯಕತೆ ಇಲ್ಲ. ಪ್ರಕೃತಿ, ಕಡಲತೀರ, ಸಂಸ್ಕೃತಿ, ಹಬ್ಬಗಳು, ಇವುಗಳನ್ನೇ ಉತ್ಪನ್ನವನ್ನಾಗಿ ಮಾಡಬಹುದು. ಆದರೆ ಅದು ಯಾವಾಗ ಅತಿಯಾಗುತ್ತದೋ ಅಂದಿನ ತನಕ ಅಮೃತವಾಗಿದ್ದು ಅಂದಿನಿಂದ ವಿಷವಾಗಲು ತೊಡಗುತ್ತದೆ

ಕೆಲವು ದೇಶಗಳಲ್ಲಂತೂ ಸ್ಥಳೀಯ ಹಬ್ಬಗಳಿಗೂ ಪ್ರವಾಸಿಗರ ಟೈಮ್‌ಟೇಬಲ್ ಪ್ರಭಾವ ಬೀರುತ್ತಿದೆ. ಮೂಲ ಸಂಸ್ಕೃತಿಗಿಂತ ಫೊಟೋಗೆ ಚೆನ್ನಾಗಿ ಕಾಣಬೇಕು ಎನ್ನುವುದು ಮುಖ್ಯವಾಗಿ ಸ್ಥಳೀಯತೆಯೇ ಮಾಯವಾಗುತ್ತಿದೆ. ಒಂದು ಊರು ತನ್ನ ಆತ್ಮವನ್ನೇ ಪ್ರವಾಸೋದ್ಯಮಕ್ಕೆ ಬಾಡಿಗೆಗೆ ಕೊಡುತ್ತಿರುವಂತಾಗುತ್ತಿದೆ.

ಹಾಗೇನಾದರೂ ಆಗಿ ಪ್ರವಾಸೋದ್ಯಮ ನಿಂತು ಹೋದರೆ, ಆ ಊರಿಗೆ/ದೇಶಕ್ಕೆ ಪರ್ಯಾಯವೇನು?

AG-Group-Tourism

ಟೂರಿಸಮ್ಮನ್ನು ನಕಾರಾತ್ಮಕವಾಗಿ ನೋಡುತ್ತಿರುವ ಬರಹವಲ್ಲ ಇದು. ಪ್ರವಾಸೋದ್ಯಮ ಅನೇಕ ಸಣ್ಣ ರಾಷ್ಟ್ರಗಳಿಗೆ ಬದುಕಿನ ದಾರಿ. ಉದ್ಯೋಗ, ವಿದೇಶಿ ವಿನಿಮಯ, ಮೂಲಸೌಕರ್ಯ ಅಭಿವೃದ್ಧಿ, ಇವೆಲ್ಲದಕ್ಕೂ ಕಾರಣವಾಗಿದೆ. ಆದರೆ ಅದೊಂದೇ ಸಾಕು ಎನ್ನುವುದು ಅಪಾಯಕಾರಿ ಮನಸ್ಥಿತಿ. ವಿಶೇಷವಾಗಿ ದ್ವೀಪ ರಾಷ್ಟ್ರಗಳು ಈ ಸತ್ಯ ಅರ್ಥ ಮಾಡಿಕೊಂಡು ಪರ್ಯಾಯ ಆದಾಯದ ಮಾರ್ಗವನ್ನು ಹುಡುಕಬೇಕು.

ಪ್ರವಾಸೋದ್ಯಮವೆಂದರೆ ಕೇವಲ ಹಣ ಅಲ್ಲ. ಅದು ಜನ, ಸಂಸ್ಕೃತಿ, ಪ್ರಕೃತಿ ಮತ್ತು ಸ್ಥಳೀಯ ಬದುಕಿನ ನಡುವೆ ನಡೆಯುವ ಸೂಕ್ಷ್ಮ ಸಮತೋಲನ. ಈ ಸಮತೋಲನ ಕಳೆದುಹೋದರೆ, ಪ್ರವಾಸಿಗರೇನೋ ಇರುತ್ತಾರೆ, ಬರುತ್ತಾರೆ. ಆದರೆ ಅವರು ನೋಡಲು ಬಂದಿರುವ ಆ ಪ್ರವಾಸಿತಾಣವೇ ಮಾಯವಾಗಿರುತ್ತದೆ. ಪ್ರವಾಸೋದ್ಯಮ ಒಂದು ದೇಶವನ್ನು ಶ್ರೀಮಂತಗೊಳಿಸಬಹುದು. ಆದರೆ ಅದೇ ಸಮಯದಲ್ಲಿ ಅತಿಯಾದ ಅವಲಂಬನೆ ಅಥವಾ ಅತಿಯಾದ ಪ್ರವಾಸೋದ್ಯಮ ಆ ದೇಶವನ್ನು ಅಪಾಯಕ್ಕೂ ತಳ್ಳಬಹುದು.

ಪ್ರವಾಸೋದ್ಯಮವನ್ನು ಪ್ರೀತಿಸುವುದರ ಜೊತೆಗೆ, ಅದರ ಮೇಲಿನ ಅವಲಂಬನೆಯನ್ನು ಸಮತೋಲನದಲ್ಲಿ ಇಡುವ ದೇಶಗಳು ಯಶಸ್ವಿ ದೇಶಗಳಾಗುತ್ತವೆ. ಪ್ರವಾಸೋದ್ಯಮ ದೇಶಕ್ಕೆ ಹಣ ತರುತ್ತದೆ. ಆದರೆ ಆ ದೇಶದ ಸ್ಥಿರತೆಯನ್ನು ಉಳಿಸುವುದು ಅದರ ವೈವಿಧ್ಯಮಯ ಆರ್ಥಿಕತೆಯೇ.