ಗೋಳು ಮರೆಸುವ ಗೋಳದಲ್ಲೊಂದು ದಿನ!
ಗ್ಲೋಬ್ ಮ್ಯೂಸಿಯಂ ಅನ್ನು ಅನುಭವಿಸುವುದು ಒಂದು ಭಾವಪೂರ್ಣ ಕವಿತೆಯನ್ನು ಓದಿದಂತೆ. ಮುಕ್ಕಾಲು ಗಂಟೆಯಲ್ಲಿ ನೋಡಿ, ತಿಳಿದು ಮುಗಿಸಬಹುದಾದ ಈ ಕಾವ್ಯ ಕಾಲುಗಳನ್ನು ದಣಿಸುವುದಿಲ್ಲ ಮನಸನ್ನು ಆವರಿಸಿಕೊಳ್ಳುತ್ತದೆ. ಒಂದು ಚಿಕ್ಕ ಕೋಣೆಯಲ್ಲಿ ಜಗತ್ತನ್ನು ಆದಿಯಿಂದ ಇಂದಿನವರೆಗೂ ಸುತ್ತಿ ಬರಲು ಭಾಷೆಯ ಅಗತ್ಯವಿಲ್ಲ, ಕಲಾಶಾಸ್ತ್ರದ ಜ್ಞಾನ ಬೇಕಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಅಲ್ಲಿನ ದೈತ್ಯ Coronelli ಭೂಗೋಳದ ಮುಂದೆ ಫೊಟೋ ತೆಗೆದುಕೊಳ್ಳುವ ಪ್ರವಾಸಿಗೂ ಸುತ್ತುವ ಕನಸನ್ನು ವಿಸ್ತರಿಸಿಕೊಡುವ ಮಹಾಮಾಯೆ ಈ ಭೂಗೋಳಗಳ ಮ್ಯೂಸಿಯಂ
- ಅಂಜಲಿ ರಾಮಣ್ಣ
ಒಂದೊಂದು ಊರಿನ ಬಗ್ಗೆ ಓದುವ ಮಾಹಿತಿ, ಕೇಳುವ ವಿವರ ಆಯಾ ಊರಿನೆಡೆಗೆ ನಮಗೊಂದು ಇಮೇಜ್ ಅನ್ನು ಕಟ್ಟಿಕೊಟ್ಟಿರುತ್ತದೆ. ಯುವದಸರಾ ಎನ್ನುವ ಅಪಸವ್ಯವಿದ್ದರೂ ಸಾಂಸ್ಕೃತಿಕ ನಗರಿ ಎಂದರೆ ಮೈಸೂರು, ಒಂದೇ ಒಂದು ಗುಲಾಬಿ ಬಣ್ಣದ ಖಿಲ್ಲೆ ಇದ್ದರೂ ಜೈಪುರ ಎಂದರೆ ಪಿಂಕ್ ಸಿಟಿ, ಒಂದೂ ಸೇಬಿನ ಗಿಡ ಇಲ್ಲದಿದ್ದರೂ ಸೇಬಿನೂರು ಎಂದರೆ ಶಿಮ್ಲಾ ಹೀಗೆ ಪ್ರತಿ ಊರಿಗೂ ಒಂದೊಂದು ಗುಣವಿಶೇಷಣಗಳನ್ನು ತಪ್ಪಾದರೂ ಸರಿ ಅಥವಾ ಸೀಮಿತವಾದ ಪರಿಧಿಯಲ್ಲಾದರೂ ಅಂಟಿಸಿಕೊಂಡು ಬಿಟ್ಟಿರುತ್ತೇವೆ.
ಇದನ್ನೂ ಓದಿ: ನಿಜ, ಕೇವಲ ಐದು ಸೆಕೆಂಡಿನಲ್ಲಿ ಮೂರು ದೇಶಗಳನ್ನು ಸುತ್ತಬಹುದು !
ಅದರಂತೆ ಆಸ್ಟ್ರಿಯಾ ದೇಶದ ವಿಯೆನ್ನಾ ನಗರ. ಜಗತ್ತಿನ ಸಂಗೀತದ ರಾಜಧಾನಿ ಎನ್ನುವ ಬಿರುದು ಹೊತ್ತು ಹಾದಿಬದಿಯಲ್ಲೂ ಮೊಝಾರ್ಟ್‍ನ ಲಹರಿಯಲ್ಲಿ ಮುಳುಗಿ ಹೋಗಿರುವ ಈ ಊರಿನಲ್ಲಿ ಸಿಗ್ಮಂಡ್ ಫ್ರಾಯ್ಡ್ 78 ವರ್ಷಗಳು ಜೀವನ ಮಾಡಿದ್ದ ಎನ್ನುವವರೆಗೂ ಹಿಟ್ಲರನ ಕ್ರೌರ್ಯಕ್ಕೆ ನಲುಗಿದವರ ಇತಿಹಾಸ ಹೊತ್ತ ಗೋಳು ರಸ್ತೆಗಳ ದನಿ ಕೇಳುವವರೆಗಷ್ಟೇ ತಿಳಿದುಕೊಂಡಿದ್ದೇವೆ. ಆದರೆ ಪ್ರಚಾರಕ್ಕೆ ಬರದೆಯೇ ಅತ್ಯಂತ ಆಸಕ್ತಿದಾಯಕವಾದ ಮತ್ತು ಜಗತ್ತಿನಲ್ಲಿ ಮತ್ತೆಲ್ಲೂ ಸಿಗದ ಒಂದು ಸ್ಥಳಕ್ಕೆ ಸಾಕ್ಷಿಯಾಗಿರುವ ವಿಯೆನ್ನಾ ನಗರದ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ.

ಒಂದು ಶಾಂತ ಅರಮನೆಯಾದ Palais Mollardನ ಒಳಗೆ, ಇಡೀ ಬ್ರಹ್ಮಾಂಡವನ್ನೇ ಒಂದು ಕೋಣೆಯಲ್ಲಿ ಕುಳ್ಳಿರಿಸಿಕೊಂಡಿರುವ ಅಪೂರ್ವ ಲೋಕವಿದೆ. ಅದೇ ಗ್ಲೋಬೆನ್‌ಮ್ಯೂಸಿಯಂ. ಆಸ್ಟ್ರಿಯನ್ ರಾಷ್ಟ್ರೀಯ ಗ್ರಂಥಾಲಯದಲ್ಲಿ ಜಗತ್ತಿನಲ್ಲಿನ ಗ್ಲೋಬ್‌ಗಳಿಗಾಗಿಯೇ ಮೀಸಲಾದ ಏಕೈಕ ಸಾರ್ವಜನಿಕ ವಸ್ತುಸಂಗ್ರಹಾಲಯ. ಇದು ಕೇವಲ ವಸ್ತುಸಂಗ್ರಹಾಲಯವಲ್ಲ, ಮನುಷ್ಯನ ಕಲ್ಪನೆಯ ಪಯಣದ ದಾಖಲಾದ ದಿನಚರಿ.
ಹತ್ತೊಂಬತ್ತನೆಯ ಶತಮಾನದಲ್ಲಿ ಹ್ಯಾಬ್ಸ್‌ಬರ್ಗ್ ಚಕ್ರವರ್ತಿಗಳು ಇಡೀ ಜಗತ್ತನ್ನೇ ಆಳುತ್ತೇವೆ ಎಂದು ತೋರಿಸಲು ಜಗತ್ತಿನ ಮಾದರಿಗಳನ್ನೇ ಸಂಗ್ರಹಿಸಿದರು. ಅವರ ಗ್ರಂಥಾಲಯದ ಆ ಸಂಗ್ರಹ, ಖ್ಯಾತ ಭೂಪಟ ತಜ್ಞ ರಾಬರ್ಟ್ ಹಾರ್ಡ್ಟ್ ಅವರ ಖಾಸಗಿ ಸಂಗ್ರಹ ಮತ್ತು ಅಂತಾರಾಷ್ಟ್ರೀಯ ಕೊರೊನೆಲ್ಲಿ ಸೊಸೈಟಿಯ ಕೊಡುಗೆಯೊಂದಿಗೆ 1956ರಲ್ಲಿ ಅರವತ್ಮೂರು ಕಲಾಕೃತಿಗಳೊಂದಿಗೆ ಒಂದು ಮ್ಯೂಸಿಯಂ ಆಗಿ ಅರಳಿತು ಈ ಭೂಗೋಳ ಸಂಗ್ರಹಾಲಯ. ದಶಕಗಳ ಕಾಲ ಹಾಫ್‌ಬರ್ಗ್ ಅರಮನೆಯಲ್ಲಿ ಇದ್ದು, 2005ರಲ್ಲಿ ಈಗಿನ ಪಾಲೆ ಮೊಲ್ಲಾರ್ಡ್‌ಗೆ ಸ್ಥಳಾಂತರಗೊಂಡಿದೆ. ಇಂದು ಇಲ್ಲಿ 1850ನೆಯ ಇಸವಿಗಿಂತಲೂ ಹಳೆಯದಾದ ಮತ್ತು ಇಂದಿನ ದಿನಮಾನದವರೆಗೂ ಅಪ್‍ಗ್ರೇಡ್ ಆದಂಥ 600ಕ್ಕೂ ಹೆಚ್ಚು ಭೂಗೋಳಗಳು, ಖಗೋಳಗಳು, ಚಂದ್ರನ ಗೋಳಗಳು, ಗ್ರಹಗಳ ಗೋಳಗಳು, ಆರ್ಮಿಲರಿ ವಲಯಗಳು ಭದ್ರವಾಗಿವೆ. ಅವುಗಳಲ್ಲಿ 250 ಗೋಳಗಳನ್ನು ವರ್ಷವಿಡೀ ಪ್ರದರ್ಶನಕ್ಕೆ ಇಟ್ಟಿದ್ದರೆ ಉಳಿದವುಗಳನ್ನು ಸಮಯಕ್ಕೆ ಮತ್ತು ಜಾಗಕ್ಕೆ ತಕ್ಕಂತೆ ನಿಗದಿತವಾಗಿ ಪ್ರದರ್ಶಿಸಲಾಗುತ್ತದೆ.
ಭೂಗೋಳಗಳು ಎಂದರೆ ನಾವುಗಳು ಶಾಲೆಯಲ್ಲಿ ಕಂಡಂತೆ ಬರಿಯ ನೀಲಿ ಬಣ್ಣದವು ಮಾತ್ರವಲ್ಲ. ಕಪ್ಪು, ಹಳದಿ, ಕಂದು, ಬೂದು ಮತ್ತು ಮಾಸಿದ ಹಸಿರು ಬಣ್ಣದಲ್ಲೂ ಕಾಲನನ್ನು ಹಿಂದಕ್ಕೆ ಸರಿಸಿ ನೋಡುವ ಏಕೈಕ ಉಪಾಯವಾಗಿ ತೋರುವ ಭೂಗೋಳಗಳಲ್ಲಿ 1536ರಲ್ಲಿ ಜೆಮ್ಮಾ ಫ್ರಿಸಿಯಸ್ ರಚಿಸಿದ ಭೂಗೋಳ ಇಲ್ಲಿರುವ ಅತ್ಯಂತ ಪ್ರಾಚೀನವಾದ ಭೂಗೋಳ. ಜಗತ್ತನ್ನು ಸುತ್ತಿ ಬಂದ ಹದಿನಾಲ್ಕು ವರ್ಷಗಳೊಳಗೆ ಮಾಡಿದ ಆ ಪುಟ್ಟ ಕಪ್ಪು ಗೋಳ ಮನುಷ್ಯನ ಸಾಹಸಿ ಪ್ರವೃತ್ತಿಗೆ ಪುರಾವೆ ನೀಡುತ್ತದೆ. ವೆನಿಸ್‌ನ ಮಹಾನ್ ಗೋಳ ತಯಾರಕ ವಿನ್ಸೆಂಜೊ ಕೊರೊನೆಲ್ಲಿ ರಚಿಸಿದ ನೂರಾ ಹತ್ತು ಸೆಂಟಿಮೀಟರ್ ವ್ಯಾಸದ ದೈತ್ಯ ಭೂಗೋಳ ಮತ್ತು ಖಗೋಳ ಹಾಗೂ ನಾವು ಇಂದು ಬಳಸುವ ನಕ್ಷೆಯ ಮೂಲಪುರುಷ ಗೆರ್ಹಾರ್ಡ್ ಮೆರ್ಕೇಟರ್ 1541 ಮತ್ತು 1551ರಲ್ಲಿ ರಚಿಸಿದ ಅವಳಿ ಗೋಳಗಳು ಇಲ್ಲಿ ಬೆಳಗುತ್ತಿವೆ. ಜೇಬಿನಲ್ಲಿ ಇಟ್ಟುಕೊಳ್ಳಬಹುದಾದ ಪುಟ್ಟ ಜೇಬುಗೋಳಗಳಿಂದ ಹಿಡಿದು, ಹಗಲು ರಾತ್ರಿ ಹೇಗೆ ಬದಲಾಗುತ್ತದೆ ಎಂದು ತೋರಿಸುವ ಟೆಲುರಿಯಂ, ಚಂದ್ರನ ಕಲೆಗಳನ್ನು ತೋರಿಸುವ ಲುನೇರಿಯಂಗಳವರೆಗೆ ಇಲ್ಲಿದೆ ಅದ್ಭುತಗಳ ಸಂತೆ.

ನಕ್ಷೆ ಚಪ್ಪಟೆಯಾಗಿದ್ದು ಅಂಚುಗಳನ್ನು ಹೊಂದಿರುವುದರಿಂದ ಭೂಮಿಯ ಬಗ್ಗೆ ಅದು ಸುಳ್ಳು ಹೇಳುತ್ತದೆ. ಆದರೆ ಗೋಳಕ್ಕೆ ಅಂಚಿಲ್ಲ, ಮೇಲು, ಕೆಳಗಿಲ್ಲ. ಇರುವುದೇ ಆದರೆ ತಿರುಗಿಸಿದಾಗಲೆಲ್ಲಾ ಪ್ರತೀ ದೇಶವೂ ಮೇಲ್ಭಾಗಕ್ಕೆ ಬರುವಂಥ ಮಾಂತ್ರಿಕತೆ ಮಾತ್ರ. ಅಂತರಂಗದಲ್ಲಿ ತನ್ನದು ಮೇಲುಗೈಯೇ ಆಗಿರಲಿ ಎಂದು ಬಯಸುವ ಮನುಷ್ಯನಿಗೆ ಭೂಗೋಳಗಳು ಎಂದರೆ ಅದಕ್ಕೇ ಇರಬೇಕು ಅಷ್ಟೊಂದು ಮೋಹ. ಗೋಳದ ಮೇಲಿನ ನಮ್ಮ ಸೆಳೆತಕ್ಕೆ ವೈಜ್ಞಾನಿಕ ಕಾರಣಗಳನ್ನೂ ಕೊಟ್ಟಿದ್ದಾರೆ. ಐನೂರಾಹತ್ತು ದಶಲಕ್ಷ ಚದರ ಕಿಲೋಮೀಟರ್‌ನ ಈ ಅಪಾರ ಭೂಮಿಯನ್ನು ಒಂದು ಅಂಗೈಯಲ್ಲಿ ಅರ್ಥಮಾಡಿಕೊಳ್ಳುವ ಹಂಬಲ. ಒಂದು ಬೆರಳಿನ ಸರಿಸುವಿಕೆಯಲ್ಲಿ ಸಾಗರಗಳನ್ನು ದಾಟುವುದು ಪವಾಡಕ್ಕಿಂತ ಕಡಿಮೆಯೇನಿಲ್ಲ. ಎಲ್ಲವನ್ನೂ ದಕ್ಕಿಸಿಕೊಳ್ಳಬೇಕು ಎನ್ನುವ ಮನುಷ್ಯನ ಹಪಾಹಪಿಯೇ ಭೂಗೋಳಗಳ ಅವಿಷ್ಕಾರಕ್ಕೆ ಕಾರಣವಿದ್ದೀತೇ?
16ನೆಯ ಶತಮಾನದಲ್ಲಿ ಮೇಜಿನ ಮೇಲೆ ಒಂದು ಭೂಗೋಳವಿದ್ದರೆ, ‘ತಾನು ವ್ಯಾಪಾರ ಮಾರ್ಗಗಳನ್ನು ಬಲ್ಲೆ, ತಾನೀಗ ಜಗತ್ತಿನ ಪ್ರಜೆ’ ಎಂದು ಸಾರಿದಂಥ ಭಾವ. ಚಕ್ರವರ್ತಿಗಳಿಗೆ, ವರ್ತಕರಿಗೆ, ವಿದ್ವಾಂಸರಿಗೆ ಅದು ಪ್ರತಿಷ್ಠೆಯ ಸಂಕೇತದಂತೆ. ಭೂಗೋಳವು ಜಗತ್ತು ಹೇಗಿತ್ತು ಎಂದು ಹೇಳುವುದಿಲ್ಲ, ಮನುಷ್ಯ ಜಗತ್ತನ್ನು ಹೇಗೆ ಕಲ್ಪಿಸಿಕೊಂಡಿದ್ದ ಎನ್ನುವುದನ್ನು ತೋರಿಸುತ್ತವೆ. ಹಳೆಯ ಗೋಳಗಳು ಮನುಷ್ಯನ ಕಲ್ಪನೆಗೂ ಸರಿ ತಪ್ಪು ಎನ್ನುವ ಮಾಪಕ ಇದ್ದಿತು ಎನ್ನುವುದನ್ನು ಹೇಳುವ ಮನುಷ್ಯತ್ವದ ಕಾವ್ಯ. ಗೋಳಗಳ ಅಧ್ಯಯನವನ್ನು ಸುಮ್ಮನೆ ಹಳೆಯ ವಸ್ತುಗಳ ಗೀಳು ಎಂದುಕೊಳ್ಳಬಾರದು. ಅದೊಂದು ಅಂತರಶಿಸ್ತೀಯ ವಿಜ್ಞಾನ.
ಭೂಪಟಶಾಸ್ತ್ರವು ಹೇಗೆ ಬೆಳೆಯಿತು, ಮುದ್ರಣ ಕಲೆ ಹೇಗೆ ಬದಲಾಯಿತು ಎಂಬುದನ್ನು ಹೇಳುತ್ತವೆ ಭೂಗೋಳಗಳು. ಅದರ ಬಣ್ಣ, ಕಾಗದದ ಪಟ್ಟಿಗಳು, ವಾರ್ನಿಷ್‌ನ ಹೊಳಪು ಕಲಾ ಇತಿಹಾಸವನ್ನು ತೆರೆದಿಡುತ್ತವೆ. ಗಡಿಗಳು ಹೇಗೆ ಅಳಿದವು, ಹೇಗೆ ಹುಟ್ಟಿದವು ಎಂಬ ರಾಜಕೀಯ ಇತಿಹಾಸವನ್ನು ಗೋಳಗಳು ಹರಳುಗಟ್ಟಿಸಿಕೊಡುತ್ತವೆ. ಇಂದು ವಿಯೆನ್ನಾದ ಈ ಮ್ಯೂಸಿಯಂ ಆ ನಾಜೂಕಾದ ಕಾಗದ ಮತ್ತು ಪ್ಲಾಸ್ಟರ್ ಗೋಳಗಳನ್ನು ಹೇಗೆಲ್ಲಾ ಸಂರಕ್ಷಿಸಬಹುದು ಎಂಬುದರ ವಿಶ್ವದ ಏಕೈಕ ಪ್ರಯೋಗಾಲಯವಾಗಿದೆ. ಪ್ರವಾಸಿಯಾಗಿ ವಿಯೆನ್ನಾಗೆ ಹೋದವನಿಗೆ ಈ ಮ್ಯೂಸಿಯಂ ಏಕೆ ಬೇಕು? ವಿಯೆನ್ನಾದಲ್ಲಿ ನೂರು ವಸ್ತುಸಂಗ್ರಹಾಲಯಗಳಿವೆ. ಹೆಚ್ಚಿನವುಗಳನ್ನು ನೋಡುವುದು ಒಂದು ಪ್ಯಾಕೇಜ್‍ನಲ್ಲಿರುವ ಸ್ಥಳಗಳನ್ನು ನೋಡಿ ಬಂದೆವು ಎಂದು ಹೇಳಲು ಮಾತ್ರ.

ಆದರೆ ಗ್ಲೋಬ್ ಮ್ಯೂಸಿಯಂಅನ್ನು ಅನುಭವಿಸುವುದು ಒಂದು ಭಾವಪೂರ್ಣ ಕವಿತೆಯನ್ನು ಓದಿದಂತೆ. ಮುಕ್ಕಾಲು ಗಂಟೆಯಲ್ಲಿ ನೋಡಿ, ತಿಳಿದು ಮುಗಿಸಬಹುದಾದ ಈ ಕಾವ್ಯ ಕಾಲುಗಳನ್ನು ದಣಿಸುವುದಿಲ್ಲ ಮನಸನ್ನು ಆವರಿಸಿಕೊಳ್ಳುತ್ತದೆ. ಒಂದು ಚಿಕ್ಕ ಕೋಣೆಯಲ್ಲಿ ಜಗತ್ತನ್ನು ಆದಿಯಿಂದ ಇಂದಿನವರೆಗೂ ಸುತ್ತಿ ಬರಲು ಭಾಷೆಯ ಅಗತ್ಯವಿಲ್ಲ, ಕಲಾಶಾಸ್ತ್ರದ ಜ್ಞಾನ ಬೇಕಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಅಲ್ಲಿನ ದೈತ್ಯ Coronelli ಭೂಗೋಳದ ಮುಂದೆ ಫೊಟೋ ತೆಗೆದುಕೊಳ್ಳುವ ಪ್ರವಾಸಿಗೂ ಸುತ್ತುವ ಕನಸನ್ನು ವಿಸ್ತರಿಸಿಕೊಡುವ ಮಹಾಮಾಯೆ ಈ ಭೂಗೋಳಗಳ ಮ್ಯೂಸಿಯಮ್.
ಗೂಗಲ್ ಅರ್ಥ್ ಇರುವ ಈ ಕಾಲದಲ್ಲಿ ನಮಗೆ ಜಗತ್ತು ಗೊತ್ತು ಎಂದು ಭಾಸವಾಗುತ್ತದೆ. ಆದರೆ ನಮಗೆ ತಿಳಿದಿರುವುದು ಜಗತ್ತಿನ ಪ್ರತಿಬಿಂಬ ಮಾತ್ರ. ಭೂಗೋಳಗಳು ಬೆಳೆದು ಬಂದ ಬಗೆಯನ್ನು ಕಾಣುವಾಗ ಆಸ್ಟ್ರೇಲಿಯಾ ಎಂಬ ಖಂಡವೇ ಯುರೋಪಿಗೆ ಗೊತ್ತಿರದ ಕಾಲದಲ್ಲಿ ಮನುಷ್ಯ ಹೇಗೆ ಜಗತ್ತನ್ನು ಕಲ್ಪಿಸಿಕೊಂಡಿದ್ದ ಎಂಬುದನ್ನು ಕಂಡಾಗ, ‘ಪೂರ್ಣಾತ್ ಪೂರ್ಣಮುದಚ್ಯತೇ; ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ’ ಎನ್ನುವುದು ಅಕ್ಷರಶಃ ಅರ್ಥವಾಗುತ್ತದೆ. Palais Mollardನ ಗೋಡೆಗಳಲ್ಲಿ ತೂಗಾಡುವ ಪ್ರತಿಯೊಂದು ಗೋಳವೂ ಮೆಲ್ಲನೆ ತಿಳಿಹೇಳುತ್ತದೆ ಈ ಜಗತ್ತು ಎಂದಿನಿಂದಲೂ ಪರಿಪೂರ್ಣವಾಗಿರುವುದೇ ಹೌದು. 1492ರ Behaim Globeನಲ್ಲಿ ಅಮೇರಿಕಾ ಇಲ್ಲದಿದ್ದರೂ ಅದು ಆ ಕಾಲಕ್ಕೆ ಪೂರ್ಣವಾಗಿತ್ತು. 1961ರ ಚಂದ್ರನ ಗೋಳದ ಹಿಂಭಾಗ ಬಿಳಿಯಾಗಿದ್ದರೂ ಅದು ಆ ಕಾಲಕ್ಕೆ ಪೂರ್ಣಸತ್ಯ. ನಮ್ಮ ಅಜ್ಞಾನದಿಂದಲೂ ಜಗತ್ತು ಅಪೂರ್ಣವಾಗುವುದಿಲ್ಲ. ಪೂರ್ಣದಿಂದ ಪೂರ್ಣವನ್ನು ತೆಗೆದರೂ ಉಳಿಯುವುದು ಪೂರ್ಣವೇ ಎನ್ನುವ ಭಾರತೀಯ ತತ್ತ್ವದ ಮನವರಿಕೆಗೆ ಮಾಡಬೇಕಿರುವ ತೀರ್ಥಯಾತ್ರೆ ಈ ಸಂಗ್ರಹಾಲಯಕ್ಕೆ ನೀಡುವ ಭೇಟಿ.
ಅಲ್ಲಿ ಕಿವಿ ಬಂಧಿಸುವ ಆಡಿಯೋ ಗೈಡ್‌ಗಳಿಲ್ಲ, ವಯ್ಯಾರದ ಮಾರ್ಗದರ್ಶಿಗಳೂ ಕಾಣಿಸುವುದಿಲ್ಲ. ಪ್ರಕಾಶಮಾನವಾದ ದೀಪಗಳಿಲ್ಲ, ಭೂಗೋಳಗಳ ಮೇಲಿನ ಹಳೆಯ ವಾರ್ನಿಷ್‍ಅನ್ನು ಕಾಪಾಡಲು ಬೇಕಾದ ಮಂದ ಬೆಳಕು, ಗಾಢ ಮೌನ ಮತ್ತು ಅದು ನಮ್ಮಲ್ಲಿ ಉತ್ತೇಜಿಸುವ ಸೂಕ್ಷ್ಮತೆ ಇವಿಷ್ಟೇ ಜತೆಯಾಗುವ ಸ್ಥಳ ಮತ್ತು ಕಾಲ ಬೇಕೆನಿಸಿದಲ್ಲಿ ಹೋಗಲೇ ಬೇಕಿದೆ ವಿಯೆನ್ನಾದ Globen museumಗೆ.