ಭಾರತದಲ್ಲಿ ಮೊದಲ ಕ್ಯಾಮೆರಾ ತಯಾರಾಗಿದ್ದು ಹೇಗೆ ಗೊತ್ತಾ?
ಕರುಣಾಕರನ್ ಭಾರತೀಯ ಕ್ಯಾಮೆರಾ ತಯಾರಿಕೆಗಾಗಿ ಹಳೆಯ ಕ್ಯಾಮೆರಾವೊಂದನ್ನು ತೆಗೆದುಕೊಂಡು, ಅದನ್ನು ಬಿಚ್ಚಿ ಪುನಃ ಜೋಡಿಸುತ್ತಾನೆ. ಅದರ ತಾಂತ್ರಿಕತೆ ತಿಳಿಯುತ್ತಾನೆ. ಪುಸ್ತಕಗಳನ್ನು ಓದಿ, ಮಾಹಿತಿಗಾಗಿ ಬಾಂಬೆ, ಮದ್ರಾಸ್‌ಗಳಿಗೆ ಭೇಟಿನೀಡಿ ಕ್ಯಾಮೆರಾದ ತಂತ್ರಜ್ಞಾನದ ಬಗ್ಗೆ ಅಧಿಕ ಜ್ಞಾನ ಪಡೆಯುತ್ತಾನೆ.
- ಅನಂತ ಹರಿತ್ಸ
ಕರುಣಾಕರನ್ ಭಾರತೀಯ ಕ್ಯಾಮೆರಾ ತಯಾರಿಕೆಗಾಗಿ ಹಳೆಯ ಕ್ಯಾಮೆರಾವೊಂದನ್ನು ತೆಗೆದುಕೊಂಡು, ಅದನ್ನು ಬಿಚ್ಚಿ ಪುನಃ ಜೋಡಿಸುತ್ತಾನೆ. ಅದರ ತಾಂತ್ರಿಕತೆ ತಿಳಿಯುತ್ತಾನೆ. ಪುಸ್ತಕಗಳನ್ನು ಓದಿ, ಮಾಹಿತಿಗಾಗಿ ಬಾಂಬೆ, ಮದ್ರಾಸ್‌ಗಳಿಗೆ ಭೇಟಿನೀಡಿ ಕ್ಯಾಮೆರಾದ ತಂತ್ರಜ್ಞಾನದ ಬಗ್ಗೆ ಅಧಿಕ ಜ್ಞಾನ ಪಡೆಯುತ್ತಾನೆ. 1946ರಲ್ಲಿ ತೇಗದ ಮರದ ಹಲಗೆಯನ್ನು ಉಪಯೋಗಿಸಿ, ಅಲ್ಯೂಮಿನಿಯಂ ಹಾಗೂ ಹಿತ್ತಾಳೆಯ ತಿರುಪಣಿ, ಕೈಯಲ್ಲಿ ಹೊಲಿಗೆ ಹಾಕಿದ ಚರ್ಮದ ಬೆಲ್ಲೋ, ಜರ್ಮನ್ ಮಸೂರ ಹೊಂದಿದ ಕ್ಯಾಮೆರಾವೊಂದನ್ನು ತಯಾರಿಸಲು ಯಶಸ್ವಿಯಾಗುತ್ತಾನೆ. ಆ ಕ್ಯಾಮೆರಾಗೆ ಅವನಿಟ್ಟ ಹೆಸರು ʻವಾಗೀಶ್ವರಿʻ.
ಭಾರತಕ್ಕೆ ಛಾಯಾಗ್ರಹಣವನ್ನು ಪರಿಚಯಿಸಿದವರು ಆಗ ನಮ್ಮನ್ನು ಆಳುತ್ತಿದ್ದ ವಸಹತುಶಾಹಿ ಬ್ರಿಟಿಷರು. ಯುರೋಪಿನಲ್ಲಿದ್ದ ಈ ದುಬಾರಿ ಹವ್ಯಾಸ 1855ರಲ್ಲಿ ಭಾರತಕ್ಕೆ ಕಾಲಿಟ್ಟಿತು. ಜನಸಾಮಾನ್ಯರಿಗೆ ಮರೀಚಿಕೆಯಾಗಿದ್ದ ಈ ಹವ್ಯಾಸವನ್ನು ನಮ್ಮ ಅನೇಕ ರಾಜ-ಮಹಾರಾಜರುಗಳು ಅಳವಡಿಸಿಕೊಂಡರು. ಹಲವರು ಛಾಯಾಗ್ರಹಣದಲ್ಲಿ ನೈಪುಣ್ಯತೆಯನ್ನೂ, ಖ್ಯಾತಿಯನ್ನೂ ಪಡೆದರು. ಬ್ರಿಟಿಷರಿಂದಲೇ ತುಂಬಿದ್ದ ಛಾಯಾಗ್ರಹಣ ಸೊಸೈಟಿಗಳು ಆಗಿನ ಬಾಂಬೆ, ಕೋಲ್ಕತ್ತಾ ನಂತರ ಮದ್ರಾಸ್‌ನಲ್ಲಿಯೂ ಶುರುವಾದವು.
ಇದನ್ನೂ ಓದಿ: ಎ ರಿಯಲ್ ಪೇನ್
ಭಾರತೀಯ ಕ್ಯಾಮೆರಾ ಹುಟ್ಟಿಗೆ ಕಾರಣ ಏನು?
1942, ಕೇರಳದ ಅಲಪ್ಪೆಯಲ್ಲಿ (ಈಗಿನ ಅಳುಪ್ಪುಜ) ಪದ್ಮನಾಭನ್ ನಾಯರ್ ಎಂಬುವವರು ಒಂದು ಫೊಟೋ ಸ್ಟುಡಿಯೋ ಇಟ್ಟುಕೊಂಡಿರುತ್ತಾರೆ. ಅವರಲ್ಲಿದ್ದ, ಜಪಾನಿನಲ್ಲಿ ತಯಾರಾಗಿದ್ದ ಒಂದು ಕ್ಯಾಮೆರಾದ ಬೆಲ್ಲೋ (ಚರ್ಮದಿಂದ ಮಾಡಿದ ಮಡಚಬಲ್ಲಂಥ ಸ್ಪ್ರಿಂಗ್ ಮಾದರಿಯ ಚೌಕಾಕಾರದ ಪೆಟ್ಟಿಗೆ) ತೂತು ಬಿದ್ದು ಹಾಳಾಗಿರುತ್ತದೆ. ಆಗ ನಾಯರ್, ಸಂಗೀತಗಾರರಾಗಿದ್ದ, ಹಾರ್ಮೋನಿಯಂನಂಥ ಸಂಗೀತ ಪರಿಕರಗಳನ್ನು ದುರಸ್ತಿ ಮಾಡುತ್ತಿದ್ದ ಕುಂಜು ಕುಂಜು ಭಾಗವತರ್ ಎನ್ನುವರ ಬಳಿ ತನ್ನ ಕ್ಯಾಮೆರಾದ ಬೆಲ್ಲೋ ದುರಸ್ತಿ ಮಾಡಿಕೊಡಲು ಕೇಳುತ್ತಾರೆ. ಅವರು ಅದನ್ನು ದುರಸ್ತಿ ಮಾಡಿಕೊಟ್ಟ ನಂತರ ಕ್ಯಾಮೆರಾ ಮೊದಲಿಗಿಂತ ಚೆನ್ನಾಗಿ ಕೆಲಸ ಮಾಡತೊಡಗಿತು. ಇದರಿಂದ ಸಂತಸಗೊಂಡ ಪದ್ಮನಾಭನ್ ನಾಯರ್ ಒಂದು ಕ್ಯಾಮೆರಾವನ್ನೇ ತಯಾರಿಸಿಕೊಡಲು ಕುಂಜು ಕುಂಜು ಭಾಗವತರ್‌ರಲ್ಲಿ ಕೋರುತ್ತಾರೆ. ಭಾಗವತರ್, ಅದು ತನ್ನಿಂದ ಆಗದೆಂದು ನಿರಾಕರಿಸುತ್ತಾರೆ. ಅದೇ ಸಮಯದಲ್ಲಿ ಭಾಗವತರ್ ಅವರ ಮಗನಾದ ಹದಿನಾರು ವಯಸ್ಸಿನ ಕರುಣಾಕರನ್ ಇದನ್ನು ಸವಾಲಾಗಿ ಸ್ವೀಕರಿಸುತ್ತಾನೆ.

ತಯಾರಾಗಿದ್ದು ಹೇಗೆ?
ಕರುಣಾಕರನ್ ಭಾರತೀಯ ಕ್ಯಾಮೆರಾ ತಯಾರಿಕೆಗಾಗಿ ಹಳೆಯ ಕ್ಯಾಮೆರಾವೊಂದನ್ನು ತೆಗೆದುಕೊಂಡು, ಅದನ್ನು ಸಂಪೂರ್ಣವಾಗಿ ಬಿಚ್ಚಿ ಪುನಃ ಸರಿಯಾಗಿ ಜೋಡಿಸುತ್ತಾನೆ. ಅದರ ತಾಂತ್ರಿಕತೆಯನ್ನು ತಿಳಿಯುತ್ತಾನೆ. ಪುಸ್ತಕಗಳನ್ನು ಓದಿ, ಮಾಹಿತಿಗಾಗಿ ಬಾಂಬೆ, ಮದ್ರಾಸ್‌ಗಳಿಗೆ ಭೇಟಿನೀಡಿ ಕ್ಯಾಮೆರಾದ ತಂತ್ರಜ್ಞಾನದ ಬಗ್ಗೆ ಅಧಿಕ ಜ್ಞಾನವನ್ನು ಪಡೆಯುತ್ತಾನೆ.
1946ರಲ್ಲಿ ತೇಗದ ಮರದ ಹಲಗೆಯನ್ನು ಉಪಯೋಗಿಸಿ, ಅಲ್ಯೂಮಿನಿಯಂ ಹಾಗೂ ಹಿತ್ತಾಳೆಯ ತಿರುಪಣಿ, ಕೈಯಲ್ಲಿ ಹೊಲಿಗೆ ಹಾಕಿದ ಚರ್ಮದ ಬೆಲ್ಲೋ, ಜರ್ಮನ್ ಮಸೂರ ಹೊಂದಿದ ಕ್ಯಾಮೆರಾವೊಂದನ್ನು ತಯಾರಿಸಲು ಯಶಸ್ವಿಯಾಗುತ್ತಾನೆ. ಕ್ಯಾಮೆರಾಗೆ ʻವಾಗೀಶ್ವರಿʻ ಎಂದು ನಾಮಕರಣ ಮಾಡುತ್ತಾನೆ. ಇದು ಭಾರತದಲ್ಲಿ ತಯಾರಿಸಲಾದ ಮೊಟ್ಟ ಮೊದಲ ಕ್ಯಾಮೆರಾ.
ಅಂದಿಗೆ 2 X 2 ಇಂಚಿನ ಒಂದು ಪಾಸ್‌ಪೋರ್ಟ್ ಅಳತೆಯ ಫೊಟೋ ತೆಗೆಯಲು ಸ್ಟುಡಿಯೋಗೆ ಹೋಗಿ ಬಿಳಿ ಪರದೆಯ ಮುಂದೆ ನಿಲ್ಲಬೇಕಿತ್ತು. ಅಲ್ಲದೆ ಅದರ ಸಂಸ್ಕರಣೆ ಮಾಡಲು ದುಬಾರಿ ಬೆಲೆಯ ಉಪಕರಣಗಳು, ರಾಸಾಯನಿಕ ಪದಾರ್ಥಗಳನ್ನು ಹೊಂದಿರಬೇಕಿತ್ತು. ಅದೂ ದೂರದ ಪ್ರದೇಶಗಳಿಂದ, ವಿದೇಶಗಳಿಂದ ತರಿಸಬೇಕಾಗಿತ್ತು. ಕತ್ತಲೆ ಕೋಣೆಯ ಬೃಹತ್ ಸೆಟಪ್ ಬೇಕಾಗಿತ್ತು.
ವಿದೇಶಗಳಿಗೂ ರಫ್ತಾದ ಕ್ಯಾಮೆರಾ
ವಾಗೀಶ್ವರಿ ಕ್ಯಾಮೆರಾವು ಹಠಾತ್ ಆಗಿ ಪ್ರಖ್ಯಾತಗೊಂಡು, ಮೂಡಿದ ಸಂಚಲನದಿಂದ ಬ್ರಿಟಿಷರು ಕ್ಯಾಮೆರಾ ಕೊಳ್ಳಲು ಮುಗಿಬಿದ್ದರು. ಕ್ಯಾಮೆರಾದ ಮಸೂರಗಳನ್ನು ಜರ್ಮನಿ ಹಾಗೂ ಜಪಾನಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. 250ರು. ಬೆಲೆಯ ವಾಗೀಶ್ವರಿ ಕ್ಯಾಮೆರಾವು ಇಂಗ್ಲೆಂಡ್ ಹಾಗೂ ಇತರೆ ಯುರೋಪಿಯನ್ ದೇಶಗಳಲ್ಲೂ ಹೆಸರುವಾಸಿಯಾಯಿತು. ಬೇಡಿಕೆ ವಿಪರೀತವಾಯಿತು. ಜಪಾನಿಗರು ವಾಗೀಶ್ವರಿ ಕ್ಯಾಮೆರಾದ ತಂತ್ರಜ್ಞಾನವನ್ನು ತಿಳಿಯಲು ಆರಂಭಿಸಿದರು. ಅನೇಕ ದೇಶಗಳಿಂದ ವಾಗೀಶ್ವರಿ ಕ್ಯಾಮೆರಾಕ್ಕೆ ಬೇಡಿಕೆ ಬಂದಿತು.
30 ಜನರಿಂದ ವಾಗೀಶ್ವರಿ ಕ್ಯಾಮೆರಾ ಕಂಪೆನಿಯು ಆರಂಭವಾಗಿತ್ತು. ತಿಂಗಳೊಂದಕ್ಕೆ ಸುಮಾರು ಐವತ್ತರಿಂದ ನೂರು ಕ್ಯಾಮೆರಾಗಳು ತಯಾರಾಗುತ್ತಿದ್ದವು. ಚರ್ಮದ ಒಂದು ಬೆಲ್ಲೋ ತಯಾರಾಗಲು ಹದಿನೆಂಟು ಗಂಟೆಗಳ ಸಮಯ ಬೇಕಾಗುತ್ತಿತ್ತು. ಕ್ಯಾಮೆರಾದಲ್ಲಿ ಫಿಲಂ ಬದಲಾಗಿ ರಾಸಾಯನ ಲೇಪಿತ ಗಾಜನ್ನು ಬಳಸಲಾಗುತಿತ್ತು. ಅದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತಿತ್ತು. ವಾಗೀಶ್ವರಿ ಕ್ಯಾಮೆರಾವು ಎಂಟು ಮಾದರಿಗಳಲ್ಲಿ ಲಭ್ಯವಿತ್ತು. ಇದನ್ನು ಹೊರತುಪಡಿಸಿ ಅಲ್ಟ್ರಾಸೌಂಡ್ ಯಂತ್ರದ ಕ್ಯಾಮೆರಾವನ್ನೂ ವಾಗೀಶ್ವರಿ ನಿರ್ಮಾಣ ಮಾಡಿತು.
ಮಾರುಕಟ್ಟೆಯಲ್ಲಿ ಆಧುನಿಕ ಕ್ಯಾಮೆರಾಗಳು ದೊರೆಕಲು ಆರಂಭವಾದುದರಿಂದ ಕ್ರಮೇಣ ವಾಗೀಶ್ವರಿ ಕ್ಯಾಮೆರಾದ ಬೇಡಿಕೆ ಕಡಿಮೆಯಾಗುತ್ತಾ ಬಂದಿತು. ಪೈಪೋಟಿ ನೀಡಲು ಸಾಧ್ಯವಾಗದೆ, ಭಾರತದಲ್ಲಿ ಪ್ರಥಮವಾಗಿ ಕ್ಯಾಮೆರಾವನ್ನು ತಯಾರಿಸಿ, ಪರಿಚಯಿಸಿ, ಪ್ರಖ್ಯಾತಗೊಳಿಸಿದ ವಾಗೀಶ್ವರಿ ಕಂಪೆನಿಯನ್ನು 1995ರಲ್ಲಿ ಮುಚ್ಚಲಾಯಿತು. ಇದು ಭಾರತದಲ್ಲಿ ತಯಾರಾದ ಕ್ಯಾಮೆರಾದ ಕಥೆ.