ಸೈಕ್ಲಿಂಗ್ ಜರ್ನಿಗೆ ವಯಸ್ಸಿನ ಹಂಗಿಲ್ಲ
ಜನವರಿ 1ರಂದು ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿದ್ದರು. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿ, ಸೈಕ್ಲಿಂಗ್ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೈಕ್ಲಿಂಗ್ ಆಸಕ್ತಿ ನನ್ನೊಳಗೆ ಹುಟ್ಟಿಕೊಂಡಿರುವುದು ಹೇಗೆ, 50ವರ್ಷಗಳ ಹಿಂದಿನ ಕನ್ಯಾಕುಮಾರಿಗೆ ಸೈಕ್ಲಿಂಗ್ ಮಾಡಿದ್ದಕ್ಕೂ ಇಂದಿಗೂ ಇರುವ ವ್ಯತ್ಯಾಸವೇನು.. ಇಂಥ ಅನೇಕ ಪ್ರಶ್ನೆಗಳ ಮೂಲಕ ಸುಮಾರು 8ನಿಮಿಷಗಳ ಕಾಲ ನನ್ನ ಜತೆಗೆ ಮಾತಾಡಿದ್ದರು. ಆ ಮಾತುಗಳು ನನ್ನ ಜೀವನದ ಅಮೂಲ್ಯ ಕ್ಷಣಗಳಾಗಿದ್ದವು.
ರಾಜಕೀಯ ನಾಯಕರು ಜನಸೇವೆಯಲ್ಲಿ ಮಾತ್ರವಲ್ಲದೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಮಾದರಿಯಾಗಬಲ್ಲರು ಎಂಬುದಕ್ಕೆ ಬೆಂಗಳೂರಿನ ರಾಜಾಜಿನಗರದ ಶಾಸಕ ಎಸ್. ಸುರೇಶ್ ಕುಮಾರ್ ಅವರೇ ಸಾಕ್ಷಿ. ತಮ್ಮ 70ನೇ ವಯಸ್ಸಿನಲ್ಲೂ ಹಿರಿಯ ಬಿಜೆಪಿ ನಾಯಕ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ರಾಷ್ಟ್ರದ ಗಮನ ಸೆಳೆಯುವ ಸಾಧನೆಯನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಫೋನ್ ಮೂಲಕ ಅವರನ್ನು ಅಭಿನಂದಿಸಿದ್ದರು. ಇವರ ಸೈಕ್ಲಿಂಗ್ ಹುಚ್ಚು, ಪ್ರವಾಸದ ಆಸಕ್ತಿ, ಜೀವನ ಪ್ರೀತಿ ಯುವ ಜನಾಂಗಕ್ಕೆ ಮಾದರಿಯಾಗಿದೆ.
ರಾಜಕಾರಣದ ಜತೆ ಸೈಕ್ಲಿಂಗ್ ಪ್ರೀತಿಯನ್ನು ಉಳಿಸಿಕೊಳ್ಳುವುದು ಹೇಗೆ ಸಾಧ್ಯವಾಗುತ್ತಿದೆ?
ಚಿಕ್ಕಂದಿನಿಂದಲೂ ಸೈಕಲ್ ನನ್ನ ಸಂಗಾತಿ. 10 ಪೈಸೆ ನೀಡಿ ಬಾಡಿಗೆಗೆ ಸೈಕಲ್ ಪಡೆದುಕೊಂಡು ಬಳಕೆ ಮಾಡುತ್ತಿದ್ದೆ. ನನ್ನಲ್ಲಿರುವ ಸೈಕಲ್ ಆಸಕ್ತಿಯನ್ನು ಕಂಡು ನನ್ನ ಅಮ್ಮ ಅವರ ಶಿಷ್ಯನ ಬಳಿಯೇ ನನಗೆ ಸೈಕಲ್ ತರಬೇತಿಯನ್ನು ಕೊಡಿಸಿದ್ದರು. ಎಸ್ಎಸ್ಎಲ್ಸಿಯಲ್ಲಿ ನಾನು ಫಸ್ಟ್ ಕ್ಲಾಸ್ ಬಂದಿದ್ದಕ್ಕೆ, ಅಮ್ಮ ತಾವು ಕೊಟ್ಟ ಮಾತಿನಂತೆ ಕಷ್ಟಪಟ್ಟು ನನಗೆ ಸೈಕಲ್ ಕೊಡಿಸಿದ್ದರು. ಒಮ್ಮೆಲೇ 250ರು. ಕೊಟ್ಟು ಸೈಕಲ್ ಕೊಂಡುಕೊಳ್ಳುವುದು ಕಷ್ಟವಾದ್ದರಿಂದ ಪ್ರತಿ ತಿಂಗಳು 20ರು. ಕಟ್ಟಿ ಸೈಕಲ್ ಉಡುಗೊರೆಯಾಗಿ ನೀಡಿದ್ದರು. ಆ ಹರ್ಕ್ಯುಲಸ್ ಸೈಕಲ್ ನನಗೆ ಎಷ್ಟು ಆಪ್ತವಾಯಿತೆಂದರೆ ಪಿಯುಸಿ, ಬಿಎಸ್ಇ, ಎಲ್ಎಲ್ಬಿ ಮುಗಿಸಿ ಲಾಯರ್ ಆದಮೇಲೆಯೂ ಅದೇ ಸೈಕಲ್ ನಲ್ಲಿ ಕೋರ್ಟ್ಗೆ ಹೋಗಿದ್ದೆ. 1974ರಲ್ಲಿ ಆಗ ತಾನೇ ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಶಿಲಾಸ್ಮಾರಕವಾಗಿತ್ತು. ಅದನ್ನು ನೋಡುವುದಕ್ಕಾಗಿ ನಾವು ಮೂವರು ಗೆಳೆಯರು ಸೇರಿ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ನಲ್ಲಿ ಹೋಗಿದ್ದೆವು.
ಇದನ್ನೂ ಓದಿ: ಪುಟ್ಟಮಲ್ಲಿಗೆ ಲವ್ವಾಗೋಯ್ತು!
ಪಾದಯಾತ್ರೆಯ ಮೂಲಕ ಪ್ರವಾಸದ ಆಸಕ್ತಿ ಹುಟ್ಟಿಕೊಂಡಿದ್ದು ಹೇಗೆ ?
ಜನಸೇವೆ, ರಾಜಕೀಯದಲ್ಲಿ ಹೆಚ್ಚಿಗೆ ತೊಡಗಿಸಿಕೊಂಡಿದ್ದರಿಂದ ನನ್ನ ಆಸಕ್ತಿಯ ಬಗ್ಗೆ ಯೋಚಿಸುವುದೇ ಮರೆತಿದ್ದೆ. ನಡುವೆ ಪಾದಯಾತ್ರೆಯನ್ನು ರೂಢಿಸಿಕೊಂಡಿದ್ದೆ. ಬೆಂಗಳೂರಿನಿಂದ ತಿರುಪತಿ, ಬೆಂಗಳೂರಿನಿಂದ ಧರ್ಮಸ್ಥಳ, ಬೆಂಗಳೂರಿನಿಂದ ಶಬರಿಮಲೆ, ಮಾನಸ ಸರೋವರ, ಅನ್ನಪೂರ್ಣೇಶ್ವರಿ, ಚಾರ್ಧಾಮ್, ಅಮರನಾಥ ಹೀಗೆ ಅನೇಕ ಕಡೆಗೆ ಪಾದಯಾತ್ರೆ ಹೋಗಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು, ಪ್ರತಿ ಕ್ಷೇತ್ರದಲ್ಲಿ ಕಾರ್ಯಕರ್ತರು ಸೈಕ್ಲಿಂಗ್ ರ್ಯಾಲಿ ಮಾಡಬೇಕು ಎಂಬುದಾಗಿ ಕರೆ ಕೊಟ್ಟರು. ಅಂದು ನನ್ನ ಸ್ನೇಹಿತರ ಜತೆಗೂಡಿ ಸೈಕ್ಲಿಂಗ್ ಟೀಮ್ ಕಟ್ಟಿಕೊಂಡೆ. ನಂತರ ಸುಮಾರು 14-15 ಗಂಟೆಗಳಲ್ಲಿ ತಿರುಪತಿಗೆ ಸೈಕ್ಲಿಂಗ್ ಮಾಡಿದ ದಿನವನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ.

ಸೈಕ್ಲಿಂಗ್ನಿಂದ ನಿಮ್ಮ ಜೀವನದಲ್ಲಿ ಆಗಿರುವ ಬದಲಾವಣೆಯೇನು ?
ಇದ್ದಕ್ಕಿದ್ದ ಹಾಗೆ ಆರೋಗ್ಯ ಸಮಸ್ಯೆ ನನ್ನನ್ನು ಕಾಡಿತ್ತು. ನಡೆಯುವುದಕ್ಕೂ ಸಾಧ್ಯವಾಗದೆ, ದೇಹದ ಯಾವುದೇ ಭಾಗವನ್ನು ಅಲುಗಾಡಿಸುವುದಕ್ಕೂ ಆಗದೆ ನರಕಯಾತನೆ ಅನುಭವಿಸಿದ್ದೆ. ಕೊನೆಗೆ ಚಿಕನ್ಗುನ್ಯಾ ರೂಪಾಂತರ ನನ್ನನ್ನು ಕಾಡುತ್ತಿದೆಯಂಬ ವಿಚಾರವನ್ನು ವೈದ್ಯರು ತಿಳಿಸಿದ್ದರು.ದೇಶದಲ್ಲೇ ಇಂಥ ಆರೋಗ್ಯ ಸಮಸ್ಯೆ ಹೊಂದಿದ 6ನೆಯ ವ್ಯಕ್ತಿ ನಾನು ಎಂಬುದು. 5 ತಿಂಗಳ ಕಾಲ ಬೆಡ್ನಲ್ಲೇ ಇದ್ದೆ. ಇದು ನನಗೆ ಸಿಕ್ಕ ಪುನರ್ಜನ್ಮ. ನಾನು ನಡೆದಾಡಲು ಪ್ರಾರಂಭಿಸಿ 15 ದಿನಗಳು ಕಳೆದಿರಬಹುದು, ನನ್ನ ಆಪ್ತ ಸ್ನೇಹಿತರು ನನ್ನನ್ನು ತಿಪ್ಪಗೊಂಡನಹಳ್ಳಿ ಜಲಾಶಯದ ಸಮೀಪ ಕರೆದುಕೊಂಡು ಹೋಗಿ, ಸೈಕಲ್ ತಂದು ಪೆಡಲ್ ಮಾಡುವಂತೆ ಹೇಳಿದ್ದರು. 100ಮೀ ಹೋಗುವುದರಲ್ಲೇ ಬ್ಯಾಲೆನ್ಸ್ ಸಿಕ್ಕಿ 3ಕಿಮೀ ಸೈಕಲ್ ತುಳಿದೆ..ಆಗ ಮತ್ತೆ ಸೈಕ್ಲಿಂಗ್ ಪ್ರಾರಂಭಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದೆ.
ಕನ್ಯಾಕುಮಾರಿಯೆಂದರೆ ನಿಮ್ಮ ನೆಚ್ಚಿನ ಪ್ರವಾಸಿ ತಾಣವಾಗಿರುವುದೇಕೆ?
ಕಾರಣ ನನಗೂ ತಿಳಿದಿಲ್ಲ. ಆದರೆ 5೦ ವರ್ಷಗಳ ಹಿಂದೆ ನಾನು ಸೈಕ್ಲಿಂಗ್ ಮಾಡುತ್ತಲೇ ಕನ್ಯಾಕುಮಾರಿಗೆ ಹೋಗಿದ್ದೆ. 2024ರಲ್ಲಿ ಅದರ ವಾರ್ಷಿಕೋತ್ಸವ ಮಾಡಬೇಕೆಂದು ನನಗೆ ಬಹಳ ಆಸೆಯಿತ್ತು. ಆಸೆಪಟ್ಟರೆ ಸಾಲದು ಎಂಬಂತೆ ಸ್ನೇಹಿತರ ಜತೆಗೂಡಿ ಡಿಸೆಂಬರ್ 22ರಂದು ಸೈಕ್ಲಿಂಗ್ ಮಾಡಿ ನಾಲ್ಕೂವರಿ ದಿವಸದಲ್ಲಿ 37 ಸೈಕ್ಲಿಂಗ್ ಅವರ್ಸ್ ನಲ್ಲಿ 702ಕಿಮೀ ಪ್ರಯಾಣ ಮಾಡಿದ್ದೆವು. ಅದೊಂದು ಅದ್ಭುತ.
ನಿಮ್ಮ ಜೀವನದಲ್ಲಿ ಸೈಕ್ಲಿಂಗ್ ಎಷ್ಟು ಮುಖ್ಯ?
ಎಷ್ಟು ಮುಖ್ಯ ಎನ್ನುವದಕ್ಕಿಂತ ಅದು ನನ್ನ ಜೀವನದ ಭಾಗವೇ ಆಗಿಬಿಟ್ಟಿದೆಯೆಂದರೆ ಸೂಕ್ತವೆನಿಸುತ್ತದೆ. ಸೈಕ್ಲಿಂಗ್ ಮಾಡುವಾಗ ಶಾಸಕ, ಮಾಜಿ ಸಚಿವ ಎಂಬ ಐಡೆಂಟಿಟಿಯೆಲ್ಲವನ್ನೂ ಮರೆತುಬಿಡುತ್ತೇನೆ. ನಾನು, ಸ್ನೇಹಿತರು ಸೇರಿ ಎಲ್ಲವನ್ನೂ ಮರೆತು ಮಕ್ಕಳಾಗಿಬಿಡುತ್ತೇವೆ. ವಯಸ್ಸಿನ ಕಾರಣಕ್ಕೆ, ಆರೋಗ್ಯ ಸಮಸ್ಯೆಯಿದ್ದರೂ ಸೈಕ್ಲಿಂಗ್ ಮಾಡುವುದು ನನಗೆ ಎಂದಿಗೂ ಕಷ್ಟವೆನಿಸಿಲ್ಲ. ನನ್ನ ಜತೆ ನಾನೇ ಸಂವಾದ ಮಾಡಿಕೊಳ್ಳುವುದಕ್ಕೆ, ಸ್ಥಳೀಯರ ಜತೆ ಬೆರೆಯುವುದಕ್ಕೆ ಅದು ಸಹಕಾರಿಯಾಗುತ್ತದೆ. ಆ ವೇಳೆ ನಾವು ಮೊಬೈಲ್ ಬಳಕೆಯನ್ನೂ ಮಾಡುವುದಿಲ್ಲ. ಸೈಕ್ಲಿಂಗ್ ನಿಂದ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ನನಗೆ ನವ ಚೈತನ್ಯ ಸಿಕ್ಕಂತಾಗುತ್ತದೆ.
ಪ್ರಧಾನಿ ಮೋದಿಯವರ ಮೆಚ್ಚುಗೆಯ ಕರೆ ಸೈಕ್ಲಿಂಗ್ ಮುಂದುವರಿಸಲು ಸಹಕಾರಿಯಾಗಿದೆಯೇ?
ಹೌದು, ಈ ವರ್ಷ ಜನವರಿ 1ರಂದು ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿದ್ದರು. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿ, ಸೈಕ್ಲಿಂಗ್ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೈಕ್ಲಿಂಗ್ ಆಸಕ್ತಿ ನನ್ನೊಳಗೆ ಹುಟ್ಟಿಕೊಂಡಿರುವುದು ಹೇಗೆ, 50ವರ್ಷಗಳ ಹಿಂದಿನ ಕನ್ಯಾಕುಮಾರಿಗೆ ಸೈಕ್ಲಿಂಗ್ ಮಾಡಿದ್ದಕ್ಕೂ ಇಂದಿಗೂ ಇರುವ ವ್ಯತ್ಯಾಸವೇನು.. ಇಂಥ ಅನೇಕ ಪ್ರಶ್ನೆಗಳ ಮೂಲಕ ಸುಮಾರು 8ನಿಮಿಷಗಳ ಕಾಲ ನನ್ನ ಜತೆಗೆ ಮಾತಾಡಿದ್ದರು. ಆ ಮಾತುಗಳು ನನ್ನ ಜೀವನದ ಅಮೂಲ್ಯ ಕ್ಷಣಗಳಾಗಿದ್ದವು. ದಲೈಲಾಮಾ ಜತೆಗೂ ಹಿಂದೆ ನಾನು ಮುಖಾಮುಖಿಯಾಗಿ ಮಾತನಾಡಿದ್ದೆ. ಅದಾದ ನಂತರ ನನ್ನ ಜೀವನದ ಅತ್ಯಂತ ಖುಷಿಯ ಕ್ಷಣವಿದು. ಸೈಕ್ಲಿಂಗ್ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಇದು ಉತ್ತೇಜನ ನೀಡಿದೆ.

ಆರೋಗ್ಯ ದೃಷ್ಟಿಯಿಂದ ಸೈಕ್ಲಿಂಗ್ನ ಪಾತ್ರವೇನು ?
ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಚಳುವಳಿಯನ್ನು ಹುಟ್ಟುಹಾಕಿದರು. ಆದರೆ ನಾನು 4ನೆಯ ತರಗತಿಯವನಾಗಿದ್ದಾಗಲೇ ಆರ್ಎಸ್ಎಸ್ಗೆ ಸೇರಿಕೊಂಡಿದ್ದೆ. ಅಲ್ಲಿ ಫಿಸಿಕಲ್ ಫಿಟ್ನೆಸ್ಗೆ ಪೂರಕವಾದ ಆಟಗಳು, ಸೂರ್ಯ ನಮಸ್ಕಾರವನ್ನು ಹೇಳಿಕೊಡುತ್ತಿದ್ದರು. ಜತೆಗೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸುಮಾರು 15 ತಿಂಗಳ ಕಾಲ ನಾನು ಜೈಲುವಾಸ ಅನುಭವಿಸಿದ್ದೆ. ಅಲ್ಲಿ ನನಗೆ ಉತ್ತಮವಾದ ಯೋಗ ಶಿಕ್ಷಣ ಸಿಕ್ಕಿತ್ತು. ಮೊದಲಿನಿಂದಲೂ ಪಾದ ಯಾತ್ರೆ, ದೀರ್ಘ ನಡಿಗೆ, ಸೈಕ್ಲಿಂಗ್, ಸ್ವಿಮ್ಮಿಂಗ್ ನಲ್ಲಿ ತೊಡಗಿಸಿಕೊಂಡಿದ್ದರಿಂದ ನಾನು ಆರೋಗ್ಯವಾಗಿದ್ದೇನೆ.
2018ರ ಕೊಡಗು ಭೂಕುಸಿತದ ಸಂದರ್ಭದಲ್ಲಿ ಅಲ್ಲಿ ಪಾದಯಾತ್ರೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಿರಿ. ಅದರ ಅನುಭವ ಹೇಗಿತ್ತು ?
ಪಾದಯಾತ್ರೆ ನನಗೆ ಹೊಸತೇನೂ ಅಲ್ಲ.ನಾನು ಯಾರ ಗಮನಸೆಳೆಯುವುದಕ್ಕಾಗಿಯೂ ಪಾದಯಾತ್ರೆ ಮಾಡಿರುವುದಲ್ಲ. ಕೊಡಗು, ಶಿರಾಡ್ ಘಾಟ್ನಲ್ಲೂ ಮಳೆಯಿಂದಾಗಿ ಭೂಕುಸಿತ ವಾಗಿತ್ತು. ಅನೇಕ ನಾಶ ನಷ್ಟಗಳು ಸಂಭವಿಸಿದ್ದಲ್ಲದೇ, ತುತ್ತಿನ ಅನ್ನಕ್ಕಾಗಿಯೂ ಅಲ್ಲಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಶಿರಾಡಿಯಲ್ಲಿ ನಾಲ್ಕೈಸು ತಿಂಗಳು ವಾಹನಗಳ ಸಂಚಾರಕ್ಕೆ ನಿರ್ಭಂಧ ಹೇರಿದ್ದರು. ಅಂಥ ಸಂದರ್ಭದಲ್ಲಿ ಸಕಲೇಶಪುರಿಂದ ಗುಂಡ್ಯದವರೆಗೆ ನಾನು ಪಾದಯಾತ್ರೆ ಮಾಡುವ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ನೇರವಾಗಿ ತಿಳಿದು ನನ್ನ ಕೈಲಾದ ಮಟ್ಟಿಗೆ ಪರಿಹಾರ ನೀಡಿದೆ. ಇಂಥ ಅನುಭವ ಪಾದಯಾತ್ರೆಯ ಪ್ರವಾಸದಿಂದ ಮಾತ್ರ ಸಿಗಲು ಸಾಧ್ಯ.
ವೃತ್ತಿಯ ಜತೆಗೆ ಪ್ರವೃತ್ತಿಯನ್ನು ಸರಿದೂಗಿಸುವುದು ಕಷ್ಟವಾಗಿಲ್ಲವೇ? ಆಸಕ್ತಿಯ ಬೆನ್ನು ಹತ್ತಿ ಜನಸೇವೆಯಲ್ಲಿ ತೊಡಕಾಗಿಲ್ಲವೇ?
ಖಂಡಿತಾ ಇಲ್ಲ. ನನ್ನ ಸೈಕ್ಲಿಂಗ್ ಆಸಕ್ತಿಗಾಗಿ ಜನಸೇವೆಯನ್ನು ಎಂದಿಗೂ ಕಡೆಗಣಿಸುವುದಿಲ್ಲ. ಬದಲಿಗೆ ಶನಿವಾರ, ಭಾನುವಾರಗಳಂದು ಬೆಳಗ್ಗಿನ ಸಮಯದಲ್ಲಿ ಮಾತ್ರ ಸೈಕ್ಲಿಂಗ್ಗೆ ಹೋಗುತ್ತೇನೆ. ಪ್ರತಿ ಸೋಮವಾರ ʻಜನರೊಂದಿಗೆ ಜನಸೇವಕʼ ಎಂದು ಮಾಡುತ್ತೇವೆ. ಸರಕಾರ ಸದ್ಯ ಮಾಡುತ್ತಿರುವ `ಪ್ರಜಾಸೇವೆ’ ಎಂಬ ಪರಿಕಲ್ಪನೆಯನ್ನು ಬಹಳ ಹಿಂದಿನಿಂದಲೇ ನಾವು ರೂಢಿಸಿಕೊಂಡಿದ್ದೇವೆ. ಇನ್ನು ʻದಿನಕ್ಕೊಂದು ವಾರ್ಡ್ ನಡಿಗೆʼ ಎಂಬ ಯೋಜನೆಯ ಮೂಲಕ ಜನರ ಸಮಸ್ಯೆಗಳನ್ನು ಕೇಳಿ ತಿಳಿಯುತ್ತೇವೆ. ಅನೇಕ ಸಲ ರಾಜಾಜಿನಗರ ಕ್ಷೇತ್ರದೊಳಗೆಯೇ ಸೈಕ್ಲಿಂಗ್ ಮಾಡುತ್ತೇವೆ.
ಹಿಂದೊಮ್ಮೆ ನಿಮ್ಮ ಸೈಕಲ್ ಆಸಕ್ತಿಗೆ ಸದಾನಂದ ಗೌಡರು ಮೆಚ್ಚಿಕೊಂಡಿರುವ ಸುದ್ದಿ ಸದ್ದುಮಾಡಿತ್ತು. ಆ ಸನ್ನಿವೇಶವನ್ನು ತಿಳಿಸುವಿರಾ?
ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪೆಟ್ರೋಲ್ ದರ ಏರಿಕೆ ಮಾಡಿರುವ ಹಿನ್ನಲೆಯಲ್ಲಿ ನಮ್ಮ ಪಕ್ಷ, ಭಾರತ್ ಬಂದ್ಗೆ ಕರೆ ಕೊಟ್ಟಿತ್ತು. ಆಗ ಇಡೀ ಬೆಂಗಳೂರಿನ್ನು ಸೈಕಲ್ ನಲ್ಲೇ ಸುತ್ತಾಡಿದ್ದೆ. ಅಲ್ಲದೆ ಸೈಕಲ್ನಲ್ಲೇ ಸದಾನಂದ ಗೌಡರ ಮನೆಗೂ ಹೋಗಿದ್ದೆ. ಅವರಿಗೆ ನನ್ನ ಸೈಕಲ್ ಸವಾರಿ ಕಂಡು ಆಶ್ಚರ್ಯವಾಗಿದ್ದಲ್ಲದೆ, ಆಸೆಪಟ್ಟು ನನ್ನ ಸೈಕಲ್ ಏರಿ ಒಂದು ರೌಂಡ್ ಹೋಗಿಬಂದಿದ್ದರು. ಅಷ್ಟೇ ಅಲ್ಲದೆ, ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದ ಯಡಿಯೂರಪ್ಪನವರ ಮೊಮ್ಮಗಳ ಅದ್ಧೂರಿ ನಿಶ್ಚಿತಾರ್ಥಕ್ಕೂ ಸೈಕಲ್ನಲ್ಲೇ ಹೋದ ಅನುಭವ ಇಂದಿಗೂ ಖುಷಿ ನೀಡುತ್ತದೆ.
ಕುಟುಂಬದ ಜತೆಗೆ ಪ್ರವಾಸ ಹೋಗಿರುವ ಅನುಭವ?
ಚಿಕ್ಕಂದಿನಿಂದಲೂ ತಾಯಿಯ ಜತೆಗೂ ಅನೇಕ ಯಾತ್ರೆಗಳನ್ನು ಮಾಡಿದ್ದೇನೆ.ಆದರೆ ವಿಶೇಷವಿರುವುದು ಪತ್ನಿಯ ಜತೆಗಿನ ಪ್ರವಾಸದ ಅನುಭವ. 1988,18ರಂದು ನಾನು ಮದುವೆಯಾದೆ. ಅದಾಗಿ ಎರಡು ದಿನಗಳಲ್ಲಿ ಅಂದರೆ 20ರಂದು ಪತ್ನಿಯ ಜತೆಗೆ ಅಮರನಾಥಕ್ಕೆ ಚಾರಣ ಮಾಡಿದ್ದೆ. ಇನ್ನೂ ಅನೇಕ ಬಾರಿ,ನೇಪಾಳದಲ್ಲಿರುವ ಅನ್ನಪೂರ್ಣೇಶ್ವರಿ ಟ್ರೆಕ್ಕಿಂಗ್, ಚಾರ್ಧಾಮ್ ಸೇರಿದಂತೆ ಹಲವು ಧಾರ್ಮಿಕ ಪ್ರವಾಸಗಳಿಗೂ ಹೋಗಿದ್ದೇನೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬಗೆಗೆ ನಿಮ್ಮ ಅಭಿಪ್ರಾಯವೇನು ?
ನಾನು ಇದುವರೆಗೂ ಎರಡು ವಿದೇಶಗಳಿಗೆ ಪ್ರಯಾಣ ಮಾಡಿದ್ದೇನೆ. ಬಿಡಬ್ಯುಎಸ್ಎಸ್ಬಿ ಮಿನಿಸ್ಟರ್ ಆಗಿದ್ದ ವೇಳೆ, ಸಿಂಗಾಪುರದಲ್ಲಿ ʻವಾಟರ್ ಸಮ್ಮಿತ್ʼನಲ್ಲಿ ಭಾಗವಹಿಸುವ ಸಲುವಾಗಿ ಅಲ್ಲಿಗೆ ಭೇಟಿ ನೀಡಿದ್ದೆ. ಮತ್ತೊಮ್ಮೆ ಲಂಡನ್ ಪಾರ್ಲಿಮೆಂಟ್ ನೋಡಬೇಕೆಂಬ ಆಸೆಯಿಂದ ಹೋಗಿದ್ದೆ. ಆ ಎರಡೂ ಕಡೆ ಪ್ರವಾಸಿಗರ ಭೇಟಿ, ಅವರಿಗೆ ಸಿಗುವ ಸವಲತ್ತುಗಳನ್ನು ನೋಡಿ ನನಗೆ ಅಚ್ಚರಿಯಾಯ್ತು..ಶೇಕ್ಸ್ಫಿಯರ್ ಮನೆಯನ್ನು ಪ್ರವಾಸಿ ತಾಣವನ್ನಾಗಿಸಿದ ರೀತಿ, ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ಪ್ರವಾಸಿಗರಿಗೆ ಸಿಗುವ ಸೌಲಭ್ಯ ಇವೆಲ್ಲವನ್ನೂ ನೋಡಿದ ನಂತರ ಪ್ರವಾಸಿ ತಾಣಗಳ ಕಣಜವೆಂದೇ ಕರೆಸಿಕೊಳ್ಳುವ ಕರ್ನಾಟಕದಲ್ಲಿ ಇಂಥ ಯಾವ ಪ್ರಯತ್ನಗಳೂ ನಡೆಯುವದಿಲ್ಲವೇಕೆ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿದೆ.

ಕರ್ನಾಟಕದಲ್ಲಿ ಧಾರ್ಮಿಕ ಪ್ರವಾಸ, ಆರೋಗ್ಯ ಪ್ರವಾಸ, ಶಿಕ್ಷಣ ಪ್ರವಾಸ ಹೀಗೆ ಅನೇಕ ವಿಭಾಗಗಳಾಗಿ ಪ್ರವಾಸೋದ್ಯಮ ಕ್ಷೇತ್ರ ಹರಡಿಕೊಂಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ?
ನಮ್ಮಲ್ಲಿ ಟೆಂಪಲ್ ಟೂರಿಸಂಗೆ ಸಾಕಷ್ಟು ಅವಕಾಶಗಳಿವೆ. ಟೆಂಪಲ್ ಟೂರಿಸಂ ಸರ್ಕ್ಯುಟ್ಗಳನ್ನು ಮಾಡುವುದಕ್ಕೆ ವಿಪುಲವಾದ ಅವಕಾಶವಿದ್ದು ಅದನ್ನು ಸರಕಾರ ಶೀಘ್ರದಲ್ಲೇ ಮಾಡಬೇಕಿದೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ಇಕೋ ಟೂರಿಸಂ ಅಭಿವೃದ್ಧಿ ಕಾಣಬೇಕಿದೆ. ಇನ್ನು ಹೆಲ್ತ್ ಟೂರಿಸಂ ವಿಚಾರದಲ್ಲಿ ನಮ್ಮ ಪಾರಂಪರಿಕ ಚಿಕಿತ್ಸಾ ವಿಧಾನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂಬುದು ನನ್ನ ಅನಿಸಿಕೆ.
ಸೈಕ್ಲಿಂಗ್ ಮೂಲಕ ಯುವ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದೀರಾ?
ರಾಜಾಜಿನಗರದಲ್ಲಿ ಪೊಲೀಸ್, ಬಿಬಿಎಂಪಿ, ಬೆಸ್ಕಾಂ, ಬಿಡಬ್ಯುಎಸ್ಎಸ್ಬಿ ಸೇರಿದಂತೆ ಎಲ್ಲ ಅಧಿಕಾರಿಗಳ ಜತೆ ತಿಂಗಳಿಗೊಮ್ಮೆ ಸೈಕ್ಲಿಂಗ್ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ. ಪುದುಚೇರಿಯಲ್ಲಿ ಕಿರಣ್ ಬೇಡಿಯವರು ಪ್ರತಿ ತಿಂಗಳು ಇಂಥ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವುದು ನನ್ನಲ್ಲೂ ಇಂಥ ಆಸೆ ಹುಟ್ಟಿಕೊಳ್ಳಲು ಕಾರಣವಾಯ್ತು. ಇನ್ನು ಹೈಸ್ಕೂಲು ಮಕ್ಕಳಿಗಾಗಿಯೇ ವಿಶೇಷ ಯೋಜನೆ ಸಿದ್ಧವಾಗಿದ್ದು ಆಸುಪಾಸಿನ ಸುಮಾರು 5-8 ಕಿಮೀ. ವ್ಯಾಪ್ತಿಯಲ್ಲಿ ಅವರೊಂದಿಗೆ ಸೈಕ್ಲಿಂಗ್ ಮಾಡುವ ಯೋಜನೆಯೂ ಇದೆ. ರಾಜಾಜಿನಗರದಲ್ಲಿ ಸೈಕ್ಲಿಂಗ್ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರನ್ನೂ ಜತೆಗೂಡಿಸಿಕೊಂಡು ಒಂದಷ್ಟು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವಿದೆ. ಆದರೆ ಸೈಕ್ಲಥಾನ್ನಂಥ ಕಾರ್ಯಕ್ರಮಗಳು ನನಗಿಷ್ಟವಾಗುವುದಿಲ್ಲ.
ಯುವ ಜನತೆಯಲ್ಲಿ ಪ್ರವಾಸದ ಆಸಕ್ತಿ ಮೂಡಿಸುವುದಕ್ಕೆ ನಿಮ್ಮ ಗೈಡ್ ಲೈನ್ಸ್ ?
ನನ್ನ ಯೋಜನೆಗಳು ಪ್ರಾರಂಭವಾಗುವುದು ಕಾಲೇಜುಗಳಿಂದ. ಅಲ್ಲಿ ಮಕ್ಕಳ ಮುಂದೆ ನಿಂತು ಆರೋಗ್ಯದ ಅರಿವು, ಸೈಕ್ಲಿಂಗ್ ಮಹತ್ವವನ್ನು ನನ್ನದೇ ಉದಾಹರಣೆಯನ್ನು ನೀಡುವ ಮೂಲಕ ತಿಳಿಹೇಳುತ್ತೇನೆ. ಜನವರಿ 1ರಂದು ಮೋದಿಯವರು ನನಗೆ ಮಾಡಿದ್ದ ಕರೆಯ ಬಗ್ಗೆ ತಿಳಿಸಿ, ಇಂಥ ಕರೆಗಳು ನಿಮಗೂ ಬರಬೇಕೆಂಬ ಆಸೆ ನಿಮ್ಮಲ್ಲಿದ್ದರೆ, ಫಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಎಂಬಂತೆ ನಾನೂ ಕರೆ ನೀಡುತ್ತೇನೆ, ಯುವ ಜನಾಂಗವನ್ನು ಎಚ್ಚರಿಸುತ್ತೇನೆ. ಸಂವಾದಗಳಿಂದಲೇ ಯುವ ಜನತೆಯಲ್ಲಿ ಜಾಗೃತಿ ಮೂಡಿಸಲು ಸಾಧ್ಯ.