Tuesday, October 28, 2025
Tuesday, October 28, 2025

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

ನನ್ನ ಮಗಳು ನನಗೆ ಟೆನ್ಷನ್ ಆಗ್ತಾ ಇದೆ. ನೆಮ್ಮದಿಗಾಗಿ ಜಾರ್ಜಿಯಾ ಹೋಗಬೇಕು ಅಂದಾಗ ನಾ ಹೇಳಿದೆ, ಜಾರ್ಜಿಯಾ ಹೋಗುವುದರಿಂದ ನಿನಗೆ ನೆಮ್ಮದಿ ಸಿಗಲ್ಲ. ಯಾಕೆಂದರೆ ಜಾರ್ಜಿಯಾಗೆ ನಿನ್ನೊಂದಿಗೆ ಟೆನ್ಷನ್ ತುಂಬಿದ ಮನಸೂ ಜತೆಗಿರುತ್ತಲ್ಲ ಅಂತ. ಎಲ್ಲೇ ಹೋದರೂ ಮನಸು ನಿಮ್ಮಲ್ಲೇ ಇರಬೇಕು.

ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ರಮೇಶ್ ಅರವಿಂದ್ ಅವರ ಸಿನಿಮಾ ಪ್ರಯಾಣದ ಮಾಹಿತಿ ಚಿತ್ರಪ್ರೇಮಿಗಳಿಗೆ ಇಂಚಿಂಚೂ ಗೊತ್ತಿದೆ. ತಮ್ಮ ಪ್ರೇರಣಾದಾಯಕ ಮಾತುಗಳಿಂದ, ಪುಸ್ತಕಗಳಿಂದ, ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಗಳ ಮೂಲಕ ದಶಕಗಳಿಂದ ಅವರು ಜನಮಾನಸದಲ್ಲಿ ಸ್ಥಾನ ಭದ್ರವಾಗಿರಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪರೂಪದ ಕಥಾವಸ್ತುಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುತ್ತಿರುವ ಹಿರಿಯ ನಟ ರಮೇಶ್ ಅರವಿಂದ್, ಸದ್ಯಕ್ಕೆ ಯುವರ್ಸ್ ಸಿನ್ಸಿಯರ್ಲಿ ರಾಮ್, ಕೆಡಿ ಮತ್ತು ದೈಜಿ ಮೊದಲಾದ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರವಾಸಪ್ರಿಯರೂ ಆಗಿರುವ ರಮೇಶ್ ಅರವಿಂದ್, ಇತರರಿಗಿಂತ ಭಿನ್ನವಾದ ದೃಷ್ಟಿಕೋನದಿಂದ ಪ್ರವಾಸವನ್ನು ಸವಿಯುತ್ತಾರೆ. ಪ್ರವಾಸದ ಕುರಿತು ಸ್ವಾರಸ್ಯಕರ ಅನುಭವಗಳನ್ನು ಪ್ರವಾಸಿ ಪ್ರಪಂಚದೊಂದಿಗೆ ಹಂಚಿಕೊಂಡದ್ದು ಹೀಗೆ. ಪ್ರವಾಸದ ಅನುಭವದ ಜತೆಜತೆಗೇ ಜೀವನಪಾಠವೂ ಸಿಗುತ್ತದೆ ಎಂಬುದು ರಮೇಶ್ ಅವರ ಈ ಸಂದರ್ಶನದ ಬೋನಸ್ ಪಾಯಿಂಟ್.

ramesh aravind (1)

ಪ್ರವಾಸಕ್ಕೆ ನೀವು ಕೊಡುವ ವ್ಯಾಖ್ಯಾನ ಏನು?

ಸಿನಿಮಾ ನಟನಾಗಿ ನನ್ನ ಪ್ರವಾಸದ ದೃಷ್ಟಿಕೋನವೇ ಬೇರೆ. ಉದಾಹರಣೆಗೆ ನೀವು ಚಿಕ್ಕಮಗಳೂರಿಗೆ ಹೋದರೆ ಅಬ್ಬಬ್ಬಾ ಅಂದರೆ ಮುಳ್ಳಯ್ಯನಗಿರಿ ಬೆಟ್ಟ ನೋಡಿ ಬರಬಹುದಷ್ಟೇ. ನಾನು ಹಾಗಲ್ಲ, ಬೆಟ್ಟವನ್ನೂ ನೋಡಿದ್ದೇನೆ. ಬೆಟ್ಟದ ಮೇಲಿನಿಂದ ಕೆಳಗೆ ಶರತ್ ಬಾಬುವಂಥ ಕಲಾವಿದನನ್ನು ತಳ್ಳಿದ್ದೇನೆ! ಹೀಗೆ ಸಿನಿಮಾಗೆಂದು ಹೋಗುವ ಪ್ರತಿ ಪ್ರವಾಸದಲ್ಲೂ ಆಯಾ ಊರಿನ ಜತೆ ಒಂದು ಭಾವನಾತ್ಮಕ ನಂಟು ಬೆಳೆಯುವಂಥ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಹೈದರಾಬಾದ್ ಅಥವಾ ದೆಹಲಿಯ ಮುಖ್ಯರಸ್ತೆಯಲ್ಲೇ ಕುರ್ಚಿ ಹಾಕಿ ಚಹಾ ಹೀರುವ ದೃಶ್ಯಗಳಲ್ಲಿಯೂ ಭಾಗಿಯಾಗಬಲ್ಲೆ. ಹೀಗೆ ಸಿನಿಮಾಗೆ ಸಂಬಂಧಿಸಿದ ಪ್ರವಾಸವೇ ವಿಶಿಷ್ಠವಾಗಿರುತ್ತವೆ. ನಿಮ್ಮ ಯೋಚನೆಯನ್ನೇ ಬದಲಾಯಿಸಬಲ್ಲ ದೃಶ್ಯಗಳು ಕಾಣಿಸಿದಾಗ ನಿಮ್ಮ ಬದುಕಿನ ರೀತಿಯೇ ಬದಲಾಗಬಹುದು. ಅಂಥ ಪ್ರವಾಸಗಳು ಎಲ್ಲರಿಗೂ ಸ್ಮರಣಾರ್ಹವಾಗಿರುತ್ತದೆ. ಇತ್ತೀಚೆಗೆ ಆಫ್ರಿಕಾದ ಮಾಸೈ ಮರಾದಲ್ಲಿ ನಡೆಸಿದ ಸಫಾರಿಯಲ್ಲಿ ನನಗೆ ಇಂಥ ಅನುಭವ ಆಗಿತ್ತು.

ಮಾಸೈ ಮರಾದಲ್ಲಿ ನಿಮಗಾದ ಅನುಭವವನ್ನು ನಮ್ಮೊಡನೆ ಹಂಚಿಕೊಳ್ಳುತ್ತೀರಾ?

ನಮ್ಮಲ್ಲೆಲ್ಲ ಸಫಾರಿಗೆ ಹೋಗಿ ಗಂಟೆಗಟ್ಟಲೆ ಕಾದಾಗಲೇ ಹುಲಿಯೋ, ಸಿಂಹವೋ ಕಾಣಲು ಸಾಧ್ಯ. ಆದರೆ ಆಫ್ರಿಕಾದ ಮಾಸೈ ಮರಾದಲ್ಲಿ ಕೇವಲ ಎರಡು ಎರಡೂವರೆ ಗಂಟೆಯಲ್ಲಿ ಆ ಪ್ರದೇಶದ ಅದ್ಭುತ ಜೀವಿಗಳಾದ ಜೀಬ್ರಾ, ಜಿರಾಫೆ, ಹೈನಾ, ಕುಟುಂಬ ಸಮೇತವಾದ ಸಿಂಹ ಎಲ್ಲವನ್ನೂ ಹುಲ್ಲುಗಾವಲಲ್ಲೇ ನೋಡುವ ಅವಕಾಶ ಲಭಿಸಿತು. ನಮ್ಮಲ್ಲಿ ಮರಗಿಡಗಳ ಮಧ್ಯೆ ಅಷ್ಟೇ ನೋಡಲು ಸಾಧ್ಯವಾಗುವುದು. ಆದರೆ ಮಾಸೈ ಮರಾದಲ್ಲಿ ಎಲ್ಲ ಪ್ರಾಣಿಗಳು ಸ್ಪಷ್ಟವಾಗಿ ಕಾಣಿಸುತ್ತವೆ. ನಾನು ವಲಸೆಯ ಸಂದರ್ಭದಲ್ಲಿ ಹೋಗಿದ್ದ ಕಾರಣ ಹತ್ತು ಸಾವಿರದಷ್ಟು ಪ್ರಾಣಿಗಳು ಗುಂಪಾಗಿ ಸಾಗುವುದನ್ನು ನೋಡಲು ಸಾಧ್ಯವಾಯಿತು.

ಪ್ರವಾಸಗಳಿಂದ ಮನುಷ್ಯ ಕಲಿಯಬೇಕಾಗಿರುವಂಥದ್ದು ಏನು?

ಮನುಷ್ಯನಿಗೆ ಪ್ರತಿ ಹೆಜ್ಜೆಯಲ್ಲೂ ಕಲಿಯುವ ಅವಕಾಶಗಳಿವೆ. ಅದರಲ್ಲೂ ಪ್ರವಾಸ ಅಥವಾ ಸಫಾರಿ ಹೋದಾಗ ಪ್ರಾಣಿಗಳಿಂದಲೂ ಕಲಿಯಬಹುದು. ಈ ಕಾಡು ಪ್ರಾಣಿಗಳಿಗೆ ಯಾರೂ ನಿತ್ಯ ಡೈನಿಂಗ್ ಟೇಬಲ್ ನಲ್ಲಿ ಆಹಾರ ಇರಿಸಿ ತಿನ್ನಲು ಕರೆಯುವುದಿಲ್ಲ. ತಮ್ಮ ಆಹಾರವನ್ನು ತಾವೇ ಬೇಟೆಯಾಡಿ ಸಂಪಾದಿಸುತ್ತವೆ. ಆಯಾ ಹೊತ್ತಿಗೆ ಹೊಟ್ಟೆ ತುಂಬಬೇಕಾದರೆ ಆ ಕ್ಷಣವೇ ಹೊಡೆದಾಡಬೇಕು. ಆದರೆ ನಮಗೆ ಮನುಷ್ಯರಾಗಿ ಹೊಡೆದಾಟವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳುವ ಅದ್ಭುತ ಅವಕಾಶ ಸಿಕ್ಕಿದೆ. ಇದಕ್ಕಿಂತ ದೊಡ್ಡ ಜೀವನಪಾಠ ಬೇರೇನಿದೆ ಹೇಳಿ! ಮಾತ್ರವಲ್ಲ ಮಾಸೈ ಮರಾದಲ್ಲಿ ಪ್ರಾಣಿಗಳಿಗೆ ಅವುಗಳ ಹತ್ತಿರದಲ್ಲೇ ಸಾಗುವ ಜೀಪ್ ನಲ್ಲಿರುವ ಪ್ರವಾಸಿಗರ ಬಗ್ಗೆ ಯಾವುದೇ ತಕರಾರಿಲ್ಲ. ಒಂದು ವೇಳೆ ನೀವು ವಾಹನದಿಂದ ಇಳಿದು ಹೋದರೆ ದಾಳಿ ಮಾಡುತ್ತವೆ. ಇದು ನಮ್ಮ ನಮ್ಮ ಗಡಿಗಳ ಪಾಠವೂ ಹೌದು.

ramesh

ಪ್ರವಾಸದಲ್ಲಿದ್ದಾಗ ನಡೆದ ತಮಾಷೆಯ ಘಟನೆ ಏನಾದರೂ ಹೇಳಬಹುದೇ?

ಇದು ಸ್ವಿಟ್ಜರ್ ಲೆಂಡ್ ನಲ್ಲಿ ನನ್ನ 'ಸೌಂದರ್ಯ' ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆ. ನಾವು ಹಾಡಿನ ಚಿತ್ರೀಕರಣಕ್ಕೆ ಅಂತ ಬಿಳಿಯ ಬಟ್ಟೆ ಹಾಕಿಕೊಂಡಿದ್ದೆವು. ನಮ್ಮಲ್ಲಿ ಗ್ಲಾಮರಸ್ ಹಾಡಿನ ಶೂಟಿಂಗ್ ವೇಳೆ ಅಥವಾ ಗ್ರೀನರಿ ಹಿನ್ನೆಲೆಯಲ್ಲಿ ವೈಟ್ ಡ್ರೆಸ್ ಬಳಸೋದು ತೀರ ಸಾಮಾನ್ಯ. ಆದರೆ ಅಲ್ಲಿನ ಒಬ್ಬ ವ್ಯಕ್ತಿ ಬಂದು ಇದು ಶೋಕ ಗೀತೇನಾ ಅಂತ ಕೇಳಿದ್ದ. ಇಲ್ಲ ಇದು ಪ್ರೇಮಗೀತೆ. ನಿಮಗೆ ಯಾಕೆ ಈ ಸಂದೇಹ ಬಂತು ಅಂತ ಕೇಳಿದಾಗ, "ಅಲ್ಲ ನಮ್ಮಲ್ಲಿ ವೈಟ್ ಅಂದರೆ ಶೋಕದ ಸಂಕೇತ" ಅಂದ! ಅದು ಅಲ್ಲಿನವರ ರೀತಿ.

ನೀವು ನಿಮ್ಮ ಪ್ರವಾಸದ ಯೋಜನೆಯನ್ನು ಯಾವ ರೀತಿಯಲ್ಲಿ ಮಾಡಿಕೊಂಡಿರುತ್ತೀರಿ?

ಸಾಮಾನ್ಯವಾಗಿ ನಾನು ಕತ್ತೆ ಥರ ದುಡಿಯುತ್ತಿರುತ್ತೇನೆ. ಒಂದು ಸಿನಿಮಾ ಪೂರ್ತಿಯಾದ ಮೇಲೆ ಕುಟುಂಬದ ಜತೆ ಪ್ರವಾಸದ ಯೋಜನೆ ಹಾಕಿಕೊಳ್ಳುತ್ತೇನೆ. ಸಾಧ್ಯವಾದಷ್ಟು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅಂದರೆ ಸುಮಾರು ಏಳೆಂಟು ತಿಂಗಳು ನಿರಂತರ ಕೆಲಸಕ್ಕಂತಲೇ ಮೀಸಲಾಗಿರುತ್ತೇನೆ. ಅದೆಲ್ಲ ಮುಗಿದ ಮೇಲೆ ಒಂದು ಪ್ರವಾಸದ ಪ್ಲ್ಯಾನ್ ಮಾಡುತ್ತೇನೆ.

ಒಂದು ಪ್ರವಾಸ ಮಾನಸಿಕ ನೆಮ್ಮದಿಗೆ ಕಾರಣ ಎನ್ನಬಹುದೇ?

ಖಂಡಿತವಾಗಿ ಇಲ್ಲ! ಮಾನಸಿಕ ನೆಮ್ಮದಿ ಮೊದಲು ನಮ್ಮಲ್ಲೇ ಇರಬೇಕು. ಉದಾಹರಣೆಗೆ ನನ್ನ ಮಗಳು ನನಗೆ ಟೆನ್ಷನ್ ಆಗ್ತಾ ಇದೆ. ನೆಮ್ಮದಿಗಾಗಿ ಜಾರ್ಜಿಯಾ ಹೋಗಬೇಕು ಅಂದಾಗ ನಾ ಹೇಳಿದೆ, ಜಾರ್ಜಿಯಾ ಹೋಗುವುದರಿಂದ ನಿನಗೆ ನೆಮ್ಮದಿ ಸಿಗಲ್ಲ. ಯಾಕೆಂದರೆ ಜಾರ್ಜಿಯಾಗೆ ನಿನ್ನೊಂದಿಗೆ ಟೆನ್ಷನ್ ತುಂಬಿದ ಮನಸೂ ಜತೆಗಿರುತ್ತಲ್ಲ ಅಂತ. ಎಲ್ಲೇ ಹೋದರೂ ಮನಸು ನಿಮ್ಮಲ್ಲೇ ಇರಬೇಕು. ವಿಶ್ವದ ಅದ್ಭುತ ಸೌಂದರ್ಯ ನೋಡುತ್ತಿರುವಾಗ ಫೋನಲ್ಲಿ ಒಂದು ಕೆಟ್ಟ ಸುದ್ದಿ ಬಂದರೆ ಆಮೇಲೆ ಆ ಜಾಗ ನಿಮಗೆ ಅದ್ಭುತವಾಗಿ ಉಳಿಯುವುದಿಲ್ಲ. ಮೊದಲು ನಿಮ್ಮ ಮನಸನ್ನು ಪ್ರವಾಸದ ಆಸ್ವಾದನೆಗೆ ಸಿದ್ಧಗೊಳಿಸುವುದರಲ್ಲೇ ಎಲ್ಲವೂ ಅಡಗಿದೆ. ಮನಸು ಚೆನ್ನಾಗಿದ್ದರೆ ಪಕ್ಕದಲ್ಲೇ ಇರುವ ನಮ್ಮೂರಿಗೆ ಹೋದರೂ ನೆಮ್ಮದಿ ಪಡೆಯಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಬಾಲ್ಯದಲ್ಲಿ ಕಾಳೇನಹಳ್ಳಿ ಅರಸೀಕೆರೆ ಬಿಟ್ಟು ಹೊರಗೇ ಹೋಗಿರಲಿಲ್ಲ!

Read Next

ಬಾಲ್ಯದಲ್ಲಿ ಕಾಳೇನಹಳ್ಳಿ ಅರಸೀಕೆರೆ ಬಿಟ್ಟು ಹೊರಗೇ ಹೋಗಿರಲಿಲ್ಲ!