• ಅಂಜಲಿ ರಾಮಣ್ಣ

ಅನಿವಾರ್ಯತೆ ಸೃಷ್ಟಿಸುವ ಘಳಿಗೆ ನಮ್ಮ ಸಾಮರ್ಥ್ಯದ ಮಾಪಕ. ಅದರಲ್ಲೂ ವಿಮಾನಯಾನದ ಪಯಣಿಗ ಗರ್ಭದಲ್ಲಿರುವ ಕೂಸಿನಷ್ಟೇ ಅಸಹಾಯಕ ಎನ್ನುವುದನ್ನು ಮನದಟ್ಟು ಮಾಡಿಸುತ್ತದೆ ಪ್ರವಾಸ. ಅಲೆದಾಟ ಕಲಿಸುವ ಪಾಠಕ್ಕಿಂತ ಪಿರಿಪಠ್ಯ ಮತ್ತೊಂದಿಲ್ಲ. “ಇದನ್ನು ನಾನು ಕಲಿತೆ” ಎನ್ನುವ ಅಹಂ ಅನ್ನು ತಗ್ಗಿಸಿ “ಇದನ್ನು ನಾನು ಕಲಿಸಿದೆ” ಎಂದು ಬದುಕು ಬೆನ್ನು ತಟ್ಟಿಕೊಳ್ಳುವ ಆಕಾಶ, ಅವಕಾಶ ಎರಡೂ ಪ್ರವಾಸವೇ. ಹೀಗೆ ಒಮ್ಮೆ ಪ್ರವಾಸದಲ್ಲಿ ಬದುಕು ತನ್ನ ವಿರಾಟರೂಪವನ್ನು ನನಗೂ ತೋರಿತ್ತು.

ಅಸಹಾಯಕತೆಯ ಪರಮಾವಧಿ ಹೇಗಿರುತ್ತದೆ ಎನ್ನುವ ಅರಿವಾಗಿದ್ದು ಆ ದಿನ. ನೋವನ್ನೂ ಮೀರಿಹೋಗುವ ಆದರೂ ಸೂಕ್ಷ್ಮತೆಯನ್ನೂ ಉಳಿಸಿಕೊಳ್ಳುವ ಮನುಷ್ಯನ ಅಪಾರ ಶಕ್ತಿಯ ಅರಿವಾಗಿದ್ದೂ ಅದೇ ದಿನ. ಪ್ರಾರ್ಥನೆಯಲ್ಲಿ ನಂಬಿಕೆಯನ್ನು ಬಲಗೊಳಿಸಿದ ದಿನವದು. ಫ್ರಾಂಕ್ ಫರ್ಟ್ ಕಡೆಯಿಂದ ದೋಹಾ ನಗರದೆಡೆಗೆ ವಿಮಾನ ಹತ್ತಿದಾಗ ಪಕ್ಕದಲ್ಲಿ ಕುಳಿತಿದ್ದ ತಂದೆ, ತಾಯಿ, ಹದಿಹರೆಯದ ಮಗಳೊಬ್ಬಳ ಮಾತುಗಳಿಂದ ತಿಳಿಯುತ್ತಿತ್ತು ಹದಿನೆಂಟು ಇಪ್ಪತ್ತು ಜನ ನೆಂಟರಿಷ್ಟರ ಗುಂಪೊಂದು ಮಹಾರಾಷ್ಟ್ರದಿಂದ ಯೂರೋಪ್ ಪ್ರವಾಸ ಬಂದಿದ್ದು. ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿ ಅವರೆಲ್ಲರೂ ಭಾರತಕ್ಕೆ ಹಿಂತಿರುಗುತ್ತಿದ್ದರು.

ಆಕಾಶದಲ್ಲಿ ಎಲ್ಲಿ ಹಾರಾಡುತ್ತಿದ್ದೇವೆ ಎಂದು ಕಂಡುಕೊಳ್ಳಲು ಎದುರಿನ ಪರದೆಯ ಮೇಲೆ ತೇಲುಪಟ ಬರುವವರೆಗೂ ಕಾಯಬೇಕು. ಇಲ್ಲವೇ ಆಗೊಮ್ಮೆ ಈಗೊಮ್ಮೆ ಅರ್ಥವೇ ಆಗದ ಹಾಗೆ ಪೈಲಟ್ ಗಳು ಅವರವರ ದೇಶದ ಭಾಷಾ ಶೈಲಿಯಲ್ಲಿ ಗೊಣಗುವ ಪದಗಳನ್ನು ಬಹಳ ತ್ರಾಸದಿಂದ ಆಲಿಸುತ್ತಿರಬೇಕು. ಅವತ್ತು ಇದ್ದಕ್ಕಿದ್ದಂತೆ ಗಗನಸಖಿ ವಿಮಾನದಲ್ಲಿ ಯಾರಾದರೂ ಡಾಕ್ಟರ್ ಇದ್ದರೆ ಕೂಡಲೇ ಸಂಪರ್ಕಿಸಬೇಕು ಎಂದು ಘೋಷಿಸಿದಳು. ಮೂವರು ಡಾಕ್ಟರ್ ಗಳು ನಾನಿದ್ದ ಸೀಟಿನೆಡೆಗೇ ಬಂದರು. ಆಚೀಚೆ ನೋಡುವಷ್ಟರಲ್ಲೇ ಎರಡು ಸೀಟುಗಳ ಅಂತರದಲ್ಲಿ ಕುಳಿತಿದ್ದ ಅದೇ ಪೇಲವ ಹೆಂಗಸಿಗೆ ಹೃದಯಾಘಾತವಾಗಿದ್ದು ತಿಳಿಯಿತು.

ರಸ್ತೆಯಲ್ಲಿ ಹೋಗುವಾಗ ಆ್ಯಂಬ್ಯುಲೆನ್ಸ್ ಸದ್ದಿಗೆ ಎಂಥ ಟ್ರ್ಯಾಫಿಕ್ ಜಾಮ್ ನಲ್ಲೂ ‘ದಾರಿ ಬಿಡುವ’ ಮನಸ್ಸಾದರೂ ಮಾಡುತ್ತೀವಿ. ರೈಲಿನಲ್ಲಿ ಇಂಥ ತುರ್ತು ಪರಿಸ್ಥಿತಿಗಳಲ್ಲಿ ಚೈನು ಎಳೆದು ರೈಲು ನಿಲ್ಲಿಸಿಬಿಡುತ್ತೇವೆ ಎನ್ನುವ ಧೈರ್ಯವಾದರೂ ಇರುತ್ತದೆ. ಆದರೆ ವಿಮಾನ ಹಾರುವಾಗ ಉದ್ಭವಿಸುವ ತುರ್ತುಪರಿಸ್ಥಿತಿಗಳಿಗೆ ಸಹಪ್ರಯಾಣಿಕ ಕಣ್ಣು ಮುಚ್ಚಿಕೊಂಡು ಪ್ರಾರ್ಥನೆ ಮಾಡುವುದು ಅಥವಾ ಆತಂಕ ಪಟ್ಟುಕೊಳ್ಳುವುದರ ಹೊರತಾಗಿ ಮತ್ತೇನನ್ನೂ ಮಾಡಲಾರ.

ವಿದ್ಯೆ, ಬುದ್ಧಿ, ಶ್ರೀಮಂತಿಕೆ, ಅಂತಸ್ತು, ಧೈರ್ಯ, ಆತ್ಮವಿಶ್ವಾಸ, ಒಳ್ಳೆಯತನ ಎಲ್ಲವೂ ಅರ್ಥವಿಹೀನವಾಗಿ ಕೇವಲ ‘ಸುಮ್ಮನಿರುವಿಕೆ’ ಎನ್ನುವುದು ತನ್ನ ಮೇಲ್ಗೈ ಸಾಧಿಸಿಬಿಡುತ್ತದೆ. ಅಂಥ ಸಮಯದಲ್ಲಿ ಎಷ್ಟೆಷ್ಟೋ ಪದವಿಗಳನ್ನು ಹೊತ್ತ ವೈದ್ಯರುಗಳು ಕೂಡ ಪೂರಕ ಸಾಧನಗಳಿಲ್ಲದೆ ಅಸಹಾಯಕರಾಗುತ್ತಾರೆ. ಯಾವ ಪ್ರಯಾಣಿಕನೂ ತನ್ನ ಸೀಟು ಬಿಟ್ಟು ಅಲ್ಲಾಡದಂತೆ ಬೆಲ್ಟನ್ನು ಬಿಗಿಗೊಳಿಸಿಕೊಳ್ಳುವ ಅಪ್ಪಣೆಯಾಗಿರುತ್ತದೆ. ಪಕ್ಕದಲ್ಲೇ ನೋವು ಉಸಿರಾಡುತ್ತಿದ್ದರೂ ನೋಡುತ್ತಾ ಕೂರುವುದಷ್ಟೇ ಉಳಿದವರ ಮಿತಿಯಾಗಿರುತ್ತದೆ.

ಅಲ್ಲಿದ್ದ ವೈದ್ಯರು ವಿಮಾನದಲ್ಲಿ ಇದ್ದ ಪ್ರಾಥಮಿಕ ವೈದ್ಯಕೀಯ ಸಾಮಗ್ರಿಗಳನ್ನು ಬಳಸಿ ಆಕೆಯನ್ನು ಉಳಿಸಿಕೊಳ್ಳಲು ತಮ್ಮ ಪ್ರಯತ್ನ ಮಾಡುತ್ತಿದ್ದರು. ಬಾಹ್ಯದಿಂದ ಉಸಿರು ತುಂಬುವ ಯತ್ನ ಒಬ್ಬರದಾದರೆ, ಗಂಟಲಿನಲ್ಲಿ ಸಣ್ಣ ರಂಧ್ರ ಕೊರೆದು ಆಮ್ಲಜನಕದ ಪೈಪ್‍ಅನ್ನು ತೂರಿಸಲು ಮತ್ತೊಬ್ಬ ವೈದ್ಯನ ಪ್ರಯತ್ನ ಸಾಗುತ್ತಿತ್ತು. ಇನ್ನೊಬ್ಬ ಡಾಕ್ಟರ್ ಇಂಜೆಕ್ಷನ್ ಚುಚ್ಚುತ್ತಿದ್ದರು. ತುರ್ತಾಗಿ ವಿಮಾನವನ್ನು ಕೆಳಗಿಳಿಸಲೇ ಬೇಕೆನ್ನುವುದು ಅವರುಗಳ ಖಚಿತ ಅಭಿಪ್ರಾಯವಾಯಿತು.

ನಾವು ಹಾರಾಡುತ್ತಿದ್ದ ಆಕಾಶಕ್ಕೆ ಹತ್ತಿರವಾದ ಭೂಮಿ ಇರಾಕಿನ ಬಾಗ್ದಾದ್ ಎನ್ನುವ ಊರಾಗಿತ್ತು. ಹೌದು ಬಾಲ್ಯದಲ್ಲಿ ಓದಿ ಬೆಳೆದ ಅಲಿಬಾಬಾ ಮತ್ತು ನಲವತ್ತು ಕಳ್ಳರು ಕಥೆ ಹುಟ್ಟಿಕೊಂಡ ಊರು ಬಾಗ್ದಾದ್. ಪೈಲಟ್ ಅಲ್ಲಿನ ನಿಲ್ದಾಣದಲ್ಲಿ ವಿಮಾನ ಇಳಿಸಲು ಕೋರಿಕೆ ರವಾನಿಸಿದ. ISISನ ಮುಷ್ಠಿಯಲ್ಲಿರುವ ಆ ಜಾಗದಿಂದ ಕೂಡಲೇ ಉತ್ತರ ಬಂತು “ಕೋರಿಕೆಯನ್ನು ನಿರಾಕರಿಸಲಾಗಿದೆ” ಎಂದು. ಆಗಲೇ ಆಕೆಯ ಸಂಕಷ್ಟ ಶುರುವಾಗಿ ಎರಡು ಗಂಟೆಗಳಾಗಿದ್ದವು. ಕೊನೆಗೂ ವಿಮಾನ ದಿಕ್ಕು ಬದಲಿಸಿ ಇರಾನಿನ ಟೆಹ್‍ರಾನ್ ನಿಲ್ದಾಣಕ್ಕೆ ಸಲ್ಲಿಸಿದ ಕೋರಿಕೆ ಮಂಜೂರಾಗಿ ಅಲ್ಲಿ ವಿಮಾನ ಇಳಿಯುವಷ್ಟರಲ್ಲಿ ಮತ್ತೂ ತೊಂಬತ್ತು ನಿಮಿಷಗಳ ಸೇರ್ಪಡೆಯಾಗಿತ್ತು.

ನಿಂತ ವಿಮಾನದ ತುರ್ತು ಬಾಗಿಲುಗಳು ತೆರೆದುಕೊಂಡವು. ಇಬ್ಬರು ಅಧಿಕಾರಿಗಳು ಒಳಬಂದರು. ಇಲ್ಲಿದ್ದ ಡಾಕ್ಟರ್ ಗಳ ಇಂಗ್ಲಿಷ್ ಅವರಿಗೆ ಅರ್ಥವಾಗದು. ಅದೊಂದು ತುರ್ತುಪರಿಸ್ಥಿತಿ ಎನ್ನುವುದನ್ನು ತಿಳಿದುಕೊಳ್ಳಲೂ ಆಗದ ಅವರಿಬ್ಬರಲ್ಲಿ ಒಬ್ಬಾತ ತನ್ನನ್ನು ವೈದ್ಯ ಎಂದು ಹೇಳಿಕೊಂಡ. ಆದರೆ ರೋಗಿಯ ಪಾಸ್ ಪೋರ್ಟ್ ಪರಿಶೀಲಿಸದೆ ತಾನು ಏನೂ ಮಾಡಲಾಗುವುದಿಲ್ಲ ಎನ್ನುವುದನ್ನು ಹೇಳಿದ. ಆಕೆಯನ್ನು ವಿಮಾನದಿಂದ ಹೊರಗಿಳಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಆ ದೇಶದ ವೀಸಾ ಇರಲೇಬೇಕು ಎನ್ನುವುದು ಅವರ ನಿಯಮವಾಗಿತ್ತು. ಅದಕ್ಕಾಗಿ ಕಾಗದಪತ್ರಗಳ ಕೆಲಸ ಸರಸರನೆ ಆರಂಭವಾಯಿತು.

ಆಕೆಯ ಜೊತೆಗೆ ಕುಟುಂಬದ ಸಹಾಯಕರೊಬ್ಬರ ಅನುಮತಿ ಪತ್ರಗಳು ತಯಾರಾಗಬೇಕಿದ್ದವು. ಪರಿಶೀಲನೆಗಳ ನಂತರ ಆಕೆಯನ್ನು ಹೊರಗಿನ ಆ್ಯಂಬ್ಯುಲೆನ್ಸ್ ಕರೆದುಕೊಂಡು ಹೋಗಲು ಮತ್ತೂ ಎರಡು ಗಂಟೆಗಳ ಸಮಯವಾಯಿತು. ಇನ್ನೊಂದೆರಡು ಗಂಟೆಗಳ ಕಾಲ ಉಳಿದ ಪ್ರಯಾಣಿಕರ ದಾಖಲೆಗಳ ಪರೀಶೀಲನೆ, ಶುಚಿಗೊಳಿಸುವಿಕೆ, ತುರ್ತು ವೈದ್ಯಕೀಯ ಸಾಮಗ್ರಿಗಳ ಮರುತುಂಬಿಸುವಿಕೆ ಎಲ್ಲವೂ ನಡೆದು ವಿಮಾನ ಆಕಾಶಕ್ಕೇರಿತು. ಈ ಘಟನೆಗೆ ಸಾಕ್ಷಿಯಾಗಿದ್ದು ಜೀವ-ಜೀವನದ ಮತ್ತೊಂದು ಮುಖದ ಪರಿಚಯವಾಗಿದ್ದರ ಹಿಂಬರಹದಂತಿತ್ತು!

ಈ ಪರಿಸ್ಥಿತಿಯನ್ನು ಕುಳಿತಲ್ಲೇ ನೋಡುತ್ತಿದ್ದ ಮತ್ತೊಂದಷ್ಟು ಪ್ರಯಾಣಿಕರಿಗೆ anxiety attack ಕಾಣಿಸಿಕೊಂಡಿತ್ತು. ಗಗನಸಖಿಯರು ಮತ್ತು ಸಿಬ್ಬಂದಿ ಅವರ ಶುಶ್ರೂಷೆಯನ್ನೂ ಮುಂದುವರೆಸಿದ್ದರು. ಶೌಚಾಲಯದ ಬಳಕೆ ಹೆಚ್ಚಾಗಿದ್ದರಿಂದ ಅಲ್ಲಿ ನೀರಿನ ಸಮಸ್ಯೆ ಶುರುವಾಗಿತ್ತು. ಒರೆಸುಕಾಗದ ಮುಗಿದಿತ್ತು. ಹಾರುವಾಗ ವಿಮಾನದಲ್ಲಿ ಮಬ್ಬುಗತ್ತಲು ಕಡ್ಡಾಯ. ಈ ವಾತಾವರಣವೇ ಕೆಲವರನ್ನು ಪ್ರಯಾಣದೊತ್ತಡಕ್ಕೆ ದೂಡುತ್ತದೆ.

ವಾರ ಬಿಟ್ಟು ಬೆಂಗಳೂರಿಗೆ ಬಂದು ಕುತೂಹಲದಿಂದ ಅಂತರ್ಜಾಲದಲ್ಲಿ ಹುಡುಕಿದಾಗ ಪತ್ರಿಕೆಗಳು ಆ ಅನಾರೋಗ್ಯಗೊಂಡಿದ್ದ ಮಹಿಳೆಯ ಘಟನೆಯ ವರದಿ ಮಾಡಿ ಆಕೆಯ ಮರಣದ ಸುದ್ದಿ ನೀಡಿದ್ದವು. ಸ್ಮಶಾನ ವೈರಾಗ್ಯಕ್ಕಿಂತ ಮಾಯೆಯಿಲ್ಲ, ಅಸಹಾಯಕತೆಗಿಂತ ನೋವಿಲ್ಲ ಎಂದುಕೊಂಡೇ ವನಮಾಲಿಯ ನಿಲ್ಲದ ಗಾನದಂತೆ ಮುಂದುವರೆಯುವುದು ಪ್ರಯಾಣ.

ಮತ್ತೊಮ್ಮೆ ಲಂಡನ್ನಿಂದ ಹೊರಟಾಗ ಭಾರತದ ಪ್ರಾದೇಶಿಕ ಭಾಷೆಯೊಂದನ್ನು ಬಿಟ್ಟು ಬೇರೆ ಭಾಷೆ ಬಾರದ ವಯಸ್ಸಾದ ಸಾಂಪ್ರದಾಯಿಕ ದಂಪತಿಯೊಬ್ಬರು ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಕೆಲವರಿಗೆ ವಾಯು ಒತ್ತಡ ಹೊಟ್ಟೆ ನುಲಿಸುತ್ತದೆ. ಅದಕ್ಕೇ ವಿಮಾನದ ಪ್ರತೀ ಸೀಟಿನ ಮುಂದುಗಡೆಯೂ Vomit bags ಇಟ್ಟಿರುತ್ತಾರೆ. ಅದು ಆಕೆಗೆ ತಿಳಿದಿರಲಿಲ್ಲವೋ, ತಯಾರು ಮಾಡಿಕೊಳ್ಳಲು ಆಗಲಿಲ್ಲವೋ ಒಟ್ಟಿನಲ್ಲಿ ಪಾಪ ಮೈಕೈಯೆಲ್ಲಾ ಒದ್ದೆ ಮಾಡಿಕೊಂಡು ಬಿಟ್ಟರು. ಪೈಲಟ್ ಸೀಟಿನ ಬೆಲ್ಟ್ ಅನ್ನು ಸಡಿಲಗೊಳಿಸಬಹುದು ಎನ್ನುವ ಸೂಚನೆ ಕೊಡುವವರೆಗೆ ಗಗನಸಖಿಯರೂ ಅವರ ಜಾಗ ಬಿಟ್ಟೇಳಲು ಆಗುವುದಿಲ್ಲ. ಸಹಪ್ರಯಾಣಿಕರಿಗೂ ಪ್ರಯಾಣದುದ್ದಕ್ಕೂ ಇದು ಹಿಂಸೆಯ ಪರಿಸ್ಥಿತಿ.

ಮನಸ್ಸು ಎಷ್ಟೇ ಪ್ರಲಾಪಿಸಿದರೂ, ಬುದ್ಧಿ ಎಷ್ಟೇ ಪರಿಭ್ರಮಿಸಿದರೂ, ಔಷಧಗಳು ಕೈಯಳತೆಯಲ್ಲಿಯೇ ಇದ್ದರೂ ವಿಮಾನಯಾನದಲ್ಲಿ ಪ್ರಯಾಣಿಕರೆಲ್ಲರೂ ಅರಿವಳಿಕೆಯಲ್ಲಿ ಇರುವಂತೆ ಇರಬೇಕು. ಭೂಮಿಯ ಮೇಲೆ ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನೂ ಒಪ್ಪದಿರುವ ಸುಧಾರಕರು ಅಲ್ಲಿ ಮಾತ್ರ ಒಂದಿಂಚಿನ ಆಜ್ಞೆಯನ್ನೂ ಮೀರುವಂತಿಲ್ಲ. ಇಂಥ ಅದೆಷ್ಟೋ ಅನಿವಾರ್ಯತೆಗಳನ್ನು ಅನುಭವಿಸಿಯೂ ತನ್ನೊಳಗನ್ನು ಕದಡಿಕೊಳ್ಳದೆ ಮುಂದಿನ ಪ್ರಯಾಣದ ಕಣ್ಣಲ್ಲಿ ತನ್ನ ಬಿಂಬ ಕಾಣಲು ಸಿದ್ಧನಾಗುವ ಪ್ರತೀ ಪ್ರವಾಸಿಯೂ ಸಾಹಸಿಯೇ ಹೌದು!